Articles

ಏರು ಧ್ವನಿಯಲ್ಲಿ ಕಿರುಚಾಡಿದರೆ ಅರ್ನಾಬ್ ಗೋಸ್ವಾಮಿ ಆಗಲಿಕ್ಕೆ ಸಾಧ್ಯನಾ ?

By Bhimashankar Teli

ಮಾಧ್ಯಮ ಯಾವದೇ ಇರಲಿ ಅದಕೊಂದು ಜವಾಬ್ದಾರಿ ಇದೆ. ಎಷ್ಟೋ ಜನರ ಜೀವನನ್ನೇ ಬದಲಿಸುವ ಶಕ್ತಿ ಇದೆ. ಅದು ದಯಪಾಲಿಸಿದ್ದು ಭಾರತದ ಸಂವಿಧಾನ. ಕಾರ್ಯಂಗ ,ಶಾಸಕಾಂಗ ಮತ್ತು ನ್ಯಾಯಾಂಗ ಬಗ್ಗೆ ಪ್ರಶ್ನೆ ಮಾಡುವ ಮತ್ತು ಅದನ್ನು ಒರೆಗೆ ಹಚ್ಚಿ ತಿದ್ದುವ ಕೆಲಸ ಮಾಧ್ಯಮ ಮಾಡಬಹುದು. ನ್ಯಾಯಾಂಗದ ಬಗ್ಗೆ ಪ್ರಶ್ನೆ ಮಾಡದೆ ಹೋದರು ಅದನ್ನು ವಿಮರ್ಶೆ ಮಾಡಬಹುದು. ಇವರೆಲ್ಲರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಜನರಿಗೆ ತಲುಪಿಸುವಲ್ಲಿ ಇವರ ಪಾತ್ರ ಬಹಳ ಪ್ರಮುಖವಾದದ್ದು. ಇದೆಕ್ಕೆಲ್ಲಾ ದೊಡ್ಡ ಇತಿಹಾಸ ಇದೆ. ಹದಿನೆಂಟನೆಯ ಶತಮಾನದಿಂದ ಮಾಧ್ಯಮ ದೇಶದಲ್ಲಿ ಇದೆ. ಪ್ರಿಂಟ್ ಮೀಡಿಯಾ ೧೭೮೦ ರಲ್ಲೇ ಪ್ರಾರಂಭವಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇರುವ ಸರಕಾರ ಜನರಿಂದ ಆಯ್ಕೆ ಆಗಿರುತ್ತದೆ. ಆದ್ರೆ ದುರ್ದೈವ ಅಥವಾ ಸುದೈವನೋ ೫ ವರ್ಷ ಆಯ್ಕೆ ಆಗಿ ಬಂದವರು ಏನೆ ತಪ್ಪು ಮಾಡಿದರು ಅವರನ್ನು ಏನು ಮಾಡಲಾಗದೆ ಕೈಕಟ್ಟಿ ಇರಬೇಕಾಗುತ್ತದೆ. ಆದ್ರೆ ಅವರು ಮಾಡುತ್ತಿರುವ ತಪ್ಪುಗಳು ಜನರಿಗೆ ತಲುಪಬೇಕಾದರೆ ಮಾಧ್ಯಮದವರ ಕೆಲಸ ಪ್ರಾಮಾಣಿಕತೆಯಿಂದ ಇರಬೇಕು.
ಸಂವಿಧಾನ ಹೇಳುವುದು ಎಲ್ಲರೂ ಸಮಾನರು, ಮೇಲು ಕೀಳು ಇಲ್ಲ., ಬಡವ ಶ್ರೀಮಂತ ಇಲ್ಲ. ಆದರೆ ಸುಮಾರು ಬಾರಿ ಇವೆಲ್ಲವೂ ಆಗುವದಿಲ್ಲ. ಅಂಥಹ ಸಮಯದಲ್ಲಿ ಮಾಧ್ಯಮದವರ ಸಹಾಯದಿಂದ ದೀನದಲಿತರು,ಬಡವರು ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹಾಯ ಮಾಡುತ್ತಾರೆ. ಹೀಗೆ ಹಲವಾರು ಸಮಾಜದಲ್ಲಿ ಇರುವ ಕುಂದು ಕೊರೆತಗಳನ್ನು ಎತ್ತಿ ತೋರಿಸಿ ಅದನ್ನು ಸರಿದಾರಿ ತರುವಲ್ಲಿ ಅವರ ಪಾತ್ರ ಬಹುದೊಡ್ಡದು. ಅಷ್ಟೇ ಯಾಕೆ ಕೆಲಯೊಂದು ಬಾರಿ ಚುನಾವಣೆಯಲ್ಲಿ ಜನರಿಗೆ ಒಳ್ಳೆಯ ಪಕ್ಷಕ್ಕೆ ಮತ ಹಾಕಿಸುವಲ್ಲಿ ಯಶಸ್ವಿಯಾಗುತ್ತಾರೆ!

ಇವತ್ತು ಪ್ರತಿಯೊಬ್ಬರೂ ಮನೆಯಲ್ಲಿ ಟಿವಿ ಯಲ್ಲಿ ಬರುವ ಸುದ್ದಿಯನ್ನು ನೋಡುತ್ತಾರೆ. ಅದರಲ್ಲಿ ವಿಶೇಷವಾಗಿ ಹಿರಿಯರಾದ ರಂಗನಾಥ ಅಂಥವರ ಬಿಗ್ ಬುಲೆಟಿನ್ (ಎಲ್ಲರೂ ಅಂತ ಹೇಳುವದಿಲ್ಲಾ) ನೋಡುತ್ತಾರೆ. ಅವರು ಮಾಡುವ ಸಮಾಜಮುಖಿ ಕೆಲಸಗಳಿಗೆ ಹೃದಯ ತುಂಬಿ ಹಾರೈಸುತ್ತಾರೆ. ಹಾಗೆ ಇನ್ನು ಅನೇಕ ಸುದ್ದಿ ಹೇಳುವವರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಸ್ವಂತ ಪ್ರಾಮಾಣಿಕರಾದವರು ಕೆಲಯೊಂದು ಬಾರಿ ತಪ್ಪುಗಳನ್ನು ಹೇಳುವಾಗ ತುಂಬಾ ಉದ್ರೇಕತೆಗೆ ಹೋಗಿ ಮಾತಾಡುವ ಶೈಲಿ ಇದೆ. ಅದು ಒಪ್ಪುವ ವಿಷವಯೇ ಆಗಿದ್ದರೂ ಯಾವಾಗಲೂ ಅದೇ ಶೈಲಿಗೆ ಜನ ಒಪ್ಪತ್ತಾರೆಯೇ? ಜೋರಾಗಿ ಗಟ್ಟಿಯಾಗಿ ಮಾತಾಡಿದರೆ ಜನ ಕೇಳಿಸಿಕೊಳ್ಳುತ್ತಾರೆಯೇ? ಅಥವಾ ನಿಮ್ಮ ಮಾಧ್ಯಮದ ಅಭಿಮಾನಿಯಾಗುತ್ತಾರಾ?

ಅನುಭವ ಅನ್ನುವುದು ಎಲ್ಲಾ ಕ್ಷೇತ್ರಗಲ್ಲಿ ತುಂಬಾ ಮುಖ್ಯ. ಅನುಭವದ ಮೇಲೇನೆ ಮಾಡುತ್ತಿರುವ ಕೆಲಸಕ್ಕೆ ವೇಗವನ್ನು ತುಂಬಬಹುದು. ಹಾಗೆಯೇ ಮಾದ್ಯಮದಲ್ಲಿ ಅನೇಕ ವರ್ಷಗಳಿಂದ ಜನರ ಜೊತೆ, ಸಿನಿಮಾ ಕ್ಷೇತ್ರ ,ರಾಜಕೀಯ ಒಡನಾಟ ಹೀಗೆ ಹಲವಾರು ಕ್ಷೇತ್ರಗಳ ಆಗು ಹೋಗುಗಳನ್ನು ನೋಡಿ ಅನುಭವ ಬಂದಿರುತ್ತೆ. ಸುಮ್ಮನೆ ನೇರವಾಗಿ ಪತ್ರಿಕೋದ್ಯಮ ಕೋರ್ಸ್ ಮುಗಿಸಿದರೆ ಬರುವದಿಲ್ಲಾ. ಅಘಾದವಾದ ಅನುಭವ ಹೊಂದಿ ಜನರ ಸಮಸ್ಸ್ಯೆಗೆ ಸ್ಪಂದನೆ ಮಾಡುವುದು ಪ್ರಾಮಾಣಿಕ ಮಾಧ್ಯಮದವರ ಆಶಯ. ಅದು ಸಾಕಾರಗೊಳ್ಳಲಿಕ್ಕೆ ಎಷ್ಟೋ ವರ್ಷಗಳೇ ಗತಿಸಿರುತ್ತೆ!

ಇವಾಗ ಹೇಗಿದೆ? ನಿನ್ನೆ ಮೊನ್ನೆ ಹುಟ್ಟಿದ ಮಗು ಕಿರುಚಾಡಿದ ಹಾಗೆ ಕಿರುಚಾಡಿದರೆ ಅವರಿಗೆ ಏನನ್ನಬೇಕು? ಜಾಸ್ತಿ ಶಬ್ದ ಮಾಡಿ ಜೋರಾಗಿ ಕೂಗಿ ಕೂಗಿ ಹೇಳಿದರೆ ವಿಷಯದಲ್ಲೇನೇದಾರು ಬದಲಾವಣೆ ಆಗುತ್ತಾ? ಹೇಳುವ ವಿಷಯ ರಸವತ್ತಾಗಿ ಹೇಳುವ ಸಲುವಾಗಿ ಕಿರುಚಾಡಿದರೆ ವಿಷಯ ಜನರಿಗೆ ಮುಟ್ಟುತ್ತಾ? ಅಥವಾ ದೊಡ್ಡ ದೊಡ್ಡಅನುಭವಿಗಳು ಜೋರಾಗಿ ಮಾತಾಡಿ ಪ್ರಸಿದ್ದಿ ಪಡೆದಿದ್ದಾರೆ ಅದಕ್ಕೆ ನಾವು ಮಾತಾಡಿ ಪ್ರಸಿದ್ದಿ ಪಡೆಯೋಣ ಅಂತಾನಾ? ಸ್ವಲ್ಪ ಹಿಂದೆ ಸುದ್ದಿ ವಾಹಿನಿಗಳು ಕೇವಲ ಒಂದೋ ಅಥವಾ ಎರಡೋ ಇರುತ್ತಿದ್ದವು. ವಿಶೇಷವಾಗಿ ಸರ್ಕಾರದ ಸುದ್ದಿ ವಾಹಿನಿ ಸರ್ಕಾರ ಏನು ಹೇಳು ಅನ್ನುತ್ತದೆ ಅದನ್ನೇ ಹೇಳುತ್ತಿತ್ತು. ಇದು ಸಹ ಅದೇ ಕೆಲಸ ಮಾಡುತ್ತಿದೆ! ನಮಗೆ ಖಂಡಿತವಾಗಲೂ ಖಾಸಗಿ ಸುದ್ದಿ ವಾಹಿನಿಗಳು ಬೇಕೇ ಬೇಕು ಅದರಲ್ಲಿ ಎರಡು ಮಾತಿಲ್ಲಾ. ಮೊದಲು ಖ್ಯಾತ ಪತ್ರಕರ್ತರನ್ನು ಮತ್ತು ಸುದ್ದಿ ಹೇಳುವವರನ್ನು ಜನರು ಗೌರವದಿಂದ ನೋಡುತ್ತಿದ್ದರು. ಕಾರಣ ಅವರು ಜ್ಞಾನಿಗಳು, ಅಪಾರ ಅನುಭವ ಹೊಂದಿದ್ದವರಾಗಿದ್ದರು ಮತ್ತು ವಿಶೇಷವಾಗಿ ಜನರ ಸಮಸ್ಸ್ಯೆ ಮತ್ತು ಜನರ ಜೀವನ ಮುಖ್ಯವಾಗಿತ್ತು. ಅವರು ರಾಜಿಕೀಯ ವ್ಯಕ್ತಿಗಳ ಮತ್ತು ಅಧಿಕಾರಿಗಳ ಮೇಲೆ ಜನರ ಸಿಟ್ಟು ತೋರಿಸಿ ಕಣ್ಣು ತೆರೆಸುತ್ತಿದ್ದರು. ಯಾವದೇ ಕ್ಷೇತ್ರದ ನಾಯಕರು,ಅಧಿಕಾರಿಗಳು ಅವರ ಮಾತುಗಳಿಗೆ ಗೌರವಕೊಟ್ಟು ಆಗುವ ಕೆಲಸಗಳಿಗೆ ನ್ಯಾಯ ಒದಗಿಸಿ ಕೊಡುತ್ತಿದ್ದರು. ಇವಾಗಲು ಒಳ್ಳೆಯ ಅನುಭವಿ ಅದೇ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತಿದ್ದಾರೆ. ಇದರ ಮದ್ಯೆ ಬರುತ್ತಿರುವ ಹೊಸ ಮುಖಗಳಿಗೆ ಬೇಗ ಪ್ರಸಿದ್ಧ ಮತ್ತು ಹಣ ಗಳಿಸುವ ಗೀಳಿಗೆ ಬಿದ್ದಿದ್ದಾರೆ ಅನಿಸುತ್ತೆ!

ಕೇವಲ ಕೆಲಸಕ್ಕೆ ಸೇರಿ ಮೂರೂ ತಿಂಗಳಾಗಿರಲ್ಲ ಘಟಾನುಘಟಿ ಅನುಭವಿ ನಾಯಕರ ಜೊತೆ ಮಾತಾಡುವ ರೀತಿ ನೋಡಿದರೆ ಈಗಲೇ ದೇವಲೋಕದಿಂದ ಇಳಿದು ಬಂದವರ ತರಹ ಆಡುತ್ತಾರೆ. ಯಾವದೇ ನಾಯಕ ಇರಲಿ ಅವರ ಮಾಡಿದ ತಪ್ಪುಗಳ ತೋರಿಸಬೇಕು ಅದು ಬಿಟ್ಟು ಅವರಿಗೆ ಹೆದರಿಸಿ ನಿಮಗೆ ಬೇಕಾದನ್ನು ಪಡೆಯುವ ರೀತಿಗೆ ಏನನ್ನಬೇಕು? ಅವರ ವಯಸ್ಸಿಗೆ ಮರ್ಯಾದೆ ಬೇಡವಾ? ಅವರ ಅನುಭವದಷ್ಟು ವಯಸ್ಸು ನಿಮಗೆ ಇಲ್ಲದಿದ್ದರೂ ಮಾತನಾಡುವ ರೀತಿ ಮಾತ್ರ ನೋಡಿದರೆ ಭಯ ಬರಲ್ಲಾ ನಗು ಬರುತ್ತೆ! ಪ್ಯಾನೆಲ್ ಡಿಸ್ಕಶನ್ ಮಾಡುವದಕ್ಕೆ ಕರೀತೀರಾ. ಬಂದ ಅತಿಥಿಗಳು ವಿಷಯವನ್ನು ಮಂಡನೆ ಮಾಡುವಾಗ ನನಗೆ ಎಲ್ಲ ಗೊತ್ತಿದೆ ಅನ್ನುವ ಹಾಗೆ ಅವರ ವಿಷಯವನ್ನು ಕೇಳುವದಿಲ್ಲಾ,ಒಮ್ಮೆಮ್ಮೆ ಹೇಳಿದರು ಕೇಳಿಸಿಕೊಳ್ಳುವ ತಾಳ್ಮೆ ನಿಮಗೆ ಇರುವದಿಲ್ಲ. ಕಾರಣ ನಿಮಗೆ ಬೇಕಿರುವುದು ತಿರುಚಿದ ವಿಷಯ ಅಲ್ವಾ ? ನಿಮಗೆ ಬೇಕಾದ ವಿಷಯ ಬರುತ್ತಿದ್ದರೇ ಅಂಥವರ ಮಾತುಗಳು ನಿಮಗೆ ಇಷ್ಟ!

ನಾವೇ ಮೊದಲು , ಮೊಟ್ಟ ಮೊದಲು ನಮ್ಮದೇ , ನಮ್ಮ ಸುದ್ದಿವಾಹಿನಿ ಇಂಪ್ಯಾಕ್ಟ್! ನಿಮ್ಮ ಬಾಸ್ ಹೇಗೆ ಹೇಳುತ್ತಾರೆ ಹಾಗೆ ನಿಮ್ಮ ಚಾನೆಲ್ ಓಡುತ್ತದೆ. ಯಾವ ವಿಷಯ ಜನರನ್ನು ಸೆಳೆಯುತ್ತದೆ ಮತ್ತು ನಿಮಗೆ ಮೈಲೇಜ್ ತಂದುಕೊಡುತ್ತದೆ ಅದರ ಬಗ್ಗೆ ನಿಮಗೆ ಒಲವು. ಅದು ಜನರನ್ನು ಘಾಸಿಗೊಳಿಸಿದರು ಪರ್ವಾಗಿಲ್ಲ! ಎಷ್ಟೋ ಸಂದರ್ಭದಲ್ಲಿ ಕೋರ್ಟ್ಗಳು ನಿಮಗೆ ನೋಟೀಸ್ ಕೊಟ್ಟು ಪ್ರಸಾರ ಮಾಡಬೇಡಿ ಎಂದು ಹೇಳಿದ್ದಿದೆ. ಏನಿದೆಲ್ಲಾ. ಏತಕ್ಕಾಗಿ ಇದೆಲ್ಲಾ? More revenue? ಯಾರಿಗಾಗಿ ಇದೆಲ್ಲಾ? Is it professional? Is it ethical?ಯಾವದೇ ಮಾಧ್ಯಮ ತಪ್ಪು ಮಾಡಿದರೆ ಅದರ ಬಗ್ಗೆ ಬೇರೆ ಮಾದ್ಯಮದಲ್ಲಿ ಬರುವದೇ ಇಲ್ಲಾ! ಯಾಕೆ ? ಅವರ ಬಗ್ಗೆ ಹೇಳಿದರೆ ನಿಮ್ಮ ಹೂರಣ ಹೊರಗಡೆ ಬರುತ್ತಾ ಅಂತ ಹೇದಿರಿಕೇನಾ? ಯಾವನೋ ಪಾಸಪೋರ್ಟ್ ಕೇಸ್ ಅಲ್ಲಿ ಸಿಕ್ಕಿಬಿದ್ದಾಗ ಅವನ ಸುದ್ದಿ ಯಾವ ಮಾದ್ಯಮದಲ್ಲಿ ಬರಲೇ ಇಲ್ಲ. ಅವನು ತಪ್ಪು ಮಾಡಿದ್ದ ಆದರೆ ನೀವು ಅವನ ಬಗ್ಗೆ ತೋರಿಸಲೇ ಇಲ್ಲ. ಯಾಕೆ? ನಾವೇನು ಉಚಿತವಾಗಿ ಮಾಡಿ ಅನ್ನೋವದಿಲ್ಲಾ. ದುಡ್ಡಿಗಾಗಿ ಸಿದ್ದಾಂತವನ್ನು ಮರೆಯಬೇಡಿ.

ಯಾವ ವಿಷಯ ಸಾಮಾಜಿಕವಾಗಿ ಉಪಯೋಗ ಇರುತ್ತೆ ಅಂತಹ ವಿಷಯ ಎಷ್ಟು ಬಾರಿ ತೋರಿಸುತ್ತೀರಿ? ಹೀಗೆ ಸ್ವಲ್ಪ ದಿನಗಳ ಹಿಂದೆ ಪ್ರಸಿದ್ದಿ ಪಡೆದ ನಟನೊಬ್ಬ ಪ್ರಸಿದ್ಧ ಪಡೆದ ಮಾದ್ಯಮಕ್ಕೊಂದು ಸವಾಲು ಹಾಕುತ್ತಾನೆ. ರಾಜ್ಯದಲ್ಲಿ ಇರುವ ಜ್ವಲಂತ ಸಮಸ್ಸ್ಯೆಗಳ ಬಗ್ಗೆ ತೋರಿಸಿ. ದಿನದಲ್ಲಿ ಎರೆಡು ಎರಡು ಬಾರಿ ಮಾಡಿ ಸತತವಾಗಿ ತಿಂಗಳುಗಳ ಕಾಲ ತೋರಿಸಿ. ನೋಡೋಣ ಹೇಗೆ ಸಮಸ್ಸ್ಯೆಗೆ ಪರಿಹಾರ ಸಿಗುವದಿಲ್ಲಾ ಅಂತಾ. ಆದರೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಅವರನ್ನೇ ಬನ್ನಿ ನಿಮಗೆ ಒಂದು ಖುರ್ಚಿ ಇಟ್ಟಿದ್ದೇವೆ ಎಂದು ಕೀಳು ಮಟ್ಟದ ಅಭಿಪ್ರಾಯ ತೋರಿಸಿತ್ತು. ಮುಂದೆ ಅವರ ಜೊತೆ ಹೊಂದಾಣಿಕೆ ಆಗಿ ತೇಪೆ ಹಚ್ಚುವ ಕೆಲಸ ಮಾಡಿದರು. ನಿಮಗೆ ಕೇವಲ ಜನಪ್ರಿಯತೆ ಮತ್ತು ನಂಬರ ಒನ್ ಆಗಿ ,ದುಡ್ಡು ಮಾಡುವ ಹಂಬಲ. ನಿಮಗೆ ಸಮಾಜದ ಬಗ್ಗೆ ಕಾಳಜಿ ಇದೆ ಅನಿಸುತ್ತಾ? ಯಾವದೇ ಸರಕಾರ ಇರಲಿ ನಿರಂತರವಾಗಿ ಭ್ರಷ್ಟಾಚಾರ ಮಾಡುತ್ತಿರುವ ಮತ್ತು ದಳ್ಳಾಳಿಗಳಿಂದ ತುಂಬಿ ತುಳುಕಿತ್ತಿರುವ ಇಲಾಖೆ ಬಗ್ಗೆ ದಿನಾ ತೋರಿಸಿ ಮತ್ತು ನಿಮ್ಮ ಮಾಧ್ಯಮ ಉಪಯೋಗಿಸಕೊಂಡು ಜನರಿಗೆ ತಲುಪಿ. ನೀವು ಇಲಾಖೆಗಳನ್ನು ಭ್ರಷ್ಟಾಚಾರ ಮುಕ್ತ ಮಾಡಿದರೆ ಅದರಿಂದ ಜನರಿಗೆ ಅನುಕೂಲ ತಾನೇ?

ಮೊದಲು ಯಾರಾದರೂ ಭಾಷಣ ಮಾಡುತ್ತಿದ್ದರೇ ಇವರು ಕಾಂಗ್ರೆಸನವರು , ಅವರು ದಳದವರು ಮತ್ತು ಇವರು ಭಾರತೀಯ ಜನತಾ ಪಕ್ಷದವರು ಅಂತ ಅವರ ಭಾಷಣದ ಮೇಲೆ ಹೇಳುತ್ತೇವೆ. ಹಾಗೆ ಇವಾಗ ಮನೆಯಲ್ಲಿ ಟಿವಿ ಯಲ್ಲಿ ಸುದ್ದಿ ನೋಡುವಾಗ ಖಂಡಿತವಾಗಲೂ ಹೇಳಬಹುದು ಇದು ಕಾಂಗ್ರೆಸ್ ಚಾನಲ್ ಅಂತ ಅಥವಾ ಭಾರತೀಯ ಜನತಾ ಪಕ್ಷದ ಚಾನಲ್ ! ಅಷ್ಟರ ಮಟ್ಟಿಗೆ ಸುದ್ದಿ ನಿಖರವಾಗಿರುತ್ತೆ!

ಸುಮಾರು ೨೦ ವರ್ಷಗಳ ಹಿಂದೆ ರಾಜಕಾರಣಿಗಳಿಗೆ ಒಳ್ಳೆಯ ಹೆಸರಿತ್ತು. ಜನರಿಗೆ ಇವರ ಬಗ್ಗೆ ಪ್ರೀತಿ ವಿಶ್ವಾಸ ಇತ್ತು. ರಾಜಕೀಯ ವ್ಯಕ್ತಿಗಳು ಸಹಿತ ಮೌಲ್ಯಯುತವಾದ ರಾಜಕಾರಣ ಮಾಡುತ್ತಿದ್ದರು. ಸರಕಾರದ ದುಡ್ಡು ಜನರಿಗೆ ಸೇರಿದ್ದು ಅದು ಜನರಿಗೆ ಸೇರಬೇಕು ಅನ್ನುವ ಮನೋಭಾವ ಅವರದಾಗಿತ್ತು. ಅದಕ್ಕೆ ಜನರಿಗೆ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಬೇರೆ ಬೇರೆ ಪಕ್ಷದವರಿದ್ದರು ಒಬ್ಬರಿಗೊಬ್ಬರು ಗೌರವವಾಗಿ ಮಾತಾಡಿಸುತ್ತಿದ್ದರು. ಇತ್ತೀಚಿಕೆ ದುಡ್ಡಿನ ವ್ಯಾಮೋಹದಿಂದ ಜನರು ಹಾದಿ ಬೀದಿಗಳಲ್ಲಿ ರಾಜಕಾರಣಿಗಳನ್ನು ಉಗಿಯುತ್ತಾರೆ. ವಿಶೇಷವಾಗಿ ಜನರಿಗೆ ರಾಜಕಾರಣಿಗಳ ಬಗ್ಗೆ ಮನದಲ್ಲಿ ಗೌರವ ಇಲ್ಲಾ. ವಿಧಾನಸಭೆಯಲ್ಲಿ ಸಂವಿಧಾನ ವಿಮರ್ಶೆ ಮಾಡುವಾಗ ಒಬ್ಬ ಶಾಸಕರು ಇವತ್ತಿನ ಸ್ಥಿತಿ ಗತಿ ಬಗ್ಗೆ ಅವರೇ ಸೊಗಸಾಗಿ ಹೇಳಿದ್ದಾರೆ. ಜನ ನಮ್ಮನ್ನು ಕಳ್ಳರ ತರಹ ನೋಡುತ್ತಾರೆ ಮತ್ತು ಅದು ನಿಜಾನೂ ಅಂತ ಹೇಳಿದರು.

ಇತ್ತೀಚಿಕೆ ಜ್ಞಾನವು ಇಲ್ಲಾ,ಸಿದ್ಧಾಂತವು ಇಲ್ಲದೆ ಬರುತ್ತಿರುವ ಹೊಸ ಮುಖಗಳಿಂದ ಮಾಧ್ಯಮದ ಮೇಲೆ ಗೌರವ ಕಡಿಮೆ ಆಗುತ್ತಿದೆ. ಮತ್ತು ಅವರ ಬಗ್ಗೆ ಸಂಶಯ ಬರುವ ಹಾಗೆ ಮಾಡಿದ್ದಾರೆ! ಹೀಗೆ ಹೋದರೆ ಖಂಡಿತ ಮಾಧ್ಯಮಕ್ಕೂ ಮತ್ತು ರಾಜಕೀಯಕ್ಕೂ ವ್ಯತ್ಯಾಸವೇ ಇರುವದಿಲ್ಲಾ. ಒಳ್ಳೆಯ ವಿಷಯ ಮತ್ತು ಸಮಾಜವನ್ನು ಓರೆಗೆ ಹಚ್ಚುವ ಕೆಲಸ ಮುಖ್ಯ. ಅದು ಬಿಟ್ಟು ಕಿರುಚಾಡಿ ಅರ್ನಬ ಗೋಸ್ವಾಮಿ ಆಗುತ್ತೇವೆ ಮತ್ತು ಜನರ ನಮ್ಮನ್ನು ನೋಡುತ್ತಾರೆ ಎಂಬ ಭ್ರಮೆಯಿಂದ ಹೊರಬನ್ನಿ. ನಿಮ್ಮಿಂದ ಒಳ್ಳೆಯದನ್ನು ಸಮಾಜಕ್ಕಾಗಿ ಕೊಡುಗೆ ಕೊಡಿ. ಅದು ಜನರು ನಿರೀಕ್ಷಿಸುತ್ತಿದ್ದಾರೆ.

Categories: Articles, Uncategorized

Tagged as: ,

Leave a Reply