By ಮಧುಸೂಧನ್ ಎಸ್ ಬಿ
ಸಂಕ್ಷಿಪ್ತ ವಿವರಣೆ :

ಜಗತ್ತಿನಲ್ಲಿ ಅತೀ ಹೆಚ್ಚು ಸಾಧನೆ ಮಾಡಿದವರ ಅಭ್ಯಾಸಗಳು (ಹ್ಯಾಬಿಟ್ಸ್) ನಮಗಿಂತ ವಿಭಿನ್ನವಾಗಿರುತ್ತವೆ!! ಪ್ರತಿಯೊಬ್ಬರಿಗೂ ಸಾಧನೆ ಮಾಡಬೇಕು ಎಂಬ ಹಂಬಲವಿರುತ್ತದೆ. ಆದರೆ ಆ ಕನಸನ್ನು ನನಸು ಮಾಡುವುದು ಹೇಗೆ? ಕೆಟ್ಟ ಅಭ್ಯಾಸಗಳ ತೊಂದರೆಯಿಂದ ಹೊರಬರುವುದು ಹೇಗೆ?
ವಿವರ:
ನನ್ನದೊಂದು ಆಕಾಂಕ್ಷೆ – ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಬೆಳಗಿನ ನಕ್ಷತ್ರಗಳನ್ನು ನೋಡುವುದು, ಆದಮೇಲೆ ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಾ, ಚಹಾ ಕುಡಿಯುತ್ತಾ ಸೂರ್ಯೋದಯವನ್ನು ನೋಡುವುದು. ಎಷ್ಟು ಸುಂದರ ಅನುಭವ ಅಲ್ಲವೇ ? ಆದರೆ ಇದನ್ನು ಸಾಧಿಸಲು ನನಗೆ ದಶಕ ವರ್ಷಗಳೇ ಬೇಕಾಯಿತು ಏಕೆಂದರೆ ಬೆಳಗ್ಗೆ 8 ಕ್ಕೆ ಏಳುವುದು ನನ್ನ “ಅಭ್ಯಾಸ”.
ಬಹುತೇಕ ಜನರು ಎದುರಿಸುತ್ತಿರುವ ಸಾಮಾನ್ಯವಾದ ತೊಂದರೆ ಏನೆಂದರೆ “ಅಭ್ಯಾಸಗಳನ್ನು ಬದಲಿಸುವುದು”. ತಡವಾಗಿ ಏಳುವುದು, ಧೂಮಪಾನ, ಮಧ್ಯಪಾನ, ಮೊಬೈಲ್ ಬಳಕೆ ಹೆಚ್ಚು ಮಾಡುವುದು, ಹೀಗೆ ಹಲವಾರು ಅಭ್ಯಾಸಗಳ ಸುಳಿಯಲ್ಲಿ ಸಿಲುಕಿ ಹೊರಬರಲು ಆಗದ ಪರಿಸ್ಥಿತಿಯಲ್ಲಿ ಇರುತ್ತೇವೆ. ಒಮ್ಮೆ ಏನಾದರು ಈ ದಿನಚರಿಯನ್ನು ಬದಲಿಸಿದರೆ ಸಾಕು, ಏನೋ ಆತಂಕ, ಏನೋ ಉದ್ವೇಗದ ಪರಿಸ್ಥಿತಿ ಉಂಟಾದಂತೆ ಆಗುತ್ತದೆ ಏಕೆಂದರೆ ನಾವು ಅಭ್ಯಾಸಕ್ಕೆ (ಚಟಕ್ಕೆ) ಒಳಗಾಗಿರುತ್ತೇವೆ. ನಾವು ಈಗಾಗಲೇ ಅಭ್ಯಾಸವನು ಬದಲಿಸುವ ಪ್ರೇರಕವಾದ ಭಾಷಣಗಳನ್ನು ಕೇಳಿರುತ್ತೇವೆ, ಮೊಬೈಲ್ ಸಂದೇಶಗಳನ್ನು ನೋಡಿರುತ್ತೇವೆ ಮತ್ತು ಬದಲಿಸಿಕೊಳ್ಳುವ ಪ್ರಯತ್ನವನೂ ಮಾಡಿರುತ್ತೇವೆ. ಆದರೆ ಅಭ್ಯಾಸವನು ಶಾಶ್ವತವಾಗಿ ಬದಲಿಸುವುದು ಕಷ್ಟವಾದ ಕೆಲಸ. ಪ್ರಯತ್ನ ಪಟ್ಟರೂ ಸ್ವಲ್ಪ ದಿನಗಳ ನಂತರ ಮತ್ತೆ ಅದೇ ಅಭ್ಯಾಸವನ್ನು ಮುಂದುವರಿಸುತ್ತೇವೆ ಏಕೆಂದರೆ ಅದರಿಂದ ನಮಗೆ ಅಲ್ಪ ಸಮಯಕ್ಕಾದರೂ ಸಂತೋಷ ಸಿಕ್ಕಂತೆ ಆಗುತ್ತದೆ.
ಅಭ್ಯಾಸಗಳು ಜೀವನದಲ್ಲಿ ಬಹಳ ಮುಖ್ಯವಾದದ್ದು!! ನಮ್ಮ ಮನಸ್ಸು ಯೋಚಿಸದೆಯೇ ಕೆಲ ಕೆಲಸಗಳನ್ನು ಮಾಡಲು ನಮಗೆ ಸಹಾಯ ಮಾಡುತ್ತದೆ. ಇದನ್ನು ಮನೋವಿಜ್ಞಾನದಲ್ಲಿ “AutoPilot”(ಸ್ವಯಂಚಾಲಿತ ಸ್ಥಿತಿ) ಎಂದು ಕರೆಯುತ್ತೇವೆ. ಉದಾಹರಣೆಗೆ ವಾಹನವನ್ನು ಮೊದಲ ಬಾರಿಗೆ ಚಲಿಸುವಾಗ ನಾವು ಬಹಳಷ್ಟು ಯೋಚಿಸಬೇಕಾಗುತ್ತದೆ, ಕ್ಲಚ್ ಯಾವಾಗ ಹಿಡಿಯಬೇಕು, ಎಷ್ಟು ಆಕ್ಸಿಲರೇಟರ್ ಕೊಡಬೇಕು, ಯಾವ ಸಮಯಕ್ಕೆ ಗೇರ್ ಬದಲಿಸಬೇಕು, ಹೀಗೆ ಹಲವಾರು ಅಂಶಗಳನ್ನು ಯೋಚಿಸಿ ವಾಹನವನ್ನು ಚಲಿಸಬೇಕಾಗುತ್ತದೆ. ಆದರೆ ಸ್ವಲ್ಪ ದಿನಗಳು ಕಲಿತ ನಂತರ ಸರಾಗವಾಗಿ ಸ್ವಲ್ಪವೂ ಯೋಚಿಸದೆಯೇ ವಾಹನವನ್ನು ಚಲಿಸುತ್ತೇವೆ. ಮೊದಲಿನಷ್ಟು ಯೋಚಿಸುವುದು ಅಗತ್ಯವಿರುವುದಿಲ್ಲ ಏಕೆಂದರೆ ನಮ್ಮ ಮನಸ್ಸು ಸ್ವಯಂಚಾಲಿತ ಸ್ಥಿತಿಯಲ್ಲಿ ಇರುತ್ತದೆ. ಇದು ಏಕೆ ನಮ್ಮ ಜೀವನದಲ್ಲಿ ಅಗತ್ಯವೆಂದರೆ ನಮಗೆ ಯಾವುದೇ ಕೆಲಸ ಅಭ್ಯಾಸವಾದ ನಂತರ ಅದು ದೈನಂದಿನ ಕೆಲಸವಾಗಿ ಪರಿವರ್ತಿಸಿ ನಮ್ಮ ಮನಸ್ಸು ಬೇರೆ ಯೋಚನೆಗಳ ಬಗ್ಗೆ ಚಿಂತನೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಅದೇ ರೀತಿಯಾಗಿ ನಮಗೆ ಬೇಡದ ಅಥವಾ ಕೆಟ್ಟ ಅಭ್ಯಾಸಗಳನ್ನು ಕಲಿತರೆ ಅದೂ ಕೂಡ ಸ್ವಯಂಚಾಲಿತ ಸ್ಥಿತಿಯಾಗಿ ಪರಿವರ್ತಿತವಾಗಿ ನಮಗೆ ಗೊತ್ತಿಲ್ಲದೆಯೇ ಆ ಕೆಲಸವನ್ನು ಮಾಡಲು ನಮ್ಮ ಮನಸ್ಸು ಪ್ರೇರೇಪಿಸುತ್ತದೆ.
ಬೇಡವಾದ ಅಭ್ಯಾಸಗಳನ್ನು ಬದಲಿಸಬೇಕಾದರೆ ನಾವು ಅದರ ಹಿಂದಿನ ಕಾರಣಗಳನ್ನು ಅರಿತುಕೊಳ್ಳಬೇಕಾಗುತ್ತದೆ.
ಮನೋವಿಜ್ಞಾನದಲ್ಲಿ ಅಭ್ಯಾಸವನ್ನು 3 ಭಾಗವನ್ನಾಗಿ ವಿಂಗಡಿಸಲಾಗಿದೆ
- ಪ್ರಚೋದಕ
- ನಡವಳಿಕೆ
- ಪ್ರತಿಫಲ
ಪ್ರಚೋದಕವು ಒಂದು ಮಾತು ಅಥವಾ ದಿನದ ಒಂದು ಸಮಯ ಅಥವಾ ಒಂದು ವಸ್ತು ಹೀಗೆ ಯಾವುದೇ ಆಗಿರಬಹುದು.
ಉದಾಹರಣೆಗೆ
- ಸ್ನೇಹಿತರನ್ನು ಭೇಟಿಯಾದಾಗ ಕುಡಿಯುವುದು ನಮ್ಮ ಅಭ್ಯಾಸ. ಇಲ್ಲಿ ಸ್ನೇಹಿತರನ್ನು ಭೇಟಿಯಾಗುವುದು ಪ್ರಚೋದಕ, ಕುಡಿಯುವುದು ನಮ್ಮ ನಡವಳಿಕೆ ಮತ್ತು ಅದರಿಂದ ಸಿಗುವ ಮತ್ತೇ ಅದರ ಪ್ರತಿಫಲ.
- ಊಟದ ನಂತರ ಚಹಾ ಕುಡಿಯುವುದು. ಇಲ್ಲಿ ಊಟದ ನಂತರದ ಸಮಯ ಪ್ರಚೋದಕ, ಚಹಾ ಕುಡಿಯುವುದು ನಮ್ಮ ನಡವಳಿಕೆ ಮತ್ತು ಅದರಿಂದ ಸಿಗುವ ರುಚಿ ಅದರ ಪ್ರತಿಫಲ.
ಬಹಳಷ್ಟು ಪರಿಸ್ಥಿತಿಯಲ್ಲಿ ಪ್ರಚೋದಕವನ್ನು ಬದಲಿಸಲು ಸಾಧ್ಯವಿಲ್ಲ ಆದರೆ ಅದರಿಂದ ಉಂಟಾಗುವ ನಮ್ಮ ನಡವಳಿಕೆ ನಮ್ಮ ಹತೋಟಿಯಲ್ಲಿ ಇರುತ್ತದೆ.
ನಡವಳಿಕೆಯನ್ನು ನಿಧಾನವಾಗಿ ಬದಲಿಸುತ್ತಾ ಆ ಬದಲಾವಣೆಯನ್ನು ಸ್ವಯಂಚಾಲಿತ ಸ್ಥಿತಿಗೆ ತರುವುದೇ ನಮ್ಮ ಉದ್ದೇಶವಾಗಿರಬೇಕು.
ಪ್ರಚೋದನೆಗೆ ಒಳಗಾದಾಗ ನಿಮ್ಮಲ್ಲಿ ಆಗುವ ಪರಿವರ್ತನೆಯನ್ನು ಗುರುತಿಸಿ, ಅದರೆಡೆಗೆ ಸೆಳೆಯುತ್ತಿರುವ ಗಮನವನ್ನು ಬದಲಿಸಲು ಪ್ರಯತ್ನಿಸಿ, ಬೇರೆ ಏನಾದರೂ ಕೆಲಸ ಮಾಡುವುದು ಅಥವಾ ವಿಭಿನ್ನವಾದ ಪರಿಹಾರವನ್ನು ಹುಡುಕಲು ಪ್ರಯತ್ನಿಸಿ. ಉದಾಹರಣೆಗೆ ಚಹಾದ ಬದಲಾಗಿ ಹಣ್ಣಿನ ರಸವನ್ನು ಕುಡಿಯುವುದಕ್ಕೆ ಪ್ರಯತ್ನಿಸುವುದು. ನಿಮ್ಮ ನಡವಳಿಕೆಯಿಂದ ಸಿಗುವ ಪ್ರತಿಫಲ ನಿಮಗೆ ಎಷ್ಟು ಉಪಯುಕ್ತವಾದದ್ದು ಮತ್ತು ಅದು ಕ್ಷಣಿಕ ಸುಖವೊ ಅಥವಾ ದೀರ್ಘಕಾಲದ ಪ್ರತಿಫಲವೋ ಎಂದು ಚಿಂತಿಸಬೇಕಾಗುತ್ತದೆ.
ನಿಮ್ಮ ನಡವಳಿಕೆಯನ್ನು ನಿಧಾನವಾಗಿ ಬದಲಿಸಲು ಪ್ರಯತ್ನಿಸಿ. ಉದಾಹರಣೆಗೆ ಪದೇ ಪದೇ ಮೊಬೈಲ್ ನೋಡುವುದನ್ನು ನಿಯಂತ್ರಿಸಿ, ದಿನಕ್ಕೆ 2 ಗಂಟೆಗಳ ಕಾಲ ಉಪಯೋಗಿಸುತ್ತಿದ್ದ ಪಕ್ಷದಲ್ಲಿ 1.5 ಗಂಟೆಗಳಿಗೆ ಇಳಿಸಲು ಪ್ರಯತ್ನಿಸಿ. ಇದನ್ನು ಸಾಧಿಸಿದ ನಂತರ 1 ಗಂಟೆಗೆ ಇಳಿಸಲು ಪ್ರಯತ್ನಿಸಿ. ಹೀಗೆಯೇ ಹಂತ ಹಂತವಾಗಿ ನಿಯಂತ್ರಿಸುತ್ತಾ ಕೆಲ ದಿನಗಳ ನಂತರ ತಾನಾಗಿಯೇ ಬದಲಾವಣೆ ಸುಲಭವಾಗಲು ಪ್ರಾರಂಭವಾಗುತ್ತದೆ. ಆರಂಭದಲ್ಲಿ ಬದಲಾವಣೆ ಕಷ್ಟ ಎಂದು ಎನಿಸಬಹುದು, ಆದರೆ ಒಳ್ಳೆಯ ನಡವಳಿಕೆಗಳು ಒಮ್ಮೆ ಅಭ್ಯಾಸವಾದರೆ ಅದರಿಂದ ಸಿಗುವ ಸುಖವು ದೀರ್ಘ ಕಾಲ ಉಳಿಯುವುದು. ಮುಂದೆ ಬರುವ ಕಾಲದಲ್ಲಿ ಕೆಟ್ಟ ಅಭ್ಯಾಸದಿಂದ ವಿಷಾದಪಡುವುದನ್ನು ತಪ್ಪಿಸಬಹುದು.
ಅಧ್ಯಯನಗಳ ಪ್ರಕಾರವಾಗಿ ಅಭ್ಯಾಸವನ್ನು ಬದಲಿಸುವುದಕ್ಕೆ 18 ರಿಂದ 254 ದಿನಗಳು ಬೇಕಾಗಬಹುದು. ಇದನ್ನು ಬದಲಿಸುವ ಮತ್ತು ಇದಕ್ಕೆ ಬೇಕಾಗುವ ದಿನಗಳು ಎಷ್ಟು ಎಂಬುದು ವ್ಯಕ್ತಿಯ “ಇಚ್ಛಾಶಕ್ತಿ”ಯ ಮೇಲೆ ಅವಲಂಬಿತವಾಗಿರುತ್ತದೆ. ಇಚ್ಛಾಶಕ್ತಿಯಿಂದ ಅಭ್ಯಾಸವನ್ನ ಬದಲಿಸುವುದು ಅಷ್ಟೇ ಅಲ್ಲ ಅದು ನಮ್ಮ ಜೀವನದಲ್ಲಿ ಬಹಳ ಎತ್ತರದ ಸ್ಥಾನವನ್ನು ತಲುಪಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಇಚ್ಛಾಶಕ್ತಿಯನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಿ ಮತ್ತು ವಿಚಲಿತರಾಗದಿರಿ.
Categories: Health

ನಿಜ, ಅಭ್ಯಾಸಗಳು ಒಂದು ರೀತಿ ಅಟೋಪೈಲಟ್ ಮೋಡ್ ಇದ್ದಂತೆ.
LikeLiked by 1 person