By ಕಾವ್ಯ. ಕೆ.ಘರ್ಜಿನ್
ವಿಶ್ವ ಮಹಿಳಾ ದಿನವೇ? ಮಹಿಳೆಯರ ದಿನವೇ? ಶುಭಾಶಯಗಳು ತಮಗೂ ಕೂಡ. ನೀವಂತೂ ಗುರುತೇ ಸಿಗುತ್ತಿಲ್ಲ, ಏನಿಷ್ಟು ಬದಲಾವಣೆ?
ಹೀಗೊಂದು ಸಂಭಾಷಣೆ ಬೀದಿಯ ಕೊನೆಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ತೀರಾ ಆತ್ಮೀಯರಲ್ಲದ ಸ್ನೇಹಿತೆಯರ ಮಾತು.
ನಿತ್ಯ ಬದುಕಿನಲ್ಲಿ ಹಾಲಿನವನ, ಸಿಲಿಂಡರಿನ, ದಿನಸಿಯ, ಕರೆಂಟಿನ, ಪೇಪರಿನ, ಮನೆಗೆಲಸದವಳ ಹಣ ಸಂದಾಯದ ದಿನವನ್ನು ನಿಗದಿಯಂತೆ ಪಾವತಿಸುವವರಿಗೆ ಮಹಿಳಾ ದಿನದ ಗೊಡವೆಯೇಕೆ?

ಕಚೇರಿಯ ಕೆಲಸ ಮುಗಿಸಿ ಮನೆಗೆ ಬಂದ ಸ್ನೇಹಿತೆಯಲ್ಲಿ ಬೆಳಗ್ಗೆ ಯಾದ ಸಂಭಾಷಣೆ ಅವಳ ಆ ದಿನದ ನೆಮ್ಮದಿಯನ್ನೇ ಹಾಳು ಮಾಡಿತ್ತು. ಅವಳ ಥೈರಾಯ್ಡ್ ಸಮಸ್ಯೆ ಅವಳ ಆಕಾರವನ್ನು ಬದಲಿಸಿತ್ತು. ಈ ಬಿಡುವಿರದ ಜಗತ್ತಿನಲ್ಲಿ, ಪರಿಸರದಲ್ಲಿ, ಕಚೇರಿಯಲ್ಲಿ, ಮನೆಯಲ್ಲಿ ಅವಳು ಕಳೆದು ಹೋಗಿದ್ದಳು.
ಹೀಗೆ ಯೋಚಿಸುತ್ತಾ ಸೋಫಾದಮೇಲೆ ಕುಳಿತವಳಿಗೆ ತನ್ನ ಹಳೆಯ ದಿನಗಳು ತೀರ ನೆನಪಿಗೆ ಬಂದವು. ಎಷ್ಟೊಂದು ಚಟುವಟಿಕೆಯ ಸರಳ ಸುಂದರ ಚುರುಕಾದ ಹುಡುಗಿ. ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಡೆಸುವ ಸ್ವಾವಲಂಬಿ. ಇದೇನು ನೋಡನೋಡುತ್ತ ನನ್ನ ಬದುಕೇ ಬದಲಾಗಿಬಿಟ್ಟಿದೆ ನನ್ನ ತನವೇ ನನಗೆ ಉಳಿದಿಲ್ಲ. ಹೀಗೆ ಯೋಚಿಸುತ್ತ ಕಣ್ಣಂಚಿನ ನೀರು ನೆಲಕ್ಕೆ ಬಿದ್ದು ಒಂದು ದೊಡ್ಡ ನಿಟ್ಟುಸಿರು ಬಿಡು ತ್ತಾಳೆ.ಅಷ್ಟರಲ್ಲಿ ಮಗಳು ಓಡಿಬಂದು ಅಮ್ಮ ಹಸಿವು ಎಂದಳು, ಹರಡಿದ ಕೂದಲನ್ನು ಎತ್ತಿಕಟ್ಟುತ್ತ ಈಗ ಬಂದೆ ಎಂದು ಅಡುಗೆಮನೆಗೆ ನಡೆಯುತ್ತಲೇ , ಇಂದು ಮಗಳು ಶಾಲೆಗೆ ತರಕಾರಿಗಳ ಪಲಾವ್ ಅನ್ನು ಕೊಟ್ಟಿದ್ದೆ ಈಗ ಮತ್ತೆ ಅದೇ ಹೇಳಿದರೆ ಅವಳು ಒಪ್ಪುವುದಿಲ್ಲ ಸ್ವಲ್ಪ ಹಣ್ಣುಗಳನ್ನು ಕೊಡೋಣ ಆರೋಗ್ಯಕ್ಕೆ ಒಳ್ಳೆಯದು ಹಾಗೆ ಈಗ ಮನೆಯವರು ಹಸಿದು ಬರುತ್ತಾರೆ ಅವರಿಗೂ ಸಹ ಅದೇ ಆಗುತ್ತದೆ ಎಂದು ಹೆಚ್ಚಿದ ಹಣ್ಣುಗಳನ್ನು ಎರಡು ಬಟ್ಟಲಿಗೆ ತುಂಬಿಸಿಡುತ್ತಾಳೆ. ಹಾಗೆಯೇ ಸ್ವಲ್ಪ ಚಪಾತಿ ಹಿಟ್ಟನ್ನು ಕಲೆಸಿ ಇಡುತ್ತೇನೆ ಅತ್ತೆ ಮಾವನವರಿಗೆ ಡಯಾಬಿಟಿಸ್ ಸಮಸ್ಯೆಯಿದೆ ರಾತ್ರಿಗೆ ಸರಿ ಹೋಗುತ್ತದೆ. ತನಗೂ ಏಕೋ ಸುಸ್ತಾದ ಅನುಭವ,ಸ್ವಲ್ಪ ಕಾಫಿ ಕುಡಿಯುತ್ತಲೇ ಪಲ್ಯಕ್ಕೆ ರೆಡಿಮಾಡಿ ಚಪಾತಿಯನ್ನು ಮಾಡಿ ಊಟಕ್ಕೆ ಬಡಿಸಿ ತಾನು ಮಾತ್ರ ಮಧ್ಯಾಹ್ನ ಉಳಿದ ಅನ್ನಕ್ಕೆ ಶರಣಾಗುತ್ತಾಳೆ. ಉಳಿದರೆ ಸುಮ್ಮನೆ ಹಾಳಾಗುತ್ತದೆ ಎಂದು.ಅವಳ ಥೈರಾಯ್ಡ್ ಸಮಸ್ಯೆಗೆ ಆರೋಗ್ಯಕರ ಊಟ ರಾಮಬಾಣ. ಆದರೆ ಅವಳು ಮಾಡಿದ್ದಾದರೂ ಏನು ?ತನ್ನನ್ನೇ ತಾನು ಕಡೆಗಣಿಸುವ ಈ ದಿನಚರಿ ಎಷ್ಟು ಸರಿ?
ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸರಿಸಮಾನರು, ಶಕ್ತರು,ಪರಿಪೂರ್ಣರು ಹೀಗೆಲ್ಲ ಬರೆದು ಅದನ್ನು ವ್ಯಾಕರಣ ಮಾಡಿ ಪ್ರಬಂಧ ಬರೆಯುವ ಗೋಜಿಗೆ ಹೋಗದೆ, ಪ್ರಪಂಚಕ್ಕೆ ಅವಳೇನೆಂದು ಅರ್ಥೈಸುವ ಗೊಡವೆಗೂ ಹೋಗದೆ, ಅವಳನ್ನು ಅವಳಿಗೆ ತಿಳಿಸಬಯಸುವ ಪ್ರಯತ್ನ.
ಮಹಿಳೆಯರು ಬಾಹ್ಯ ಸೌಂದರ್ಯಕ್ಕೆ ಒತ್ತು ಕೊಟ್ಟಷ್ಟು ಆಂತರಿಕ ಸೌಂದರ್ಯಕ್ಕೆ ಕೊಡುವುದಿಲ್ಲ.ಆರೋಗ್ಯವೇ ಭಾಗ್ಯ ಹಾಗಿರುವಾಗ ಎಲ್ಲದಕ್ಕೂ,ಎಲ್ಲರಿಗೂ ಸಮಯ ಕೊಟ್ಟು ನಿಮ್ಮ ಆರೋಗ್ಯವನ್ನು ಮರೆತರೆ ಹೇಗೆ?
ಈಗಿನ ದಿನದಲ್ಲಿ ಸಾಮಾನ್ಯವಾಗಿ ಅತಿಯಾದ ತೂಕ ಎಲ್ಲಾ ಮಹಿಳೆಯರನ್ನು ಕಾಡುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ ಹಾಗೂ ಪರಿಹಾರಗಳು ಇದೆ. ಅದನ್ನು ಸರಿಯಾಗಿ ಆಲಿಸುವ ಹಾಗೂ ಪಾಲಿಸುವ ಕೆಲಸ ನಮ್ಮದಾಗಿರಬೇಕು ಅಷ್ಟೇ.
ಎಷ್ಟೋ ಸಲಹೆಗಳನ್ನು ಹುಡುಕಿ ಓದಿರುತ್ತೇವೆ, ಕೇಳಿರುತ್ತೇವೆ ಆದರೆ ಅಳವಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಹೋದರೂ ಕೂಡ ಒಂದೆರಡು ವಾರದಲ್ಲಿ ಉತ್ಸಾಹ ಕೊನೆಯಾಗುತ್ತದೆ. ಅದಕ್ಕೆ ಸಬೂಬು ಜಾಸ್ತಿ. ನಮ್ಮದು ಕೂಡುಕುಟುಂಬ, ಸಮಯ ಸಾಲುತ್ತಿಲ್ಲ,ಮಗು ಇದೆ, ನಾನು ರಾತ್ರಿ ಪಾಳಿ ಕೆಲಸ ಮಾಡುತ್ತೇನೆ, ಹೀಗೆ ನನ್ನ ಕ್ಲೈಂಟ್ಸ್ ಗಳು ಹೆಚ್ಚಾಗಿ ನೀಡುವ ಕಾರಣಗಳು ಇವೆ.
ಆರೋಗ್ಯಕರವಾಗಿ ತೂಕ ಇಳಿಸುವುದು ಒಂದೆರಡು ದಿನದ ಪ್ರಕ್ರಿಯೆಯಲ್ಲ, ಹಾಗೆಯೇ ಬದಲಾವಣೆಗೂ ಕೂಡ ಸಮಯ ಬೇಕು. ಆರೋಗ್ಯಕರ ಬದುಕಿಗೆ ಸಮಯ ಕೊಡುವುದು ಜಾಣತನವು ಹೌದು.
ಆರೋಗ್ಯಕರವಾಗಿ ತೂಕ ಕಡಿಮೆ ಮಾಡಲು ಹೆಚ್ಚಾಗಿ ಏನು ಮಾಡಬೇಕಿಲ್ಲ,ದಿನ ನಿತ್ಯದ ಬದುಕಿನಲ್ಲಿ ಸ್ವಲ್ಪ ಬದಲಾವಣೆ ಅಷ್ಟೇ. ನಿಮಗೆ ಬೇರೆಯಾಗಿ ಅಡುಗೆ ಮಾಡಬೇಕಿಲ್ಲ,ಬೇರೆ ದಿನಸಿ ತರಬೇಕಿಲ್ಲ. ಬದಲಾವಣೆ ಒಂದು ಸವಾಲು ಎನ್ನುವುದಾದರೆ ನಾವೆಲ್ಲ ನಮ್ಮ ಅಜ್ಜಿ,ಅಮ್ಮಂದಿರ ದಿನ ನಿತ್ಯದ ಬದುಕನ್ನು ಅನುಸರಿಸುತ್ತಿ ದ್ದೀವಾ? ಇಲ್ಲ ಅಲ್ವಾ ನಮಗೆ ಬೇಕಾದ ಹಾಗೆ ಸುಮಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬದುಕುತ್ತಿದ್ದೇವೆ ಹಾಗಾದರೆ ಬದಲಾವಣೆ ಕಷ್ಟವಲ್ಲ ಅಂದ ಹಾಗಾಯಿತಲ್ಲ…ಬದಲಾಯಿಸುವ, ಬದಲಾಯಿಸಿಕೊಳ್ಳುವ ಯುಕ್ತಿ ನಮ್ಮ ಮಹಿಳೆಯರಲ್ಲಿ ಇರುವ ಒಂದು ಶಕ್ತಿ. ಎಲ್ಲೋ ಹುಟ್ಟಿ ಹೇಗೋ ಬೆಳೆದು ಇಷ್ಟೊಂದು ಸಾಧನೆಗಳನ್ನು ಮಾಡಿ ಕೊನೆಗೆ ಸಂಸಾರದ ಹೊಣೆಹೊತ್ತು ಸಂಯಮದಿಂದ ನಡೆಯುವ ಶಕ್ತಿ ಅವಳಿಗೆ ಮಾತ್ರ ಇದೆ..ಬದಲಾವಣೆ ಬೇಕಿರುವುದು ಅವಳ ಮನಸ್ಥಿತಿಯಲ್ಲಿ, ಬದಲಾಗುವ ಮನಸ್ಥಿತಿ ಬಂದದ್ದೇ ಆದರೆ ನಿಮ್ಮ ಆರೋಗ್ಯದ ಗೆಲುವು ನಿಮ್ಮದೇ ಕೊನೆವರೆಗೂ…ಅದಕ್ಕಾಗಿ ಸ್ವಯಂ ಪ್ರೇರಣೆ ನಮ್ಮ ಸಂಸ್ಥೆಯ ಮೊದಲ ಪಾಠ.
ಬದಲಾವಣೆ ಸರಿಯಾಗಿದ್ದರೆ ನಮ್ಮ ಆಹಾರ ಪದ್ಧತಿ ಜೊತೆಗೆ ಅತ್ಯಮೂಲ್ಯ ಆರೋಗ್ಯವು ಕೂಡ ಸರಿಯಾಗಿರುತ್ತದೆ. ಬದುಕುವುದಕ್ಕಾಗಿ ಆಹಾರ, ಸರಿಯಾದ ರೀತಿಯಲ್ಲಿ ಎಲ್ಲವನ್ನು ತೆಗೆದುಕೊಂಡು ತೂಕ ಕಡಿಮೆ ಮಾಡುವ ಪ್ರಕ್ರಿಯೆಯನ್ನು ಖುಷಿಯಾಗಿ ಪಾಲಿಸಬಹುದು. ನಾವು ಆರೋಗ್ಯವಂತರಾಗಿದ್ದರೆ ನಮ್ಮ ಕುಟುಂಬ ಆನಂದದಿಂದ ಇರುತ್ತದೆ.
ಕಾವ್ಯ. ಕೆ.ಘರ್ಜಿನ್
ಆಹಾರ ತಜ್ಞರು ಮತ್ತು ಸಲಹೆಗಾರರು
AURA NUTRI BASE
Health & Wellness
auranutribase@gmail.com
Categories: news

ಉತ್ತಮ ಮಾಹಿತಿ. ಮಹಿಳೆ ಸಶಕ್ತಳಾಗಿ ದುಡಿಯುತ್ತಿರುವುದು ಅವಳಿಗೆ ಹೆಮ್ಮೆಯೇ ಸರಿ. ಹೆಣ್ಣೊಂದೇ ಮನೆಗೆಲಸ ಮಾಡಬೇಕೆಂಬ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಲಿದೆ. ಖಂಡಿತವಾಗಿಯೂ ಈ ಬದಲಾವಣೆ ಮಹಿಳೆಯ ಆಂತರಿಕ ಸೌಂದರ್ಯ ವೃದ್ಧಿಸಲು ಅನುಕೂಲಕರವಾಗಬಹುದು
LikeLike