Articles

ನಾ ನೋಡಿ ಆಡಿದ ಹೋಳಿ ಹುಣ್ಣೆಮೆ.

ಕಾಲಾಯ ತಸ್ಮೈ ನಮಃ ಎಂಬ ವಾಣಿ ಎಷ್ಟು ಸತ್ಯ ಇದೆ ಅಲ್ವಾ? ಕಾಲಕ್ಕೆ ನಾವು ತಲೆ ಬಾಗಿಸಲೇಬೇಕು ಕಾರಣ ಅದು ಸಾಕ್ಷಿ ಸಮೇತ ಬರುತ್ತೆ!. ಹರಿಯುತ್ತಿರುವ ನದಿ ಯಾವಾಗಲೂ ಎಡ ಮತ್ತು ಬಲ ಬದಿ ಮಧ್ಯದಲ್ಲಿ ಹರಿಯುತ್ತೆ, ಎಂದು ನಂಬಿರುವ ನಾವು ಕೆಲವೊಮ್ಮೆ ನಿಸರ್ಗದ ಹೊಡತಕ್ಕೆ ಎರಡೂ ಬದಿ ತುಂಬಿ ಹರಿಯುವುದುಂಟು. ಜೀವನ  ಸುಖ ಮತ್ತು ದುಃಖಗಳ ನಡುವೆ ಸಾಗುತ್ತಿರುವ ಒಂದು ಪಯಣ. ಲಿಮಿಟೆಡ್ ಪಯಣದಲ್ಲಿ ಸುಖ ಮತ್ತು ದುಃಖಗಳ  ಏರು ಪೇರು ಸಾಮಾನ್ಯ. ಅದನ್ನು ಎದುರಿಸುವುದೇ ಒಂದು ಜೀವನದ ಪಾಠ. ಜೀವನದ ಪಾಠಗಳ ಸರಮಾಲೆಯೇ ಅದ್ಭುತ ಜೀವನ ಮತ್ತು ಯಶಿಸ್ವಿ . ಇದರೆಲ್ಲರ ಮದ್ಯೆ ಸಮಯ ಸಿಕ್ಕಾಗ ಏಕಾಂತವನ್ನು ಅನುಭವಿಸಿ ಮತ್ತೆ ಪುಟಿದೇಳುವ ಹವ್ಯಾಸ ನನಗುಂಟು. ಏಕಾಂತ ಸಮಯ ಸಮಸ್ಯೆಗೆ ಅಷ್ಟೇ ಅಲ್ಲ  ಜೀವನದ  ಸ್ಪೂರ್ತಿಗೂ ಕಾರಣವಾಗಬಹದು. ಒಂದು ಮರದ ಕೆಳಗಡೆ ಏಕಾಂತದಲ್ಲಿ ಕುಳಿತ ಬುಧ್ಧನಿಗೆ  ಜ್ಞಾನೋದಯ ಆಗಿದ್ದುಂಟು. ನಮ್ಮ ಮನೋಭಾವ ಹೇಗೆ ಎಂದರೆ ನಮಗೆ ಮೋಕ್ಷ ಬೇಡ ಜೀವನಕ್ಕೆ ಸ್ಪೂರ್ತಿ ಸಿಕ್ಕರೆ ಸಾಕಲ್ವಾ.

ಚಿಕ್ಕವರಿದ್ದಾಗ ಹೋಳಿ ಹಬ್ಬ ಹೆಚ್ಚು ಕಡಿಮೆ ಪರೀಕ್ಷೆ ಮುಗಿದ ಕೂಡಲೇ ಬರುವ ಹಬ್ಬ. ನಮಗೆ ಈ ಹಬ್ಬದ ಬಗ್ಗೆ ಎಷ್ಟು ಆಸಕ್ತಿ ಇತ್ತು ಎಂದರೆ ಹಬ್ಬ ಬರುವುದಕ್ಕಿಂತ ಮುಂಚೆ ಎರಡು ತಿಂಗಳು ಕಾಯುತ್ತಿದ್ದೆವು . ಈ ವರ್ಷ ನಾವು ಹೇಗೆ ಆಚರಣೆ ಮಾಡಬೇಕು ಮತ್ತು ಯಾವ ಯಾವ ಬಣ್ಣ ಯಾರ್ಯಾರಿಗೆ ಹಚ್ಚಬೇಕು. ಈ ವರ್ಷದಲ್ಲಾದರೂ ನಾವು ಸ್ಪೀಕರ್ ಹಚ್ಚಿ ಕುಣಿಯೋಣ. ಮತ್ತು ಇನ್ನೊಂದು ವಿಷಯ ಎಂದರೆ ಅಂಗಿ ಮತ್ತು ಪ್ಯಾಂಟ್ ಹರಿಯುವುದು ಯಾರು ಮಾಡಿದ ಪದ್ದತಿ ಇನ್ನೂ ಅರಿಯದ ವಿಷಯ!!!

ಹೋಳಿ ಹಬ್ಬದ ವಿಶೇಷತೆ ಎಂದರೆ ಕಾಮಣ್ಣನನ್ನು ಸುಡುವುದು. ಕಾಮಣ್ಣ ಅಂದರೆ ಕುಳ್ಳುಗಳ(ಸಗಣಿ ಇಂದ ಮಾಡಿದ್ದು) ಮತ್ತು ಕಟ್ಟಿಗೆಗಳ ದಿಬ್ಬೆ. ಅಂದು ನಮ್ಮೂರು ಚಿಕ್ಕದು ಅದಕ್ಕೆ ಊರಿಗೆ ಒಂದೇ ಕಾಮಣ್ಣ, ಅದು ನಮ್ಮ ಚಾವಡಿಯ ಪ್ರಾಂಗಣದಲ್ಲಿ ಇದ್ದದ್ದು. ಲಬೋ ಲಬೋ ಅಂತ ಹೋಯಿಕೊಳ್ಳೋದು, ಹಲಗಿ ಬಾರಿಸೋದು, ಆದ್ರೆ ಕಾಮಣ್ಣನ ದಿಬ್ಬೆ ಮಾಡೋದೇ ಒಂದು ಸವಾಲು. ಅಮವ್ಯಾಸೆ ಆದ ನಂತರ ಮುಂದಿನ ಹದಿನೈದು ದಿವಸದಲ್ಲಿ ಅತಿ ಹೆಚ್ಚು ಕುಳ್ಳುಗಳ ಮತ್ತು ಕಟ್ಟಿಗಗಳ ದಿಬ್ಬೆ ಮಾಡುವುದು.ಆದರೆ ಎಲ್ಲಿಂದ ತರೋದು, ಮತ್ತು ಹೇಗೆ ತರೋದು, ಅವುಗಳನ್ನು ಕೂಡಿ ಹಾಕೋದು ಅಷ್ಟೊಂದು ಸಲೀಸಾಗಿ ಇರಲಿಲ್ಲ. .

ಕುಳ್ಳುಗಳು ಮತ್ತು ಕಟ್ಟಿಗೆಗಳು ನಾವು ಮನೆಗಳಿಂದ ಕಳವು ಮಾಡಿಕೊಂಡು ಬಂದು ಪ್ರಾಂಗಣದಲ್ಲಿ ಹಾಕುವುದು . ಒಂದು ಬಾರಿ ಅಲ್ಲಿ ಹಾಕಿದರೆ ಯಾರು ಮುಟ್ಟುವ ಹಾಗಿಲ್ಲ. ಆದರೆ ಎಲ್ಲರಿಗೂ ಗೊತ್ತು ಇದು ಹೋಳಿ ಸಮಯ ಅಂತ, ಯಾರು ಬೀದಿ ಬೀದಿ ಗಳಲ್ಲಿ ಕುಳ್ಳುಗಳು ಇಡುತ್ತಿರಲಿಲ್ಲ. ತಮ್ಮ ಮನೆಯ ಮೇಲೆ,  ಹಿತ್ತಲಲ್ಲಿ ಇಡುತ್ತಿದ್ದರು. ಆದರೆ ಒಂದು ನೆನೆಪಿರಲಿ ನಾವು ಯಾವದೇ ಕಾರಣಕ್ಕೆ ಮನೆಯ ಒಳಗಡೆ ಇಂದ ತರುವಹಾಗಿಲ್ಲ. ಕಳುವು ಮಾಡುವದು ಸಾಮಾನ್ಯವಾಗಿ ಸಂಜೆ ಮತ್ತು ರಾತ್ರಿ ಹೊತ್ತು. ಗುಂಪು ಗುಂಪಾಗಿ ಹೋದರೂ ಅದಕ್ಕೆ ಒಬ್ಬ ಲೀಡರ್ ಇರ್ತಾ ಇದ್ದ. ಲೀಡರ್ ಯಾವಾಗಲೂ ಮುಂದೆ ಇರ್ತಾ ಇದ್ದ. ಅವನು ನಾಲ್ಕು ಎಕ್ಸ್‌ಪರ್ಟ್ ಹುಡುಗರನ್ನು ಗುರುತಿಸಿ ಅವರಿಗೆ ನೀವು ಹೇಗೆ ಕಳವು ಮಾಡಬೇಕು ಮಾಡಿದ ನಂತರ ಅದು ಪ್ರಾಂಗಣಕ್ಕೆ ಹೇಗೆ ತಲುಪಿಸಬೇಕು ಎಂದು ತರಬೇತಿ ಇತ್ತು. ಹೀಗೆ ಸಾಯಂಕಾಲ ಕಳವು ಮಾಡಕ್ಕೆ ಹೊರಟಾಗ ನಮ್ಮ ಕ್ಲಾಸ್‌ಮೇಟ್ ಹುಡುಗಿಯರು ಅಲ್ಲೇ ನಿಂತು ನಮ್ಮನ್ನು ನೊಡುತ್ತಿರುವಾಗ ನಮ್ಮ ನಡೆಯುವ ಠೀವಿ ನಾವು ಸಿನಿಮಾ ನಟರ ತರಹ ಫೀಲ್ ಕೊಡುತ್ತಾ ಸಾಗುತಿದ್ದೆವು.! ರಾತ್ರಿ 8 ಘಂಟೆಗೆ ಮನೆಗೆ ಹೋಗುವ ಸಮಯ. ಆದ್ರೆ ಹೋಗುವುದಕ್ಕಿಂತ ಮುಂಚೆ ನಾಳೆ ಏನು ಮತ್ತು ಹೇಗೆ ಮಾಡೋದು ಅಂತ ಪ್ಲಾನ್ ಬೇರೆ!!! We did daily stand up meeting before AGILE!!!!

ಆದರೆ ಒಂದು ದಿವಸ ಮನೆಗೆ ಹೋಗುವಷ್ಟರಲ್ಲಿ ನಮ್ಮ ಅಜ್ಜಿ ತರಾಟೆ ತಗೆದುಕೊಳ್ಳಲಿಕ್ಕೆ ಶುರು ಮಾಡಿದರು. ನೀನು ಎಲ್ಲಿ ಹೋಗಿದ್ದಿ, ಯಾರ ಮನೆಯ ಕುಳ್ಳು ಕಳವು ಮಾಡಿದ್ದಿ ಅಂತ ಅನ್ನುವಷ್ಟರಲ್ಲೇ ನಾವು ಕಳವು ಮಾಡಿದ ಮನೆಯ ಅಜ್ಜಿ ಅಲ್ಲೇ ಹಾಜರ!! ಅಜ್ಜಿಯ ಮಾತಿಗೆ ಕ್ಯಾರೆ ಅನ್ನದೆ ಇದ್ದಾಗ ನಿಮ್ಮ ಅಪ್ಪ ಬರಲಿ ನಿನ್ನ ಕಂಟ್ರೋಲ್ ಇರೋದು ಅಲ್ಲೇ ಅಂದು ಬಿಟ್ಟಳು!! ಭಯ ಶುರುವಾಯಿತು ಅನ್ನುವಷ್ಟರಲ್ಲೇ ಅಪ್ಪಬಂದೇ ಬಿಟ್ಟರು. ಏನೋ ಪವಾಡ ಗೊತ್ತಿಲ್ಲಾ ಅಪ್ಪ ಅವತ್ತು ಕೂಡಿಸಿಕೊಂಡು “ನೋಡ್ರೆಪ್ಪ ಅಜ್ಜಿ ಇರೋದು ಒಬ್ಬಳೇ, ಕೆಲಸ, ಅಡಿಗೆ ಅವಳೇ ಮಾಡಬೇಕು” ಎಂದು ಶಾಂತ ರೀತಿಯಿಂದ  ಹೇಳಿದ  ಅಪ್ಪನ ಮಾತು ನನ್ನ ಮನಸ್ಸಿಗೆ ನಾಟಿದ್ದವು. ಬೆಳಿಗ್ಗೆ ಎದ್ದ ಕೂಡಲೇ ನಾನು ಮೊದಲು ಹೋಗಿದ್ದು ಅಜ್ಜಿಯ ಮನೆಗೆ. ಹೋದ ಕೂಡಲೇ ಅಜ್ಜಿ “ನೋಡಪ್ಪಾ ಹಾಗೆಲ್ಲ ಮಾಡಬಾರದು ನನಗೆ ಯಾರು ಇದ್ದಾರೆ ಹೇಳು. ರಸ್ತೆಯಲ್ಲಿ ಬಿದ್ದ ಸೆಗಣಿ ಇಂದ ನಾನು ಕುಳ್ಳು ಬಡತಿನಿ. ನನಗೇನು ಹೊಲ ಮನೆ ಐತಿ? ಇದೇ ಜೋಪಡಿಯಲ್ಲಿ ಇದ್ದೀನಿ” ಅಂತ ತನ್ನ ಮನಸ್ಸಿನ ಮಾತುಗಳು ಹೇಳ್ತಾ ಇದ್ದಳು.  ಹಾಗೆ ನನ್ನ ಕಣ್ಣು ಅವಳ ಜೋಪಡಿಯ ಒಳಗಡೆ ಇಣಿಕಿ ನೋಡುತಿತ್ತು. ಅಜ್ಜಿಯ ನೀರು ತುಂಬಿದ ಕೊಡ, ಅಡಿಗೆಯ ಪಾತ್ರೆಗಳು ಮಿರಿ ಮಿರಿ ಮಿಂಚುತ್ತಿದ್ದವು ಮತ್ತೆ ಅಜ್ಜಿಯ ಜೋಪಡಿ ತುಂಬಾ ಸ್ವಚ್ಛಇತ್ತು.ಇದರ ಮದ್ಯೆ ಅಜ್ಜಿಯ ಮಾತುಗಳು ಮುಂದುವರೆದಿತ್ತು. ಸರಕಾರದಿಂದ ಮನೆ ಕೊಡತೀವಿ ಅಂತ ಹೇಳತಾರೆ ಆದ್ರೆ ನಮ್ಮಂತವರಿಗೆ ಮನೆನೇ ಕೊಡಲ್ಲ. ಆದ್ರೂ ರಟ್ಟೆಇಂದ ದುಡಿದು ಮನೆ ಕಟ್ಟಿನೇ ಸಾಯಿತೀನಿ ಅಂತ ಛಲ!! ಅಜ್ಜಿಯ ಮಾತುಗಳಿಗೆ ಉತ್ತರ ಹೇಳುವ ವಯಸ್ಸು ನನ್ನದಾಗಿರಲಿಲ್ಲಆದರೆ ಅಜ್ಜಿಯ ಗುರಿ ಮತ್ತು ಪರಿಶ್ರಮ ನನ್ನ ಮನದಲ್ಲಿ ಅಚ್ಚಾಗಿತ್ತು. ನೆನಪಿಗೆ ಬಂದದ್ದು ವಿವೇಕವಾಣಿ. “Strength is Life, Weakness is Death” ಮತ್ತು ಮಹನೀಯರು  ಹೇಳಿದ ಮಾತು “If you can dream it, you can do it” ಅದು ಅಜ್ಜಿಯ ಗುರಿ ಮತ್ತು ಕನಸಾಗಿತ್ತು

ಕಳೆದ ಹದಿನೈದು ದಿವಸ ಪ್ರಾಂಗಣದಲ್ಲಿ ಮಾಡಿದ್ದ ಕಾಮಣ್ಣನ ಸುಡುವ ದಿವಸ. ಸಂಜೆ ಸರಿಯಾಗಿ 7 ಘಂಟೆಗೆ  ಲೀಡರ್ ಸಹಿತ ನಮ್ಮೆಲ್ಲರ ಗುಂಪು ಮತ್ತು ದೊಡ್ಡವರ ಸಮ್ಮುಖದಲ್ಲಿ ಕಾಮಣ್ಣನಿಗೆ ಬೆಂಕಿ ಹಚ್ಚಿ, ಅದರ  ಸುತ್ತು ತಿರುಗುತ್ತಾ ಲಬೋ ಲಬೋ ಅಂತ ಹೋಯಿಕೊಳ್ಳುತ್ತಾ ಅಲ್ಲಿ ಬೆಂಕಿ ಇರುವ ಕುಳ್ಳಿನ ಮೇಲೆ ಕಡಲೆ ಸುಟ್ಟು ತಿಂದಿದ್ದು ಆ ದಿನದ ವಿಶೇಷ.

ಕಾಮಣ್ಣ ಸುಟ್ಟ ಮರುದಿನ ಬಣ್ಣ ಹಚ್ಚುವ ದಿನ. ಇದಕ್ಕಾಗಿ ಒಂದು ವರ್ಷ ಜಾತಕ ಪಕ್ಷಿಯಂತೆ ಕಾದಿದ್ದ ನಮಗೆ ಮಂಗಳಯಾನ ಯಶಸ್ವಿ ಅದಷ್ಟೇ ಖುಷಿ. ಖುಷಿಗೆ ಅಂದಾಜು ಮಾಡಲಿಕ್ಕೂ ಆಗದಂತಹ ದಿನ. ಬಣ್ಣ ಮತ್ತು ಬಣ್ಣದ ಬಾಟಲಿ ಹಿಡಿದು ಗೆಳಯರ ಮನೆಗೆ ಹೋಗಿ ಬಣ್ಣ ಎರಚೋದು ಹೇಗಿತ್ತು ಎಂದರೆ ನಾವು ಬೆಂಗಳೂರಿನಲ್ಲಿ ಆಡುವ ಒಣ ಬಣ್ಣದ ರೀತಿ ಇರಲಿಲ್ಲ. ಬಣ್ಣದ ಜೊತೆ ಸಗಣಿ, ಮೊಟ್ಟೆ, ವಾರ್ನಿಶ್, ಸ್ವಲ್ಪ ಕೋಪ ಜಾಸ್ತಿ ಇದ್ದರೆ ರಸ್ತೆಯ ಮಣ್ಣು ಅವತ್ತು ಬಣ್ಣನೇ!! ಬಣ್ಣ ಹಚ್ಚಿದ ಹೊಡೆತಕ್ಕೆ ಮೂರು ಮೂರು ತಿಂಗಳು ಕೂದಲು ಉದಿರಿದ್ದು ಮತ್ತು ಅಲರ್ಜಿಗೆ ಮಾತ್ರೆ ತಗೆದುಕೊಂಡ ನಿದರ್ಶನವೂ ಇತ್ತು. ಹೊತ್ತು ಏರಿದಾಂಗೆ ದೊಡ್ಡವರ ಕುಣಿತ ಜಾಸ್ತಿ ಆಗಿತ್ತು. ಅದೆಲ್ಲಾ ಮದ್ಯದ ಕರಾಮತ್ತು. ಬಿಸಿಲಿನ ಮತ್ತು ಎಣ್ಣೆಯ ಹೊಡೆತಕ್ಕೆ ಅಮಲಿನ ಮದ ಆನೆಯ ಮದಕ್ಕಿಂತ ಒಂದು ಕೈ ಜಾಸ್ತಿನೇ ಆಗಿತ್ತು. ಇದರ ಮಧ್ಯೆ ಅಂಗಿ ಹರಿಯುವ ಕಾರ್ಯಕ್ರಮ ಶುರು ಆಗಿತ್ತು. ಅವರ ಅಂಗಿ ಇವರು, ಇವರ ಅಂಗಿ ಅವರು ಹರೆದು ಕುಣಿದು ಕುಪ್ಪಳಿಸುತ್ತಿರುವಾಗ ಟರ್ ಟರ್ ಎಂಬ ಶಬ್ದ ಅದರ ಜೊತೆಗೆ ಹರಿಬ್ಯಾಡ್ರಲೇ ನನ್ನ ಪ್ಯಾಂಟ್, ಬಣ್ಣ ಹತ್ತದ ಅಂತ ಹೇಳಿ ಚಡ್ಡಿ ಹಾಕಿಲ್ಲ ಎಂದು ಗೋಗರೆದರೂ ಟರ್ ಅಂದೆ ಬಿಟ್ಟಿತ್ತು. ಅಲಾ ಸೂಳೆಮಕ್ಕಳಾ ಎಂಬ ಉದ್ಘಾರ!!. ಅವತ್ತಿನ ನಮ್ಮ ನಗು, ಅವನ ಸಂಕಟ ಮತ್ತೊಮ್ಮೆ ಲಗುವಾದ ನಗು ತರಿಸಿತ್ತು.

ಏಕಾಂತ ಮನುಷ್ಯನಿಗೆ ತನ್ನ ಜೀವನದ ಸವಿ ನೆನಪುಗಳ ಸಾಗರವನ್ನು ತೋರಿಸಿದಾಗ ಮನಸ್ಸಿಗೆ ಉತ್ತೇಜನ ಸಿಗುತ್ತೆ. ಹಾಗೆ ಮನೆಯ ಒಳಗೆ ಬಂದು ಕುಳಿತು ವಾ ವಾ ಎಂಥಾ ಅದ್ಬುತ ಹೋಳಿ ನಾವೆಲ್ಲ ಆಡಿದ್ದೆವು ಅನ್ನೋ ಭಾವ ಬಾರದೆ ಇರದು. “Happiness is a direction, not a place.” ಅನ್ನಿಸಿತು.

ಅವತ್ತಿನ ಲೀಡರ್, ನಮ್ಮ ಗೆಳಯರ ಗುಂಪು, ಪ್ಯಾಂಟ್ ಹರಿದದ್ದು ಮತ್ತು ಅಜ್ಜಿ ಎಲ್ಲರೂ ನೆನಪಿಗೆ ಬಂದು ನನ್ನ ಜೀವನದ ಅಮೂಲ್ಯ ಕ್ಷಣಗಳು ಟಪ ಟಪ ಅಂತ ಹಾದು ಹೋದವು.

ಅಂದು ಗುರಿ ಮತ್ತು ಕನಸನ್ನು ಹೊಂದಿದ ಅಜ್ಜಿ ನಮ್ಮ ಜೊತೆ ಇಲ್ಲ.

ಆದರೆ ಅಜ್ಜಿಯ ಛಲದಂತೆ  ಮನೆಯನ್ನು ಕಟ್ಟಿ ಅದೇ ಮನೆಯಲ್ಲಿ ರಾಣಿಯ ತರಹ ಜೀವನವನ್ನು ನಡೆಸಿದ್ದು ಕಣ್ಣಾರೆ ಕಂಡ ಸತ್ಯ.

ಕಾಲ ಎಲ್ಲವೂ ಸಾಕ್ಷಿ ಸಮೇತ ಬಿಚ್ಚಿಡುತ್ತೆ!

Categories: Articles

Tagged as: ,

1 reply »

  1. ಕಳೆದು ಹೋದ ಸವಿದಿನಗಳ ಉತ್ತಮ ನಿರೂಪಣೆ. ಹೋಳಿಯ ಆಚರಣೆಯಲ್ಲಿ ಬಹಳಷ್ಟು ಪ್ರಾದೇಶಿಕ ವೈವಿಧ್ಯಗಳಿದ್ದವು. ಆದರೀಗ ಹೋಳಿ ಎಂದರೆ ಕೇವಲ ರೋಡಿನಲ್ಲಿ ಬಣ್ಣ ಎರಚುವುದು ಎಂಬಂತಾಗಿದೆ.

    Like

Leave a Reply