Articles

ಒಂದು ದೇಶ, ಒಂದು ಚುನಾವಣೆ ಅನುಕೂಲವೇ ಅಥವಾ ಮಾರಕವೇ?

By Rakesh GI

ನರೇಂದ್ರ ಮೋದಿಯವರ ಮತ್ತು ಬಿಜೆಪಿ ಪಕ್ಷದ ವತಿಯಿಂದ ಇತ್ತೀಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ವಿಷಯವೆಂದರೆ ಒಂದು ದೇಶ, ಒಂದು ಚುನಾವಣೆ. ಈಗ ಪ್ರಚಲಿತದಲ್ಲಿರುವ ಚುನಾವಣೆ ಕ್ರಮದ ಪ್ರಕಾರ ದೇಶದ ಮತ್ತು ರಾಜ್ಯದ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು. ಅದಕ್ಕೆ ಅದರದೇ ಆದಂತಹ ಸಮಯವಿಲ್ಲ. ಇದರಿಂದ ಆರ್ಥಿಕವಾಗಿ ಅಲ್ಲದೆ ಸಂಪನ್ಮೂಲಗಳ ದೃಷ್ಟಿಯಿಂದ ಬಹಳಷ್ಟು ಹೊರೆಯಾಗಲಿದೆ. ಒಂದು ಅಂದಾಜಿನ ಪ್ರಕಾರ ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆಯುವುದರಿಂದ ದೇಶದ ಆರ್ಥಿಕತೆಗೆ ಅಂದಾಜು 6 ಸಾವಿರ ಕೋಟಿ ರೂಪಾಯಿಗಳಷ್ಟು 5 ವರ್ಷಗಳಲ್ಲಿ ಉಳಿತಾಯವಾಗಲಿದೆ. ಇದೇ ಹಣವನ್ನು ದೇಶದ ಅಭಿವೃದ್ಧಿಗೆ ವಿನಿಯೋಗಿಸದರೆ ನಾವು ಅತ್ಯಂತ ವೇಗವಾಗಿ ಪ್ರಗತಿ ಕಾಣಬಹುದು. ಚುನಾವಣೆ ಎಂದರೆ ಸಾಕಷ್ಟು ಹಣ ವ್ಯಹವಾಗುವುದಲ್ಲದೇ, ಜನರ ಅಮೂಲ್ಯ ಸಮಯ ವ್ಯರ್ಥವಾಗುವುದು. ಪದೇ ಪದೇ ಚುನಾವಣೆಗಳು ನಡೆದಾಗಲೆಲ್ಲ ಜಾರಿ ಬರುವ ನೀತಿ ಸಂಹಿತೆ ಸರ್ಕಾರಿ ಕೆಲಸ ಕಾರ್ಯಗಳ ವೇಗಕ್ಕೆ ತಡೆ ಒಡ್ಡುವುದರಲ್ಲಿ ಸಂಶಯವೇ ಇಲ್ಲ.

ಒಂದೇ ಚುನಾವಣೆ ವ್ಯವಸ್ಥೆ ಜಾರಿ ಬರಲಿರುವುದರಿಂದ ಆಗುವ ನಷ್ಟವಾದರೂ ಏನು. ರಾಷ್ಟ್ರೀಯ ಮತ್ತು ರಾಜ್ಯದ ಚುನಾವಣೆಗಳು ಒಂದೇ ಸಮಯದ ನಡೆಯುವುದರಿಂದ ರಾಷ್ಟ್ರ ಅಥವಾ ರಾಜ್ಯದ ಪರ ಅಥವಾ ವಿರೋಧದ ಅಲೆಗಳು ಒಂದಕ್ಕೊಂದು ಪ್ರಭಾವ ಬೀರಬಲ್ಲದು. ಚುನಾವಣೆಗಳು ಎಂದರೆ ಪರ ಹಾಗೂ ವಿರೋಧದ ಅಲೆಗಳು ಏಳುವುದು ಸರ್ವೇಸಾಮಾನ್ಯ. ಇದರ ಪರಿಣಾಮ ನಾವು ಈ ಇಂದೆ ಕರ್ನಾಟಕದಲ್ಲಿನ 1999ರ ಚುನಾವಣೆ ಸಮಯದಲ್ಲಿ ಕಣ್ಣಾರೆ ಕಂಡಿದ್ದೇವೆ. ದೇಶಾದ್ಯಂತ ವಾಜಪೇಯಿ ಅಲೆಯಿದ್ದರೂ ಕೂಡ ರಾಜ್ಯ ಮಟ್ಟದಲ್ಲಿ ಜನತಾದಳದಿಂದ ಇಬ್ಬಾಗವಾದಂತಹ ಲೋಕಶಕ್ತಿ ಪಕ್ಷದೊಂದಿನ ಒಡಂಬಡಿಕೆಯ ಕಾರಣದಿಂದ ರಾಜ್ಯದಲ್ಲಿ ಸೋಲುಣ್ಣ ಬೇಕಾಯಿತು. ಈ ಒಡಂಬಡಿಕೆಯು ಕೂಡ ಸ್ಥಳೀಯ ನಾಯಕತ್ವದ ವಿರೋಧದ ನಡುವೆಯೇ ರಾಷ್ಟ್ರೀಯ ಮಟ್ಟದಲ್ಲಿ ಆದಂತಹ ನಿರ್ಧಾರದ ಪರಿಣಾಮ. ಇದು ನಾವು ಮತದಾರರು ತಿಳುವಳಿಕೆ ಹೊಂದಿರುತ್ತಾರೆ ಎಂದರೂ ಕೂಡ ಆಗಬಹುದಾದಂತಹ ಪ್ರಭಾವದ ಗುರುತು.

ಇನ್ನೊಂದು ದೃಷ್ಟಿಕೋನದಲ್ಲಿ ಹೇಳಬೇಕೆಂದರೆ ಕೇವಲ ರಾಷ್ಟ್ರೀಯ ನಾಯಕರ ಪ್ರಭಾವದ ಕಾರಣದಿಂದ ರಾಜ್ಯಮಟ್ಟದಲ್ಲಿ ಸರ್ಕಾರಗಳು ಬರಬಹುದು/ಬೀಳಬಹುದು. ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದಲ್ಲಿನ ಪ್ರಬಲ/ದುರ್ಬಲ ನಾಯಕತ್ವ ಒಂದರಿಂದ ಇನ್ನೊಂದರ ಚುನಾವಣೆಯ ಫಲಿತಾಂಶವನ್ನೇ ಬದಲಾಹಿಸ ಬಹುದು. ರಾಷ್ಟ್ರೀಯ/ರಾಜ್ಯ ಮಟ್ಟದಲ್ಲಿ ಅದರದೇ ಆದಂತಹ ಅಂಶಗಳಿರುತ್ತವೆ, ವಿಷಯಗಳಿರುತ್ತವೆ. ಇವುಗಳು ಒಂದಕ್ಕೊಂದು ಬೆಸೆಯುವುದರಿಂದ ಮತದಾರನು ವಿಷಯಾನುಸಾರವಾಗಿ ತೀರ್ಮಾನ ಕೈಗೊಳ್ಳುವಲ್ಲಿ ಗೊಂದಲಕ್ಕೆ ಈಡಾಗಬಹುದು.

ಮತ್ತೊಂದು ದುಷ್ಪರಿಣಾಮದ ಬಗ್ಗೆ ಹೇಳಬೇಕೆಂದರೆ ಪ್ರಾದೇಶಿಕವಾಗಿ ನಾಯಕತ್ವ ಬೆಳೆವಣಿಗೆಯಲ್ಲಿ ಕೊರತೆಯಾಗಬಹುದು. ಸ್ಥಳೀಯ ನಾಯಕತ್ವ ಸಂಪೂರ್ಣವಾಗಿ ರಾಷ್ಟ್ರೀಯ ನಾಯಕತ್ವದ ಮೇಲೆ ಅವಲಂಬಿತವಾಗಿ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವ ಅಪಾಯವಿದೆ. ಇದರಿಂದ ರಾಜ್ಯದ ಸಮಸ್ಯೆಗಳು ರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮಂಡನೆ ಯಾಗುವುದರಲ್ಲಿ ಕೊರತೆ ಉಂಟಾಗಬಹುದು. ಈಗಿನ ಬಿಜೆಪಿ ಪಕ್ಷದಲ್ಲಿ ತೆಗೆದುಕೊಂಡರೆ ಇಲ್ಲಿನ ಬಹು ಪ್ರಶಂಸನೀಯವಾದ ಸಂಗತಿಯೆಂದರೆ ಪ್ರಾದೇಶಿಕ ನಾಯಕತ್ವ ಬೆಳವಣಿಗೆಯ ವ್ಯವಸ್ಥೆ. ಈ ವ್ಯವಸ್ಥೆಯ ಕೂಸುಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಒಬ್ಬರು. ಕರ್ನಾಟಕದಲ್ಲಿ ಯಡಿಯೂರಪ್ಪನವರು, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚವಾಣ್ ರವರು, ಬಿಹಾರದಲ್ಲಿ ನಿತೀಶ್ ಕುಮಾರ್ ರವರು(ಮೈತ್ರಿ ಸದಸ್ಯರಾಗಿ), ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ರವರು ಇವರೆಲ್ಲ ರಾಷ್ಟ್ರೀಯ ಪಕ್ಷದಲ್ಲಿದ್ದರೂ ಕೂಡ ಪ್ರಾದೇಶಿಕ ಮಟ್ಟದಲ್ಲಿ ತಮ್ಮದೇ ಆದಂತಹ ಬಲಿಷ್ಠ ನಾಯಕತ್ವದಿಂದ ಪಕ್ಷವನ್ನು ಬೆಳೆಸಿ ತಮ್ಮದೇ ಛಾಪನ್ನು ಮೂಡಿಸಿದವರು. ಎಲ್ಲಾ ಹೈಕಮಾಂಡ್ ಮಟ್ಟದಲ್ಲೇ ನಿರ್ಧಾರಗಳು ಕೇಂದ್ರೀಕೃತವಾದರೇ ಇಲ್ಲಿನ ನಾಯಕತ್ವಕ್ಕೆ ಕೆಲಸವಾದರೂ ಏನು?

ನಿಮ್ಮ ಅಭಿಪ್ರಾಯ?

Categories: Articles

Tagged as: ,

Leave a Reply