Articles

ಹಿರಿಯ ಸಚಿವ ಈಶ್ವರಪ್ಪನವರ ದೂರು ರಾಜ್ಯಪಾಲರ ಅಂಗಳಕ್ಕೆ! ಕಾರ್ಯಕರ್ತರ ಮನಸ್ಥಿತಿ ಹೇಗಿದೆ?

ನಾಯಿಯ ಬಾಲ ಯಾವಾಗಲೂ ಡೊಂಕೇ! ಅದನ್ನು ನೀವು ನೇರವಾಗಿ ಮಾಡಬೇಕೆಂದರೂ ಸಾಧ್ಯವಾಗದ ಕೆಲಸ ಕಾರಣ ಡೊಂಕು ಅದರ ಹುಟ್ಟುಗುಣ! ಹಾಗೆ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರ ಬೀದಿ ರಂಪಾಟ ಹುಟ್ಟುಗುಣ ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯ ಒಂದೇ ಭಾರತೀಯ ಜನತಾ ಪಕ್ಷದ ಆಡಳಿತ ಇರುವ ಪಕ್ಷ. ಇದು ಮೊದಲ ಬಾರಿಗೆ ನೆರವೇರಿದ್ದು ೨೦೦೮ರಲ್ಲಿ. ನೆನಪಿರಬಹುದು ೨೦೦೮ರ ಭಾರತೀಯ ಜನತಾ ಪಕ್ಷದ ಬೀದಿ ಜಗಳ ಪಕ್ಷವನ್ನೇ ಮೂರೂ ಭಾಗಮಾಡಿ ೪೦ ಕ್ಕೆ ಇಳಿಸಿದ್ದು.

ಲೋಕಸಭೆಯಲ್ಲಿ ಕಾಂಗ್ರೇಸ್ನಿನ ಮಂತ್ರಿಯೊಬ್ಬರು ದಿವಂಗತ ಮಂತ್ರಿ ಅವರ ಕಡೆ ಬೊಟ್ಟು ಮಾಡಿ ನಿಮಗೆ ಧನ್ಯವಾದ ಹೇಳುತ್ತೇನೆ ಕಾರಣ ನಿಮ್ಮಿಂದಲೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರಚನೆಯಾಗಿದ್ದು! ನೋಡಿ ಎಂಥಾ ವಿಪರ್ಯಾಸ! ಅಂದು ಸ್ವಂತ ಪಕ್ಷದವರು ಮಾಡಿದ ತಪ್ಪಿನಿಂದ ರಾಜ್ಯದಲ್ಲಿ ೫ ವರ್ಷ ಅಧಿಕಾರದಿಂದ ದೂರ ಉಳಿದಿದ್ದು ಅಷ್ಟೇ ಅಲ್ಲ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಕೊಟ್ಟ ನೋವು ಹೇಳತೀರದು ! ಹಿಂದೂ ಕಾರ್ಯಕರ್ತರ ಕೊಲೆ, ಸಿಕ್ಕ ಸಿಕ್ಕವರನ್ನು ಬಂಧನ ಮಾಡಿದ್ದು ನೆನಪಿಲ್ಲವೇ? ಶಾಧಿ ಭಾಗ್ಯ ಯೋಜನೆ, ಜಾತಿಯ ಮೇಲೆ ವಿದ್ಯಾರ್ಥಿಗಳಿಗೆ ಪ್ರವಾಸ! ಹೀಗೆ ಅನೇಕ ಹಲವಾರು ಕಾರ್ಯಕ್ರಮಗಳು ಧರ್ಮದ ವಿರುದ್ಧ ಇರಲಿಲ್ಲವೇ?

ಈಶ್ವರಪ್ಪನವರಿಗೆ ಅನ್ಯಾಯವಾಗಿದೆ ಎಂದಾಗ ಹೈ ಕಮಾಂಡ ಗಮನಕ್ಕೆ ತಂದು ಸಮಸ್ಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ ಏಕಾಏಕಿ ರಾಜ್ಯಪಾಲರಿಗೆ ದೂರು ಕೊಟ್ಟರೆ ಸಮಸ್ಸ್ಯೆಗೆ ಪರಿಹಾರ ಸಿಗುತ್ತಾ? ಒಂದು ವೇಳೆ ಮೊದಲೇ ಹೈ ಕಮಾಂಡ ಅವರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎನ್ನುವದಾದರೆ ಸಮಸ್ಸ್ಯೆ ಇರುವುದು ಎಲ್ಲಿ ಎನ್ನುವ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು. ಸರ್ಕಾರದ ಹಿರಿಯ ಸಚಿವರಾಗಿ ಪಕ್ಷ ಮತ್ತು ಕಾರ್ಯಕರ್ತರ ಹಿತವನ್ನು ನೋಡಲೇ ಇಲ್ಲ ಎನಿಸುತ್ತಿದೆ ಕಾರಣ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ನಾಲ್ಕು ಗೋಡೆಯ ಮದ್ಯೆ ಇರುವ ಜಗಳ ಮೈದಾನಕ್ಕೆ ಬಂದರೇ ಪಕ್ಷದ ಮತ್ತು ಕಾರ್ಯಕರ್ತರ ಗತಿಯೇನು?

ಈಗಾಗಲೇ ವಿಜಯಪುರದ ಶಾಸಕರ “ಪಕ್ಷಕ್ಕೆ ಹಾನಿಯ ಅಭಿಯಾನಕ್ಕೆ” ಯಾವದೇ ತಡೆ ಕಂಡು ಬಂದಿಲ್ಲ ಮತ್ತು ಇದರ ಮುಂದುವರೆದ ಭಾಗ ರಾಜ್ಯಪಾಲರಿಗೆ ದೂರು! ಗೊತ್ತಿಲ್ಲ ಮುಂದೆ ಇನ್ನಾವ ಸಚಿವ/ಶಾಸಕ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದು ನ್ಯಾಯ ಕೇಳುತ್ತಾನೋ? ವ್ಯಂಗವಾಗಿ ಈ ಮಾತು ಹೇಳುತ್ತಿಲ್ಲ ಒಬ್ಬ ಹಿರಿಯ ಸಚಿವ ರಾಜ್ಯಪಾಲರಿಗೆ ದೂರು ಕೊಡುತ್ತಾರೆ ಎಂದರೆ ಮುಂದೆ ಮತ್ತೊಬ್ಬ ಸಚಿವ ಹಾಗೆ ಮಾಡುವದರಲ್ಲಿ ಸಂದೇಹವಿಲ್ಲ.

ಈಶ್ವರಪ್ಪನವರ ಖಾತೆ ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಬೆಳೆಸುವ ಖಾತೆ. ಇಲ್ಲಿಯವರೆಗೆ ಎಷ್ಟು ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಪಂಚಾಯತ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುದಕ್ಕೆ ತಗೆದುಕೊಂಡ ಹೆಜ್ಜೆಗಳು ಯಾವ್ಯಾವು? ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನೀವೇ ವಿಧಾನಸಭೆಯಲ್ಲಿ ಹೇಳಿದ್ದಿರಿ ಅದಾದ ನಂತರ ಶುದ್ಧ ನೀರಿನ ಘಟಕಗಳನ್ನು ಸರಿ ಮಾಡಲು ತಗೆದುಕೊಂಡ ಕ್ರಮಗಳೇನು? ಘಟಕಗಳು ಹಾಗೆ ಅದೇ ಸ್ಥಿತಿಯಲ್ಲಿ ಉಳಿದಿವೆ. ಪಂಚಾಯತಿಗಳಲ್ಲಿ ಶ್ರೀಮಂತರಿಗೂ ಜಾಬ್ ಕಾರ್ಡ್ ಮಾಡಿಸಿ ಬೇರೆಯವರ ಹೊಲದಲ್ಲಿ ಕೆಲಸ ಮಾಡಿಸಿ ಪುಕ್ಕಟೆ ದುಡ್ಡು ಅಧಿಕಾರಿಗಳ ಜೇಬು ಸೇರುತ್ತಿದೆ. ಸುಮಾರು ಕಂಪ್ಲೇಂಟ್ ಆಗಿವೆ. ನಿಮ್ಮ ಗಮನಕ್ಕೆ ಬಂದಿಲ್ವಾ? ಬೇರೆ ಬೇರೆ ಮಂತ್ರಿಗಳು ಜಿಲ್ಲಾಧಿಕಾರಿಗಳ ಹಳ್ಳಿಯ ವಾಸ್ತ್ಯವ್ಯ ಮತ್ತು ಕೃಷಿ ಬೆಳೆಗಳ ಸಮೀಕ್ಷೆ ಹೀಗೆ ಹಲವಾರು ರೀತಿಯಿಂದ ಜನರ ಸಮಸ್ಸ್ಯಗಳಿಗೆ ಪರಿಹಾರ ಕೊಡುವಲ್ಲಿ ಶ್ರಮಿಸಿದ್ದಾರೆ.

ಕರೋನ ಸಮಯದಲ್ಲಿ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ಸಂಬಳವಿಲ್ಲದೆ ಇದ್ದಾಗ ಸಾರಿಗೆ ಸಚಿವರಿಗೆ ಮುತ್ತಿಗೆ ಹಾಕಿದ್ದರು. ಸಾರಿಗೆ ಸಚಿವರು ಮುಖ್ಯಮಂತ್ರಿಗಳು ದುಡ್ಡು ಕೊಡುತ್ತಿಲ್ಲ ನಾನೇನು ಮಾಡಲಿ ಎಂದು ಬಾಲಿಶ ಹೇಳಿಕೆ ಕೊಡಬಹುದಿತ್ತು. ಆದರೆ ಅದನ್ನು ಮಾಡದೆ ಮುಖ್ಯಮಂತ್ರಿಗಳ ಸಮಯ ತಗೆದುಕೊಂಡು ಕಷ್ಟ ಕಾಲದಲ್ಲಿ ಹೇಗೋ ದುಡ್ಡು ಹೊಂದಿಸಿ ಸಂಬಳ ಕೊಟ್ಟಿದ್ದರು. ಹಾಗೆ ಸುರೇಶಕುಮಾರ ಅವರ ಖಾತೆಯಲ್ಲಿ ಯಾರು ಕೈಯಾಡಿಸುವ ಪ್ರಮೆಯೇ ಬರುವದಿಲ್ಲ. ಕಾರಣ ಅವರ ದಕ್ಷತೆ ತಾನೇ? ಹಾಗೆ ನಿಮ್ಮ ಆವಿಷ್ಕಾರಗಳು ಏನು ಎಂಬದು ಜನರಿಗೆ ಹೇಳಿ.

೨೦೧೩ ರ ಚುನಾವಣೆಯಲ್ಲಿ ಶಿವಮೊಗ್ಗದ ವಿಧಾನಸಭೆಯ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದೀರಿ. ವಿಧಾನ ಪರಿಷತ್ತು ಸದಸ್ಯರಾಗಿದ್ದ ತಮಗೆ ಮುಂದೆ ವಿಧಾನಸಭೆ ಟಿಕೆಟ್ ಕೊಡುವದಿಲ್ಲ ಎಂಬ ಒಂದೇ ಕಾರಣಕ್ಕೆ ಹುಟ್ಟುಹಾಕಿದ್ದು “ರಾಯಣ್ಣ ಬ್ರಿಗೇಡ್”. ಅದರಿಂದ ಪಕ್ಷಕ್ಕೆ ಹಾನಿ ಆಯಿತೋ ಇಲ್ಲೋ? ಇಂದು ನೇರವಾಗಿ ರಾಜ್ಯಪಾಲರಿಗೆ ದೂರು ಕೊಟ್ಟು, ಪಕ್ಷ ನನ್ನ ತಾಯಿ ಎಂದು ಮೇಲಿಂದ ಮೇಲೆ ದ್ರೋಹ ಬಗೆಯುವದು ಸರಿನಾ?

ಮೋದಿ ಮತ್ತು ಅಮಿತ ಶಹಾ ಯಾವಾಗಲೂ ಹೇಳುವ ಮಾತು ಪಕ್ಷ ಬೆಳೆದಿದೆ ಎಂದರೆ ಅದು ಕಾರ್ಯಕರ್ತರ ಹೋರಾಟದಿಂದ ಹೊರೆತು ನಾಯಕರಿಂದ ಅಲ್ವೇ ಅಲ್ಲ. ಇಂತಹ ದೇವ ದುರ್ಲಭ ಕಾರ್ಯಕರ್ತರ ಶ್ರಮವನ್ನು ನಿಮ್ಮ ಭಿನ್ನಾಭಿಪ್ರಾಯಕ್ಕೆ ಬಲಿಕೊಡಬೇಡಿ. ರಾಜ್ಯದಲ್ಲಿ ಹೇಗೆ ಸರ್ಕಾರ ರಚನೆಯಾಯಿತು ಮತ್ತು ಮಂತ್ರಿ ಸ್ಥಾನಕ್ಕೆ ಇದ್ದ ಪೈಪೋಟಿ ಹೇಗಿತ್ತು ಎನ್ನುವುದು ನಿಮಗೆ ತಿಳಿದ ವಿಷಯ. ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿ ರಚನೆಮಾಡಿ ಎಲ್ಲರಿಗೂ ಸಮಾಧಾನ ಪಡಿಸೋದು ಎಷ್ಟು ಕಷ್ಟ ಎಂದು ಅರಿತುಕೊಂಡು ಪಕ್ಷದ ಹಿರಿಯರು ಕೆಲಸ ಮಾಡಬೇಕಲ್ವೇ?

ಮನುಷ್ಯನ ಜೀವನದಲ್ಲಿ ಒಮ್ಮೆ ಮಾಡಿದ ತಪ್ಪು ಮರಳಿ ಮತ್ತೆ ಅದೇ ತಪ್ಪನ್ನು ಮಾಡಿದರೆ ನೋಡಿದವರಿಗೆ ಕನಿಕರ ಇರುವದಿಲ್ಲ ಮತ್ತು ಹೀನಾಯವಾಗಿ ತಿರಸ್ಕಾರ ಮಾಡುತ್ತಾರೆ. ಈಗಾಗಲೇ ವಿಜಯಪುರದ ಶಾಸಕರು ಎಷ್ಟು ಬೇಕು ಅಷ್ಟು ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ. ಈಗ ನಿಮ್ಮಂತ ಹಿರಿಯ ಸಚಿವರ ಸರದಿ. ಮುಂದೆ ಇನ್ನ್ಯಾರೋ! ಜಗತ್ತು ಕರೋನ ಹೊಡತಕ್ಕೆ ಸಿಕ್ಕು ನಲುಗುತ್ತಿದೆ ಅದರಲ್ಲಿ ನಮ್ಮ ರಾಜ್ಯವು ಸೇರಿದೆ ಎನ್ನುವುದು ಮರೆಯಬಾರದು.

ಇತ್ತೀಚಿಗೆ ಶಾಸಕರ ಗುಂಪೊಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅನುದಾನ ಕೊಡಿ ಎಂದು ಒತ್ತಡ ಹಾಕಿದಾಗ ನಿಮ್ಮ ಖಾತೆಯ ಅಲ್ಪಸ್ವಲ್ಪ ದುಡ್ಡನ್ನು ಅವರಿಗೆ ಹಂಚಿಕೆ ಮಾಡಿದ್ದಾರೆ ಅದು ನಿಮ್ಮ ಗಮನಕ್ಕೆ ಬಾರದೆ ಹೋಗಿದ್ದರೂ ಅಂತಹ ಪ್ರಮಾದವೇನಲ್ಲ ಕಾರಣ ಮುಖ್ಯಮಂತ್ರಿಗೆ ಪರಮಾಧಿಕಾರ ಇದ್ದೆ ಇದೆ ಕೆಲವೊಮ್ಮೆ ಪಕ್ಷಕ್ಕಾಗಿ ಇಂತಹ ನಿರ್ಧಾರಗಳು ಸಾಮಾನ್ಯ! ಅಲ್ವೇ? ಇಲ್ಲಿ ಶಾಸಕರಿಗೆ ಸಂತೋಷಪಡಿಸಿದ್ದಾರೆ ಆದರೆ ನಿಮಗೆ ನೋವಾಗಿದೆ. ಕಾರಣ ಹಣದ ಕೊರೆತೆ ಇರಬೇಕು. ಎಲ್ಲರಿಗೂ ಸಂತೋಷ ಪಡಿಸುವದಕ್ಕೆ ಸಾಧ್ಯವೇ?

ಸಿಡಿ ಸೀಕ್ರೆಟ್ ಇನ್ನು ಜೀವಂತವಾಗಿದೆ ಅದು ಪಕ್ಷಕ್ಕೆ ಮುಜುಗರ ತಂದಿದೆ ಅದರ ಜೊತೆಯಲ್ಲಿ ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ನಿಮ್ಮ ದೂರು ಕಾರ್ಯಕರ್ತರಿಗೆ ಖಂಡಿತ ನೋವು ತಂದಿರುತ್ತೆ. ನಿಮ್ಮ ದೂರು ಸರಿ ಅಥವಾ ತಪ್ಪು ನಿರ್ಧರಿಸುವವರು ನಿಮ್ಮ ಕಾರ್ಯಕರ್ತರು ಆದರೆ ಕಾರ್ಯಕರ್ತರ ಮನದಾಳದ ಕೂಗು “ನೀವು ಬೇಕು ಮತ್ತು ರಾಜಹುಲಿನೂ ಬೇಕು”! ಈಗಾಗಲೇ ಮತ್ತೆ ೨೦೦೮ರ ತಪ್ಪುಗಳು ಪುನರಾವರ್ತನೆ ಆಗುತ್ತಿವೆ ಪೂರ್ತಿ ಪುನರಾವರ್ತನೆ ಆಗುವಕ್ಕಿಂತ ಮುಂಚೆ ತಡೆದರೆ ಒಳಿತು ಇಲ್ಲವಾದರೆ ಪಕ್ಷದ ಸ್ಥಿತಿ ಅಧೋಗತಿ!

Categories: Articles

Tagged as: , ,

Leave a Reply