
ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಸ್ಥಾನಗಳು ಆಯ್ಕೆ ಮಾಡದೆ ಹಾಗೆ ಉಳಿಸಿಕೊಳ್ಳುವುದು ಕಷ್ಟ! ಅದು ಎಲ್ಲರಿಗೂ ತಿಳಿದ ಸತ್ಯ. ಅದನ್ನು ಪ್ರಜ್ಞಾವಂತ ಮತದಾರ ಪ್ರಭುಗಳು ಒಪ್ಪುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಚುನಾವಣೆ ನಡೆಸುವುದು ಯಾರಿಗೂ ಬೇಕಿಲ್ಲಾ? ಕಾರಣ ಕರೋನ ಜನರ ಜೀವವನ್ನೇ ತಗೆದುಕೊಳ್ಳುತ್ತಿದೆ. ಅದಕ್ಕಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಿದರೆ ಕರೋನವನ್ನು ತಡೆಗಟ್ಟಬಹುದು. ಎಷ್ಟು ದಿವಸ ಮುಂದಕ್ಕೆ ಹಾಕಬಹುದು? ಇದಕ್ಕೆ ಉತ್ತರ ಇಲ್ಲ. ಕರೋನ ನಿಲ್ಲುವ ಹಾಗೆ ಕಾಣುತ್ತಿಲ್ಲ. ಇದರ ಅಲೆಯು ಹೀಗೆ ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿವೆ. ಚುನಾವಣೆ ಮಾಡುವದಾದರೆ ಪ್ರಚಾರಕ್ಕೆ ನಿರ್ಬಂಧ ಹಾಕಿ! ಹೌದು ದೊಡ್ಡ ದೊಡ್ಡ ಸಮಾವೇಶಗಳು, ಮನೆ ಮನೆಗೆ ಪ್ರಚಾರಕ್ಕೆ ಹೋಗುವುದು ನಿಷೇಧಿಸಬೇಕು. ಆಯೋಗದಿಂದ ನೇರವಾಗಿ ಆನ್ಲೈನ್ ಮೂಲಕ ಪ್ರಚಾರಕ್ಕೆ ಅನುಕೂಲ ಮಾಡಿಕೊಡಿ. ದುಡ್ಡು ಅವರಿಂದಾನೆ ಪಡೆದುಕೊಳ್ಳಿ. ಚುನಾವಣೆ ಆಯೋಗದಿಂದ ಸ್ಥಳವನ್ನು ನಿಗದಿಮಾಡಿ ಅವರಿಗೆ ಕೊಡಿ. ಅವರು ಆನ್ಲೈನ್ ಮೂಲಕ ಪ್ರಚಾರ ಮಾಡಿಕೊಳ್ಳಲಿ. ಅದರಿಂದ ದುಡ್ಡು ಹಂಚುವುದು ತಪ್ಪುತ್ತದೆ ಮತ್ತು ಕರೋನ ಸಮಯದಲ್ಲಿ ಜನರಿಗೆ ಸೋಂಕು ಬರದಂತೆ ತಡೆಯಬಹುದು.
“ಮತಮಾರು”(Vote for Sale) ಅಲ್ಲ ಮತದಾನ
ದೇಶದ ಜನರಿಗೆ ಚುನಾವಣೆ ಆಯೋಗದ ಬಗ್ಗೆ ಗೊತ್ತೇ ಇರಲಿಲ್ಲ. ಆಯೋಗ ಇದೆ ಅದು ಪಾರದರ್ಶಕವಾಗಿ ಕಾರ್ಯನಿರ್ವಿಹಿಸುತ್ತಿದೆ ಎಂದು ತೋರಿಸಿಕೊಟ್ಟ ಟಿ ಏನ್ ಶೇಷನ ಅವರಿಗೆ ಶ್ರೇಯಸ್ಸು ಸಲ್ಲಬೇಕು. ಮೊದಲು ಬೇಕಾಬಿಟ್ಟಿ ಖರ್ಚು ಮಾಡುವದಲ್ಲದೆ ಶಬ್ದ ಮಾಲಿನ್ಯವು ಆಗುತಿತ್ತು. ಸಮಯದ ನಿಗದಿಯು ಇರಲಿಲ್ಲ. ಅಂತಹ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿ ತಕ್ಕ ಮಟ್ಟಿಗೆ ಹತೋಟಿಗೆ ತಂದಿದ್ದರು. ಆದರೆ ಮುಂದೆ ಆಯೋಗದ ಹೊಸ ಹೊಸ ಆವಿಷ್ಕಾರಗಳು ಮಾಡದೆ ಸರ್ಕಾರದ ಆಳಾಗಿ ಕೆಲಸ ಮಾಡಿದರಿಂದ ಸಂಪೂರ್ಣ ಪಾರದರ್ಶಕ ಚುನಾವಣೆ ಮಾಡುವದಕ್ಕೆ ಸಾಧ್ಯವಾಗದೆ ಉಳೀತು. ಕೇಳುವದಕ್ಕೆ ಅಸಯ್ಯ ಹುಟ್ಟಿಸುತ್ತದೆ. ಮತದಾನ ಎಂದು ಹೇಳುವ ನಾವು ದಾನಕ್ಕೆ ಅಪಮಾನ ಮಾಡುತ್ತಿದ್ದೇವೆ. ಮತದಾನ ಬದಲು “ಮತಮಾರು” ಎಂದಿದ್ದರೇ ಚೆನ್ನಾಗಿತ್ತು ಅನಿಸುತ್ತಿದೆ. ಇಲ್ಲಿ ಕೇವಲ ರಾಜಕಾರಣಿಗಳು ಅಷ್ಟೇ ತಪ್ಪು ಮಾಡುವದಿಲ್ಲ. ಅವರ ಜೊತೆ ಜನರೇ ದುಡ್ಡಿನ ಆಶೆಗೆ ಬಿದ್ದು ರಾಜ್ಯದ ಭವಿಷ್ಯವನ್ನೇ ಮರೆತುಬಿಡುತ್ತಾರೆ. ದುಡ್ಡಿನ ಆಟ ಅಷ್ಟೇ ಅಲ್ಲ ಯಾವದೇ ಸಮಯದಲ್ಲಿ ಇರದ ಜಾತಿ ಮುನ್ನೆಲೆಗೆ ಬರುತ್ತೆ. ದುಡ್ಡು ಮತ್ತು ಜಾತಿಯನ್ನು ಎಳೆದು ಮತದಾರರನ್ನು ಮೋಸದ ಕೂಪಕ್ಕೆ ತಳ್ಳಿ ಸೇವಕನಾಗ ಬೇಕಾದವರು ರಾಜರಾಗಿ ಕುಳಿತುಕೊಳ್ಳುತ್ತಾರೆ. ಹೌದು ತಾನೇ? ಅವರನ್ನು ಭೇಟಿ ಮಾಡಬೇಕಾದರೆ ಪರ್ಮಿಷನ್ ತಗೆದುಕೊಳ್ಳಬೇಕು! ಎಂಥಾ ದುರ್ದೈವ. ಜನರು ಕೊಟ್ಟ ದುಡ್ಡಿನಲ್ಲಿ ಜನರಿಗೆ ಕೆಲಸ ಮಾಡುವದನ್ನು ಬಿಟ್ಟು ಅದೇ ಜನರ ಮುಂದೆ ೧ ಕೋಟಿ ೨ ಕೋಟಿ ಕಾರ್ ತಗೆದುಕೊಂಡು ಬಂದು ದೇವರು ಧರೆಗೆ ಇಳಿದ ರೀತಿಯಲ್ಲಿ ಇಳಿದು ನಮಸ್ಕಾರ ಚಮತ್ಕಾರ ಹೊಡೆಯುತ್ತಾರೆ. ಜನರ ಹೆಗಲ ಮೇಲೆ ಕೈ ಹಾಕಿ ಮುಂದಿನ ಚುನಾವಣೆಗೆ ವೋಟ್ ಫಿಕ್ಸ್ ಮಾಡುವ ನರಿಬುದ್ಧಿ ಬೇರೆ! ಇದು ಎಲ್ಲ ಪಕ್ಷದಲ್ಲೂ ಇದೆ ಮತ್ತು ರಾಜಕಾರಣಿಗಳು ಜನರೇ ಎನ್ನುವುದು ಮರೆಯಬಾರದು. ಒಳ್ಳೆಯ ರಾಜಕಾರಣಿಗಳು ಇದ್ದರೇ ಖಂಡಿತ ಸರ್ಕಾರಿ ನೌಕರರು ಮೈ ಬಗ್ಗಿಸಿ ಸಂಬಳಕ್ಕಾದರೂ ಕೆಲಸ ಮಾಡುತ್ತಾರೆ. ಈಗಲೂ ಕೆಲವು ಅಧಿಕಾರಿಗಳು/ಜನಪ್ರತಿನಿಧಿಗಳು “ಸರ್ಕಾರ ಕೆಲಸ ದೇವರ ಕೆಲಸವೆಂದೇ” ದುಡಿಯುತ್ತಿದ್ದಾರೆ.
ಈಗಿರುವ ರಾಜಕಾರಣಿಗಳೂ ಬದಲಾವಣೆ ಬಯಸುತ್ತಿದ್ದಾರೆ.
ಇಂದು ದೇಶದಲ್ಲಿ ಚಿಕಿಸ್ಥೆ ಸಿಗದೇ ಜನರು ಬಲಿಯಾಗುತ್ತಿದ್ದಾರೆ. ಇದರಲ್ಲಿ ಎಲ್ಲರ ಪಾತ್ರವು ಇದೆ. ಯಾಕೆ ನಮ್ಮಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇಲ್ಲ? ಎಷ್ಟು ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿವೆ ? ಎಷ್ಟು ವೆಂಟಿಲೇಟರ್ ಇವೆ? ಅನೇಕ ಮೂಲಭೂತ ಸೌಕರ್ಯಗಳು ಆಗಿಲ್ಲ. ಇದಕ್ಕೆ ಮೂಲ ಕಾರಣ ಭ್ರಷ್ಟಾಚಾರ! ಸದ್ಯಕ್ಕೆ ಆಸ್ಪತ್ರೆಗಳನ್ನು ಕಟ್ಟುವದಕ್ಕೆ ಆಗದ ಕೆಲಸ. ಇದ್ದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಜನರ ಜೀವ ಉಳಿಸುವದಕ್ಕೆ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜನರ ತಪ್ಪಿನಿಂದ ದೇಶದ ಅಭಿವೃದ್ಧಿ ಕುಂಠಿತ ಆಗಿದೆ ಎಂದು ಸಾರಿ ಸಾರಿ ಕರೋನ ಹೇಳುತ್ತಿದೆ. ಇದರ ಮದ್ಯೆ ಮತ್ತೆ ಸ್ಥಳೀಯ ಚುನಾವಣೆ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕಾಗಿ ಇದೊಂದು ಒಳ್ಳೆಯ ಸಮಯ ಒದಗಿ ಬಂದಿದೆ. ಜನರು ಅಲ್ಪ ತೃಪ್ತಿಗಾಗಿ ಯಾರಿಗೋ ಮತ ಹಾಕುವ ಬದಲು ಒಳ್ಳೆಯ ವ್ಯಕ್ತಿಗೆ ಮತ ಚಲಾಯಿಸುವ ಅವಕಾಶ ಇದೆ. ಸ್ಥಳೀಯ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿದರೆ ಖಂಡಿತ ಸ್ಥಳೀಯ ಸಮಸ್ಸ್ಯೆಗಳಿಗೆ ಪರಿಹಾರ ದೊರಕಬಲ್ಲದು. ಜನರು ಅಭಿವೃದ್ಧಿ ಮತ ಹಾಕುತ್ತಾರೆ ದುಡ್ಡಿಗಲ್ಲ ಎಂಬುದು ಸ್ಥಳೀಯ ಚುನಾವಣೆಯಲ್ಲಿ ನಿರೂಪಿಸಿದರೆ ಖಂಡಿತ ಎಲ್ಲ ಪಕ್ಷಗಳು ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ.
ಉಧಾಹರಣೆ ಎಂದರೆ ಇತ್ತೀಚಿಕೆ ವಿಧಾನಸಭೆ ಸ್ಪೀಕರ್ ” ಸಂವಿಧಾನ ಮೇಲೆ ಚರ್ಚೆ “ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುವಾಗ ಸುಮಾರು ಶಾಸಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರಿಗೂ ಸದ್ಯದ ಪರಿಸ್ಥಿತಿ ವಾಕರಿಗೆ ಬರುತ್ತಿದೆ. ಆದರೆ ಗೆಲ್ಲುವ ಬರದಲ್ಲಿ ವಾಮಮಾರ್ಗ ಹಿಡಿಯುವುದು ಅನಿವಾರ್ಯ ಎಂದು ಹೇಳಿದ್ದಾರೆ. ಇನ್ನೋರ್ವರು ಜಾತಿಗೊಂದು ಯೋಜನೆ ನಾವೇ ಕೊಡುತ್ತೇವೆ ಮತ್ತೆ ಜಾತಿ ಮಾಡಬೇಡಿ ಎಂದರೆ ಹೇಗೆ ಸಾಧ್ಯ? ಕಾಲ ಪಕ್ವವಾಗುತ್ತಿದೆ ಮತ್ತು ಎಲ್ಲರಿಗೂ ದೇಶದ , ರಾಜ್ಯದ , ಊರಿನ ಅಭಿವೃದ್ಧಿ ಮುಖ್ಯ ಅನ್ನಿಸತೊಡಗಿದೆ. ಇದು ಆಗಬೇಕಾದರೆ ಕರೋನ ಸಮಯ ನೆಪಮಾಡಿಕೊಂಡು ಬಹಿರಂಗ ಸಭೆಗಳಿಗೆ ಕೊಕ್ಕೆ ಹಾಕಿ ಆನ್ಲೈನ್ ಪ್ರಚಾರಕ್ಕೆ ಮಾತ್ರ ಒತ್ತುಕೊಟ್ಟರೆ ಖಂಡಿತ ಪಾರದರ್ಶಕ ಚುನಾವಣೆ ನಡೆಯಬಲ್ಲದು. ಸ್ಥಳೀಯ ಚುನಾವಣೆ ಆನ್ಲೈನ್ ಪ್ರಚಾರ ಮಾಡಿದರೆ ಮುಂದೆ ಅದೇ ಮಾಡೆಲ್ ೨೦೨೩ಕ್ಕೆ ರಾಜ್ಯದಲ್ಲಿ ಅಳವಡಿಸಿಕೊಳ್ಳಬಹವುದು.
ಹಣ ಮತ್ತು ಜಾತಿ ಹೊರಗಿಟ್ಟರೆ ಸ್ವರ್ಗವೇ ಧರೆಗೆ ಬಂದಂತೆ!
ಜನರು ತುಂಬಾ ಜಾಣರು ಮನಸ್ಸು ಮಾಡಿದರೆ ಖಂಡಿತ ಅವರನ್ನು ತಡೆಯುವ ಶಕ್ತಿ ಯಾರಿಗಿಲ್ಲ. ಕಾರಣ ಇದೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಗೆಲ್ಲಿಸಿದರು. ೧೯೭೦ ರ ಆಸುಪಾಸಿನಲ್ಲಿ ರಾಜ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದ್ದರು. ಯಾರು ನಿರೀಕ್ಷೆ ಮಾಡದ ಹಾಗೆ ತಮಗೆ ಬೇಕಾದ ಅಭ್ಯರ್ಥಿಯನ್ನು(ಹಣ ಮತ್ತು ಜಾತಿ ನೋಡದೆ ) ಆಯ್ಕೆಮಾಡಿದರು. ಹಾಗೆ ಜನರು ಮನಸ್ಸು ಮಾಡಿ ಮುಂಬರುವ ಸ್ಥಳೀಯ ಚುನಾವಣೆಗೆ ಸರಿಯಾದವರನ್ನು(ಹಣ ಮತ್ತು ಜಾತಿ ನೋಡದೆ ) ಆಯ್ಕೆ ಮಾಡಿ ಬದಲಾವಣೆಗೆ ನಾಂದಿಹಾಡಬೇಕು! ಜನರು ಮನಸ್ಸು ಮಾಡುವರೇ? ಆಯೋಗ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕುತ್ತಾ?
Categories: Articles
