Articles

ಮನಸ್ಸಿದ್ದರೆ ಮಾರ್ಗ! ಸಾಧಿಸುವ ಛಲ ಇದ್ದರೇ ಕಷ್ಟಗಳ ಕೂಟವು ನಗಣ್ಯ!

೧೯೭೮ ರಲ್ಲಿ ಒಂದು ಸಣ್ಣ ಹಳ್ಳಿಯ ಹುಡುಗ ಸುರತ್ಕಲ್ನಲ್ಲಿ ಇಂಜಿನಿಯರಿಂಗ್ ಮಾಡಿ ಅಧೀಕ್ಷಕ ಅಭಿಯಂತರರು(S.E) ಆಗಿದ್ದು ಹೇಗೆ ?


ಸಾಧಕರಿಗೆ ಗುರಿ ಮುಖ್ಯವಾಗಿರುತ್ತೆ ಮತ್ತು ಸೋಲುವ ಭಯ ಇರುವದಿಲ್ಲ. ಸಾಧನೆ ಮಾಡುವ ದಾರಿಯಲ್ಲಿ ಅಡೆತಡೆಗಳು ಬಂದರೂ ಎದುರಿಸಿ ಯಶಸ್ವಿಗಳಿಸುತ್ತೇನೆ ಎಂಬ ಹಠ ಅದಕ್ಕೆ ಕಾರಣ ಅವರ ಪರಿಶ್ರಮ ಮತ್ತು ಶೃದ್ದೆ. ಇವತ್ತು ಎಷ್ಟೋ ವಿದ್ಯಾರ್ಥಿಗಳು ನಮಗೆ ಯಾವದೇ ಸೌಲಭ್ಯವಿಲ್ಲ ಎಂದು ಗೊಣಗುವುದು ನಾವು ನೋಡಿದ್ದೇವೆ. ಇಂದು ಅಂಗೈಯಲ್ಲೇ ಜಗತ್ತು ಗಿರಗಿರನೆ ತಿರುಗುತ್ತಿದೆ ಆದರೆ ೧೯೭೦ ರ ಆಸುಪಾಸಿನಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವದು ಕಷ್ಟಸಾಧ್ಯ ! ಅದರಲ್ಲಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ ಮತ್ತು ಪಡೆದಿದ್ದರೂ ಅತಿ ವಿರಳ. ವಿಜಯಪುರದ ಬಳ್ಳೊಳ್ಳಿ ಗ್ರಾಮದ ವಿಠ್ಠಲ ಶಿವಯೋಗೆಪ್ಪ ತೇಲಿ ತಾವು ಹೇಗೆ ಇಂಜಿನಿಯರಿಂಗ್ ಪದವಿ ಪಡದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

೧೯೭೩ ಮಾರ್ಚ್ ತಿಂಗಳ ಕೊನೆಯ ವಾರ ಆಗ ತಾನೆ PUC 2nd year ಪರೀಕ್ಷೆ ಮುಗಿದಿತ್ತು, ಸ್ನೇಹಿತರೆಲ್ಲಾ ಸೆರಿ ಹರಟೆ ಹೊಡೆಯುತ್ತಾ ಕುಳಿತಿದ್ದೆವು. ಮುಂದೇನು ಮಾಡಬೇಕು ಯಾವ ಕೋರ್ಸ್ಗಗೆ ಹೊಗಬೇಕು ಎಂದೆಲ್ಲಾ ವಿಚಾರ ಮಾಡಿದಾಗ, ಗಣಿತದಲ್ಲಿ ಚೆನ್ನಾಗಿದ್ದವರು ಇಂಜಿನಿಯರಿಂಗ್ ಮಾಡಬಹುದು ಎಂದು ಎಲ್ಲಾ ಸ್ನೇಹಿತರ ಅಭಿಪ್ರಾಯ ವಾಗಿತ್ತು. ಆದರೆ ಯಾವ ಇಂಜಿನಿಯರಿಂಗ್ ಕಾಲೇಜಿಗೆ ಹೋಗುವುದು? ಆಗ ಇಷ್ಟೋಂದು ಕಾಲೇಜು ಗಳು ಇರಲಿಲ್ಲ, ಮುಖ್ಯವಾಗಿ ಬೆಂಗಳೂರು, ಮೈಸೂರು, ಗುಲಬುರ್ಗಾ, ಹುಬ್ಬಳ್ಳಿ ಹಾಗೂ ಸುರತ್ಕಲದಲ್ಲಿ ಇದ್ದವು. ಗಣೀತ ವಿಷಯ ಪಾಠ ಮಾಡುತ್ತಿದ್ದ ವಸಂತ ಗುರುಗಳು ಸುರತ್ಕಲ್ ನಲ್ಲಿರುವ ರಿಜನಲ ಇಂಜಿನಿಯರಿಂಗ್ ಕಾಲೇಜು ಚೆನ್ನಾಗಿದೆ ಎಂದು ಹೇಳಿದ್ದನ್ನು ಸ್ನೇಹಿತ ಅಶೊಕ ಜ್ಞಾಪಿಸಿದ. ಆಗ ಸುರತ್ಕಲ್ ಕಾಲೇಜು ನನ್ನ ತಲೆಯಲ್ಲಿ ಉಳಿಯಿತು. ನಂತರ ಜೂನ್ ನಲ್ಲಿ ರಿಜಲ್ಟ ಬಂತು, ನಾನು ಒಂದನೇಯ ಶ್ರೇಣಿಯಲ್ಲಿ ಪಾಸಾಗಿದ್ದೆ, ಹಾಗೂ ಗಣೀತ ವಿಷಯ ದಲ್ಲಿ ೯೧ ಮಾರ್ಕ್ಸ್ ಬಂದಿತ್ತು. ಇಂಜಿನಿಯರಿಂಗ್ ಗೆ ಹೊಗಬೇಕು ಎಂದು ನಿಶ್ಚಯಿಸಿದೆ. ನಾನಿರುವುದು, ವಿಜಯಪುರ ದಿಂದ ಸುಮಾರು ೫೦ ಕಿಮಿ ಆಚೆ ಇರುವ ಒಂದು ಹಳ್ಳಿಯಲ್ಲಿ. ಅಲ್ಲಿ ಯಾವುದೇ ಸುದ್ದಿ ಪತ್ರಿಕೆ ಬರುತ್ತಿರಲಿಲ್ಲ. ಈ ಊರಿನಿಂದ ಅಲ್ಲಿಯವರೆಗೆ ಯಾರೂ ಇಂಜಿನಿಯರಿಂಗ್ ಮಾಡಿರಲಿಲ್ಲ.

ಪತ್ರಿಕೆ ನೋಡಿ ಇಂಜಿನಿಯರ್ ಪದವಿಗೆ ಅರ್ಜಿ

ನಮ್ಮ ಮನೆಯ ಮುಂದೆ ಒಂದು ದವಾಖಾನೆ ಇತ್ತು ಅದನ್ನು ನೊಂದಾಯಿತ ವೈದ್ಯಕೀಯ ವ್ರತ್ತಿಗಾರರು ನಡೆಸುತ್ತಿದ್ದರು. ಅವರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯು ಸಾಯಂಕಾಲ ೮ ಗಂಟೆ ಗೆ ಬರುತ್ತಿತ್ತು. ಮುಂಜಾನೆ ೯ಗಂಟೆಗೆ ಕ್ಲೀನಿಕ ತೆಗೆದಮೇಲೆ ಹೋಗಿ ಓದುತ್ತಿದೆ. ಹೀಗೆ ಒಂದು ದಿನ ಓದುವಾಗ, ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಬಯಸುವವರು ಕೂಡಲೇ ಎರಡು ರೂಪಾಯಿ ಪೋಸ್ಟಲ್ ಆರ್ಡರ್ ಕಳುಹಿಸಿ ಅರ್ಜಿಯನ್ನು ಪಡೆಯಬಹುದು ಎಂದಿತ್ತು. ನಮ್ಮುರಿನ ಅಂಚೆ ಕಚೇರಿ ಯಲ್ಲಿ ಈ ಸೌಲಭ್ಯ ಇರಲಿಲ್ಲ. ಈ ವಿಷಯ ಅಣ್ಣನಿಗೆ ತಿಳಿಸಿದಾಗ ನಮ್ಮುರಿನಲ್ಲಿ ಕೆಲಸ ಮಾಡುತಿದ್ದ ಆಗಿನ KEB ಲಾಯಿನ್ ಮನ ದಿನಾಲೂ ಇಂಡಿ ಪಟ್ಟಣಕ್ಕೆ ಹೋಗಿ ಬರುತ್ತಿದ್ದ ರಿಂದ ಅವನ ಕೈಯಲ್ಲಿ ಎರಡು ರೂಪಾಯಿ ಕೊಟ್ಟು ಪೋಸ್ಟಲ್ ಆರ್ಡರ್ ತರಲು ಹೇಳಿದನು. ಮರುದಿನ ಲಾಯಿನ್ ಮನ ಬಂದು ಸಾವುಕಾರರೆ ಎಲ್ಲಾ ಅಂಗಡಿ ಯಲ್ಲಿ ಕೆಳಿದೆ, ನೀವು ಹೇಳಿದ ಆರ್ಡರ್ ಸಿಗಲಿಲ್ಲ ಎಂದು ಹೇಳಿ ಎರಡು ರೂಪಾಯಿ ಮರಳಿಸಿ ಮುಂದೆ ಸಾಗಿದನು. ನಂತರ ಹೋರ್ತಿ ಊರಿನಲ್ಲಿ ( ೧೬ ಕಿಮಿ) ‌ಸಬ್ ಪೋಸ್ಟ್ ಇದೆ ಅಲ್ಲಿ ಸಿಗುತ್ತದೆ ಅಂದಾಗ, ಒಬ್ಬರನ್ನು ಸೈಕಲ್ ನಲ್ಲಿ ಕಳುಹಿಸಿ PO ತರಸಿದ್ದಾಯಿತು. ಪೋಸ್ಟಲ ಆರ್ಡರ್ ಕಳುಹಿಸಿದ ಒಂದು ವಾರದೊಳಗೆ ಕಾಲೇಜದಿಂದ ಅರ್ಜಿ ಹಾಗೂ ಕಾಲೇಜಿನ ವಿವರಣೆ ನೀಡುವ ಪತ್ರಿಕೆ ಬಂತು. ಅರ್ಜಿಯನ್ನು ಭರ್ತಿ ಮಾಡಲು ಮಾರ್ಕ್ಸ್ ಕಾರ್ಡ್ಗಳ ಪ್ರತಿ, ಫೋಟೋ ಇತ್ಯಾದಿ ಗಳು ಬೇಕಾಗಿದ್ದರಿಂದ ವಿಜಯಪುರ ಕ್ಕೆ ಹೋಗಿ ಸ್ನೇಹಿತ ಅಶೊಕನ ಅಕ್ಕನ ಸಹಾಯ ದಿಂದ ಅರ್ಜಿಯನ್ನು ತುಂಬಿ ಸಂಬಂಧಿಸಿದ ದಸ್ತಾವೇಜು ಗಳನ್ನು ಲಗತ್ತಿಸಿ ಕಳುಹಿಸಲಾಯಿತು.

ಹಣಕಾಸಿನ ಸಮಸ್ಸ್ಯೆ ಇದ್ದರೂ ಪಯಣ ಸುರತ್ಕಲ್ ಕಡೆ!

ಹತ್ತು ದಿನಗಳ ನಂತರ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜದಿಂದ ಪ್ರವೇಶ ಮಂಜೂರು ಮಾಡಿದ ಪತ್ರ ಬಂತು. ಅದರೊಳಗೆ ಕಾಲೇಜು ಸೇರಲು ಬಯಸುವ ವಿದ್ಯಾರ್ಥಿ ಕೂಡಲೇ ಟೆಲಿಗ್ರಾಂ ಕಳುಹಿಸಲು ಸೂಚಿಸಿದ್ದರು. ಊಟದ ಖರ್ಚು ತಿಂಗಳಿಗೆ ರೂಪಾಯಿ ೧೨೦ ರಿಂದ ೧೪೦ ರೈ ವರೆಗೆ ಬರಬಹುದು ಎಂದು ನಮೊದಿಸಿದ್ದರು. ಮನೆಯಲ್ಲಿ ತಕರಾರು ಪ್ರಾರಂಭ ವಾಯಿತು, ಇಷ್ಟೊಂದು ಹಣ ಹೊಂದಿಸುವುದು ಹೇಗೆ? ಈಗ ಕಾಲೇಜಿಗೆ ಹೋಗಲು ರೂಪಾಯಿ ೧೦೦೦ ಬೇಕು, ಪ್ರತಿ ತಿಂಗಳು ರೂಪಾಯಿ ೧೨೦ ಕಳುಹಿಸಬೇಕು ಇದು ಸಾಧ್ಯವೇ? ನೀನು ವಿಜಯಪುರ ದಲ್ಲಿ ಬಿಎಸ್ಸಿ ಮಾಡುವುದು ಒಳ್ಳೆಯದು ಎಂದು ಅಣ್ಣ ಸಲಹೆ ನೀಡಿದ. ತಂದೆಗೆ ನನ್ನನ್ನು ಓದಗಿಸಬೇಕೆಂದು ಅವರ ದೃಢವಾದ ಇಚ್ಛೆ ಇತ್ತು, ಏನಾರೆ ಮಾಡೋಣ ದೇವರಿದ್ದಾನೆ ಎಂದು ಹೇಳಿ ಟೆಲಿಗ್ರಾಂ ಕಳುಹಿಸಲು ನನಗೆ ತಿಳಿಸಿದರು. ನನ್ನ ಹತ್ತಿರ ಪ್ಯಾಂಟು, ಶರ್ಟು ಗಳು ಇರಲಿಲ್ಲ, PUC ಶಿಕ್ಷಣ ಪಾಯಿಜಾಮ ಶರ್ಟು ಗಳ ಮೇಲೆ ಮುಗಿದಿತ್ತು.

ಸುರತ್ಕಲ್ ಗೆ ಹೋಗಲು Hostel fee, Tuition fee, ಮುಂತಾದವು ಕನಿಷ್ಠ ರೂಪಾಯಿ ೧೦೦೦ ಹೊಂದಿಸಬೇಕಾಗಿತ್ತು. ತಂದೆ ನಮ್ಮುರಿನ ಸಾವುಕಾರರಾದ ಶ್ರೀ ವಾಲಿ ಯವರನ್ನು ಭೇಟಿ ಯಾಗಿ ವಿಷಯ ತಿಳಿಸಿದಾಗ, ಸದರಿಯವರು ನನಗೆ ಹಣ ಕೊಟ್ಟು ಒಳ್ಳೆಯ ದಾಗಲಿ ಎಂದು ಆಶಿರ್ವಾದ ಮಾಡಿದರು. ಒಂದು ದೊಡ್ಡ ಬಟ್ಟೆಯ ಚೀಲ ಹೊಲಸಿದ್ದಾಯಿತು, ಅದರಲ್ಲಿ ಬೇಕಾಗುವ ಬಟ್ಟೆ, ಎರಡು ದಿನಗಳ ಊಟ ಇತ್ಯಾದಿಗಳನ್ನು ತುಂಬಿದೆವು, ಒಂದು ಸಣ್ಣ ಚೀಲದಲ್ಲಿ ಮಾರ್ಕ್ಸ್ ಕಾರ್ಡ್ ಮುಂತಾದವುಗಳನ್ನು ಹಾಕಿಕೊಂಡು ಸುರತ್ಕಲ್ಗೆ ಹೊರಟೆವು. ಸುರತ್ಕಲ್ ಎಲ್ಲಿದೆ ಎಂಬುದು ಗೊತ್ತಿರಲಿಲ್ಲ, ವಿಜಯಪುರ ಕ್ಕೆ ಹೋಗಿ ಅಲ್ಲಿ ವಿಚಾರಿಸಿದರಾಯಿತು ಎಂದು ನಿಶ್ಚಿಯಿಸಿ , ವೆಂಕಟರಾವ್ ಮಾಹಾರಾಜರ ಮಠಕ್ಕೆ ಹೋಗಿ ನಮಸ್ಕರಿಸಿ, ಬಸ್ಸಿನಲ್ಲಿ ವಿಜಯಪುರ ಕ್ಕೆ ಪ್ರಯಾಣ ಬೇಳಸಿದೇವು. ವಿಜಯಪುರ ದಲ್ಲಿ ಬಸ್ ಇಳಿದು ನಂತರ ಹೋಸದಾಗಿ ಹೊಲಸಿದ ಬಟ್ಟೆ ಕಲೆಕ್ಟ ಮಾಡಿ ಬಸ್ಸನಿಲ್ದಾಣಕ್ಕೆ ಬಂದೆವು. ಸುರತ್ಕಲ್ ಬಗ್ಗೆ ವಿಚಾರಿಸಿದಾಗ, ಈಗ ಹುಬ್ಬಳ್ಳಿಗೆ ಹೋಗಿರಿ ಅಲ್ಲಿಂದ ಮಂಗಳೂರು ಬಸ್ಸು ಹಿಡಿಯಿರಿ, ಎಂಬ ಸಲಹೆ ಬಂತು. ಹುಬ್ಬಳ್ಳಿ ಯಿಂದ ಮಂಗಳೂರಿಗೆ ಖಾಸಗಿ ಬಸ್ಸುಗಳು ಓಡಾಡುತ್ತಿದ್ದವು, CPS ಬಸ್ಸು ಹತ್ತಿ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ ನಮ್ಮನ್ನು ಇಳಿಸಿರಿ ಎಂದು, ನಿರ್ವಾಹಕರಿಗೆ ವಿನಂತಿಸಿದೆ. ಮುಂಜಾನೆ ೭ಗಂಟೆಗೆ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ಮೊದಲನೇ ಗೇಟ್ ಹತ್ತಿರ ಬಸ್ಸು ನಿಲ್ಲಿಸಿ ನಮ್ಮನ್ನು ಇಳಿಸಿದರು. ನಾವು ಒಳಗೆ ಪ್ರವೇಶಿಸಿ ಹಾಸ್ಟೆಲ್ ಗಳ ಮುಂದೆ ಹಾಯ್ದು ಹೋಗುವಾಗ, ಬಟ್ಟೆಯ ಬ್ಯಾಗ್, ನಾವು ಧರಿಸಿದ ಡ್ರೆಸ್ಸು ಗಳನ್ನು ( ನನ್ನದು ಪಾಮಜಾಮ ಶರ್ಟು ತಂದೆಯದು ಧೊತ್ರ, ಅಂಗಿ, ರುಮಾಲು) ನೋಡಿ, ಹುಡುಗರ ಗುಂಪು ನನ್ನ ಹತ್ತಿರ ಬಂದು, from where, you are coming? ಎಂದು ಪ್ರಶ್ನಿಸಿದರು ನಾನು ಸಣ್ಣ ದನಿಯಲ್ಲಿ ವಿಜಾಪುರ ಎಂದೆ, ಓ well come, ಎಂದು ಹೇಳಿ, ಅವರು ತಮ್ಮ ತಮ್ಮಲ್ಲಿ ನಗುತ್ತಾ ಬಿಜಾಪುರದ ಗೌಡ ಇರಬೇಕು admission ಆಗಲಿ ರೂಮಿಗೆ ಕರೆಸುವಾ ಎಂದು ನಕ್ಕರು. ಕಾಲೇಜು ಕಛೇರಿಗೆ ಹೋಗಿ, ಸಂಬಂಧಿಸಿದ ಕಾಗದ ಪತ್ರಗಳನ್ನು ಕೊಟ್ಟೆ, ಆಗಿನ ಪ್ರಾಂಶುಪಾಲ ರಾದ ಶ್ರೀ ಕರಕರೆಡ್ಡಿ ಯವರಿಂದ ವೈಯಕ್ತಿಕ ಸಂದರ್ಶನದ ನಂತರ , ಪ್ರವೇಶ ನೀಡಿದರು, ಹಣ ತುಂಬಿದೆವು, ಹಾಸ್ಟೆಲ್ ರೂಮು ಕೂಡ ಮಂಜೂರು ಮಾಡಿದರು.

ಅಚಲ ಆತ್ಮವಿಶ್ವಾಸದ ಮುಂದೆ ಕೀಳರಿಮೆ ಮಂಕಾಗಿತ್ತು. ಫಲಿತಾಂಶ ಉತ್ತಮ ಶ್ರೇಣಿ.

ಕಾಲೇಜ್ ಪ್ರವೇಶ ಪಡೆದ ನಂತರ ನಮಗೆ ಗೊತ್ತಿರುವ ನಮ್ಮ ತಾಲೂಕಿನವರಾದ ಪಾಟೀಲ್ರ ಮೆನೆಗೆ ಹೋಗಿದ್ದೆವು. ಅವರು Air force ನಲ್ಲಿ ಸರ್ವಿಸ್ ಮಾಡಿ ಈಗ Workshop ದಲ್ಲಿ Forman ಆಗಿ ಕೆಲಸ ಮಾಡುತಿದ್ದರು. ಪಾಟೀಲರು ತುಂಬಾ ಒಳ್ಳೆಯವರು. ಮನೆಗೆ ಪ್ರೀತಿಯಿಂದ ಬರಮಾಡಿಕೊಂಡು ಇದೆ ತಾನೇ ಮನೆಯಿಂದ ದೂರ ಬಂದಿದ್ದ ನನಗೆ ಹಿತನುಡಿಗಳನ್ನು ಹೇಳಿದ್ದರು. ಅವರು ನನ್ನನ್ನು ಉದ್ದೇಶಿಸಿ ಕೀಳರಿಮೆ ಬಿಡು, ಧೈರ್ಯದಿಂದಿರು, ಸಮಸ್ಯೆ ಇದ್ದರೆ ಸಂಪರ್ಕಿಸು, ಮನೆಗೆ ಬರುತ್ತಿರು, ಎಂದು ನನ್ನಲ್ಲಿ ಶಕ್ತಿ ತುಂಬಿದ್ದರು. ಅವರ ಭೇಟಿಯಾದ ನಂತರ ಮನಸ್ಸಿಗೆ ನೆಮ್ಮದಿ. ನಮ್ಮ ಕಡೆಯವರು ಇದ್ದಾರೆ ಎಂದು ಸಂತೋಷವಾಗಿತ್ತು.

ನಾನು ಮೆಸ್ ಹಾಗೂ ಹಾಸ್ಟೆಲ್ ನೋಡಲು ಹೊರಟಾಗ, ತಂದೆ ಸಮುದ್ರ ನೋಡಿ ಕೊಂಡು ಬರುತ್ತೆನೆ ಎಂದು ಹೇಳಿ ಹೋದರು. ಸಾಯಂಕಾಲ ಐದು ಗಂಟೆಗೆ ತಂದೆ ವಾಪಸ್ ಬಂದರು, ಹೆಗೋ ಇನ್ನೂ ಐದು ವರ್ಷ ಇಲ್ಲಿಯೇ ಇರುತ್ತಿ, ನಿನ್ನ ತಾಯಿ, ನಾನು ಕೂಡಿ ಒಮ್ಮೆ ಸುರತ್ಕಲ್ಗೆ ಬರುತ್ತೆವೆ, ಎಂದು ಹೇಳಿ ಈಗ ಊರಿಗೆ ಹೋಗುತ್ತೆನೆ ಎಂದರು. ನನಗೂ ಕೂಡ ಎಲ್ಲಿರಬೇಕು, ಹೇಗಿರಬೇಕು ಎಂಬುದು ಗೊತ್ತಿರಲಿಲ್ಲ, ಸರಿ ಎಂದು ಭಾರವಾದ ಮನಸ್ಸಿನಿಂದ ಬಿಳ್ಕೊಟ್ಟೆನು. ನಂತರ Merit cum means Scholarship ಪರೀಕ್ಷೆ ಬರೆದು ಅದನ್ನು ಪಡೆದು ಕೊಂಡೆನು. Scholarship ದಿಂದ Hostel fee, Tuition fee, ಇನ್ನಿತರ ಖರ್ಚು ನಿಗುತ್ತಿತ್ತು, ಊಟದ ಖರ್ಚಿಗೆ ಪ್ರತಿ ತಿಂಗಳು ಮನೆ ಯಿಂದ ರೂಪಾಯಿ ೧೦೦ ರಿಂದ ೧೨೦ ರ ವರೆಗೆ ಹಣ ತರಸುತ್ತಿದ್ದೆ. ತಂದೆ ಮತ್ತು ಮನೆಯವರೆಲ್ಲರ ಆಶೆಯಂತೆ ನಾನು ಇಂಜಿನಿಯರಿಂಗ್ ಪ್ರತಿ ಸೆಮ್ ಪ್ರಥಮ ಶ್ರೇಣಿಯಲ್ಲೇ ಪಾಸಾಗುತ್ತಿದ್ದೆ.

ತಂದೆಯ ಇಚ್ಛೆ ಪೂರೈಸಿದ್ದು ಮನಸ್ಸಿಗೆ ಸಂತೋಷ ಕೊಟ್ಟಿತ್ತು.

ಒಂದು ವರ್ಷದಲ್ಲಿ ಪದವಿ ಮುಗಿಸಿಕೊಂಡು ಬರಬೇಕು ಎನ್ನುವ ಸಂತೋಷ ಮನದಲ್ಲಿತ್ತು. ಆದರೆ ಮತ್ತೊಮ್ಮೆ ಸುರತ್ಕಲಕ್ಕೆ ಬರುತ್ತೇನೆ ಎಂದು ಹೇಳಿದ ತಂದೆ ಮತ್ತೊಮ್ಮೆ ಬಾರದೆ ಬಾರದ ಲೋಕಕ್ಕೆ ಹೋಗಿದ್ದು ಅತಿ ನೋವುಂಟು ಮಾಡಿತ್ತು. ಆದರೆ ಎಲ್ಲವೂ ದೈವಿಚ್ಛೆ ನನ್ನದೇನು ಇಲ್ಲ ಎಂಬ ಭಾವದಿಂದ ಮುಂದಿನ ಉಳಿದ ಒಂದು ವರ್ಷ ಮುಗಿಸಿ ನಮ್ಮೂರಿಗೆ ಪಯಣ. ೧೯೭೮ ರಲ್ಲಿ ೧೦ ನೇಯ ಸೆಮಿಸ್ಟರ್ ಮುಗಿಸಿ ಇಂಜಿನಿಯರ ಆಗಿ ಊರಿಗೆ ಬಂದಾಗ, ತಂದೆ ಇರಲಿಲ್ಲ, ತಂದೆಯನ್ನು ನೆನಪಿಸಿದಾಗ ಕಣ್ಣಿನಲ್ಲಿ ನೀರು ಬಂತು, ತುಂಬಾ ಕಷ್ಟದಲ್ಲಿ ಇದ್ದಾಗ ಸಾಲ ಶೂಲ ಮಾಡಿ ನನ್ನನ್ನು ಓದಿಸಿ, ಒಂದು ಹಂತಕ್ಕೆ ತಂದದ್ದಕ್ಕಾಗಿ ತಂದೆ ಯ ಬಗ್ಗೆ ಅಭಿಮಾನ ಗೌರವ ಹೆಚ್ಚಾಯಿತು, ಅವರ ಇಚ್ಛೆ ಪೊರೈಸಿದ್ದಕ್ಕಾಗಿ ನನಗೆ ಸಂತೋಷವಾಗಿತ್ತು.

ಮುಂದೆ ಕರ್ನಾಟಕ ಸರ್ಕಾರದ ಇಲಾಖೆಯಾದ ಕೆಇಬಿ ಯಲ್ಲಿ ನೌಕರಿ ಮುಂದೆ ವಿಜಯಪುರದ ಹೆಸ್ಕಾಂನಲ್ಲಿ ಸುಪೆರಿಡೆಂಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದೇನೆ!

Categories: Articles

Tagged as: ,

Leave a Reply