By Bhimashankar Teli

ಇಲ್ಲಿ ಯಾರಿಗೂ ಯಾರು ನಂಬುವ ಅವಶ್ಯಕತೆ ಇಲ್ಲವೇ ಇಲ್ಲ. ಕಾರಣ ಎಲ್ಲರೂ ಬುದ್ದಿವಂತರೇ! ನಾವೆಲ್ಲ ಎಷ್ಟು ಬುದ್ದಿವಂತರು ಎಂದರೆ ನಮ್ಮ ಮನೆ ಮಾತ್ರ ನಮ್ಮದು ಮನೆಯ ಹೊರಗಡೆ ಇರುವುದನ್ನು ಸರ್ಕಾರದು ಎಂದು ಕೈ ತೊಳೆದುಕೊಂಡು ಬಿಡುವಷ್ಟು ಬುದ್ದಿವಂತರು. ಮತ್ತೆ ಸರ್ಕಾರ ಯಾರದು?
ನಾನು ಎಂಟನೇ ಕ್ಲಾಸ್ನಲ್ಲಿ ಇದ್ದೆ ನಮ್ಮೂರಿನ ಒಂದು ಓಣಿಯಲ್ಲಿ ದೊಡ್ಡ ಜನರ ಗುಂಪು ಹೋಗುತ್ತಿತ್ತು. ಏನು ಎಂದು ವಿಚಾರಿಸಿದಾಗ ಕ್ಷೇತ್ರದ ಶಾಸಕರು ಬಂದಿದ್ದಾರೆ ಅದಕ್ಕೆ ಊರಿನಲ್ಲಿ ಮೆರವಣಿಗೆ ನಡಿಯುತ್ತಿದೆ ಎಂದರು. ಮೆರವಣಿಗೆ ಮತ್ತು ರಾಜಮರ್ಯಾದೆ ನೋಡಿ ಮನಸ್ಸಿನಲ್ಲಿ ಬೇರೂರಿದ್ದು ಶಾಸಕರು ಒಬ್ಬರು ಅತಿ ಪ್ರಭಾವಿಗಳು ಮತ್ತು ನಮಗೆ ಅವರ ದುಡ್ಡಿನಿಂದ ಸಹಾಯ ಮಾಡುವವರೆಂದು ! ಅವರೇ ಸರ್ವೋಚ್ಛ ನಾಯಕ! ಚಿಕ್ಕ ಹುಡುಗ ನನ್ನ ಬಿಡಿ, ಇಡೀ ಊರಿನ ಗಣ್ಯ ವ್ಯಕ್ತಿಗಳೇ ಅವರಿಗೆ ಒಬ್ಬ ರಾಜನ ತರಹ ರಾಜಮರ್ಯಾದೆ ಕೊಡುತ್ತಿದ್ದರು. ಎಂದರೆ ಸಾಮಾಜಿಕವಾಗಿ ತೊಡಗಿಸಿಕೊಂಡು ಜನರಿಂದ ಆಯ್ಕೆಯಾಗಿ ಜನರಿಗೆ ಸೇವೆ ಮಾಡುವದರಿಂದ ಅವರಿಗೆ ಜನರು ಮರ್ಯಾದೆ ಕೊಡುತ್ತಿದ್ದರು ಎನ್ನವುದು ಸೂಕ್ತ. ಅದರಲ್ಲಿ ತಪ್ಪು ಕಂಡು ಹಿಡಿಯುವ ಮನಸ್ಥಿತಿ ಇರಬಾರದು ನಿಜ! ಆದರೆ ಅದೇ ರಾಜ(ಇಂದು ಅವರು, ನಾಳೆ ನಾನೇ ಇರಬಹುದು) ಸೇವೆಯ ನೆಪದಲ್ಲಿ ಜನರ ದುಡ್ಡು ವ್ಯಯ ಮಾಡಿದರೆ ಅದು ತಪ್ಪಲ್ಲವೇ? ಜನಪ್ರತಿನಿಧಿಗೆ ಮೊದಲು ಕೇವಲ ಗೌರವ ಧನ ಕೊಡುತ್ತಿದ್ದರು ಅದಕ್ಕೆ ಅದೊಂದು ಸೇವೆ ಎಂದು ಪರಿಗಣಿಸಿದ್ದರು. ಇಂದು ಶಾಸಕರು, ಸಂಸದರು ತಗೆದುಕೊಳ್ಳುತ್ತಿರುವ ಸಂಬಳ ನೋಡಿದರೆ ಇದು ಸೇವೆ ಅಲ್ಲ ಅವರು ಮಾಡಿದ ಕೆಲಸಕ್ಕೆ ಸಂಬಳ ತಗೆದುಕೊಳ್ಳುತ್ತಿದ್ದಾರೆ ಅಷ್ಟೇ. ಅದಕ್ಕೆ ಸೇವೆ ಎನ್ನುವ ಪದ ಸದ್ಯಕ್ಕೆ ಸಮಂಜಸ ಅಲ್ಲ.
ನಮ್ಮ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಒಬ್ಬ ಶಾಸಕ ಮಾಡಿದ ಭಾಷಣ “ನಾನು ಕಳೆದ ಚುನಾವಣೆಯಲ್ಲಿ ಕೇವಲ ೫೦೦ ಮತಗಳಿಂದ ಸೋತಿದ್ದೇನೆ , ನನ್ನ ಹೊಲ ಮಾರಿದ್ದೇನೆ, ಮನೆಯ ಮೇಲೆ ಸಾಲ ತಗೆದುಕೊಂಡಿದ್ದೇನೆ ಮತ್ತು ೧೦ ಬಡ್ಡಿಯಲ್ಲಿ ಊರ ಮನೆಯಲ್ಲಿಯೂ ಸಾಲ ತಡೆದುಕೊಂಡಿದ್ದೇನೆ ಅದಕ್ಕೆ ಈ ಬಾರಿ ನನ್ನ ಕೈ ಹಿಡಿಯಿರಿ ಹಿಡಿಯದಿದ್ದರೇ ನನ್ನ ಜೀವನ ದೇವರೇ ಬಲ್ಲ ಎಂದ್ದಿದ್ದರು ” ಇತ್ತೀಚಿಗೆ ನಾನು ಯಾವದೋ ಕೆಲಸಕ್ಕೆ ತಾಲೂಕ ಸ್ಥಳಕ್ಕೆ ಹೋದಾಗ ಅದೇ ಶಾಸಕ ಒಂದು ಕೋಟಿ ರುಪಾಯಿಯ ವೋಲ್ವೋ ಕಾರದಲ್ಲಿ ಮತ್ತು ಅದರ ಜೊತೆ ಗನ್ ಮ್ಯಾನ್ ಬೇರೆ! ಅವನಿಗೆ ಇರೋದು ೧ ಲಕ್ಷ ಸಂಬಳದಲ್ಲಿ ವೋಲ್ವೋ ಕಾರ್ ಹೇಗೆ ಬರುತ್ತೆ? ಇದು ಹಗಲು ದರೋಡೆ ಅಲ್ಲವೇ? ಜನರು ಮೋಸದ ಮಾತಿಗೆ ಮೋಸಹೋಗಿದ್ದರು.
ಇನ್ನೊಂದು ಕ್ಷೇತ್ರದಲ್ಲಿ ನನಗೆ ೮೦ ವರ್ಷ ಆಗಿದೆ ಇದು ನನ್ನ ಕೊನೆಯ ಚುನಾವಣೆ ನಾನು ಗೆದ್ದರೆ ಹೂವಿನ ಹಾರ ತಗೆದುಕೊಂಡು ಬಂದು ನನಗೆ ಹಾಕಿ, ಇಲ್ಲವಾದರೆ ನನ್ನ ಹೆಣಕ್ಕೆ ಹಾಕಿ ಹೋಗಿ ಎಂದು ಗೆದ್ದರು. ಅವರು ಒಳ್ಳೆಯವರು ಅಥವಾ ಕೆಟ್ಟವರು ಎನ್ನುವುದು ಬೇಡವಾದ ವಿಷಯ. ೮೦ನೇ ವರ್ಷದಲ್ಲಿ ಕೆಲಸ ಮಾಡಲು ಆಗುತ್ತಾ? ಇಲ್ಲಿಯೂ ಜನ ಮೋಸಹೋದರು. ಇಂದು ಇನ್ನೊಂದು ಗಮನಿಸಿ ರಾಜ್ಯದಲ್ಲಿ ಇಬ್ಬರು ವಯಸ್ಸಾದವರು ರಾಜ್ಯಸಭೆ ಸದಸ್ಯರು ಇಬ್ಬರಿಗೂ ಸ್ವತಃ ಮೈಕ್ ಹಿಡಿದುಕೊಂಡು ಒಂದು ನಿಮಿಷ ಮಾತಾಡುವ ಶಕ್ತಿ ಇಲ್ಲ ಆದರೂ ಇವರನ್ನು ರಾಜ್ಯಸಭೆಗೆ ಕಳಿಸಿದ್ದು ತಪ್ಪಲ್ವಾ? ಅವರ ಇಬ್ಬರ ಬಗ್ಗೆ ಅತಿ ಗೌರವ ಇದೆ ಆದರೆ ಅದನ್ನು ಅವರು ಉಳಿಸಿಕೊಳ್ಳಬೇಕಲ್ವೇ?
ಒಬ್ಬ ವಿದ್ಯಾರ್ಥಿ ಕಷ್ಟಪಟ್ಟು ಓದಿ ಸಮಾಜಮುಖಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಾನೆ. ಶೃದ್ದೆ ಮತ್ತು ಪರಿಶ್ರಮದಿಂದ ಓದಿ ಪಾಸಾಗಿ ನೌಕರಿ ಸಿಗುತ್ತೆ ಎಂದು ಜಾತಕ ಪಕ್ಷಿ ಅಂತೇ ಕಾಯುತ್ತಿರುವಾಗ ಅದೇ ಹುದ್ದೆಯನ್ನು ದುಡ್ಡು ಪಡೆದು ಹರಾಜು ಆಗುವಂತೆ ಮಾಡಿದ್ದು ಯಾರು? ಹೋಗಲಿ ಹುದ್ದೆಗೆ ದುಡ್ಡು ಕೊಟ್ಟು ಬಂದವನು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯವೇ? ಅವನು ಸಾಲ ಮಾಡಿ ದುಡ್ಡು ಕೊಟ್ಟಿರುತ್ತಾನೆ ಅದಕ್ಕೆ ಅವನಿಗೆ ದುಡ್ಡಿನ್ನ ಅವಶ್ಯಕತೆ ತುಂಬಾ ಇರುತ್ತೆ ಅದಕ್ಕಾಗಿ ಬೇರೆ ದಾರಿ ಕಾಣದೆ ದುಡ್ಡಿನ ಹಿಂದೆ ಹೋಗಬೇಕಾಗುತ್ತೆ. ಮುಂದುವರೆದಂತೆ ಹಣ ಮಾಡುವುದೇ ಮುಖ್ಯವಾಗಿ ಬಿಡುತ್ತೆ. ಇದರ ಮದ್ಯೆಯೂ ಸಂಪೂರ್ಣವಾಗಿ ದುಡ್ಡು ಕೊಡದೆ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದರೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಅಧಿಕಾರಿಯನ್ನು ಕೆಲವೇ ತಿಂಗಳಲ್ಲಿ ಎತ್ತಂಗಡಿ ಶಿಕ್ಷೆ!
ಒಂದು ಲೇಟೆಸ್ಟ್ ವಿಷಯ ಛತ್ತೀಸಗಡ ರಾಜ್ಯದಲ್ಲಿ ಜಿಲ್ಲಾಧಿಕಾರಿಯೊಬ್ಬರು ಮೆಡಿಸಿನ್ ತಗೆದುಕೊಳ್ಳಲು ಬಂದ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದರು. ಅದನ್ನು ಅಲ್ಲಿನ ಸರ್ಕಾರ ಗಂಭೀರವಾಗಿ ತಗೆದುಕೊಂಡು ಅವರನ್ನು ಅಮಾನತು ಮಾಡಿತ್ತು. ಅದು ಸರಿ ಇದೆ. ಆದರೆ ಜಿಲ್ಲಾಧಿಕಾರಿ ಕೊಟ್ಟ ಉತ್ತರ “ಅವನು ಅಹಂ ದಿಂದ ಮಾತಾಡಿದಕ್ಕೆ ನಾನು ಹೊಡದೆ “. ಇಲ್ಲಿ ಜಿಲ್ಲಾಧಿಕಾರಿಗೆ ನಾನೊಬ್ಬ ಜನರಿಂದ ಬರುತ್ತಿರುವ ದುಡ್ಡಿನಲ್ಲಿ ಸಂಬಳ ಪಡೆಯುತ್ತಿದ್ದೇನೆ ಎನ್ನುವ ಭಾವಕ್ಕಿಂತ ಅವನಿಗೆ ನಾನೊಬ್ಬ ಜಿಲ್ಲಾಧಿಕಾರಿ ಎಂಬ ಅಹಂ ಇದೆ. ಅದಕ್ಕೆ ಅವನಿಗೆ ಸಾಮಾನ್ಯ ಮನುಷ್ಯ ಎದುರಿಗೆ ನಿಂತು ಉತ್ತರ ಕೊಟ್ಟರೆ ಸಹಿಸಿಕೊಳ್ಳುವ ಶಕ್ತಿ ಇಲ್ಲ ಕಾರಣ ಅವನು ಜಿಲ್ಲಾಧಿಕಾರಿ! ಅದಕ್ಕೆ ನಮ್ಮ ಒಂದು ವಿಜ್ಞಾಪನೆ ಅಧಿಕಾರಿ ಎಂಬ ಪದ ಸಮಂಜಸವಲ್ಲ. ಜಿಲ್ಲಾಧಿಕಾರಿ -> ಜಿಲ್ಲೆಯ ಮುಖ್ಯ ಕೆಲಸಗಾರ , ತಾಲೂಕಿನ ಅಧಿಕಾರಿಗೆ ತಾಲೂಕಿನ ಮುಖ್ಯ ಕೆಲಸಗಾರ ಹೀಗೆ ಅಧಿಕಾರ, ಅಧಿಕಾರಿ ಎಂಬ ಶಬ್ದ ತಗೆಯಲೇಬೇಕು. ಕಾನೂನ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸಮಾಡಿ ತಪ್ಪಿದ್ದರೆ ಶಿಕ್ಷೆಯಾಗಲಿ. ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ನಿಂತು ಹೋಗಲಿ. ಅಭಿವೃದ್ಧಿ ಹೊಂದಿದ ದೇಶಗಳ ತರಹ ಮನುಷ್ಯನಿಗೆ ಗೌರವವಿರಲಿ.
ಸಾಮಾನ್ಯ ಜನ ನಾವುಗಳು ಏನು ಮಾಡುತ್ತಿದ್ದೇವೆ. ಚುನಾವಣೆ ಬಂದರೆ ಜಾತಿ , ಹಣ ಮುಖ್ಯವಾಗಿರುತ್ತೆ. ಒಂದು ಉಧಾಹರಣೆ ನಮಗೆ ಸ್ವಲ್ಪ ದುಡ್ಡಿನ ಅವಶ್ಯಕತೆ ಇರುತ್ತೆ ,ನಿಮಗೆ ಕೇವಲ ೫೦೦ ರೂಪಾಯಿ ಬೇಕಾಗಿರುತ್ತೆ ಮತ್ತು ನಿಮಗೆ ಮರಳಿ ಕೊಡುವ ಶಕ್ತಿ ಇರುವದಿಲ್ಲ. ನಿಮಗೆ ಯಾರಾದರೂ ದುಡ್ಡು ಕೊಡುವದಕ್ಕೆ ಸಾಧ್ಯಾನಾ? ಒಂದು ಬಡ್ಡಿಗೆ ದುಡ್ಡು ಕೊಡುತ್ತಾರೆ ಅಥವಾ ಸ್ವಲ್ಪ ದಿವಸ ಮಟ್ಟಿಗೆ ಕೊಡುತ್ತಾರೆ ಯಾರು ಸುಮ್ಮನೆ ಕೊಡುವದಿಲ್ಲ. ಆದರೆ ಚುನಾವಣೆಯಲ್ಲಿ ನೀವು ಬೇಡವೆಂದರೂ ದುಡ್ಡು ಕೊಡುತ್ತಾರೆ. ಕಾರಣ?ದುಡ್ಡು ಸುರಿದು ದುಡ್ಡು ಮಾಡುವ ಹಂಬಲ. ದುಡ್ಡಿನ ಮೇಲೆ ಚುನಾವಣೆ ಒಂದು ಕಡೆಯಾದರೆ ಇನ್ನೊಂದು ಕಡೆ ಒಳ್ಳೆಯವರಿಗೆ ಬೆಲೆ ಎಲ್ಲಿ? ಯಾರಾದರೂ ಒಳ್ಳೆಯ ಪ್ರಾಮಾಣಿಕ ಅಧಿಕಾರಿ ಚೆನ್ನಾಗಿ ಕೆಲಸ ಮಾಡುತ್ತಿದ್ದರೇ ಅವರ ಬೆನ್ನಿಗೆ ನಿಲ್ಲುವುದು ಅತಿ ವಿರಳ. ಕಣ್ಣ ಮುಂದೆಯೇ ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆನಂದವನ್ನು ಅನುಭವಿಸುತ್ತೇವೆ. ಅಥವಾ ಅಲ್ಪ ಸ್ವಲ್ಪ ಮುಟ್ಟಿದರೆ ನಮ್ಮ ಬಾಯಿ ಸುಮ್ಮನಿರುತ್ತೆ.
ನಾವೆಲ್ಲ ವ್ಯಕ್ತಿ , ಪಕ್ಷ ಎನ್ನುವುದಕ್ಕಿಂತ ಸಿದ್ದಾಂತ ಮತ್ತು ವಿಷಯದ ಆಧಾರದ ಮೇಲೆ ಯಾವದೇ ಪಕ್ಷದ ಒಳ್ಳೆಯ ಅಭ್ಯರ್ಥಿಗೆ ಅಣ್ಣ ನಾವು ನಿಮ್ಮ ದುಡ್ಡು ತಗೆದುಕೊಳ್ಳಲ್ಲ ನೀವು ಒಬ್ಬ ಪ್ರಾಮಾಣಿಕ ಮತ್ತು ನಮ್ಮ ಕ್ಷೇತ್ರಕ್ಕೆ ಕೆಲಸ ಮಾಡುತ್ತೀರಿ ಎಂದು ಮತಹಾಕುತ್ತೇವೆ ಎಂದು ಮತ ಚಲಾಯಿಸಿ ನೋಡಿ ನಿಮ್ಮ ಕ್ಷೇತ್ರದ ಯಾವೊಬ್ಬ ಸರ್ಕಾರಿ ಕೆಲಸಗಾರ ದುಡ್ಡು ತಗೆದುಕೊಳ್ಳುವದಿಲ್ಲ.(ಈಗಿರುವ ಅಧಿಕಾರಿಗಳೇ /ಕೆಲಸಗಾರರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ) ನಾವೇ ಮುಂದೆ ನಿಂತು ವ್ಯವಸ್ಥೆ ಸರಿ ಹೋಗುವದಿಲ್ಲ ಎಂದರೆ ಖಂಡಿತ ಹೋಗುವದಿಲ್ಲ. ಇದು ನನ್ನ ಕಡೆಯಿಂದ ಸಾಧ್ಯ ಎಂದಾದರೆ ಖಂಡಿತ ಸಾಧ್ಯ! ಯಾವಾಗ ನಾನು ಪ್ರಾಮಾಣಿಕತೆಯಿಂದ ಇರುತ್ತೇನೆ ತನ್ನಿಂದ ತಾನೇ ಎಲ್ಲವೂ ಬದಲಾಗಬಲ್ಲದು.
ಎಲ್ಲವೂ ನಾಯಕನೇ ಮಾಡುತ್ತೇನೆ ಎಂದು ನಂಬಬೇಡಿ. ಆಯ್ಕೆ ಮಾಡಿದ ನಂತರ ಅವನಿಗೆ ಕೊಟ್ಟ ಕೆಲಸ ಅವನ ಜೊತೆ ನಿಂತು ಮಾಡಿಸುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಕ್ಷೇತ್ರಗಳಲ್ಲಿ ಅಥವಾ ಊರುಗಳಲ್ಲಿ ಪ್ರಶ್ನೆ ಮಾಡುವ ರೂಡಿ ಇರಬೇಕು. ಇದು ಎಲ್ಲರಿಗೂ ಬರಬೇಕು. ಒಬ್ಬರೇ ಮಾಡಿದರೆ ರೌಡಿ ಶೀಟರ್ ಹಾಕಿ ಬಿಡುತ್ತೆ ಇಂದಿನ ವ್ಯವಸ್ಥೆ! ಯಾವದೇ ವ್ಯಕ್ತಿಗೆ ನಂಬುವ ಬದಲು ನನ್ನ ನಾನು ನಂಬಿ ಇದನ್ನು ಸರಿಪಡಿಸುತ್ತೇನೆ(ಎಲ್ಲರ ಅಭಿಪ್ರಾಯ ಇದೆ ಆದಾಗ ಉಳಿದವರಾರು?) ಎಂಬ ಅಚಲ ವಿಶ್ವಾಸವಿದ್ದರೆ ಖಂಡಿತ ಯಶಸ್ವಿಸಾದ್ಯ!
Categories: Articles

The people mindset needs to be change. Well written article
LikeLiked by 1 person