ಹೈಕಮಾಂಡ್ ಅಸಹಕಾರ
ಗುಜರಾತ್ ರಾಜ್ಯದಲ್ಲಿ ಬಿಸಿಗಾಳಿ ಬಿಸಿ ಗುಜರಾತ್ ತತ್ತರಿಸಿದಾಗ ಪ್ರಧಾನ ಮಂತ್ರಿ ಟ್ವಿಟ್ ಮಾಡಿ ಪರಿಹಾರ ನಿಧಿಯಿಂದ ಅಲ್ಲಿನ ಜನರಿಗೆ ಪರಿಹಾರ ಕೊಟ್ಟಿದ್ದರು. ಅದೇ ಮಧ್ಯಪ್ರದೇಶದಲ್ಲಿ ಅಂಥದೇ ಘಟನೆಯಾದಾಗ ಒಂದು ಟ್ವಿಟ್ ಮಾಡಿದರು. ಅದೇ ಸಮಯದಲ್ಲಿ ನಮ್ಮ ರಾಜ್ಯದ ಉತ್ತರ ಭಾಗದಲ್ಲಿ ಪ್ರವಾಹ ಬಂದಾಗ ನಮ್ಮ ದೇಶದ ಪ್ರಧಾನ ಮಂತ್ರಿಗಳು ದುಡ್ಡು ಬಿಡಿ, ಒಂದು ಟ್ವಿಟ್ ಮಾಡಲಿಲ್ಲ. ನಾಮಕಾವಾಸ್ತೆ ಸರ್ಕಾರದ ಕಡೆಯಿಂದ ಒಬ್ಬರು ಬಂದು ನೋಡಿ ಸ್ಥಳದಲ್ಲಿ ಯಾವದೇ ಪ್ಯಾಕೇಜ್ ಘೋಷಣೆ ಮಾಡಲಿಲ್ಲ. ಹೋಗಲಿ ಬಿಡಿ, ನಮ್ಮ ಮೋದಿ ಎಂದು ಜನರು ತಮ್ಮ ನೋವನ್ನು ಹೊಟ್ಟೆಯಲ್ಲಿ ಹಾಕಿಕೊಂಡರು!
ಅಂದು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಏರಿತ್ತು. ಒಂದು ತಿಂಗಳಾದರೂ ಮಂತ್ರಿ ಮಂಡಲಕ್ಕೆ ಅನುಮತಿ ಕೊಟ್ಟಿರಲಿಲ್ಲ. ಅದು ಹೋಗಲಿ ಸರ್ಕಾರ ರಚನೆ ಆದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರಿಂದ ಒಂದು ಟ್ವಿಟ್ ಕೂಡ ಬರಲಿಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುವದಿಲ್ವಾ? ಅದೇ ಮಹಾರಾಷ್ಟದಲ್ಲಿ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದ ಸರ್ಕಾರವನ್ನು ಟ್ವಿಟ್ ಮಾಡಿ ಸಮರ್ಥನೆ ಮಾಡಿಕೊಂಡಿದ್ದೀರಿ. ಇತಿಹಾಸದಲ್ಲಿ ಅದೊಂದು ಕರಾಳ ದಿನ! ಬಿಜೆಪಿಯ ಹೈಕಮಾಂಡ್ ಮಂತ್ರಿ ಮಂಡಲಕ್ಕೆ ಅನುಮತಿ ಕೊಡದೆ ಇರುವದರಿಂದ ಪ್ರವಾಹ ಬಂದಾಗ ಯಾವದೇ ಮಂತ್ರಿ ಇರಲಿಲ್ಲ. ಇದಕ್ಕೆ ನೇರವಾಗಿ ಬಿಜೆಪಿ ಹೈಕಮಾಂಡ್ ಕಾರಣ. ಸಮರ್ಥವಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಮಸ್ಸ್ಯೆಗೆ ಪರಿಹಾರ ಕೊಟ್ಟಿದ್ದರು. ಪ್ರವಾಹದ ಭೀಕರತೆ ಎಷ್ಟಿತ್ತು ಎಂದರೇ ೧೦೦ ವರ್ಷಗಳ ಹಿಂದೆ ಇಂತಹ ಪ್ರವಾಹ ಬಂದಿತ್ತಂತೆ!

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂದು ಬೇರೆ ಪಕ್ಷದ ಶಾಸಕರು ಪಕ್ಷಕ್ಕೆ ಬಂದಿದ್ದು ಮತ್ತು ಎಲ್ಲವನ್ನು ಶಾಸಕರ ಗಮನಕ್ಕೆ ತಗೆದುಕೊಂಡು ಸರ್ಕಾರ ರಚನೆ ಮಾಡಿದ್ದರು. ಇಲ್ಲಿಯೂ ಯಡಿಯೂರಪ್ಪರವರನ್ನು ಕಟ್ಟಿ ಹಾಕಿ ಅವರಿಗೆ ಬೇಕಾದ ಮಂತ್ರಿ ಮಂಡಲಕ್ಕೆ ಕೊಕ್ಕೆ ಹಾಕಿದರು. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳ ಬದಲಾವಣೆ ಮಾಡಲಾಯಿತು ಎಂದು ಕೇಳಿದ್ದೇವೆ. ? ಸರ್ಕಾರ ರಚನೆ ಆದ ದಿನದಿಂದಲೇ ಕೈ ಕಟ್ಟಿ ಹಾಕುವ ಕೆಲಸ ಬಿಜೆಪಿ ಹೈಕಮಾಂಡ್ ಮಾಡಿತ್ತು.
ಹೈಕಮಾಂಡ್ ಅಸಹಕಾರಕ್ಕೆ ಮೋದಿ ಅಥವಾ ಇನ್ನಾರೋ ಕಾರಣ ಎನ್ನುವದಕ್ಕಿಂತ ನಮ್ಮ ರಾಜ್ಯದ ಪ್ರಭಾವಿ ನಾಯಕರ ಕೈವಾಡ ಇದ್ದಿರಬಹುದಲ್ಲವೇ?
ಒಬ್ಬಂಟಿಯಾಗಿ ಮುಖ್ಯಮಂತ್ರಿಯ ಹೋರಾಟ
ಶಾಸಕರ ಮತ್ತು ಅಧಿಕಾರಿಗಳ ನೆರವಿನಿಂದ ಒಂದು ಪ್ರವಾಹ ಎದುರಿಸಿದ್ದರು. ಮತ್ತೆ ರಾಜ್ಯ ಎರಡನೆಯ ಪ್ರವಾಹಕ್ಕೆ ತುತ್ತಾಗಿತ್ತು. ಎರಡನೆಯ ಬಾರಿಯೂ ಕೇಂದ್ರದ ಪ್ರಧಾನ ಸೇವಕನಿಂದ ಟ್ವಿಟ್ ಬರಲೇ ಇಲ್ಲ . ರಾಜ್ಯಕ್ಕೆ ಬರಲು ಇಲ್ಲ ಮತ್ತು ಸರಿಯಾದ ಸಮಯಕ್ಕೆ ದುಡ್ಡು ಕೊಡಲಿಲ್ಲ. ರಾಜ್ಯದ ಜನರ ಸಿಟ್ಟು ನೆತ್ತಿಗೇರಿತ್ತು. ರಾಜ್ಯದ ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಪಕ್ಷದ ಕೆಲವು ಶಾಸಕರು ನೇರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದರು. ಅದರಲ್ಲಿ ರಾಜ್ಯದಿಂದ ಗೆದ್ದ ೨೫ ಸಂಸದರಿಗೆ ಸರಿಯಾಗಿ ತೊಳೆದಿದ್ದರು. ಒಂದು ಹಂತಕ್ಕೆ ಸದಾನಂದಗೌಡರು ಚಕ್ರವರ್ತಿ ಸೂಲಿಬೆಲೆಯನ್ನು ಟ್ವಿಟ್ಟರ್ನಲ್ಲಿ ಬ್ಲಾಕ್ ಮಾಡಿದ್ದರು. ಇಲ್ಲಿ ಗಮನಿಸಿ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಕೇಕ್ ವಾಕ್ ಆದರೂ ಕೇಂದ್ರ ನೆರವಿಗೆ ಬರಲಿಲ್ಲ. ಬಂದರೂ ಹೇಳಿಕೊಳ್ಳುವ ರೀತಿ ಇರಲಿಲ್ಲ. ಅದಕ್ಕೆ ತುಮಕೂರಿನ ಬಹಿರಂಗ ಸಮಾವೇಶದಲ್ಲಿ ಪ್ರಧಾನಿಯವರ ಮುಂದೇನೆ ರಾಜ್ಯದ ಮುಖ್ಯಮಂತ್ರಿ ರಾಜ್ಯಕ್ಕೆ ಬರಬೇಕಾದ ದುಡ್ಡು ಬಿಡುಗಡೆ ಮಾಡಿ ಎಂದು ಹೇಳಿದ್ದು ಬಿಜೆಪಿಗರಿಗೆ ಅಚ್ಚರಿ ತಂದಿತ್ತು. ಅದು ಒಬ್ಬ ಮಾಸ್ ಲೀಡರ್ ಮಾಡಬೇಕಾದ ಕೆಲಸಾಗಿತ್ತು. ಅದು ಯಡಿಯೂರಪ್ಪ ಮಾಡಿದ್ದರು.
ಮೊದಲೂ ತಮ್ಮ ರಾಜ್ಯಕ್ಕೆ ಸಹಾಯ ಮಾಡಿದ್ದರು ಇತ್ತೀಚಿಗೆ ಗುಜರಾತ್ ದಲ್ಲಿ ಚಂಡಮಾರುತದಿಂದ ಬಂದ ಪ್ರವಾಹಕ್ಕೆ ಖುದ್ದು ಪ್ರಧಾನ ಮಂತ್ರಿಗಳೇ ಹೋಗಿ ೧೦೦೦ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದು ಸಂತೋಷ. ಆದರೆ ನಮ್ಮ ರಾಜ್ಯಕ್ಕೂ ಬಂದು ಕೊಟ್ಟಿದ್ದರೇ ನಮ್ಮ ಜನಕ್ಕೂ ಪರಿಹಾರ ಸಿಗುತ್ತಿತ್ತು. ಪ್ರಧಾನ ಮಂತ್ರಿಗಳ ಗಮನಕ್ಕೆ ಬಾರದೆ ಹೋಗಿದ್ದು ದೊಡ್ಡ ಪ್ರಮಾದ. ಇದಕ್ಕೆ ಯಾರು ಕಾರಣರು? ನಮ್ಮ ರಾಜ್ಯದ ಸಂಸದರಾ? ಅಥವಾ ಪ್ರಧಾನ ಮಂತ್ರಿಗಳ ಅಧಿಕಾರಿಗಳಾ? ಅಥವಾ ಪ್ರಧಾನ ಮಂತ್ರಿಗಳ ಉದಾಸೀನತೆನಾ?
ಒಂದನೆಯ ಮಂತ್ರಿ ಮಂಡಲ ರಚನೆಯಾಗಿ ಕೆಲಯೊಬ್ಬರಿಗೆ ಮಂತ್ರಿ ಸ್ಥಾನ ಕೊಡದೆ ಇದ್ದಾಗ ಒಂದು ಮಟ್ಟಿಗೆ ಭಿನ್ನಾಭಿಪ್ರಾಯವನ್ನು ಮುಖ್ಯಮಂತ್ರಿಗಳು ಕಂಟ್ರೋಲ್ ಮಾಡಿದ್ದರು. ಕಾರಣ ತಮಗೆ ಬೇಕಾದವರಿಗೆ ತಪ್ಪಿತ್ತು ಅದಕ್ಕೆ ಅವರನ್ನು ಸಮಾಧಾನ ಮಾಡಿದ್ದರು. ಇಲ್ಲಿಯವರೆಗೆ ರಾಜ್ಯದಲ್ಲಿ ಕುಟುಂಬದ ಮತ್ತು ಭ್ರಷ್ಟಾಚಾರ ಆರೋಪಗಳು ಇರಲಿಲ್ಲ. ಯಾವಾಗ ಎರಡನೆಯ ಮಂತ್ರಿ ಮಂಡಲ ರಚನೆ ಆಯಿತೋ ಒಮ್ಮೆಲೇ ನಮ್ಮ ನಾಯಕ ಯಡಿಯೂರಪ್ಪ ಅಲ್ಲ ಎಂದು ಘೋಷಣೆ ಮಾಡಿ ಮನಸ್ಸಿಗೆ ಬಂದ ಹಾಗೆ ಮಾಧ್ಯಮದವರಿಗೆ ಹೇಳಿಕೆ ಕೊಡುವದಕ್ಕೆ ಪ್ರಾರಂಭಮಾಡಿದರು. ಮೊದ ಮೊದಲು ಇದು ನಿಲ್ಲುತ್ತೆ ಎಂದು ಎನಿಸಿದರೂ ಅದು ನಿಲ್ಲಲೇ ಇಲ. ಊಟದ ನೆಪದಲ್ಲಿ ಮುಖ್ಯಮಂತ್ರಿ ಬದಲಾವಣೆ ಎನ್ನುತ್ತಾ ರಾಜ್ಯದ ಜನರ ಮತ್ತು ರಾಜ್ಯದ ಸರ್ಕಾರಕ್ಕೆ ಮಸಿ ಹಚ್ಚುವ ಪ್ರಯತ್ನ ನಡೆಯಿತು. ಇಷ್ಟಾದರೂ ಹೈಕಮಾಂಡ್ ಯಾವದೇ ಕಠಿಣ ನಿರ್ಧಾರ ತಗೆದುಕೊಳ್ಳಲಿಲ್ಲ. ಉಸ್ತುವಾರಿ ಅರುಣ ಸಿಂಗ್ ಅವರ ಮಾತುಗಳಿಗೆ ಸಹಿತ ಕ್ಯಾರೇ ಎನ್ನದೆ ಇದ್ದಾಗ ಸ್ವತಃ ಪಕ್ಷದವರಿಗೆ ಅನಿಸಿದ್ದು ಇದರ ಹಿಂದೆ ಪ್ರಭಾವಿಯೊಬ್ಬರ ಕೈವಾಡ ಇರಬೇಕು ಎಂದರು. ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿರುವಾಗ ಅವರದೇ ಪಕ್ಷದ ಜನರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿರುವಾಗ ಸುಮ್ನೆ ಇದ್ದ ಹೈಕಮಾಂಡ್ ನಡವಳಿಕೆಯಿಂದ ಈಗಾಗಲೇ ಪಕ್ಷಕ್ಕೆ ಧಕ್ಕೆ ಆಗಿದೆ. ಧಕ್ಕೆ ಆದ ನಂತರ ಬಾಯಿಗೆ ಬೀಗ ಹಾಕಿ ಏನು ಪ್ರಯೋಜನ?
ಉಸ್ತುವಾರಿಯವರೇ ಸರ್ಕಾರವನ್ನು ಹೊಗಳಿ ಬಾಯಿ ಬಡುಕ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದು ಒಳ್ಳೆಯ ವಿಚಾರ. ಸರ್ಕಾರಕ್ಕೆ ಹೀಯಾಳಿಸಿದ್ರು ಹೈಕಮಾಂಡ್ ಕ್ರಮ ತಗೆದುಕೊಳ್ಳಲಿಲ್ಲ. ಇದರ ಹಿಂದೆ ಇದ್ದವರಾರು?
ಅಧಿಕಾರ ಕೊಟ್ಟರೆ ಎಲ್ಲವೂ ಸರಿ! ಇಲ್ಲದೆ ಹೋದರೇ ವಿಜಯೇಂದ್ರ ಹಸ್ತಕ್ಷೇಪ !
ಇವತ್ತಿನ ಸ್ಥಿತಿ ಯಾವ ಮನುಷ್ಯನಿಗೂ ಬರಬಾರದು ಅಂತಹ ಸ್ಥಿತಿಯಲ್ಲಿ ನಾವೆಲ್ಲಾ ಇದ್ದೇವೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕರೋನ ನಿರ್ನಾಮ ಮಾಡಲು ಹೋರಾಡುತ್ತಿರುವಾಗ ಮತ್ತೆ ಮುಖ್ಯಮಂತ್ರಿ ಬದಲಾವಣೆ ಎಂದು ಬೆಂಗಳೂರು ಮತ್ತು ದೆಹಲಿ ಹೋಗುತ್ತಿದ್ದರೆ ಜನ ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ. ಭಾರತೀಯ ಜನತಾ ಪಕ್ಷಕ್ಕೆ ರಾಜ್ಯದಲ್ಲಿ ಯಾವ ವಿರೋಧ ಪಕ್ಷಗಳು ಇಲ್ಲವೇ ಇಲ್ಲ. ಬಿಜೆಪಿಗೆ ರಾಜ್ಯದಲ್ಲಿ ವಿರೋಧಿಸುವವರು ಬಿಜೆಪಿಯವರೇ ! ಕಾರಣ ಅಧಿಕಾರ ವ್ಯಾಮೋಹ! ಅಧಿಕಾರ ಕೊಟ್ಟರೆ ಎಲ್ಲವೂ ಸರಿ ಇರುತ್ತೆ. ಅಧಿಕಾರ ಕೊಡದೆ ಹೋದರೆ ವಿಜಯೇಂದ್ರರ ಹೆಸರು ಬರುತ್ತೆ! ಇದೆಂಥ ಹೇಸಿಗೆ ತರುವ ಕೆಲಸ.
ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ಕೆಲಸ ಕರೋನ ಹತೋಟಿಗೆ ತರುವುದು. ನಿರಾಶ್ರಿತ ಆದ ಮಕ್ಕಳಿಗೆ ಹುಡುಕಿ ಅವರನ್ನು ರಾಜ್ಯ ಸರ್ಕಾರ ದತ್ತು ಪಡೆದುಕೊಳ್ಳುವುದು, ನಿರ್ಗತಿಕರಿಗೆ ಸಹಾಯ ಮಾಡುವುದು, ಮೂರನೆಯ ಅಲೆಯನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವುದು. ಹೀಗೆ ಅನೇಕ ಕೆಲಸಗಳು ಆಗಬೇಕಿವೆ. ಇದನ್ನು ಯಡಿಯೂರಪ್ಪ ಖಂಡಿತ ಮಾಡುತ್ತಾರೆ. ಹೀಗಾಗಲೇ ಒಂದು ಹಂತಕ್ಕೆ ಪರಸ್ಥಿತಿ ಎದುರಿಸಲು ತಯಾರಾಗಿದ್ದಾರೆ. ಇಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ಎಂದು ಹೇಳಿದರೆ ಹೇಗಾಗಿರಬೇಡ? ಮೊದಲೇ ಕೇಂದ್ರದ ಸಹಾಯ ಅಷ್ಟಕ್ಕೇ ಅಷ್ಟೇ! ಕೇಂದ್ರದಿಂದ ಆಕ್ಸಿಜನ್ ಪಡೆಯಲು ನಮಗೆ ಕೋರ್ಟ್ ಮೊರೆ ಹೋಗಿದ್ದು ದುರ್ದೈವ. ಕೋರ್ಟ್ ಕೊಟ್ಟ ಆದೇಶಕ್ಕೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರದ ನಡೆ ರಾಜ್ಯದ ಜನರು ಯಾವತ್ತೂ ಕ್ಷಮಿಸಲ್ಲ.
ಮಾಸ್ ಲೀಡರ್ ಗೆ ಕೆಲಸ ಮಾಡಲು ಬಿಡಿ

ಸಂದಿಗ್ದ ಸ್ಥಿತಿಯಲ್ಲಿ ಕರೋನ ಗೆಲ್ಲಲು ಒಳ್ಳೆಯ ತಂಡ ರಚನೆ ಮಾಡಿದ್ದಾರೆ. ಬೇರೆ ರಾಜ್ಯಗಳಿಗಿಂತ ಬೇಗ ಕರೋನ ಹತೋಟಿಗೆ ಬಂದಿದೆ. ಇಲ್ಲಿಯೂ ಕೆಲವರು ಬೆಡ್ ಬ್ಲಾಕ್ ದಂಧೆ ಮುಂದೆ ಇಟ್ಟಿಕೊಂಡು ರಾಜ್ಯ ಸರ್ಕಾರದ ವಿರುದ್ಧವೇ ಪತ್ರಿಕಾಗೋಷ್ಠಿ ಮಾಡಿ ಛೀಮಾರಿ ಹಾಕಿಸಿಕೊಂಡಿದ್ದು ಇದೆ. ತಮ್ಮದೇ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಗಮನಕ್ಕೆ ತರದೇ ತಾವೇ ಪತ್ರಿಕಾಗೋಷ್ಠಿ ಮಾಡಿದ್ದು ಎಷ್ಟು ಸರಿ? ಇದೆ ರೀತಿ ಆಕ್ಸಿಜನ್ ಇಲ್ಲ, ವ್ಯಾಕ್ಸಿನೇಷನ್ ಇಲ್ಲ ಮತ್ತು ರೆಮಿಡಿಸಿವಿರ್ ಕೊರೆತೆ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಪತ್ರಿಕಾಗೋಷ್ಠಿ ಮಾಡುತ್ತಾರಾ?
ಬೆಳಗಾವಿ ಉಪಚುನಾವಣೆಯಲ್ಲಿ ನಾವೇ ನಿರ್ಧಾರ ತಗೆದುಕೊಳ್ಳುತ್ತೇವೆ ಎಂದು ಕಡೆಯ ಗಳಿಗೆಯಲ್ಲಿ ಮತ್ತೆ ಯಡಿಯೂರಪ್ಪನವರ ಹೆಗಲಿಗೆ ಹಾಕಿದ್ದು ಯಾಕೆ? ಗೆಲ್ಲುವ ಮುನ್ಸೂಚನೆ ಸಿಕ್ಕರೆ ಹೊಸ ಮುಖ ಬರುತ್ತೆ, ಸೋಲುವ ಪರಿಸ್ಥಿತಿ ಇದ್ದರೇ ಯಡಿಯೂರಪ್ಪನವರಿಗೆ ಹೇಳಿ ಗೆಲ್ಲಿಸಿಕೊಂಡು ಬನ್ನಿ ಎಂದು ಹೇಳುತ್ತಾರೆ. ಅದಕ್ಕೆ ೨೦೨೩ರ ಚುನಾವಣೆ ಗೆಲ್ಲಬೇಕಾದರೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಸಂಪೂರ್ಣ ಅಧಿಕಾರ ಕೊಟ್ಟು ಯಾರಾದರೂ ಮಾಧ್ಯಮದ ಮುಂದೆ ಬಾಯಿ ಬಿಟ್ಟರೆ ಕಠಿಣ ನಿರ್ಧಾರ ತಗೆದುಕೊಳ್ಳುವ ಅಧಿಕಾರ ಕೊಟ್ಟರೆ ಎಲ್ಲವೂ ಸರಿ ಹೋಗುತ್ತೆ. ರಾಜ್ಯದ ಕೆಲವು ನಾಯಕರು ದೆಹಲಿ ಮಟ್ಟದ ಸ್ಥಾನದಲ್ಲಿ ಇದ್ದಾರೆ. ಅವರ ಕುಮ್ಮುಕ್ಕು ಹೀಗೆ ಮುಂದುವರೆದರೆ ರಾಜ್ಯ ಬಿಜೆಪಿಯನ್ನು ಉಳಿಸುವುದು ಕಷ್ಟದ ಕೆಲಸ. ೨೦೨೩ರ ಚುನಾವಣೆ ಗೆದ್ದ ಮೇಲೆ ಅವರೇ ಅವರ ಸ್ಥಾನ ಯುವಕರಿಗೆ ಬಿಟ್ಟು ಕೊಟ್ಟು ಹೋಗುತ್ತಾರೆ. ಅದಕ್ಕಾಗಿ ಸ್ವಲ್ಪ ದಿನ ಕಾಯಿರಿ ಅದರ ಜೊತೆ ಸಂಪೂರ್ಣ ಬೆಂಬಲ ಕೊಡಿ. ಇಲ್ಲವಾದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ನೆನಪು ಮಾತ್ರ!
Categories: Articles

ತಮ್ಮ ಅಭಿಪ್ರಾಯ 100ಕ್ಕೆ100 ಸತ್ಯ,ಬಿಜೆಪಿ ಹೈಕಮಾಂಡ್ ಕರ್ನಾಟಕರಾಜ್ಯದ ಬಗ್ಗೆ ಮಲತಾಯಿ ದೊರಣೆ ಅನುಸರಿಸುತ್ತಿದೆ ಈ ದೊರಣೆ ಮುಂದುವರಿದರೆ ಇಂದುಆಯ್ಕೆಮಾಡಿದ ಮತದಾರ್ರೆ ಬಿಜೆಪಿ ಯನ್ನು ಕಸದ ಬುಟ್ಟಿಗೆ ಹಾಕುವುದರಲ್ಲಿ ಸಂಶಯಬೇಡ, ನನ್ನಂತ ನಿಷ್ಠಾವಂತ ನಿಗೆ ಹೀಗನ್ನಿಸಿದರೆ ಬೇರೆಯವರ ಅಭಿಪ್ರಾಯ ಹೇಗಿರಬೇಡ, ಮೊದಲು ಪ್ರಧಾನಿ ತಮ್ಮದೊರಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.ಹೈಕಮಾಂಡವಿರೋಡಿ ಚಟುವಟಿಕೆಗಳ ಮೇಲೆ ಕಠಿಣ ನಿರ್ದಾರ ತೆಗೆದುಕೊಳ್ಳಬೇಕು.ಇಲ್ಲವಾದಲ್ಲಿ ನಿಮ್ಮ ಗುಂಡಿ ನೀವೇ ತೋಡಿಕೊಳ್ಳುತ್ತೀರಿ ಸಂಶಯಬೇಡ.
LikeLiked by 1 person