Articles

ಒಂದು ಕಡೆ ವ್ಯಾಕ್ಸೀನ್ ಅಭಾವ, ಇನ್ನೊಂದು ಕಡೆ ವ್ಯಾಕ್ಸೀನ್ ರಾಜಕೀಯ. ಮತ್ತೊಂದು ಕಡೆ ಕೋರ್ಟ್ ಕೇಳಿದ ಪ್ರಶ್ನೆಗಳೇನು?

ವೆಲ್ ಡನ್ ಇಂಡಿಯಾ

ಭಾರತ ಎರಡು ವ್ಯಾಕ್ಸೀನ್ ತಯಾರಿಸಿ ಜಗತ್ತಿನ ಬಡ ದೇಶದ ವೈದ್ಯರಿಗೆ ಸಾಧ್ಯವಾದಷ್ಟು ಕೊಟ್ಟು ಅವರಿಗೆ ನೆರವಾಗಿದ್ದು ಭಾರತ ದೇಶದ ಸದುದ್ದೇಶ ತೋರಿಸುತ್ತದೆ. ಜಗತ್ತು ಭಾರತ ದೇಶದ ಕಾಳಜಿಗೆ ಧನ್ಯವಾದ ಅರ್ಪಿಸಿದೆ. ಇಂತಹ ಬೆಳವಣಿಗೆ ನಮ್ಮ ದೇಶದಲ್ಲಿ ಹಿಂದೆಯೂ ನಡೆದಿವೆ ಅದಕ್ಕೆ ಕಾರಣ ನಮ್ಮ ದೇಶದ ಸಂಸ್ಕೃತಿ. ಮೊದಲಿತ್ತು ಈ ಜನ್ಮದ ಪಾಪ ,ಪುಣ್ಯ ಮುಂದಿನ ಜನ್ಮಕ್ಕೆ ಆದರೆ ಸದ್ಯ ಇರುವ ಮಾತು ಈ ಜನ್ಮದ ಪಾಪ, ಪುಣ್ಯ ಇದೆ ಜನ್ಮಕ್ಕೆ ಎನ್ನುವ ಹಾಗೆ ಎರಡನೆಯ ಅಲ್ಲೆಯಲ್ಲಿ ನಾವೆಲ್ಲಾ ಸಂಕಷ್ಟದಲ್ಲಿದ್ದಾಗ ಇಡೀ ಜಗತ್ತಿನ ಹಲವು ದೇಶಗಳು ನಮ್ಮ ಜೊತೆ ಹೆಜ್ಜೆ ಹಾಕಿದವು! ಕಾರಣ ನಾವು ತೋರಿಸಿದ್ದ ಪ್ರೀತಿ!

@Amazon

ಜನರ ಜೀವಕ್ಕಿಂತ ರಾಜಕೀಯವೇ ಹೆಚ್ಚಾಯಿತಾ?

ಲಸಿಗೆ ದೇಶದ ವೈದ್ಯರಿಗೆ ಕೊಟ್ಟು ತದನಂತರ ವಯಸ್ಸಾದವರಿಗೆ ಕೊಡುವ ನಿರ್ಧಾರ ಕೇಂದ್ರ ಸರ್ಕಾರ ಘೋಷಣೆ ಮಾಡಿದಾಗ ಸುಮಾರು ಜನರು ಇದನ್ನು ಸ್ವಾಗತ ಮಾಡಿದ್ದರು. ಇನ್ನು ಕೆಲವರು ಇದಕ್ಕೆ ತದ್ವಿರುದ್ದ ಹೇಳಿಕೆ ಕೊಟ್ಟರು. ಹೇಳಿಕೆ ಕೊಟ್ಟವರಿಗೆ ಸಾಮಾಜಿಕ ಕಳಕಳಿ ಇರುವದಕ್ಕಿಂತ ರಾಜಕೀಯ ಚಿಂತನೆ ಇತ್ತೆಂದು ಮೇಲ್ನೋಟಕ್ಕೆ ಕಾಣಿಸಿತ್ತು. ಹಿಂದೊಮ್ಮೆ ನಮ್ಮ ಸೈನಿಕರ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಜನರು ಇಂದು ನಮ್ಮ ದೇಶದ ವಿಜ್ಞಾನಿಗಳ ಮೇಲೆ ಸಂಶಯ ವ್ಯಕ್ತಪಡಿಸಿ ಲಸಿಕೆ ವಿರುದ್ದ ಕೆಟ್ಟದಾದ ಚಳುವಳಿ ಆರಂಭಿಸಿದರು. ಉತ್ತರ ಪ್ರದೇಶದ ಅಖಿಲೇಶ್ ಯಾದವ, ಕಾಂಗ್ರೇಸ್ ಪ್ರಭಾವಿ ನಾಯಕರು ಲಸಿಕೆ ಬಗ್ಗೆ ಹಗುರವಾಗಿ ಹೇಳಿಕೆ ಕೊಟ್ಟು ಲಸಿಕೆ ಬಗ್ಗೆ ಜನರಲ್ಲಿ ಸಂಶಯ ಮೂಡಿಸಿ ಒಟ್ಟಾರೆಯಾಗಿ ೮% ಲಸಿಕೆ ಹಾಳು ಮಾಡುವದರಲ್ಲಿ ಯಶಸ್ವಿಯಾದರು. ಇನ್ನು ಕೆಲವು ರಾಜ್ಯಗಳಲ್ಲಿ ಶೇಕಡಾ ೩೦-೪೦% ಲಸಿಕೆ ಹಾಳಾಯಿತು. ಕೇಂದ್ರ ಇದೆನ್ನೆಲ್ಲ ಗಮನಿಸಿ ಸ್ವತಃ ಪ್ರಧಾನ ಮಂತ್ರಿಗಳೇ ಮುಂದೆ ಬಂದು ಲಸಿಕೆ ಹಾಕಿಕೊಂಡರೂ ವಿರೋಧ ಪಕ್ಷಗಳ ಮನಸ್ಥಿತಿ ಬದಲಾವಣೆಯಾಗಲಿಲ್ಲ ಮತ್ತು ತಾವೂ ಲಸಿಕೆ ಹಾಕಿಕೊಳ್ಳಲಿಲ್ಲ. ಇದರ ಮಧ್ಯೆದಲ್ಲಿ ಕೇಂದ್ರದ ಲಸಿಕೆ ದಾಸ್ತಾನು ಹೆಚ್ಚಿಕೆ ಇರುವದರಿಂದ ವಿದೇಶಕ್ಕೆ ಸ್ವಲ್ಪ ಮಟ್ಟಿಗೆ ಕಳುಹಿಸಿ ಕೊಟ್ಟರು. ನಮ್ಮ ದೇಶದಲ್ಲಿ ಒಂದನೆಯ ಅಲೆಯ ಭೀಕರತೆ ಪ್ರಮಾಣ ಕಡಿಮೆ ಇದ್ದಿತ್ತು ಮತ್ತು ಬೇಗ ಅದರಿಂದ ಜಯ ಸಾಧಿಸಿದ್ದ ನಾವು ಕರೋನ ಹೋಯಿತೆಂದು ಮೈಮರೆತಿದ್ದೆವು. ಕೇಂದ್ರದ ಕಡೆ ಇದ್ದ ಲಸಿಕೆ ದಾಸ್ತಾನೆ ಖಾಲಿಯಾಗಿಲ್ಲ, ಕೊಟ್ಟ ಲಸಿಕೆ ಜನ ಹಾಕಿಕೊಳ್ಳದೆ ಪೋಲಾಗುತ್ತಿತ್ತು ಮತ್ತು ಒಂದು ವರ್ಷ ಲಸಿಕೆ ಹಾಗೆ ಇಟ್ಟರೆ ಉಪಯೋಗವಾಗದೆ ಹೋಗುತಿತ್ತು. ಇದೆಲ್ಲಾ ಗಮನಿಸಿ ಹೊಸ ಆರ್ಡರ್ ಕೊಡದೆ ಇರುವುದು ಇಂದಿನ ಕೊರೆತೆಗೆ ಕಾರಣ. ಇಲ್ಲಿ ಎಡವಿದ್ದು ಯಾರು? ಕೇಂದ್ರನಾ? ಜನರಾ? ವಿರೋಧ ಪಕ್ಷಗಳಾ??

ರಾಜಕಾರಣಿಗಳು ಮತ್ತು ಅವರ ಕುಟುಂಬ ವ್ಯಾಕ್ಸಿನೇಟೆಡ್!

ಯಾವಾಗ ದೇಶದಲ್ಲಿ ಲಸಿಕೆ ಕೊರೆತೆ ಪ್ರಾರಂಭವಾಯಿತೋ ವಿರೋಧ ಪಕ್ಷದವರು ಲಸಿಕೆ ಬಗ್ಗೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ಎರಡನೆಯ ಅಲೆಯ ಭೀಕರತೆ ನೋಡಿ ಇದೆ ವಿರೋಧ ಪಕ್ಷದ ನಾಯಕರು ಮತ್ತು ಅವರ ಕುಟುಂಬದವರು ಸದ್ದಿಲ್ಲದೇ ಲಸಿಕೆ ಹಾಕಿಕೊಂಡರು. ಉತ್ತಮ ರಾಜಕಾರಣಿ ಎಂದು ಖ್ಯಾತಿ ಪಡೆದಿರುವ ಕೃಷ್ಣ ಬೈರೇಗೌಡ ಕೇಂದ್ರ ಲಸಿಕೆ ಬಗ್ಗೆ ಇನ್ನು ಹೆಚ್ಚು ಪ್ರಚಾರ ಮಾಡಿ ಹಾಕಿಸಬಹುದಿತ್ತು ಎಂದು ಬಾಲಿಶ ಹೇಳಿಕೆ ಕೊಟ್ಟು ತಮ್ಮ ಒಳ್ಳೆಯತನಕ್ಕೆ ಸವಾಲು ಹಾಕಿದರು. ಅವರು ಹೇಳಿದ ಮಾತು ಹೇಗಿತ್ತು ಎಂದರೆ ನಾವು ಸುಳ್ಳು ಹೇಳಿದರೂ ನೀವು ಅದನ್ನು ಒಳ್ಳೆಯ ರೀತಿಯಲ್ಲಿ ಪ್ರಚಾರ ಮಾಡಿ ಜನರಿಗೆ ಮನವರಿಕೆ ಮಾಡಿಕೊಟ್ಟು ಲಸಿಕೆ ಹಾಕಬೇಕಿತ್ತು ಎನ್ನುವುದು ಅವರ ವಾದ! ಆದರೆ ನಮ್ಮ ಪ್ರಶ್ನೆ ಒಬ್ಬ ಜನಪ್ರತಿನಿಧಿಯಾಗಿ ನಿಮ್ಮ ಜವಾಬ್ದಾರಿ ಏನಿತ್ತು? ನೀವು ಯಾಕೆ ನಿಮ್ಮ ಕ್ಷೇತ್ರದ ಜನರಿಗೆ ಲಸಿಕೆ ಬಗ್ಗೆ ಅರಿವು ಮೂಡಿಸಲಿಲ್ಲ? ಅನೇಕ ಮಹಾನ ನಾಯಕರು ಲಸಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು ಅವರ ಬಗ್ಗೆ ಉಲ್ಲೇಖ ಮಾಡುವದಿಲ್ಲ ಕಾರಣ ಅದನ್ನು ಜನರಿಗೆ ಬಿಡುತ್ತೇನೆ.

ಹಾಗಿದ್ದರೇ ಕೇಂದ್ರ ಮಾಡಿದ್ದು ಎಲ್ಲವೂ ಸರಿನಾ? ಸರಿ ಇದ್ದರೇ ಸುಪ್ರೀಂ ಕೋರ್ಟ್ ವ್ಯಾಕ್ಸೀನ್ ಬಗ್ಗೆ ಕೇಂದ್ರಕ್ಕೆ ಸವಿಸ್ತಾರವಾದ ಪ್ರಶ್ನೆ ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ. ಭಾರತ ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆಗೆ ಎಲ್ಲ ವ್ಯಾಕ್ಸೀನ್ ಡ್ರೈವ್ ಕೇಂದ್ರದ ಹೊಣೆ ಮತ್ತು ಅತಿ ಅಚ್ಚುಕಟ್ಟಾಗಿ ಎಲ್ಲ ಸರ್ಕಾರಗಳು ಮಾಡಿವೆ. ಪೋಲಿಯೋ, ದಡಾರ ಹೀಗೆ ಅನೇಕ ಲಸಿಕೆ ಕೇಂದ್ರದಿಂದೇನೇ ಬರುತ್ತೆ. ಅದರಲ್ಲಿ ನಮ್ಮ ದೇಶ ಯಶಸ್ವಿಯಾಗಿದೆ. ಸ್ವಲ್ಪ ದುಡ್ಡು ರಾಜ್ಯದಿಂದ ಕೊಟ್ಟರೂ ಅದೊಂದು ವ್ಯವಸ್ಥಿತ ರೀತಿಯಲ್ಲಿ ಇದೆ. ಅದಕ್ಕೆ ನಮ್ಮದೊಂದು ಸಲಾಂ! ಆದರೆ ಕರೋನ ಲಸಿಕೆಯಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ಸರಿ ಇಲ್ಲ ಎಂದೆನಿಸಿ ಕೋರ್ಟ್ ಪ್ರಶ್ನೆಗಳನ್ನು ಮಾಡಿದೆ. ಮೊದಲು ಕೇಂದ್ರ ಲಸಿಕೆ ಸಂಪೂರ್ಣ ಹೊಣೆಗಾರಿಕೆ ಇಟ್ಟಿಕೊಂಡಿತು. ಆಮೇಲೆ ಲಸಿಕೆ ವಿತರಣೆ ೫೦% ರಾಜ್ಯ ಸರ್ಕಾರಗಳಿಗೆ ವಹಿಸಿತು ಮತ್ತು ಖಾಸಗಿಯವರು ಖರೀದಿ ಮಾಡುವುದಕ್ಕೆ ಅವಕಾಶ ಕೊಟ್ಟಿತು, ಅಷ್ಟಕ್ಕೇ ಬಿಡದೆ ಕೇಂದ್ರಕ್ಕೆ ಒಂದು ಬೆಲೆ , ರಾಜ್ಯಕ್ಕೆ ಒಂದು ಬೆಲೆ ಮತ್ತು ಖಾಸಗಿಯವರಿಗೆ ಇನ್ನೊಂದು ಬೆಲೆ! ವಾವ್ ಇದಕ್ಕೆ ಏನನ್ನಬೇಕು? ಇದೊಂದು ಅತ್ಯಂತ ಕೆಟ್ಟ ಆಡಳಿತದ ಉಧಾಹರಣೆ ! ಸದ್ಯ ನಮ್ಮ ರಾಜ್ಯದ ಬೆಳೆವಣಿಗೆ ಗಮನಿಸಿ ಬೆಂಗಳೂರ ನಗರದಲ್ಲಿ ಮತ್ತು ಕೆಲವೇ ಕೆಲವು ಜಿಲ್ಲೆಗಳಲ್ಲಿ ೧೮ ವಯಸ್ಸಿನ ಮೇಲ್ಪಟ್ಟವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಡ್ಡಿಗೆ ಲಸಿಕೆ ಸಿಗುತ್ತಿದೆ. ಇಲ್ಲಿ ಖಾಸಗಿಯವರಿಗೆ ಹೇಗೆ ಲಸಿಕೆ ಸಿಗುತ್ತಿದೆ. ನಮ್ಮ ಸರ್ಕಾರವು ಆರ್ಡರ್ ಮಾಡಿದೆ ಆದರೂ ಬೇಕಾಗುವಷ್ಟು ಲಸಿಕೆ ದೊರೆಯುತ್ತಿಲ್ಲ ೧೮+ ಮೇಲ್ಪಟ್ಟವರಿಗೆ ಕೊಡುವುದಕ್ಕೆ. ಇದಕ್ಕೆ ಯಾರು ಕಾರಣರು? ಇನ್ನೆಷ್ಟು ದಿನ ಹೀಗೆ ಮುಂದುವರೆಯುತ್ತೆ ಗೊತ್ತಿಲ್ಲ. ಆದರೆ ಒಂದು ಮಾತು ಸತ್ಯ ಇಲ್ಲಿ ಬಡವರಿಗೆ ಲಸಿಕೆ ದೊರೆಯುತ್ತಿಲ್ಲ ಎನ್ನುವುದು ಕಟು ಸತ್ಯ. ಅಷ್ಟೇ ಯಾಕೆ? ಹಳ್ಳಿಗಳಲ್ಲಿ, ತಾಲೂಕಗಳಲ್ಲಿ ದುಡ್ಡು ಕೊಟ್ಟರೂ ೧೮ ವಯಸ್ಸಿನವರಿಗೆ ಲಸಿಕೆ ದೊರೆಯುತ್ತಿಲ್ಲ.

ಎಲ್ಲರಿಗೂ ವ್ಯಾಕ್ಸೀನ್ ಸಿಗಲಿ.

ದೊಡ್ಡ ದೇಶ , ೧೩೦ ಕೋಟಿ ಜನರು ಇರುವ ದೇಶಕ್ಕೆ ಲಸಿಕೆ ಅಭಾವ ಸಾಮಾನ್ಯ ಸಂಗತಿ. ಜನರು ಇದನ್ನು ಒಪ್ಪಿಕೊಳ್ಳುತ್ತಾರೆ ಆದರೆ ಒಂದೇ ಲಸಿಕೆಗೆ ಬೇರೆ ಬೇರೆ ಬೆಲೆ ಮತ್ತು ೧೮+ ವರ್ಷ ಮೇಲ್ಪಟ್ಟವರಿಗೆ ಕೇವಲ ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಹಾಗೆ ಆಗುತ್ತಿರುವ ಬೆಳವಣಿಗೆಗೆ ಜನರು ಖಂಡಿತ ಹಿಡಿ ಶಾಪ ಹಾಕುತ್ತಾರೆ. ಕೇಂದ್ರ ಸರ್ಕಾರ ಒಂದೇ ಬೆಲೆಯನ್ನು ನಿಗದಿ ಮಾಡಬೇಕು ಮತ್ತು ಅತಿ ಬೇಗ ೧೮+ ವಯಸ್ಸು ಮೇಲ್ಪಟ್ಟವರಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ವ್ಯಾಕ್ಸೀನ್ ಸಿಗುವ ಹಾಗೆ ಮಾಡಬೇಕು ಎನ್ನವುದು ಜನರ ಅಭಿಪ್ರಾಯ. ಅದೇ ಅಭಿಪ್ರಾಯ ಇದ್ದವರು ಕೋರ್ಟ್ಗೆ ಹೋಗಿದ್ದಾರೆ. ಕೋರ್ಟ್ ಕೇಂದ್ರದ ಅಭಿಪ್ರಾಯ ಕೊಡಲು ಕೇಳಿದೆ. ಅಲ್ಲಿಯವರೆಗೆ ಕಾಯೋಣ ಮತ್ತು ಎಲ್ಲರೂ ಲಸಿಕೆ ಸಿಕ್ಕಾಗ ಹಾಕಿಕೊಳ್ಳಿ.

Categories: Articles

Tagged as: , ,

1 reply »

Leave a Reply