
ಶ್ರೀಕೃಷ್ಣದೇವರಾಯ ವಿಜಯಪುರದ ಸುಲ್ತಾನ,ಗೋಲ್ಕಂಡ ,ಬಹುಮನಿ ಸುಲ್ತಾನ ಮತ್ತು ಒರಿಸ್ಸಾದ ಗಜಪತಿಗಳಿಗೆ ಸೋಲಿಸಿ ಅತ್ಯಂತ ಶಕ್ತಿಯುತ ಹಿಂದು ರಾಜನಾಗಿದ್ದ.
ಅವನಿಗೆ ಕನ್ನಡರಾಜ್ಯರಮಾರಮಣ,ಮೂರುರಾಯರಗಂಡ ಹೀಗೆ ಅನೇಕ ಬಿರುದುಗಳಿದ್ದವು. ದೇಶದ ಉದ್ದಗಲಕ್ಕೂ ಅವನ ಹೆಸರು ರಾರಾಜಿಸುತ್ತಿತ್ತು.ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ವಜ್ರ ವೈಡೂರ್ಯಗಳು ಬೀದಿ ಬೀದಿಯಲ್ಲಿ ಮಾರಲ್ಪಡುತ್ತಿದ್ದವು ಮತ್ತು ಅವನ ಆಳ್ವಿಕೆಯಲ್ಲಿ ಪ್ರಜೆಗಳ ಜೀವನಮಟ್ಟ ಉತ್ಕೃಷ್ಟವಾಗಿತ್ತು . ಪಂಡಿತರಿಗೆ,ಕುಸ್ತಿ ಪಟುಗಳಿಗೆ ಮತ್ತು ಆಶ್ರಯ ಬೇಡಿ ಬಂದ ವಿದ್ವಾಂಸರಿಗೆ ಮತ್ತು ಜನರಿಗೆ ಕೈ ಬಿಸಿ ಕರೆಯುತ್ತಿರುವ ರಾಜ್ಯ ಅದಾಗಿತ್ತು. ಅಲ್ಲಿನ ದೇವಾಲಯಗಳು,ವಿಧ ವಿಧದ ಕೆತ್ತೆನೆಗಳು ಇಂದಿಗೂ ಅಮೋಘ!!! ಅವನದು ವೈಭವಪೂರಿತ ರಾಜ್ಯಭಾರ.
ನನಗೆ ನಿಷ್ಕಲ್ಮಶವಾದ ಪ್ರೀತಿಯ ಬಗ್ಗೆ ಒಲವು. ಅಂಥ ಪ್ರೀತಿ ಸಿಗುವುದು ಹಗಲಲ್ಲಿ ನಕ್ಷತ್ರ ಕಂಡಂತೆ. ಒಮ್ಮೊಮ್ಮೆ ಹಗಲಲ್ಲಿ ನಕ್ಷತ್ರ ಕಾಣಿಸುತ್ತೆ. ಹಾಗೆ ಪರಿಶುದ್ಧವಾದ ಸ್ನೇಹಕ್ಕಾಗಿ ಹಂಬಲಿಸಿದವನು. ಪರಿಶುದ್ಧವಾದ ಸ್ನೇಹ ಮತ್ತು ನಿಷ್ಕಲ್ಮಶವಾದ ಪ್ರೀತಿ ತಿಳಿಯಾದ ನೀರಿನ ಕೆಳಗಡೆ ಪ್ರಕಾಶಿಸುತ್ತಿರುವ ಮುತ್ತಿನ ಹೊಳಪು ಮತ್ತು ಮೀನಿನ ವೈಯ್ಯಾರದ ನಡಿಗೆ ಇದ್ದ ಹಾಗೆ. ಮೇಲಿನಿಂದ ನೀರೊಳಗೆ ನೋಡಿದ ಮುತ್ತಿನ ಹೊಳೆಪು ಹೊರೆಗೆ ತಗೆದಾಗ ಸಹ ಅದೇ ಪ್ರಖರತೆ . ಸೂಕ್ಷ್ಮವಾಗಿ ಮೀನಿನ ನಡಿಗೆ ಗಮನಿಸಿ ನೋಡಿದಾಗ ಅದರ ವೈಯ್ಯಾರ ಏನಂದು ಕಾಣಬಹುವುದು. ಪರಿಶುದ್ಧವಾದ ಸ್ನೇಹಕ್ಕೆ ಲಿಂಗಭೇದವಿಲ್ಲ. ಪ್ರೀತಿಗೆ ಕಣ್ಣಿಲ್ಲ ನಿಜ ಆದರೆ ಅದನ್ನು ಅನುಭವಿಸುವ ಕಾಂಚನಜುಂಗಾ ಪರ್ವತದಷ್ಟೇ ವಿಶಾಲವಾದ ಹೃದಯ ಇದೆ. ನಿಷ್ಕಲ್ಮಶವಾದ ಪ್ರೀತಿ ಹುಟ್ಟಿದಾಗ ಅದರ ಅಸ್ತಿತ್ವ ಎಂದಿಗೂ ಅಮರ. ಅಷ್ಟೊಂದು ವಿಶಾಲನಾ ? ಹೌದು ಅದರ ಬೇರುಗಳು ಹೊಳಹೊಕ್ಕು ಝೇಂಕರಿಸುವಾಗ ಪ್ರೀತಿಯ ಸೆಳೆತದ ಮುಂದೆ ಲೋಕವೇ ಶೂನ್ಯ!! ಅದರ ಹುಟ್ಟಿನ ಅರಿವು ಬಂದಾಗ ನೀಲಿ ಬಾನಂಗಳದಲ್ಲಿ ಸ್ವಚಂದವಾಗಿ ಯಾರಿಗೂ ತಿಳಿದಿಲ್ಲ ಎಂದು ಹಾರಾಡುತ್ತಿರುವ ಜೋಡಿ ಹಕ್ಕಿಗಳ ಹಾರಾಟದಂತೆ ಅದರ ಸುಮುಧುರ ಭಾವನೆಗಳು. ಕನಸಿನಲ್ಲಿ ಕಂಡಿದ್ದ ಸವಿನೆನಪುಗಳ ಸರಮಾಲೆಗಳು ಅನುಭವಿಸುವ ಘಳಿಗೆಗಳು ಬಂದಾಗ ಕಣ್ಣು ರೆಪ್ಪೆ ಮುಚ್ಚೆದೆ ರಾತ್ರಿ ಕಳೆಯುವಂತೆ ಮಾಡುವ ಶಕ್ತಿ ಪ್ರಿತಿಗುಂಟು.. “ಪ್ರೀತಿ ಎರಡು ಪುಟ್ಟ ಹೃದಯಗಳ ಮಧ್ಯೆ ಇರುವ ಆಯಸ್ಕಾಂತದ ಬೆಸುಗೆ” “ಅದು ನಿಂತಿರುವುದು ತಿಳುವಳಿಕೆ ಎಂಬ ಸೇತುವೆ ಮೇಲೆ”.
ನಾನಿರುವದು ಸಿಲಿಕಾನ್ ವ್ಯಾಲಿಯಲ್ಲಿ ಬಂದವರಿಗೆ ಭೇದ ಭಾವ ಇಲ್ಲದೆ ಕೈ ಮಾಡಿ ಕರೆದು ತನ್ನ ಮಗ್ಗುಲಲ್ಲಿ ಸಾಕಿ ಬೆಳೆಸುವ ಸುಂದರವಾದ ಮತ್ತು ಬೇಸಿಗೆಯಲ್ಲಿ ತಂಪಾಗಿ ಮಳೆಯೇರುವ ನಗರದಲ್ಲಿ.ನೈಸರ್ಗಿಕವಾಗಿ ಸಮಿ ಮಲೆನಾಡು ನಗರದಲ್ಲಿ ತಂಪಾದ ವಾತಾವರಣ , ಜೇಬಿನಲ್ಲಿ ಕಾಂಚಾಣ ಝಣ್ ಝಣ್ ಶಬ್ದ ಅದರ ಜೊತೆಗೆ ಪೂರ್ವ ಜನ್ಮದ ನಾ ಮಾಡಿದ ಪುಣ್ಯದ ಫಲದಿಂದ ನಿಷ್ಕಲ್ಮಶವಾದ ಪ್ರೀತಿ ಪಡೆದ ನನ್ನದೇ ಲೋಕದಲ್ಲಿ ನಾನಿದ್ದೆ. ನನಗೆ ಕ್ರಿಕೆಟ ತುಂಬಾ ಇಷ್ಟದ ಆಟ. ನಮ್ಮ ಆಫೀಸ್ನಲ್ಲಿ ಕ್ರಿಕೆಟ ಟೂರ್ನಮೆಂಟ್ ಮತ್ತು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಇದ್ದೆ. ಹೀಗಾಗಿ ನಾನು ನಮ್ಮ ಕನ್ನಡ ಗುಂಪಲ್ಲಿ ಚಿರಪರಿಚಿತ!! ಅದರಲ್ಲಿ ಕೆಲವರು ತುಂಬಾನೇ ಆತ್ಮೀಯರು. ನಮ್ಮ ವ್ಯಯಕ್ತಿಕ ವಿಷಯಗಳು ಮುನ್ನೆಲೆಗೆ ಬರುವುದು ಸಾಮಾನ್ಯವಾಗಿತ್ತು. ಊಟಕ್ಕೆ ,ಟಿಫನ್ ಮತ್ತು ಕಾಫಿ ಕುಡಿಯಲು ಯಾವಾಗಲು ಒಟ್ಟಿಗೆ ಹೋಗುವದು. ವಾರಕೊಮ್ಮೆ ಆಫೀಸ್ ಊಟ ತಿಂದು ಬೇಜಾರು ಆದಾಗ ಹೊರಗಡೆ ಹೋಗತಾ ಇದ್ದಿವಿ. ನಮ್ಮಿಬ್ಬರ ಟೀಮ್ ಬೇರೆ ಇದ್ದರೂ ಬಿಡುವಿನ ಸಮಯದಲ್ಲಿ ಒಟ್ಟಿಗೆ ಇರುತ್ತಿದ್ದೆವು. ಒಂದು ದಿವಸ ಕಂಪನಿ ಔಟಿಂಗ್ ಇದ್ದಾಗ ಸ್ವಲ್ಪ ಕ್ಲೋಸ್ ಆಗಿ ಕುಳಿತಿರುವ ರೀತಿ ನೋಡಿ ನನ್ನ ಆತ್ಮೀಯರು ಏನ್ರೀ ಏನೋ ಸದ್ದು ಮಾಡ್ತಾ ಇರುವಂಗೆ ಇದೆ. ನಿನ್ನೆ ನನ್ನ ಕನಸಲ್ಲಿ ಅರಳುತಿದೆ ಜೀವದ ಗೆಳಯ ಹಾಡು ಬಂದು ಹೋಯಿತು. ಸರಕ್ಕನೆ ಪಾರಿವಾಳ ಎಡದಿಂದ ಬಲಕ್ಕೆ ಹೋಯಿತು ಅದು ಶುಭ ಶಕುನ ಸರ ಎಂದು ನನ್ನ ಕಾಲು ಎಳೆಯೋದಕ್ಕೆ ಪ್ರಯತ್ನಪಟ್ಟಿದ್ದರು. ಆದರೆ ನಾನು ಅದರ ಗುಟ್ಟು ಬಿಡುವ ಗೋಜಿಗೆ ಹೋಗಿರಲಿಲ್ಲ.
ನಾವು ಎಷ್ಟು ಬ್ಯುಸಿ ಎಂದರೆ ಶನಿವಾರ ಮತ್ತು ರವಿವಾರ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಯಾವದೇ ರಜೆ ಬಂದರೆ ನಮಗೆ ಹಬ್ಬ.ಮಾಲ್ ಗಳಿಗೆ ಹೋಗೋದು ಸಿನಿಮಾ ನೋಡೋದು,ಬೇರೆ ಬೇರೆ ಡಿಶ್ ಟ್ರೈ ಮಾಡೋದು. ಒಂದು ದಿನ ನಾವು ಎರಡು ದಿವಸದ ಟ್ರಿಪ್ಗೆ ಹೋದಾಗ ನನ್ನ ಎಲ್ಲ ಕಾಲೇಜು ಗೆಳಯರು ತೀರ್ಥ ಕುಡಿಯುವಾಗ ನಾನು ಅವಳಿಗೆ ಮಾಡಿದ ಪ್ರಾಮಿಸ್ ದಿಂದ ಅದರ ಸನಿಹಕ್ಕೂ ಹೋಗದೆ ಪರಿತಪಿಸಿದ್ದುಇದೆ. ನಾವೆಲ್ಲರೂ ನೀರಿನಲ್ಲಿ ಇಳಿದಾಗ ಅವಳಿಗೆ ಆಸೆ ಹುಟ್ಟಿ ಅವಳು ನೀರಿಗೆ ಇಳಿದಿದ್ದು ಮತ್ತೆ ತೀರಾ ಸನಿಹ ಬಂದು ನನ್ನ ಕೈ ಹಿಡಿದು ನೀರಲ್ಲಿ ಈಜಾಡಿದ್ದು ಮರಬೂಮಿಯಲ್ಲಿ ಓಯಾಸಿಸ ಸಿಕ್ಕ ಸಂತೃಪ್ತಿ. ಎಲ್ಲರ ಬಾಯಿಯಲ್ಲಿ “ಅನಿಸುತಿದೆ ಯಾಕೋ ಇಂದು” ಹಾಡು ಮನಸ್ಸಿಗೆ ಮುಟ್ಟೋಗೋಲು ಹಾಕಿದಾಗ ಗಣೇಶ್ ಚಿತ್ರ ಅಂತ ತಾತ್ಸಾರ ಮಾಡಿದ ಎಲ್ಲ ಗೆಳಯರು ಮುಂಗಾರು ಮಳೆ ಚಿತ್ರ ನೋಡಲು ಹೋಗೋಣ ಎಂದಾಗ ನೀನು ಬೇಡ ಎಂದಾಗ ನನಗೆ ಯಾಕೆ ಅಂತ ಗೊತ್ತಾಗಿದ್ದು ಚಿತ್ರ ನೋಡಿದ ಮೇಲೆ. ಮೊದಲೇ ಚಿತ್ರದ ವಿಮರ್ಶೆ ಓದಿದ್ದ ನೀನು ಚಿತ್ರದ ಎಂಡಿಂಗ್ ಸರಿ ಇಲ್ಲ ಅದಕ್ಕೆ ಬೇಡ ಅಂದಿದ್ದು ತಿಳಿದು ನಮ್ಮ ಪ್ರೀತಿಯ ಗಾಂಭೀರ್ಯತೆ ಅರಿತಿದ್ದು ಇದೆ. ಇದನ್ನು ತಿಳಿದು ನಾನು ಎರಡು ದಿವಸ ಏಕಾಂತದಲ್ಲಿ ಇದ್ದದ್ದು ಇದೆ. ಇಬ್ಬರು ಒಟ್ಟಿಗೆ ಹೋಗೋದು ಮತ್ತು ಬಿಲ್ ಕೊಡುವಾಗ ಯಾರಾದರೂ ಕೊಡುತ್ತಿದ್ದು ಮತ್ತು ಒಂದು ಸಂದರ್ಭ ಅವಳ ಮನೆಯ ಫೋನ್ ಕಾಲ್ ಬಂದಾಗ ಅವಳು ನೋವಿನಲ್ಲಿ ಇರುವಾಗ ನಾನು ಅವಳಿಗೆ ಸಂತೈಸಿದ್ದು ಗಮನಿಸಿದ ನನ್ನ ಆತ್ಮೀಯರು ಮತ್ತೆ ಇದರ ಬಗ್ಗೆ ಕೇಳಿದಾಗ ಹೌದು ಸರ್ ನಮ್ಮದು ಫುಲ್ grown ಪ್ರೀತಿ ಸರ. ಅದು ರೆಕ್ಕೆ ಬಿಚ್ಚಿ ಹೃದಯಗಳು ಹಾರಿದ್ದು……. ಅವಾಗ ಸರ್…ಎಂದೇ
ಓದುವ ಸಲುವಾಗಿ ಪ್ರಪಥಮ ಬಾರಿಗೆ ಮನೆಯಿಂದ ಹೊರಬಿದ್ದ ನನಗೆ ಜಲಚರ ನೀರಿನಿಂದ ಹೊರಗೆ ಬಂದ ಸಂಕಟ ನನಗಾಗಿತ್ತು. ಮೊದಲೇ ಊರಿನಿಂದ ದೂರ ಇದ್ದ ನಾನು ಒಬ್ಬಂಟಿಯಾಗಿದ್ದೆ. ಸಮಯ ಕಳೆಯುದರಲ್ಲಿ ಸ್ವಲ್ಪ ಜನ ಗೆಳೆಯರನ್ನು ಸಂಪಾದಿಸಿದ್ದೆ. ರಾತ್ರಿಯೆಲ್ಲಾ ಓದಿ ಮೊದಲ ಇಂಟರ್ನಲ್ ಪಾಸ್ ಮಾಡಲಿಕ್ಕೆ ವಿಲ ವಿಲ ಒದ್ದಾಡಿದ ನೆನಪು ಮಾಡಿಕೊಂಡರೆ ಈಗಲೂ ಭಯ. ನಮ್ಮ ಕಾಲೇಜ್ ಪ್ರಾಯೋಗಿಕವಾಗಿ ಉತ್ತಮ ರೀತಿಯಲ್ಲಿ ಇತ್ತು ಹೀಗಾಗಿ ನಮಗೆ ಗ್ರೂಪ್ ಡಿಸ್ಕಶನ್, ಕೋಡ್ ಹ್ಯಾಕಿಂಗ್ ,ಟೆಕ್ನಿಕಲ್ ಟಾಪಿಕ್ಸ್ ಇರುತ್ತಿದ್ದವು. ನಾಲ್ಕು ವಿದ್ಯಾರ್ಥಿಗಳ ಗುಂಪು ಮಾಡಿದ್ದರು. ಮೂರೂ ಜನ ಹುಡುಗರು ಮತ್ತು ಒಬ್ಬಳು ಹುಡಗಿ ನಮ್ಮ ಗುಂಪಲ್ಲಿ ಇದ್ದರು. ವಾರದಲ್ಲಿ ಸ್ವಲ್ಪ ಸಮಯ ಈ ಗುಂಪಿನ ಜೊತೆ ಕಳೆದುದರಿಂದ ಎಲ್ಲರೂ ಕ್ಲೋಸ್ ಆಗಿದ್ದೆವು ಅದರಲ್ಲಿ ನನ್ನ ಸ್ನೇಹ ಅವಳ ಜೊತೆ ಸ್ವಲ್ಪ್ ಜಾಸ್ತಿನೇ ಆಗಿತ್ತು. ನಮ್ಮ ಸಮಯ ಲೈಬ್ರರಿಗಿಂತ ಜ್ಯೂಸ ಕಾರ್ನರ್ ಅಲ್ಲೇ ಹೋಗಿತ್ತು. ಒಂದು ವರ್ಷದಲ್ಲೇ ಅತಿ ಸೂಕ್ಷ್ಮ ವಿಷಯಗಳು ಯಾರ ಜೊತೆಗೆ ಹಂಚದ ನಾನು ಅವಳ ಜೊತೆ ಹೇಳಿಕೊಂಡಿದ್ದೆ. ಅವಳು ಮೊದಲು ತನ್ನ ವಿಷಯಗಳು ಹೇಳದೇ ಇದ್ದರೂ ಬರ ಬರುತ್ತಾ ನನ್ನ ಜೊತೆ ಹಂಚಿಕೊಂಡು ಒಂದೇ ವೇದಿಕೆಯಲ್ಲಿ ಸೆಟ್ಲ್ಆಗಿ ಪರಿಶುದ್ಧ ಸ್ನೇಹಕ್ಕೆ ತಿರುಗಿತ್ತು. ಏನೆ ಮಾಡಿದರು ಏನನ್ನು ನಿರೀಕ್ಷಿಸದೆ ಮಾಡುವಂತ ಸಮಯ. ಸಂದೇಹಕ್ಕೆ ಆಸ್ಪದ ಇರಲಿಲ್ಲ. ಹುಟ್ಟುಹಬ್ಬಕ್ಕೆ ಇತಿ ಮಿತಿಯಲ್ಲಿ ಕೊಟ್ಟ ಕಾಣಿಕೆಗಳ ಜೊತೆ ಬರೆದು ಕೊಟ್ಟ ವಾಕ್ಯಗಳು “ಕಳೆದ ಹೋದ ಸಮಯಕ್ಕೆ ಚಿಂತಿಸಬೇಡ”, “ವಿಫಲತೆಗಳ ಮೆಟ್ಟಿಲುಗಳೇ ಸಫಲತೆಗೆ ದಾರಿ”, “ಪೂರ್ವಾಗ್ರಹ ಪೀಡಿತವಾಗಿ ಯಾರನ್ನು ಅಳೆಯಬೇಡ”. ಅವಳಿಗೆ ಆಗಲೇ ಜೀವನದ ಏಳು ಬೀಳುಗಳ ಬಗ್ಗೆ ಜ್ಞಾನ ಇತ್ತು.
ಪರೀಕ್ಷೆ ಬಂದಾಗ ಪೂರ್ತಿ ದಿವಸ ಲೈಬ್ರರಿಯಲ್ಲಿ ಓದುತ್ತಾ ಡಿಸ್ಕಶನ್ ಮೂಲಕ ವಿಷಯ ತಿಳಿದುಕೊಂಡು ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಪಾಸಿಗಿದ್ದೆವು. ಯಾರಿಗೆ ಹೆಚ್ಚು ಅಂಕಗಳು ಬಂದಿರಬೇಕು?. ಕಾಲೇಜು ಮುಗಿದ ಕೂಡಲೇ ಬೇಗ ಕೆಲಸ ಹಿಡಿಯಬೇಕು ಅನ್ನೋದು ಒಂದೇ ಚಿಂತೆ. ಪರೀಕ್ಷೆ ಮುಗಿದ ನಂತರ ಅವರ ಊರಿಗೆ ಹೋಗಿ ಅವಳ ಅಪ್ಪ ಅಮ್ಮನನ್ನು ಮಾತಾಡಿಸಿಕೊಂಡು ಬಂದಿದ್ದೆ. ಕೃಷಿ ಅವರ ಉದ್ಯೋಗ ಮತ್ತು ಅವರ ತಂದೆ ತತ್ವಜ್ಞಾನಿಯ ಅಂತೇ ಹೇಳಿದ ಮಾತುಗಳು ಜೀವನದ ಅನುಭವಗಳು. ಅವಳು ಊರಿಂದ ಬರುವಾಗ ತರುತ್ತಿದ್ದ ಕುರುಕಲು ತಿಂಡಿ ನಮ್ಮ ಹಾಸ್ಟೆಲ್ ತಲಪುತ್ತಿತ್ತು. ನಾನು ಹೋದಾಗ ತಂದು ಕೊಟ್ಟಿದ್ದುಇದೆ. ಆದರೂ ಯಾವ ಗೆಳಯರು ನಿಮ್ಮದು ಲವ್ ಏನೋ ? ಅಂತ ಕೇಳಿದ ಉದಾಹರಣೆ ಇಲ್ಲ ಅದೊಂದು ಪರಿಶುದ್ಧವಾದ ಸ್ನೇಹ. ಸ್ನೇಹಕ್ಕೆ ಲಿಂಗಭೇದವಿಲ್ಲ. ಅವಳು ಕೊಟ್ಟಿದ ಇನ್ನೊಂದು ಸೂಪರ್ ಗಿಫ್ಟ್ ಅಂದರೆ ಸೂಟ್ ಮತ್ತು ಟೈ. ಕೊಳ್ಳಲು ದುಡ್ಡು ಇರದ ಕಾಲದಲ್ಲಿ ಅದು ನಮ್ಮ ಕೊನೆಯ ವರ್ಷದ ಬೀಳ್ಕೊಡುವ ಸಮಾರಂಬದಲ್ಲಿ. ಆ ದಿನ ಮರೆಯಲಾದ ದಿನಗಳು. ಸೀರೆ ಉಟ್ಟುಕೊಂಡ ಬಂದ ಹುಡುಗಿಯರ ಸೌಂದರ್ಯ ಯಪ್ಪಾ ಇವಳು ಎಷ್ಟೋ ಮಸ್ತ ಕಾಣ್ಸತ್ತಾಳೋ ಸೀರೆಯಲ್ಲಿ, ಅವಳಿಗೆ ಸೀರೆ ಸೂಟೆ ಆಗಲ್ಲ, ಇನ್ನೊಬ್ಬಳಿಗೆ ಬ್ಲೌಸ್ ಮ್ಯಾಚ್ ಆಗಿಲ್ಲ ದೋಸ್ತ್ ಹೀಗೆ ಹಲವಾರು ಬಿಟ್ಟಿ ಕಾಮೆಂಟ್ಗಳು. ಅದರಲ್ಲಿ ನಮ್ಮ ಗೆಳೆಯನ ಒನ್ ವೆ ಪ್ರೀತಿಯ ಹುಡುಗಿ ಬಂದಾಗ ನಿಮ್ಮದು ಬಂತು ನೋಡು ಎಂದಾಗ ಎಲ್ಲರೂ ಗೊಳ್ಳ ಅಂತ ನಗು! ಸುಮ್ನೆ ಇರ್ರೋ ಯಾಕ ತಲಿ ಕೆಡಸತಿರಿ !! ಕೊನೆಯ ವರ್ಷದ ಪರೀಕ್ಷೆಗಳು ಮುಗಿದು ನಾನು ನಮ್ಮೂರಿಗೆ ಹೋಗಿ ಸಿಲಿಕಾನ್ ವ್ಯಾಲಿ ಗೆ ಹೋಗಬೇಕೆಂದು ಎಲ್ಲರಿಗೂ ಕೊನೆಯ ಭೇಟಿ ಮಾಡಿ ಹೋಗಿದ್ದೆ. ಎಲ್ಲ ಸ್ನೇಹಿತರ ಹಾದಿಯೂ ಅದೇ ಆಗಿತ್ತು ಅದರಲ್ಲಿ ಸ್ವಲ್ಪ ಜನರ ಕನಸುಗಳು ಬೇರೆ ಆಗಿದ್ದವು. ಎಲ್ಲರೂ ತಮ್ಮ ಕನಸುಗಳ ಬೆನ್ನತ್ತಿ ಹೋಗುವ ಸಮಯ ಅದಾಗಿತ್ತು. ಕನಸನ್ನು ಈಡೇರಿಸಿ ತಮ್ಮ ಕಾಲು ಮೇಲೆ ನಿಲ್ಲುವ ತವಕ. ಅಂದು ಅವಳು ಸೀರೆಯಲ್ಲಿ ಬಂದಿದ್ದಳು “ಜಕ್ಕಣ್ಣನ ಶಿಲ್ಪದ ಅಂದವು ಇತ್ತು ಎಂದು ನಾ ಹೇಳಲಾರೆ ಆದ್ರೆ ಅವಳಲ್ಲಿಇರುವ ಗುಣಗಳು ಆ ಶಿಲ್ಪವನ್ನೇ ಕರಗಿಸುವ ಶಕ್ತಿ ಇದೆ ಅಂತ ಗೊತ್ತಿತ್ತು” ಅಂದು ಒಳಒಳಗೆ ಅನಿಸಿದ್ದು “ಸುಳ್ಳಾದರು ನುಡಿ ಹೆಣ್ಣೇ, ನಾ ನಿನ್ನ ಪ್ರಿಯತಮೆ ಎಂದು, ಆ ಸುಳ್ಳಲೇ ನಾ ಬಾಳ್ವೆ “ ನನ್ನಲ್ಲಿ ಹುಟ್ಟಿದ್ದ ಪ್ರೀತಿ ಅವಳಲ್ಲಿ ಹುಟ್ಟಿದ್ದು ನನ್ನ ಅರಿವಿಗೆ ಬಾರದೆ ಹೋಗಿತ್ತು. ತಿಳಿನೀರಲ್ಲಿ ಮುತ್ತಿನ ಹೊಳಪನ್ನು ಗುರುತಿಸಿದ ನಾನು ಮೀನಿನ ವೈಯಾರದ ನಡಿಗೆ ಸೂಕ್ಷ್ಮವಾಗಿ ಗಮನಿಸಿಬೇಕಾಗಿತ್ತು!!
ಆತ್ಮೀಯ ಗೆಳೆಯನಿಗೆ ಹೇಳುವಾಗು ನೋಡಿ ಸರ ಅದಾದ ಮೇಲೆ ನಾವು ಈ ನಗರಕ್ಕೆ ಬಂದು ಒಂದೇ ಏರಿಯಾದಲ್ಲಿ ಇದ್ವಿ. ಎರಡು ಮೂರೂ ತಿಂಗಳು ಕಳೆಯುದರಲ್ಲೇ ಅವಳಿಗೆ ಕೆಲಸ ಸಿಕ್ಕಿತ್ತು. ನನಗೆ ಕೆಲಸ ಸಿಗುವವರೆಗೆ ಯಾವತ್ತೂ ನನಗೆ ದುಡ್ಡಿನ ಕೊರೆತೆ ಇದೆ ಎಂದು ಅನಿಸಿರಲಿಲ್ಲ. ನಮ್ಮ ಗುಂಪಲ್ಲಿ ಇದ್ದ ಎಲ್ಲರಿಗೂ ಕೆಲಸ ಸಿಕ್ಕು ತಮ್ಮದೇ ಕನಸುಗಳು ಬೆನ್ನತ್ತಿ ಗುರಿ ಮುಟ್ಟಿದ ಸಮಯ ಹೀಗಾಗಿ ಎಲ್ಲರಿಗೂ ಬಲಿಷ್ಠ ರೆಕ್ಕೆಗಳು ಬಂದಿದ್ದವು. ಒಂದು ರಾತ್ರಿ ಸ್ನೇಹಿತನ ಹುಟ್ಟುಹಬ್ಬ ಎಲ್ಲರೂ ಕೂಡಿಕೊಂಡು ಆಚರಣೆ ಮಾಡಿ, ಊಟಮುಗಿಸಿಕೊಂಡು ಅವಳನ್ನು ಬಿಡಲು ಹೋದಾಗ ಹಲೋ ನಿನಗೆ ಯಾವತ್ತೂ ನನ್ನ ಪ್ರೀತಿ ಮಾಡಬೇಕಂತ ಅನ್ಸಿಲ್ವಾ ಎಂದಾಗ . ನಾನು ಪ್ರೊಪೋಸ್ ಮಾಡಿ ನೀನು ಇಲ್ಲ ಇದೆಲ್ಲ ಬೇಡ ಆಗೋದಲ್ಲ ನಮ್ಮದು ಅಂತರ್ಜಾತಿ ಮದುವೆ ಆಗೋದು ಕಷ್ಟ. “ನನಗೆ ಹೀಗೆ ಆಗುತ್ತೆ ಅಂತ ಅನ್ನಕೊಂಡಿರಿಲಿಲ್ಲ ಮತ್ತು ಇದು ನನಗೆ ಇಷ್ಟಾನು ಇಲ್ಲ” ಅಂತ ನೀನು ಹೇಳ್ತೀಯಾ ಅಂದಕೊಂಡಿದ್ದೆ!! ಅಂದು ಹೃದಯಗಳು ರೆಕ್ಕೆ ಬಿಚ್ಚಿ ಹಾರಿದ್ದವು. ರಕ್ಕೆ ಬಂದ ಹಕ್ಕಿಗೆ ಹಿಡಿಯುವರಾರು ಹಾಗೆ ರೆಕ್ಕೆಯಿದ್ದ ನಮಗೆ ಸ್ನೇಹದಿಂದ ತಿರುಗಿದ ಪ್ರೀತಿಯನ್ನು ನಿಲ್ಲಿಸುವವರಾರು. ವಿಜೃಂಬಿಸುತ್ತಿದ್ದ ನಮ್ಮ ಪ್ರೀತಿಗೆ ಒಂದು ಕಂಡೀಶನ್ ಇತ್ತು. ನಮ್ಮ ಮೊದಲ ಆದ್ಯತೆ ಮನೆಯ ಜವಾಬ್ದಾರಿಗಳನ್ನು ನಿಭಾಯಿಸೋದು ಆಮೇಲೆ ನಮ್ಮ ದಾರಿ ನಮಗೆ.
ಮೊಬೈಲ್ ಕಾಲ ಇರೋದರಿಂದ ರಾತ್ರಿಯೆಲ್ಲಾ ಚಾಟ್ ಮಾಡೋದು ಮತ್ತು ಮೆಸೇಜ್ ಗಾಗಿ ಕಾಯೋದು ,ಬಂದಾಗ ನಿಟ್ಟುಸಿರು ಬಿಡೋದು ಇವೆಲ್ಲ ಮಾಮೂಲಿ ಆಗಿತ್ತು. ಒಂದು ಸಿನೆಮಾ ನೋಡುವಾಗ ಮೊದಲ ಸ್ಪರ್ಶದ ಅನುಭವ. ಸಿಗದೇ ಇರುವದನ್ನು ಅನುಭವಿಸಬೇಕು ಎಂಬ ಆಸೆ ಇವೆಲ್ಲ ವಯಸ್ಸಿನಲ್ಲಿ ಇರಬೇಕಾದ ಬಯಕೆಗಳು. ಒಂದು ಹೇಳೋದನ್ನು ಮರೆತಿದ್ದೆ ಅವಳಿಗೆ ಒಬ್ಬ ತಂಗಿಯು ಇದ್ದಳು. ಮೂರ್ನಾಲ್ಕು ವರ್ಷಗಳ ಕಳೆದ ಮೇಲೆ ನಮ್ಮ ಮನೆಯಲ್ಲಿ ಮದುವೆ ಮಾಡಿಕೊ ಎಂದು ಒತ್ತಡ ಪ್ರಾರಂಭ.. ಎರಡು ವರ್ಷ ತಳ್ಳಿದ ನನಗೆ ಮುಂದೆ ತಳ್ಳೋದು ಕಷ್ಟ ಆಗಿತ್ತು ಅದಕ್ಕೆ ದೈರ್ಯವಾಗಿ ನನ್ನ ಪ್ರೀತಿಯನ್ನು ಅವರ ಮುಂದೆ ಹೇಳಿ ಅವಳನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಮುಗಿಸಿದ್ದೆ. ಇದೊಂದು ಅಂತರಜಾತಿ ವಿವಾಹ ಆಗಿದ್ದರಿಂದ ಅವಳ ಕಡೆಇಂದ ಭಾರಿ ಪ್ರತಿರೋಧ ಬಂದಿತ್ತು. ನಮ್ಮ ಮನೆಯಲ್ಲಿ ಸಹಿತ ಯಾರು ಒಪ್ಪಿರಲಿಲ್ಲ. ಇಬ್ಬರು ಎಲ್ಲದಕ್ಕೂ ಸೈ ಅನ್ನುವ ಮನಸ್ಥಿತಿ ಹೊಂದಿದ್ದರೂ ನಮ್ಮ ಜವಾಬ್ದಾರಿ ನಮ್ಮ ಅರಿವಿಗೆ ಇತ್ತು. ನನಗೆ ಹೆತ್ತು ಶಿಕ್ಷಣ ಕೊಟ್ಟ ತಂದೆ ತಾಯಿ ಮತ್ತು ನನ್ನ ಒಡಹುಟ್ಟಿದವಳು ನನ್ನ ಪ್ರೀತಿಯಿಂದ ಅವರಿಗೆ ನೋವು ಆಗುವದಿದ್ದರೇ ನನಗೆ ಈ ಮದುವೆ ಬೇಡ ಎಂದು ನಿರ್ಧರಿಸಿಬಿಟ್ಟಳು!! ಸ್ವಲ್ಪ ವಯ್ಯಸ್ಸಿನ ಅನುಭವದ ಕೊರೆತೆ ಇಂದ ಬಂದ ಸಮಸ್ಸೆಗೆ ಪರಿಹಾರ ಕಂಡು ಹಿಡಿಯದೇ ಸ್ವಲ್ಪ್ ವೈಮನಸ್ಸು,ಮನಸ್ತಾಪಗಳು ಹುಟ್ಟಿದ್ದವು. ಸಮಾಧಾನದಿಂದ ಇಬ್ಬರು ಕುಳಿತು ನಮ್ಮ ಸಮಸ್ಸೆಯನ್ನು ನಾವೇ ಮಾತಾಡಿ ಅದಕ್ಕೊಂದು ಮಾರ್ಗ ಸಿಗದೇ ಜಗಳವಾಡಿ ಬೇರ್ಪಟ್ಟಿದ್ದೆವು. ಯಾವತ್ತೂ ಅವಳ ಕಡೆಯಿಂದ ಒಂದು ಮೆಸೇಜ್ ಬಾರದೆ ಹೋದಾಗ ನಾನು ಕಳೆದ ಏಕಾಂಗಿ ರಾತ್ರಿಗಳು ಅವಳು ಕಳೆದಿದ್ದಳು!!
ಝೇಂಕರಿಸುವ ಪ್ರೀತಿ ಕೈ ಕೊಟ್ಟಾಗ ನನ್ನ ಪಾಲಿಗೆ ಲೋಕ ಶೂನ್ಯವಾಗಿತ್ತು. ಯಾಕೆ ಪರಿಶುದ್ಧವಾದ ಸ್ನೇಹ ದಿವಾಳಿ ಮಾಡೋದಿಕ್ಕೆ ಇದೆಲ್ಲಾ ಹುಟ್ಟಿತ್ತಾ ಎಂದು ನೋವು ಅನುಭವಿಸಿದ ದಿನಗಳು.ಏಕಾಂಗಿಯಾಗಿ ಕಳೆದ ದಿನಗಳ ನಂತರ ಪುಟಿದೆದ್ದು ಮತ್ತೆ ಸಹಜ ಸ್ಥಿತಿಗೆ ಮರಳಿ ಮತ್ತೆ ಕೆಲಸದಲ್ಲಿ ಏಳಿಗೆ ಹೊಂದುವ ಪ್ಲಾನ್ಗಳು ಮಾಡಿಕೊಂಡು ಹೀಗೆ ನನ್ನ ಕಂಪನಿ ಬದಲಾವಣೆ ಮಾಡಿದ್ದೆ. ಗೆಳಯರ ಮದುವೆ ಭರಾಟೆ ಹೀಗೆ ಮದುವೆಗೆ ಹೋಗುವದು ಮತ್ತು ಉಳಿದ ಬ್ಯಾಚಲರ್ ಜೊತೆ ಹರಟೆಯಲ್ಲಿ ನನ್ನ ನೆನಪುಗಳು ಮಾಸಿ ಹೊಸ ಹುರುಪು ಬಂದಿತ್ತು. ಅವಳು ನಮ್ಮ ಗುಂಪಿನ ಜೊತೆ ಇರ್ತಾ ಇದ್ದಳು ಆದರೆ ಯಾವದೇ ಮೆಸೇಜ್ ಇಲ್ಲ ಮತ್ತು ಸಿಕ್ಕಾಗ ಮುಖಕ್ಕೆ ಮುಖ ಕೊಟ್ಟು ಮಾತಾಡಿದ್ದು ತೀರಾ ಕಡಿಮೆ. ನಾನು ಹುಡುಗಿಯನ್ನು ನೋಡಲು ಶುರು ಮಾಡಿದ್ದೆ ಅಷ್ಟ್ರಲ್ಲಿ ೭ ತಿಂಗಳು ಕಳೆದಿದ್ದವು. ನನ್ನ ಮೊಬೈಲ್ಗೆ ಒಂದು ಸಂದೇಶ ಬರುತ್ತೆ “ನನ್ನನು ಕ್ಷಮಿಸು ಮತ್ತುನಿನ್ನ ಜೊತೆ ಮಾತಾಡಬೇಕು” ಆದರೆ ನಾನು ಅವತ್ತು ಉತ್ತರ ಕೊಟ್ಟಿರಲಿಲ್ಲ. ಮತ್ತೆ ನನ್ನ ಗುಂಪಿನ ಗೆಳೆಯನ ಮೂಲಕ ಸಂದೇಶ ಬಂದಿತ್ತು. ಹಲವಾರು ದಿನಗಳ ನಂತರ ಮತ್ತು ಗೆಳಯರ ಸಮ್ಮುಖದಲ್ಲಿ ಮತ್ತೆ ಒಂದಾಗಿದ್ದೆವು. ನಾನು ಹೇಳಿದ್ದೆ ಸ್ವಲ್ಪ ಸಮಾಧಾನನಿಂದ ಇರಬೇಕಿತ್ತು “ನನ್ನನ್ನು ಕ್ಷಮಿಸು” ಎಂದು.ಹೇಗೆ ಬಿಸಿಲಿನ ತಾಪಕ್ಕೆ ಬೇರೆಯಾದ ಹಳಿಯ ಕೊಂಡಿ ಮತ್ತೆ ಸರಿಪಡಿಸಿದಾಗ ರೈಲಿನ ವೇಗದ ಬದಲಾವಣೆ ಆಗದು ಹಾಗೆ ಮರುಹುಟ್ಟು ಪಡೆದ ನಮ್ಮ ಪ್ರೀತಿಯ ವೇಗೆಕ್ಕೆ ಭಂಗವಿರಲಿಲ್ಲ. ಸ್ವಲ್ಪ ತಿಂಗಳಲ್ಲೇ ನಮ್ಮ ಕಂಪನಿಗೆ ಸೇರಿದ್ದಳು. ಮತ್ತೆ ಅಮೋಘವಾಗಿದ್ದ ಪ್ರೀತಿ ಹಳಿಯ ಮೇಲೆ ಬಂದು “ಫುಲ್ ಗ್ರೋನ ಆಗಿತ್ತು”. ಅಂದು Pantry ಅಲ್ಲಿ ಕೊಟ್ಟ ಸಿಹಿಮುತ್ತು ಮಿಲಿ ಸೆಕೆಂಡ್ಸ್ ನಲ್ಲೆ ಮುಗಿದಿತ್ತು. ನಮ್ಮ ರೂಮಲ್ಲಿ ಕೊಡದ ಮುತ್ತು ಇಲ್ಲಿ ಕೊಟ್ಟಾಗ ನನಗೆ ಕಾಲು ಎಳೆಯುವ ಸಲುವಾಗಿ ಕೊಟ್ಟ ಸಿಹಿಮುತ್ತು ಅಂತಾನೂ ಗೊತ್ತಿತ್ತು! ….. ನೋಡಿ ಸರ್ ಒಟ್ಟಾರೆ ನಮ್ಮ ಪ್ರೀತಿ ಅಮೋಘವಾದದ್ದು. ಸದ್ಯದರಲ್ಲೇ ಮದುವೆ ಆಗುತ್ತೇವೆ ಎಂದು ನಮ್ಮ ನೆನಪಿನ ಪುಟಗಳನ್ನೂ ತರೆದಿಟ್ಟಿದ್ದೆ
ಹಕ್ಕ ಬುಕ್ಕರ ಗುರುಗಳಾದ ವಿದ್ಯಾರಣ್ಯರ ಆಶೀರ್ವಾದ ಪಡೆದುಕೊಂಡು ಬೆಳಿಗ್ಗೆ ಶಂಖ ಊದಿದ ನಂತರ ನಿಮ್ಮ ಕೆಲಸ ಪ್ರಾರಂಭ ಮಾಡಿ ಎಂದು ಹೇಳಿದ್ದರಂತೆ ಆದರೆ ಇವರು ಊದುವಕ್ಕಿಂತ ಮುಂಚೆ ಇನ್ನಾರೋ ಊದಿದ ಮೇಲೆ ಹಕ್ಕ ಬುಕ್ಕರ ತಮ್ಮ ಕೆಲಸ ಪ್ರಾರಂಭ ಮಾಡಿದ್ದರು ಅನ್ನೋದು ಇತಿಹಾಸ. ಮುಂದೆ ಇಡೀ ದೇಶವನ್ನು ಕೊಂಡಾಡಿದ ವಿಜಯನಗರ ಸಾಮ್ರಾಜ್ಯ ಕಾಲಾನಂತರ ಅಮೋಘವಾಗಿದ್ದ ರಾಜ್ಯಭಾರ ವಿಜಯಪುರದ ಸುಲ್ತಾನರಿಂದ ಅಧಪತನ ಹೊಂದಿತ್ತು. ನಿಜವಾದ ಶಂಖ ಊದಿದ ನಂತರ ಸಾಮ್ರಾಜ್ಯ ಕಟ್ಟುವ ಕೆಲಸ ಪ್ರಾರಂಭ ಮಾಡಿದ್ದರೇ ?
ನಮ್ಮ ಮುಂದಿರುವ ಗುರಿ ಮದುವೆ ಆದಷ್ಟು ಬೇಗ ಆಗಬೇಕು. ಎರಡು ಕಡೆಯಿಂದ ಒಪ್ಪಿಗೆ ಸಿಕ್ಕಿತ್ತು ಮತ್ತು ಅವರ ತಂಗಿಯ ಮದುವೆ ಆಗಿತ್ತು. ಅದಕ್ಕೆ ನಮಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತೋನೋ? ಹದಿನೈದು ದಿವಸದ ಮೇರೆಗೆ ಅವಳು ಸಿಂಗಪುರಕ್ಕೆ ಹೋಗಿದ್ದಳು.ಒಂದು ದಿನ ಬಿಟ್ಟಿರದ ನನಗೆ ಹದಿನೈದು ದಿವಸ ಎಂದರೆ ವರ್ಷಗಳೇ ಕಳೆದ ರೀತಿ ಅನುಭವ. ಅವಳಿಗೆ ಒಂದು ಡಾಕ್ಯುಮೆಂಟ್ ಬೇಕಿತ್ತು ಅವಳ ರೂಮಿಗೆ ಗೆ ಹೋಗಿ ಅದನ್ನು ತರಬೇಕಿತ್ತು. ಅವಳ ರೂಮಿನ ಕೀ ನನ್ನ ಹತ್ತಿರ ಇತ್ತು. ಅವಳ ಫೈಲ್ ತೆರೆದು ತಗೆದುಕೊಂಡು ಬರುವಾಗ ಹಾಗೆ ಕ್ಯೂರಿಯೋಸಿಟಿ ಗೆ ಅವಳ ಅಂಕಗಳ ಪಟ್ಟಿ ನೋಡುತ್ತಾ ಇದ್ದೆ.ಮೊದಲೆರಡು ವರ್ಷ ನನಗಿಂತ ಕಡಿಮೆ ಇದ್ದ ಅಂಕ ಕೊನೆಯ ಎರಡು ವರ್ಷದಲ್ಲಿ ನನಗೆ ಸೈಡ್ ಹೊಡೆದಿದ್ದಳು. ಹಾಗೆ ಫೈಲಿನ ಕಡೆಯ ಪುಟದ ಒಳಭಾಗದ ಪತ್ರ ನೋಡಿ ಓದಿದಾಗ ನಾನು ಎಲ್ಲಿ ಇದ್ದೇನೆ ಏನು ಓದುತ್ತಾ ಇದ್ದೇನೆ ಅನ್ನೋದೇ ಮರೆತು ಹೋಗಿತ್ತು. ಅಂದು ಬ್ರೇಕ್ ಅಪ್ ಆದ ನೋವಿಗಿಂತ ಇದರ ನೋವು ಅನ್ ಲಿಮಿಟೆಡ್ ಆಗಿತ್ತು. ನಿಜವಾಗಲೂ ನನ್ನ ಇಡೀ ದೇಹ ಬೆವರಿತ್ತು. ನನ್ನ ನಿರ್ಧಾರ ಮತ್ತು ಏನು ಕಳೆದುಕೊಳ್ಳುತ್ತೇನೆ ಎಂಬ ಭಯ ಆವರಿಸಿತ್ತು ಅಷ್ಟೇ ಜೆಂಟಲ್ಮೆನ್ ಕೋಪ ನೆತ್ತಿಗೇರಿತ್ತು. ತಿಳಿನೀರಲ್ಲಿ ಕಲ್ಲೇ ಎಸೆದಾಗ ನೀರಿನ ತೆರೆಗೆ ಮುತ್ತಿನ ಹೊಳಪು ಮಂಕಾಗಿತ್ತು.
ಹದಿನೈದು ನಂತರ ಬಂದ ಬಳಿಕ ನಾನು ಕೇಳಿದೆ “ನನ್ನಿಂದ ಏನಾದರೂ ಮುಚ್ಚಿಟ್ಟಿದ್ದೀಯಾ?”. ಉತ್ತರ ಇಲ್ಲ ಅದು ನೀನು ಕಲ್ಪಿಸಿಕೊಳ್ಳಲೂಬಾರದು. ಎಷ್ಟೇ ಕೇಳಿದರು ಅದೇ ಉತ್ತರ. ಇದು ಏನಿದು ಎಂದು ಪತ್ರ ತೋರಿಸಿದಾಗ ಯಾವದೇ ಉತ್ತರ ಅವಳ ಬಳಿ ಇರಲಿಲ್ಲ. ಮತ್ತೆ ಅದರ ಬಗ್ಗೆ ನನಗೆ ಸವಿಸ್ತಾರವಾಗಿ ಹೇಳುವ ಪ್ರಯತ್ನ ಮಾಡಲಿಲ್ಲ. ನಾನು ಅಲ್ಲಿಂದ ಹೊರಟೆ ಆದರೆ ಹೊರಡುವಕ್ಕಿಂತ ಮುಂಚೆ ಅವಳ ಮುಖದಲ್ಲಿ ಎಲ್ಲೊ ನಾನು ಸೋತೆ ಎಂಬ ಭಾವ ಕಾಣುತ್ತಿತ್ತು.
ಮರುದಿವಸ ಆಫೀಸ್ನಲ್ಲಿ ಮೆಸ್ಸಂಜೆರ್ ಅಲ್ಲಿ ಚಾಟ್ ಮಾಡುವಾಗ “ನನ್ನ ಪ್ರೀತಿ ಹೀಗೆ ಕೊನೆಯಾಗುತ್ತೆ ಎಂದು ಕನಸಿನಲ್ಲೂ ಕಂಡಿರಲಿಲ್ಲಾ” ನಾನು ನಿನ್ನನ್ನು ಪ್ರಶ್ನಿಸುವದಿಲ್ಲ,ಏನು ಕೇಳುವದಿಲ್ಲಾ ,ಇವತ್ತೇ ಕೊನೆ ಮುಂದೆ ನಿನಗೆ ಮಾತನಾಡಿಸೋದು ಇಲ್ಲ, ತಪ್ಪಿನ ಅರಿವು ನನಗಾಗಿದ್ದರು ಅದು ಇಲ್ಲಿ ವ್ಯರ್ಥ . ಪರಿಶುದ್ದವಾದ ನಮ್ಮ ಸ್ನೇಹ. ನಿಷ್ಕಲ್ಮಶವಾದ ನಿನ್ನ ಪ್ರೀತಿ ಅಮೋಘ ಮತ್ತು ಅಮರ ಎಂದು ಹೇಳಿ offline ಆಗಿಬಿಟ್ಟಳು. ಮುಂದೆ ಎಂದು ದೈಹಿಕವಾಗಿ ನನಗೆ ಕಾಣಸಿಲ್ಲ. ಅವಳು ಬೇರೆ ದೇಶದಲ್ಲಿ ಇರೋದು ನನಗೆ ಗೊತ್ತು.
ನಾನು ಮಾಡಿದ ತಪ್ಪುಗಳಿಗೆ ಮತ್ತು ಅವಿವೇಕತನಕ್ಕೆ ಬುದ್ದಿ ಹೇಳಿದವಳು ತನ್ನ ತಪ್ಪಿನ ಅರಿವು ವ್ಯರ್ಥ ಎಂದಳು.
ಹೌದು ಅವಳು ಹೇಳಿದ್ದು ಸತ್ಯ ನಮ್ಮ ಸ್ನೇಹ ಪರಿಶುದ್ಧವಾಗಿತ್ತು ಮತ್ತು ಪ್ರೀತಿ ಬಲವಾದ ಕಾರಣದಿಂದ ಸಿಗದೇ ಇರಬಹುವುದು. ಆದರೆ “ಪ್ರೀತಿ ಅಮೋಘ” ಮತ್ತು ಅಮರ. ಪೂರ್ವ ಜನ್ಮದಲ್ಲಿ ನಾ ಮಾಡಿದ ಪಾಪದ ಫಲವೇನು? ಗೊತ್ತಿಲ್ಲ!
Categories: Stories/ಕಥೆಗಳು
