
ಎರಡು ಹೃದಯಗಳ ಮಧ್ಯೆ ಪ್ರೀತಿ ಹುಟ್ಟಿ ಮದುವೆ ಆಗದೆ ಬೇರೆಯಾಗುತ್ತಾರೆ. ಇನ್ನೊಂದು ಕಡೆ ಪ್ರೀತಿ ಮಾಡಿ ಮದುವೆ ಆಗುತ್ತಾರೆ. ಆದರೆ ಇದರ ಮದ್ಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡದೆ ಮದುವೆ ಆಗುತ್ತಾರೆ. ಅದಕ್ಕೆ ಅನ್ನೋದು ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತವೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಸಮುದ್ರ ಎಂಬ ಸಂಸಾರದಲ್ಲಿ ದೊಡ್ಡ ದೊಡ್ಡ ಅಲೆಗಳು ಬಂದು ಅಪ್ಪಳಿಸಿದಾಗ ನಾವಿಕನ ಸಮಯೋಚಿತ ನಿರ್ಧಾರಗಳಿಂದ ದಡವನ್ನು ಸೇರುವ ರೀತಿ ಇಬ್ಬರ ಹೊಂದಾಣಿಕೆ ಸರಿ ಇದ್ದರೇ ಸ್ವರ್ಗದಲ್ಲಿ ನಿಶ್ಚಯವಾದ ಮದುವೆಗೆ ಸಾರ್ಥಕತೆ ಬರುತ್ತೆ ಎಂದು ದೊಡ್ಡವರು ಹೇಳಿದ ಮಾತು!! ಯಶಸ್ವಿ ಮದುವೆಗೆ ಇಬ್ಬರು ಪರಿಪೂರ್ಣ ವ್ಯಕ್ತಿಗಳೇ ಇರಬೇಕು ಎಂದೇನಿಲ್ಲ. ಆದರೆ ಪರಿಪೂರ್ಣತೆಯ ಜೀವನಕ್ಕೆ ಪರಿಪೂರ್ಣತೆ ಕಲಿತುಕೊಳ್ಳುವ ಮನಸ್ಸುಗಳು ಇದ್ದರೇ ಸಾಕಲ್ವೇ? ಪರಿಪೂರ್ಣತೆ ಮನಸ್ಸಿನಲ್ಲಿ ಅಗಾದವಾದ ಇದ್ದ ಪ್ರೀತಿ ಒಂದೊಂದು ಸಾರಿ ವ್ಯಕ್ತವಾಗದೆ ಉಳಿದು ಬಿಡಬಹುದು.
ರೈಲು ಹೊರಡುವ ಸಮಯ, ಹೊರಟೆ ಬಿಟ್ಟಿತ್ತು ಲೇಟ್ ಲತೀಫಗಳು ಬರುವ ಸಮಯ ಎದ್ದನೋ ಬಿದ್ದನೋ ಎನ್ನುವ ಹಾಗೆ ರೈಲು ಹತ್ತುತ್ತಾ ಇದ್ದರು. ಯಾರಿಗೆ ಗೊತ್ತು ಯಾವ ಕೆಲಸದಲ್ಲಿ ಸಿಕ್ಕಿ ತಡವಾಗಿ ಬಂದಿದ್ದರು!! ಆದರೂ ಊರಿಗೆ ಹೋಗುವ ಕಾತುರದಲ್ಲಿ ರೈಲು ಸಿಕ್ಕೇಬಿಟ್ಟಿತು ಎಂಬ ಖುಷಿ. ಅದರಲ್ಲಿ ಒಬ್ಬ ಅಜ್ಜ ಏರುವಾಗ ೩ ಬ್ಯಾಗುಗಳ ಸಮೇತ ನೋಡಿ ಚಂಗನೆ ಹಾರಿ ಸಹಾಯಕ್ಕೆ ಹೋದ ನಾನು ಅವರ ಚೀಲಗಳನ್ನು ಹಿಡಿದು ಎಲ್ಲಿ ನಿಮ್ಮ ಜಾಗ ಎಂದು ಕೇಳಿದ್ದಾಗ ಸೀಟ್ ೩೩ ಎಂದರು ನನ್ನ ಸೀಟು ೩೨. ಅವರಿಗೆ ಸುಮಾರು ೬೦ ವಯಸ್ಸು ದಾಟಿತ್ತು ಮತ್ತು ಎಲ್ಲ ಚೀಲಗಳನ್ನು ಸೀಟ್ ಕೆಳಗಡೆ ಇಡುವವರೆಗೆ ಅವರಿಗೆ ಸಮಾಧಾನ ಇರಲಿಲ್ಲ. ಅಚ್ಚುಕಟ್ಟಾಗಿ ಇಟ್ಟು ಚೀಲದಲ್ಲಿ ಕೈ ಹಾಕಿ ೫ ನಿಮಿಷಗಳ ಹಿಂದೆ ಮುಂದೆ ನೋಡುವಾಗ ಏನ್ರೀ ದುಡ್ಡು ಅಥವಾ ಮುಖ್ಯವಾದದನ್ನು ಮರೆತಿದ್ದೀರಾ ಎಂದು ಕೇಳಿದಾಗ ಇಲ್ಲ ಎಂದು ತಲೆ ಅಲ್ಲಾಡಿಸುತ್ತಾ ಅವರ ಚೀಲದಲ್ಲಿ ಇದ್ದ ಹಳೆಯ ಪೇಪರ್ ತಗೆದು ಅದರ ಸಲ್ಪ ಭಾಗವನ್ನು ಹರಿದು ಸೀಟನ್ನು ಸ್ವಚ್ಛ ಮಾಡಿ ಕುಳಿತು “ತಮಾ ಚಲೋ ಮಾಡಿದಿ ನನ್ನ ಚೀಲಗಳನ್ನೂ ಎತ್ತಿ ಇಟ್ಟು ಇಲ್ಲ ಅಂದರೆ ನನಗೆ ಗೋಳು ಆಗತಾ ಇತ್ತು”. ಅವರಿಗೆ ವಯಸ್ಸಾಗಿತ್ತು ನಿಜ ಆದರೆ ಅವರ ಮಾಡಿದ ರೀತಿಗಳು ನಾನು ಅಪಹಾಸ್ಯ ಮಾಡಿ ಹೇಳ್ತಾ ಇಲ್ಲ. ಅವರು ಎಲ್ಲವೂ ಸಾವಧಾನವಾಗಿ,ಕಾಳಜಿ ವಹಿಸಿ ಎಲ್ಲ ಚೀಲಗಳನ್ನು ಮತ್ತು ಎಷ್ಟು ಬೇಕು ಅಷ್ಟೇ ಪೇಪರ್ ತಗೆದುಕೊಂಡು ತಮ್ಮ ಕೆಲಸ ಮಾಡಿ ಮುಗಿಸಿದ್ದರು. ಬೆಳಿಗ್ಗೆ ತಗೆದುಕೊಳ್ಳಲಿಕ್ಕೆ ಸಲೀಸಾಗಲಿ ಎಂದು ಚೀಲಗಳನ್ನು ಎಡ ಬದಿ ಇಟ್ಟೆ ಎಂದರು. ನಾವು ಸ್ವಚ್ಛ ಮಾಡದೆ ಹಾಗೆ ಕೂಡ್ತಾ ಇದ್ವಿ ಏನೋ? ಅವರಿಗೆ ಇರದ ಅವಸರ ನಮಗೆ ಹೆಚ್ಚಿಗೆ ಇರ್ತಿತ್ತು ಅನಿಸುತ್ತೆ! ಅವರ ಮುಂದಾಲೋಚನೆಗೆ ಅವರೇ ಸಾಟಿ
ಸಿಲಿಕಾನ್ ವ್ಯಾಲಿಯ ರಸ್ತೆಗಳು ಯಾವಾಗಲೂ ಸಂದು ಬಿಡದೆ ನದಿ ಮಳೆಗಾಲದಲ್ಲಿ ಉಕ್ಕಿ ಹರಿಯುವ ರೀತಿ ಇರುತ್ತೆ. ಇದರ ಅನುಭವ ಇದ್ದ ನನಗೆ ಉಕ್ಕಿ ಹರಿಯುವ ನದಿ ದಾಟುವುದು ಮತ್ತೆ ನಗರದ ರಸ್ತೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ಮುಟ್ಟೋದು ಒಂದು ದೊಡ್ಡ ಸವಾಲು. ನದಿ ದಾಟುವ ಅನುಭವ ಇಲ್ಲದೆ ಹೋದರು ದಟ್ಟ ಸಂದಣಿ ರಸ್ತೆಯ ಬಗ್ಗೆ ಗೊತ್ತಿತ್ತು ಅದಕ್ಕಾಗಿ ಅವತ್ತು ನಾನು ಬ್ಯಾಗ ಸಮೇತ ಆಫೀಸಿಗೆ ಹೋಗಿದ್ದೆ. ಅದೇ ವರ್ಷ ಮದುವೆ ಆಗಿದ್ದ ನಾನು ಹೆಂಡತಿ ೧೫ ದಿನದ ಮಟ್ಟಿಗೆ ತನ್ನ ತವರುಮನೆಗೆ ಹೋಗಿದ್ದಳು. ದೀಪಾವಳಿ ಹಬ್ಬ ನಿಮಿತ್ಯವಾಗಿ ನಾನು ಊರಿಗೆ ಹೊರಟಿದ್ದೆ .
ಅವತ್ತು ಆಫೀಸ್ ಇಂದ ಬೇಗನೆ ಹೊರಟೆ ಎಲ್ಲರು ಹಬ್ಬಕ್ಕೆ ತಮ್ಮ ಊರಿಗೆ ಹೊರಟಿದ್ದರು ಅದಕ್ಕೆ ಅವತ್ತು ತುಂಬಾ ಟ್ರಾಫಿಕ್. ಹೇಗೋ ಬೇಗ ಬಿಟ್ಟ ನಾನು ಮುಂಚಿತವಾಗಿ ಸ್ಟೇಷನ್ಗೆ ಹೋಗಿದ್ದ ಖುಷಿಯಲ್ಲಿ ಇದ್ದ ನನಗೆ ನನ್ನ ಮುಂದೆ ಕುಳಿತಿರುವ ಅಜ್ಜನ ಜೊತೆ ಸ್ವಲ್ಪ ಮಾತುಕತೆಗಳು ಪ್ರಾರಂಭವಾಗಿದ್ದವು. ಸಮಯ ೯ಘಂಟೆ ಇನ್ನೇನು ಊಟದ ಸಮಯ ಅದಾಗಿತ್ತು. ನಾನು ಅಜ್ಜನಿಗೆ ಕೇಳಿದೆ ಊಟ ಮಾಡೋಣ ಬನ್ನಿ “ಬಹಳ ಮಂದಿ ಆಗಲಿ ತಗೋರಿ” ಅಂದರು. ಯಾಕೆ ಊಟ ಮಾಡಲ್ಲರಿ ಎಂದಾಗ ಇಲ್ಲ ಇವತ್ತು ನಂದು ಒಪ್ಪತ್ತು. ಊಟ ಮುಗಿಸಿ ಹಾಗೆ ಅವರ ಜೊತೆ ಮಾತಾಡುತ್ತಿರುವಾಗ ಅಜ್ಜ ನೀವು ಯಾವ ಊರಿಗೆ ಹೊಂಟಿರಿ(ಹೊರಟಿರಿ) ಈಗೇನು ದೀಪಾವಳಿಗೆ ಹೊಂಟಿರಿ ಎಂದಾಗ. ಹೌದು ನನ್ನ ಹೆಂಡತಿಯ ಮನೆಗೆ ಹೋಗಿ ಮುಂದೆ ನಮ್ಮ ಊರಿಗೆ ದೀಪಾವಳಿಗೆ ಹೋಗಬೇಕು ಎಂದೇ. ಮತ್ತೆ ಯಾವಾಗ ಮದುವೆ ಆಗಿದೆ ಮತ್ತು ನೀವು ಏನು ಮಾಡುತ್ತೀರಿ ಎಂದು ಸವಿಸ್ತಾರವಾಗಿ ಕೇಳುತ್ತಿದ್ದರು. ಹಾಗೆ ಕೇಳುವಾಗ ಮುದುವೆ ಪ್ರಸ್ತಾಪ ಆಗಿದ್ದಾಗ ತಮ್ಮ ಮದುವೆ ಮತ್ತು ತಮ್ಮ ಜೀವನದ ಬಗ್ಗೆ ಕೇಳಿ ಎಂದಾಗ…
ಅಲ್ಲಾರಿ ನೀವೇಕೆ ಇಷ್ಟೊಂದು ಬ್ಯಾಗಗಳು ತಗೊಂಡು ತೊಂದರೆ ತಗೋತೀರಿ. ಆರಾಮಾಗಿ ಬರಬಹುದಲ್ಲವೇ ಎಂದಾಗ ಇಲ್ಲ ನಮ್ಮ ಮಗ ನಾನು ಮೊದಲ ಬಾರಿ ಬೆಂಗಳೂರಿಗೆ ಬಂದುದ್ದರಿಂದ ರೈನ್ ಕೋಟ್, ಸ್ವೀಟರ್, ಸಲ್ಪ್ ಬಟ್ಟೆಗಳು ಹಾಗು ಊರಿಗೆ ಬೇರೆ ಬೇರೆ ಸ್ವೀಟ್ಸ್ ಕೊಟ್ಟು ಒಂದು ಬ್ಯಾಗ ಆಗಿದೆ. ಬಹಳ ಚಲೋ ಹುಡುಗ ಸಾಫ್ಟ್ವೇರ್ ಇಂಜಿನಿಯರ್ ಕಾಳಜಿ ಮಾಡತಾನ. ಇಸ್ಕಾನ್ , ಬನ್ನೇರುಘಟ್ಟ ಪ್ರಾಣಿಸಂಗ್ರಾಲಯ, ಮ್ಯೂಸಿಯಂ ಇನ್ನು ಅನೇಕ ಸ್ಥಳಗಳನ್ನು ತೋರಿಸಿದ. ಮತ್ತೆ ಎಷ್ಟು ಬ್ಯಾಡ ಬ್ಯಾಡ ಅಂದರು ೧೦೦೦ ಕೊಟ್ಟ. ಏನೋ ಮನ್ಯಾಗ ಕುಂತೇ ಕೆಲಸ ಮಾಡ್ತಾನ ಎಂದಾಗ ಹೌದ್ರಿ ಇವಾಗ ಸ್ವಲ್ಪ್ ಕಂಪನಿಗಳು ಮನೆಯಿಂದ ಕೆಲಸ ಮಾಡಕ್ಕೆ ಕೊಡತಾವ(೨೦೦೯). ನಮ್ಮ ಮದುವೆ ಸುಮಾರು ನಲವತ್ತು ವರ್ಷಗಳ ಹಿಂದೆ ನಮ್ಮ ಮನೆಯಲ್ಲೇ ೫ ದಿನಗಳ ಇದ್ದ ಮದುವೆ ,ಸಂಬಂಧಗಳ ಬೆಸೆಯುವ ಹಬ್ಬ ಆದಾಗಿತ್ತು . ಎಲ್ಲ ಸಂಬಂಧಿಕರು ಕೂಡಿಕೊಂಡು ಸಂಭ್ರಮದಿಂದ ಮಾಡಿದ ಮದುವೆ. ನಮ್ಮ ಬೀಗರು ಎತ್ತಿನ ಗಾಡಿ ಕಟ್ಟಿಕೊಂಡು ಬಂದು ಭರ್ಜರಿ ಮಾಡಿ ಕೊಟ್ಟ ಮದುವೆ .
ನಮ್ಮ ಮಾವ ಊರಿನ ಸಾಹುಕಾರ ಇದ್ದುದರಿಂದ ಅದೊಂದು ದೊಡ್ಡ ಮದುವೆ ಆಗಿತ್ತು. ನಮ್ಮ ತಂದೆಯರು ಉಳ್ಳವರು ಆಗಿದ್ದ ಕಾರಣ ಯಾವದೇ ಕೊರತೆ ಇರದ ಹಾಗೆ ಮಾಡಿದ ವಿವಾಹ. ನಮ್ಮ ಮಾವನವರಿಗೆ ಒಬ್ಬಳೇ ಮಗಳು ಹೀಗಾಗಿ ಅವರ ಆಸೆ ಮಗಳು ಒಳ್ಳೆಯ ಮನೆಗೆ ಕೊಟ್ಟು ಎಲ್ಲರೂ ಹೌದು ಹೌದು ಅನ್ನೋವ ಹಾಗೆ ಮದುವೆ ಮಾಡಿಕೊಡುವ ಕನಸಾಗಿತ್ತು. ಅವರು ತಮ್ಮ ಆಸೆಯಂತೆ ಮಾಡಿ ಮುಗಿಸಿದ್ದರು. ಸ್ತುರದ್ರುಪಿಯಾದ ಅವಳು ನನ್ನ ಮದುವೆಗೆ ಒಪ್ಪಿದ್ದು ನಮ್ಮ ತಂದೆಯವರ ಮತ್ತು ಮಾವನವರ ಸ್ನೇಹಕ್ಕೆ. ನಾವು ಒಬ್ಬರಿಗೊಬ್ಬರು ನೋಡದೆ ಆದ ಮದುವೆ. ಮಾವನವರು ಕೊಟ್ಟ ಕಾಣಿಕೆ ಇವತ್ತು ಊರೆಲ್ಲ ಮಾತಾಡತಾರೆ. ನಮ್ಮ ಮದುವೆಯಲ್ಲಿ ೫ ದಿವಸ ಊರಿಗೆಲ್ಲ ಊಟ. ಹೈದ್ರಾಬಾದದಿಂದ ತರಿಸಿ ಬಳೆಗಳನ್ನು ಊರಿನ ಹೆಂಗಸಿರಿಗೆ ಉಡಿಸಿದ್ದು ಇನ್ನು ಮಾತಿನಲ್ಲಿ ಹೇಳವುದುಂಟು.
ಇವಾಗ ಯಾರು ಹದಿನೈದು ದಿವಸ ಬಂದು ಮದುವೆ ಮನೆಯಲ್ಲಿ ಇರತಾರ ಹೇಳಿ. ಬರುವವರು ಇಲ್ಲ, ಬಂದರು ಕರಿಯುವವರು ಇಲ್ಲ ಬಿಡಿ. ಮನೆಯಲ್ಲಿ ಕೆಲಸ ಮಾಡುವವರು ಘಟ್ಟಿ ಮತ್ತು ಪ್ರೀತಿ, ವಿಶ್ವಾಸ ಒಂದು ಕೈ ಮೇಲು ಇದ್ದ ದಿನಗಳು. ಇವಾಗ ಒಂದು ದಿವಸದ ಮದುವೆ, ಮುಂಜಾನೆ ಬರೋದು ಸಾಯಂಕಾಲ ಎಲ್ಲ ಖಾಲಿ ಖಾಲಿ. ಉಳಿದ ಅಡಿಗೆ ಉಣ್ಣುವವರು ಇರದ ಮದುವೆ ಮನೆಗಳು ತಮ್ಮಾ !!! ಹಿರಿಯರ ಮಾತು ಕೇಳಿ ನನ್ನ ಮದುವೆ ನೆನಪಾಗಿದ್ದು ಇದೆ. ಆದರೆ ಅವರು ಹೇಳುವ ಮಾತುಗಳು ಹಣಕ್ಕಿಂತ ಸಂಬಂಧಗಳ ಕಡೆ ಹೆಚ್ಚು ವಾಲುತ್ತಿತ್ತು. ಮದುವೆ ಪ್ರೀತಿ ವಿಶ್ವಾಸದ ಮೇಲೆ ನಿಂತಿದೆ, ಹೊರ ಸೌಂದರ್ಯ ಕೇವಲ ನೆಪ ಮಾತ್ರ. ತಮ್ಮ ಅನುಭವ ಹೇಳುತ್ತಿದ್ದರು ಅದು ನಮಗೆ ಬೇರೆ ದಾರಿಯಲ್ಲಿ ಯೋಚನೆ ಮಾಡಲಿಕ್ಕೆ ಹಚ್ಚಿದ್ದು ಮಾತ್ರ ಸುಳ್ಳಲ್ಲ.
ಅವಾಗ ಸಮಯ ೧೦ ಘಂಟೆ ಆಗಿತ್ತು ನಿದ್ದೆ ಮಾಡಲಿಕ್ಕೆ ನಾನು ಎದ್ದು ಸ್ವಲ್ಪ ಅಲ್ಲೇ ತಿರುಗಾಡಿ ಬಂದು ನನ್ನ ಸೀಟಿಗೆ ಕುಳಿತುಕೊಳ್ಳಬೇಕು ಅನ್ನುವಷ್ಟರಲ್ಲೇ ಟಿಸಿ ಬಂದು ನಮ್ಮ ಟಿಕೆಟ್ಗಳನ್ನು ತಪಾಸಣೆ ಮಾಡಿ ಹೋದ ನಂತರ ಮತ್ತೆ ನಿದ್ದೆಗೆ ಹೋಗದೆ ಅಲ್ಲೇ ಕುಳಿತೆ. ಹಾಗೆ ಮಾತಾಡಿಲಕ್ಕೆ ಶುರು ಮಾಡಿದಾಗ ಯಾಕೋ ಮತ್ತೆ ಮಾತುಗಳು ಸಂಸಾರ ಜೀವನಕ್ಕೆ ಹೊರಳಿತು. ನಮ್ಮ ಅಪ್ಪ ಮತ್ತು ಅಮ್ಮ ಸೊಸೆಗೆ ತುಂಬಾ ಕಾಳಜಿವಹಿಸಿ ಅವಳಿಗೆ ಇದು ಬೇರೆ ಮನೆ ಅನ್ನುವ ಭಾವನೆ ಬಾರದ ಹಾಗೆ ಅವಳ ಜೊತೆ ಚೆನ್ನಾಗಿ ಹೊಂದಿಕೊಂಡಿದ್ದರು. ಒಳ್ಳೆಯ ಮನೆಯ ಸೊಸೆಯಾದೆ ಎಂದು ಅವಳಿಗೆ ಬಹಳ ಸಂತೋಷ ಆಗಿತ್ತು.
ಏಕಾಂತದಲ್ಲಿ ಬಿಟ್ಟರೆ ಯಾವತ್ತೂ ಅವಳು ನನಗೆ ಮುಖ ಕೊಟ್ಟು ಮಾತಾಡಿದ ನಿದರ್ಶನ ಇಲ್ಲವೇ ಇಲ್ಲ. ಮದುವೆಗೆಂದು ಒಂದು ವರ್ಷ ಕಷ್ಟಪಟ್ಟು ಮಾಡಿದ ಹಳೆಯ ಕಾಲದ ಫೋಟೋ ಫ್ರೇಮ್ಗಳು, ಕೈ ಇಂದ ನೈದಿದ್ದ ಟೇಬಲ್ ಮೇಲೆ ಹಾಕುವ ಬಟ್ಟೆ, ನೂಲುನಿಂದ ಮಾಡಿದ ಬ್ಯಾಗುಗಳು ಇನ್ನು ಇವೆ. ಅವಳು ಮಾಡಿದ ಅಡಿಗೆ ಅಮ್ಮನ ಕೈ ರುಚಿ ಇದ್ದಂಗೆ ! ತಾಯಿ ಅತ್ಯಂತ ಪೂಜನೀಯ ಹಾಗೆ ತಾಯಿಯ ಪ್ರೀತಿ ಅತಿ ದೊಡ್ಡದು. ಮತ್ತು ತಾಯಿಯ ಋಣ ತಿರಸಲಿಕ್ಕೆ ನೂರಾರು ಜನ್ಮ ಹುಟ್ಟಿ ಬಂದರು ಸಾಧ್ಯವಿಲ್ಲ. ಅಮ್ಮನ ಮುದ್ದಿನ ಸೊಸೆಯಾದ ಇವಳು ನನಗೆ ಕೊಟ್ಟ ಪ್ರೀತಿ ಗಮ್ಮತ್ತು ಚೆನ್ನಾಗಿ ಇತ್ತು. ಯಾವತ್ತೂ ಅವಳು ನನಗೆ ನೇರವಾಗಿ ಕೇಳದೆ ಅತ್ತೆಯ ಮೂಲಕವೇ ಎಲ್ಲವೂ ಬರುತ್ತಿದ್ದವು.
ನಮ್ಮ ವ್ಯವಹಾರ ಕೈ ಕೊಟ್ಟು ಹೋದಾಗ ತಾಳ್ಮೆಯಿಂದ ಇದ್ದ ಅವಳು ಅವಳಿಗೆ ಸಾಟಿ. ಆದರೆ ಏನು ಮಾಡೋದು ನಾನು ಅವಳಿಗೆ ನನ್ನಲ್ಲಿ ಹುದಿಗಿದ್ದ ಪ್ರೀತಿ ಯಾವತ್ತೂ ಹೇಳಿಲ್ಲ. ಅದೇ ಪಾಪದಿಂದ ಇಂದು ಇಲ್ಲಿ ,ನಾಳೆ ಅಲ್ಲಿ ಹಾಗೆ ಆಗಿದೆ ನನ್ನ ಜೀವನ . ದೇವರು ಎಲ್ಲವನ್ನು ಸಂದರ್ಭ ಬಂದಾಗ ಎಚ್ಚರಿಸಿದ್ದರೂ ಕೇಳದೆ ಹೋದ ನಾನು ಇವತ್ತು ಪರಿತಪಿಸುವ ದಿನಗಳು ಬಂದಿವೆ ! ನನಗೆ ಯಾಕೋ ದುಃಖದಲ್ಲಿ ಇರಬೇಕು ಎಂದು ಅನಿಸಿದಾಗ ಹಾಗೆ ಕೇಳಿಬಿಟ್ಟೆ ನೀವು ಒಬ್ಬರೇ ಬಂದಿದ್ದೀರಿ ಮತ್ತೆ ಅಜ್ಜಿನೂ ಬರುವರಲ್ಲ.
ಒಂದು ಮಾತ್ರ ಸತ್ಯ ಅವರ ಮಾತುಗಳಿಂದ ಗೊತ್ತಾಗಿತ್ತು ಅವರ ಹೆಂಡತಿ ತುಂಬಾ ಒಳ್ಳೆಯವರು. ಮತ್ತೆ ನನಗೆ ಸಂಶಯ ಬಂದಿದ್ದು ಇವರು ಹೆಂಡತಿಗೆ ಪ್ರೀತಿ ಕೊಟ್ಟಿಲ್ವಾ? ಅದಕ್ಕೆ ಇದೆಯಲ್ಲ ಹೇಳ್ತಾ ಇದ್ದಾರಾ ? ಅಜ್ಜಿ ಯಾಕ ಬಂದಿಲ್ಲ ಎಂದು ಕೇಳಿದಾಗ ಇಲ್ಲ ಅವರು ತಿರಿ ಹೋಗಿ ೫ ವರ್ಷಗಳು ಕಳೆದವು. ಅವರು ತೀರಿದ ಎರಡನೇ ದಿವಸಕ್ಕೆ ನನಗೆ ನನ್ನ ಜೀವನದ ಬಗ್ಗೆ ಗೊತ್ತಾಗಿದ್ದು.. ತಾಯಿ ಮತ್ತು ತಂದೆ ಇರುವರಿಗೆ ಅವರು ನನ್ನ ನೋಡಿಕೊಂಡಿದ್ದರು. ಅವರು ಹೋದ ನಂತರ ನಾನು ಸಂತೋಷವಾಗಿ ಇರಲಿಕ್ಕೆ ಅವಳೇ ಕಾರಣ !!
ಆದರೆ ನಾನು ಅವಳಿಗೆ ಏನು ಮಾಡಿದೆ? ಇಲ್ಲಪಾ ಅವಳು ಮಗನಿಗೆ ಗರ್ಭಿಣಿ ಇದ್ದಾಗ, ಗರ್ಭಿಣಿಯ ಬಯಕೆಯಾಗಿ ಹಸಿ ಶೇಂಗಾ (ಕಡ್ಲೆ ಬೀಜ )ತಗೆದುಕೊಂಡು ಬನ್ನಿ ಎಂದಿದ್ದರೂ ಅದಕ್ಕೆ ಕಿವಿ ಗೊಡದ ನಾನು ಅದೆಲ್ಲಾ ನೆನಪಾಗಿ ಮನಸ್ಸು ಮಮ್ಮಲ ಮರಗುತ್ತೆ . ಯಾವತ್ತೂ ನಾನು ಅವಳ ಜೊತೆ ಯಾವದೇ ವಿಷಯ ಹಂಚಿಕೊಂಡಿಲ್ಲ. ಅವಳು ಎಷ್ಟೇ ಪ್ರಯತ್ನ ಪಟ್ಟರು ನಾನು ಯಾವತ್ತೂ ಸರಿಯಾಗಿ ಸ್ಪಂದಿಸಿರಲಿಲ್ಲ. ಅವಳ ಜೊತೆ ಪ್ರೀತಿಯಿಂದ ನಾನು ಮಾತಾಡುತ್ತಿರಲಿಲ್ಲ. ಮೂಕನಂತೆ ಏನು ಉತ್ತರ ಕೊಡದ ನನಗೆ ಅವಳು ಅಂದ ಒಂದೇ ಮಾತು “ಒಂದು ಮೂಕ ನಾಯಿಮುಂದ ನಾಲ್ಕು ಚಲೋ ನಾಯಿ ಸತ್ತು ಅಂತೇ” . ಹೀಗಾಗಿ ಇವತ್ತು ದಿನಗಳನ್ನು ಲೆಕ್ಕಾ ಹಾಕೋತ ಇದ್ದೀನಿ ಎಂದಾಗ, ಅಲ್ಲರೀ ಮತ್ತೆ ನೀವು ಇಲ್ಲೇ ಮಗನ ಹತ್ತಿರ ಇರಬೇಕು ರೀ. ಇಲ್ಲಿ ಇರೋದು ನಮ್ಮ ಅಣ್ಣನ ಮಗ ಅವರ ಮನೆಯೊಳಗೇ ಅಷ್ಟೇ ಒಂದು ದಿವಸ ಇಲ್ಲಾ ಆಂದರೆ ಎರಡು ದಿವಸ ಚೆಂದ . ನನಗು ಒಬ್ಬ ಮಗ ಇದ್ದಾನೆ ಅವನು ಒಳ್ಳೆಯವನು ಎಲ್ಲ ತಾಯಿಯಂತೆ ಕರುಣಾಮಯಿ ಆದರೆ ಸೊಸೆನೇ ಸ್ವಲ್ಪ ಠುಸ್ ಪುಸ್ ಮಾಡತಾಳ ಆದರೆ ನನಗೇನು ಅಷ್ಟು ತೊಂದರೆ ಕೊಡುವ ಹೆಣ್ಣು ಅಲ್ಲ. ಸಂಸಾರ ಅಂದರೆ ಹೆಚ್ಚು ಕಡಿಮೆ ಇರೋದೇ . ನನ್ನಿಂದ ಸುಮ್ನೆ ಮಗನಿಗೆ ಯಾಕೆ ತ್ರಾಸ ಅಂತ ಊರಲ್ಲೇ ಇರ್ತೀನಿ. ಒಮೊಮ್ಮೆ ೧೫ ದಿವಸ ಹೋಗಿ ನಿಂತು ಬರ್ತೀನಿ. ಮಗನ ಮೇಲೆ ಅವಳಿಗೆ ತುಂಬಾ ಪ್ರೀತಿ. ಅವಳ ಕನಸಂತೆ ಮಗನು ಬೆಳ್ದ. ಇವಾಗ ನಾನೇ ಅಡಿಗೆ ಮಾಡಿಕೊಂಡು ಇದ್ದೇನೆ .ನಾ ಮಾಡಿದ್ದು ನಾನೇ ಉಣ್ಣಬೇಕು !!
ಅಲ್ರಿ ನೀವ್ಯಾಕೆ ಅವರಿಗೆ ಪ್ರೀತಿ ತೋರಿಸಲಿಲ್ಲ? “ಬುದ್ದಿ ಕಡಿಮೆ ಹೆಂಡತಿಗೆ ಬಹಳ ಸಲಗಿ ಕೊಡಬಾರದು , ಕೊಟ್ಟರೆ ಎಲ್ಲಿ ಮಂದಿ(ಜನ) ಏನು ಅಂದಾರು ” ಅಂತ ಹೇಳಿ ನಾವು ಗಪ್ಪ ಗಪ್ಪ(ಮಾತಾಡದೇ ಇರುವುದು )ಇರ್ತಿದ್ದೆವು. ಮುಂದೆ ತಾಯಿ ನಮ್ಮ ಮದ್ಯದಲ್ಲಿ ಇದ್ದಾಗ ಅದೇ ರೂಡಿಯಾಗಿ ಹೋಗಿಬಿಟ್ಟಿತು. ಒಂದು ಪ್ರವಾಸ ಕರ್ಕೊಂಡು ಹೋಗಿಲ್ಲ, ಒಂದು ದೇವಸ್ಥಾನಕ್ಕೆ ಹೋಗಿಲ್ಲ. ಆದರೂ ಒಳಗೆ ಪ್ರೀತಿ ಇತ್ತು ಆದರೆ ಅವಳ ಜೊತೆ ಹಂಚಿ ಸಂತೋಷದಿಂದ ಇರಲಿಲ್ಲ ಅದೇ ನೋವು ಇದೆ. ಅದೇ ಪಾಪ ಪ್ರಜ್ಞೆ ಇವತ್ತು ಒಬ್ಬಂಟಿಗನಾದ ನಾನು ಅನುಭವಿಸಿ ಹೋಗಬೇಕು. ಯಾರಿಗೆ ಹೇಳೋದು? ಇನ್ನು ಅನೇಕ ವಿಷಯಗಳು ಸೂಕ್ಷ್ಮವಾಗಿ ಹೇಳುತ್ತಿದ್ದ ಅವರ ಮಾತುಗಳಲ್ಲಿ ಭಯಂಕರ ನೋವಿತ್ತು. ಅವರು ಇವಾಗ ಮದುವೆಯಾಗಿದ್ದ ನನಗೆ ಹೇಳದಂಗೆ ಇತ್ತು. ಅವರು ಸ್ಥಿತಿವಂತರು ಮತ್ತು ಕಲಿತವರು. ತಾವು ನಿರ್ವಿಸಬೇಕಾದ ಕೆಲಸಗಳು ಸರಿಯಾಗಿ ನಿಭಾಯಿಸಿಲ್ಲ ಎಂಬ ಕೊರಗಿತ್ತು. ಮಡದಿಯ ಒಳಮನಸ್ಸು ಅರ್ಥೈಸಿಕೊಂಡಿದ್ದರೂ ಉತ್ತರದಾಯಿ ಆಗದೆ ಹೋಗಿದ್ದರು.
ಹೆಂಡತಿಯ ಪ್ರೀತಿ, ತಾಯಿಯ ಋಣ, ಮಗನ ಸ್ಥಿತಿ ಮತ್ತು ತಂದೆ, ಮಾವನವರು ನಿರ್ವಹಿಸಿದ್ದ ಕಾರ್ಯಗಳು ಎಲ್ಲವೂ ಇದ್ದ ಅವರ ಜೀವನದ ಅನುಭವಗಳು ಕೇಳಿದಾಗ ನನಗೆ ಅನಿಸಿದ್ದು “ಹೆಂಡತಿ ಸೋತು ಗೆದ್ದಿದ್ದಳು … ಗಂಡ ಗೆದ್ದು ಸೋತಿದ್ದ”
ಅವರ ಸಂಬಂಧ ಅನ್ನೋನ್ಯ ಇದ್ದರು ತೋರ್ಪಡಿಸಲಾದ ಪ್ರೀತಿಯಿಂದ ಇನ್ನೊಂದು ಮಗ್ಗಲ ಸಂತೋಷದಿಂದ ವಂಚಿತರಾಗಿದ್ದರು !! ಕಳೆದ ಸಮಯ ಮತ್ತೆ ಬರುವದಿಲ್ಲ, ಪ್ರೀತಿ ವ್ಯಕ್ತವಾಗದೆ ಮಡಿಲ ತುಂಬಿತ್ತು ನೋವು.
ಅಷ್ಟರಲ್ಲಿ ಅವರ ಕಣ್ಣುಗಳು ಒದ್ದೆಯಾಗಿದ್ದು ಗಮನಿಸಿದ್ದೆ ! ಅವರು ಮಾತು ಮುಗಿಸಿದ್ದರು . ಅವರ ಮಾತು ಅಂದು ರಾತ್ರಿ ಅಷ್ಟೇ ಅಲ್ಲ. ಎಷ್ಟೋ ಸಮಯ ಅವರ ಭಾವನಾತ್ಮಕ ಮಾತುಗಳು ನನ್ನ ನಿದ್ದೆಯನ್ನೇ ಕಸಿದಿವೆ!!
Categories: Stories/ಕಥೆಗಳು
