news

ಪವರ್ ಹಂಗ್ರಿ! ೨೦೧೮ರ ಚುನಾವಣೆಗೆ ನಿಲ್ಲುವದಿಲ್ಲ ಎಂದವರು, ೨೦೨೩ರರ ಮುಖ್ಯಮಂತ್ರಿ ಖುರ್ಚಿಗೆ ಟವೆಲ್!

https://pagead2.googlesyndication.com/pagead/js/adsbygoogle.js

೨೪/೭ ಸುದ್ದಿ ವಾಹಿನಿಗಳು ರಾಜ್ಯದಲ್ಲಿ ಹತ್ತಿದ ನಾಯಕತ್ವ ಬದಲಾವಣೆ ಬೆಂಕಿ ಹೇಗೆ ಕವರ್ ಮಾಡಿ ತೋರಿಸಿದರೆಂದರೆ ಮಾನ್ಯ ಶ್ರೀ ಅರುಣ್ ಸಿಂಗ್ ದೆಹಲಿಯ ತಮ್ಮ ಮನೆಯಿಂದ ಹೊರಡುವ ಸಮಯದಿಂದ ಕುಮಾರ ಕೃಪಾ ಅತಿಥಿ ಗೃಹ ಸೇರುವ ತನಕ ಮಸ್ತಾಗಿ ತೋರಿಸಿದರು! ನಿಖರವಾಗಿ ಹೇಳಬೇಕಂದರೆ ಇದೊಂದು ಕ್ರಿಕೆಟ್ ಕಾಮೆಂಟರಿ ತರಹ ಇತ್ತು. ರಾಜ್ಯದಲ್ಲಿ ಕರೋನ ನಷ್ಟ ಸಾಕಷ್ಟು ಇದ್ದರೂ ಕೆಲವರಿಗೆ ಇನ್ನುಳಿದ ಬಿಜೆಪಿಯ ಸರ್ಕಾರದಲ್ಲಿ ಮಂತ್ರಿನೋ ,ಮುಖ್ಯಮಂತ್ರಿನೋ ಆಗಬೇಕು ಎಂಬ ದುರಾಸೆಯಿಂದ ನಾಟಕ ಪ್ರಾರಂಭಮಾಡಿದ್ದರು.

ಜನರಿಗೆ ಜೀವನ ನಡೆಸುವದೇ ಕಷ್ಟ ಇರುವ ಸ್ಥಿತಿಯಲ್ಲಿ ಇವರುಗಳ ಖುರ್ಚಿಯ ಕಾದಾಟ ನೋಡಿ ರೋಸಿ ಹೋಗಿದ್ದರು. ಇತ್ತ ಸರ್ಕಾರದಲ್ಲಿ ಇರುವವರು ಹೀಗೆ ಮಾಡಿದರೆ ಮತ್ತೊಂದು ಕಡೆ ವಿರೋಧ ಪಕ್ಷದವರು ತಾವಾದರೂ ಸರ್ಕಾರಕ್ಕೆ ಕಿವಿಹಿಂಡಿಯುವ ಕೆಲಸ ಮಾಡುವದನ್ನು ಬಿಟ್ಟು ಮುಂದೆ ನಮ್ಮದೇ ಸರ್ಕಾರ ಬರುತ್ತೆ ಎನ್ನುವ ಕನಸು ಕಾಣುವದಕ್ಕೆ ಶುರು ಮಾಡಿದರು. ಯಾವಾಗ ಕರೋನ ಮತ್ತು ಬಿಜೆಪಿಯ ಒಳಜಗಳ ತಾರಕ್ಕೇರಿತೋ ನಮ್ಮ ನಾಯಕರೇ ಮುಂದಿನ ನಾಯಕ ಎಂದು ಘೋಷಿಸಿಬಿಟ್ಟರು. ಇಲ್ಲಿಯವರೆಗೆ ಕೇವಲ ಬಿಜೆಪಿಯವರಿಗೆ ಅಧಿಕಾರದ ದುರಾಸೆ ಇದೆ ಎಂದು ನಂಬಿದ ಜನರಿಗೆ ಕಾಂಗ್ರೇಸ್ ಇದರಿಂದ ಹೊರತಾಗಿಲ್ಲ ಎಂದು ಮನವರಿಕೆಯಾಯಿತು. ಚುನಾವಣೆಯಲ್ಲಿ ಆಯ್ಕೆಯಾಗಿ ಬಂದು ಮುಖ್ಯಮಂತ್ರಿ ಖುರ್ಚಿಯ ಬಗ್ಗೆ ಮಾತನಾಡುತ್ತಿದ್ದರೇ ಅದು ಆಸೆ ಅನ್ನಬಹುದಿತ್ತು!

ರಾಜ್ಯದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಲೋಕಸಭೆಯಲ್ಲಿ ಬಹುಮತ ಬರಲಿಲ್ಲ ಎಂದು ವಿಧಾನಸಭೆ ವಿಸರ್ಜನೆ ಮಾಡಿ ಜನರ ಮುಂದೆ ಹೋಗಿ ಮತ್ತೊಮ್ಮೆ ಗೆದ್ದು ಬಂದ ಉದಾಹರಣೆ ಇದೆ. ಆರೋಪ ಬಂದಾಗ ಕಿಂಚಿತ್ತೂ ತಡಮಾಡದೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಹೋಗಿದ್ದಿದೆ. ನಾಯಕನಾದವನು ಸೋತಾಗ, ನಾನು ಸರ್ವೋತ್ತಮ ನಾಯಕ ಎಂದು ಬಾಲಂಗೋಶಿಗಳ ಕಡೆ ಹೇಳಿಸಿದ ಉದಾಹರಣೆ ನೋಡಿಲ್ಲ. ಆದರೆ ಇಂದು ರಾಜ್ಯದಲ್ಲಿ ಏನಾಗುತ್ತಿದೆ ?

ನಾನು ೫ ವರ್ಷ ಅಧಿಕಾರ ಮಾಡಿದೆ, ನುಡಿದಂತೆ ನಡೆದೆ ಎಂದು ಎದೆ ತಟ್ಟಿ ಹೇಳುವ ನಿಮಗೆ ಬಹುಮತ ಬರದೇ ಇದ್ದದ್ದು ನಿಮ್ಮ ಸರ್ಕಾರದ ವಿಫಲತೆ ಅಲ್ಲವೇ? ಸರ್ಕಾರದ ಬಹುಮತ ಬಿಡಿ ,ನೀವೇ ಮಾಡಿದ ಅಪರಾಧಗಳಿಂದ ನಿಮ್ಮ ತವರಲ್ಲೇ ಸೋತಿರಿ! ನಾನು ಸಾಮಾಜವಾದಿಯಿಂದ ಬಂದವನು ಎಂದು ಕೋಟಿ ರೂಪಾಯಿ ಕೈ ಗಡಿಯಾರ ಕಟ್ಟಿದ ನೀವು ತುಂಬಿದ ಸಭೆಯಲ್ಲಿ ನಾನು ಪ್ರಾಮಾಣಿಕ ಅಲ್ಲ ಎಂದು ನೀವೇ ಹೇಳಿದ್ದಿರಿ. ೨೦೧೩ರ ಚುನಾವಣೆಯಲ್ಲಿ ಇದು ಕೊನೆಯ ಚುನಾವಣೆ ಎಂದು ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಯಿಸಿ ಜನರ ಆಕ್ರೋಶಕ್ಕೆ ತುತ್ತಾಗಿ ಚುನಾವಣೆಯಲ್ಲಿ ಪರಾಭವಗೊಂಡಿರಿ. ಇನ್ನೊಂದು ಕ್ಷೇತ್ರದಲ್ಲಿ ಕೂದಲೆಳೆಯ ಅಂತರದಲ್ಲಿ ಶಾಸಕರಾಗಿ ಮುಂದೆವರೆದಿರಿ. ಆದರೆ ಬಾದಾಮಿ ಕ್ಷೇತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?

ನೀವೇ ಹೇಳಿದಂತೆ ಚುನಾವಣೆಗೆ ನಿಲ್ಲದೆ ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದರೇ ನೀವು ನಡೆದಂತೆ ನುಡಿಯುವ ನಾಯಕನಾಗಿ ಉಳಿಯುದಲ್ಲದೆ ರಾಜ್ಯದಲ್ಲಿ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಅವಕಾಶವಿದ್ದವು. ಇಂದು ಮತ್ತೆ ೨೦೨೩ರ ಚುನಾವಣೆಗೆ ನಿಲ್ಲುವ ಮಾತು ಬಿಡಿ, ಮುಖ್ಯಮಂತ್ರಿ ನಾನೇ ಎಂದು ಬಿಂಬಿಸುವುದನ್ನು ನೋಡಿದರೆ ನೀವು ಸಮಾಜವಾದಿ ಎಂದು ನಂಬುವ ಮನಸ್ಸುಗಳು ತುಂಬಾ ಕಡಿಮೆ. ಇಲ್ಲಿ ನಾನೇನು ಬಂಡೆ ಅಥವಾ ವಿಜಯಪುರದ ಭಗೀರಥ ಮುಖ್ಯಮಂತ್ರಿ ಆಗಲಿ ಎಂದಲ್ಲ.

ಬಕ ಬಕ ಪಕ್ಷಿಗಳಂತೆ ಜನರು ಇಂದಲ್ಲ ನಾಳೆ ನಮ್ಮ ರಾಜ್ಯ ಭ್ರಷ್ಟಾಚಾರದಿಂದ ಮುಕ್ತವಾಗುತ್ತದೆ, ಬಾಯಿಯಲ್ಲಿ ಹೇಳಿದಂತೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಕಾರ್ಯರೂಪಕ್ಕೆ ಬರುತ್ತೆ, ರೈತರಿಗೆ ೨೪ ಘಂಟೆ ವಿದ್ಯುತ್ , ರೈತರಿಗೆ ಸರಿಯಾದ ನಿಗದಿತ ಬೆಲೆ,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹೊಳೆಯುವ ರಸ್ತೆಗಳು, ಉತ್ಕೃಷ್ಟ ಮಟ್ಟದ ಸರ್ಕಾರಿ ಶಾಲೆಗಳು ಇತ್ಯಾದಿ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಆಗುತ್ತವೆ ಎಂದು ಜನ ಯಡಿಯೂರಪ್ಪ , ಕುಮಾರ ಸ್ವಾಮಿ ಮತ್ತು ನಿಮ್ಮನು ಮುಖ್ಯಮಂತ್ರಿಯಾಗಿ ಮಾಡಿದ್ದಾರೆ. ನಿಮ್ಮ ಮೂವರ ಕಾರ್ಯ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದ್ದರೂ ಹೇಳಿಕೊಳ್ಳುವಂತ ಅಗಾಧ ಸಾಧನೆ ಏನು ಜನ ನೋಡಿಲ್ಲ. ಆದರೂ ನೀವೆಲ್ಲಾ ಮತ್ತೆ ಮತ್ತೆ ಮುಖ್ಯಮಂತ್ರಿ ಗಾಧಿಗೆ ಏರುವ ತವಕನ್ನು ನೋಡಿದರೆ ನಿಮಗೆಲ್ಲರಿಗೂ ಇರುವುದು ರಾಜ್ಯದ ಅಭಿವೃದ್ಧಿಗಿಂತ ಪವರ್ ಹಂಗ್ರಿ!

Categories: news

Tagged as: ,

Leave a Reply