Articles

ಯಡಿಯೂರಪ್ಪನವರು ರಾಜೀನಾಮೆ ಯಾಕೆ ಕೊಡಬೇಕು?

ಇಂದು ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದ ಮುಖ್ಯಮಂತ್ರಿಯವರು ರಾಜೀನಾಮೆ ಕೊಡುತ್ತಾರೆ ಮತ್ತು ಉಳಿದ ಸಮಯವನ್ನು ಯುವಕರಿಗೆ ಕೊಟ್ಟು ಪಕ್ಷ ಬೆಳಿಸಿ ೨೦೨೩ಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಯುವಕರಿಗೆ ಮನ್ನಣೆ ಕೊಟ್ಟು ಪಕ್ಷ ಬೆಳೆಸುವುದು ಉತ್ತಮ ಕೆಲಸ ಮತ್ತು ಎಲ್ಲ ಕಾರ್ಯಕರ್ತರ ಆಶಯ. ವಯಸ್ಸಾಗಿದೆ ಎಂದು ಜಗತ್ತಿಗೆ ಗೊತ್ತಿದ್ದರೂ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಮುಂದಿನ ೫ ವರ್ಷ ಮುಖ್ಯಮಂತ್ರಿ ಎಂದು ಹೇಳಿ ಅಧಿಕಾರ ವಹಿಸಿಕೊಂಡ ನಂತರದಿಂದ ಹಿಡಿದು ಇಲ್ಲಿಯವರೆಗೆ ಪ್ರತಿದಿವಸ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹಬ್ಬಿಸಿ ಆಡಳಿತದ ದಿಕ್ಕು ತಪ್ಪಿಸಿದ್ದು ಯಾರು? ಮೇಲಿನ ಅಧಿಕಾರಿಗಳು ಮಾತು ಕೇಳದ ಹಾಗೆ ಮಾಡಿದ್ದು ಯಾರು? ಪಕ್ಷದ ಶಾಸಕರ ಬಾಯಿಗೆ ಲಾಗಾಮು ಹಾಕದ ತಾವು ಇದರ ಹಿಂದೆ ಇದ್ದ ಕಾಣದ ಕೈಗಳು ನಾವೇ ಎಂದು ಒಪ್ಪಿಕೊಳ್ಳುವಿರಾ?

Amazon ads

ಮುಖ್ಯಮಂತ್ರಿ ಪ್ರಮಾಣ ವಚನ ತಗೆದುಕೊಂಡ ನಂತರ ಸಂಪುಟಕ್ಕೆ ವಿಸ್ತರಣೆಗೆ ತಗೆದುಕೊಂಡ ದಿನಗಳು ೩೦ಕ್ಕಿಂತ ಹೆಚ್ಚು ದಿನಗಳು. ರಾಜ್ಯದಲ್ಲಿ ಭೀಕರ ಪ್ರವಾಹ ಬಂದಾಗ ಯಾವ ರಾಷ್ಟ್ರೀಯ ಸುದ್ದಿ ವಾಹಿನಿಗಳು ರಾಜ್ಯದ ಪ್ರವಾಹದ ಬಗ್ಗೆ ಬಿತ್ತರಿಸಲಿಲ್ಲ. ಆಕ್ಸಿಜನ್ ಕಡಿಮೆ ಬಿದ್ದಾಗ ತೋರಿಸಲಿಲ್ಲ, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೊಟ್ಟಿಲ್ಲ ಎಂದು ಯಾವ ರಾಷ್ಟ್ರೀಯ ವಾಹಿನಿಗಳು ತೋರಿಸಲಿಲ್ಲ. ಆದರೆ ಮೊನ್ನೆ ಮುಖ್ಯಮಂತ್ರಿ ದೆಹಲಿ ಪ್ರವಾಸ ಕೈಗೊಂಡಾಗ ಅವರ ಬಗ್ಗೆ ತೋರಿಸಿದ ರೀತಿ ನೋಡಿದರೆ ಇದರ ಹಿಂದೆ ಯಾರಿದ್ದಾರೆ? ಇದನ್ನೇ ಗಮನದಲ್ಲಿ ಇಟ್ಟುಕೊಂಡು ನಮ್ಮ ವಿಜಯಪುರದ ಭಗೀರಥ ಎಂ ಬಿ ಪಾಟೀಲರು ಅತಿ ದೊಡ್ಡ ನಾಯಕ ಯಡಿಯೂರಪ್ಪ ಕೇವಲ ಲಿಂಗಾಯತ ನಾಯಕರಲ್ಲ ಅವರು ರಾಜ್ಯದ ಸರ್ವ ಜನಾಂಗದ ನಾಯಕ ಅದರಲ್ಲಿ ವಿಶೇಷವಾಗಿ ವೀರಶೈವ ಲಿಂಗಾಯತ ಬಹುದೊಡ್ಡ ನಾಯಕ! ಇಂಥವರಿಗೆ ಗೌರವ ಕೊಟ್ಟು ಮತ್ತು ಮರ್ಯಾದೆಯಿಂದ ನಡಿಸಿಕೊಳ್ಳುವುದು ಬಿಟ್ಟು ಷಡ್ಯಂತ್ರ ಮಾಡುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು.

ಯಡಿಯೂರಪ್ಪನವರ ನಿರ್ಗಮನ ಎಂದು ಯಾರದೋ ಪವರ್ ಹೌಸೆಲ್ಲಿ ಕುಳಿತು ಕುಟುಂಬ ರಾಜಕಾರಣ, ಭ್ರಷ್ಟಾಚಾರ ಎಂದು ಬರೆದದ್ದು ನೋಡಿ ಅಯ್ಯೋ ಪಾಪ ಎನಿಸಿತು. ಕಾರಣ? ದೇಶದಲ್ಲಿ ಕರೋನ ಇರಲಿ,ಪ್ರವಾಹ ಇರಲಿ ಮತ್ತು ಪಕ್ಷದ ಬೆಳವಣಿಗೆ ಇರಲಿ ಎಲ್ಲವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಮುಖ್ಯಮಂತ್ರಿಯ ಕೆಲಸದ ಬಗ್ಗೆ ಬರೆಯುವುದು ಬಿಟ್ಟು ಕೀಳು ವಿಚಾರ ವ್ಯಕ್ತಪಡಿಸಿದ್ದು ನೋವಿನ ವಿಚಾರ. ಅದರಲ್ಲಿ ಇನ್ನೊಂದು ವಿಷಯ ಸಂಘ ಪರಿವಾರದ ಅವಕೃಪೆ ಅಂತೇ! ಯಡಿಯೂರಪ್ಪನವರ ಸಂಘ ಪರಿವಾರದ ಮಾತು ಮೀರುವ ವ್ಯಕ್ತಿ ಎಂದು ಯಾರೇ ಒಬ್ಬ ಹಿರಿಯರು ಹೇಳಿದ್ದರೆ ನಂಬಬಹುದಿತ್ತು. ಅಧಿಕಾರ ಶಾಶ್ವತಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ ಆದರೆ ಚೆನ್ನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಬೆಂಬಲ ಕೊಟ್ಟಿಲ್ಲ ಆದರೂ ಸ್ವಂತ ಅನುಭವದಿಂದ ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಕೇವಲ ವಯಸ್ಸು ನೆಪ ಇಟ್ಟುಕೊಂಡು ರಾಜೀನಾಮೆ ಕೇಳಿದರೆ ಸರಿನಾ?

ಯಡಿಯೂರಪ್ಪ ಯಾವ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಹೇಳಿ? ಎಲ್ಲರನ್ನು ಒಟ್ಟಿಗೆ ತಗೆದುಕೊಂಡು ಹೋಗುವ ನಾಯಕ! ಇಂದು ದೇಶವನ್ನೇ ಆಳುತ್ತಿರುವ ಮೋದಿ ಮತ್ತು ರಾಜ್ಯದ ಅನೇಕ ದೊಡ್ಡ ನಾಯಕರು ಬೇರು ಮಟ್ಟದಿಂದ ಪಕ್ಷ ಕಟ್ಟಿ ಬೆಳಿಸಿದ್ದು ತೀರಾ ಕಡಿಮೆ. ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬೆಳಿಸಿ ಅಧಿಕಾರಕ್ಕೆ ತಂದ ನಾಯಕನಿಗೆ ಉಳಿದ ವರ್ಷ ಆಡಳಿತಕ್ಕೆ ಬೆಂಬಲ ಕೊಟ್ಟು ಪಕ್ಷಕ್ಕೆ ಇನ್ನು ಒಳ್ಳೆಯ ಹೆಸರು ತರುವುದು ಬಿಟ್ಟು , ಅವರನ್ನು ತಗೆದುಹಾಕಲು ನಿಯತ್ತಿಲ್ಲದವರ ಹೆಗಲ ಮೇಲೆ ಕೈ ಇಟ್ಟು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಕಟ್ಟಿಟ್ಟ ಬುತ್ತಿ. ಅವರಿಗೆ ರಾಜೀನಾಮೆ ಕೊಡಿಸುವ ವಿಚಾರ ಇದ್ದಿದ್ದರೆ ನೇರವಾಗಿ ಕೊಡಿಸಿ ನಿಮ್ಮ ತಾಕತ್ತನ್ನು ಪ್ರದರ್ಶನ ಮಾಡಬೇಕಿತ್ತು ಅಥವಾ ಅವರನ್ನು ಪ್ರೀತಿಯಿಂದ ಗೆಲ್ಲಬೇಕಿತ್ತು. ಅದು ಸಾಧ್ಯವೂ ಇತ್ತು. ಅವರೇ ಹೇಳಿದ್ದಾರೆ ನಾನು ಪಕ್ಷದ ಶಿಸ್ತಿನ ಸಿಪಾಯಿ! ಅಷ್ಟೇ ಅಲ್ಲ ಯಡಿಯೂರಪ್ಪನವರು ಪಕ್ಷದಲ್ಲೇ ಇದ್ದು ಪಕ್ಷಕ್ಕೆ ದ್ರೋಹ ಬಗೆಯುವ ನಾಯಕನಲ್ಲ. ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸದಾ ಸಿದ್ದ!

ವಿಧಾನಸಭೆ ಪ್ರಾಂಗಣದಲ್ಲಿ ಮಹಾಮಾನವತಾವಾದಿ ಬಸವಣ್ಣನವರ ಮೂರ್ತಿ ಸ್ಥಾಪನೆ ವಿಚಾರಕ್ಕೆ ಅಭಿನಂದಿಸಲು ಬಂದಿದ್ದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರ ಹೇಳಿದ್ದು ಒಂದೇ ಮಾತು “ಒಳ್ಳೆಯ ಕೆಲಸ ಮಾಡುವವರಿಗೆ ತಗೆದುಹಾಕಿ ನಮ್ಮ ಅವಕೃಪೆಗೆ ಒಳಗಾಗಬೇಡಿ “. ಇನ್ನು ೨ ವರ್ಷ ಸೇವೆ ಮಾಡುವದಕ್ಕೆ ಬಿಡಿ. ಇಲ್ಲವಾದರೆ ಇತಿಹಾಸ ಇನ್ನೊಮ್ಮೆ ನೋಡಿ. ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಪಟೇಲ್ ಅನೇಕರಿಗೆ ಕೆಟ್ಟರೀತಿ ನಡೆಯಿಸಿಕೊಂಡು ಪರಿಣಾಮ ಪಕ್ಷಗಳೇ ನೆಲಕಚ್ಚಿ ಹೋಗಿವೆ! ಅದಕ್ಕಾಗಿ ಗೌರವವಾಗಿ ನಡೆಯಿಸಿಕೊಳ್ಳಿ ಅದು ನಿಮಗೂ ಒಳ್ಳೆಯದು ಅವರಿಗೂ ಒಳ್ಳೆಯದು!

Categories: Articles

Tagged as: , ,

Leave a Reply