ಸ್ವತಃ ವೈದ್ಯರಾದ ಡಾಕ್ಟರ್ ಅನಿತಾ ಘಟ್ನಟ್ಟಿ ಅವರ ಕರೋನ ಅನುಭವ.
ನನ್ನ ಎರಡೂವರೆ ವರ್ಷದ ಮಗ ಅಮ್ಮ ಎಂದು ಬೆಳಗಿನ ಜಾವ ಅಳುತ್ತ ನನ್ನ ಬಳಿಗೆ ಬಂದನು. ಮೂಗು ಬಂದಾಗಿದೆ ಎಂದು ಹೇಳಿದ. ಪದೇ ಪದೇ ಶಿನಿದಾ. ಮೂಗು ಸೋರುತ್ತಿತ್ತು. ಸ್ವಲ್ಪ ಸಂಶಯ ಬಂತು ಮತ್ತು ನನ್ನ ಗಂಡನಿಗೆ ಹೇಳಿದೆ. ಈ ಕರೋನ ಸಮದಲ್ಲಿ ನೆಗಡಿ ಶೀತ ಆದರೆ ಭಯನೇ. ಅವರು ಕಾದು ನೋಡೋಣ ಹೆದರುವುದು ಬೇಡ ಎಂದರು. ನೀನು ಕೂಡ ಮಾಸ್ಕ ಹಾಕಿಬಿಡು ಎಂದರು. ಮಾಸ್ಕ ಹಾಕಿ ಕುಳಿತುಕೊಂಡೆ ಆದರೆ ಮಗು ಬಂದು ಅಮ್ಮ ಇದನ್ನ ಯಾಕೆ ಹಾಕಿದಿ ತಗಿ ತಗಿ ಎಂದು ತೆಗೆದು ಹಾಕಿದ. ಕೆಲಸದವರು ಬಂದರು, ಬೇಗನೆ ನಾನು ಅವನಿಗೆ ಮಾಸ್ಕ ಹಾಕಿದೆ ಮತ್ತು ಅವರ ಬಳಿಗೆ ಹೋಗಲು ಬಿಡಲಿಲ್ಲ. ಅವನನ್ನು ನಾನೆ ತೆಗೆದುಕೊಂಡು ಕುಳಿತೆ. ನಾನು ಕೂಡ ಮಾಸ್ಕ ಧರಿಸಿಕೊಂಡೇ. ಹಾಗೆ ಆ ದಿನ ಕಳೆಯಿತು ಅವನು ಶಿನುತ್ತ ಶಿನುತ್ತ ಇದ್ದ ಆದರೆ ಜ್ವರ ಇರಲಿಲ್ಲ. ಮರುದಿನ ನನ್ನ ಮಗನಿಗೆ ಜ್ವರ ಶುರು ಆಯಿತು, PCT ಹಾಕಿದೆ, ಸ್ವಲ್ಪ್ ಹೊತ್ತಿಗೆ ಜ್ವರ ಕಮ್ಮಿ ಆಯಿತು, ಮತ್ತೆ ಅವನು ಆಡ ತೊಡಗಿದ. ನಮ್ಮ ಇಲಾಖೆಯ ಮುಖ್ಯಸ್ಥರಿಗೆ ಕರೆ ಮಾಡಿ ನಾನು ಬರುವುದಿಲ್ಲ ಎಂದು ತಿಳಿಸಿದೆ. ಹಾಗೆ ನನ್ನ ಎಲ್ಲ ಗೆಳಯರಿಗೆ ಮತ್ತು ಅಪಾರ್ಟ್ಮೆಂಟ್ ಹುಡುಗರಿಗೆ ಮೆಸೇಜ್ ಮಾಡಿದೆ ಯಾರು ನಮ್ಮ ಮನೆಗೆ ಬರಬೇಡಿ ಮತ್ತು ತಮ್ಮ ಮಕ್ಕಳನ್ನು ಕಳಿಸಬೇಡಿ ಅಂತ ಹೇಳಿದೆ. ನಾನು ಆದಷ್ಟು ಮಾಸ್ಕ ಹಾಕಿಕೊಂಡೆ. ನಾನು ನನ್ನ ಮಗನನ್ನು ಕರೆದುಕೊಂಡು ಬೇರೆ ರೂಮಿನಲ್ಲಿ ಮಲಗಿದೆ ಮತ್ತು ನನ್ನ ಗಂಡನಿಗೆ ಬೇರೆ ಮಲಗಲು ಹೇಳಿದೆ. ಆ ದಿನ ಕಳೆಯಿತು. ಮರುದಿನ ನನ್ನ ಮಗನಿಗೆ ವಾಂತಿ ಶುರು ಆಯಿತು, ಮೂರೂ ಬಾರಿ ಅವನು ಬರಿ ನೀರನ್ನು ವಾಂತಿ ಮಾಡಿದ. ನಾನು ಅವನನ್ನು ನನ್ನ ತೊಡೆಯ ಮೇಲೆ ಹಾಕಿ ಕೊಂಡು ಕುಳಿತು ಬಿಟ್ಟೆ. ಯಾವ ಕೆಲಸವನ್ನು ಮಾಡಲಿಲ್ಲ. ಕೆಲಸಕ್ಕೆ ಇವತ್ತು ಹೋಗಲಿಲ್ಲ. ಮಕ್ಕಳ ವೈದ್ಯರಿಗೆ ಕರೆ ಮಾಡಿದೆ ಅವರು ಏನು ಹಾಕುವುದು ಬೇಡ ಸ್ವಲ್ಪ ಕಾಯೋಣ. ಬರಿ ಜ್ವರದ ಹಾಗು ವಾಂತಿಗೆ ಮಾತ್ರ ಔಷಧಿಯನ್ನು ಹಾಕಿ ಅಂತ ಹೇಳಿದರು. ಅದೇ ಸಮಯದಲ್ಲಿ ನನಗೂ ಕೂಡ ನೆಗಡಿ ಮತ್ತು ಶೀತ ಶುರುವಾಯಿತು.
ಮರುದಿನ ನನಗೆ ಸ್ವಲ್ಪ ನೆಗಡಿ ಜೋರಾಯಿತು. ನನ್ನ ಮನೆಯವರು ಆರಾಮವಾಗಿ ಇದ್ದರು ನೆಗಡಿ ಮತ್ತು ಕೆಮ್ಮು ಇರಲಿಲ್ಲ. ಆವತ್ತು ನಾನು ಕೆಲಸಕ್ಕೆ ಹೋಗಲಿಲ್ಲ ಕಾರಣ ನನ್ನ ನೆಗಡಿ. ಅವತ್ತು ಒಂದು ವಿಚಿತ್ರ ನಾನು ಗಮನಿಸಿದೆ ನನಗೆ ನನ್ನ ಮಗನ ಕಕ್ಕ ಕ್ಲೀನ್ ಮಾಡುವಾಗ ಯಾವ ವಾಸನೆ ಬರಲೇಯಿಲ್ಲ, ಅದು ನೆಗಡಿಗೆ ಇರಬೇಕು ಅಂತ ತಿಳಿಕೊಂಡೇ. ಮಗ ಸಂಪೂರ್ಣ ಹುಷಾರಾಗಿದ್ದ. ಅವನಿಗಿದ್ದ ನೆಗಡಿ,ಶೀತ , ಜ್ವರ ಮತ್ತು ವಾಂತಿ ಎಲ್ಲವೂ ಸರಿಹೋಗಿತ್ತು. ಆದರೆ ನನ್ನ ಗಂಡನ ಬಲ ಕಣ್ಣು ಕೆಂಪಾಗಿತ್ತು, ನಾನು ಯಾಕೆ ಇದು ಆಗಿದೆ ಎಂದು ಕೇಳಿದೆ ಅವರು ನಾನು ಕಣ್ಣು ಉಜ್ಜಿರಬೇಕು ಅಂತ ಹೇಳಿದರು ಆದರೆ ಏನು ನೋವು ಇಲ್ಲ ಮತ್ತು ತುರಿಕೆನೂ ಇಲ್ಲ ಎಂದರು. ನನಗೆ ಸಂಶಯ ಬಂತು ಅದಕೆ ನೆಟ್ ತಗೆದು ಕರೋನ ಮತ್ತು ಕಣ್ಣು ಓದಿದೆ ಆಗ ನನಗೆ ಖಚಿತವಾಯಿತು ಇದು ಕರೋನ ಇರಬಹುದು ಅಂತ. ಅವರಿಗೆ ಕೂಡ ಓದಿದ ಆರ್ಟಿಕಲ್ ಕಳುಹಿಸಿದೆ. ಇಬ್ಬರು ನಾಳೆ RT – PCR ಮಾಡಿಸಿಬಿಡೋಣ ಅಂತ ಯೋಚನೆ ಮಾಡಿದೆವು. ಮಾರನೆಯ ದಿನ ನಾವು swab test ಮಾಡಿಸಿದೆವು. ವರದಿಗಾಗಿ ಕಾಯುತ್ತಿದ್ದೆವು, ನನ್ನ ವೈದ್ಯ ಮಿತ್ರರೊಬ್ಬರು ಮೈಕ್ರೋಬಿಯೊಲೊಜಿಸ್ಟ್ ಅವರು ವರದಿ ನೋಡಿ ನಮಗೆ ಪಾಸಿಟಿವ್ ಇದೆ ಎಂದು ತಿಳಿಸಿದರು.ಆ ದಿನ ನಾವು ನಾರ್ಮಲ್ ಆಗಿ ಇದ್ದೆವು ಮತ್ತು ಎಲ್ಲವನ್ನು ಸಮಾಧಾನವಾಗಿ ತೆಗೆದುಕೊಂಡೆವು. ಮರುದಿನದಿಂದ ನನ್ನ ಮನೆಯವರಿಗೆ ಜ್ವರ ಶುರು ಆಯಿತು. ಅವರು ತುಂಬಾ ಸುಸ್ತಾ ಆದರು. ನಾನು ವಿಶ್ರಾಂತಿ ತಗೆದುಕೊಳ್ಳಿ ಅಂತ ಹೇಳಿ ಕೆಲಸ ಮಾಡಲು ಆರಂಭಿಸಿದೆ. ಎಲ್ಲ ಕೆಲಸದವರನ್ನು ನಾನು ಬಿಡಿಸಿಬಿಟ್ಟೆ ಹಾಗಾಗಿ ಎಲ್ಲವನ್ನು ನಾನು ಮಾಡಲು ಆರಂಭಿಸಿದೆ. ೩ ದಿನಗಳ ವರೆಗೆ ನಮ್ಮ ಮನೆಯವರಿಗೆ ಜ್ವರ ಮತ್ತು ಮೈಕೈ ನೋವು ಇತ್ತು, ಆದರೆ ನಾನು ಆರಾಮಾಗಿಯಿದ್ದೇ. ಎಲ್ಲ ಕೆಲಸವನ್ನು ಚೆನ್ನಾಗಿ ಮಾಡುತಿದ್ದೆ. ನಮ್ಮ ಮನೆಯರು ರೆಸ್ಟ್ ತೆಗೆದುಕೋ ಬಹಳ ಕೆಲಸ ಮಾಡಬೇಡ ಆಂತ ಹೇಳಿದರು, ಆದರೆ ನಾನು ಕೇಳಲಿಲ್ಲ. ೩ ನೆಯ ದಿನ ಅವರಿಗೆ ಜ್ವರ ಕಮ್ಮಿ ಆಯಿತು ಆದರೆ ನನಗೆ ಶುರುವಾಯಿತು. ಕ್ರಮೇಣ ಜ್ವರ ಜಾಸ್ತಿ ಆಯಿತು. ನಮ್ಮ ಫಿಸಿಷಿಯನ್ ಆಂದ್ರು ೨ ದಿನ ಕಾಯೋಣ ಅಂತ. ನನಗೆ cytokine storm ಆಗಿತ್ತು ಎಂದರೆ ನನ್ನ ರೋಗ ನಿರೋಧಕ ಶಕ್ತಿ overactive ಆಗಿ response ಕೊಡುತಿತ್ತು ಅಂತ ಅರ್ಥ. ಜ್ವರ ತುಂಬಾ ಜಾಸ್ತಿ ಆಯಿತು ಮತ್ತು ನನ್ನ ಸಾಚುರೇಶನ್ ಲೆವೆಲ್ ಡ್ರಾಪ್ ಆಯಿತು, 99% ಇಂದ 94 %. ಸ್ವಲ್ಪ ಮಟ್ಟಿಗೆ ಉಸಿರಾಟಕ್ಕೆ ತೊಂದರೆ ಶುರುವಾಯಿತು. ಆ ದಿನ ಸಿಟಿ ಸ್ಕ್ಯಾನ್ ಮತ್ತು Blood markers check ಮಾಡಿಸಲು ಹೇಳಿದರು.

ಸಿಟಿ ಸ್ಕೋರ್ 13 ಆಗಿತ್ತು ಮತ್ತು ಮಾರಕರ್ಸ್ ಹೆಚ್ಚಿಗೆ ಆಗಿದ್ದವು. ನಮ್ಮ ಫಿಸಿಷಿಯನ್ ಅಡ್ಮಿಟ್ ಆಗಲು ಹೇಳಿದರು. ರೇಡಿಯೊಲೊಜಿಸ್ಟ್ ಕೂಡ ಅಡ್ಮಿಟ್ ಆಗಿಬಿಡಿ ತುಂಬಾ ಡ್ಯಾಮೇಜ್ ಆಗಿದೆ ಅಂತ ಹೇಳಿದರು. ನನ್ನ ಚಿಕ್ಕ ಮಗು ಬರಿ ಎರಡೂವರೆ ವರ್ಷ ಅವನನ್ನು ಮನೆಯಲ್ಲಿ ಬಿಟ್ಟು ಹೇಗೆ ಆಸ್ಪತ್ರೆಗೆ ಹೋಗುವುದು ಅಂತ ಆತಂಕ ಆಗತೊಡಗಿತು. ನಮ್ಮ ಯಜಮಾನರೂ ಕೂಡ ತುಂಬಾ ಒತ್ತಡದಲ್ಲಿದ್ದರು. ನನ್ನ ತಾಯಿ ತಂದೆ ಮತ್ತು ತಂಗಿ, ತಮ್ಮ ಮತ್ತು ಅತ್ತೆ ಮಾವ ಕೂಡ ತುಂಬಾ ದುಃಖಿತರಾದರು. ನನ್ನ ತಾಯಿಯ ಕಣ್ಣೀರು ನಿಲ್ಲಲ್ಲೇ ಇಲ್ಲ. ಹೇಗೋ ಗಟ್ಟಿ ಮನಸು ಮಾಡಿ ನಾನು ಅಡ್ಮಿಟ್ ಆದೆ. ಆದರೆ ನನ್ನ ಮನಸೆಲ್ಲ ನನ್ನ ಮನೆಯೆಲ್ಲಿಯೇ ಇತ್ತು. ಹಾಸ್ಪಿಟಲ್ಗೆ ಹೋಗುವಾಗ ನಾನು ಮತ್ತೆ ಮನೆಗೆ ಬರ್ತಿನಾ ಮತ್ತೆ ನನ್ನ ಮಕ್ಕಳನ್ನು ಮತ್ತು ಗಂಡನ್ನನ್ನು ನೋಡತೀನಾ ಎಂದು ಅನೇಕ ವಿಚಾರಗಳು ಬಂದವು ಆದರೂ ಗಟ್ಟಿ ಮನಸು ಮಾಡಿ ಹೋದೆ. ಆ ರಾತ್ರಿ ನನಗೆ ಮತ್ತು ನನ್ನ ಗಂಡನಿಗೆ ಒಂದು ಕರಾಳ ರಾತ್ರಿ ಆಗಿತ್ತು ಅವರು ಮಲಗಲಿಲ್ಲ ಮತ್ತು ನಾನು ಮಲಗಲಿಲ್ಲ. ಅವರಿಗೆ ನನ್ನ ಚಿಂತೆ ಮತ್ತು ನನಗೆ ಅವರ ಚಿಂತೆ. ತಮಗೂ ಇನ್ನು ಆರಾಮವಾಗಿರಲ್ಲಿ ಮತ್ತು ಸಣ್ಣ ಮಗು ಯಾರು ಬರುವವರು ಇಲ್ಲ ಯಾರು ಹೋಗುವವರು ಇಲ್ಲ. ಎಲ್ಲ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು ಮೇಲಾಗಿ ನಾನು ಕಷ್ಟದಲ್ಲಿ ಇದ್ದೆ. ಇಂತಹ ಸ್ಥಿತಿ ಯಾರಿಗೂ ಬರಬಾರದು.
ಇದರ ಮೇಲೆ ಅಪಾರ್ಟ್ಮೆಂಟ್ ಸೊಸೈಟಿ ಜನರು ನಾವು ಕರೋನ ಆದರೂ ಮನೆಯೆಲ್ಲಿ ಇರದೇ ಹೊರಗೆ ಅಡ್ಡಾಡುತ್ತಿದ್ದೇವೆ ಅಂತ ಕಂಪ್ಲೇಂಟ್ ಮಾಡಿದರು. ಅದು ನಾವು ಟೆಸ್ಟ್ಸ್ ಮಾಡಿಸಲು ಎರಡು ಬಾರಿ ನಮ್ಮ ಕಾರಲ್ಲಿ ಮಾಸ್ಕ ಹಾಕಿಕೊಂಡು ಹೋದರೆ ಈ ತರಹ ಕಂಪ್ಲೇಂಟ್ ಮಾಡಿದರು. ಕಂಪ್ಲೇಂಟ್ ಮಾಡಿದವರೆಲ್ಲರೂ ಸುಶಿಕ್ಷಿತರು ! ಕಲಿತವರೆಲ್ಲ ತಿಳಿದವರು ಎನ್ನುವುದು ಸತ್ಯನಾ ಎನ್ನುವ ಸಂಶಯ ಮೂಡಿತು!
ಇದೆಲ್ಲದರ ಮಧ್ಯೆ ನನ್ನ ಒಳ್ಳೆಯ ಗೆಳಯರು ಇದ್ದರು ಅವರು ದಿನ 3 ಹೊತ್ತು ನನ್ನ ಗಂಡ ಮತ್ತು ಮಗನಿಗೆ ಊಟ ಕೊಟ್ಟರು, ಅವರಿಗೆ ಎಷ್ಟು ಕೃತಜ್ಞೆತೆ ಹೇಳಿದರು ಸಾಕಾಗಲ್ಲ.
ಇತ್ತ ಮಾರನೆಯ ದಿನ ನನ್ನ ಸ್ಯಾಚುರೇಶನ್ ಮತ್ತೆ 90% ಗೆ ಡ್ರಾಪ್ ಆಯಿತು ಮತ್ತು ನನಗೆ ಊಸಿರಾಟದ ತೊಂದರೆ ಶುರುವಾಯಿತು. ನಾನು ರವಿಗೆ ಅಂದರೆ ನನ್ನ ಗಂಡನಿಗೆ ಕಾಲ್ ಮಾಡಿ ಹೇಳಿದೆ. ಅವರು ಟೆನ್ಸ್ ಆದರೂ ಮತ್ತು ಡಾಕ್ಟರ್ ಗೆ ಕಾಲ್ ಮಾಡಿದರು, ಅವರು ಕಾಲ್ ತೆಗೆಯಲಿಲ್ಲ ಮತ್ತು ಕಾಲ್ ಯು ಬ್ಕ್ಯಾಕ್ ಅಂತ ಹೇಳಿದರು. ಆಗ ರವಿ ನಮ್ಮ ಕ್ಲೋಸ್ ಫ್ರೆಂಡ್ ಒಬ್ಬರಿಗೆ ಕಾಲ್ ಮಾಡಿದರು, ಅವರು ಹೆದರಬೇಡಿ ನಾವು ಪಾಸಿಟಿವ್ ಪ್ರೆಷರ್ ನೆಬುಲೈಝಷನ್ ಅವಳಿಗೆ ಕೊಡೋಣ ಅಂತ ಹೇಳಿದರು. ಕರೋನ ವಾರ್ಡಿಗೆ ಯಾರಿಗೂ ಎಂಟ್ರಿ ಇರುವುದಿಲ್ಲ, ರವಿ ವೈದ್ಯರಾದರು ಮತ್ತು ಅದೇ ಆಸ್ಪತ್ರೆಯಲ್ಲಿ ಇದ್ದರೂ ಅವರು ಕೂಡ ಬರುವಹಾಗಿಲ್ಲ, ಹಾಗಾಗಿ ಅವರು ಅವರ ಡೆಪಾರ್ಟ್ಮೆಂಟ್ನ ನ ಫಾರ್ಮಸಿ ವರ್ಕರ್ ಒಬ್ಬನಿಗೆ ಹೇಳಿದರು. ಅವನು ತುರ್ತಾಗಿ ಆಗಿ ನೆಬುಲೈಝೇರ ಮಷೀನ್ ಖರೀದಿ ಮಾಡಿ ತಂದುಕೊಟ್ಟರು. ಅದರ ಜೊತೆಗೆ ನನ್ನ ಫಿಸಿಷಿಯನ್ ಫ್ರೆಂಡ್ ಎಲ್ಲ ಡ್ರಗ್ಸ್ಗಳನ್ನೂ ಕೊಡಲು ಪ್ರಾರಂಭಮಾಡಿದರು. ಎಲ್ಲ ಕಡೆ ನನಗೆ ಚುಚ್ಚುತಿದ್ದರು, ತುಂಬಾ ನೋವು ಆಗುತಿತ್ತು. ಎಲ್ಲರಿಂದ ದೂರ ಒಬ್ಬಳೇ ಇರಬೇಕು, ದೇಹೆದಲ್ಲಿ ನೋವು, ಗಂಡ ಮತ್ತು ಮಕ್ಕಳನ್ನು ನೋಡುವಹಾಗಿಲ್ಲ, ಊಟ ಸೇರುತ್ತಿಲ್ಲ , ನನ್ನ ಔಷದಿ ನಾನೆ ತಗೆದುಕೊಳ್ಳಬೇಕು ನನ್ನ ಕೆಲಸ ನಾನೆ ಮಾಡಿಕೊಳ್ಳಬೇಕು ನನಗೆ ತುಂಬಾ ಬೇಜಾರಾಯಿತು. ದೇವರಿಗೆ ನನ್ನನು ಇಲ್ಲಿಂದ ಬೇಗ ಕಳಿಸು ಅಂತ ಬೇಡಿಕೊಂಡೆ. ನಾನು ವ್ಯಾಕ್ಸೀನ್ ಎರಡು ಡೋಸ್ ತೆಗೆದುಕೊಂಡಿದ್ದೆ ಅದರಿಂದಾಗಿಯೇ ಬಹುಶ ನನಗೆ ಹೆಚ್ಚಿನ ತೊಂದರೆ ಆಗಲಿಲ್ಲ. ಅದೇ ದಿವಸ ಜ್ವರ ಕಮ್ಮಿ ಆಯಿತು ಎಲ್ಲ ಔಷಧಿಗಳು ಸರಿಯಾಗಿ ಕೆಲಸ ಮಾಡಿದವು ನಾನು ಸ್ವಲ್ಪ ಸ್ವಲ್ಪ ಆರಾಮಗ ತೊಡಗಿದೆ. 4 ನೇಯ ದಿನ ಡಾಕ್ಟರ್ ಈಗ ನೀವು ಆರಾಮಾಗಿದ್ದೀರಾ ಇವತ್ತು ಡಿಸ್ಚಾರ್ಜ್ ಮಾಡೋಣ ಅಂತ ಹೇಳಿದರು, ನನ್ನ ಖುಷಿಗೆ ಪಾರವೇಯಿರಲಿಲ್ಲ. ಎಲ್ಲ ಫಾರ್ಮಾಲಿಟಿಸ್ ಮುಗಿಸಿ ಡಿಸ್ಚಾರ್ಜ್ ಆದೆ. ಒಟ್ಟು ನಾಲ್ಕು ದಿನಗಳಿಗೆ 1,45,000 /- ಬಿಲ್ ತುಂಬಿ ಮನೆಗೆ ಬಂದೆ.
ಮನೆಗೆ ಬಂದ ಮೇಲು ಕೊಡ ನನಗೆ ಇನ್ನು ಶಕ್ತಿ ಇರಲಿಲ್ಲ. ನಾನು ಸ್ಟೀರಿಯೋಡ್ಸ್ ಮೇಲೆ ಇರುವ ಕಾರಣದಿಂದ ನನಗೆ ತುಂಬಾ ಕಾಲು ನೋವು ಇತ್ತು. ನಾನು ಯಾವುದೇ ಕೆಲಸ ಮಾಡುವ ಸ್ಥಿತಿ ಎಲ್ಲಿ ಇರಲಿಲ್ಲ , ಅಡಿಗೆ ನನ್ನ ಫ್ರೆಂಡ್ಸ್ ಕೊಟ್ಟರು ಮತ್ತು ಮನೆಯ ಕೆಲಸ ನನ್ನ ಯಜಮಾನರು ಮಾಡಿದರು. ಎಂಟು ದಿನ ರೆಸ್ಟ್ ತೆಗೆದುಕೊಂಡ ಮೇಲೆ ಸ್ವಲ್ಪ ಸ್ವಲ್ಪ ಶಕ್ತಿ ಬಂತು ಮತ್ತು ನಾನು ಕ್ರಮೇಣ ಕೆಲಸ ಮಾಡಲು ಆರಂಭಿಸಿದೆ. ಅಲ್ಲಿಗೆ ಮೂರೂ ವಾರಗಳು ಕಳೆದವು. ಯಜಮಾನರು ಕೆಲಸಕ್ಕೆ ಸೇರಿದರು. ನಾನು ಇನ್ನು ಒಂದು ವಾರ ಬಿಟ್ಟು ಕೆಲಸಕ್ಕೆ ಹೋಗಲು ಪ್ಲಾನ್ ಮಾಡಿದೆ. ಕೆಲಸದವರನ್ನು ಬರಲು ಹೇಳಿದೆ ಆದರೆ ಎಲ್ಲರೂ ಹೆದರಿ ಒಂದು ವಾರ ಬಿಟ್ಟು ಬರುತ್ತೇವೆ ಅಂತ ಹೇಳಿದರು. ನನಗೆ ಕೆಲಸ ತಪಲ್ಲಿಲ್ಲ. ಆನ್ಲೈನ್ ಕ್ಲಾಸಗಳನ್ನು ಶುರು ಮಾಡಿದೆ. ಮತ್ತು ಕಾಲೇಜು ಹೋಗಲು ಶುರು ಮಾಡಿದೆ.

ಇದೆಲ್ಲದರಿಂದ ನಾನು ಕಲಿತ ಪಾಠ ಎಂದರೆ ವ್ಯಾಕ್ಸೀನ್ ತಗೆದುಕೊಂಡರೂ ನಮಗೆ ಕರೋನ ಬರಬಹುದು ಆದರೆ ಅದರ ಪರಿಣಾಮ ಬಹಳ ಇರುವುದಿಲ್ಲ ಅದಕ್ಕಾಗಿಯೇ ನಾನು ವೆಂಟಿಲೇಟರ್ ಮೇಲೆ ಹೋಗಲಿಲ್ಲ. ಅದರ ಜೊತೆಗೆ ನಾವು ಎಲ್ಲರ ಕಷ್ಟಗಳಲ್ಲಿ ಸಹಭಾಗಿಯಾಗಬೇಕು ಮತ್ತು ಸಹಾಯ ಮಾಡಬೇಕು. ನನಗೆ ಸಹಾಯ ಮಾಡಿದ ಸ್ನೇಹಿತರ ಋಣ ತೀರಿಸುವುದು ಅಸಾಧ್ಯವಾದದ್ದು.
Categories: Articles
