Articles

“ಶಿವನೇ ಬಸವ ,ಬಸವ ಶಿವನೇ “- ಮಹಾಮಾನವತಾವಾದಿ ಬಸವಣ್ಣ

By ಮಲ್ಲಮ್ಮ ಬಬಲಾದಿ, ಶಿಕ್ಷಕರು

ಭಾರತೀಯ ಧರ್ಮ ಇತಿಹಾಸದಲ್ಲಿ 12ನೇ ಶತಮಾನವು ಸುವರ್ಣಾಕ್ಷರಗಳಿಂದ ಬರೆದಿಡುವಂಥ ಶತಮಾನವಾಗಿದೆ. ಕಾಯಕ ತತ್ವದ ಕ್ರಾಂತಿಪುರುಷ ಬಸವಣ್ಣ ಕನ್ನಡ ನೆಲದಲ್ಲಿ ಉದ್ಭವಿಸಿದ ಸಹಸ್ರಮಾನಪುರಷ . ಕಾಯನಿಷ್ಠೆ ಎಂಬ ಖಡ್ಗಹಿಡಿದು ಐದು ಸಾವಿರ ವರ್ಷಗಳಿಂದ ಜನಸಮುದಾಯದ ಜೀವ ತಿನ್ನುತ್ತಿರುವ ಕರ್ಮವಾದ ಎಂಬ ದುಷ್ಟಶಕ್ತಿಯ ವಿರುದ್ಧ ಹೋರಾಡುತ್ತಾ ಮಹಾವೀರರಾದರು. ಬಸವಣ್ಣನವರು ನರಕದ ಬೆಂಕಿಯ ಮೇಲೆ ನೀರು ಸುರಿದರು. ಸ್ವರ್ಗದ ಭ್ರಮೆಯನ್ನು ಸುಟ್ಟುಹಾಕಿ ಕೈಲಾಶಎಂಬುದೇನೋ ಪೃಥ್ವಿಯ ಮೇಲೆಂದು ಮೊರಡಿ ಎಂದರು. ಮೃತ್ಯುಲೋಕ ಎಂಬುದು ಕರ್ತಾರನ ಕಮ್ಮಟವಯ್ಯ ಎಂದು ಸಾರಿದರು. ಅವರು ಎಲ್ಲವನ್ನೂ ತ್ಯಾಗ ಮಾಡುತ್ತಾ ತಮ್ಮ ನಡೆ-ನುಡಿಗಳಲ್ಲಿ ಏಕತೆ ಸಾಧಿಸುವುದರ ಮೂಲಕ ಜಗಜ್ಯೋತಿಯಾದರು.

ಕಲಚೂರಿ ವಂಶದ ಬಿಜ್ಜಳ ಚಕ್ರವರ್ತಿಯ ಆಳ್ವಿಕೆ ಕಾಲದಲ್ಲಿ ಪ್ರಧಾನಮಂತ್ರಿಯಾಗಿದ್ದ ವಿಶ್ವಗುರು ಬಸವಣ್ಣನವರು ಜಗತ್ತಿನ ಮೊಟ್ಟ ಮೊದಲನೆಯ ಸಮಾಜೋ-ಧಾರ್ಮಿಕ ಸಂಸತ್ತು ಎಂದೆನಿಸಿದ ಅನುಭವ ಮಂಟಪ ಸ್ಥಾಪಿಸಿದರು. ಈ ಅನುಭವ ಮಂಟಪದ ಮೂಲಕ ವರ್ಣ-ವರ್ಗ ಲಿಂಗ-ಜಾತಿ ಭೇದ ರಹಿತವಾದ ಸಮತೆ-ಸ್ವಾತಂತ್ರ್ಯ- ಬಂಧುತ್ವ ಮಾನವೀಯತೆಯ ತಳಹದಿಯ ಮೇಲೆ ಇಷ್ಟಲಿಂಗ ಪರಂಪರೆಯ ವಿನೂತನವಾದ ಲಿಂಗಾಯತ ಧರ್ಮ ಸಮಾಜ ಸಂಸ್ಕೃತಿಯನ್ನು ಸ್ಥಾಪಿಸಿದವರು ವಿಶ್ವಗುರು ಬಸವಣ್ಣನವರು.

ಅನುಭವ ಮಂಟಪದಲ್ಲಿ ಗುರುಬಸವಣ್ಣನವರು ಶೂನ್ಯ ತತ್ವದ ಸಾಕಾರವಾಗಿ ಶೂನ್ಯಸಿಂಹಾಸನವನ್ನು ಸ್ಥಾಪಿಸಿ ಅಲ್ಲಮಪ್ರಭುಗಳನ್ನು ಅನುಭವ ಮಂಟಪದ ಅಧ್ಯಕ್ಷರಾಗಿಸಿ ಅವರ ಗಣಾಧ್ಯಕ್ಷ ಯಲ್ಲಿ 770 ಶರಣ-ಶರಣೆಯರ ಚರ್ಚೆ ಚಿಂತನ-ಮಂಥನ ನಡೆದವು. ಶರಣ-ಶರಣೆಯರ ಅನುಭವದಿಂದ ಮಾಡಿಬಂದುದೇ ವಚನ ಎಂಬ ವಿನೂತನವಾದ ಧರ್ಮದರ್ಶನ ವಾಜ್ಞಯ!

ಬಸವಣ್ಣನವರದು ವೈವಿಧ್ಯವಾದ ವ್ಯಕ್ತಿತ್ವ ಧರ್ಮ, ಸಮಾಜ ,ದರ್ಶನ, ರಾಜಕೀಯ ,ನೈತಿಕತೆನ್ನೆತ್ತಿ ಮಾತನಾಡುವ ಸಂದರ್ಭದಲ್ಲಿ ಬಸವಣ್ಣ ಬಂದುಹೋಗುತ್ತಾರೆ. ಅಸ್ಪೃಶ್ಯರಿಗೆ ಬಸವಣ್ಣ ಕಾರ್ಯಗಳನ್ನು ಕೈಗೊಂಡರು. ಅಸ್ಪೃಶ್ಯರು ಕೊರಳಿಗೆ ಉಗಳಲು ಮಡಿಕೆ ಕಟ್ಟಿಕೊಂಡು ಮಡಿವಂತರ ಕಣ್ಣು ತಪ್ಪಿಸಿ ತಿರುಗುವ ಅಂದಿನ ದಿನಮಾನದಲ್ಲಿ, ನಡೆದಾಡುವ ನಮ್ಮ ಹೆಜ್ಜೆ ನೋಡಬಾರದೆಂದು ಮುಳ್ಳಿನ ಕೊಂಬೆಯನ್ನು ಕಟ್ಟಿಕೊಂಡು ಮುಂದೆ ಸಾಗುವ ಹಾದಿಯಲ್ಲಿ ವೇದಮಂತ್ರಗಳನ್ನುಕೇಳಬಾರದು. ಅಪ್ಪಿತಪ್ಪಿ ಕೇಳಿದಲ್ಲಿ ಸೀಸನ್ನು ಅವರ ಕಿವಿಯಲ್ಲಿ ನಿರ್ದಯದಿಂದ ಸುರುವುತಿದ್ದ ಆ ಕ್ರೂರ ವ್ಯವಸ್ಥೆ ನಡುವೆ ಸಾಮಾಜಿಕ ಸ್ವಾಸ್ಥ್ಯ ಕೆಟ್ಟು ಗಬ್ಬೆದ್ದು ನಾರುತ್ತಿದ್ದ ಸಂದರ್ಭದಲ್ಲಿ ಸರ್ವ ದಯಾಪರ ವ್ಯಕ್ತಿತ್ವ ಬಸವ.

ಪ್ರಕೃತಿಯಲ್ಲಿ ಸ್ತ್ರೀ ಕೋಮಲತೆಯನ್ನು ಪ್ರತಿನಿಧಿಸಿದರೂ ಅಬಲೆಯಲ್ಲ . ಅವಳು ಸಬಲೆ! ವ್ಯಕ್ತಿಯ ತುಂಬು ಜೀವನಕ್ಕೆ ಅಕ್ಕ-ತಂಗಿ-ತಾಯಿ ಆಗಿ ಸತಿ ಸಹಗಮನೆಯಾದ ಅವಳನ್ನು ಶೂದ್ರಳೆಂದು ಹಳಿದು ಧರ್ಮಾಧಿಕಾರಿ ನೀಡಿದ ಧರ್ಮಶಾಸ್ತ್ರವನ್ನು ಪ್ರಶ್ನಿಸುವ ಧೈರ್ಯ ಬಸವಣ್ಣನವರಿಗೆ ಬಿಟ್ಟು ಇನ್ಯಾರಿಗೂ ಇರಲಿಲ್ಲ. ಅಂದು ಮಾನವೀಯ ಹಿನ್ನೆಲೆಯಲ್ಲಿ ಅರಿವುಳ್ಳ ಮಹಿಳೆಯರಿಂದ ವಚನಗಳನ್ನು ಬರೆಯಿಸಿ ಅವರನ್ನು ಪುರುಷರಿಗೆ ಸಮಾನವಾದ ಎನ್ನುವುದಕ್ಕಿಂತ ಮಹಿಳೆರಿಗೆ ಮಹಾದೇವಿ ಸ್ಥಾನ ಕೊಡಿಸಿ ಅನುಭವ ಮಂಟಪದಲ್ಲಿ ‘ಶರಣೆಯರು” ಎಂದು ಸ್ವತಂತ್ರ ವಿಚಾರಧಾರೆಗೆ ಅವಕಾಶ ಮಾಡಿಕೊಟ್ಟ ಬಸವಣ್ಣ ಸಾಮೂಹಿಕ ಸ್ತ್ರೀ ವಿಮೋಚನೆಯ ಸಂದರ್ಭದಲ್ಲಿ ಪ್ರಪಂಚದ ಪ್ರಥಮಾಚಾರ್ಯ ಎನಿಸುತ್ತಾರೆ.

ಹನ್ನೆರಡನೆಯ ಶತಮಾನದಲ್ಲಿ ಅಧ್ಯಾತ್ಮಿಕ ಪ್ರಜ್ಞೆಯಿಂದ ಕೂಡಿದ ಸಮಾಜಿಕ ಆಂದೋಲನಕ್ಕೆ ನಾಂದಿ ಹಾಡಿದ ಬಸವಣ್ಣನವರು ಇಂದಿಗೂ ಕೋಟ್ಯಂತರ ಜನರ ಹೃದಯಾಸಿಂಹಾಸನದಲ್ಲಿ ರಾರಾಜಿಸುತ್ತಿದ್ದಾರೆ. ಜನರು ಬಸವ ಪ್ರಜ್ಞಾವಂತರಾದರೆ ಈ ನಾಡು ಸರ್ವರೀತಿಯಿಂದಲೂ ಸುಂದರವಾಗುವದರಲ್ಲಿ ಸಂಶಯವಿಲ್ಲ.

Categories: Articles

Tagged as: ,

Leave a Reply