
ಗುಂಡ್ಲುಪೇಟೆ ತಾಲೂಕಿನ ಬೈಯಣಪುರದಲ್ಲಿ ೧೯೩೪ ಡಿಸೆಂಬರ್ ೨೫ರಂದು ಜನನ. ತಂದೆ ಜನಮುಖಿ ಕಾರ್ಯಗಳಲ್ಲಿ ಎತ್ತಿದ ಕೈ! ಇದೆ ಇರಬೇಕು ನಜೀರ್ ಸಾಹೇಬರಿಗೆ ಸ್ಫೂರ್ತಿ. ತಾನು ರಾಜಕೀಯದಲ್ಲಿ ತೊಡಗಿ ಜನರ ಕಷ್ಟಗಳಿಗೆ ಹೆಗಲ ಕೊಡುವ ತವಕ! ತುಂಬು ಕುಟುಂಬ ನಾಲ್ಕು ಗಂಡು ಮಕ್ಕಳು, ೫ ಜನ ಹೆಣ್ಣು ಮಕ್ಕಳು. ನಜೀರ್ ಸಾಹೇಬರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮೂರಲ್ಲೇ ಮುಗಿಸಿದ್ದರು. ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿಗೆ ಪಯಣ! ಶಿಕ್ಷಣ ಮುಗಿಸಿ ರಾಜಕೀಯ ಪ್ರವೇಶ!
ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಸ್ಪೀಕರ್ (೧೯೭೨-೯೧೭೮)ಎಂಬ ಹೆಗ್ಗಳಿಕೆ ಜೊತೆ ೭ ಬಾರಿ ಗುಂಡ್ಲುಪೇಟೆಯ ಶಾಸಕರಾಗಿದ್ದ ಕೆ ಎಸ್ ನಾಗರತ್ನಮ್ಮನವರ ಗರಡಿಯಲ್ಲಿ ರಾಜಕೀಯ ಪರಿಣಿತಿಯನ್ನು ಪಡೆದ್ದಿದ್ದರು. ನಾಗರತ್ನಮ್ಮನವರ ವಿಶ್ವಾಸ ಗಳಿಸಿಗೊಂಡಿದ್ದ ನಜೀರ್ ಸಾಹೇಬರು ಪುರಸಭೆಯ ಚುನಾವಣೆಯಲ್ಲಿ ಗೆದ್ದು ಪುರಸಭೆಯ ಅಧ್ಯಕ್ಷರಾಗಿದ್ದವರು.
ಸದ್ಯದ ಪರಸ್ಥಿತಿಯಲ್ಲಿ ಅನುಭವವಕ್ಕೆ ಮತ್ತು ಪ್ರಾಮಾಣಿಕತನಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಒಂದೇ ಬಾರಿ ಶಾಸಕನಾಗಿ ಸ್ವಲ್ಪ್ ಕೆಲಸ ಮಾಡಿ ನಾನು ಪ್ರಾಮಾಣಿಕ ಎಂದು ಮುಖ್ಯಮಂತ್ರಿ ಮತ್ತು ಮಂತ್ರಿ ಆಗುವ ಕನಸು ಕಾಣುವ ರಾಜಕೀಯ ದುರೀಣರನ್ನು ನೋಡಿದ್ದೇವೆ. ಪ್ರಾರಂಭದಲ್ಲಿ ಎಲ್ಲ ನಾಯಕರು ಪ್ರಾಮಾಣಿಕರೇ! ಹುದ್ದೆ ನಿರ್ವಿಹಿಸಿದ ಮೇಲೇನೆ ತಿಳಿಯುವುದು ಒಳಮರ್ಮ! ಒಂದೊಂದು ಬಾರಿ ಯುವಕರಿಗೆ ಅವಕಾಶ ಕೊಡಬೇಕು ಎಂದು ಇಂತಹ ಪ್ರಯೋಗಗಳು ಆಗುತ್ತಿವೆ. ಅದು ಒಳ್ಳೆಯ ಬೆಳವಣಿಗೆ ಮತ್ತು ಕೆಲವೊಮ್ಮೆ ವಿಚಿತ್ರವಾದ ಪ್ರಯೋಗಗಳು ನಿರೀಕ್ಷಿತ ಫಲಿತಾಂಶ ಕೊಟ್ಟಿಲ್ಲ. ಸಮ್ಮಿಶ್ರ ಪರಸ್ಥಿತಿ ಬಂದೊದಗಿ ಯಾರಿಗೆ ಯಾವ ಸ್ಥಾನ ಲಾಟರಿ ಹೊಡೆಯುತ್ತೆ ಎನ್ನುವುದು ಊಹೆ ಮಾಡುವದಕ್ಕೂ ಆಗುವದಿಲ್ಲ. ಆಪರೇಷನ್ ಮಾಡಿ ನಿಮಗೆ ಮಂತ್ರಿ ಕೊಡುತ್ತೇವೆ ಎಂದು ಹೇಳಿದ ಮೇಲೆ ಮಂತ್ರಿ ಸ್ಥಾನ ಕೊಡಲೇಬೇಕು ! ಅದು ಅವರ ವಚನ! ಆದರೆ ಇದೆ ಖಾತೆ ಬೇಕು ಇಲ್ಲವಾದರೆ ನನ್ನ ದಾರಿ ನನಗೆ ಮತ್ತು ಮಂತ್ರಿ ಸ್ಥಾನಕ್ಕಾಗಿ ದೆಹಲಿ ಸುತ್ತುವುದು ಎಷ್ಟು ಸರಿ? ಇವತ್ತಿನ ಪರಸ್ಥಿತಿಯಲ್ಲಿ ಒಳ್ಳೆಯ ಖಾತೆ ಎಂದರೆ ಜನರ ಸಮಸ್ಯೆಗೆ ಪರಿಹಾರ ಒದಗಿಸಿ ತೃಪ್ತಿ ಪಡೆಯುದರಲ್ಲಿ ಇಲ್ಲ! ಯಾವ ಖಾತೆಗೆ ಜಾಸ್ತಿ ಅನುದಾನ ಬರುತ್ತೋ ಅದರಲ್ಲಿ ಪ್ರತಿಶತ ಹೊಡೆಯುವ ಹುನ್ನಾರ!(ಕಮಿಷನ್ ಮಂತ್ರಿ). ಯಾರಿಗೂ ಜನ ಸೇವೆ ಮಾಡಬೇಕು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡಯ್ಯಬೇಕು ಎನ್ನುವ ಮಹದಾಸೆ ತುಂಬಾ ಕಡಿಮೆ! ಕೆಲವರ ಹತ್ತಿರ ಇನ್ನು ತುಡಿತ ಇದೆ, ಅಂಥವರೇ ನಾಯಕರಾಗಬಲ್ಲರು! ಯಾಕೆ ಇದನ್ನು ಹೇಳಿದೆ ಎಂದರೆ ನಜೀರ್ ಸಾಹೇಬರು ಯಾವ ಖಾತೆ ಮಂತ್ರಿ ಆಗಿದ್ದರು ಮತ್ತು ಅವರಿಂದ ಎಂಥಹ ಕೆಲಸಗಳು ಜನರಿಗೆ ತಲುಪಿದವು ಎಂದು ತಾಳೆ ಹಾಕಿದಾಗ ನಜೀರ್ ಸಾಹೇಬರಂತ ನಾಯಕರು ತುಂಬಾ ಕಡಿಮೆ! ಅವರು ಮಾಡಿದ ಕೆಲಸಗಳೇನು?

ರಾಜ್ಯ ಕಂಡಂಥ ಮಹಾಮೇಧಾವಿ ಮತ್ತು ಚಾಣಾಕ್ಷ ರಾಜಕಾರಣಿ ರಾಮಕೃಷ ಹೆಗ್ಡೆಯವರು ಎರಡು ಬಾರಿ ಮುಖ್ಯಮಂತ್ರಿಯಾದವರು. ಇವರ ಬಗ್ಗೆ ಅನೇಕ ಆಸಕ್ತಿಕರ ವಿಚಾರಗಳಿಗೆ. ಅಧಿಕಾರ ಸಿಕ್ಕರೆ ಫೆವಿಕಾಲ್ ಹಾಕಿಕೊಂಡು ಕುಳಿತುಕೊಳ್ಳುವ ರಾಜಕಾರಣಿಗಳು ತುಂಬಾ ಇದ್ದಾರೆ. ಆದರೆ ರಾಮಕೃಷ್ಣ ಹೆಗ್ಡೆಯವರು ಸ್ವತಃ ತಾವೇ ಮುಖ್ಯಮಂತ್ರಿ ಇದ್ದಾಗ ರಾಜ್ಯದಲ್ಲಿ ೧೯೮೪ರಲ್ಲಿ ಲೋಕಸಭೆಯ ಚುನಾವಣೆ ನಡೆದವು. ಸರ್ಕಾರದಲ್ಲಿ ಇದ್ದ ಪಕ್ಷ ಹೀನಾಯವಾಗಿ ಸೋತಿತ್ತು. ವಿರೋಧಿಗಳು ಎಚ್ಚರವಾಗಿ ಇದು ನಿಮ್ಮ ಜನಪ್ರಿಯತೆಗೆ ಸಾಕ್ಷಿ, ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಿ ಎಂದು ಹೇಳುವ ಮೊದಲೇ ಹೆಗ್ಡೆಯವರು ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಿದ್ದರು. ಕಾರಣ? ಲೋಕಸಭೆಯ ಸೋಲು! ಆದರೆ ವಿಧಾನಸಭೆಯ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ ಮತ್ತೊಮ್ಮೊ ಮುಖ್ಯಮಂತ್ರಿಯಾಗಿದ್ದರು. ವಿಧಾನಸಭೆಯ ಗೆಲುವಿಗೆ ಅವರ ಸರ್ಕಾರ ಮಾಡಿದ್ದ ಜನಪರ ಯೋಜನೆಗಳು. ಮಂತ್ರಿಯಾಗಿ ನಜೀರ್ ಸಾಹೇಬರು ಮಾಡಿದ್ದ ಯೋಜನೆಗಳು ಗ್ರಾಮೀಣ ಜನರಿಗೆ ಕುಡಿಯುವ ನೀರು ಮತ್ತು ಅದಿಕಾರದ ವಿಕೇಂದ್ರೀಕರಣ.
ಪುರಸಭೆಯ ಅಧ್ಯಕ್ಷನಾಗಿ ಒಳ್ಳೆಯ ಕೆಲಸ ಮತ್ತು ಪ್ರಾಮಾಣಿಕತನವನ್ನು ಮೈಗೂಡಿಸಿಕೊಂಡು ಬಂದಿದ್ದ ನಜೀರ್ ಸಾಹೇಬರು ಮುಂದೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಅದೇ ತಾನೇ ದೇಶದಲ್ಲಿ ಎಂದರೆ ೧೯೮೩ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸೇತರ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿತ್ತು! ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದರು. ಅದೇ ಸಚಿವ ಸಂಪುಟದಲ್ಲಿ ನಜೀರ್ ಸಾಹೇಬರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಖಾತೆ ಕೊಟ್ಟಿದ್ದರು. ನಜೀರ್ ಸಾಹೇಬರಿಗೆ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವ ಕನಸು ಇತ್ತು ಮತ್ತು ಅಧಿಕಾರ ಎಲ್ಲರಿಗೂ ಸಿಗಬೇಕು ಎನ್ನುವ ಕನಸು ಇತ್ತು. ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣ ಕಾರ್ಯಕ್ರಮಗಳಿಗೆ ಜೀವ ತುಂಬಿದರು. ಹಳ್ಳಿಗರ ಬದುಕು ಹಸನಾಗಬೇಕು ಮತ್ತು ಅವರಿಗೆ ಮೂಲಭೂತ ಸೌಕರ್ಯ ಸಿಗಬೇಕು ಎಂದು ಎತ್ತಿಕೊಂಡು ಯೋಜನೆಯೇ “ಪ್ರತಿ ಹಳ್ಳಿಹಳ್ಳಿಗೂ ನೀರು “ ಕೇವಲ ೧೮ ತಿಂಗಳಲ್ಲಿ ಸುಮಾರು ೨೬ ಸಾವಿರ ಹಳ್ಳಿಗಳಿಗೆ ನೀರು ಒದಗಿಸಿ ನಜೀರ್ ಸಾಹೇಬ್ ಅವರಿಗೆ ಜನರು ಪ್ರೀತಿಯಿಂದ ಕೊಟ್ಟ ಹೆಸರು “ನೀರ ಸಾಹೇಬ್ “. ಮನೆ ಮನೆಗೆ ಮತ್ತು ಓಣಿ ಓಣಿಗೆ ನಲ್ಲಿಯ ಮೂಲಕ ನೀರನ್ನು ಒದಗಿಸಿದರು! ಬರಗಾಲದಲ್ಲಿ ಗ್ರಾಮೀಣ ಜನರು ಹತ್ತಾರು ಕಿಲೋಮೀಟರು ನೀರಿಗಾಗಿ ಪರಿತಪಿಸುತ್ತಿದ್ದಾಗ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಕೊಳವೆ ಬಾವಿಯ ಮೂಲಕ ನೀರು ಒದಗಿಸಿದ ಮಹಾನುಭಾವ ನೀರ್ ಸಾಹೇಬ್! ಅಧಿಕಾರ ವಿಕೇಂದ್ರೀಕರಣ ಸಲುವಾಗ ಬೇರೆ ಬೇರೆ ರಾಜ್ಯಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಮಂಡಲ್ ಪಂಚಾಯತ ಪ್ರಾರಂಭಿಸಿದರು. ಮತ್ತು ಇಂದಿನ ತಾಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣದ ಭಾಗವೇ! ಇದನ್ನು ರೂಪಿಸಿದ್ದು ಇದೆ ನಜೀರ್ ಸಾಹೇಬ್ ! ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನ ಇರಬೇಕು ಎಂದು ಶಿಫಾರಸು ಮಾಡಿದ್ದು ಇದೆ ನಜೀರ್ ಸಾಹೇಬ್! ಇಷ್ಟೆಲ್ಲಾ ಕೆಲಸಕ್ಕೆ ಬೆಂಬಲ ಕೊಟ್ಟಿದ್ದು ಹೆಗ್ಡೆಯವರು. ಅದಕ್ಕೆ ಚುನಾವಣೆಗೆ ಹೋಗಿ ಗೆದ್ದು ಬಂದಿದ್ದರು, ಮುಂದೆ ಸಚಿವ ಸಂಪುಟ ರಚನೆ ಮಾಡುವಾಗ ನಜೀರ್ ಸಾಹೇಬರಿಗೆ ಕರೆದು ನಿನಗೆ ಯಾವ ಖಾತೆ ಬೇಕು ತಗೆದುಕೊಳ್ಳು ಎಂದರಂತೆ. ಅದಕ್ಕೆ ನಜೀರ್ ಸಾಹೇಬರು ಇನ್ನೂ ನನ್ನ ಕೆಲಸ ಸಂಪೂರ್ಣವಾಗಿಲ್ಲ ಅದಕ್ಕೆ ನನಗೆ ಹಳೆಯ ಖಾತೇನೆ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವ್ಯವಸ್ಥೆ) ಇರಲಿ ಎಂದು ಹೇಳಿದ್ದರಂತೆ. ಇದಕ್ಕಿಂತ ಮುಂಚೆ ಇದೊಂದು ಡಮ್ಮಿ ಖಾತೆಯಾಗಿತ್ತು!

ಮಾಜಿ ಸ್ಪೀಕರ್ ರಮೇಶ್ ಕುಮಾರ ಅವರ ಮಾತು ಅವನಿಗೆ ಜಾತಿ ಇರಲಿಲ್ಲ. ಅವನ ಜೀವನ ಕೇವಲ ಜನರಿಗಾಗಿ ಎಂದರೆ ಕರ್ಪುರದ ಹಾಗೆ ಬೇರೆಯವರಿಗಾಗಿ ಉರಿದು ಗಾಳಿಯಲ್ಲಿ ತೇಲಿ ಹೋದರು! ಇನ್ನೊಬ್ಬ ಮಾಜಿ ಸಚಿವರ ಮಾತು “ಶಾಸಕರಿಗೆ ಕೊಡುವ ಸರ್ಕಾರದ ಸೈಟ್ ಕೊಡಬೇಡಿ ಎಂದು ವಿರೋಧ ಮಾಡಿದ ವ್ಯಕ್ತಿತ್ವ”. ಅವರ ಕೈ ಯಾವತ್ತೂ ಕೆಸರಾಗಲಿಲ್ಲ!

೧೯೮೮ ಅಕ್ಟೋಬರ್ ೨೪ರಿಂದ ಕರ್ತಾರನ ಕಮ್ಮಟಕ್ಕೆ ವಿದಾಯ ಹೇಳಿದರು. ಅವರು ಅಮರರಾಗುವದಕ್ಕಿಂತ ಒಂದು ದಿನ ಮುಂಚೆ ಹೆಗ್ಡೆಯವರು ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಏನಾದರೂ ಮಾಡಬೇಕಾ ಎಂದು ಕೇಳಿದ್ದರಂತೆ! ಅದಕ್ಕೆ ನಜೀರ್ ಸಾಹೇಬರು ಗ್ರಾಮೀಣ ಜನತೆಗೆ ನೀರು ಕೊಟ್ಟೆ ಆದರೆ ಸೂರು(ಮನೆ) ಕೊಡುವದಕ್ಕೆ ಆಗಲಿಲ್ಲ ಅದೊಂದು ಮಾಡಿ ಎಂದರಂತೆ ! ಅವರ ಗುಡಿಸಲು ಮುಕ್ತ ಕನಸಿಗೆ ಹೆಗ್ಡೆಯವರು ಚಾಲನೆ ಕೊಟ್ಟರು.ಅದೇ ನಜೀರ್ ಆವಾಸ್ ಯೋಜನೆ ಮತ್ತು ಜನತಾ ಮನೆ. ಅವರ ಕ್ರಾಂತಿಕಾರಿ ಅಭಿವೃದ್ಧಿ ಕೆಲಸಗಳ ಕುರುಹು ನೆನಪಿರಲಿ ಎಂದು ರಾಜ್ಯ ಸರ್ಕಾರ “ಅಬ್ದುಲ್ ನಜೀರ್ ಸಾಹೇಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ” ಸ್ಥಾಪಿಸಿ ಗೌರವ ಸಲ್ಲಿಸಿದ್ದಾರೆ. ಜನರಿಗಾಗಿ ಮತ್ತು ರಾಜ್ಯದ ಅಭಿವೃದ್ದಿಗಾಗಿ ಕಂಡ ಕನಸುಗಳನ್ನು ಈಡೇರಿಸಿ ಇತಿಹಾಸ ಸೃಷ್ಟಿಸಿದ ನಜೀರ್ ಸಾಹೇಬರಿಗೆ ಒಂದು ಸಲಾಂ!
ಇನ್ನೊಂದು ವಿಶೇಷವಾದ ಮಾತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು “ನಜೀರ್ ಸಾಹೇಬರು ತೀರಿಕೊಂಡಾಗ ವಿಜಯಪುರದ ಒಂದು ಪುಟ್ಟ ಹಳ್ಳಿಯಲ್ಲಿ ಬೋರವೆಲ್ (ಕೊಳವೆ ಬಾವಿ) ಗೆ ನಜೀರ್ ಸಾಹೇಬರ್ ಫೋಟೋ ಕಟ್ಟಿ ಅದಕ್ಕೆ ಹೂವಿನ ಹಾರ ಹಾಕಿ ಶೃದ್ಧಾಂಜಲಿ ಅರ್ಪಿಸಿದ್ದರು ” ಇದು ಅಲ್ಲವೇ ಒಬ್ಬ ವ್ಯಕ್ತಿಯ ಸಾಧನೆ.
Categories: Articles
