
ಟಿವಿ ನೋಡುತ್ತಾ ಮನೆಯಲ್ಲಿ ಕುಳಿತಿದ್ದೆ! ಬಿಜೆಪಿ ಎಂಎಲ್ಸಿ ಪಟ್ಟಿ ಬಿಡುಗಡೆ ಮಾಡಿತ್ತು. ಟಿವಿಯ ಪರದೆಯ ಕೆಳಗಡೆ ನನ್ನ ಹೆಸರು ಬರುತಿತ್ತು! ಇದೇನು ಎಂದು ಹೌಹಾರಿ ದೃಡೀಕರಿಸಿಕೊಂಡೆ, ಟಿವಿಯಲ್ಲಿ ಬರುತ್ತಿರುವ ಹೆಸರು ನನ್ನದೇ ಎಂದು!! ಪಕ್ಷವು ನನ್ನ ಸೇವೆ ಗುರುತಿಸಿ ನನ್ನನ್ನು ವಿಧಾನಪರಿಷತ್ತು ಸದಸ್ಯ ಮಾಡಿತು. ನನಗೆ ಖುಷಿ ಆಯಿತೋ ಇಲ್ಲೋ ಎಂದು ಹೇಳುವದಕ್ಕಿಂತ ನನ್ನ ಜನಾಂಗ ಸಿದ್ದಿ ಸಮುದಾಯಕ್ಕೆ ತುಂಬಾ ಖುಷಿ ಆಗಿತ್ತು. ಇಡೀ ದಿವಸ ಕುಣಿತದ ಮೇಲೆ ಕುಣಿತ, ಅಷ್ಟೆಕ್ಕೆ ನಿಲ್ಲದೆ ಒಂದು ವಾರದಿಂದ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದಾರೆ. ! ಕಾರಣ ಸಿದ್ದಿ ಜನಾಂಗಕ್ಕೆ ಕರ್ನಾಟಕ ರಾಜ್ಯ ಅದರಲ್ಲಿ ಭಾರತೀಯ ಜನತಾ ಪಕ್ಷ ಗುರುತಿಸಿ ಉನ್ನತ ಸ್ಥಾನ ಕೊಟ್ಟಿತಲ್ಲ ಎಂದು ಶಾಂತಾರಾಮ್ ಹೇಳಿದ ಮಾತುಗಳು! ಎಂಎಲ್ಸಿ ಶಾಂತಾರಾಮ್ ಪದವೀಧರ ಮತ್ತು ಸಮಾಜ ಸೇವಕ. ತನ್ನ ಇಡೀ ಸಮುದಾಯವನ್ನು ಮತ್ತು ಬಡವರನ್ನು ಮುನ್ನೆಲೆಗೆ ತರುವುದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸೇವಕ. ಶಾಂತಾರಾಮ್ ಶಿಕ್ಷಣ ಪಡೆದುಕೊಂಡ ರೀತಿ ನೋಡಿದರೆ ಮೈ ಜುಮ್ಮನ್ನೆತ್ತದೆ! ಕಾರಣ ಇವರು ಸೇರಿದ್ದು ಸಿದ್ದಿ ಜನಾಂಗಕ್ಕೆ. ಯಾರು ಸಿದ್ದಿಗಳು? ಮತ್ತು ಎಲ್ಲಿದ್ದಾರೆ?

ಕರ್ನಾಟಕದಲ್ಲಿ ಸಿದ್ದಿಗಳು ಯಲ್ಲಾಪುರದ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಮತ್ತು ಬೆಳಗಾವಿಯ ಖಾನಾಪುರದ ಕಾಡಿನಲ್ಲಿದ್ದಾರೆ. ಸಿದ್ದಿಗಳು ಮೂಲತಃ ಆಫ್ರಿಕಾ ದೇಶದಿಂದ ಬಂದವರು. ಸುಮಾರು ೧೬ನೇ ಶತಮಾನದಲ್ಲಿ ಪೋರ್ಚುಗೀಸರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದು ವ್ಯಾಪಾರ ಮಾಡುವಾಗ ಕೆಲಸಕ್ಕೆ ಕೂಲಿಗಳ ಕೊರೆತೆ ಇರುವುದರಿಂದ ಆಫ್ರಿಕಾ ದೇಶದ ಕಾಡುಗಳಲ್ಲಿದ್ದ ನಿಗ್ರೋಗಳನ್ನು ತಗೆದುಕೊಂಡು ಬಂದು ಅವರಿಗೆ ತರಬೇತಿ ಕೊಟ್ಟು ಭಾರತ ದೇಶದಲ್ಲಿ ಕೂಲಿಗಳಾಗಿ ಉಪಯೋಗಿಸುತ್ತಿದ್ದರು. ತಮ್ಮ ವ್ಯಾಪಾರಕ್ಕಾಗಿ ಪೋರ್ಚುಗೀಸರು ಮತ್ತು ಅರಬರು ದೊಡ್ಡ ಹಡಗುಗಳನ್ನು ಬಳಸುತ್ತಿದ್ದರು. ಹಡುಗುಗಳ ನಾವಿಕರಾಗಿ ಅನೇಕರು ಆಫ್ರಿಕನ್ ಆಗಿದ್ದರು. ಇವರನ್ನು ಕೇವಲ ಸೇವಕರಾಗಿ ಕರೆದುಕೊಂಡು ಬಂದಿದ್ದರು. ಮುಂದೆ ಭಾರತ ಸ್ವಾತಂತ್ರ್ಯವಾದಾಗ ಪೋರ್ಚುಗೀಸರು ಇವರನ್ನು ಇಲ್ಲೇ ಬಿಟ್ಟು ಹೋದರು. ತದನಂತರ ಅನೇಕ ಸಿದ್ದಿಗಳು ಪಾಕಿಸ್ತಾನಕ್ಕೆ ಹೋದರು ಮತ್ತು ಇನ್ನು ಕೆಲವರು ಉತ್ತರ ಕನ್ನಡದ ಜಿಲ್ಲೆಗಳಲ್ಲಿ ಇರುವ ಊರುಗಳಾದ ಯಲ್ಲಾಪುರ,ಹಳಿಯಾಳ, ಅಂಕೋಲಾ,ಜೋಯಿಡಾ , ಮುಂಡಗೊಂಡ ಮತ್ತು ಸಿರಸಿ ಕಾಡುಗಳಲ್ಲಿ ಜೀವನ ಕಟ್ಟಿಕೊಂಡರು.

ಸಿದ್ದಿ ಜನಾಂಗ ಉತ್ತರ ಕನ್ನಡದ ಕಾಡುಗಳಲ್ಲಿ ಉಳಿದು ಗಡ್ಡೆ ಗೆಣಸು ತಿನ್ನುವುದರ ಜೊತೆ ತಾವೇ ಸ್ವಲ್ಪ ಜಮೀನು ಮಾಡಿಕೊಂಡು ಜೀವನ ಸಾಗುತ್ತಿದ್ದರು. ಇನ್ನೂ ಕೆಲವರು ಹತ್ತಿರದ ರೈತರ ಹೊಲದಲ್ಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಾ ಬಂದರು. ದೇಶ ಸ್ವತಂತ್ರ ಆದರೂ ಇವರ ಜೀವನ ತುಳಿತಕ್ಕೆ ಒಳಗಾಯಿತು. ಮೊದಮೊದಲು ಕಾಡಿನ ಒಳಗಡೆ ಯಾರೇ ಸಿದ್ದಿ ಜನಾಂಗಕ್ಕೆ ಭೇಟಿ ಕೊಡಲು ಹೋದರೆ ಸಿದ್ದಿ ಜನಾಂಗ ಯಾರನ್ನು ಬಿಟ್ಟುಕೊಳ್ಳುತ್ತಿರಲಿಲ್ಲ. ಕಾರಣ ಹೊರಗಿನ ಜನ ನಮಗೆ ಮೋಸ ಮಾಡಲು ಬಂದಿದ್ದಾರೆ ಎಂದು! ಸಿದ್ದಿ ಜನಾಂಗಕ್ಕೆ ಅಭಿವೃದ್ಧಿ ಆಸೆ ತೋರಿಸಿ ಮತಾಂತರ ಮಾಡಿದ್ದಾರೆ ಎಂದು ಹೇಳುತ್ತಾರೆ. ಇವತ್ತಿಗೂ ಸಿದ್ದಿ ಜನಾಂಗದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಇದ್ದಾರೆ. ಸಿದ್ಧಿಗಳ ಧರ್ಮ ಬೇರೆ ಬೇರೆ ಆಗಿದ್ದರೂ ಎಲ್ಲರೂ ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುವುದು ಸರ್ವೇ ಸಾಮಾನ್ಯ! ಇವರ ಭಾಷೆ ಕೊಂಕಣಿ, ಕನ್ನಡ ಮತ್ತು ಮರಾಠಿ!

ಸಿದ್ದಿ ಜನಾಂಗದಲ್ಲಿ ದಮಾಮ ಮತ್ತು ಗುಮಟೆ ವಾದ್ಯಗಳ ನಾದಕ್ಕೆ ತುಂಬಾ ವಿಭಿನ್ನವಾಗಿ ಕುಣಿಯುತ್ತಾರೆ. ಇಂದಿಗೂ ತಮ್ಮ ಸಂಸ್ಕೃತಿಯನ್ನು ಮರೆತಿಲ್ಲ. ಅವರ ಕುಣಿತ ಮತ್ತು ವಾದ್ಯಗಳ ನಾದ ನೋಡುಗರಿಗೆ ಹಬ್ಬ! ತಮಗೆ ಬಿಳಿಯರು ನಡೆಯಿಸಿಕೊಂಡ ರೀತಿಗೆ ಸಿಟ್ಟಿದೆ ಅದಕ್ಕೆ ಅವರ ಹಿರೀಕರು ನಾವು ಆಫ್ರಿಕಾದವರು ಎಂದು ಹೇಳುತ್ತಿರಲಿಲ್ಲ. ಕಾರಣ ಅವರಿಗೆ ಕರಿಯರು ಎಂದು ಹೊಡೆಯುತ್ತಿದ್ದರು ಮತ್ತು ಸ್ಲೇವ್ ತರಹ ನೋಡಿಕೊಳ್ಳುತ್ತಿದ್ದರು. ಆದರೆ ಇಂದಿನ ಪೀಳಿಗೆಗಳು ಆಫ್ರಿಕಾದ ಬಗ್ಗೆ ತಿಳಿದುಕೊಳ್ಳಲು ಇಚ್ಛೆ ಪಡುತ್ತಾರೆ. ಉಧಾಹರಣೆಗಾಗಿ ಆಫ್ರಿಕಾ ಮೂಲದ ಕ್ರಿಕೆಟ್ ಆಟಗಾರ ಲಾರಾ, ಗೇಲ್ , ಹುಸೈನ್ ಬೋಲ್ಟ್ , ಬ್ರೇವೋ ಮತ್ತು ಫುಟಬಾಲ್ ಆಟಗಾರರ ಬಗ್ಗೆ ತಿಳಿದುಕೊಂಡಿದ್ದಾರೆ. ಅವರ ಹೆಸರುಗಳನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಸಾಮಾನ್ಯವಾಗಿ ಇವರ ಹೆಸರುಗಳು ಹಿಂದೂ ಹೆಸರಿಗಳಿಗೆ. ಆದರೆ ಇತ್ತೀಚಿಕೆ ಎಂದರೆ ಯುವ ಪೀಳಿಗೆಗಳು ಆಫ್ರಿಕಾ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆ. ಇಲ್ಲಿನ ಜನರ ಜೊತೆ ಹೊಂದಿಕೊಂಡು ಕನ್ನಡ ಕಲಿತಿದ್ದಾರೆ. ಇಂದಿಗೂ ಇವರನ್ನು ಆಫ್ರಿಕನ್-ಇಂಡಿಯನ್ ಎಂದೇ ಕರೆಯುತ್ತಾರೆ. ಆದರೆ ಅವತ್ತಿನ ಮತ್ತು ಇಂದಿನ ಇವರ ಜೀವನ ಮಟ್ಟ ನೋಡಿದರೆ ಖಂಡಿತ ಬದಲಾವಣೆ ಆಗಿದೆ. ಶಾಂತಾರಾಮ್ ಇಂದು ವಿಧಾನಪರಿಷತ್ತಿನ ಸದಸ್ಯ ಆದರೆ ಹೇಗೆ ಅವರು ಶಿಕ್ಷಣ ಪಡೆದುಕೊಂಡರು ಮತ್ತು ಹೇಗೆ ಅವರ ಸಮಾಜಕ್ಕೆ ಸಹಕಾರಿಯಾಗಿದ್ದಾರೆ ಎಂದರೆ?
ಶಾಂತಾರಾಮ್ ಸಿದ್ದಿ ಜನಾಂಗದಲ್ಲಿ ಪ್ರಪಥಮ ಪದವೀಧರ! ಇವರ ಶಿಕ್ಷಣ ಕಲಿಯುವುದು ಅಷ್ಟು ಸುಲಭ ಇರಲಿಲ್ಲ. ಸಿದ್ದಿ ಜನಾಂಗದ ವಿದ್ಯಾರ್ಥಿಗಳು ಕಾಡಿನಿಂದ ನಾಡಿಗೆ ಬಂದು ಶಾಲೆಗೆ ಹೋದರೆ ಕೇವಲ ಎರಡೇ ದಿವಸದಲ್ಲಿ ಶಾಲೆ ಬಿಟ್ಟುಬಿಡುತ್ತಿದ್ದರು. ಕಾರಣ ಅವರಿಗಿರುವ ಕೀಳರಿಮೆ! ಅವರ ಬಣ್ಣ ಮತ್ತು ಅವರ ಗುಂಗುರು ಕೂದಲು ಇವರಿಗೆ ತುಂಬಾ ಕಿರಿಕಿರಿ ಆಗಿತ್ತು. ಬೇರೆ ಬೇರೆ ವಿದ್ಯಾರ್ಥಿಗಳು ಇವರಿಗೆ ನೀವು ಎಲ್ಲಿಂದ ಬಂದಿರಿ ಮತ್ತು ನಿಮ್ಮ ಬಣ್ಣ ಕರಿ ಯಾಕೆ ಎಂದು ತಮಾಷೆ ಮಾಡುತ್ತಿದ್ದರು ಅದಕ್ಕೆ ಬೇಜಾರಾಗಿ ಶಾಲೆಗೆ ಗೋಜಿಗೆ ಹೋಗುತ್ತಿರಲಿಲ್ಲ. ಅಂಥಹ ಪರಿಸ್ಥಿತಿಯಲ್ಲಿ ಶಾಂತಾರಾಮ್ ಶಾಲೆಗೆ ಹೋಗಿ ೭ನೇ ತರಗತಿಗೆ ಪ್ರಥಮ ಬಂದಿದ್ದರು. ದಾನ ರೂಪದಲ್ಲಿ ಬಂದ ೧೫೦ ರೂಪಾಯಿ ತಗೆದುಕೊಂಡು ಪಿಯುಸಿ ಮುಗಿಸಿದ್ದರು. ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ ಜ್ಞಾನವನ್ನು ಸಂಪಾದನೆ ಮಾಡಿದ್ದರು. ಮುಂದೆ ವಿದ್ಯಾರ್ಥಿ ಪರಿಷತ್ತ್ ಗೆ ಸೇರಿ ಮುಂದೆ ಪ್ರಕಾಶ ಕಾಮತ್ ಅವರ ಸಲಹೆ ಮೇರೆಗೆ ಸಂಘವನ್ನು ಸೇರಿಕೊಂಡರು.

ಇವರಿಗೆ ಇದ್ದ ಕನಸು ಭಾರತದ ಸೇನೆ ಸೇರಬೇಕು ಅಥವಾ ಉಪನ್ಯಾಸಕಬೇಕು. ಸಂಘ ಸೇರಿದ ನಂತರ ನಾನೊಬ್ಬನೇ ದುಡಿದು ನನ್ನ ಕುಟುಂಬ ಚೆನ್ನಾಗಿ ಇದ್ದರೇ ಸಾಲದು ಎಂದು ಸಾಮಾಜಿಕ ಮುಖಿ ಕೆಲಸಗಳಲ್ಲಿ ತೊಡಗಿಕೊಂಡರು. ಉತ್ತರ ಕನ್ನಡದ ಜಿಲ್ಲೆಯಲ್ಲಿ ಮರಗಳನ್ನು ಕಡಿಯುವಾಗ ಮರಗಳನ್ನು ಅಪ್ಪಿ ಮರಗಳನ್ನು ನಾಶಮಾಡಬೇಡಿ ಎಂದು ಅಪ್ಪಿಕೋ ಚಳುವಳಿಯಲ್ಲಿ ಭಾಗವಹಿಸಿದ್ದರು. ಮುಂದೆ ವನವಾಸಿಗಳ ಮೇಲೆತ್ತುವ ಸಲುವಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಸಿದ್ದಿ ವಿದ್ಯಾರ್ಥಿಗಳನ್ನು ಓದಿಸುವತ್ತ ಗಮನಹರಿಸಿದರು. ಸದ್ಯ ಸಿದ್ದಿ ಜನಾಂಗದ ೮ ಜನರು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಪದವಿ ಪಡೆದುಕೊಂಡು ಉನ್ನತಿ ಹೊಂದಿದ್ದಾರೆ. ಹೀಗೆ ಅನೇಕ ಹಿಂದುಳಿದ ಜನರ ಸೇವೆಗೆ ತೊಡಗಿಕೊಂಡ ಶಾಂತಾರಾಮ್ ಅವರನ್ನು ಸಂಘ ಗುರುತಿಸಿ ಬಿಜೆಪಿ ಮೂಲಕ ವಿಧಾನ ಪರಿಷತ್ತ್ ಸದಸ್ಯ ಮಾಡಿ ಅತ್ಯಂತ ಹಿಂದುಳಿದ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ. ಇಂದಿಗೂ ಸ್ವಂತ ಕಾರ್ ಇಲ್ಲದೆ ಕೆಲಸ ಮಾಡುತ್ತಿರುವ ಶಾಂತಾರಾಮ್ ಎಲ್ಲರಿಗೂ ಮಾದರಿ ಎಂದರೆ ತಪ್ಪಾಗಲಾರದು.
Categories: Articles
