Articles

ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಅಲ್ಲ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ

ರಾಜ್ಯ ಬಿಜೆಪಿಯ ಮಹಾನಾಯಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಹಾದಿ ನೋಡಿದರೆ ಯಾರಿಗಾದರೂ ಪರಮಾಶ್ಚರ್ಯ ಆಗುವದರಲ್ಲಿ ಸಂದೇಹವಿಲ್ಲ. ಕಾರಣ ದಕ್ಷಿಣ ಭಾರತದಲ್ಲಿ ಒಂದು ಹಿಂದಿ ಪಕ್ಷಕ್ಕೆ ಸಂಘದ ಮೂಲಕ ಸೇರಿ ರಾಜ್ಯದಲ್ಲಿ ಬೆಳೆಸುವ ಕನಸನ್ನು ಕಟ್ಟಿಕೊಂಡಿದ್ದೆ ದೊಡ್ಡ ವಿಷಯ. ಛಲ ಬಿಡದೆ ಸಾಧಿಸಿ ತೋರಿಸಿದ್ದಾರೆ. ಇಂತಹ ದೊಡ್ಡ ನಾಯಕ ೧೯೯೯ರಲ್ಲಿ ಹೋಂ ಗ್ರೌಂಡ್ ಶಿಕಾರಿಪುರದಲ್ಲಿ ಸೋತಿದ್ದರು. ಮುಂದೆ ಪಕ್ಷ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಮಾಡುವ ಮೂಲಕ ನಾಯಕನ ಅವಶ್ಯಕತೆ ಇದೆ ಎಂದು ಸಾರಿತ್ತು. ಅವತ್ತಿನ ಅವರ ಸೋಲಿಗೆ ಕಾರಣ ಮುಖ್ಯವಾಗಿ! ರಾಮಕೃಷ್ಣ ಹೆಗ್ಡೆಯವರ ಪಕ್ಷ ಬಿಜೆಪಿ ಜೊತೆ ಕೈಜೋಡಿಸಿ ಇನ್ನೇನು ಪಕ್ಷ ಅಧಿಕಾರಕ್ಕೆ ಬಂದೆ ಬಿಟ್ಟಿತು ಎನ್ನುವ ಮಟ್ಟಿಗೆ ಹವಾ ಸೃಷ್ಟಿ ಮಾಡಿತ್ತು. ಅದೇ ಉತ್ಸಾಹದಲ್ಲಿ ಯಡಿಯೂರಪ್ಪನವರು ತಮ್ಮ ಕ್ಷೇತ್ರದ ಕಡೆ ಗಮನ ಕೊಡಲಿಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಬೇರೆಯವರ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಿದ್ದರು. ಇವರೇ ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಮಿತ್ರ ಮಂಡಳಿಗೆ ಅರಗಿಸಿಕೊಳ್ಳುವದಕ್ಕೆ ಆಗಲಿಲ್ಲ. ಕೊರಟಗೆರೆಯಲ್ಲಿ ಪರಮೇಶ್ವರರನ್ನು ಸೋಲಿಸಿದ ಹಾಗೆ ಇವರಿಗೂ ಒಳ ಹೊಡೆತ ಕೊಟ್ಟಿದ್ದರು. ಇದೆಲ್ಲದರ ಕಾರಣ ಯಡಿಯೂರಪ್ಪನವರ ಸೋಲು! ಇದ್ಯಾಕೆ ಹೇಳುವ ಅವಶ್ಯಕತೆ ಎಂದರೆ ಸವದಿಯವರ ಸೋಲು ಇದನ್ನೇ ಹೋಲುತ್ತೆ!

೨೦೧೮ ರ ಚುನಾವಣೆಗೆ ಮೊದಲು ಬಿಜೆಪಿ ಪಕ್ಷ ಪರಿವರ್ತನಾ ಸಭೆ ನಡಿಸುತ್ತೆ. ಇದರ ಮುಖ್ಯ ಕೇಂದ್ರಬಿಂದು ಯಡಿಯೂರಪ್ಪ. ನಾಲ್ಕು ನಾಯಕರ ಮುಂದಾಳತ್ವದಲ್ಲಿ ರಾಜ್ಯದ ತುಂಬೆಲ್ಲ ಪರಿವರ್ತನೆ ಸಭೆ ಅಂದವಾಗಿ ಮತ್ತು ಭರ್ಜರಿಯಾಗಿ ಯಶಸ್ವಿಯಾಗುತ್ತೆ. ಸಂಪೂರ್ಣ ಪರಿವರ್ತನಾ ಕಾರ್ಯಕ್ರಮದಲ್ಲಿ ಎಲ್ಲ ಬಿಜೆಪಿಯ ನಾಯಕರು ಭಾಗಿಯಾಗಿದ್ದರೂ ಜನರು ಮನಸೋತಿದ್ದು ಎವರ್ ಗ್ರೀನ್ ಯಡಿಯೂರಪ್ಪ, ಶ್ರೀರಾಮುಲು ಮತ್ತು ಉತ್ತರ ಕರ್ನಾಟಕದ ಹುಲಿ ಎಂದೇ ಕರೆಯುತ್ತಿದ್ದ ಲಕ್ಷ್ಮಣ ಸವದಿ. ಇದು ನಾನು ಹೇಳುತ್ತಿಲ್ಲ ಅಂದು ಅವರು ಬಬಲೇಶ್ವರ, ಕಾಗವಾಡ,ಯಲಬುರ್ಗಾ, ಸಿಂದಗಿ, ಜೇವರ್ಗಿ, ರಾಯಭಾಗ , ಕುಡಚಿ, ಗೋಕಾಕ, ಬೈಲಹೊಂಗಲ ಹೀಗೆ ಅನೇಕ ಕಡೆ ಅವರ ಭಾಷಣ ಕೇಳಿ ಪಕ್ಷದ ಕಾರ್ಯಕರ್ತರು ಕೂಗಿತ್ತಿದ್ದ ಧ್ವನಿಯೇ “ಉತ್ತರ ಕರ್ನಾಟಕದ ಹುಲಿ ” ಎಂದು! ಇಲ್ಲಿ ಗಮನಿಸಿ ದೊಡ್ಡ ನಾಯಕರು ಬೇರೆ ಬೇರೆ ಕಡೆ ಭಾಗವಹಿಸಿದರೂ ಸವದಿಯವರ ಭಾಗವಹಿಸುತ್ತಿದ್ದ ಕಾರ್ಯಕ್ರಮಗಳು ತುಂಬಾ ಯಶಸ್ವಿಯಾಗಿದ್ದವು ಎಂದು ಬಿಜೆಪಿ ಆಂತರಿಕ ಸಮೀಕ್ಷೆ ನೋಟ್ ಮಾಡಿಕೊಂಡಿತ್ತು!

೨೦೧೮ರ ಚುನಾವಣೆ ರಾಜ್ಯದಲ್ಲಿ ಬಿಜೆಪಿಗೆ ಪಕ್ಕಾ ಬಹುಮತ ಎಂದು ಮೇಲ್ನೋಟಕ್ಕೆ ಇದ್ದರೂ ಇತ್ತ ಕಡೆ ಕಾಂಗ್ರೇಸ್ ಪಕ್ಷ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಕಾರ್ಯಕ್ರಮಗಳು ಜನರಿಗೆ ಕೊಟ್ಟಿದ್ದೇವೆ ಅದಕ್ಕೆ ಮೊತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದರು. ೨೦೧೩ರಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು ನೇರ ಕಾರಣವಾಗಿದ್ದು ಕೆಜಿಪಿ. ೨೦೧೩ರಲ್ಲಿ ಶಿವಮೊಗ್ಗದಿಂದ ಸೋತಿದ್ದ(೩ ನೇ ಸ್ಥಾನ) ಈಶ್ವರೇಪ್ಪ ೨೦೧೮ರಲ್ಲಿ ಶಿವಮೊಗ್ಗ ಬಿಟ್ಟು ಕದಲಲಿಲ್ಲ. ಎಂದರೆ ಯಾವದೇ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಲಿಲ್ಲ. ಜಗದೀಶ ಶೆಟ್ಟರ್, ಅಶೋಕ್, ಸಿಟಿ ರವಿ , ಬೊಮ್ಮಾಯಿ ಹೀಗೆ ಅನೇಕ ಹತ್ತಾರು ನಾಯಕರು ಯಾವ ಕ್ಷೇತ್ರಕ್ಕೂ ಹೋಗದೆ ತಮ್ಮ ಗೆಲುವಿಗೆ ಶತ ಪ್ರಯತ್ನ ಹಾಕಿದ್ದರು. ೨೦೧೩ರಲ್ಲಿ ಗೆದ್ದ ಪ್ರತಿಯೊಬ್ಬ ಶಾಸಕರಿಗೆ ಒಂದರಿಂದ ಎರಡು ಕ್ಷೇತ್ರಗಳ ಜವಾಬ್ದಾರಿ ಕೊಟ್ಟಿದ್ದರೂ ಅವರು ಆ ಕಡೆ ಮುಖನೂ ಹಾಕಲಿಲ್ಲ. ಆದ್ರೆ ಯಡಿಯೂರಪ್ಪನವರು, ಶ್ರೀರಾಮುಲು ಬಿಟ್ಟರೆ ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿದ್ದು ಲಕ್ಷ್ಮಣ ಸವದಿಯವರು ಮಾತ್ರ!

ಸುಮಾರು ೨೦ಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಸವದಿಯವರು ಪ್ರಚಾರಕ್ಕೆ ಹೋಗಿದ್ದರು. ಅದರಲ್ಲಿ ವಿಶೇಷವಾಗಿ ಆಧುನಿಕ ಭಗೀರಥ ಎಂದು ಕರೆಯಿಸಿಕೊಳ್ಳುತ್ತಿರುವ ಎಂಬಿ ಪಾಟೀಲರ ಬಬಲೇಶ್ವರ ಮತಕ್ಷೇತ್ರದ ಸವದಿಯವರ ಪ್ರಚಾರದ ಹೊಡತಕ್ಕೆ ಪಾಟೀಲರ ನಿದ್ದೆ ಹಾರಿಹೋಗಿತ್ತು. ಒಂದು ವೇಳೆ ವಿಜು ಪಾಟೀಲರ ಲೆಗಸಿ ಉತ್ತಮವಾಗಿದ್ದರೆ ಭಗೀರಥನ ಕನಸುಗಳು ಭಗ್ನವಾಗುತಿದ್ದವು. ಆದರೆ ಸವದಿಯವರ ಹೊಡತಕ್ಕೆ ಚುನಾವಣೆ ಖರ್ಚು ಎಷ್ಟಾಗಿದೆ ಎಂದು ಪಾಟೀಲರು ಬಿಚ್ಚಿಟ್ಟರೆ ಗೊತ್ತಗುತ್ತೆ ಸವದಿಯವರ ಪ್ರಚಾರ ವೈಖರಿ ಹೇಗಿತ್ತು ! ಇದು ಒಂದೇ ಅಲ್ಲ ಇಂದಿನ ಯಲಬುರ್ಗಾ ಕ್ಷೇತ್ರದ ಹಾಲಪ್ಪ ಆಚಾರ ಗೆಲುವಿಗೆ ಸವದಿಯವರ ಕೊಡುಗೆ ದೊಡ್ಡ ಮಟ್ಟದಲ್ಲಿ ಇದೆ. ಬಸವರಾಜ ರಾಯರೆಡ್ಡಿಯವರಿಗೆ ಸರಿಯಾಗಿ ಕೌಂಟರ್ ಕೊಟ್ಟಿದು ಇದೆ ಮಾಜಿ ಉಪಮುಖ್ಯಮಂತ್ರಿ ಸವದಿ ಸಾಹುಕಾರ್(ಗುಂಡಾಗಿರಿಯಿಂದ ಸಾಹುಕಾರ್ ಎನಿಸಿಕೊಂಡಿದ್ದಲ್ಲ , ಜನರ ಪ್ರೀತಿಯಿಂದ ಕೊಟ್ಟ ಬಿರುದು)!

ಪ್ರತಿ ಬಾರಿ ಅಥಣಿ ಕಾರ್ಯಕರ್ತರು ಸುಮಾರು ೨೫ ಸಾವಿರ ಮತಗಳಿಂದ ಸಾಹುಕಾರನನ್ನು ಗೆಲ್ಲಿಸಿಕೊಂಡು ಬರುತ್ತಿದ್ದರು. ಅದು ಒಂದಲ್ಲ, ಎರಡಲ್ಲ ಸತತವಾಗಿ ಮೂರೂ ಬಾರಿ ಗೆಲಿಸಿದ್ದರು. ಸವದಿಯವರ ನೀರಾವರಿ ಯೋಜನೆಗಳು ಕ್ಷೇತ್ರಕ್ಕೆ ದೊಡ್ಡ ಕೊಡುಗೆ.

ಅವರದು ಕೃಷಿ ಕುಟುಂಬ , ಅವರ ರಾಜಕೀಯ ಪ್ರವೇಶ ಆಗಿದ್ದು ಸಹಕಾರ ರಂಗದಲ್ಲಿ ತೊಡಗಿಸಿಕೊಂಡ ಮೇಲೇನೆ! ಪ್ರಪ್ರಥಮ ಬಾರಿ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಒಂದು ಮತದಿಂದ ಸೋತಿದ್ದರು. ಮುಂದೆ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಗೆದ್ದು ಒಳ್ಳೆಯ ಕೆಲಸದ ಪರಿಣಾಮ ಅನೇಕ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದವರು ಸವದಿ! ಸಹಕಾರ ರಂಗದಲ್ಲಿ ಅನೇಕ ಯೋಜನೆಗಳು ರೈತರಿಗೆ ತಲುಪಿಸಿ ಅನುಕೂಲ ಮಾಡಿಕೊಟ್ಟಿದ್ದರು. ರೈತರ ಮಕ್ಕಳಿಗೆ ಉದ್ಯೋಗಕ್ಕೆ ಸಹಾಯ ಮಾಡಿದ್ದರು.

ಕುಮಾರಸ್ವಾಮಿಯವರ ಗ್ರಾಮ ವಾಸ್ತ್ಯವ್ಯ ಹುಟ್ಟಿದ್ದೇ ಅಥಣಿಯ ತಾಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ. ಮುಖ್ಯಮಂತ್ರಿಗಳ ಜೊತೆ ಸವದಿಯವರು ಮಾತನಾಡಿ ಒಂದು ದಿವಸ ನಮ್ಮ ಹಳ್ಳಿಯಲ್ಲಿ ಇದ್ದರೇ ಖಂಡಿತ ಜನರಿಗೆ ಒಂದು ಹೊಸ ಚೈತನ್ಯ ಕೊಡಬಹುದು ಎಂದು ಹೇಳಿ ಕುಮಾರಸ್ವಾಮಿಯವರನ್ನು ಹಳ್ಳಿಯಲ್ಲಿ ಉಳಿಯುವಂತೆ ಮಾಡಿ ಗ್ರಾಮ ವಾಸ್ತ್ಯವ್ಯಕ್ಕೆ ಬುನಾದಿ ಹಾಕಿದರು.

ಒಂದು ಗಮನಿಸಿ ಎಲ್ಲಿಯೂ ಜಾತಿಯ ವಾಸನೆ ಬರಲಿಲ್ಲ. ಜಾತಿಯ ಮೇಲೆ ಥಕ್ ಥಕ್ ಎಂದು ಕುಣಿಯುವ ನಾಯಕರ ನಡುವೆ ಜಾತಿಕ್ಕಿಂತ ಮುಖ್ಯವಾದದ್ದು ಸೇವೆ ಎಂದು ತೋರಿಸಿಕೊಟ್ಟಿದ್ದರು. ಸರ್ಕಾರದಲ್ಲಿ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿ , ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಸಹಕಾರ ಸಚಿವರಾಗಿ ಕಾರ್ಯ ನಿರ್ವಿಹಿಸಿದರು. ಮೊಟ್ಟ ಮೊದಲ ಬಾರಿ ರೈತರಿಗೆ ೦% ಬಡ್ಡಿ ದರದಲ್ಲಿ ೩ಲಕ್ಷ ದವರೆಗೆ ಸಾಲವನ್ನು ಕೊಡುವದರಲ್ಲಿ ಮುಖ್ಯಮಂತ್ರಿಯವರ ಜೊತೆ ಇವರದು ಸಹಕಾರ ಇದೆ! ಸವದಿಯವರು ಮಾಡಿದ ಕೆಲಸಗಳು ಜನರಿಗೆ ನೇರವಾಗಿ ಲಾಭ ತಂದುಕೊಟ್ಟಿತು. ಆದ್ದರಿಂದಲೇ ಸಹಕಾರ ಖಾತೆಗೆ ಎಲ್ಲಿಲ್ಲದ ಬೆಲೆ ಬಂದಿತ್ತು. ಇದು ಸಾಧ್ಯವಾಗಿದ್ದು ಅವರು ದಶಕಗಳ ಕಾಲ ಸಹಕಾರ ರಂಗದಲ್ಲಿ ಪಡೆದ ಅನುಭವ ಮತ್ತು ರೈತರಿಗಾಗಿ ಮಾಡಿದ ಕೆಲಸಗಳು.

ಆದರೆ ೨೦೧೮ರಲ್ಲಿ ಮೈ ಮರೆತು ಕ್ಷೇತ್ರದ ಕಡೆ ಗಮನ ಹರಸದೆ ಇದ್ದದ್ದು, ಸ್ವ ಪಕ್ಷದ ತಲೆಹಿಡುಕರು ವಿಶೇಷವಾಗಿ ಬೀಳಗಿ ಬಂಟನ ಕೈವಾಡ ಸ್ವಲ್ಪ ಇದೆ ಅಂತ ಗುಮಾನಿ. ಕಾಂಗ್ರೇಸ್ ನಾಯಕರ ಕೈವಾಡ ಎನ್ನುವದಕ್ಕೆ ಆಗುವದಿಲ್ಲ, ಅವರು ವಿರೋಧಿಗಳು ಮಾಡಿದ್ದಾರೆ ಅವರ ಕರಾಮತ್ತು! ಪಕ್ಷದ ಕೆಲಸ ಮಾಡುವಾಗ ಹಿನ್ನಡೆಯಾಗಿ ಕೇವಲ ೧೮೦೦ ಮತಗಳಿಂದ ಸೋಲಬೇಕಾಯಿತು. ಸವದಿಯವರು ತಮ್ಮ ಸೋಲನ್ನು ಪರಾಮರ್ಶೆ ಮಾಡಿದಾಗ ಸೋಲಿಗೆ ಕಾರಣಗಳೇ ಸಿಗಲಿಲ್ಲ. ಏಕೆಂದರೆ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರ ಆರೋಪ ಇರಲಿಲ್ಲ, ಅಭಿವೃದ್ಧಿ ಕೆಲಸಗಳಿಗೆ ಕೊರೆತೆ ಇರಲಿಲ್ಲ. ರಾಜ್ಯದ ಎಷ್ಟೋ ಶಾಸಕರು ಒಳಒಳಗೆ ಪಕ್ಷಾತೀತವಾಗಿ ಸವದಿ ಸೋಲು ನ್ಯಾಯಯುತವಲ್ಲ ಎಂದಿದ್ದರು. ಇಂತಹ ನಾಯಕತ್ವ ಇರುವದರಿಂದಲೇ ಸೋತವರಿಗೆ ಉಪ ಮುಖ್ಯಮಂತ್ರಿಯಾಗಿ ಮಾಡಿದರು. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಕೊನೆಯ ಗಳಿಗೆಯಲ್ಲಿ ಆದ ಗೊಂದಲದಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸಿದರು. ಸುಮಾರು ಕಡೆ ಗೆಲುವು ದಾಖಲಿಸಿದ್ದರು ಎನ್ನುವುದು ಮರೆಯಬಾರದು. ಉತ್ತರ ಕರ್ನಾಟಕದ ಪ್ರವಾಹ ಪರಸ್ಥಿತಿಯಲ್ಲಿ ಕೆಲವೇ ಕೆಲವು ಶಾಸಕರು ತಮ್ಮ ಜನರಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು. ತಮಗೆ ಚುನಾವಣೆಯಲ್ಲಿ ಸೋಲಿಸಿದ್ದರೂ ತಮ್ಮ ಜನರ ಸುಖ ದುಃಖಗಳಲ್ಲಿ ಭಾಗಿಯಾಗಿ ಊಟ ಉಪಚಾರವಲ್ಲದೆ ಧನ ಸಹಾಯ ಮಾಡಿದ್ದರು. ಇತ್ತೀಚಿನ ೨೦೨೧ರ ಪ್ರವಾಹಕ್ಕೆ ಪ್ರತಿಯೊಬ್ಬರಿಗೂ ದಿನಸಿ ಕಿಟ್ ತಲುಪಿಸಿದರು. ಕೇವಲ ಶಾಸಕರಿದ್ದರೇನೇ ನಾವು ಕೆಲಸ ಮಾಡುತ್ತೇವೆ ಎನ್ನುವವರ ಮಧ್ಯೆ ಇವರದು ಅಪರೂಪದ ವ್ಯಕ್ತಿತ್ವ.

ಉಪಮುಖ್ಯಮಂತ್ರಿ ಆದ ಮೇಲೆ ಸ್ವಪಕ್ಷದವರ ಬೀದಿ ಬೀದಿಗಳಲ್ಲಿ ಹೇಳಿದ ಮಾತುಗಳಿಗೆ ಮತ್ತು ಉಪಮುಖ್ಯಮಂತ್ರಿಯಾದರೂ ವಿಧಾನಸಭೆಯಲ್ಲಿ ಕಚೇರಿ ಕೊಡದೆ ವಿಕಾಸಸೌಧದಲ್ಲಿ ಕಚೇರಿ ಕೊಟ್ಟರು. ಇವರ ಇಲಾಖೆಗಳ ಕಡತಗಳು ಬೇರೆ ಬೇರೆ ಇಲಾಖೆಗಳಲ್ಲಿ ದೂಳು ತಿನ್ನುತ್ತಿದ್ದವು. ಇವರ ಮಾತಿಗೆ ಮನ್ನಣೆ ಸಿಗುತ್ತಿರಲಿಲ್ಲ. ಆದರೂ ಮುಖ್ಯಮಂತ್ರಿ ಬಗ್ಗೆ ಆಗಲಿ ಅಥವಾ ವಿರೋಧಿಗಳಿಗೆ ಸಾರ್ವಜನಿಕವಾಗಿ ನಿಂದಿಸಲಿಲ್ಲ/ಟಾಂಗ್ ಕೊಡಲಿಲ್ಲ. ಅತ್ಯಂತ ಸಮರ್ಥವಾಗಿ ಪರಸ್ಥಿತಿಯನ್ನು ತಿಳಿಗೊಳಿಸಿ ಆಡಳಿತ ಮಾಡಿದ್ದಾರೆ. ಬೀದಿ ಬೀದಿಗಳಲ್ಲಿ ಪಕ್ಷದ ಮತ್ತು ನಾಯಕರ ಬಗ್ಗೆ ತುಚ್ಚವಾಗಿ ಮಾತಾಡುವ ಗುಂಪಿಗೆ ಸೇರುವ ನಾಯಕನಲ್ಲ! ಪಕ್ಷ ನಿಷ್ಠೆಗೆ ಮತ್ತು ಜನರ ಸೇವೆಗೆ ಬದ್ದ ಇರುವ ನಾಯಕನಿಗೆ ಮುಂದೊಂದು ದಿನ ರಾಜ್ಯದ ಚುಕ್ಕಾಣಿ ಹಿಡಿಯುವ ಕಾಲ ಬರಲಿ ಎಂದು ಆಶಿಸೋಣ!

ಪಕ್ಷಕ್ಕಾಗಿ ಮತ್ತು ಜನರಿಗಾಗಿ ಸೇವೆ ಮಾಡುತ್ತಿದ್ದಾರೆ. ಇವರ ಪಕ್ಷನಿಷ್ಠೆ ಮತ್ತು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ಇವರಿಗೆ ಪಕ್ಷ ಗುರುತಿಸಿ ಉಪಮುಖ್ಯಮಂತ್ರಿ ಮಾಡಿದ್ದರು.ಅಥಣಿ, ಕಾಗವಾಡ ಮತ್ತು ಬಸವಕಲ್ಯಾಣದಲ್ಲಿ ಉಪಚುನಾವಣೆ ಉಸ್ತುವಾರಿ ಹೊತ್ತುಕೊಂಡು ಯಶಸ್ವಿಯಾಗಿ ಪಕ್ಷಕ್ಕೆ ಬಲ ತುಂಬಿದ್ದಾರೆ. ೪೦ ಸಾವಿರ ಮತಗಳ ಅಂತರದಿಂದ ಅಥಣಿಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದು, ಅಥಣಿಯ ಜನರು ಅವರಿಗೆ ಸೋಲಿಸಿದ್ದು ತಪ್ಪು ಎನ್ನುವ ಸಂದೇಶ ಕೊಟ್ಟಿದ್ದರು. ಇಂದು ಇವರಿಗೆ ಮಂತ್ರಿ ಕೊಟ್ಟಿಲ್ಲ ಎಂದು ಪಕ್ಷದ ವಿರುದ್ದ ತಿರುಗಿಬೀಳದೆ ರಾಜಕೀಯವಾಗಿ ತಿಳಿದುಕೊಂಡು ರಾಜ್ಯದ ಅನೇಕ ಕಡೆಗಳಲ್ಲಿ ಇರುವ ಅವರ ಬೆಂಬಲಿಗರು ರಾಜಕೀಯವಾಗಿ ವಿರೋಧಿಗಳಿಗೆ(ಒಳಗಿನ ಮತ್ತು ಹೊರಗಿನ) ಪೆಟ್ಟು ಕೊಡಬೇಕು! ಅದು ಚಾಣಕ್ಯ ನೀತಿ!

Categories: Articles

Tagged as: , , , ,

Leave a Reply