
“ಏ ಮಾವ ನಿಂದು ಹೊಲ ಎಷ್ಟಿದೆ ಎಂದು ಕೇಳಿದರೆ. ಮಾವ ಹೇಳ್ತಾನ ಕೆರೆಕಡೆ ೨೫ ಎಕ್ರೆ , ಮಡ್ಡಿಕಡೆ ೧೦ ಎಕ್ರೆ ಭೂಮಿ ಇದೆ ಆದರೆ ಸಾಲ ಹಾಕಿಕೊಳ್ಳಬೇಕು ಜಾಮೀನು ಬೇಕು ಅಂತ ಮನ್ಯಾಗ ಬಂದು ಕುಂತಾನ! ” ಈ ಕಡೆ ತಂದೆ ನಿಂಬೆಕಾಯಿ ತಗೆದುಕೊಂಡು ಪಕ್ಕದ ಎಂಪಿಎಂಸಿ ಗೆ ಹೋಗಿದ್ದರು. ಇವಾಗ ಬಿಡಿ ಕೃಷಿ ನೀತಿ ಬದಲಾವಣೆಯಿಂದ ಪಕ್ಕದಲ್ಲೇ ಮಾರುಕಟ್ಟೆ ಆಗಿದೆ. ಎಷ್ಟು ಡಾಗ್ ತಗೆದುಕೊಂಡು ಹೋಗ್ಯಾರ ಎಂದು ಕೇಳದ. ಇವತ್ತು ೬ ಡಾಗ್ ತಗೆದುಕೊಂಡು ಹೋಗ್ಯಾರ! ಏನು ಬೀಡಪ ರೇಟ್ ಇಲ್ಲ ಸುಮ್ನೆ ಹಮಾಲಿ ಮೂಲ! ಆದರೂ ಸುಮ್ಮ ಖರ್ಚಿಗೆ ಆಗತಾವ ಅಂತ ಮಾರಲಿಕ್ಕೆ ತಗೆದುಕೊಂಡು ಹೋಗುದು ಅವನೇ ಅಂದ! ಅವನಿಗೆ ಇದರ ಬಗ್ಗೆ ಸವಿಸ್ತಾರವಾಗಿ ಗೊತ್ತು ಕಾರಣ ಅವರದು ನಿಂಬೆ ಫಡ ಇದೆ. ನಮ್ಮ ಕಡೆ ನಿಂಬೆ ಒಂದು ಡಾಗ್ ಎಂದರೆ ಅಂದಾಜು ೯೦೦-೧೦೦೦ ನಿಂಬೆ ಕಾಯಿ ಇರುತ್ತೆ. ಒಂದು ಚೀಲದಲ್ಲಿ ಹಾಕಿ ಒಂದೊಂದು ಡಾಗ್ ಮಾಡ್ತಾ ಹೋಗ್ತಾರೆ. ಅದಕ್ಕೆ ಡಾಗ್ ಎನ್ನೋದು! ಸಾಮಾನ್ಯವಾಗಿ ನಾವು ಅದಕ್ಕೆ ಒಂದು ಚೀಲ ಅನ್ನಬಹುದು! ಫಡ ಎಂದರೆ ನಿಂಬೆ ತೋಟ! ೩೦ ಎಕ್ರೆ ಜಮೀನು ಮಾಲಕ ತುರ್ತಾಗಿ ಸಾಲ ತಗೆದುಕೊಳ್ಳಾಕ ಬಂದಾನ ಅಂದ್ರೆ ರೈತನ ಲಾಭ ಎಷ್ಟಿದೆ ಲೆಕ್ಕ ಹಾಕಬೇಕಾದ ಅವಶ್ಯಕತೆ ಇದೆ ತಾನೇ?

ಜಗತ್ಪ್ರಸಿದ್ದ ಗೋಲಗುಂಬಜ್ ಇರುವುದು ವಿಜಯಪುರದಲ್ಲಿ. ವಿಜಯಪುರ ಕೇವಲ ಗೋಲಗುಂಬಜಗೆ ಮಾತ್ರ ಪ್ರಸಿದ್ದಿ ಹೊಂದಿಲ್ಲ! ಈ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚಿ ನಿಂಬೆ ಮತ್ತು ದ್ರಾಕ್ಷಿ ಬೆಳೆಯುವ ಜಿಲ್ಲೆ ಎಂದು ಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಒಟ್ಟು ಅಂದಾಜು ೨೧ ಸಾವಿರ ಹೆಕ್ಟರ್ ನಿಂಬೆ ಬೆಳೆಯುತ್ತಾರೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಎಂದರೆ ೧೨ ಸಾವಿರದ ೨೦೦ ಹೆಕ್ಟೇರು ನಿಂಬೆ ವಿಜಯಪುರದ ಒಂದೇ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಜಗತ್ತಿನಲ್ಲಿ ಚೀನಾ ಮತ್ತು ಮೆಕ್ಸಿಕೋ ದೇಶಗಳ ನಂತರ ಭಾರತ ಮೂರನೆಯ ಸ್ಥಾನದೊಂದಿಗೆ ನಿಂಬೆ ಬೆಳೆಯುವ ದೇಶ. ದೇಶದಲ್ಲಿ ನಮ್ಮ ರಾಜ್ಯ ನಾಲ್ಕನೆಯ ಸ್ಥಾನಕ್ಕೆ ಇದೆ. ನಮಗಿಂತ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ನಿಂಬೆ ಬೆಳೆಯುದರಲ್ಲಿ ಮುಂದಿವೆ. ರಾಜ್ಯದಲ್ಲಿ ಸುಮಾರು ೩೦೪೬೨೧ ಟನ್ ಉತ್ಪಾಧನೆ ಆಗುತ್ತೆ! ಇದು ಸದ್ಯದ ಅಂಕಿ ಸಂಖ್ಯೆಗಳು. ಆದರೆ ನಮ್ಮ ರೈತರ ಜೀವನ ಮಟ್ಟ ಸುಧಾರಿಸಿದೆ ಎಂದು ಕೇಳಿದರೆ . ಉತ್ತರ ಇಲ್ಲ ಎಂದೇ ಹೇಳಬಹುದು! ಸರ್ಕಾರ ಇದಕ್ಕೆ ಏನಾದರೂ ಸಹಾಯ ಮಾಡುತ್ತಿದೆಯಾ? ಒಂದು ವೇಳೆ ಸರ್ಕಾರ ಸಹಾಯ ಮಾಡುವ ಮನಸ್ಸು ಮಾಡಿದರೆ ಏನೆಲ್ಲಾ ಸಹಾಯ ಮಾಡಬಹುದು?
ಸದ್ಯದ ಪರಸ್ಥಿತಿಯಲ್ಲಿ ರೈತನಿಗೆ ೩ ಫೇಸ್ ವಿದ್ಯುತ್ ಕೇವಲ ೩-೬ ಘಂಟೆ ಮಾತ್ರ! ಕೆಲಯೊಮ್ಮೆ ತಾಂತ್ರಿಕ ಕಾರಣದಿಂದ ೧-೨ ಘಂಟೆ ಕೊಟ್ಟರೇ ಹೆಚ್ಚು! ಮಳೆ ಬಂದ್ರೆ ಗಾಳಿ ಇಲ್ಲದಿದ್ದರೂ ಕಂಬ ಬಿದ್ದಿವೆ ಎಂದು ವಿದ್ಯುತ್ ಇಲಾಖೆ ಅವರ ಸಿದ್ದ ಉತ್ತರ! ಟಿಸಿ ಸುಟ್ಟರೆ ಮರಳಿ ಟಿಸಿ ಮರುಸ್ಥಾಪನೆ ಆಗಲು ಒಂದು ಯುದ್ಧವೇ ಸಂಭವಿಸಿ ಬಿಡುತ್ತೆ! ಕಾರಣ ಇಂದಿನ ಲಂಚಬಾಕ ಅಧಿಕಾರಿಗಳೇ ದುಡ್ಡು ಇಲ್ಲದೆ ಏನೂ ಮಾಡುವದಿಲ್ಲ. ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟರೆ ಪ್ರತಿಭಟನೆ ಮಾಡುತ್ತಾರೆ. ಇತ್ತ ದುಡಿ ದುಡಿದು ಲಾಭವಿಲ್ಲದೆ ಒದ್ದಾಡುತ್ತಿರುವ ರೈತನ ಕಡೆಯಿಂದ ಲಂಚ ತಗೆದುಕೊಂಡು ಟಿಸಿ ಕೊಡುತ್ತಾರೆ ಅದು ವಿಳಂಬವಾಗಿ! ಅಧಿಕಾರಿಗಳು ಹೇಗೆ ಉದ್ಧಾರವಾಗುತ್ತಾರೆ?ಇದು ಬಿಡಿ ಆಮೇಲೆ ನೋಡೋಣ! ಬರದ ನಾಡಲ್ಲಿ ಮಳೆ ಅಷ್ಟಕ್ಕೇ ಅಷ್ಟೇ! ಹೊಲದ ತುಂಬೆಲ್ಲಾ ನೀರಿಗಾಗಿ ಕೊಳವೆ ಬಾವಿಗಳು ಕಾಣಸಿಗುತ್ತವೆ. ೫ ಎಕ್ರೆಯಲ್ಲಿ ಸುಮಾರು ೧೫ಕ್ಕೂ (ಕೆಲಯೊಬ್ಬರು )ಹೆಚ್ಚು ಬೋರವೆಲ್ ಕೊರೆದಿರುತ್ತಾರೆ ಅದರಲ್ಲಿ ಎರಡು ಬೋರವಲ್ ನೀರು ಕೊಡುತ್ತಿರುತ್ತವೆ. ಒಂದು ಅರ್ಧ ಇಂಚು, ಇನ್ನೊಂದು ದೀಡು(1 and 1/2) ಇಂಚು! ನಿಂಬೆ ಒಣಗಿ ಹೋಗಬಾರದು ಎಂದು ಕಸರತ್ತು ಮಾಡಿರುತ್ತಾರೆ ಮತ್ತು ಅದು ಯಾವ ಲೆವೆಲ್ಗೆ ಹೋಗುತ್ತೆ ಎಂದ್ರೆ ಒಂದೊಂದು ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಾರೆ. ಇಷ್ಟಾದರೂ ಕೆಲಯೊಂದು ಊರುಗಳಲ್ಲಿ ನಿಂಬೆ ನೀರಿಲ್ಲದೆ ಒಣಗಿ ಹೋಗಿವೆ! ಕಷ್ಟಪಟ್ಟು ನೀರು ಹಾಯಿಸಿ ನಿಂಬೆ ಉಳಿಸಿಕೊಂಡು ಫಲ ಬಂದಾಗ ಮಾರಲಿಕ್ಕೆ ತಗೆದುಕೊಂಡು ಹೋದರೆ ಮಾರ್ಕೆಟ್ ಬೆಲೆ(ಬೆಲೆ ಹೇಗೆ ಇರುತ್ತೆ ಎಂದರೆ ಲಾಭ ಬಿಡಿ, ಮಾಡಿದ ಖರ್ಚಿಗಿಂತ ಕಡಿಮೆ ಇರುತ್ತೆ!) ನೋಡಿ ರೈತರು ಏನು ಮಾಡುತ್ತಾರೆ ಗೊತ್ತಾ? ನಿಂಬೆ ಮಾರುವದನ್ನೇ ನಿಲ್ಲಿಸಿಬಿಡುತ್ತಾರೆ . ಮರದ ಕೆಳಗಡೆ ಬಿದ್ದು ಹಾಳಾಗಿ ಹೋಗುತ್ತವೆ. ಇದನ್ನು ರೈತ ಹೇಗೆ ಅರಗಿಸಿಕೊಳ್ಳುತ್ತಾನೆ? ನೀವೇ ಹೇಳಿ?

ನಿಂಬೆ ಕಾಯಿ ಮರದಿಂದ ಹರಿದು ಅದನ್ನು ಚೀಲದಲ್ಲಿ ಹಾಕುವುದು ಸುಲಭದ ಕೆಲಸವಲ್ಲ. ನಿಂಬೆ ಮರಕ್ಕೆ ಮುಳ್ಳುಗಳು ಇರುತ್ತೆ. ಮತ್ತೆ ನಿಂಬೆ ಹರಿಯಲು ನೀವು ನಿಂತು ಮತ್ತು ಬನದಲ್ಲಿ ಬಗ್ಗಿ ಹರಿಯುವ ಕೆಲಸವುಂಟು. ಇಷ್ಟೆಲ್ಲ ರಗಳೆ ಇರುವ ಕೆಲಸಕ್ಕೆ ಕೆಲಸದವರು ಸಿಗುವರೇ? ಸಿಕ್ಕರೆ ಖಂಡಿತ ಇರುವ ಪಗಾರಕ್ಕಿಂತ ೫೦-೧೦೦ ರೂಪಾಯಿ ಹೆಚ್ಚಿಕೆ ಕೊಡಬೇಕು. ಇಷ್ಟೆಲ್ಲಾ ಕಷ್ಟ ಇರುವುದರಿಂದ ಹೆಚ್ಚಿಗೆ ಎಂದರೆ ೧-೨ ಚೀಲ ಕೆಲಸದವರು ಹರಿಯುತ್ತಾರೆ. ಅದೇ ಚೀಲ ಸಮೀಪ ಇರುವ ಮಾರುಕಟ್ಟೆಗೆ ತಗೆದುಕೊಂಡು ಹೋದರೆ ಅದರ ಬೆಲೆ ೨೦೦-೬೦೦ ರೂಪಾಯಿ (ವರ್ಷದಲ್ಲಿ ೧-೨ ತಿಂಗಳು ೮೦೦-೩೦೦೦, ಇದು ಲಾಟರಿ ಮತ್ತು ಹಣೆಬರಹ!) . ಕೆಲಸದವರಿಗೆ ೩೦೦-೫೦೦ ಕೊಟ್ಟು,ಟ್ರಾನ್ಸ್ಪೋರ್ಟ್ ಗೆ ಒಂದು ಚೀಲಕ್ಕೆ ೪೦ ರೂಪಾಯಿ ಕೊಟ್ಟು ಮತ್ತು ಹಮಾಲಿಗೆ ಒಂಧಿಷ್ಟು ಕೊಟ್ಟು ಕೈಯಲ್ಲಿ ಬಂದ ದುಡ್ಡಿನ ಲೆಕ್ಕಾ ಹಾಕಿದರೆ ಯಾವ ಬ್ಯಾಂಕಲ್ಲಿ ದುಡ್ಡು ಇಡಬಹದು ನೀವೇ ಹೇಳಿ ?(ಅವ್ರಿಗೆ ನಷ್ಟ ಆಗುತ್ತಿದೆ ಅದಕ್ಕೆ ಒಮ್ಮೆಮ್ಮೆ ನಿಂಬೆಯನ್ನು ಹರಿಯಲಾರದೆ ಅಲ್ಲೇ ಮರದ ಕೆಳಗಡೆ ಬಿದ್ದು ಹೋಗುತ್ತವೆ.) ಒಂದೊಂದು ಬಾರಿ ವರ್ಷದಲ್ಲಿ ಒಳ್ಳೆಯ ಬೆಲೆ ಬಂದಿರುತ್ತೆ ಅದೇ ಅವರಿಗೆ ಹೊಟ್ಟೆಗೆ ಮತ್ತು ಬಟ್ಟೆಗೆ ಆಗುತ್ತದೆ. ಆದರೆ ಸೊಸೈಟಿ ಸಾಲ ,ಬ್ಯಾಂಕ್ ಸಾಲ ,ಊರ ಮನೆ ಸಾಲ ಹೀಗೆ ಹತ್ತಾರು ಸಾಲುಗಳು ಮಾಡಿಕೊಂಡಿರುತ್ತಾರೆ. ಎಷ್ಟೋ ರೈತರು ಮರಳಿ ಸಾಲವನ್ನು ತೀರಿಸಬೇಕಾದರೆ ತೋಟವನ್ನೇ ಮಾರಿಬಿಡುತ್ತಾರೆ. ಇದೆಂಥ ದುರ್ದೈವ! ಇಷ್ಟೊಂದು ಕಷ್ಟ ಪಟ್ಟು ದುಡಿಯುವ ರೈತರಿಗೆ ತಾವು ಬೆಳದ ಫಸಲುಗೆ ಒಳ್ಳೆಯ ಅಥವಾ ನಿಗದಿತ ಬೆಲೆ ಕೊಡುವದಾದರೂ ಯಾವಾಗ! ಇವತ್ತಿನ ಕೃಷಿ ನೀತಿಗಳು ಸರಿಯಿಲ್ಲ ಎಂದು ಸರ್ಕಾರ ನೀತಿಗಳನ್ನು ಬದಲಾವಣೆ ಮಾಡಿದರೆ ಅದಕ್ಕೂ ಕೊಂಕು! ಮತ್ತೆ ಹೇಗೆ ಇದಕ್ಕೆ ಪರಿಹಾರ ಕೊಡುವುದು?
ಆದರೆ ಗಮನಿಸಿ ಹೇಗೆ ನಿಂಬೆಗೆ ಬೆಲೆ ನಿರ್ಧಾರವಾಗುತ್ತೆ ಎಂದು ಕೇಳಿದರೆ ದಂಗಾಗಿ ಹೋಗುತ್ತೀರಿ. ಮಾರುಕಟ್ಟೆಗೆ ತಗೆದುಕೊಂಡ ಹೋದ ಒಂದು ಚೀಲಕ್ಕೆ ಇಂತಿಷ್ಟು ಅಂತ ಅಲ್ಲಿನ ಅಡತಿ ಮಾಲೀಕರು ನಿರ್ಧಾರ ಮಾಡುತ್ತಾರೆ. ಯಾವದೇ ರೀತಿ ರಿವಾಜುಗಳಿಲ್ಲದೆ ಬೆಲೆ ನಿರ್ಧಾರವಾಗುತ್ತೆ. ಒಮ್ಮೆಮ್ಮೆ ನಿಮ್ಮ ಚೀಲವನ್ನು ನೋಡದೆ ಬೆಲೆ ನಿಗದಿ ಮಾಡುತ್ತಾರೆ. ಇದನ್ನು ಹೇಗೆ ಅರಗಿಸಿಕೊಳ್ಳುವುದು. ಇದು ಹೀಗ್ಯಾಕೆ ಎಂದು ಪ್ರಶ್ನೆ ಮಾಡಿದರೆ ನಿಮ್ಮ ಮಾಲು ನೀವು ತಗೆದುಕೊಂಡು ಹೋಗಬಹುದು. ಇಷ್ಟ ಇದ್ದರೇ ಹಾಕಿ ಅಷ್ಟೇ! ಹಾಗಾದರೆ ಇದು ಸರ್ಕಾರ ನಿಯಂತ್ರಣ ಮಾಡಬದುದಲ್ಲ! ಹೌದು ರೈತರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಒತ್ತಡದಿಂದ ಇತ್ತೀಚಿಕೆ “ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ” ಸ್ಥಾಪನೆ ಮಾಡಿದ್ದಾರೆ. ಅದು ವಿಜಯಪುರ ಜಿಲ್ಲೆಯಲ್ಲಿ ಇಂಡಿ ತಾಲೂಕಿನಲ್ಲೇ ಕಚೇರಿ ಇದೆ. ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಅಧ್ಯಕ್ಷರಾಗಿ ನೇಮಿಸಿದ್ದಾರೆ ಮತ್ತು ಇದರ ಮುಖ್ಯ ಉದ್ದೇಶ ನಿಂಬೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿವುದು ! ಆದರೆ ಸದ್ಯಕ್ಕೆ ಇವರು ಮಾಡುತ್ತಿರುವ ಕೆಲಸ ಖಂಡಿತ ಉಪಯೋಗಕ್ಕೆ ಬಂದಿಲ್ಲ. ಸ್ವಲ್ಪ ಮಟ್ಟಿಗೆ ಇವರು ಸರ್ಕಾರ ಗಮನ ಸೆಳೆದಿದ್ದಾರೆ ಆದರೆ ಅದಕ್ಕೊಂದು ಸಮಸ್ಯೆಗೆ ತಾರ್ಕಿಕ ಅಂತ್ಯಹಾಡಿಲ್ಲ. ಇನ್ನು ಬೆಲೆ ನಿರ್ಧಾರ ಮೊದಲಿನ ರೀತಿಯಲ್ಲೇ ಇದೆ. ಯಾವದೇ ಖಾರ್ಖಾನೆಗಳು ತಲೆಯೆತ್ತಿಲ್ಲ. ಕೋಲ್ಡ್ ಉಗ್ರಾಣಗಳಾಗಿಲ್ಲ.

ಸರ್ಕಾರಕ್ಕೆ ಸಮಸ್ಯೆಗಳ ಅರಿವಿದೆ ಅದಕ್ಕೆ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಸ್ಥಳೀಯವಾಗಿ ಸರ್ಕಾರ ನಿಯಂತ್ರಣ ಮಾರುಕಟ್ಟೆ ಮಾಡುವುದು, ನಿಗದಿತ ಬೆಲೆ ನಿರ್ಧಿರಿಸುವುದು, ಕೋಲ್ಡ್ ಉಗ್ರಾಣ ಸ್ಥಾಪನೆ ಮಾಡಿ ಕಡಿಮೆ ದರದಲ್ಲಿ ಬಾಡಿಗೆ ತಗೆದುಕೊಳ್ಳುವುದು, ಗೋಣಿ ಚೀಲಗಳು ಎಲ್ಲಾ ಕಡೆ ಕೊಡಬೇಕು ಮತ್ತು ನಿಂಬೆ ಮೇಲೆ ಅವಲಂಬನೆ ಇರುವ ಖಾರ್ಕಾನೆಗಳು ಸರ್ಕಾರದಿಂದ ಅಥವಾ ಖಾಸಗಿಯಾಗಿ ಸ್ಥಾಪನೆ ಮಾಡಿದರೆ ಖಂಡಿತ ನಿಂಬೆ ರೈತರಿಗೆ ಒಳ್ಳೆಯದು ಆಗುತ್ತದೆ ಮತ್ತು ಜಗತ್ತಿನಲ್ಲಿ ನಾವೇ ನಂಬರ್ ಒನ್ ರಫ್ತು ಮಾಡಬಹುದು. ಇನ್ನೊಂದು ಇಂಡಿ ತಾಲೂಕಿಗೆ ಭೀಮಾನದಿ ನೀರನ್ನು ಒದಗಿಸವುದು ಅತಿ ಅವಶ್ಯಕವಾಗಿದೆ. ಅಕಾಲಿಕ ಮಳೆಯಿಂದ ಅಥವಾ ಇನ್ನ್ಯಾವುದೋ ರೀತಿಯಿಂದ ನಿಂಬೆ ಹಾಳಾದರೆ ಅದಕ್ಕೆ ಬೇರೆಯಾಗಿ ಅಭಿವೃದ್ಧಿ ಮಂಡಳಿಯಿಂದ ವಿಮೆ ಮಾಡಿದರೆ ಖಂಡಿತ ಒಳಿತು. ಇವುಗಳ ಜೊತೆ ಎರಡು ಮುಖ್ಯವಾದ ಕೆಲಸಗಳು ಇನ್ನು ಬಾಕಿ ಇವೆ. ೨೪ಘಂಟೆ ವಿದ್ಯುತ್ ಮತ್ತು ನೀರಾವರಿ!
ದ್ರಾಕ್ಷಿ ಬೆಳೆಗಾರರ ಮತ್ತು ದಾಳಿಂಬೆ ಸಮಸ್ಯೆ ಹೇಗಿದೆ? ಮತ್ತೊಮ್ಮೆ ಅದರ ಬಗ್ಗೆ ಬರೆಯೋಣ!
Categories: Articles

Good one👍 Is lemon not covered under PM Fasal Bima Yojana?
LikeLike
We need separate insurance from lemon board.
LikeLike