ಇದೊಂದು ನೈಜವಾದ ಘಟನೆ! ಘಟನೆ ತುಂಬಾ ದೊಡ್ಡದು. ಸಮಯ ಸಿಕ್ಕಾಗ ಓದಿ.
ಕೊನೆಯ ಮಗಳು ಎರಡನೆಯ ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು. ಕರಾರಿನ ಪ್ರಕಾರ ಎರಡು ಮಕ್ಕಳ ಬಾಣಂತನ ತವರು ಮನೆಯವರು ಮಾಡಲೇಬೇಕು! ಇದು ಬ್ರಹ್ಮ ಲಿಖಿತಗಿಂತ ದೊಡ್ಡ ಕರಾರು! ಅದಕ್ಕಾಗಿ ತವರು ಮನೆ ಸೇರಿದ್ದಳು. ಬಾಣಂತಿಗೆ ಯಾವಾಗ ತವರು ಮನೆಗೆ ಹೋಗಲಿ ಎಂದು ದಿನವನ್ನು ಎಣಿಸಿ ತವರು ಮನೆಗೆ ಎರಡನೆಯ ಮಗುವಿಗೆ ಜನ್ಮಕೊಡಲು ಬಂದಿದ್ದಳು. ಮೊದಲಿನ ಮಗಳಿಗೆ ೩ ವರ್ಷ ಆಗಿದ್ದವು. ಮೊದಲಿಗೆ ಹೆಣ್ಣು ಮಗುವಾದಾಗ ಅವರ ಅತ್ತೆ ಹೇಳಿದ ಮಾತೆಂದರೆ ಅವರದು ಹೆಣ್ಣಿನ ಕುಲ! ನೋವಾಗಿತ್ತು ಆದರೆ ಏನು ಮಾಡುವ ಹಾಗಿಲ್ಲ! ೨೧ನೇ ಶತಮಾನದಲ್ಲಿ ಹೆಣ್ಣು ಮಕ್ಕಳು ವಿದ್ಯಾವಂತರಾಗಿ ವೈದ್ಯರಾಗಿ, ಇಂಜಿನಿಯರ್ , ವಿಜ್ಞಾನಿ ಹೀಗೆ ಅನೇಕ ಒಳ್ಳೆಯ ಹುದ್ದೆ ಹೊಂದಿದ್ದರು ಎರಡು ಬಾಣಂತನ ತವರು ಮನೆಯವರೇ ಮಾಡಲೇಬೇಕು! ಇಂದಿಗೂ ಅಲ್ಲಲ್ಲಿ ಪ್ರಸ್ತುತ.
ತುಂಬಿದ ಕುಟುಂಬದಲ್ಲಿ ಬೆಳದವರಿಗೆ ಗೊತ್ತು ತುಂಬು ಕುಟುಂಬದ ಮಜುಕರ! ೭ ಹೆಣ್ಣು ಮಕ್ಕಳ ಮೇಲೆ ಒಂದು ಗಂಡು ಮಗು. ಸಂಸಾರ ಸಾಗರ ಸಾಗಿಸುವುದು ಸ್ವಲ್ಪ ಕಷ್ಟವೇ ಆಗಿತ್ತು ಕಾರಣ ೮ ಮಕ್ಕಳ ಜೋಪಾನ! ಮನೆಯ ಯಜಮಾನ ಅದೇ ತಾನೇ ತುಂಬು ಕುಟುಂಬದಿಂದ ದಾಯಾದಿ ಕಲಹದಿಂದ ಬೇರೆ ಬೇರೆ ಆಗಿದ್ದರು.(ಒಂದೊಂದು ಕಡೆ ಡಿವೈಡ್ ಆಗುವದಕ್ಕೆ ತಟ್ಟ ಆದೆವು ಎಂದು ಕರೆಯುತ್ತಾರೆ ). ಇಲ್ಲಿ ತಟ್ಟ ಎಂದರೆ ಗೋಣಿ ಚೀಲ ಹರಿದ ಮೇಲೆ ಅದಕ್ಕೆ ತಟ್ಟ ಎಂದು ಕರೆಯುತ್ತಾರೆ. ಕಾರಣ ಅದಕ್ಕೆ ಯಾವದೇ ಮೌಲ್ಯ ಇರುವದಿಲ್ಲ. ಇಲ್ಲಿ ತುಂಬು ಕುಟುಂಬದಿಂದ ಬೇರೆ ಯಾದರೆ ಕುಟುಂಬ ಮೌಲ್ಯ ಕಳೆದುಕೊಳ್ಳುತ್ತದೆ ಅದಕ್ಕೆ ತಟ್ಟ ಎಂದು ಕರೆದಿರಬೇಕು ಅನಿಸುತ್ತೆ!
ಮನೆಯ ಒಡತಿಗೆ ೭ ಹೆಣ್ಣು ಮಕ್ಕಳನ್ನು ಸಾಕಿ ಸಲುವುದು ತುಂಬಾ ಕಷ್ಟವಾಗಿದ್ದ ಕಾಲ, ಆದರೂ ಒಂದು ಗಂಡು ಮಗ ಮನೆಗೆ ಬೇಕೇ ಬೇಕು ಎಂದು ಪಡೆದಿದ್ದ ಗಂಡ ಹೆಂಡತಿ. ಮತ್ತೊಂದು ಮಗು ಆಯಿತು ಅದರ ಜೊತೆಗೆ ಕಷ್ಟ ಇನ್ನು ಜಾಸ್ತಿ ಆಯಿತು ಆದರೆ ಮನೆಯಲ್ಲಿ ಖುಷಿ ಮಾಡಿತ್ತು. ಖುಷಿಯಲ್ಲಿ ತಲೆಯ ಮೇಲಿನ ಬಾರ ಹೊರೆಯಾಗಿ ಕಾಣಿಸಲಿಲ್ಲ. ಹೆಣ್ಣು ಮಕ್ಕಳು ದೊಡ್ಡವರಾಗಿ ತಾಯಿಯ ಕೆಲಸಕ್ಕೆ ನೆರವಾದಾಗ ಹೆಣ್ಣು ಎಂದು ತಾತ್ಸಾರ ಮಾಡಿ ತೆಗಳಿದವರು ನಮಗೂ ಒಂದು ಹೆಣ್ಣು ಆಗಬಾರದಿತ್ತಾ ಎನ್ನುತ್ತಿದ್ದರು. ಯಜಮಾನಿಯ ತವರು ಮನೆ ಮತ್ತು ಗಂಡನ ಮನೆ ಒಂದೇ ಊರು. ತವರು ಮನೆ ಜಬರದಸ್ತ ಗೌಡರ ಮನೆಯಾಗಿತ್ತು. ಸಾಹುಕಾರ ಮನೆಗೆ ಬಂದು ಗೌಡತಿ ಹೋಗಿ ಸಾಹುಕಾರತಿ ಆಗಿದ್ದಳು ಆದರೆ ಜೀವನ ತುಂಬಾ ಬಾರವಾಗಿತ್ತು. ಕಾರಣ ಸಾಹುಕಾರ ಬೇರೆಯಾಗಿದ್ದು ಮತ್ತು ೮ ಮಕ್ಕಳ ಜವಾಬ್ದಾರಿ. ಆದರೂ ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿ ಗೆದ್ದ ಸಾಹುಕಾರತಿ!
ಎಲ್ಲ ಮಕ್ಕಳು ದೊಡ್ಡವರಾಗುತ್ತಿದ್ದರು. ಮಕ್ಕಳ ವಯಸ್ಸಿನ ಅಂತರ ಕೇವಲ ಎರಡು ವರ್ಷ. ಮೊದಲೇ ಮಗಳಿಗೆ ಸುಮಾರು ೧೨ ವರ್ಷ . ಮದುವೆ ಮಾಡುವ ಹಂಬಲ ಮನೆಯ ಸಾಹುಕಾರನದು. ಮಗಳು ಎಲ್ಲ ಕೆಲಸ ಮಾಡುತ್ತಾಳೆ ಎಂದು ಸಾಹುಕಾರ ಎಲ್ಲರಿಗೂ ಹೇಳುತ್ತಾ ನನ್ನ ಮಗಳು ಉತ್ತಮವಾಗಿದ್ದಾಳೆ ಎಂದು ಹೇಳುತ್ತಾ ಮಗಳಿಗೆ ಸಂಬಂಧ ಹುಡುಕುತ್ತಿದ್ದನು. ಆದರೆ ಮಗಳಿಗೆ ಅಕ್ಷರ ಜ್ಞಾನ ಮಾತ್ರ ಶೂನ್ಯ! ಆಗಿನ ಕಾಲವೇ ಹಾಗಿತ್ತು ಎಂದುಕೊಳ್ಳೋಣ ಬಿಡಿ. ೧೨ನೆಯ ವರ್ಷಕ್ಕೆ ಮದುವೆ ಎಂದರೆ ಈಗಿನ ಬಾಲ್ಯ ವಿವಾಹ.
ದೊಡ್ಡ ಮಗಳ ಮದುವೆ ದೊಡ್ಡದಾಗಿ ಮಾಡಿದ ಸಾಹುಕಾರ ಎರಡನೆಯ ಮಗಳಿಗೆ ಗಂಡು ಹುಡುಕುವ ಕೆಲಸ ಪ್ರಾರಂಭವಾಗಿತ್ತು. ಮಕ್ಕಳಿಗೆ ಹೊಟ್ಟೆಗೆ ಮತ್ತು ಬಟ್ಟೆಗೆ ಕೊರೆತೆ ಇರಲಿಲ್ಲ. ಆದರೆ ಕೃಷಿ ಕುಟುಂಬವಾಗಿದ್ದರಿಂದ ಯಜಮಾನ ಮತ್ತು ಒಡತಿ ಕೆಲಸಗಾರರ ಜೊತೆ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಲೇ ಬೇಕಿತ್ತು. ಒಮ್ಮೆಮ್ಮೆ ಯಾಕಾದರೂ ದೇವರು ಮೊದಲ ಮಗಳೇ ಗಂಡು ಮಗನಾಗಿ ಕೊಟ್ಟಿದ್ದರೇ ಸಹಾಯವಾಗುತ್ತಿತ್ತು ಎಂದು ಹೇಳಿದ ಅನೇಕ ಉಧಾಹರಣೆಗಳು ಇವೆ. ಹಿಂದಿನ ಕಾಲದಲ್ಲಿ ಮಳೆಗಾಲಕ್ಕೆ ಕೊರೆತೆ ಇರಲಿಲ್ಲ ಆದ್ದರಿಂದ ಕುಟುಂಬದ ಆದಾಯ ಚೆನ್ನಾಗಿ ಇತ್ತು ಮತ್ತು ರೈತರಿಗೆ ತುಂಬಾ ಗೌರವ ಕೊಡುವ ಇದ್ದ ದಿನಗಳು.

ಮೊದಲ ಮಗಳಿಗೆ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಎರಡನೆಯ ಮಗಳಿಗೆ ಒಡತಿಯ ಅಣ್ಣ ಎಂದರೆ ಗೌಡರ ಮಗನಿಗೆ ಕೊಟ್ಟು ಮದುವೆ ಮಾಡಿಕೊಡಬೇಕು ಎಂದು ನಿರ್ದಾರ ಮಾಡಿ ಎಲ್ಲರು ಅಂದುಕೊಂಡತ್ತೇ ಮದುವೆ ಕಾರ್ಯ ಮುಗಿದಿತ್ತು. ಇತ್ತ ಕಡೆ ಗಂಡ ಹೆಂಡತಿ ಜೀವನದಲ್ಲಿ ಏಳಿಗೆಯನ್ನು ಹೊಂದುತ್ತಾ ಸಾಗಿದ್ದರು. ಕಷ್ಟಪಟ್ಟು ಎಲ್ಲವೂ ಅಂದುಕೊಂಡಂತೆ ಸಾಗಿತ್ತು. ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮುಗಿಸಿದ್ದರು. ಆದರೆ .. ಜೀವನದಲ್ಲಿ ತೊಂದರೆ ಮನುಷ್ಯನಿಗಲ್ಲದೆ ಬೇರ್ಯಾರಿಗೆ ಬರುತ್ತೆ ಹೇಳಿ? ಎಂಥಹ ಕಷ್ಟಗಳು ಎದುರಿಸಿದರು? ಏನಲ್ಲಾ ಘಟನೆ ಸಂಭವಿಸಿದವು?
ಕೊನೆಯ ಮಗಳ ಬಾಣಂತನ ಸಮಯ ತೀರಾ ಹತ್ತಿರ ಬಂದಿತ್ತು. ಮನೆಯರೆಲ್ಲರಿಗೂ ಮಗಳ ಬಾಣಂತನದ ಚಿಂತೆ. ಈಗಿನ ತರಹ ಸುಸಜ್ಜಿತ ಆಸ್ಪತ್ರೆ ಇರಲಿಲ್ಲ. ಒಂದೇ ಒಂದು ಸರ್ಕಾರ ಆಸ್ಪತ್ರೆ ಅದು ೫ ಘಂಟೆಗೆ ಮುಚ್ಚುತ್ತಿತ್ತು. ಜಿಲ್ಲಾ ಕೇಂದ್ರದಲ್ಲಿ ದವಾಖಾನೆ ಇದ್ದರೂ ಯಾವದೇ ಶಶ್ತ್ರಚಿಕಿಸ್ಥೆಗೆ ಅನುಕೂಲ ಇರಲಿಲ್ಲ. ಏನಿದ್ದರೂ ಶೂಲಗಿತ್ತಿಯ(ಈಗಿನ ದಾದಿಯರ ತರಹ! ಆದರೆ ತುಂಬಾ ಅನುಭವಿಗಳು) ಮೇಲೆ ಅವಲಂಬನೆ. ಊರಲ್ಲಿ ಯಾವದೇ ಬಾಣಂತನ ಆದರೂ ಶೂಲಗಿತ್ತೇನೆ ಮಾಡಿಕೊಳ್ಳುತ್ತಿದ್ದಳು.
ಶೂಲಗಿತ್ತಿಯ ಕಥೆ ಒಂದು ರೋಮಾಂಚನವಾದದ್ದು. ಅವಳು ತನ್ನ ಮಗನಿಗೆ ಹೆತ್ತು ಒಂದು ವರ್ಷವಾಗುವಷ್ಟರಲ್ಲಿ ಗಂಡ ತೀರಿಕೊಂಡಿದ್ದನು. ಜೀವನಕ್ಕಾಗಿ ತನ್ನ ತಾಯಿಯ ಜೊತೆ ತಾನು ಹೋಗಿ ಅವಳ ಹೆರಿಗೆ ಮಾಡಿಸುವ ನೈಪುಣ್ಯತೆ ಪಡೆದುಕೊಂಡಿದ್ದಳು. ಅದೇ ಇಂದು ತನ್ನ ಜೀವನಕ್ಕಾಗಿ ಮುಂದುವರೆಸಿದ್ದಳು. ಇವರು ಹೈದ್ರಾಬಾದ ಕಡೆಯಿಂದ ನಮ್ಮೂರಿಗೆ ಬಂದಿದ್ದು. ರಜಾಕಾರ ಹಾವಳಿಯಿಂದ ತಪ್ಪಿಸಿಕೊಂಡು ಊರ ಆಳುವವರಿಂದ ಆಶ್ರಯ ಪಡೆದವರು. ಸುಮಾರು ವರ್ಷ ಆದ ನಂತರ ಊರಿಗೆ ಬೇಕಾದವಳಾಗಿದ್ದಳು. ಹೆರಿಗೆಯಿಂದ ಹಿಡಿದು ಐದೇಶಿ ವರೆಗೆ ಇವಳಿಗೆ ಕೇಳಿನೆ ಮುಂದಿನ ಕೆಲಸ. ಅಷ್ಟೇ ಅಲ್ಲ ಮಗುವಿಗೆ ಹುಷಾರವಿಲ್ಲ ಎಂದರೂ ಇವಳೇ ವೈದ್ಯ! ತುಂಬಾ ಒಳ್ಳೆಯವಳು ಎಂದರೆ ಕೈ ಖರೆ ಬಾಯಿ ಖರೆ !

೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿತ್ತು. ದೇಶದ ಎಲ್ಲ ಚಿಕ್ಕ ಚಿಕ್ಕ ಸಂಸ್ಥಾನಗಳ ದೇಶದಲ್ಲಿ ವಿಲೀನವಾಗಿ ಭವ್ಯ ಭಾರತ ನಿರ್ಮಾಣವಾಗಿತ್ತು. ಅದರಲ್ಲಿ ಕೆಲಯೊಂದು ರಾಜರು, ಆಳ್ವಿಕೆ ಮಾಡುತ್ತಿದ್ದವರು ಕೆಲವು ಷರತ್ತಿನ ಮೇರೆಗೆ ವಿಲೀನವಾದರೆ ಹೈದ್ರಾಬಾದ ನಿಜಾಮ ನಾನು ವಿಲೀನವಾಗುವದಿಲ್ಲ ಎಂದು ಹಠ ಹಿಡಿದಾಗ ರಜಾಕರ ಹಾವಳಿ ಆಗಿ ಅನೇಕ ಸಾವು ನೋವುಗಳು ಸಂಭವಿಸಿದವು. ಕಡೆಗೂ ಹೈದ್ರಾಬಾದ ವಿಮೋಚನೆಯಾಗಿ ದೇಶದಲ್ಲಿ ವಿಲೀನವಾಯಿತು ಅದರ ಶ್ರೇಯಸ್ಸು ಸರ್ದಾರ ಪಟೇಲ್ ಅವರಿಗೆ ಹೋಗಬೇಕು. ರಜಾಕರ ದಂಗೆ ಸಮಯದಲ್ಲಿ ಜೀವಕ್ಕಾಗಿ ನಮ್ಮೂರಿಗೆ ಬಂದಿದ್ದರು ಶೂಲಗಿತ್ತಿಯ ಮನೆಯವರು.
ಅದೇ ವರ್ಷ ಯಜಮಾನ ಹೊಸ ಮನೆ ಕಟ್ಟಿದ್ದನು. ಆದರೆ ಇನ್ನು ಗೃಹ ಪ್ರವೇಶವಾಗಿರಲಿಲ್ಲ. ಮೊದಲು ಹುಲ್ಲಿನ ಗುಡಿಸಲಲ್ಲೇ ಇದ್ದ ಕುಟುಂಬ ಕಲ್ಲಿನ ಗೋಡೆಯ ಮನೆಗೆ ಸ್ಥಳಾಂತರ ಆಗಬೇಕಿತ್ತು. ಮುಹೂರ್ತ ಇರದೇ ಕಾರಣ ಗೃಹ ಪ್ರವೇಶ ಮಾಡಿರಲಿಲ್ಲ. ಮಗಳಿಗೆ ಹೊಸ ಮನೆಯಲ್ಲಿ ಬಾಣಂತನ ಮಾಡಬಾರದು ಕಾರಣ ಮನೆಯ ಶಾಂತಿ ಆಗಿಲ್ಲ. ಅದೇ ಕಾರಣದಿಂದ ಹಳೆಯ ಮನೆಯಲ್ಲೇ ಮಗಳು ಮತ್ತು ತಾನು ಮಲಗುತ್ತಿದ್ದರು. ಸುಮಾರು ಸಂಜೆ ೫ ಘಂಟೆ ಬಾಣಂತಿಗೆ ಹೆರಿಗೆ ನೋವು ಪ್ರಾರಂಭವಾಗಿತ್ತು ಮತ್ತು ಅದರ ಜೊತೆ ಮಳೇನು ಶುರುವಿಟ್ಟಿತ್ತು.

ಒಂದು ಕಡೆ ಹೆರಿಗೆ ನೋವು ಮತ್ತೊಂದು ಕಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ. ಮಳೆಯ ಓಟ ಹೇಗಿತ್ತು ಎಂದರೆ ೬ ಘಂಟೆಗೆ ಪ್ರಾರಂಭವಾದ ಮಳೆ ನಿಲ್ಲದೆ ಗುಡಿಸಲು ಮಳೆ ನೀರು ಹಿಡಿದು ಕೊನೆಗೆ ಟಪ್ ಟಪ್ ಹನಿ ಶುರು ಇಟ್ಟಿತ್ತು. ಕ್ರಮೇಣ ಗುಡಿಸಲಿನಲ್ಲಿ ಇರುವದಕ್ಕೆ ಇರದಷ್ಟು ನೀರು ಬರುತ್ತಿರುವದರಿಂದ ವಿಧಿಯಿಲ್ಲದೆ ಹೊಸ ಮನೆಗೆ ಹೋಗಬೇಕಾಯಿತು. ಯಾವ ಮನೆಗೆ ಗೃಹ ಪ್ರವೇಶ ಆಗಿಲ್ಲ ಅಲ್ಲಿ ತನ್ನ ಮಗಳಿಗೆ ಬಾಣಂತನ ಮಾಡಿಸಬಾರದು ಎಂದು ಮಾಡಿದ್ದಳೋ ಅದೇ ಮನೆಯಲ್ಲಿ ಮಗಳಿಗೆ ಹೆರಿಗೆ ನೋವು! ಅಷ್ಟರಲ್ಲೇ ಶೂಲಗಿತ್ತು ಬಂದು ನೋಡಿಕೊಂಡು ಹೋಗಿದ್ದಳು, ಇನ್ನು ಸಮಯವಿದೆ ನಾನು ರಾತ್ರಿ ೨ ಘಂಟೆಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದಳು. ಸರಿಯಾಗಿ ಎರಡು ಹೊಡೆದಿತ್ತು ಶುಲಗಿತ್ತಿ ಹಾಜರ್!

ಶುಲಗಿತ್ತಿ ಹೇಳಿದ ಸಮಯ ೪ ಘಂಟೆಗೆ ಹೆರಿಗೆ ಆಗುತ್ತೆ. ಅದೇ ಸಮಯಕ್ಕೆ ಹೆರಿಗೆ ನೋವು ಜಾಸ್ತಿಯಾಗಿ ಗಂಡು ಮಗನಿಗೆ ಜನ್ಮಕೊಟ್ಟಳು. ಹೆಣ್ಣು ಕುಲದವಳು ಎಂದಿದ್ದ ಅತ್ತೆಗೆ ಬೈಯುತ್ತಾ ಸಂತೋಷದಿಂದ ಇದ್ದವರಿಗೆ ಒಮ್ಮೆಲೇ ಶಾಕ್ ಕಾದಿತ್ತು. ಗಂಡು ಮಗು ಹೆರಿಗೆ ಆಗುವ ಸಮಯದಲ್ಲಿ ಹೊಸ ಮನೆಯಲ್ಲಿ ಪರಶಿ(old type of tiles) ಮೇಲೆ ನೇರವಾಗಿ ಬಿದ್ದಿತ್ತು ಮತ್ತು ಮಗು ಅಳುತ್ತಿರಲಿಲ್ಲ. ಮಗು ಬದುಕಿಲ್ಲ ಎಂದು ಅಳುತ್ತಾ ಕುಳಿತ್ತಿದ್ದರು. ಇನ್ನೊಂದು ಕಡೆ ಶುಲಗಿತ್ತಿ ಮಗುವಿನ ಕಿವಿಯಲ್ಲಿ ಒಂದೇ ಸಮನೆ ಊದುತ್ತಿದ್ದಳು. ಸುಮಾರು ೧೫ ನಿಮಿಷವಾದ ನಂತರ ಮಗು ಅಳುವದಕ್ಕೆ ಪ್ರಾರಂಭಮಾಡಿತು. ಮಗು ಅಳು ನಿಲ್ಲಿಸಲೇ ಇಲ್ಲ ಇತ್ತ ಕಡೆ ಬಾಣಂತಿ ರೌದ್ರವಾತಾರ ತಾಳಿ ಮಗು ಬದುಕಿತು ಅಂತ ಖುಷಿಯಲ್ಲಿ ಇದ್ದೀರಾ? ನಾನು ಮಗು ಮತ್ತು ಇವಳಿಗೂ ಒಂದು ಗತಿ ಕಾಣಸತಿನಿ ಎಂದು ಹೇಳತೊಡಗಿದಳು. ಇದಷ್ಟೇ ಕಿವಿಗೆ ಬಿದ್ದ ತಡ ಶುಲಗಿತ್ತಿ ಸಾಹುಕಾರತಿ ಕಮಲಮ್ಮ ಮೈಮೇಲೆ ಬಂದಾಳ ಎಂದು! ಜೋಪಾನ ಅಂತ ಹೋಗಿಬಿಟ್ಟಳು. ಯಾರು ಕಮಲಮ್ಮ?
ಸಾಹುಕಾರತಿ ಮತ್ತು ಯಜಮಾನದ ಜೀವನದಲ್ಲಿ ಎಲ್ಲ ಮಕ್ಕಳ ಮದುವೆ ನಂತರ ಅನೇಕ ಕಷ್ಟಗಳು ಎದುರಿಸಿದರು. ೬ ಹೆಣ್ಣು ಮಕ್ಕಳ ಕಷ್ಟಗಳು ಹಿರಿಯರ ಸಹಾಯದಿಂದ ಮತ್ತು ಕಾಲ ಕ್ರಮೇಣ ದೂರವಾದರೆ ಎರಡನೆಯ ಮಗಳು ಕಮಲಮ್ಮನ ಜೀವನ ತುಂಬಾ ದುಸ್ತರವಾಗಿತ್ತು. ಸ್ವತಃ ತಮ್ಮನಿಗೆ ಕೊಟ್ಟಿದ್ದ ಮಗಳಿಗೆ ಜೀವನದಲ್ಲಿ ಸುಖವಿರಲಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಇರಬೇಕಾದ ಸುಂದರವಾದ ಮಗಳ ಜೀವನ ಹಾದಿ ತಪ್ಪಿತ್ತು. ಗಂಡ ಗೌಡರ ಮನೆತನದ ಹುಡುಗ. ತುಂಬಾ ಒಳ್ಳೆಯವನಾಗಿದ್ದ. ಹೆಂಡತಿಗೆ ಹೇಳಿ ಮಾಡಿಸಿದ ಹುಡುಗ! ಆದರೆ ಯಾರಿಗೂ ಬಾಯಿ ಬಿಟ್ಟು ಒಂದೂ ಮಾತು ಎನ್ನದ ಮೃಧು ಸ್ವಭಾವ! ಇದೆ ಗಂಡ ಹೆಂಡತಿ ಜೀವನಕ್ಕೆ ಕೊಳ್ಳೆ ಇಟ್ಟಿದ್ದು.
ಹುಡಗನ ತಾಯಿ ಎಂದರೆ ಅವರೇ ಅತ್ತೆ ಮನುಷ್ಯತ್ವವನ್ನೇ ಕಳೆದುಕೊಂಡ ಅತ್ತೆ ಎಂದರೆ ತಪ್ಪಾಗಲಾರದು. ಪ್ರತಿ ಮಾತಿ ಮಾತಿಗೂ ಕೊಂಕು ನೋಡಿ, ತವರು ಮನೆಗೆ ಕಳಿಸುವದಿಲ್ಲ ಎಂಬ ಹಠ, ಸರಿಯಾಗಿ ಊಟ ಕೊಡದೆ ಸತಾಯಿಸಿದ್ದು, ಗಂಡನ ಜೊತೆ ಮಲಗುವದಕ್ಕೆ ಬಿಡದೆ ಪ್ರತಿ ಹಂತದಲ್ಲೂ ಸೊಸೆಯ ಜೀವನ ನರಕ ದೃಶ್ಯ ಮಾಡಿದ್ದಳು. ಒಳಗಿನ ಸಂಬಂಧ ಎಂದು ಅನೇಕ ಬಾರಿ ಹಿರಿಯರ ಮಧ್ಯಸ್ಥಿಕೆ ವಹಿಸಿದರು ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಸಾಹುಕಾರತಿಯ ಅಣ್ಣನು ಕೈ ಚೆಲ್ಲಿ ಬಿಟ್ಟಿದ್ದ. ಮಗ ಯಾರಿಗೂ ಏನು ಹೇಳದೆ ಊಟ ಮುಗಿದ ನಂತರ ಹೊಲ ಸೇರಿಕೊಳ್ಳುತ್ತಿದ್ದ. ಇದು ಸತತವಾಗಿ ನಡೆದೇ ಇತ್ತು.
ಸುಮಾರು ೬ ತಿಂಗಳಿನ ನಂತರ ಸೊಸೆ ಗರ್ಭಿಣಿಯಾದಳು. ಸಂತೋಷದಿಂದ ಇರಬೇಕಾದ ಮನೆಯಲ್ಲಿ ದುಃಖವೇ ಇತ್ತು. ಅತ್ತೆಗೆ ಖುಷಿ ವಿಚಾರವೇ ಇರಲಿಲ್ಲ. ಯಾತಕ್ಕೆ ಹೀಗೆ ಎಂದು ಕೊನೆಗೂ ಗೊತ್ತಾಗಲಿಲ್ಲ! ಸೊಸೆಗೆ ಇಲ್ಲಿಯವರೆಗೆ ಒಂದು ತೂಕವಾದರೆ ಗರ್ಭಿಣಿಯಾದ ನಂತರ ಮತ್ತೊಂದು ತೂಕವಾಗಿತ್ತು. ಗರ್ಭಿಣಿ ಆಸೆ ನೊರೆಂಟು ಅಂತೇ. ಆದರೆ ಅತ್ತೆ ಆಸೆ ಬಿಡಿ ಊಟಕ್ಕೆ ಕೊಡುತ್ತಿರಲಿಲ್ಲ. ಇದು ಗೊತ್ತಾಗಿ ತಂದೆ ಕರೆಯಲಿಕ್ಕೆ ಬಂದರೆ ತವರುಮನೆಗೆ ಕಳಿಸುವದಿಲ್ಲ ಎಂಬ ಭಯಂಕರ ಹಠ. ಕರೆದುಕೊಂಡು ಹೋಗುವದಾದರೆ ಮತ್ತೆ ನಮ್ಮ ಮನೆಗೆ ಕಳಿಸಬೇಡಿ ಎಂಬ ಖಡಕ್ ಮಾತು! ಅವಳು ತಂದೆಗೆ ನನ್ನ ದಯವಿಟ್ಟು ಇಲ್ಲಿ ಬಿಡಬೇಡ ಎಂದರೂ ತಂದೆ ಹೆದರಿ ಅಲ್ಲೇ ಬಿಟ್ಟು ಹೋಗುತ್ತಿದ್ದರು. ತಂದೆ ಬಂದು ಹೋದ ನಂತರ ಅವಳ ಮನಸ್ಸು ತುಂಬಾ ಭಾರವಾಗಿರುತಿತ್ತು. ಅಳುವೇ ಅವಳಿಗೆ ಜೋಡಿಯಾಗಿತ್ತು!

ಕಷ್ಟಗಳು ಜೀವನದಲ್ಲಿ ಬರುತ್ತವೆ ಆದರೆ ಒಂದಿಲ್ಲ ಒಂದು ದಿನ ತೆರೆಮೇರೆಗೆ ಸರಿಯುತ್ತೆ ಎಂದು ದೊಡ್ಡವರು ಹೇಳುತ್ತಾರೆ. ಹಾಗೆ ಇವಳಿಗೂ ಕೊನೆಗೂ ಅತ್ತೆ ತವರು ಮನೆಯವರಿಗೆ ಹೇಳಿ ಕಳುವಿಸಿ ನಿಮ್ಮ ಮಗಳನ್ನು ಬಾಣಂತನಕ್ಕೆ ಕರೆದುಕೊಂಡು ಹೋಗಿ! ಕಮಲಮ್ಮನ ತಾಯಿಗೆ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಮಲಮ್ಮನನ್ನು ಕರೆದುಕೊಂಡು ಬಂದರು. ಕಮಲಮ್ಮ ತುಂಬಾ ಸ್ಥಿತಪ್ರಜ್ಞೆಯಂತೆ ವರ್ತಿಸುತ್ತಿದ್ದಳು. ಅವಳಿಗೆ ಗೊತ್ತಾಗಿತ್ತು ತಾಯಿಯ ಮತ್ತು ತಂದೆಯ ನೋವು! ತಾಯಿ ನನ್ನ ಅಳಿಯ ಚಲೋ ಹುಡುಗ ಅಂತೇ ಕೊಟ್ಟೆ ನಿನ್ನ ಜೀವನ ನೋಡಿ ನನ್ನ ಕರಳು ಕಿತ್ತು ಬರುತ್ತಿದೆ ಎಂದು. ಆದರೂ ಕಮಲಮ್ಮ ತಾಯಿಗೆ ಇರಲಿ ಬಿಡು ಅಮ್ಮ ಆಗಿದ್ದು ಆಗಿಹೋಯಿತು ಇವಾಗ ಏನೆ ಹೇಳಿದರು ಶೂನ್ಯ! ಮೊದಲೇ ನಾನು ಬೇಡ ಎಂದರೂ ಮಾಡಿದ ಬೀಗತನ ಎಂದಿದ್ದಳು. ಕಮಲಮ್ಮ ಎರಡನೆಯ ಮಗಳು. ತುಂಬಾ ಸುಂದರವಾದ ಮಗಳು!
ಬಾಣಂತನಕ್ಕೆ ಬಂದಿದ್ದ ಕೊನೆಯ ಮಗಳ ಗಂಡ ಹೆಂಡತಿ ನೋಡಲು ಬಂದಿದ್ದ. ಗಂಡ ಕೃಷಿಕ ಮತ್ತು ಅಧ್ಯಾತ್ಮ ಜೀವಿ. ಗಂಡ ಹೆಂಡತಿಯ ಕ್ಷೇಮ ನೋಡಿ ಹೋಗುವಾಗ ಕಿಸೆಯಲ್ಲಿದ್ದ ಪ್ರಸಾದವನ್ನು ಹೆಂಡತಿಗೆ ಕೊಟ್ಟಿದ್ದನು. ಗಂಡ ಹೋದ ನಂತರ ಹೆಂಡತಿ ತಾಯಿಗೆ ಹೇಳುತ್ತಾ “ಎಲ್ಲಿ ಕಿಸೆದಾಗ ಕೈ ಹಾಕ್ಯಾನ ರೊಕ್ಕ ಕೊಡತಾನ ಎಂದ್ರೆ ಪ್ರಸಾದ್ ಕೊಟ್ಟಾನ ಎಂದು ಉದಾಸೀನತೆ ಮಾಡಿ ಪ್ರಸಾದ್ ಅಲ್ಲೇ ಇಟ್ಟಿದ್ದಳು. ಆದರೆ ತಾಯಿ ಅದನ್ನು ಬಾಣಂತಿಯ ಮಲಗುವ ಹೊರಸಲಕ್ಕೆ(ಕಾಟಾ) ಕಟ್ಟಿದ್ದಳು.
ಶೂಲಗಿತ್ತಿ ದೆವ್ವ ಎಂದು ಹೋಗಿದ್ದಳು. ತಾಯಿ ಮಾತ್ರ ಇದ್ದದ್ದು ಅಲ್ಲಿ. ಕಮಲಮ್ಮ ಮೈಯಲಿ ಬಂದಿದ್ದಳು. ತಾಯಿ ಕಷ್ಟಪಟ್ಟು ಹೊರಸಲ ಮೇಲೆ ಮಗಳಿಗೆ ಮಲಗಿಸಿದಳು ಒಮ್ಮಲೇ ಕಮಲಮ್ಮನ ಆರ್ಭಟ ನಿಂತಿತ್ತು. ಏ ಗಂಡ ಕೊಟ್ಟ ಪ್ರಸಾದ್ ಎಷ್ಟು ದಿವಸ ಅಂತ ಅಲ್ಲೇ ಇಡತಿ ನಾನು ನೋಡತೀನಿ ಎಂದು ಬಿಟ್ಟಳು. ಅವಳಿಗೆ ಗೊತ್ತಾಗಿತ್ತು ಆದ್ಯಾತ್ಮ ಜೀವಿ ಗಂಡ ಕೊಟ್ಟ ಪ್ರಸಾದದ ಮಹಿಮೆ!
ಕಮಲಮ್ಮ ತವರು ಮನೆಗೆ ಬಂದು ತಾಯಿಯ ಜೊತೆ ಮತ್ತು ಕುಟುಂಬದ ಜೊತೆ ಇದ್ದರೂ ಜಾಸ್ತಿ ಏನೂ ಮಾತಾಡದೆ ಬಂದು ಒಂದು ವಾರದ ಬಳಿಕ ತನ್ನ ಜೀವನವನ್ನೇ ಕೊನೆಗೊಳಿಸುತ್ತಾಳೆ. ತಮ್ಮ ಹೊಲದಲ್ಲಿ ಇರುವ ಬಾವಿಗೆ ಹಾರಿ ಜೀವವನ್ನು ಬಿಡುತ್ತಾಳೆ. ಮುಂದೆ ಅವಳು ಗಾಳಿಯಾಗಿ ತಮ್ಮ ಮನೆಯಲ್ಲಿ ಯಾರು ಮಕ್ಕಳನ್ನು ಹೆರಬಾರದು ಎಂದು ತನ್ನ ಅಕ್ಕ ತಂಗಿಯರು ಹೆರಿಗೆಗೆ ಬಂದರೆ ಅವಳ ಕಾಟ ತಪ್ಪುತ್ತಿರಲಿಲ್ಲ. ಸಾಹುಕಾರತಿ ಒಂದು ಎರಡು ಮೊಮ್ಮಕ್ಕಳನ್ನು ಕಳೆದುಕೊಂಡ ಉಧಾಹರಣೆ ಇವೆ. ಮಾಂತ್ರಿಕರ ಸಹಾಯದಿಂದ ಕಮಲಮ್ಮನ ಗಾಳಿ ಶಾಂತ ಮಾಡುತ್ತಿದ್ದಳು. ಆದರೂ ಮತ್ತೊಬ್ಬ ಮಗಳು ಹೆರಿಗೆ ಬಂದಾಗ ಮತ್ತೆ ಹಾಜರ್!
ಕೊನೆಯ ಮಗಳು ಗಂಡನ ಪ್ರಸಾದದಿಂದ ಗಂಡು ಮಗುವಿನ ಜೊತೆ ತೊಂದರೆ ಇಲ್ಲದೆ ಅತ್ತೆಯ ಮನೆಗೆ(ಹೆಣ್ಣು ಕುಲದವಳು ಎಂದು ಹೀಯಾಳಿಸಿದ ಅತ್ತೆ ಇಂದು ಸುಮ್ಮನಾಗಿದ್ದಾಳೆ) ಹೋಗಿ ಸೇರಿಕೊಂಡಿದ್ದಳು. ಇತ್ತೀಚಿಕೆ ಎಂದರೆ ಸುಮಾರು ಇಪ್ಪತ್ತು ವರ್ಷಗಳಿಂದ ಕಮಲಮ್ಮನ ಗಾಳಿ ಶಾಂತವಾಗಿದೆ. ಆದರೆ ತಾಯಿ ಇನ್ನು ಇದ್ದಾಳೆ. ತಾಯಿಗೆ ಇಂದು ೮೫ ವಯಸ್ಸು. ಮಗಳು ತೀರಿಕೊಂಡ ನಂತರ ಯಾವತ್ತೂ ತವರುಮನೆ ಹೊಸ್ತಿಲು ತುಳಿದಿಲ್ಲ. ಇಂದಿಗೂ ಅವರನ್ನು ಶಪಿಸುತ್ತಾಳೆ. ಕಾಕತಾಳೀಯ ಏನೋ ಗೌಡರ ಮನೆ ಸಿರಿ ಕಳೆದುಕೊಂಡಿದೆ. ಸಮಯ ಸಿಕ್ಕಾಗ ಕಮಲಮ್ಮನ ನೆನಪು ಬಿಚ್ಚಿಡುತ್ತಾಳೆ ಅದರ ಜೊತೆ ಕಮಲಮ್ಮ ಗಾಳಿಯಾಗಿದ್ದಳು ಅಂತಾನೂ ಹೇಳತಾಳ!
Categories: Stories/ಕಥೆಗಳು
