Articles

ಯಡಿಯೂರಪ್ಪನವರ ಈ ಸಲದ ಆಯ್ಕೆ ಹೇಗಿದೆ?ಸದಾನಂದ ಗೌಡ, ಶೆಟ್ಟರ್ ಈಗ ಕಾಮನ್ ಮ್ಯಾನ್!(ಬೊಮ್ಮಾಯಿ)

ಇತ್ತೀಚಿಕೆ ಕೇಂದ್ರ ಸಚಿವರಾದ ಜೋಶಿಯವರು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ಪಕ್ಷ ನಿಷ್ಠೆಯುಳ್ಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ಹಿಂದೆ ನಮ್ಮ ಪಕ್ಷದ ಟಿಕೆಟ್ ತಗೆದುಕೊಳ್ಳುವರು ಇರಲಿಲ್ಲ. ಧಾರವಾಡದ ಲೋಕಸಭೆಗೆ ಸ್ಪರ್ಧೆ ಮಾಡಲು ಯಾರೂ ಆಕಾಂಕ್ಷಿಗಳು ಇರದೇ ಇದ್ದಾಗ ಸಿನಿಮಾ ಹಾಲನಲ್ಲಿ ಕುಳಿತಿದ್ದ ನಿಷ್ಠಾವಂತ ಕಾರ್ಯಕರ್ತರನ್ನು ಹುಡುಕಿ ಲೋಕಸಭೆಗೆ ಸ್ಪರ್ಧೆ ಮಾಡಿ ಎಂದು ಒತ್ತಾಯಿಸಿದ ಕಾಲ ಮತ್ತು ಇಂದು ಒಂದು ಟಿಕೆಟ್ಗೆ ೧೦-೧೫ ಜನ! ಅಂದು ನಾನು ಮಂತ್ರಿ ಬಿಡಿ ಒಬ್ಬ ಚುನಾಯಿತ ಪ್ರತಿನಿಧಿ ಆಗುತ್ತೇನೆ ಎಂಬ ಕನಸು ಇರಲಿಲ್ಲ. ಇಂದು ಜಗತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ನೆನಸಿಕೊಂಡರೆ ಆಶ್ಚರ್ಯವಾಗುತ್ತದೆ ನಿಜ ಆದರೆ ಇದರ ಹಿಂದೆ ಅನೇಕ ನಾಯಕರ ಮತ್ತು ಕಾರ್ಯಕರ್ತರ ಶ್ರಮ ಸಾಕಷ್ಟಿದೆ ! ಇಂಥಹ ಒಂದು ಪಕ್ಷವನ್ನು ರಾಜ್ಯದಲ್ಲಿ ಯಡಿಯೂರಪ್ಪ ಬೆಳಿಸಿದ ರೀತಿ ನೋಡಿದರೆ ಬೆವರಿಳಿಯುವುದು ಸತ್ಯ! ಅದಕ್ಕೆ ಇಂದಿಗೂ ರಾಜ್ಯದ ಎಲ್ಲ ನಾಯಕರು ಯಡಿಯೂರಪ್ಪನವರನ್ನು ಎಷ್ಟೇ ಹಿಂದೆಯಿಂದ ಚೂರಿ ಹಾಕಿದರೂ ಅವರೊಬ್ಬ ಮಾಸ್ ಲೀಡರ್ ಎಂದು ಮಾಧ್ಯಮದ ಮುಂದೆ ಒಪ್ಪಿಕೊಳ್ಳುತ್ತಾರೆ.

ಮೊನ್ನೆ ಡಾಕ್ಟರ್ ರಾಜಕುಮಾರ್ ಸಂಸ್ಥೆಯಿಂದ ಒಂದು ಸಾಫ್ಟವೇರ್ ಅಪ್ಲಿಕೇಶನ್ ಕಲಿಕೆಗಾಗಿ ಬಿಡುಗಡೆ ಗೊಳಿಸಲು ರಾಜ್ಯದ ಮುಖ್ಯಮಂತ್ರಿ ಹೋಗಿದ್ದರು. ಅಂದು ಅವರಾಡಿದ ಮಾತುಗಳನ್ನು ಕೇಳಿದರೆ ಖಂಡಿತ ಬೊಮ್ಮಾಯಿಯವರಿಗೆ ಕೇವಲ ರಾಜಕೀಯವಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಮತ್ತೊಂದು ಕಾರ್ಯಕ್ರಮ ಕನ್ನಡದ ಸುದ್ದಿ ವಾಹಿನಿಯಲ್ಲಿ, ಅಲ್ಲಿ ಬೊಮ್ಮಾಯಿಯವರು ನಾನೋಬ್ಬ ಕಾಮನ್ ಮ್ಯಾನ್ ಎಂದು ಎಲ್ಲರನ್ನು ಚಕಿತಗೊಳಿಸಿದ್ದರು. ಅದರಲ್ಲಿ ವಿಶೇಷವಾಗಿ ಮುಕ್ತ ಮನಸ್ಸಿನಿಂದ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮುಖ್ಯಮಂತ್ರಿಯಾದ ಕೆಲವೇ ದಿವಸಗಳಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಣೆಮಾಡಿದರು. ಮಂತ್ರಿ ಮಂಡಲ ವಿಸ್ತರಣೆಯಾಗಿ ಒಂದಿಷ್ಟು ಕಂಟಕಗಳು ಬಂದರೂ ತಕ್ಕ ಮಟ್ಟಿಗೆ ಅದನ್ನು ನಿಭಾಯಿಸಿದ್ದಾರೆ. ಎಲ್ಲರಿಗೂ ಗೊತ್ತು ಬೊಮ್ಮಾಯಿ ಯಡಿಯೂರಪ್ಪನವರ ಪಿಕಡ್ ಲೀಡರ್! ಅದರಲ್ಲಿ ಸಂಶಯ ಯಾರಿಗೂ ಇಲ್ಲ. ಬಿಜೆಪಿ ಪಕ್ಷದಲ್ಲಿ ಪಕ್ಷ ಅಧಿಕಾರ ಇದ್ದಾಗ ಮುಖ್ಯಮಂತ್ರಿಯಾಗಿದ್ದು ಯಡಿಯೂರಪ್ಪ ಬಿಟ್ಟರೆ ೩ ಜನ ಮುಖ್ಯಮಂತ್ರಿಯಾಗಿದ್ದಾರೆ. ಮೂರೂ ಜನ ಯಡಿಯೂರಪ್ಪನವರು ಪಿಕ್ ಮಾಡಿದ ಅಭ್ಯರ್ಥಿಗಳೇ! ಯಡಿಯೂರಪ್ಪನವರಿಗೆ ಇಂಥಹ ಶಕ್ತಿ ಕೊಟ್ಟಿದ್ದು ದೇವ ದುರ್ಲಭ ಕಾರ್ಯಕರ್ತರು. ಅವರೇ ಹೇಳಿದ ಅಭ್ಯರ್ಥಿಗಳೇ ಮುಖ್ಯಮಂತ್ರಿಯಾದರು ಅವರಿಂದ ಪಕ್ಷಕ್ಕೆ ಅಂತಹ ಅನುಕೂಲಗಳು ಆಗಲೇ ಇಲ್ಲ. ಅವರೇ ಅವರ ವಿರುದ್ಧ ತಿರುಗಿ ಬಿದ್ದು ಯಡಿಯೂರಪ್ಪನವರನ್ನೇ ಪಕ್ಷದಿಂದ ಹೊರಹೋಗುವಂತೆ ಮಾಡಿದರು! ಹೋಗಿದ್ದು ಆಯಿತು ,ಬಂದಿದ್ದು ಆಯಿತು! ಇದರ ನಡುವೆ ೧೦ ಕೆಜಿ ಅಕ್ಕಿಯ ನಾಯಕ ,ಆಯ್ಕೆಯಾಗಿ, ಸೋತು ಮತ್ತೆ ಅಕ್ಕಿಯ ಮಾತು ಹೇಳಿ ಗೆಲ್ಲಕ್ಕೆ ನೋಡತಾವರೆ!!!

ಮೈನಿಂಗ್ ಹಗರಣದಲ್ಲಿ ಯಾವದೇ ತಪ್ಪಿಲ್ಲದ ಯಡಿಯೂರಪ್ಪನವರು ನೈತಿಕ ಹೊಣೆಯೊತ್ತು ರಾಜೀನಾಮೆ ಕೊಟ್ಟಾಗ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೈಕಮಾಂಡ್ ಆಯ್ಕೆ ಮಾಡಬೇಕಾದರೆ ಯಡಿಯೂರಪ್ಪನವರ ಮಾತೆ ಅಂತಿಮ ಆಗಿತ್ತು. ಆದರೆ ಅಂದು ಪಕ್ಷದಲ್ಲೇ ಎರಡು ಬಣಗಳಾಗಿ ಚುನಾವಣೆ ಮೂಲಕ ಮುಖ್ಯಮಂತ್ರಿ ಆಯ್ಕೆ ಮಾಡಿದರು. ಚುನಾವಣೆಯಲ್ಲಿ ಯಡಿಯೂರಪ್ಪನವರ ಬೆಂಬಲಿಗ ಮತ್ತು ಹಿಂದಿನ ರಾಜಾಧ್ಯಕ್ಷ ಸದಾನಂದ ಗೌಡರು ಆಯ್ಕೆಯಾಗಿದ್ದರು. ಆಯ್ಕೆಯಾಗಿ ಯಡಿಯೂರಪ್ಪನವರ ಆಶೀರ್ವಾದ ಪಡೆದು ನೀವು ಹೇಳಿದ ಮಾತು ಮಿರುವದಿಲ್ಲ ಎಂಬ ಸಂದೇಶ ರವಾನೆ ಮಾಡಿದ್ದರು. ಕೆಎಂಫ್ ಅಧ್ಯಕ್ಷ ಪಟ್ಟಕ್ಕೆ ಪ್ರಯತ್ನ ಪಟ್ಟು ಕೈಚಲ್ಲಿ ಕುಳಿತಿದ್ದ ಗೌಡರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದ್ದು ಯಡಿಯೂರಪ್ಪ ಕೃಪಾಕಟಾಕ್ಷದಿಂದ! ಆದರೆ ೨-೩ ತಿಂಗಳಲ್ಲಿ ವಿರೋಧಿ ಬಣದ ಜೊತೆ ಕೈ ಜೋಡಿಸಿ ಏರಿದ ಏಣಿಗೆ ಒದ್ದಾಗ ಏರಿಸಿದವರು ಬೀಳುತ್ತಾರೆ ಎಂಬ ಭ್ರಮೆಯಲ್ಲಿ ಗೌಡರು ನೆಲಕ್ಕರುಳಿದರು! ಸದಾನಂದ ಗೌಡರು ಹೈಕಮಾಂಡ್ ಬೆಂಬಲದಿಂದ ಆಯ್ಕೆಯಾಗಿರಲಿಲ್ಲ ಮತ್ತು ಅಂದು ಹೈಕಮಾಂಡ್ ಹೇಳಿದ ಹೆಸರು ಅಂತಿಮ ಆಗುವ ಸ್ಥಿತಿ ಇರಲಿಲ್ಲ. ಅಂದು ಗೌಡರು ವಿರೋಧಿಗಳ ಜೊತೆಗೂಡಿ ಹೈಕಮಾಂಡ್ ಪ್ರೀತಿ ಗಿಟ್ಟಿಸಲು ಹೋಗಿ ಹೊಡೆತ ತಿಂದಿದ್ದರು. ಸದಾನಂದರನ್ನು ಕೆಳಗಿಳಿಸಿ ಮತ್ತೆ ಚುನಾವಣೆ ಮೂಲಕ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಗಾಧಿಗೆ ಏರಿಸಿದವರು ಯಡಿಯೂರಪ್ಪ.

ಶೆಟ್ಟರ್ ಅವರು ಮೊದಲು ಅನಂತ ಕುಮಾರ ಮತ್ತು ಈಶ್ವರೇಪ್ಪ ಬಣದಲ್ಲಿ ಗುರುತಿಸಿಕೊಂಡು ಮತ್ತೆ ರಾಜಕೀಯ ಪಯಣದಲ್ಲಿ ಯಡಿಯೂರಪ್ಪ ಗುಂಪಿಗೆ ಹೋಗಿ ಹೊಂದಾಣಿಕೆ ಆಗಿದ್ದರ ಪರಿಣಾಮ ಮುಖ್ಯಮಂತ್ರಿಯಾಗಿದ್ದರು. ಗೌಡರನ್ನು ಇಳಿಸಿ ಇವರನ್ನು ಮುಖ್ಯಮಂತ್ರಿ ಮಾಡಿದ್ದರು. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವಲ್ಲಿ ವಿಫಲವಾಗಿ ಸ್ವತಃ ಬಿಗ್ ಬಾಸ್ ಯಡಿಯೂರಪ್ಪನವರನ್ನೇ ಪಕ್ಷದಿಂದ ಹೊರಹೋಗುವಂತೆ ಮಾಡುವಲ್ಲಿ ಇವರದು ಪಾಲು ಇತ್ತೆಂದು ಕೇಳಿದ್ದುಂಟು!

೨೦೧೮ರ ಚುನಾವಣೆಯ ಸೋಲು ಮತ್ತು ಯಡಿಯೂರಪ್ಪನವರ ಹೈಕಮಾಂಡ್ ಜೊತೆ ಇರುವ ಒಡನಾಟ ಈ ಬಾರಿಯ ಮುಖ್ಯಮಂತ್ರಿ ಆಯ್ಕೆ ಅತಿ ಸೂಕ್ಷ್ಮವಾಗಿ ನಡೆಯಿತು. ಇತ್ತ ಕಡೆ ದೊಡ್ಡ ನಾಯಕನ ಸ್ಥಾನಕ್ಕೆ ಅವರ ಅಭಿಪ್ರಾಯವಿಲ್ಲದೆ ಮಾಡಿದರೆ ಮುಂದೇನು ಎಂಬ ಚಿಂತೆ ಕಾಡದೆ ಇರದು. ಅದಕ್ಕೆ ಹೈಕಮಾಂಡ್ ನಡೆ ತುಂಬಾ ಮುಖ್ಯವಾಗಿತ್ತು. ಅವರು ತಗೆದುಕೊಂಡ ನಿರ್ಧಾರ ಹೇಗಿತ್ತು ಎಂದರೆ ಇಲ್ಲಿಯವರೆಗೆ ಯಡಿಯೂರಪ್ಪನವರು ಬಿಟ್ಟರೆ ಉಳಿದ ೩ ಜನಕ್ಕೆ ಮುಖ್ಯಮಂತ್ರಿ ಗಾಧಿಗಾಗಿ ಚುನಾವಣೆ ನಡೆದಿತ್ತು. ಆದರೆ ಈ ಬಾರಿ ಚುನಾವಣೆ ನಡೆಯಲಿಲ್ಲ. ಬೊಮ್ಮಾಯಿ ಹೇಳಿ ಕೇಳಿ ಯಡಿಯೂರಪ್ಪನವರ ಬಲಗೈ ಬಂಟ! ಆದರೂ ವಿರೋಧಿ ಬಣಗಳು ಚಕಾರ ಎತ್ತಲಿಲ್ಲ ಇದಕ್ಕೆ ಕಾರಣ ಈ ಬಾರಿಯ ಪಿಕಡ್ ಲೀಡರ್ ಹೈಕಮಾಂಡ್ ಆಯ್ಕೆಯೂ ಆಗಿತ್ತು. ಅದಕ್ಕೆ ಕಾರಣ ಬೊಮ್ಮಾಯಿಯವರ ರಾಜಕೀಯ ಪರಿಣಿತಿ! ವಿರೋಧ ಪಕ್ಷದವರೂ ಸಹಿತ ಇವರಿಗೆ ಸ್ವಾಗತ ಮಾಡಿದ್ದರು. ಕಾರಣ! ಎಲ್ಲರ ಜೊತೆ ಇವರಿಗಿರುವ ಸ್ನೇಹ! ಇದನ್ನು ಚೆನ್ನಾಗಿ ಅರಿತಿದ್ದ ಯಡಿಯೂರಪ್ಪನವರು ಬೊಮ್ಮಾಯಿಯವರ ರಾಜಕೀಯ ಪಟ್ಟುಗಳ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದರು. ಇದರ ಜೊತೆ ಈಗಿರುವ ಹೈಕಮಾಂಡ್ ತುಂಬಾ ಸ್ಟ್ರಾಂಗ್ ಬಿಡಿ! ಮುಖ್ಯಮಂತ್ರಿಯಾದ ನಂತರ ಯಡಿಯೂರಪ್ಪನವರ ಕಾಲಿಗೆ ಬಿದ್ದು ಮಗನಂತೆ ಆಶೀರ್ವಾದ ತಗೆದುಕೊಂಡು ಕೆಲಸ ಆರಂಭಿಸಿದ ಬಸವರಾಜ ಬೊಮ್ಮಾಯಿಯರಿಗೆ ಇದ್ದ ಟ್ಯಾಗ್ “ಯಡಿಯೂರಪ್ಪನವರ ಕೈಗೊಂಬೆ”.

ಇಂದಿಗೆ ಸುಮಾರು ಎರಡು ತಿಂಗಳಾಯಿತು, ಬೊಮ್ಮಾಯಿಯವರು ಯಡಿಯೂರಪ್ಪನವರ ಕೈಗೊಂಬೆಯಾಗುತ್ತಾರೆ ಮತ್ತು ಯಡಿಯೂರಪ್ಪನವರನ್ನು ಇವರೂ ವಿರೋಧ ಹಾಕಿಕೊಳ್ಳುತ್ತಾರೆ ಎಂದು ಭವಿಷ್ಯ ಹೇಳಿದವರು ಸೈಲೆಂಟ್ ಆಗಿ ಅದರ ಬಗ್ಗೆ ಮಾತನಾಡುವ ಧೈರ್ಯ ಮಾಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಡೈನಮಿಕ್ ಲೀಡರ್ ಯಡಿಯೂರಪ್ಪನವರ ಶಿಷ್ಯ ಬಸವರಾಜ್ ಬೊಮ್ಮಾಯಿ ತಗೆದುಕೊಳ್ಳುತ್ತಿರುವ ನಿರ್ಧಾರಗಳು. ಇವರು ಮಾಡುತ್ತಿರುವ ಕೆಲಸಗಳು ಜನರಿಗೆ ಅಲ್ಲದೇ ಗುರುವಿಗೆ ಸಂತೋಷ ತರುತ್ತಿದೆ. ನನಗೆ ಜೀರೋ ಟ್ರಾಫಿಕ್ ಬೇಡ, ಕಾಮನ್ ಮ್ಯಾನ್, ಜಿಲ್ಲೆಯಿಂದ ಜಿಲ್ಲೆಗೆ ಹೋದಾಗ ಶಿಷ್ಟಾಚಾರ ಬೇಡ ಎಂದಿದ್ದು, ಕೃಷಿಕನ ಮಕ್ಕಳಿಗೆ ಸ್ಕಾಲರ್ಶೀಪ ಹೀಗೆ ಅನೇಕ ಕೆಲಸಗಳು ಹೈಕಮಾಂಡ್ ಪ್ರೀತಿ ಗಿಟ್ಟಿಸುವದಕ್ಕೆ ಮಾಡದೇ ಜನರಿಗೆ ಒಳ್ಳೆಯದು ಆಗಲಿ ಎಂದು ಮಾಡುತ್ತಿದ್ದಾರೆ. ಜನರಿಗೆ ಅನುಕೂಲವಾದರೆ ಪಕ್ಷಕ್ಕೂ ಅನುಕೂಲ! ಅದೇ ನಾವು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಂಡಿದ್ದೇವೆ. ಮಹಾನಗರ ಪಾಲಿಕೆ ಚುನಾವಣೆ ೨೦೨೩ಕ್ಕೆ ದಿಕ್ಸೂಚಿ ಅಲ್ಲದೆ ಹೋದರೂ ಗೆಲವು ಆತ್ಮ ಸ್ಥೈರ್ಯ ತುಂಬುತ್ತದೆ. ಮೂರೂ ತಿಂಗಳ ಹಿಂದೆ ಇದ್ದ ಪಕ್ಷದ ಇಮೇಜ್ ಬದಲಾಗುತ್ತಿದೆ. ಇದಕ್ಕೆ ಕಾರಣ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟು ಮತ್ತು ವಿಶೇಷವಾಗಿ ಯಡಿಯೂರಪ್ಪ, ಬೊಮ್ಮಾಯಿ! ಇದರ ಜೊತೆಗೆ ಯಡಿಯೂರಪ್ಪನವರ ಅಭಿಮಾನಿಗಳು ವಿಜಯೇಂದ್ರರವರು ಮಂತ್ರಿಯಾಗುತ್ತಾರೆ ಎಂದು ನಿರೀಕ್ಷೆಮಾಡಿದ್ದರು. ನಿರೀಕ್ಷೆ ಹುಸಿಯಾದಾಗ ಸ್ವಲ್ಪ ಬೇಸರವಾಗಿತ್ತು. ಆದರೆ ವಿಜಯೇಂದ್ರ ಪಕ್ಷಕ್ಕಾಗಿ ಕೆಲಸ ಮಾಡೋಣ ,ಅಧಿಕಾರ ಮುಂದೆ ನೋಡೋಣ ಎಂದು ನೇರವಾಗಿ ಅವರೇ ಹೇಳಿದ್ದು ಪಕ್ಷಕ್ಕಾಗುವ ಡ್ಯಾಮೇಜ್ ಕಂಟ್ರೋಲ್ ಮಾಡಿತ್ತು.

ಮಾಜಿ ಮುಖ್ಯಮಂತ್ರಿ ಮಗನಾಗಿ ಬಸವರಾಜ್ ಬೊಮ್ಮಾಯಿಯವರು ರಾಜಕೀಯ ಏಳುಬೀಳುಗಳನ್ನು ನೋಡಿ ರಾಜಕೀಯ ಪಟ್ಟುಗಳನ್ನು ಕಲಿತು ವಿಧಾನಸಭೆಯಲ್ಲಿ ಎಕ್ದಮ್ ಸ್ಟ್ರಾಂಗ್ ಟಗರಿಗೆ ಸರಿಯಾಗಿ ಸರಿಯಾದ ಸಮಯಕ್ಕೆ ಗುದ್ದಿದ ಉಧಾಹರಣೆ ಇದೆ. ಆದರೆ ಇವರು ಎದುರಾಳಿಗಳಿಗೆ ಮಾಧುಸ್ವಾಮಿ ತರಹ ಎಲ್ಲದಕ್ಕೂ ಕೌಂಟರ್ ಕೊಡುವದಕ್ಕೆ ಹೋಗದೆ ತಮ್ಮ ಅನುಕೂಲ ಇದ್ದರೇ ಮಾತ್ರ ಗುಮ್ಮುವ ಕಲೆ ಕರಗತವಾಗಿದೆ! ಕ್ಲಾಸ್ ನಾಯಕ ಮುಂದೆ ಮಾಸ್ ನಾಯಕನಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಮಾಸ್ ನಾಯಕನಾಗುವ ಎಲ್ಲ ಲಕ್ಷಣಗಳು ಇವೆ ಮತ್ತು ಅದರಲ್ಲಿ ಯಶಸ್ವಿಯಾಗಬೇಕಾದರೆ ಬಿಗ್ ಬಾಸ್ ಸಹಾಯ ಪಡೆಯಲೇ ಬೇಕಾಗುತ್ತೆ. ಆದ್ದರಿಂದ ಮುಂದಿನ ದಿನಗಳಲ್ಲೂ ಹೀಗೆ ಒಳ್ಳೆಯ ಕೆಲಸ ಮಾಡುತ್ತಾ , ಎಲ್ಲರನ್ನು ಜೊತೆಗೂಡಿಸಿಕೊಂಡು ಹೋದರೆ ಮಾಸ್ ಲೀಡರ್! ಇದು ಸಾದ್ಯವಾದರೆ ಯಡಿಯೂರಪ್ಪನವರ ನಿರ್ಧಾರ ಜೊತೆಗೆ ಹೈಕಮಾಂಡ್ ನಿರ್ಧಾರವು ಜನರು ಮುಂದೊಂದು ದಿನ ಕೊಂಡಾಡುತ್ತಾರೆ.

Categories: Articles

Tagged as: , ,

Leave a Reply