ಜನತಾ ಪರಿವಾರದ ಮನೆ ಒಡೆದಿತ್ತು, ಕಾಂಗ್ರೇಸ್ಗೆ ಕೃಷ್ಣರ ಪಾಂಚಜನ್ಯ ಕೈಹಿಡಿದಿತ್ತು.

೧೯೯೯ರಲ್ಲಿ ಎಸ್ ಎಮ್ ಕೃಷ್ಣರವರು ರಾಜ್ಯದಲ್ಲಿಒಂದು ಯಾತ್ರೆ ಪ್ರಾರಂಭ ಮಾಡಿ ಅದಕ್ಕೆ ಪಾಂಚಜನ್ಯ ಎಂದು ಹೆಸರಿಟ್ಟಿದ್ದರು. ಕಾಂಗ್ರೇಸಿನ ಅಧಿಪತಿಯಾಗಿ ರಾಜ್ಯದ ತುಂಬೆಲ್ಲಾ ಮಿಂಚಿನಂತೆ ಸಂಚಾರ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರು. ೧೯೯4ರಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾಗಿತ್ತು. ರಾಜ್ಯದಲ್ಲಿ ಜನತಾ ಪರಿವಾರದವರ ಹವಾ ಜೋರಾಗಿತ್ತು. ಜನತಾ ಪರಿವಾರದವರು ಅನೇಕ ಜನಪರ ಯೋಜನೆಗಳನ್ನು ತಂದಿದ್ದರು ಮತ್ತು ಜಾತಿವಾರು ಅನೇಕ ಪ್ರಭಾವಿ ನಾಯಕರು ಜನತಾ ಪರಿವಾರದಲ್ಲಿ ಇದ್ದರು. ರಾಮಕೃಷ್ಣ ಹೆಗ್ಡೆ, ದೇವೇಗೌಡ, ಪಟೇಲ್, ಆಳ್ವಾ , ದೇಶಪಾಂಡೆ, ಇಂದಿನ ಗೋವಿಂದ್ ಕಾರಜೋಳ ಹೀಗೆ ಅನೇಕ ಘಟಾನುಘಟಿ ನಾಯಕರು ಜನತಾ ಪರಿವಾರದಲ್ಲಿ ಇದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಮೆಲಕು ಹಾಕಿದರೆ ಮೊದಲ ಬಾರಿ ಎಂದರೆ ೧೯೮೩ರಲ್ಲಿ ಜನತಾ ಪರಿವಾರದವರು ಕಾಂಗ್ರೇಸ್ ಪಕ್ಷಕ್ಕೆ ಹೊಡೆತ ಕೊಟ್ಟಿದ್ದರು. ೧೯೮೩ರರ ಕ್ಕಿಂತ ಮುಂಚೆ ಕಾಂಗ್ರೇಸ್ ಪಕ್ಷವೇ ಸರ್ಕಾರ ಮತ್ತು ವಿರೋಧ ಪಕ್ಷ! ಜನತಾ ಪರಿವಾರದ ನಾಯಕರ ಒಗ್ಗಟ್ಟಿನ ಕೊರೆತೆಯಿಂದ ಬಹುಬೇಗ ಸರ್ಕಾರ ಅಂತ್ಯಗೊಂಡಿತ್ತು. ಜನರಿಗೆ ಕಾಂಗ್ರೇಸ್ ಪಕ್ಷವೇ ಗತಿ ಎಂದು ಮತ್ತೆ ೧೯೮೫ ಮತ್ತು ೧೯೮೯ರಲ್ಲಿ ಕಾಂಗ್ರೇಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ೧೯೮೯ರಲ್ಲಿ ಕಾಂಗ್ರೇಸ್ ಪಕ್ಷ ಗೆದ್ದ ಸೀಟ್ ೧೭೮! ಅತ್ಯಂತ ಉತೃಷ್ಟ ಸ್ಥಿತಿಯಲ್ಲಿ ಇದ್ದ ಕಾಂಗ್ರೇಸ್ ಪಕ್ಷದ ಕಾಲ! ೧೯೮೯ ರ ಸರ್ಕಾರದಲ್ಲಿ ಮೂರೂ ಮುಖ್ಯಮಂತ್ರಿಗಳನ್ನು ಕಾಂಗ್ರೇಸ್ ರಾಜ್ಯಕ್ಕೆ ಕೊಟ್ಟಿದೆ. ಅಂದು ವೀರೇಂದ್ರ ಪಾಟೀಲರನ್ನು ನಡೆಯಿಸಿಕೊಂಡು ರೀತಿಗೆ ರಾಜ್ಯದ ಪ್ರಭಾವಿ ಸಮುದಾಯ ಒಂದು ಕಾಂಗ್ರೇಸ್ ಪಕ್ಷಕ್ಕೆ ಬುದ್ದಿ ಕಲಿಸಲು ಜನತಾ ಪರಿವಾರ ಬೆನ್ನು ಹತ್ತಿತ್ತು. ಅದರ ಫಲವೇ ೧೯೯೪ರಲ್ಲಿ ಜನತಾ ಪಕ್ಷ ಗೆದ್ದಿದ್ದು ಬರೋಬ್ಬರಿ ೧೧೫ ಇತ್ತ ಕಡೆ ಕಾಂಗ್ರೇಸ್ ೧೭೮ ಸೀಟ್ಗಳಿಂದ ೩೪ಕ್ಕೆ ಇಳಿದಿತ್ತು.

೧೯೯೪ರ ಚುನಾವಣೆಯಲ್ಲಿ ಗೆದ್ದು ದೇವೇಗೌಡರು ನಾಟಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಮುಂದೆ ಪ್ರಧಾನಮಂತ್ರಿಯಾಗಿ ಪ್ರಮೋಟ್ ಆಗಿ ಅನೇಕ ಕೆಲಸಗಳು ರಾಜ್ಯಕ್ಕೆ ಕೊಟ್ಟರು ಆದರೆ ದ್ವೇಷದ ರಾಜಕಾರಣಕ್ಕೆ ಜನತಾ ಪರಿವಾರವನ್ನೇ ಬಲಿಕೊಟ್ಟರು ಎನ್ನುತ್ತಾರೆ ವಿಶ್ಲೇಷಕರು. ಹೆಗ್ಡೆಯವರನ್ನು ಉಚ್ಚಾಟನೆ ಮಾಡಿ ಅನೇಕ ಹಿರಿಯ ನಾಯಕರು ಪಕ್ಷವನ್ನು ಬಿಡುವಂತೆ ಮಾಡಿ ಪಕ್ಷವನ್ನು ಹೀನಾಯ ಸ್ಥಿತಿಗೆ ತಂದಿದ್ದರು. ೧೯೯೯ರ ಚುನಾವಣೆಕ್ಕಿಂತ ಮುಂಚೆ ಜನತಾ ಪರಿವಾರ ಜೆಡಿಎಸ್ ಮತ್ತು ಲೋಕಶಕ್ತಿಯಾಗಿ ಒಡೆದ ಪರಿಣಾಮ ಕಾಂಗ್ರೇಸ್ಗೆ ಲಾಭವಾಗಿತ್ತು. ಇದೆ ಸಮಯಕ್ಕೆ ರಾಜ್ಯದಲ್ಲಿ ಕೃಷ್ಣರವರ ಪಾಂಚಜನ್ಯ ತುಂಬಾ ಖಡಕ್ ಕೆಲಸ ಮಾಡಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿತ್ತು.
ಜನತಾ ಪರಿವಾರದಿಂದ ಇಬ್ಬಾಗವಾದ ಲೋಕಶಕ್ತಿ ಬಿಜೆಪಿಯಲ್ಲಿ ವಿಲೀನವಾಯಿತು. ಇಂದಿಗೂ ಸಿದ್ದಾಂತವನ್ನು ಗಾಳಿಗೆ ತೂರಿ ಗಾಳಿ ಬಂದಾಗ ತೂರಿಕೋ ಎನ್ನುವ ಹಾಗೆ ಜೆಡಿಎಸ್ ನ ನಡೆ! ಮಾಡಿದ ತಪ್ಪಿನ ಅರಿವಾಗಿ ಕಲಬುರ್ಗಿಯಲ್ಲಿ ಅಳೆದು ತೂಗಿ ನಿರ್ಧಾರ ಮಾಡುವ ಹಾಗೆ ಕಾಣಿಸುತ್ತಿದೆ.! ಕಾದು ನೋಡಬೇಕು?
ಸಂಕಷ್ಟದ ಸರಮಾಲೆಗಳೊಂದಿಗೆ ಬೆಳೆದ ಬಿಜೆಪಿ.
ಸದ್ದಿಲ್ಲದೇ ರಾಜ್ಯದಲ್ಲಿ ಸಂಘ ಪರಿವಾರದ ಪಕ್ಷವೊಂದು ಬೆಳೆದಿದ್ದು ಯಾರ ಗಮನಕ್ಕೂ ಬಾರದೆ ಹೋಗಿತ್ತು! ಮೊಟ್ಟ ಮೊದಲಿಗೆ ಎಂದರೆ ೧೯೮೩ರಲ್ಲಿ೧೮ ಸೀಟಗಳ ಮುಖಾಂತರ ವಿಧಾನಸಭೆ ಪ್ರವೇಶ ಮಾಡಿದ್ದ ಬಿಜೆಪಿ , ೧೯೮೫ರಲ್ಲಿ ಗಳಿಸಿದ್ದು ಕೇವಲ ೨ ಸೀಟ್! ಅದರಲ್ಲಿ ಎರಡನೆಯ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಸಂತ ಬಂಗೇರ್ ಅವರು ಪಕ್ಷ ಬಿಟ್ಟ ನಂತರ ಉಳಿದಿದ್ದು ಒಬ್ಬರೇ, ಅವರೇ ರಾಜಾಹುಲಿ! ಮತ್ತೆ ಕಾರಣಾಂತರಗಳಿಂದ ನಡೆದ ೧೯೮೯ರ ಚುನಾವಣೆಯಲ್ಲಿ ಗೆದ್ದಿದ್ದು ಕೇವಲ ೪ ಶಾಸಕರು. ಕಾಂಗ್ರೇಸ್ ಮತ್ತು ಜನತಾ ಪರಿವಾರದ ಮಧ್ಯದಲ್ಲಿ ಬಿಜೆಪಿಯ ಕುರುಹು ಯಾರಿಗೂ ಗೊತ್ತಿರಲಿಲ್ಲ. ಆದರೆ ೧೯೯೪ರ ಚುನಾವಣೆಯಲ್ಲಿ ೪೦ ಶಾಸಕರು ಆಯ್ಕೆಯಾಗಿ ಬಿಜೆಪಿ ರಾಜ್ಯದಲ್ಲಿ ಬೆಳೆಯುತ್ತಿದೆ ಎಂದು ಸಾರಿದ್ದರು.

೧೯೯೯ರ ಚುನಾವಣೆ ಬಹಳ ಕುತೂಹಲದಿಂದ ಕೂಡಿತ್ತು ಕಾರಣ! ರಾಜ್ಯದ ಅನೇಕ ಜನರು ಬಿಜೆಪಿ ಅಧಿಕಾರಕ್ಕೆ ಬರುವ ಸಂಭವವಿದೆ ಎಂದು ಸಂತೋಷ ಪಟ್ಟಿದ್ದರು.ಬಿಜೆಪಿ ಪಕ್ಷ ಗೆದಿದ್ದು ೪೪ ಸೀಟಗಳು! ಅತ್ತ ಕಡೆ ಮತ್ತೆ ಅಧಿಕಾರ ಗದ್ದುಗೆ ಹಿಡಿದ ಕಾಂಗ್ರೇಸ್ ನಾಯಕ ವಿದೇಶಗಳಲ್ಲಿ ಶಿಕ್ಷಣ ಪಡೆದು ಬದ್ದುದರಿಂದ ರಾಜ್ಯವನ್ನು ರಾಜ್ಯ ಮಾಡಬೇಕೆಂದು ಅನೇಕ ದೊಡ್ಡ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ಅದರಲ್ಲಿ ಬೆಂಗಳೂರನ್ನು ಸಿಂಗಾಪುರ್ ಮಾಡುವ ಕನಸು. ಅವರ ಕನಸು ನನಸಾಗಿತ್ತು. ಜಗತ್ತಿಗೆ ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನ ಮೂಲಕ ಪರಿಚಯ ಮಾಡಿಕೊಟ್ಟಿದ್ದರು. ಒಂದು ಕಡೆ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಉತ್ತುಂಗಕ್ಕೆ ಹೊಗುತ್ತಿದ್ದರೆ ಇತ್ತ ಕಡೆ ಬರಗಾಲದಿಂದ ರಾಜ್ಯದ ರೈತರ ಜೀವನ ಕೆಳಮಟ್ಟದಲ್ಲಿ ಇತ್ತು. ಕೃಷ್ಣರವರ ಅನೇಕ ಕೆಲಸಗಳು ಜನಪರವಾಗಿದ್ದರೂ , ಮಳೆಯ ಕೊರೆತೆ ಮತ್ತು ಅನೇಕ ಮಂತ್ರಿಗಳ ಭ್ರಷ್ಟಾಚಾರಕ್ಕೆ ಜನರಿಗೆ ಅನಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ ಆಗಿದ್ದವು. ಅದರ ಪರಿಣಾಮ ೨೦೦೪ರಲ್ಲಿ ಸಮಿಶ್ರ ಸರ್ಕಾರ ಉದಯವಾಗಿತ್ತು. ೧೯೯೪ರ ನಂತರ ಮತ್ತೆ ೨೦೦೪ರಲ್ಲಿ ಎಂದರೆ ೧೦ ವರ್ಷದ ನಂತರ ಜನತಾ ಪರಿವಾರದ ಹಿನ್ನೆಲೆಯುಳ್ಳ ಪಕ್ಷಯೊಂದು ಸರ್ಕಾರದಲ್ಲಿ ಭಾಗಿಯಾಗಿತ್ತು.
ಧರ್ಮಸಿಂಗರ ಆಟ ಮುಗಿದ ಮೇಲೆ, ೨೦-೨೦ ಪಂದ್ಯದಲ್ಲಿ ಆಟಕ್ಕಿಳಿದ ಬಿಜೆಪಿಗೆ ಮೋಸ!
ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ದೇವೇಗೌಡರ ನೂರಾರು ಪ್ರೇಮ್ ಪತ್ರಗಳ ಉಲ್ಲೇಖ ಮಾಡಿ ಇವರಿಂದ ಅಭಿವೃದ್ಧಿ ಕೆಲಸ ಕುಂಠಿತವಾಗುತ್ತಿದೆ ಎಂದು ನೇರವಾಗಿ ದೂರಿದ ಮೇಲೆ ಅಧಿನಾಯಕಿ ಸೋನಿಯಾ ದೇವೇಗೌಡರಿಗೆ ಗೌರವ ಕೊಟ್ಟಿಲ್ಲ ಎಂದು , ಸಿನಿಮಾ ನಿರ್ಮಾಪಕರಾಗಿದ್ದ ಗೌಡ್ರ ಪುತ್ರ ಕುಮಾರಸ್ವಾಮಿ ಯಾರೂ ಊಹಿಸದ ರೀತಿ ಮುಖ್ಯಮತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದರ ಜೊತೆ ರಾಜ್ಯದಲ್ಲಿ ಪ್ರಪಥಮ ಬಾರಿ ಬಿಜೆಪಿ ಅಧಿಕಾರಕ್ಕೇರಿತು! ೨೦-೨೦ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದ್ದೇನೆ ಎಂದು ಮೈಮರೆತ ಕುಮಾರಣ್ಣ ತಂದೆಯ ಮಾತು ಕೇಳಿ ವಚನಭ್ರಷ್ಟರಾಗಿ ರಾಜ್ಯದ ಜನತೆ ಮುಂದೆ ತಲೆಬಾಗಿದ್ದರು ಮತ್ತು ಅದಕ್ಕೆ ಜನರು ೨೦೦೮ರಲ್ಲಿ ಸರಿಯಾದ ರೀತಿಯಲ್ಲಿ ಉತ್ತರ ಕೊಟ್ಟಿದ್ದರು. ಅಧಿಕಾರ ಹಸ್ತಾಂತರವಾಗಿಲ್ಲ ಎಂದು ಬಿಜೆಪಿಯ ನಾಯಕ ಯಡಿಯೂರಪ್ಪ ಜನರ ಮುಂದೆ ಹೋದಾಗ ರಾಜ್ಯದ ದೊಡ್ಡ ಲಿಂಗಾಯತ ಸಮುದಾಯ ಪ್ರಪಥಮ ಬಾರಿಗೆ ಬಿಜೆಪಿಯ ಜೊತೆ ಹೊರಟು ನಿಂತಿತ್ತು.

೨೦-೨೦ ಪಂದ್ಯದಲ್ಲಿ ನಿಂತಿದ್ದ ಬಿಜೆಪಿಯ ಬ್ಯಾಟಿಂಗ್ ಶುರು ! ಕೆಟ್ಟ ಪ್ರದರ್ಶನದಿಂದ ಬಿಜೆಪಿ ನಡೆ ,ಪೆವಲಿನ್ ಕಡೆ!
ಇದಕ್ಕಿಂತ ಮೊದಲು ಕಾಂಗ್ರೇಸ್ , ಜನತಾ ಪರಿವಾರದ ಜೊತೆ ಇದ್ದ ಲಿಂಗಾಯತ ಮತಗಳು ಬಿಜೆಪಿಯ ಬುಟ್ಟಿಗೆ ಬಂದಿದ್ದವು. ಇದರ ಜೊತೆ ವಚನಭ್ರಷ್ಟವಾಗಿದ್ದು ರಾಜ್ಯದ ಎಲ್ಲ ಸಮುದಾಯದ ಜನರು ಬಿಜೆಪಿಯತ್ತ ಮುಖ ಮಾಡಿದರ ಫಲಿತಾಂಶ ೧೧೦ ಸೀಟಗಳು ಬಿಜೆಪಿ ಬುಟ್ಟಿಗೆ ಬಂದಿದ್ದವು. ಬಹುಮತ ಸಾಬಿತುಪಡಿಸಲು ೩ ಶಾಸಕರ ಕೊರೆತೆ ಇದ್ದುದರಿಂದ ಇದ್ದಬಿದ್ದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಸರ್ಕಾರ ಹಳಿ ತಪ್ಪಿತ್ತು. ಹೊಸ ಹುರುಪು ಅಭಿವೃದ್ಧಿಯ ಕೆಲಸಗಳಿಗೆ ಒತ್ತು ಕೊಟ್ಟಿದ್ದರೂ ಒಳಜಗಳ ಮಿತಿಮೀರಿದ ಪರಿಣಾಮ ಪಕ್ಷದ ಮೇಲೆ ಬಿದ್ದಿತ್ತು.
೧೯೯೯ರಲ್ಲಿ ಕಾಂಗ್ರೇಸ್ ಮಾಡಿದ ತಪ್ಪುಗಳನ್ನು ಬಿಜೆಪಿ ಪಕ್ಷ ೨೦೧೩ರಲ್ಲಿ ಮಾಡಿತ್ತು. ವೀರೇಂದ್ರ ಪಾಟೀಲ್, ಬಂಗಾರೇಪ್ಪ ಮತ್ತು ವೀರಪ್ಪ ಮೊಯಿಲಿ ಮೂರೂ ಮುಖ್ಯಮಂತ್ರಿಗಳು ಕಾಂಗ್ರೇಸ್ ಕೊಟ್ಟಿತ್ತು. ೨೦೦೮ರಲ್ಲಿ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಶೆಟ್ಟರ್! ಸ್ವಯಂ ಅಪರಾಧಗಳ ಮೂಲಕ ಬಿಜೆಪಿಯ ಪಕ್ಷ ಮೂರೂ ಭಾಗಗಳಾಗಿ ಒಡೆದು ಹೋಯಿತು. ೧೯೯೯ರಲ್ಲಿ ಜನತಾ ಪರಿವಾರ ಒಡೆದರ ಪರಿಣಾಮ ಕಾಂಗ್ರೇಸ್ ಗೆ ಲಾಭವಾಗಿ ಅಧಿಕಾರಕ್ಕೆ ಬಂದಿತ್ತು. ಅದೇ ತರಹ ಪರಸ್ಥಿತಿ ೨೦೧೩ರಲ್ಲಿ ಆಗಿ ಬಿಜೆಪಿ ಪಕ್ಷ ಮೂರೂ ಹೋಳಾದ ಪರಿಣಾಮ ಮತ್ತೆ ಕಾಂಗ್ರೇಸ್ ಗೆದ್ದಿತ್ತು.

ಕಾಂಗ್ರೇಸ್ ನಡೆ ಮನೆಯ ಕಡೆ! ಬಿಜೆಪಿ ಮರಳಿ ಪಂದ್ಯಕ್ಕೆ!
ಬಿಜೆಪಿಯ ಒಗ್ಗಟ್ಟಿನ ಪರಿಣಾಮ ೨೦೧೮ರಲ್ಲಿ ಮತ್ತೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರಮಾಡಿದರೂ ೪ ದಿನಕ್ಕೆ ಪತನವಾಗಿತ್ತು. ಕೋಮುವಾದಿ ಪಕ್ಷಕ್ಕೆ ದೂರ ಇಡುವ ಸಲುವಾಗಿ ಸಣ್ಣ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟು ಸಮಿಶ್ರ ಸರ್ಕಾರ ಮಾಡಿದರು ಅದು ಬಹಳ ದಿನ ಉಳಿಯಲಿಲ್ಲ. ಇದನ್ನೇ ದಾಳವಾಗಿಸಿಕೊಂಡು ಸತತ ಪ್ರಯತ್ನದಿಂದ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಿತು. ಚುನಾವಣೆಗೆ ಇನ್ನು ಸುಮಾರು ೨೦ ತಿಂಗಳು ಭಾಕಿ ಇವೆ.

ಬಿಜೆಪಿ ಪಕ್ಷಕ್ಕೆ ಪ್ರವಾಹ, ಕರೋನ ಮತ್ತು ಸ್ವಪಕ್ಷದ ಶಾಸಕರ ಕಾಟದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿತ್ತು. ಇದನ್ನು ಗಮನಿಸಿದ ಕಾಂಗ್ರೇಸ್ ನಾಯಕರು ೧೯೯೯ ಮತ್ತು ೨೦೧೩ರ ಸ್ಥಿತಿ ಮತ್ತೆ ಬಂದೆ ಬರುತ್ತದೆ ನಾವು ಅಧಿಕಾರಕ್ಕೆ ಏರುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಖುರ್ಚಿಗೆ ಟಾವೆಲ್ ಹಾಕಿ ನಾನೇ ಮುಂದಿನ ಬಾಸ್ ಎಂದು ಬೀದಿ ರಂಪಾಟ ಮಾಡಿಕೊಂಡಿದ್ದರು. ಈ ವಿಷಯ ಹೈಕಮಾಂಡ್ ವರೆಗೂ ಹೋಗಿತ್ತು.
ಬಿಜೆಪಿ ತಂಡದ ಮಹತ್ತರ ಬದಲಾವಣೆ ,ಕಾಂಗ್ರೇಸ್ ಗಲಿಬಿಲಿ
ಇತ್ತ ಕಡೆ ಬಿಜೆಪಿಯವರು ಪಕ್ಷದ ಇಮೇಜ್ ಬದಲಾಯಿಸಲು ಮಾಡಿದ ತಂತ್ರ, ಫಲ ಕೊಟ್ಟಿದ ಹಾಗೆ ಕಾಣಿಸುತ್ತಿದೆ. ಮಾಸ್ ಲೀಡರ್ ಯಡಿಯೂರಪ್ಪನವರ ಅಭಿಪ್ರಾಯದಂತೆ ಮುಖ್ಯಮಂತ್ರಿಯನ್ನು ಆಯ್ಕೆಮಾಡಿ, ಅವರದೇ ಸಮುದಾಯದ ಮತಗಳು ಚದುರದಂತೆ ನೋಡಿಕೊಂಡಿದ್ದಾರೆ. ಸದ್ಯದ ಸ್ಥಿತಿ ನೋಡಿದರೆ ಬಿಜೆಪಿ ಪಕ್ಷ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಬಿಜೆಪಿಯಲ್ಲಿ ಒಡಕಿನ ಆಟವಾಡಿ ರಾಜಕೀಯ ಲಾಭ ಪಡೆಯುವ ರಾಜಕಾರಣ ಕೆಲಸ ಮಾಡುತ್ತಿಲ್ಲ. ೧೯೯೯ರ ಮತ್ತು ೨೦೧೩ರ ಸ್ಥಿತಿ ಮರುಕಳಿಸುವ ಸ್ಥಿತಿ ಕಾಣಿಸುತ್ತಿಲ್ಲ. ಅದಕ್ಕೆ ಅದರ ಜೊತೆಜೊತೆಗೆ ಮೀಸಲಾತಿ ಎಂಬ ಒಳಹೊಡೆತ ಕೊಡಲು ಹಿಂದೆಯಿಂದ ಕಾಂಗ್ರೇಸ್ ಪಿಪಿ ಊದಿದ್ದಾರೆ. ಆದರೆ ಊದಿದ ಪಿಪಿಯಿಂದ ಯಾರಿಗೆ ಲಾಭವಾಗುತ್ತೆ ಎಂದು ಸದ್ಯಕ್ಕೆ ಹೇಳುವುದು ಕಷ್ಟ! ಒಟ್ಟಾರೆ ಸ್ಥಿತಿ ಮೆಲಕು ಹಾಕಿದರೆ ಸದ್ಯದ ಪರಸ್ಥಿತಿಯಲ್ಲಿ೨೦೧೮ ರ ಜೊತೆ ೨೦೨೩ರ ಬಲಾಬಲ ಹೇಳಬೇಕಾದರೆ ಕಾಂಗ್ರೇಸ್ ಗೆ ಹೆಚ್ಚಿನ ಲಾಭ ಬರುವ ನಿರೀಕ್ಷೆ ತುಂಬಾ ಕಡಿಮೆ ಕಾರಣ ೧೯೮೯ರ ನಂತರ ಕಾಂಗ್ರೇಸ್ ತನ್ನ ಸ್ವಂತ ಇಮೇಜ್ ಉಪಯೋಗಿಸಿ ಗೆದ್ದ ಉಧಾಹರಣೆ ಇಲ್ಲ. ಇನ್ನು ಸ್ವಲ್ಪ ಸಮಯವಿದೆ, ವಿರೋಧಿಗಳ ಒಗ್ಗಟ್ಟು ಒಡೆದರೆ ಖಂಡಿತ ಮತ್ತೆ ಮುಖ್ಯಮಂತ್ರಿ ಹುದ್ದೆಗಾಗಿ ಟಾವೆಲ್ ಹಾಕಬಹುದು!
Categories: Articles
