ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಉಪಚುನಾವಣೆಯ ಹಣಾಹಣಿಯಲ್ಲಿ ಗೆಲ್ಲುವ ಕುದರೆ ಯಾವದು? ಇಲ್ಲಿ ಪಕ್ಷಗಳ ಬಲಾಬಲ ನೋಡಿದರೆ ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಗೆದ್ದಿದ್ದ ಮನಗೂಳಿ ಮುತ್ಯಾ ಜೆಡಿಎಸ್ ಪಕ್ಷದವರಾಗಿದ್ದವರು. ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದ ರಮೇಶ ಭೂಸನೂರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣೆಕ್ಕಿಂತ ಮುಂಚೆ ಗೆಲ್ಲುವ ಕುದರೆ ಎಂದೇ ಖ್ಯಾತಿ ಪಡೆದಿದ್ದ ಭೂಸನೂರ ಯಾವಾಗಲೂ ಜನರ ಮಧ್ಯೆ ಇರುವ ವ್ಯಕ್ತಿ! ಜನರ ಶಾಸಕ ಎಂದೇ ಗುರುತಿಸಿಕೊಂಡಿದ್ದರು. ಆದರೂ ಫಲಿತಾಂಶ ಅವರ ವಿರುದ್ಧವೇ ಬಂದಿತ್ತು. ನೇರಾನೇರ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಪೈಪೋಟಿ ಇದ್ದರೇ ಅತ್ತ ಕಡೆ ಕಾಂಗ್ರೇಸ್ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವ ಹಾಗೆ ಪರಸ್ಥಿತಿ ಇತ್ತು. !
Amazon Ads
೧೯೫೭ರಿಂದ ೨೦೦೪ರ ವಿಧಾನಸಭೆಯ ಚುನಾವಣೆಯಲ್ಲಿ ಎಂದರೆ ೧೦ ಚುನಾವಣೆಯಲ್ಲಿ ಕಾಂಗ್ರೇಸ್ ೭ ಬಾರಿ ಗೆದ್ದಿದ್ದಾರೆ , ಜನತಾಪಕ್ಷ, ಜನತಾದಳ ಮತ್ತು ಏನ್ ಸಿ ಓ ತಲಾ ಒಂದು ಬಾರಿ ಗೆದಿದ್ದಾರೆ. ೨೦೦೪ರಿಂದ ಬಿಜೆಪಿಯ ಹವಾ ಶುರುವಾಗಿತ್ತು ಮೊದಲ ಬಾರಿ ಅಶೋಕ ಶಾಬಾದಿ ೨೦೦೪ರಲ್ಲಿ ಕಮಲ ಅರಳಿಸಿದರೇ , ೨೦೦೮ ಮತ್ತು ೨೦೧೩ರಲ್ಲಿಕಮಲ ಅರಳಿಸಿದ್ದು ರಾಜಕೀಯ ಹಿನ್ನಲೆ ಇಲ್ಲದ ವ್ಯಕ್ತಿ ರಮೇಶ್ ಭೂಸನೂರ್! ಸಿಂದಗಿಯಲ್ಲಿ ಒಟ್ಟು ಮತದಾರರ ಸಂಖ್ಯೆ ೨ ಲಕ್ಷ್ಯ ೨೦ ಸಾವಿರಕ್ಕಿಂತ ಅಧಿಕ! ಅದರಲ್ಲಿ ಪುರಷರು ಸುಮಾರು ೧ ಲಕ್ಷ ೨೦ ಸಾವಿರ ಇದ್ದರೇ ಮಹಿಳೆಯರು ೧ ಲಕ್ಷ್ಯ ೧೦ ಸಾವಿರ. ಜಾತಿಗಳ ಬಲಾಬಲ ನೋಡಿದರೆ ಇದೊಂದು ಲಿಂಗಾಯತ ಪ್ರಾಬಲ್ಯ ಇರುವ ಕ್ಷೇತ್ರ, ಪರಿಶಿಷ್ಟ ಪಂಗಡದವರ ಮತ್ತು ಮುಸ್ಲಿಮರ ಮತಗಳು ಸಹಿತ ನಿರ್ಣಾಯಕ ಪಾತ್ರ ವಹಿಸುತ್ತೆ. ಇದರ ಜೊತೆ ಹಿಂದುಳಿದವರ ಮತಗಳು ತಕ್ಕಮಟ್ಟಿಗೆ ಇವೆ. ಮೈಸೂರು ರಾಜ್ಯವಾದ ನಂತರ ಇಲ್ಲಿಯವರೆಗೆ ೧೪ ಚುನಾವಣೆಗಳಲ್ಲಿ ೧೨ ಬಾರಿ ಲಿಂಗಾಯತ ಅಭ್ಯರ್ಥಿಗಳು ಗೆಲುವನ್ನು ದಾಖಲಿಸಿದ್ದಾರೆ. ಇಲ್ಲಿಯೂ ಲಿಂಗಾಯತ ಒಳಪಂಗಡಗಳ ಮಧ್ಯೆ ಪೈಪೋಟಿ ಇರುತ್ತದೆ.
ಮನಗೂಳಿ ಮುತ್ಯಾ ದೇವೇಗೌಡರ ಒಡನಾಡಿ ಮತ್ತು ವಿಜಯಪುರದ ರಾಜಕಾರಣದಲ್ಲಿ ಅವರದೇ ಆದ ಛಾಪನ್ನು ಹಾಕಿದ್ದವರು. ಅವರು ಎಲ್ಲಾ ಪಕ್ಷದವರ ಜೊತೆ ಸ್ನೇಹ ಇತ್ತು. 1975ರಲ್ಲಿ ಎಂ. ಸಿ. ಮನಗೂಳಿ ವಿಜಯಪುರದ ಸಿಂದಗಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಂತರ ಪುರಸಭೆ ಸದಸ್ಯರಾಗಿಯೂ ಕೆಲಸ ಮಾಡಿದರು.
ಮನಗುಳಿಯವರು ೭ ಬಾರಿ ಸಿಂದಗಿಯಿಂದ ಸ್ಫರ್ಧೆಮಾಡಿ ೫ ಬಾರಿ ಸೋತು , ಎರಡು ಬಾರಿ ಗೆದ್ದಿದ್ದರು ಅದು ೧೯೯೪ ಮತ್ತು ಇತ್ತೀಚಿಕೆ ಎಂದರೆ ೨೦೧೮ರಲ್ಲಿ. ಎರಡು ಬಾರಿ ವಿಧಾನಸಭೆ ಚುನಾವಣೆ ಗೆದ್ದ ಅವರು ಎರಡೂ ಬಾರಿಯೂ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. ಮೊದಲ ಬಾರಿ ಶಾಸಕರಾದಾಗ ಜೆ. ಎಚ್. ಪಟೇಲ್ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ, 2018ರಲ್ಲಿ ಗೆದ್ದ ಬಳಿಕ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. . ಮೊದಲೆನೆಯ ಬಾರಿ ಶಾಸಕರಾಗಿ ಆಯ್ಕೆಯಾದಾಗ ಅನೇಕ ಅಭಿವೃದ್ಧಿ ಪರ ಕೆಲಸಗಳು ಕ್ಷೇತ್ರಕ್ಕೆ ಮಾಡಿದ್ದರು. ಸಿಂದಗಿ ಕ್ಷೇತ್ರಕ್ಕೆ ನೀರಾವರಿ ಯೋಜನೆ ಅನುಷ್ಠಾನ ಮಾಡುವುದರಲ್ಲಿ ಎಂ. ಸಿ. ಮನಗೂಳಿ ಅವರ ಶ್ರಮ ಸಾಕಷ್ಟಿದೆ. ಗುತ್ತಿ ಬಸವಣ್ಣ ಏತ ನೀರಾವರಿ ಜಾರಿಗೊಳಿಸುವುದರಲ್ಲಿ ಮನಗೂಳಿ ಅವರ ಪಾತ್ರ ದೊಡ್ಡದು. ಈ ಹಿನ್ನಲೆಯಲ್ಲಿ ಗೋಲಗೇರಿಯಲ್ಲಿ ಮನಗೂಳಿ ಮತ್ತು ದೇವೇಗೌಡರ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ.

ರಾಜಕೀಯ ಹಿನ್ನಲೆ ಇಲ್ಲದೆ ರಾಜಕಾರಣಕ್ಕೆ ಪಂಚಾಯತಿ ಮೂಲಕ ಪ್ರವೇಶ ಮಾಡಿದ ಭೂಸನೂರವರು ಮುಂದೆ ಪಕ್ಷೇತರರಾಗಿ ತಾಲೂಕ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಭಾರತೀಯ ಜನತಾ ಪಕ್ಷದ ಟಿಕೆಟ್ ಖಾತ್ರಿಪಡಿಸಿಕೊಂಡಿದ್ದರು. ಮುಂದೆ ಶಾಸಕರಾಗಿ ಆಯ್ಕೆಯಾಗಿ ಸಜ್ಜನ ರಾಜಕಾರಿಣಿ ಮತ್ತು ಎಲ್ಲ ಸಮುದಾಯದ ಜನರಿಗೆ ನೇರವಾಗಿ ಕೈಗೆ ಸಿಗುವ ನಾಯಕನಾಗಿ ಹೊರಹೊಮ್ಮಿ ಸತತ ಎರಡು ಗೆಲುವು ಪಡೆದಿದ್ದರು. ಎರಡು ಬಾರಿ ಶಾಸಕರಾಗಿದ್ದಾಗ ಶಿಕ್ಷಣಕ್ಕೆ, ವಸತಿ ನಿಲಯಗಳಿಗೆ , ವಿದ್ಯುತ್, ರಸ್ತೆ ಮತ್ತು ಕುಡಿಯುವ ನೀರಿಗೆ ಆದ್ಯತೆ ಕೊಟ್ಟಿದ್ದರು. ಅದೇ ಕಾರಣಕ್ಕೆ ಭೂಸನೂರವರು ಕ್ಷೇತ್ರದಲ್ಲಿ ಜನಪ್ರಿಯತೆಯನ್ನು ಹೊಂದಿದ್ದಾರೆ.

೨೦೧೮ರಲ್ಲಿ ಹಿರಿಯ ಅಭ್ಯರ್ಥಿ ಒಂದು ಕಡೆ ಮತ್ತೊಂದು ಕಡೆ ರಮೇಶ್ ಭೂಸನೂರ್ ಅವರ ಸ್ಪರ್ಧೆಯಿಂದ ಬಿರುಸಿನ ಚುನಾವಣೆಯಾಗಿ ಮಾರ್ಪಟ್ಟಿತ್ತು. ಗೆಲವು ಭೂಸನೂರ್ ಅವರಿಗೆ ಸಲೀಸಾಗಿ ದಕ್ಕುತ್ತೆ ಎಂದು ಕ್ಷೇತ್ರದ ಜನ ಹೇಳಿದ್ದರು ಆದರೆ ಮನಗುಳಿಯವರ ಅನುಕಂಪದ ಕಾರ್ಡ್ ಎಂದರೆ ಇದು ನನ್ನ ಕೊನೆಯ ಚುನಾವಣೆ ಅದಕ್ಕೆ ಮತಹಾಕಿ ಎಂದು ಕೇಳಿಕೊಳ್ಳುತ್ತಿದ್ದರು. ಚುನಾವಣೆ ಸಮೀಪ ಬರುತ್ತಿದ್ದಂತೆ ನೀವು ಮತಹಾಕಿ ಗೆಲ್ಲಿಸಿದರೆ ಹೂವಿನ ಹಾರ ನನಗೆ ಹಾಕಿ ಇಲ್ಲವಾದರೆ ಅದೇ ಹೂವಿನ ಹಾರ ನನ್ನ …. ಹಾಕಿ ಎಂದು ರಾಜಕೀಯ ಚಾಣಕ್ಯ ನೀತಿಯನ್ನು ಪ್ರದರ್ಶನ ಮಾಡಿ ಸುಮಾರು ೯ ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಇದರ ಅರ್ಥ ನನಗೆ ವಯಸ್ಸಾಗಿದೆ ಅದಕ್ಕೆ ನನ್ನೇ ಗೆಲ್ಲಿಸಿ ಎಂದಿದ್ದರು. ಇತ್ತ ಕಡೆ ರಮೇಶ್ ಭೂಸನೂರ್ ಅವರಿಗೆ ಅವರದೇ ಮತಗಳು ಕೈಬಿಟ್ಟು ಹೋಗಿದ್ದವು. ಇವೆಲ್ಲದರ ಕಾರಣಕ್ಕೆ ಕ್ಷೇತ್ರ ಬಿಜೆಪಿಗೆ ದಕ್ಕದೆ ಹೋಗಿತ್ತು.
ಇಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ದಿವಂಗತ ಮನಗುಳಿಯವರ ಪುತ್ರ ಕಾಂಗ್ರೇಸ್ ಸೇರಿ ಅಲ್ಲಿಂದಲೇ ಸ್ಪರ್ಧೆ ಮಾಡುವ ಸಂಭವ ಜಾಸ್ತಿ. ಇತ್ತ ಜೆಡಿಎಸ್ ಮನಗುಳಿಯವರ ಕಿರಿಯ ಪುತ್ರನಿಗೆ ಟಿಕೆಟ್ ಕೊಡುವ ಯೋಚನೆಯಲ್ಲಿದೆ. ಇನ್ನೊಂದು ಕಡೆ ಬಿಜೆಪಿ ರಮೇಶ್ ಭೂಸನೂರ್ ಅವರಿಗೆ ಟಿಕೆಟ್ ಕೊಡುತ್ತದೆ. ಈ ಬಾರಿ ಸರ್ಕಾರ ಸಿಂದಗಿ ಮರಳಿ ಪಡೆಯುವ ಸಲುವಾಗಿ ಶತಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಪ್ರಚಾರಕ್ಕೆ ದುಮುಕುತ್ತಾರೆ. ಅಥಣಿ, ಕಾಗವಾಡ ಮತ್ತು ಇತ್ತೀಚಿಕೆ ಬಸವಕಲ್ಯಾಣದಲ್ಲಿ ಉಸ್ತುವಾರಿ ಹೊತ್ತು ಪಕ್ಷಕ್ಕೆ ಗೆಲುವು ತಂದುಕೊಟ್ಟ ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಅವರ ಜೊತೆ ಪಿ ರಾಜೀವ್ ಸದ್ಯಕ್ಕೆ ನೇಮಕಗೊಂಡಿದ್ದಾರೆ. ಮುಂದೆ ಹಲವಾರು ನಾಯಕರು ಇವರ ಜೊತೆ ಕೈಜೋಡಿಸಿ ಗೆಲ್ಲುವ ಪ್ರಯತ್ನ ಖಂಡಿತ ಮಾಡುತ್ತಾರೆ. ಉಪಚುನಾವಣೆಗಳಲ್ಲಿ ಸಂಪನ್ಮೂಲಗಳು ಮತ್ತು ಅಧಿಕಾರ ಸರ್ಕಾರದ ಪರವಾಗಿ ಇರುತ್ತೆ ಮತ್ತು ಕರೋನ ಸಂಕಷ್ಟ ಸಮಯದಲ್ಲಿ ಸರ್ಕಾರ ಉತ್ತಮವಾಗಿ ಕೆಲಸಮಾಡಿದೆ. ಈಗಿನ ಮುಖ್ಯಮಂತ್ರಿಗಳು ತಮ್ಮ ಜಾಣ್ಮೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಇದೆಲ್ಲ ನೋಡಿದರೆ ಬಿಜೆಪಿಗೆ ಗೆಲ್ಲುವುದು ಸುಲಭ.
ಕಾಂಗ್ರೇಸ್ ಪಕ್ಷ ಸುಮ್ಮನೆ ಕುಳಿತಿಲ್ಲ ಅನುಕಂಪದ ದಾಳ ಉರುಳಿಸಲು ಮನಗೂಳಿ ಅವರ ಹಿರಿಯ ಪುತ್ರನಿಗೆ ಟಿಕೆಟ್ ಕೊಡುತ್ತಿದ್ದಾರೆ. ಮತ್ತೊಂದು ಕಡೆ ಜನಪ್ರಿಯ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ಬರುತ್ತಾರೆ. ಇದರ ಜೊತೆಗೆ ಜಿಲ್ಲೆಯ ಕಾಂಗ್ರೇಸ್ ಮುಖಂಡ ಎಂಬಿ ಪಾಟೀಲ ಗೆಲುವಿನ ಸೂತ್ರಕ್ಕೆ ತಮ್ಮ ತನು ,ಮನ , ಧನ ಅರ್ಪಿಸಿದರೆ ಖಂಡಿತ ಬಿಜೆಪಿಗೆ ದಡ ಸೇರುವುದು ಅಷ್ಟೊಂದು ಸುಲಭವಿಲ್ಲ. ಸ್ಪರ್ಧೆ ತ್ರಿಕೋನವಾಗಿ ಮಾರ್ಪಟ್ಟರೆ ಖಂಡಿತ ನಿರಾಯಾಸವಾಗಿ ಬಿಜೆಪಿ ಗೆಲ್ಲುತ್ತೆ. ಒಂದು ವೇಳೆ ನೇರವಾಗಿ ಬಿಜೆಪಿ ಮತ್ತು ಕಾಂಗ್ರೇಸ್ ಪೈಪೋಟಿ ಶುರುವಾದರೆ ಖಂಡಿತ ಗೆಲುವು ತೂಕದಲ್ಲೇ ಇರುತ್ತೆ. ಯಾರು ಗೆಲ್ಲುತ್ತಾರೆ ಎನ್ನುವುದು ಕಷ್ಟದ ಕೆಲಸ. ಆದರೆ ಒಂದು ಮಾತು ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಕೆಲಸಗಾರ ರಮೇಶ್ ಅವರಿಗೆ ಸೋಲಿಸಿದ್ದು ತಪ್ಪಾಗಿದೆ ಎಂದಿದ್ದು ಇದೆ ಆದರೆ ಚುನಾವಣೆಯಲ್ಲಿ ಅದೇ ಮಾತು ನೆನಪಾಗುತ್ತಾ ಕಾದು ನೋಡಬೇಕು.
Categories: Articles
