Articles

ನಾ ಎಂಬ ಭಾವ ಒಳಗಿದ್ದರೇ , ಮೂರ್ಖತನಕ್ಕೆ ಜಾಗ ಕೊಟ್ಟಂತೆ!

ದಶರಥ ಕೋರಿ, ಶಿಕ್ಷಕರು,ಇಂಡಿ

ಜಗತ್ತಿನ ಮಹಾನ್ ಸಾಮ್ರಾಟ ಅಲೆಗ್ಸಾಂಡರ್ ನಿಗೆ ಭಾರತದಿಂದ ಮರಳಿ ಗ್ರೀಕ ದೇಶಕ್ಕೆ ಹೋಗುವಾಗ ತನ್ನ ಗುರು ಅರಿಸ್ಟಾಟಲ್ ಭಾರತದಿಂದ ಒಬ್ಬ ವಿವೇಕವಂತ ಸನ್ಯಾಸಿಯನ್ನು ಕರೆತರಲು ಹೇಳಿರುವ ಮಾತು ನೆನಪಾಯಿತು. ಗುರುವಿನ ಮಾತು ಅಕ್ಷರಶಃ ಪಾಲಿಸಲು ಆಗ ಅಲೆಗ್ಸಾಂಡರ್ ಮುಂದಾದನು.

ಅಲೆಗ್ಸಾಂಡರ್ ನ ಗುರು ಅರಿಸ್ಟಾಟಲ್ ಹೇಳಿ ಕೇಳಿ ಒಬ್ಬ ತಾರ್ಕಿಕ ವ್ಯಕ್ತಿ ಆತನ ಚಿತ್ತ ಗಣಿತ ಮತ್ತು ವಿಜ್ಞಾನದ ಚಿತ್ತ. ವಿಜ್ಞಾನದ ಚಿತ್ತ ಸದಾ ಸಮಗ್ರತೆಯನ್ನು ತುಂಡರಿಸಿ ನೋಡಿ ನಿರ್ಣಯಕ್ಕೆ ಬರುವದು. ಹೆಚ್ಚಾಗಿ ವಿಜ್ಞಾನಿಗಳ ಈ ಚಿತ್ತದ ರೂಢಿಗತವಾದ ಹವ್ಯಾಸವೆಂದರೇ, ಯಾವುದೇ ಒಂದು ಸಂಶೋಧನೆಯನ್ನು ಪ್ರಯೋಗ ಮಾಡಿ ಹೊರ ತರಬೇಕಾದರೇ,ಅದನ್ನು ಕತ್ತರಿಸಿ,ತುಂಡರಿಸಿ, ಚಿವುಟಿ, ಮುರಿದು ಹಾಕಿದಾಗ ಅವರಿಗೆ ಆ ವಿಷಯದ ಆಳ ಅರಿವು ತಿಳಿದುಕೊಳ್ಳಲು ಸಾಧ್ಯವಾಗುವದು. ಅದೇ ರೀತಿಯಲ್ಲಿ ಭಾರತೀಯ ಸಂತರ ಮೌಲ್ಯಗಳನ್ನು ನೋಡಬೇಕಾಗಿ ಅರಿಸ್ಟಾಟಲ್ ರಿಗೆ ಭಾರತೀಯ ಸನ್ಯಾಸಿಯ ವಿಚಾರ ಮೂಡಿ ಬಂದಿತ್ತು.

ತತ್ವಜ್ಞಾನಿ ಅರಿಸ್ಟಾಟಲ್ ರಿಗೂ ಕೂಡಾ ಭಾರತೀಯ ವೇದ- ವೇದಾಂತ ಬಲ್ಲ ರಹಸದರ್ಶಿಗಳ ಕುರಿತು ಮನುಷ್ಯನ ಮನಸ್ಸಿನ ಕುರಿತು ಒಂದು ತಾರ್ಕಿಕವಾದ ಒಂದು ರೂಪರೇಷೆ ಬೇಕಾಗಿತ್ತು. ಅದಕ್ಕಾಗಿ ಅರಿಸ್ಟಾಟಲ್ ರು ಭಾರತೀಯ ಸನಾತನ ಸನ್ಯಾಸಿಯ ಜೊತೆ ಬೆರೆತು ಭಾವನೆಗಳೊಂದಿಗೆ ಕೂಡಬೇಕಾಗಿತ್ತು. ಹಾಗೂ ಭಾರತೀಯರು ಹೇಳವ ವಿವೇಕವಾಣಿಯ ಕುರಿತು ತಮ್ಮ ವಿಜ್ಞಾನ ಚಿತ್ತದ ಮೂಲಕ ಹೊಸ ಸಂಶೋಧನೆಯ ದಾರಿ ಹುಡಕಬೇಕಾಗಿತ್ತು. ಅದಕ್ಕಾಗಿ ಅರಿಸ್ಟಾಟಲ್ ರು ತನ್ನ ಶಿಷ್ಯ ಜಗದ್ವಿಖ್ಯಾತ ಅಲೆಗ್ಸಾಂಡರ್ನಿಗೆ ಭಾರತದಿಂದ ಬರುವಾಗ ಒಬ್ಬ ಭಾರತೀಯ ಯೋಗ್ಯವಾದ ಸನ್ಯಾಸಿಯನ್ನು ಕರೆತರಲು ಹೇಳಿದ್ದರು. ಹಾಗಂತ ಭಾರತೀಯ ವಿವೇಕವಂತರ ಕುರಿತು ಇವರಂತೆ (ಅರಿಸ್ಟಾಟಲ್ ರಂತೆ) ನೋಡಬೇಕೆನ್ನುವ ಹಂಬಲ ಇವರಿಗಿಂತ ಮೊದಲು ಅನೇಕರದಾಗಿರಬೇಕು. ಇವರು ಕೂಡಾ ಮೊದಲನೇಯವರೇನಲ್ಲ ಎನಿಸುತ್ತದೆ. ಹಾಗೆ ಇವರು ಕೂಡಾ ಕೊನೆಯವರಂತೂ ಮೊದಲೇ ಅಲ್ಲ. ಈಗಲೂ ಭಾರತೀಯ ಜ್ಞಾನವಂತರ ಸಂಗ ಸೇರಲು ಪ್ರಪಂಚದ ಅನೇಕ ಜನ ಜ್ಞಾನಪಿಪಾಸುಗಳು ಕ್ಷಣಕ್ಷಣಕ್ಕೂ ಹಾತೊರೆಯುತ್ತಾರೆ.

ಅಲೆಗ್ಸಾಂಡರ್ ಭಾರತದಲ್ಲಿ ತನ್ನ ದಂಡಯಾತ್ರೆ ಮುಗಿಸಿ ಗ್ರೀಕ ದೇಶಕ್ಕೆ ಹೋಗುವಾಗ ಭಾರತದ ಗಡಿಭಾಗದಲ್ಲಿ ತನ್ನ ಗುರು ಅರಿಸ್ಟಾಟಲ್ ರು ಹೇಳಿದ ಮಾತು ಸ್ಮರಣೆಗೆ ಬಂದಿತು. ಅಲೆಗ್ಸಾಂಡರ್ ತಡಮಾಡಲಿಲ್ಲ ತಕ್ಷಣವೇ,ತನ್ನ ಸೈನಿಕರನ್ನು ಬರಲು ಹೇಳಿದನು. ಸಾಮ್ರಾಟನ ಆದೇಶದಂತೆ ಸೈನಿಕರು ಭಾರತೀಯ ತಪಸ್ವಿಯೊಬ್ಬನನ್ನು ಹುಡಕಲು ನದಿ ತೀರದತ್ತ ಹೊರಟರು. ಕೆಲವು ಸಮಯದ ನಂತರ ಒಂದು ದಿನ ಒಂದು ನದಿ ತೀರದಲ್ಲಿ ಒಬ್ಬ ನಗ್ನ ಸನ್ಯಾಸಿ ಇರುವದನ್ನು ಅಲೆಗ್ಸಾಂಡರ್ ನ ಸೈನಿಕರು ಕಂಡರು. ಆ ನದಿ ತೀರದಲ್ಲಿ ಬೆತ್ತಲೆಯಾಗಿದ್ದ ಆ ಸನ್ಯಾಸಿಯ ಹೆಸರು ದಂಡಾಮಿ ಎಂದು ಕರೆಯಲ್ಪಟ್ಟಿತ್ತು. ಹಿಂಡು ಸೈನಿಕರ ದಂಡು ಸನ್ಯಾಸಿಯತ್ತ ಬರುವದನ್ನು ದೂರದಿಂದಲೇ,ದಂಡಾಮಿ ನೋಡಿದರು. ನಗ್ನ ಸನ್ಯಾಸಿ ದಂಡಾಮಿ ಅವರತ್ತ ಗಮನ ಹರಿಸಲಿಲ್ಲ. ಆಗ ಅವರತ್ತ ಕೃದ್ದರಾಗಿ ಬಂದ ಸೈನಿಕರು ದಂಡಾಮಿಯನ್ನು ಎದ್ದೇಳುವಂತೆ ಗದರಿದರು.ಅವರ ಯಾವದೇ ಬೆದರಿಕೆ, ಹೆದರಿಕೆ ಬಗ್ಗದೇ ದಂಡಾಮಿ ಕುಳಿತಲ್ಲಿಂದ ಕದಲಿಲ್ಲ. ಆಗ ಅಲೆಗ್ಸಾಂಡರ್ ನ ಸೈನಿಕರು ದಂಡಾಮಿಯ ಕುರಿತು ಒಂದು ನಿರ್ಧಾರಕ್ಕೆ ಬಂದರು. ಇತ ನಾವು ಹುಡುಕುತ್ತಿರುವ ಯೋಗ್ಯವಾದ ಒಬ್ಬ ಸನ್ಯಾಸಿಯಾಗಿದ್ದಾನೆ. ಇತನ ವಿಶೇಷತೆ ನಗ್ನವಾಗಿದ್ದುಕೊಂಡು ಮುರುಕು ಗುಡಿಸಲಿನಲ್ಲಿದ್ದರು ನಮ್ಮ ಯಾವುದೇ ಹೆದರಿಕೆ, ಬೆದರಿಕೆಗೆ ಬೆದರದೇ,ಮನಸ್ಸನ್ನು ಭಗ್ನಗೊಳಿಸಿಕೊಂಡು ಉದ್ವಿಗ್ನನಾಗದೇ, ಹಾಗೆ ಧ್ಯಾನಸಕ್ತನಾಗಿರುವಾಗ ಇತನಗಿಂತ ಬೇರೆ ಸಾಧು ಯಾರೂ ಯೋಗ್ಯವಾದ ಸಾಧು ಇಲ್ಲಿರಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಅಲೆಗ್ಸಾಂಡರ್ ನ ಸೈನಿಕರು ಬಂದರು.

ಧ್ಯಾನಸಕ್ತನಾಗಿದ್ದ ಸನ್ಯಾಸಿ ದಂಡಾಮಿಯೊಂದಿಗೆ ಸೈನಿಕರು ಮಾತಿಗಿಳಿದರು. ನಾವು ಜಗತ್ತಿನ ಜಗದ್ವಿಖ್ಯಾತ ಸಾಮ್ರಾಟ ಅಲೆಗ್ಸಾಂಡರ್ ನ ಸೈನಿಕರು..! ನಮ್ಮ ಮಾತು ಕೇಳು..! ನಮ್ಮ ಜೊತೆ ನಡೆ..! ನಿನ್ನನ್ನು ಕರೆದುಕೊಂಡು ಬಾ ಎಂದು ನಮ್ಮ ಮಹಾನ್ ಸಾಮ್ರಾಟ ಅಲೆಗ್ಸಾಂಡರ್ ಹಾಗೂ ಅವರ ಪರಮ ಗುರು ಅರಿಸ್ಟಾಟಲ್ ಹೇಳಿದ್ದಾರೆ..! ಎದ್ದು ಬಾ ಹೋಗೋಣ..!ಎಂದರು . ಆಗ ಸೈನಿಕರ ಮಾತು ಕೇಳಿ ಸನ್ಯಾಸಿ ದಂಡಾಮಿ ಗೊಳ್ಳೆಂದು ಗಹಗಹಿಸಿ ನಗಲಾರಂಭಿಸಿದರು. ಅವರ ನಗು ನದಿ ತೀರದಲ್ಲಿ ಕಲರವ ಎಬ್ಬಿಸಿತು. ಅವರು ಸೈನಿಕರು ಆಡಿದ ಮಾತು ನಮ್ಮ ಮಹಾನ್ ಸಾಮ್ರಾಟ ಅಲೆಗ್ಸಾಂಡರ್..! ಎನ್ನುವ ಮಾತು ಮತ್ತೆ ಮತ್ತೆ ದಂಡಾಮಿಗೆ ನೆನಪಾಗಿ ಬಿದ್ದು, ಬಿದ್ದು ನಗಲಾರಂಭಿಸಿದರು. ಆಗ ಸೈನಿಕರು ಇತನ ನಗುವಿನ ಕಾರಣ ಕೇಳಿದರು. ಆಗ ದಂಡಾಮಿ ಉಕ್ಕಿ ಬರುವ ತನ್ನ ನಗೆಯನ್ನು ತಡೆದು ಈ ಜಗತ್ತಿನಲ್ಲಿ ಯಾರಾದರೂ ತಮ್ಮನ್ನು ತಾವು ಮಹಾನ್ ಎಂದುಕೊಳ್ಳುವರೋ ಆತ ಮೂರ್ಖನಲ್ಲದೇ ಮತ್ತಿನ್ನೇನು..? ಎಂದು ಪ್ರಶ್ನಿಸಿ ತಿಳಿ ಹೇಳಿದರು.

ನಗ್ನ ಸಾಧುವಿನ ನಗುವನ್ನು ಕಂಡು ಅಲೆಗ್ಸಾಂಡರ್ ನ ಸೈನಿಕರ ಮನದಲ್ಲಿ ಕೀಳಿರಮೆ ಹುಟ್ಟಿತು. ಆಗ ಎಲ್ಲರೂ ಈ ನಗ್ನ ಸನ್ಯಾಸಿಯೇ ನಿಜವಾಗಿ ಮಹಾನ ವ್ಯಕ್ತಿಯಾಗಿದ್ದಾನೆ ಎನ್ನುವ ತೀರ್ಮಾನಕ್ಕೆ ಬಂದರು. ಅಲೆಗ್ಸಾಂಡರ್ ನ ಸೈನಿಕರು ನಗ್ನ ಸನ್ಯಾಸಿ ದಂಡಾಮಿಯನ್ನು ತಮ್ಮ ಜೊತೆ ಬರಲು ಬಲವಂತ ಮಾಡಿದರು. ದಂಡಾಮಿ ನನ್ನ ದೇಹ ನಿಮ್ಮ ಹೊಡೆತಗಳಿಂದ ದಂಡನೆಯಾದರೂ ಪರವಾಗಿಲ್ಲ ನಾನು ಮಾತ್ರ ಆ ಮಹಾನ್ ವ್ಯಕ್ತಿ ಎಂದು ಕರೆಸಿಕೊಳ್ಳುವ ಆ ಮೂರ್ಖ ವ್ಯಕ್ತಿಯ ಹತ್ತಿರ ಎಂದಿಗೂ ಬರುವದಿಲ್ಲ..! ಎಂದು ಕಡ್ಡಿ ಮುರಿದಂತೆ ಮಾತನಾಡಿದನು.

ದಿಗಂಬರ ಸನ್ಯಾಸಿ ದಂಡಾಮಿಯ ಮಾತುಗಳನ್ನು ಕೇಳಿ ಅಲೆಗ್ಸಾಂಡರ್ ನ ಸೈನಿಕರು ಹತಾಶರಾಗಿ ಹೋದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲೆಗ್ಸಾಂಡರ್ ನ ಶಿಬಿರದತ್ತ ಹೊರಟು ಹೋದರು. ಶಿಬಿರದಲ್ಲಿ ಅಲೆಗ್ಸಾಂಡರ್ ನಿಗೆ ನದಿ ತೀರದಲ್ಲಿ ಮುರುಕು ಗುಡಿಸಲಿನಲ್ಲಿ ಒಬ್ಬ ಅಸಾಮಾನ್ಯ ನಗ್ನ ಸನ್ಯಾಸಿಯನ್ನು ನಾವು ನೋಡಿದ್ದೇವೆ, ನಾವು ನಮ್ಮ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಅಂತಹ ಮಹಾನ ಯುಕ್ತಿ,ಅಗಾಧ ಜ್ಞಾನ ಶಕ್ತಿ ಹೊಂದಿ ಅಪರಮಿತ ತಾರ್ಕಿಕ ಗುಣಗಳಿರುವ ವ್ಯಕ್ತಿಯನ್ನು ನಾವು ಎಲ್ಲಿಯೂ ನೋಡಿಲ್ಲ ಇದುವರೆಗೂ ಕಂಡಿಲ್ಲ..! ಎಂದರು. ಮುಂದುವರೆದು ಸೈನಿಕರು ದಂಡಾಮಿ ಸನ್ಯಾಸಿ ಅರಿಸ್ಟಾಟಲ್ ರಿಗೂ ಸಮಸಮವಾಗಿ ನಿಲ್ಲಬಲ್ಲವ.!ಎಂದರು ಹಾಗೆ ನಿಮ್ಮನ್ನು ಕೂಡಾ ಆತ ಟೀಕೆ ಮಾಡಿರುವನು. ಈ ಜಗತ್ತಿನಲ್ಲಿ ತಮ್ಮನ್ನು ತಾವು ಮಹಾನ್ ವ್ಯಕ್ತಿಗಳು ಎಂದು ತಿಳಿದುಕೊಳ್ಳುವರು ಮೊದಲು ಮಹಾ ಮೂರ್ಖರು ಎಂದು ಹಿಯ್ಯಾಳಿಸಿದ್ದಾನೆ..!ಎಂದರು

ಅಲೆಗ್ಸಾಂಡರ್ ನಿಗೆ ಜೀವನದಲ್ಲಿ ಮೊದಲ ಸಲ ದಂಡಾಮಿಯ ಹಿಯ್ಯಾಳಿಕೆಯ ಮಾತು ಕೇಳಿ ಅವಮಾನವಾದಂತಾಯಿತು. ಅಲೆಗ್ಸಾಂಡರ್ ನ ರಕ್ತ ಕುದಿಯ ತೋಡಗಿತು.ಅದುವರೆಗೂ ಅಲೆಗ್ಸಾಂಡರ್ ನ ದಂಡಿನ ದಾಳಿಗೆ ಅನೇಕ ದೇಶಗಳು ಗದಗದ ನಡುಗಿ ಹೋಗಿದ್ದವು ಅನೇಕ ವೀರರು ಪತರಗುಟ್ಟಿದ್ದರು ಆತನ ಖಡ್ಗದ ಝಳಪಿಸುವಿಕೆಗೆ ಆತನ ದುರಗುಟ್ಟುವಿಕೆಗೆ ಜಗವೆಲ್ಲ ಸ್ತಭ್ದವಾಗಿತ್ತು. ಭಾರತೀಯ ವೀರ ಯೋಧರು ಮಾತ್ರ ಆತನ ದಂಡಯಾತ್ರೆಗೆ ಪ್ರತಿರೋದ ಒಡ್ಡಿದ್ದರು.ಆದರಲ್ಲೂ ಭಾರತೀಯ ಸನ್ಯಾಸಿ ದಂಡಾಮಿ ಮಾತ್ರ ಆತನ ಮಹಾನ್ ಸಾಮ್ರಾಟನ ಅಹಂಕಾರದ ಚಿತ್ತಕ್ಕೆ ಮತ್ತಷ್ಟು ಸವಾಲಾಗಿ ಕಂಡು ಬಂದಿದ್ದ. ಇದರಿಂದ ಅಲೆಗ್ಸಾಂಡರ್ ನಿಗೂ ಕೂಡಾ ನದಿ ತೀರದ ನಗ್ನ ಸನ್ಯಾಸಿ ದಂಡಾಮಿಯನ್ನು ನೋಡುವ ಕಾತುರತೆ ಹೆಚ್ಚಾಯಿತು.ಅಲೆಗ್ಸಾಂಡರ್ ತಡ ಮಾಡಲಿಲ್ಲ.ತನ್ನ ರಕ್ಕಸ ದಂಡು ತೆಗೆದುಕೊಂಡು ದಂಡಾಮಿಯ ಹತ್ತಿರ ಹೋಗಿ ತಲುಪಿದ.ಆಗ ಅಲೆಗ್ಸಾಂಡರ್ ನ ನೋಡಿದ ದಿಗಂಬರ ದಂಡಾಮಿ ಮನದಲ್ಲಿ ಮುಗುಳ್ನಗೆ ಬೀರಿದ ತನ್ನ ಒಂದು ಮಾತು ಅಲೆಗ್ಸಾಂಡರ್ ನಿಗೆ ಆಳವಾದ ಗಾಯ ಮೂಡಿಸಿದೆ ಎನ್ನುವ ವಿಷಯ ಆತನಿಗೆ ಅದಾಗಲೇ ಖಾತ್ರಿಯಾಗಿ ಹೋಗಿತ್ತು.

ಅಲೆಗ್ಸಾಂಡರ್ ದಂಡಾಮಿಯ ಗುಡಿಸಲು ಹತ್ತಿರ ಬಂದು ದಂಡಾಮಿಯ ಕುರಿತು ಅತ್ಯಂತ ರೋಷಾವೇಷದಲ್ಲಿ ಖಡ್ಗ ಹೊರ ತೆಗೆದು ಗಾಳಿಯಲ್ಲಿ ಅದನ್ನು ಝಳಪಿಸಿ ದಂಡಾಮಿಯ ಕುತ್ತಿಗೆ ಹತ್ತಿರ ಹಿಡಿದು ನಿಂತ ಆಗ ಗುಡಿಸಲು ಸನ್ಯಾಸಿ ದಂಡಾಮಿ ಅಲೆಗ್ಸಾಂಡರ್ ನ ಬಾಲಿಶತನದ ಕಾರ್ಯ ನೋಡಿ ನಗಲಾರಂಭಿಸಿದ. ಆಗ ಅಲೆಗ್ಸಾಂಡರ್ ದಂಡಾಮಿಯ ಕುರಿತು ಕೋಪದಿಂದ ಕಣ್ಣುಗಳನ್ನು ಕೆಂಡದುಂಡೆಯಾಗಿ ಮಾಡಿಕೊಂಡು ನಾನು ಮಹಾನ್ ವ್ಯಕ್ತಿ ಇರುವ ವಿಷಯ ನಿನಗೆ ಗೊತ್ತಿಲ್ಲವೇ..! ಎಂದನು. ಆಗ ದಂಡಾಮಿ ಅಲೆಗ್ಸಾಂಡರ್ ನ ಮಾತಿಗೆ ಪ್ರತ್ಯುತ್ತರವಾಗಿ ಈ ಜಗತ್ತಿನಲ್ಲಿ ಹುಚ್ಚನೂ ತನ್ನನ್ನು ತಾನು ಕೂಡಾ ತಾನು ಹುಚ್ಚನಲ್ಲ ಎನ್ನುತ್ತಾನೆ..! ಅಂತಹದರಲ್ಲಿ ನಾನು ಮಹಾನ್ ಎಂದು ಹೇಳಿಕೊಳ್ಳವನು ನಿಜವಾಗಿಯೂ ಹುಚ್ಚನಿರಬೇಕಲ್ಲವೇ.? ಮಹಾನ್ ಎಂದು ಯಾರಾದರೂ ಹೇಳಿಕೊಂಡು ಈ ಜಗತ್ತಿನಲ್ಲಿ ತಿರಗುತ್ತಾರೆಯೇ..?ಎಂದನು.ಆಗ ಅಲೆಗ್ಸಾಂಡರ್ ಮತ್ತಷ್ಟು ಕೋಪದಿಂದ ನಿನ್ನ ತಾರ್ಕಿಕ ಮಾತುಗಳು ನನಗೆ ಅರ್ಥವಾಗುತ್ತಿಲ್ಲ..! ನಿನ್ನ ಹುಂಬ ಸಾಹಸದ ಮಾತುಗಳಿಗೆ ಶಿಕ್ಷೆ ಏನು ಕಾದಿದೆ ಗೊತ್ತೇ..?

ಈಗಲೇ ನಿನ್ನ ರುಂಡ ಮುಂಡದಿಂದ ಬೇರ್ಪಡಿಸುವೆ..! ಎಂದು ತನ್ನ ಕೈಯಲ್ಲಿನ ಹರಿತವಾದ ಕತ್ತಿ ಬೀಸಲು ಕೈ ಎತ್ತಿದ, ಆಗ ದಂಡಾಮಿ ನೀನು ನನ್ನ ತಲೆ ಕಡಿಯಬೇಕಾದ ಅವಶ್ಯಕತೆ ಇಲ್ಲ..! ನೀನು ಈ ಕ್ಷಣ ಕಡಿಯುವ ನನ್ನ ತಲೆ ಎಂದೋ ಕಡಿದು ಹೋಗಿದೆ..! ಈಗಾಗಲೇ ಕಡಿದು ಹೋದ ತಲೆಯನ್ನು ಯಾರು ಬೇಕಾದರೂ ಕಡಿಯಬಲ್ಲರು.! ನೀನು ಅಷ್ಟೇ ನಿನ್ನ ಪರಮಗುರು ಕೂಡಾ ಅಷ್ಟೇ.! ನೀವುಗಳು ಈಗಾಗಲೇ ಕತ್ತರಿಸಿ ಹೋದ ನನ್ನ ತಲೆಯನ್ನು ಮಾತ್ರ ಕಡಿಯಬಲ್ಲಿರಿ..! ನಾನು ಕೂಡಾ ನೀವು ಕಡಿದು ಹಾಕುವ ಶಿರವನ್ನು ನೆಲಕ್ಕುರುಳಿದ ಮೇಲೆ ನೋಡುವೆ..! ಈಗಲೇ ನನ್ನ ತಲೆ ಕಡಿಯಿರಿ.! ಕತ್ತರಿಸಿರಿ.! ತಡ ಮಾಡಬೇಡಿ..! ನಾನು ಕೂಡಾ ಈ ಕಾರ್ಯ ನೋಡುವೆ ..! ಇದರಕ್ಕಿಂತ ಹೆಚ್ಚಿನ ಕಾರ್ಯ ನಿಮ್ಮಿಂದಾಗದು..! ನೀವು ನನ್ನನ್ನು ಹತ್ಯೆ ಮಾಡಬಹುದು..! ಜೀವಂತ ಸಮಾಧಿ ಮಾಡಬಹುದು..!ಆದರೆ ನನ್ನ ನಿರಾಕಾರವನ್ನು ನಿಮ್ಮಿಂದ ಎಂದಿಗೂ ದಹಿಸಲಾಗುವದಿಲ್ಲ..!! ಎಂದನು.

ಅಲೆಗ್ಸಾಂಡರ್ ತನ್ನ ಜೀವನದಲ್ಲಿ ಎಂದೂ ಇಂತಹ ಅಪ್ರತೀಮವಾದ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಎಲ್ಲಿಯೂ ಕಂಡಿರಲಿಲ್ಲ. ನೋಡಿರಲಿಲ್ಲ. ಮನುಷ್ಯನನ್ನು ತೀವ್ರವಾದ ಜಿಜ್ಞಾಸೆಗೆ ಹಚ್ಚುವ ದಂಡಾಮಿಯ ಮಾತುಗಳನ್ನು ಆತ ಎಲ್ಲಿಯೂ ಕೇಳಿರಲಿಲ್ಲ. ಆಗ ಅಲೆಗ್ಸಾಂಡರ್ ತನ್ನ ಮನಸಿನಲ್ಲಿ ತನಗೆ ತಾನೇ ಹೇಳಿಕೊಂಡ ನಾನು ಈ ಭೌತಿಕವಾದ ನಶ್ವರ ಜಗದ ಚಕ್ರವರ್ತಿಯಾಗಿದ್ದರೇ, ಇತ ಖಂಡಿತಾ ಶಾಶ್ವತವಾದ ಆತ್ಮಜ್ಞಾನ ಹೊಂದಿದ ನಿರಹಂಕಾರ, ನಿರಾಕಾರದಿಂದ ಕೂಡಿದ ವ್ಯಕ್ತಿಯಾಗಿ ಸಮಸ್ತ ಲೋಕದ ಅನಿಭೀಷಿಕ್ತ ಚಕ್ರವರ್ತಿಯಾಗಿದ್ದಾನೆ..! ಎಂಬುವದನ್ನು ಅರಿತನು. ನದಿ ತೀರದ ಬೆತ್ತಲೆ ಗುರು ದಂಡಾಮಿಗೆ ನತಮಸ್ತಕ ಪ್ರಣಾಮಗಳನ್ನು ಸಲ್ಲಿಸಿ ತನ್ನ ಶಿಬಿರದತ್ತ ಸಾಗಿ ಹೋಗುತ್ತಾನೆ. ಅತ್ತ ಅರಿಸ್ಟಾಟಲ್ ನ ವಿಜ್ಞಾನದ ಪಾಶ್ಚಿಮಾತ್ಯ ಚಿತ್ತ ಖಿನ್ನವಾಗುತ್ತದೆ ಇತ್ತ ಪೂರ್ವದ ಭಾರತೀಯ ದಂಡಾಮಿಯ ಚಿತ್ತ ಮುಂಜಾವಿನ ಹೊಂಬೆಳಕಿನಲ್ಲಿ ಸೂರ್ಯನ ಉಪಕಾರ ಸ್ಮರಣೆಯಲ್ಲಿ ಧ್ಯಾನಾಸಕ್ತವಾಗುತ್ತದೆ.ಈ ಕತೆಯ ತಾತ್ಪರ್ಯವಿಷ್ಟೇ ನಾನು ಎಲ್ಲವನ್ನೂ ತಿಳಿದಿರುವೆ.ನಾನು ಬಹಳಷ್ಟು ಬುದ್ದಿವಂತ ನಾನು ಅಗರ್ಭ ಶ್ರೀಮಂತ ಎಂದು ಹೇಳಿಕೊಂಡು ಅಜ್ಞಾನದ ಸೋಗು ಹಾಕಿಕೊಂಡು ತಿರುಗಿದರೇ,ನಮ್ಮಷ್ಟು ಅಹಂಕಾರಿಗಳು ಯಾರೂ ಇಲ್ಲ ಈ ಪ್ರಕೃತಿಯ ನಿಯಮ ಈ ಜಗತ್ತಿನಲ್ಲಿ ಎಲ್ಲವನ್ನು ಬಲ್ಲವರು ಯಾರೂ ಇಲ್ಲ ಎಂಬುವದಾಗಿದೆ..

Categories: Articles

Tagged as:

Leave a Reply