ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿಗೆ ೨೦೨೩ರಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ಕನಸು ಬೀಳುತ್ತಿದೆ ಅಂತೇ! ಬೀಳುವುದು ಸಹಜ! ಯಡಿಯೂರಪ್ಪನವರ ಶಿಷ್ಯ ಮತ್ತು ಯಡಿಯೂರಪ್ಪನವರ ಅಣತಿ ಮೇರೆಗೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ನಂತರ ನಡೆದ ಮೊದಲ ಉಪಚುನಾವಣೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟು ಎರಡು ಕ್ಷೇತ್ರಗಳು ಗೆದ್ದು ನಾನು ನಾಯಕತ್ವವನ್ನು ಹೊರಬಲ್ಲೆ ಎಂದು ನಿರೂಪಿಸಿದ್ದಾರೆ. ಅವರಿಗೆ ೨೦೨೩ರ ಚುನಾವಣೆಗೆ ಹೋಗುವಕ್ಕಿಂತ ಮುಂಚೆ ಇದು ಬೇಕಿತ್ತು. ಇದರಲ್ಲಿ ಸರಿಯಾದ ದಾಳಗಳೇ ಉರುಳಿಸಿ ಯಶಸ್ವಿ ಪಡೆದಿದ್ದಾರೆ. ಸರ್ಕಾರಕ್ಕೆ ಉಪಚುನಾವಣೆ ಎದುರಿಸುವುದು ಕಷ್ಟವೇನಲ್ಲ ಆದರೆ ಕರೋನ ಸಂಕಷ್ಟ, ಒಳಗಿನ ಪೀಡೆಗಳು ಯಡಿಯೂರಪ್ಪನವರಿಗೆ ಕೊಟ್ಟ ಕಾಟ ಇವೆಲ್ಲವೂ ಪಕ್ಷದ ಗೌರವಕ್ಕೆ ಹೊಡೆತಕೊಟ್ಟಿತ್ತು. ಇದರ ನಡುವೆ ಯಡಿಯೂರಪ್ಪನವರ ಸರ್ಕಾರ ಕರೋನ ಇಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿ ದೇಶದಲ್ಲೇ ಒಳ್ಳೆಯ ರಾಜ್ಯವೆಂದು ಬಿರುದು ಪಡೆದಿದೆ. ಇದು ಸ್ವಲ್ಪ ಮಟ್ಟಿಗೆ ಗೌರವವನ್ನು ಎತ್ತಿ ಹಿಡಿದಿತ್ತು.
ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ರೈತರ ಮಕ್ಕಳಿಗೆ ಸ್ಕಾಲರ್ಷಿಪ್ , ವಿಧವಾ ವೇತನ, ಸಂದ್ಯಾ ಸುರಕ್ಷಾ ಯೋಜನೆಗಳಿಗೆ ಪಿಂಚಣಿ ಧನವನ್ನು ಹೆಚ್ಚಿಸಿ ನಾನೊಬ್ಬ ರೈತರ, ದಿನ ದಲಿತರ ಮುಖ್ಯಮಂತ್ರಿ ಎಂದು ಸಂದೇಶ ಕೊಟ್ಟಿದ್ದರು. ಇಂಥಹ ಸಮಯದಲ್ಲಿ ರಾಜ್ಯದಲ್ಲಿ ನಡೆದ ಮಹಾನಗರಗಳ ಉಪಚುನಾವಣೆಗಳಲ್ಲಿ ಬಿಜೆಪಿ ಮಹತ್ತರ ಸಾಧನೆಮಾಡಿ ಒಳ್ಳೆಯ ಪ್ರಾರಂಭವನ್ನು ಬೊಮ್ಮಾಯಿಯವರಿಗೆ ಒದಗಿಸಿಕೊಟ್ಟಿತು. ಇದುವೇ ಉಪಚುನಾವಣೆಗಳಿಗೆ ಹುರುಪು ತುಂಬಿತ್ತು. ಚುನಾವಣೆ ಆಯೋಗ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಚುನಾವಣೆಗೆ ದಿನಾಂಕ ಪ್ರಕಟ ಮಾಡಿದ ಮೇಲೆ ಮುಖ್ಯಮಂತ್ರಿಯಾಗಿ ಎಲ್ಲ ಪಕ್ಷದ ಮುಖಂಡರ ಜೊತೆಗೂಡಿ ಒಳ್ಳೆಯ ಉಸ್ತುವಾರಿಗಳನ್ನು ಹುಡುಕಿ ಅವರಿಗೆ ಜವಾಬ್ದರಿ ಹೊರಿಸಿ ಅರ್ಧದಷ್ಟು ಅಲ್ಲೇ
ಗೆದ್ದಿದ್ದರು.
ಸಿಂದಗಿಯಲ್ಲಿ ಲಕ್ಷಣ್ ಸವದಿಯವರಿಗೆ ಉಸ್ತುವಾರಿ ಕೊಟ್ಟು ಅವರ ಜೊತೆ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ನಾಯಕರು ಸಿಂದಗಿ ಉಸ್ತುವಾರಿಗೆ ನೇಮಕವಾದರು. ಚಾಣಾಕ್ಷ ರಾಜಕಾರಿಣಿ ಸೋಮಣ್ಣ, ಮಿತಭಾಷಿಗಳಾದ ಕಾರಜೋಳ್, ಸಿ ಸಿ ಪಾಟೀಲ್,ಜೊಲ್ಲೆ ಮೇಡಂ ಇವರ ಜೊತೆ ಕೆಲಸ ಮಾಡುವ ಪಿ, ರಾಜೀವ, ನಡಹಳ್ಳಿ, ಸೋಮನಗೌಡ ಪಾಟಿಲ್,ರಮೇಶ್ ಜಿಗಜಿಣಗಿ ,ವಿಜುಗೌಡ ಮತ್ತು ವಿಜಯಪುರದ ಶಾಸಕರಾದ ಯತ್ನಾಳ್! ಇವರಲ್ಲದೆ ಅನೇಕ ಮುಖಂಡರು ಈಶ್ವರಪ್ಪ, ಬೈರತಿ, ಮಹೇಶ್, ಕೆ ಶಿವರಾಂ ಸಿಂದಗಿಗೆ ಪ್ರಚಾರಕ್ಕೆ ಬಂದಿದ್ದರು.
ಸಿಂದಗಿಯಲ್ಲಿ ಚುನಾವಣೆ ಪ್ರಚಾರದ ಪೂರ್ವಸಭೆಯಲ್ಲೇ ಕಾರಜೋಳ್ ಅವರಿಂದ ಸಣ್ಣ ಪ್ರಮಾದವಾಗಿತ್ತು. ಚುನಾವಣೆ ನೀತಿ ಸಂಹಿತೆಯಿಂದ ಪ್ರಮಾದವಾದರೂ ಅದೊಂದು ದೊಡ್ಡ ವಿಷಯವಾಗಿ ವಿಡಿಯೋ ವೈರಲ್ ಆಗಿತ್ತು. ಸ್ವತಃ ಕಾರಜೋಳ್ ಅವರು ಸ್ಪಷ್ಟನೆ ನೀಡಿ, ಮುಖ್ಯಮಂತ್ರಿಗಳು ಎಸ್ಟಿ ಸರ್ಟಿಫಿಕೇಟ್ ಭರವಸೆ ಕೊಟ್ಟಾಗ ವಿಷಯ ತಿಳಿಯಾಯಿತು. ಇದೆಲ್ಲವೂ ಉಸ್ತುವಾರಿ ಹೆಗಲಿಗೆ ಇರುತ್ತೆ. ಇಲ್ಲೇ ಒಂದು ಸಣ್ಣ ಗೆಲುವನ್ನು ಪಡೆದಿದ್ದರು. ಆಲಮೇಲದ ಬಹಿರಂಗ ಸಭೆಯಲ್ಲಿ ಪೂರ್ಣ ಪ್ರಮಾಣದ ತಾಲೂಕ ಮತ್ತು ತೋಟಗಾರಿಕೆ ಕಾಲೇಜು ಖಂಡಿತ ಮಾಡಿಕೊಡುತ್ತೇವೆ ಎಂಬ ಭರವಸೆಯ ನಡುವೆ ಬಸವನಗೌಡ ಪಾಟೀಲ್ ಯತ್ನಾಳ್ ಬೊಮ್ಮಾಯಿಯವರನ್ನು ಕೊಂಡಾಡಿ ನರೇಂದ್ರ ಮೋದಿಯವರ ಅನೇಕ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದ್ದರು.
ಒಂದು ಕಡೆ ರಾಜ್ಯದಲ್ಲಿ ಉಪಚುನಾವಣೆ ಸಲುವಾಗಿ ಜೆಡಿಎಸ್ ಬಿ ತಂಡ, ಆರ್ ಎಸ್ ಎಸ್ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾ ವಿರೋಧ ಪಕ್ಷದವರು ಕಾಲಕಳೆದರೆ ಇತ್ತ ಕಡೆ ಬಿಜೆಪಿ ವ್ಯವಸ್ಥಿತವಾಗಿ ನಾವೇನು ಅಭಿವೃದ್ಧಿ ಮಾಡಬಲ್ಲೆವು ಸಿಂದಗಿಗೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಾ ಸಾಗಿದರು. ಸರ್ಕಾರದ ಎಲ್ಲ ಮಂತ್ರಿಗಳು ನಗರಕ್ಕೆ ಆಗಮಿಸಿ ಅಲ್ಲಿಯ ಹದಗೆಟ್ಟ ರಸ್ತೆಗಳ ಸ್ಥಿತಿ ನೋಡಿದ ಮೇಲೆ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಖಂಡಿತ ಅಭಿವೃದ್ಧಿಗೆ ನಾವು ಕೈಜೋಡಿಸುತ್ತೇವೆ ಎಂದು ಪಠಣ ಮಾಡತೊಡಗಿದರು.
ಎಲ್ಲ ಸಚಿವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅದರಲ್ಲಿ ವಿಶೇಷವಾಗಿ ವಿಜಯಪುರದ ಬಸವನಗೌಡ ಪಾಟೀಲ್ ಮತ್ತು ಲಕ್ಷಣ್ ಸವದಿಯವರ ಮಾತು ಕೇಳಲು ಜನ ಹಂಬಲಿಸುತ್ತಿದ್ದರು. ಅದು ಎಲ್ಲರಿಗೂ ಎದ್ದು ಕಾಣುತಿತ್ತು. ಬಸವನಗೌಡ ಪಾಟೀಲ್ ಕೇವಲ ಪೆಟ್ರೋಲ್ ಬೆಲೆ ನೋಡಬೇಡಿ ,ರಾಷ್ಟ್ರದಲ್ಲಿ ಮೋದಿ ಮಾಡಿರುವ ಕೆಲಸ ನೋಡಿ ದೇಶದ ಸಲುವಾಗಿ ಮತ ಚಲಾಯಿಸಿ ಎಂದು ಪ್ರಚಾರ ಮಾಡಿದ್ದರು.
ಕೊಳ್ಳೇಗಾಲದ ಶಾಸಕರಾದ ಮಹೇಶ್ ಅವರು ಮತ್ತು ಕೆ ಶಿವರಾಂ ಭೂಸನೂರ್ ವ್ಯಕ್ತಿತ್ವದ ಬಗ್ಗೆ ಜನರಿಗೆ ಹೇಳಿದ್ದು ಬಾರಿ ಪರಿಣಾಮ ಮಾಡಿದ್ದು ಸುಳ್ಳಲ್ಲ. ಎಂಟಿಬಿ ನಾಗರಾಜ್ , ನಡಹಳ್ಳಿ ಅನೇಕ ವಿಚಾರಗಳು ಜನರಿಗೆ ಮನಮುಟ್ಟುವಂತೆ ಮಾಡಿದ್ದು ಗೆಲುವಿಗೆ ಸಹಕಾರಿಯಾಗಿದೆ.
ಆಸಕ್ತಿಕರ ವಿಚಾರವೆಂದರೆ ಬಿಜಾಪುರ ಭಾಷೆಯಲ್ಲೇ ಜನರನ್ನು ಮನದಟ್ಟು ಆಗುವಂತೆ ಭಾಷಣ ಮಾಡಿದ್ದ ಸವದಿಯವರ ಮಾತುಗಳಿಗೆ ಮತದಾರ ಜೈ ಅಂದಿದ್ದಾರೆ. ಸಂತೆಗೆ ಹೋಗಿ ಗಬ್ಬ ಆಗಿರುವ ಎಮ್ಮೆ ತಗೆದುಕೊಂಡು ಬಂದರೇ ಹಾಲು ಕೊಡುತ್ತದೆ , ಇಲ್ಲವಾದರೆ ಗೊಡ್ಡೆಮ್ಮಿ ತಗೆದುಕೊಂಡು ಏನು ಮಾಡುವಿರಿ ಎಂದು ಹಿಂದಿನ ಚುನಾವಣೆಯಲ್ಲಿ ಹೆಚ್ಚಿಕೆ ಲೀಡ್ ಕೊಟ್ಟ ತಾಂಬಾದಲ್ಲಿ ಹೇಳಿದ್ದರು. ಇದರ ಅರ್ಥ ಆಡಳಿತ ಪಕ್ಷದ ಶಾಸಕರು ಇರಬೇಕು ಎಂದು ಒತ್ತಿ ಹೇಳಿದ್ದರು.
ಯರಗಲದಲ್ಲಿ ಮಾತನಾಡುತ್ತ ಬೊಮ್ಮಾಯಿ ಒಬ್ಬರು ಹಾಲು ಕೊಡುವ ಆಕಳು! ಅದಕ್ಕೆ ಆಕಳಿಂದ ಹಾಲು ತಗೋಬೇಕಾದರೆ ಆಕಳಿನ ಕರು ಬಿಟ್ಟರೆ ಆಕಳು ತರುವು ಬಿಟ್ಟು ಹಾಲು ಕೊಡುತ್ತದೆ. ಅದಕ್ಕೆ ಸಿಂದಗಿಯಿಂದ ಭೂಸನೂರ್ ಎಂಬ ಆಕಳು ಕರುವುನ್ನು ಆಯ್ಕೆ ಮಾಡಿ ಕಳುಹಿಸಿ ಹಾಲು ಹಿಂಡಿ ಪೈಲ್ವಾನ್ ಆಗಿ ಎಂದು ಹೇಳಿದ್ದರು. ಅಪ್ಪಿ ತಪ್ಪಿ ಎಮ್ಮೆ ಕರು ಕಳುಹಿಸಿದರೆ ಆಕಳು ಲತ್ತೆ ಕೊಡುವ ಚಾನ್ಸ್ ಜಾಸ್ತಿ! ಇದರ ಅರ್ಥ ನಮ್ಮದೇ ಸರ್ಕಾರ ನಮ್ಮದೇ ಮುಖ್ಯಮಂತ್ರಿ ಅದಕ್ಕೆ ಬಿಜೆಪಿ ಶಾಸಕನ್ನು ಆಯ್ಕೆಮಾಡಿ ಎಂದು ಹೇಳಿ ಸಾಮಾನ್ಯ ಜನರಿಗೆ ಹತ್ತಿರವಾಗಿದ್ದರು.
ಸವದಿಯವರ ಟ್ರೇಡಮಾರ್ಕ್ ಕಥೆ “ರಾಮ್ ರಾಮ್ ಸತ್ಯ ಹೈ ” ಯಾರು ಭಾರತ ಮಾತಾಕಿ ಜೈ ಅನ್ನುವದಿಲ್ಲವೋ ಅವರಿಗೆ ಕಥೆಯ ಮೂಲಕ ಅವರ ಅಸ್ತಿತ್ವ (ಸತ್ತ ವ್ಯಕ್ತಿ ಮಾತ್ರ ಸುಮ್ಮನೆ ಇರುತ್ತಾನೆ) ತಿಳಿಸಿ ಎರಡು ಕೈಗಳು ಎತ್ತಿ ಭಾರತ ಮಾತಾಕಿ ಜೈ ಹೇಳಿಸಿ ಜನರಲ್ಲಿ ,ವಿಶೇಷವಾಗಿ ಯುವಕರಿಗೆ ಹುಮ್ಮಸ್ಸು ತುಂಬುತ್ತಿದ್ದರು.
ಸಿಂದಗಿಯಲ್ಲಿ ಕೋಳಿ ಸಮಾಜದ ಎಸ್ಟಿ ಸರ್ಟಿಫಿಕೇಟ್ ಮುಖ್ಯಮಂತ್ರಿ ಅಲ್ಲದೆ ಸಮಾಜ ಕಲ್ಯಾಣ ಸಚಿವರ ಗಮನಕ್ಕೂ ತಗೆದುಕೊಂಡು ಬಂದು ಅದನ್ನು ಸಿಂದಗಿಯಲ್ಲೇ ೫ ಸರ್ಟಿಫಿಕೇಟ್ ಕೊಡುವ ಭರವಸೆ ಕೊಟ್ಟಿದ್ದು ಉತ್ತಮವಾದ ಕೆಲಸವಾಗಿತ್ತು. ಇದರ ಜೊತೆ ಹಡಪದ ಸಮಾಜದ ಕುಂದು ಕೊರೆತೆಗಳು ಕೇಳಿ ಖಂಡಿತ ಪರಿಹಾರ ಕೊಡುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿಗಳು ಹೇಳಿದ್ದರು. ಸಿಂದಗಿಯಲ್ಲಿ ವಿದ್ಯುತ್ ಅಭಾವ ಜಾಸ್ತಿ ಇದೆ ಎಂದು ಜನ ಹೇಳಿದ್ದರೂ ಸವದಿಯವರು ಭಾಷಣ ಮಾಡಿದಾಗ ಅವರಿಗೆ ವಿದ್ಯುತ್ ಕೈಕೊಟ್ಟಿದ್ದು ನೋಡಿ ಖಂಡಿತ ೧೧೦ ಕೆವಿ ಮೂರೂ ವಿದ್ಯುತ್ ಸ್ಟೇಷನ್ಗಳನ್ನು ಮಾಡುವ ಭರವಸೆ ಕೊಟ್ಟಿದ್ದಾರೆ. ಇದಕ್ಕೆ ಸಿಂದಗಿ ಜನರು ಒಪ್ಪಿಗೆ ಸೂಚಿಸಿ ಸವದಿಯವರ. ಸೋಮಣ್ಣವರ, ಸಿ ಸಿ ಪಾಟೀಲ್ರ ಮಾತಿಗೆ ಒಗೊಟ್ಟು ಸಿಂದಗಿಯಲ್ಲಿ ಭರಪೂರ ಅಂತರದ ಜಯವನ್ನು ಕೊಟ್ಟಿದ್ದಾರೆ. ಹಾಲು ಹಿಂಡುವ ಆಕಳ ಬಳಿ ಆಕಳ ಕರುವನ್ನು ಕಳುಹಿಸಿದ್ದಾರೆ. ಇನ್ನೇನಿದ್ದರೂ ಭರವಸೆಗಳನ್ನು ಪೂರೈಸುವುದು ಭೂಸನೂರ್ ಅವರ ಕೆಲಸ! ಹಿಂದೆ ಅನೇಕ ಉಪಚುನಾವಣೆಗಳಲ್ಲಿ ಭಾಗವಹಿಸಿ ಪಕ್ಷಕ್ಕೆ ಶಕ್ತಿ ತುಂಬಿಸಿದ ಲಕ್ಷಣ್ ಸವದಿಯವರು ಸಿಂದಗಿಯಲ್ಲಿ ಎಲ್ಲವೂ ಸುಸೂತ್ರವಾಗಿ ರಥವನ್ನು ಎಳೆದುಕೊಂಡು ಹೋಗಿ ದಡ ಸೇರಿಸಿದ್ದಾರೆ. ಮತ್ತೆ ಪಕ್ಷ ಅವರಿಗೆ ಸ್ಥಾನಮಾನ ಕೊಟ್ಟು ಶಕ್ತಿ ತುಂಬಿಸುವ ಕೆಲಸ ಮಾಡುತ್ತಾ ಎಂದು ಅಭಿಮಾನಿಗಳ ಕಾತುರ!
ಎರಡು ದಿವಸಗಳ ಕಾಲ ಪ್ರಚಾರ ಮಾಡಿದ್ದ ಯಡಿಯೂರಪ್ಪನವರು ಸೂಕ್ಷ್ಮವಾಗಿ ನಮ್ಮ ಸರ್ಕಾರದ ಯಾವದೇ ಯೋಜನೆಗಳು ಜನಪರವಾಗಿದ್ದವು ಹೊರೆತು ಧರ್ಮ ಆಧಾರಿತ ಇರಲಿಲ್ಲ ಎಂದು ಮುಟ್ಟಿಸುವವರಿಗೆ ಮುಟ್ಟಿಸಿ ಮನ ಗೆದ್ದಿದ್ದರು.
ಉಸ್ತುವಾರಿ ಎಂದರೆ ಗೆಲ್ಲಲಿ ಸೋಲಲಿ ಅದಕ್ಕೆ ಎಲ್ಲರೂ ಜವಾಬ್ದಾರರು. ಯಾವದೇ ಚುನಾವಣೆ ಗಮನಿಸಿ ಗೆದ್ದಾಗ ಕ್ರೆಡಿಟ್ ಒಬ್ಬರಿಗೆ ಸಿಕ್ಕಾಗ ಅವರಷ್ಟೇ ದುಡಿದ ಇನ್ನಿತರ ನಾಯಕರಿಗೆ ಇರಿಸುಮುರಿಸಾಗುವುದು ಸತ್ಯ! ಆದರೆ ಸೋತಾಗ ಎಲ್ಲ ಕ್ರೆಡಿಟ್ ಉಸ್ತುವಾರಿಗೆ ಹೋಗುತ್ತೆ ಬೇರೆಯವರು ಅವರ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ! ಇದು ನಾವು ಕೆ ಆರ್ ಪೇಟೆ ಮತ್ತು ಸಿರಾದಲ್ಲೂ ನೋಡಿದ್ದೇವೆ. ಏನೆ ಇರಲಿ ಸೋಲೇ ಇರಲಿ ಅಥವಾ ಗೆಲವೇ ಇರಲಿ ಉಸ್ತುವಾರಿಗೆ ಸ್ವಲ್ಪ ಹೆಚ್ಚಿಗೆ ಕೊಟ್ಟರೇ ತಪ್ಪೇನಿಲ್ಲ. ಉಸ್ತುವಾರಿಯಾಗಿ ಎಲ್ಲರ ಜೊತೆ ಕೆಲಸ ಮಾಡಿದಕ್ಕೆ ಇಂಥಹ ಗೆಲುವು ಸಿಗುವುದಕ್ಕೆ ಸಾಧ್ಯ! ಅದರ ಜೊತೆ ಸ್ಥಳೀಯ ಅಭ್ಯರ್ಥಿಯ ವ್ಯಕ್ತಿತ್ವ! ಸಿಂದಗಿಯ ಗೆಲುವು ಎಲ್ಲ ನಾಯಕರಿಗೆ ಸಲ್ಲುತ್ತೆ! ಇದೊಂದು ಲಕ್ಷಣ್ ಸವದಿಯವರ ಉಸ್ತುವಾರಿಯಲ್ಲಿ ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಗೆಲುವು!
Categories: Articles
