
ಸಾಫ್ಟ್ವೇರ್ ಎಂದರೆ ಬೆಂಗಳೂರು ,ಬೆಂಗಳೂರು ಎಂದರೆ ಸಾಫ್ಟ್ವೇರ್ ಎನ್ನುವಷ್ಟು ಪ್ರಸಿದ್ದಿ ಪಡೆದಿದೆ ನಮ್ಮ ಹೆಮ್ಮೆಯ ಬೆಂಗಳೂರು. ಬಂದವರನ್ನು ಭೇದ ಭಾವ ಮಾಡದೆ ಸಾಕಿ ಸಲುವುತ್ತಿರುವ ನನ್ನ ಬೆಂಗಳೂರು ಎನ್ನವುದಕ್ಕೆ ಎಲ್ಲರಿಗೂ ಹೆಮ್ಮೆ ಆಗುತ್ತದೆ. ಹಿಂದೊಂದು ಕಾಲವಿತ್ತು ಮಜಾ ಮಾಡೋದಕ್ಕೆ ಬೇರೆ ದೇಶದ ನಗರಗಳಿಗೆ ಹೋಗುತ್ತಿದ್ದರು. ಆದರೆ ಇಂದು ವಿಲಾಸಿ ಜೀವನ ಬೆಂಗಳೂರು ನಿಮಗೆ ಒದಗಿಸುತ್ತದೆ ಆದರೆ ಕಿಸೆಯಲ್ಲಿ ಕಾಂಚಾಣ ಇದ್ದರೇ ಮಾತ್ರ! ನಮ್ಮ ಬೆಂಗಳೂರು ವಿಲಾಸಿ ಜೀವನದ ಜೊತೆ ಹಿಂದಿನ ತನ್ನ ಸೊಬಗನ್ನು ಉಳಿಸಿಕೊಂಡಿದೆ ಅದರಲ್ಲಿ ಸಂದೇಹ ಬೇಡ!
ಒಂದು ಪ್ರಚಲಿತ ಮಾತು ಹತ್ತು ಕಲ್ಲು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಬಿಸಾಕಿದರೆ ೫-೬ ಕಲ್ಲುಗಳು ಸಾಫ್ಟ್ವೇರ್ ಇಂಜಿನಿಯರ್ ಅವರಿಗೆ ಬೀಳುತ್ತೆ ಇದರ ಅರ್ಥ ಬೆಂಗಳೂರು ಸಾಫ್ಟ್ವೇರ್ ಇಂಜಿನೀರ್ ಗಳಿಂದ ತುಂಬಿ ತುಳಿಕುತ್ತಿದೆ. ಪದವಿ ಮುಗಿಸಿದ ಮೇಲೆ ಬೆಂಗಳೂರಲ್ಲಿ ಒಂದು ಕೆಲಸ ಗಿಟ್ಟಿಸಿ ಮನೆಯ ಜವಾಬ್ದಾರಿ ಜೊತೆ ಒಂದಿಷ್ಟು ಜೀವನಕ್ಕೆ ಉತ್ಸಾಹ ತುಂಬುತ್ತಾ ಜೀವನ ಸಾಗಿಸಿದವರು ಬೆಂಗಳೂರು ಎಂಜಿನೀರ್ಗಳು. ಮುದುವೆಕ್ಕಿಂತಾ ಮುಂಚೆ, ಮದುವೆ ಆದ ಮೇಲೆ ತಮ್ಮದೇ ಆದ ಜವಾಬ್ದಾರಿ ಜೊತೆ ಎಲ್ಲರೂ ಖುಷಿಯಿಂದ ಇದ್ದವರೇ ಜಾಸ್ತಿ!
ಉತ್ತರ ಭಾರತೀಯರು ತಮ್ಮದೇ ಆದ ಅಡುಗೆಯ ಖಾನಾವಳಿಗೆ ಹೋದರೆ, ಇತ್ತ ನಮ್ಮ ರಾಜ್ಯದ ಹೈಕಳು ಮುದ್ದೆ ನೆನಪಿಸಿಕೊಂಡು ಊಟಕ್ಕೆ ಹೋದರೆ, ಉತ್ತರ ಕರ್ನಾಟಕದ ಮಕ್ಕಳು ರೊಟ್ಟಿ ಖಾನಾವಳಿ ಹುಡುಕಿಕೊಂಡು ಹೋಗುತ್ತಾರೆ ಹಾಗೆ ನಮಗೆ ಸಿ ಫುಡ್ ಬೇಕು ಎಂದು ಕರಾವಳಿ ಖಾನಾವಳಿ ಹುಡುಕಿ ಸ್ವಾಧಿಸುತ್ತಾರೆ. ಇಷ್ಟೆಲ್ಲಾ ನೀವು ಬೆಂಗಳೂರಲ್ಲಿ ನೋಡಬಹುದು. ಇದರಿಂದಲೇ ದೇಶದ ಜನರು ಬೆಂಗಳೂರಿಗೆ ನನ್ನ ಡೆಸ್ಟಿನಿ ಅನ್ನವುದು! ವಿಶಾಲ ಹೃದಯದ ಜನರು ಎಲ್ಲರನ್ನು ನನ್ನವರೆಂದೇ ಪ್ರೀತಿಯಿಂದ ಕಾಣುವ ನಾಡು ಇದು ಚೆಲುವ ಕನ್ನಡ ನಾಡಿನ ಬೆಂಗಳೂರು.
ಕೈಯಲ್ಲಿ ಕೆಲಸ , ತನ್ನ ಜೊತೆಗೆ ಕಲಿತ ಗೆಳೆಯರು ಮತ್ತು ಸೀನಿಯರ್ಸ್ , ಸಂಬಂದಿಕರು ಮತ್ತು ಜೀವನಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳು ಕೆಲಸ ಮಾಡುತ್ತಿರುವ ನಗರದಲ್ಲಿ ಸಿಗುತ್ತಿದ್ದರೇ ಸ್ವರ್ಗಕ್ಕೆ ಕಿಚ್ಚು ಹೆಚ್ಚೆಂದು ಸರ್ವಜ್ಞ! ತಂದೆ ಮತ್ತು ತಾಯಿ ಬಿಟ್ಟರೇ ಎಲ್ಲವೂ ಇಲ್ಲೇ ಇದೆ. ಇದು ನಾನು ಮಾಡಿದ ಪೂರ್ವ ಜನ್ಮದ ಪುಣ್ಯ ಎಂದರೆ ತಪ್ಪಾಗಲಾರದು ಎಂದವರಿಗೆ ಕಡಿಮೆಯಿಲ್ಲ. ಕೆಲಯೊಂದು ಕಚೇರಿಗಳು ವಾರದಲ್ಲಿ ೨-೩ ದಿವಸ ಮನೆಯಿಂದ ಕೆಲಸ ಮಾಡುವದಕ್ಕೆ ಅನುಮತಿ ಇದ್ದವರ ಸ್ಥಿತಿ ಅದರ ಅನುಭವ ಬಂದವರಿಗೆ ಗೊತ್ತು. ಅದೇ ತಾನೇ ಮದುವೆ ಆಗಿದ್ದರೇ ಅದರ ಗಮ್ಮತ್ತೇ ಬೇರೆ! ಸಾಫ್ಟ್ವೇರ್ ಬಂದ ಮೇಲೇನೆ ೫ ದಿವಸಗಳ ಕೆಲಸಕ್ಕೆ ಚಾಲನೆ ಬಂದಿದ್ದು. ೫ ದಿವಸ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆದು ಶನಿವಾರ ಮತ್ತು ರವಿವಾರ ಬಂದರೇ ಇವರಿಗೆಲ್ಲ ಹಬ್ಬ ! ಅವರವರ ಆಸಕ್ತಿ ಮೇಲೆ ಎರಡು ದಿವಸ ೨ ಸೆಕೆಂಡ್ಸ್ ತರಹ ಮಾಯ. ಶುಕ್ರವಾರ ಪಾರ್ಟಿ ಶುರುವಾದರೆ ಮುಗಿವುದು ಶನಿವಾರ ಬೆಳಿಗ್ಗೆನೇ, ಅದು ತಮ್ಮ ಕೋಣೆಯಲ್ಲಿ ಅಥವಾ ಪಬ್!(ಮೊದಲು ಸಮಯ ಪಾಲನೆ ಇರಲಿಲ್ಲ ಬಿಡಿ). ಇನ್ನು ಕೆಲಯೊಬ್ಬರು ಗೆಳೆಯರ ಜೊತೆ ಎರಡು ದಿವಸದ ಟ್ರಿಪ್. ಇವೆರಲ್ಲರ ಮಧ್ಯೆ ಸಾಧು ಪ್ರಾಣಿಗಳು ಇದ್ದೆ ಇರುತ್ತಾರೆ ಎನ್ನುವದು ಕಟು ಸತ್ಯ. ಪ್ರತಿ ತಿಂಗಳು ಊರಲ್ಲಿ ಇರುವ ತಂದೆ ತಾಯಿಯ ಭೇಟಿಗೆ ಹೋಗುವಾಗ ಸ್ಲೀಪರ್ ಬಸ್ ಹತ್ತಿದರೇ ಅಲ್ಲಿವು ಗೆಳೆಯ , ಗೆಳತಿಯರ ಭೇಟಿ ಆಗುವುದು ಅತಿ ಸಾಮನ್ಯ! ಕಾರಣ ಎಲ್ಲರೂ ಕೆಲಸ ಮಾಡುತ್ತಿರುವುದು ಬೆಂಗಳೂರಲ್ಲೇ ಅಲ್ವೇ?
ಇನ್ನು ಆಫೀಸಿಗೆ ಹೋಗುವವರಿಗೆ ದೊಡ್ಡ ತಲೆನೋವು ಎಂದರೆ ಟ್ರಾಫಿಕ್ ಸಮಸ್ಸ್ಯೆ. ಟ್ರಾಫಿಕ್ ಇಲ್ಲದೆ ಇದ್ದರೇ ಎಷ್ಟೊಂದು ಚೆನ್ನ ಎಂದು ದಿನಾಲು ಹೋಗುವ ಕ್ಯಾಬ್ಗಳಲ್ಲಿ ಲಾಂಗ್ ಡಿಸ್ಕಶನ್! ಒಮ್ಮೆಮ್ಮೆ ೨ ಘಂಟೆ ಪ್ರಯಾಣ ಆದರೂ ಏನೋ ಒಂದು ತರಹ ಬೆಂಗಳೂರು ಎಂದರ ಥ್ರಿಲ್! ಬೇರೆ ಸ್ಥಳಗಳಿಗೆ ಕೆಲಸ ಸಿಕ್ಕರೂ ಹೋಗದ ಮನಸ್ಸು!
ಆಫೀಸಿಗೆ ಹೋದರೆ ಕೆಲಸಕ್ಕೆ ಕಡಿಮೆ ಏನಿಲ್ಲ , ನಮ್ಮದು ಅಜಿಯಲ್(agile) , ನಮ್ಮದು ಫಾಸ್ಟ್ ಫೆಸ್ಡ್ ರಿಲೀಸ್, ಡೆಡ್ ಲೈನ್ , ನಮ್ಮದು ಸಿಐ , ಸಿಡಿ(CICD) ಹೀಗೆ ಒತ್ತಡವಿದ್ದರೂ , ಒಂದು ಟಿ ಕುಡಿಯುದಕ್ಕೆ ಗೆಳಯರ ಜೊತೆ ಪ್ಯಾಂಟ್ರಿ ಗೆ ಹೋದರೆ ಅಲ್ಲಿ ನಡೆಯುತ್ತಿರುವ ಗಾಸಿಪ್ಸ್ ಕೇಳಿದರೆ ಇಂದಿಗೂ ನಗು ತಡೆಯುದಕ್ಕೆ ಸಾಧ್ಯವೇ? ಅಲ್ಲಿ ಮದುವೆ ಆಗದವರು , ಮದುವೆ ಆಗಿದ್ದವರೂ ಇರುತ್ತಿದ್ದರು. ಗಂಡು ಮತ್ತು ಹೆಣ್ಣು ಎಂಬ ಭೇದ ಭಾವ ಇರದ ಡಿಸ್ಕಶನ್. ನಿನ್ನೆ ಒಬ್ಬಳು ಆ ಟೀಮಿಗೆ ಜಾಯಿನ್ ಆಗಿದ್ದಾಳೆ ಉಸೆರ್ ಇಂಟರ್ಫೇಸ್(UI ) ಚೆನ್ನಾಗಿದೆ ಎಂದು ಹೇಳಿದರೆ ಮತ್ತೊಂದು ಕಡೆ ನಿನ್ನ ಡೇಟಾಬೇಸ್ ತುಂಬಾ ಸ್ಟ್ರಾಂಗ್ ಕಣೋ! ನಿನ್ನೆ ನಡೆದ ಇಂಟರ್ವ್ಯೂ ದಲ್ಲಿ ಎಷ್ಟು ಹುಡುಗಿಯರು ಸೆಲೆಕ್ಟ್ ಆದರು ಎಂದು ಇನ್ನೊಂದು ಸಣ್ಣ ಧ್ವನಿ ಮೂಲೆಯಿಂದ ಬರುತ್ತಿತ್ತು.(ಅವನಿಗೂ ಮದುವೆ ಆಗಿರತಿತ್ತು). ಅಷ್ಟೊತ್ತಿಗಾಗಲೇ ಒಂದು ಪಾರಿವಾಳ ಇತ್ತ ಕಡೆಯಿಂದ ಅತ್ತ ಕಡೆ ಹೋದರೆ ಅವಳಿಗೂ ಒಂದು ಭಯಂಕರ ಕಾಮೆಂಟ್ ಪಾಸ್ ಮಾಡುವಷ್ಟು ಸಮಯ ಆದರೂ ನಮಗೆ ತುಂಬಾ ಕೆಲಸ ಎಂದು ಡಿಸ್ಕಶನ್ . ಇದರ ಮಧ್ಯೆ ಸ್ಟಾಕ್ಸ್ ಬಗ್ಗೆ ಮಾತುಗಳಿಗೆ ಕಡಿಮೆ ಇರಲಿಲ್ಲ. ಇನ್ನೊಂದು ಮುಖ್ಯವಾದ ವಿಷಯ ಯಾರಿಗೂ ಹೇಳಲೇ ಬಾರದು ಅದು ಏನಂದರೆ ಸ್ಯಾಲರಿ ಹೆಚ್ಚಳ ! ಹೈಕ ಸಮಯಕ್ಕೆ ಇದು ತುಂಬಾ ಗೌಪ್ಯವಾಗಿ ಇಡಬೇಕು ಎಂದು ಮ್ಯಾನೇಜರ್ ಒತ್ತಿ ಒತ್ತಿ ಹೇಳಿದರೂ ಎಲ್ಲರ ಪ್ರತಿಶತ ಎಲ್ಲರಿಗೂ ಗೊತ್ತಾಗುತಿತ್ತು . ಅದಕ್ಕೆ ಕಾರಣವೇ ಪ್ಯಾಂಟ್ರಿ! ಎಷ್ಟೇ ಕೆಲಸವಿದ್ದರೂ ಆಫೀಸಿಗೆ ಹೋಗಿ ಒಂದು ಟಿ ಕುಡಿದ ಮೇಲೆ ಆಗುತ್ತಿದ್ದ ರಿಲ್ಯಾಕ್ಸ್ ಯಾವುದಕ್ಕೂ ಸಮವಲ್ಲ ಎಂದು ಎಷ್ಟೋ ಜನರಿಗೆ ಅನಿಸುತ್ತಿದೆ, ಯಾಕೆ ಗೊತ್ತಾ?
೨೦೧೯ರಲ್ಲಿ ಬಂದ ಕರೋನ ಎಂಬ ಕಣ್ಣಿಗೆ ಕಾಣದ ವೈರಸ್ ಇಡೀ ಜಗತ್ತನ್ನೇ ಕಂಗಾಲ್ ಆಗುವಂತೆ ಮಾಡಿತು. ಇದಕ್ಕೆ ಔಷದ ಇರಲಿಲ್ಲ, ಅದನ್ನು ಹೀಗೆ ನಿಭಾಯಿಸೋದು ಅಂತಾನೂ ಗೊತ್ತಿಲ್ಲ. ವೈದ್ಯರು ಕೈಚಲ್ಲಿ ಮಾಸ್ಕ ಹಾಕಿಕೊಳ್ಳಿ, ಮನೆಯಲ್ಲಿ ಇರಿ ಎಂದು ಘೋಷಣೆ ಕೂಗತೊಡಗಿದರು. ವೈರಸ್ ಬಡವ , ಶ್ರೀಮಂತ , ಜಾಣ ಮತ್ತು ದಡ್ಡ ಯಾರಿಗೂ ಬೆಂಬಿಡದೆ ಕಾಡುವುದು ಸಿದ್ದ ಅನ್ನುವಾಗ ಕೆಲವು ದೇಶಗಳು ಲೊಕ್ಡೌನ್ ಮಾಡಿದರೆ ಇನ್ನು ಕೆಲವು ದೇಶಗಳು ಬೇರೆ ಬೇರೆ ರೀತಿಯ ಲೊಕ್ಡೌನ್ ಮೊರೆಹೋದವು.
ಇತ್ತ ಎಲ್ಲ ಕಚೇರಿಗಳು ಸ್ವಲ್ಪ ದಿವಸ ರಜೆ ಘೋಷಣೆ ಮಾಡಿದರೆ ಸಾಫ್ಟ್ವೇರ್ ಕಂಪನಿಗಳು ವರ್ಕ್ ಫ್ರಮ್ ಹೋಂ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟೆ ಬಿಟ್ಟರು. ಮೊದ ಮೊದಲು ಇದು ಕೆಲವು ಕಂಪನಿಗಳಿಗೆ ಕಷ್ಟವಾಗಿತ್ತು. ಕ್ರಮೇಣ ಒಳ್ಳೆಯ ಸಾಫ್ಟ್ವೇರ್ ಮೂಲಕ ಟೆಕ್ ತಂಡಗಳನ್ನು ಒಂದೇ ಕಡೆ ಒಟ್ಟುಗೂಡಿಸಿ ಬೇಕಾದ ಕೆಲಸಗಳನ್ನು ಅಚ್ಚುಕಟ್ಟಾಗಿ ಸಾಧಿಸತೊಡಗಿದವು. ಇತ್ತ ಕಡೆ ಎಲ್ಲ ಉದ್ಯೋಗಿಗಳು ಅತಿ ಖುಷಿಯಿಂದ ಕೆಲಸ ಮಾಡುತ್ತಾ ಸಾಗಿದರು. ಅತಿಯಾಗಿ ಇದ್ದ ಟ್ರಾಫಿಕ್ ಸಮಸ್ಸ್ಯೆಗೆ ಪರಿಹಾರ ಸಿಕ್ಕರೆ, ಇನ್ನೊಂದು ಕಡೆ ಮಹಿಳಾ ಮಣಿಗಳಿಗೆ ತಮ್ಮ ಮಕ್ಕಳನ್ನು ಲಾಲನೆ ಪಾಲನೆ ಸರಿಯಾಗುತ್ತೆ ಎಂದು ಅವರು ಖುಷಿ ಪಟ್ಟರು.
ಸತತವಾಗಿ ೨ ವರ್ಷ ವರ್ಕ್ ಫ್ರಮ್ ಹೋಂ ಕೆಲಸ ಮಾಡಿದ ತಂಡಗಳಿಗೆ ಇತ್ತೀಚಿಕೆ ತಮ್ಮ ಮನಗಳಿಗೆ ಅನಿಸುತ್ತಿರುವುದು ನಾವು ಸೋಶಿಯಲ್ ಜೀವನ ಕಳೆದುಕೊಳ್ಳುತ್ತಿದ್ದೇವೆ ಮತ್ತು ಮೊದಲಿನಂತೆ ಎಲ್ಲರನ್ನು ಭೇಟಿ ಮಾಡುವ ತವಕ ಹೆಚ್ಚಾಗುತ್ತಿದೆ ಆದರೆ ಹೊಸ ಅಥಿತಿ ಒಮಿಕ್ರೋನ್ ಗೆ ಹೆದರಿ ಸುಮಾರು ಕಂಪನಿಗಳು ವರ್ಕ್ ಫ್ರಮ್ ಹೋಂ ಯೋಜನೆಯಿಂದ ಹಿಂದೆ ಸರಿದಿಲ್ಲ. ಇತ್ತ ಕಡೆ ಉದ್ಯೋಗಿಗಳು ಮೊದಲಿನಂತೆ ಇರದ ಬಾಂಡಿಂಗ್ ಮತ್ತು ಅವಕಾಶಗಳು ಹೇಳರವಾಗುತ್ತಿದ್ದಂತೆ ಉದ್ಯೋಗವನ್ನು ಬದಲಾವಣೆಗೆ ಮುಂದಾಗಿದ್ದಾರೆ. ಒಂದು ಅಧ್ಯಯನ ಪ್ರಕಾರ ಅತಿ ಹೆಚ್ಚು ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಬದಲಾವಣೆ ಮಾಡಿದ್ದಾರೆ! ಎಲ್ಲ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಹೋಗುತ್ತಿರುವ ಉದ್ಯೋಗಿಗಳು ಮತ್ತೊಂದು ಕಡೆ ಇದ್ದ ಉದ್ಯೋಗಿಗಳಿಗೆ ಹಿಡಿದಿಟ್ಟುಕೊಳ್ಳುವ ಪಜೀತಿ.
ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಉದ್ಯೋಗಿಗಳು ಮಾನಸಿಕವಾಗಿ ಸದೃಢವಿರಲಿ ಎಂದು ಆನ್ಲೈನ್ ಯೋಗ , ಆನ್ಲೈನ್ ಡಾನ್ಸ್, ಆನ್ಲೈನ್ ಕಿಚೆನ್ , ಕುಟುಂಬದ ಜೊತೆ ಕಾರ್ಯಕ್ರಮ ಹೀಗೆ ಅನೇಕೆ ರೀತಿಯ ಯೋಜನೆಗಳು ಹಾಕಿಕೊಂಡಿ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಇದರ ಜೊತೆ ಮೊದಲಿನ ತರಹ ಪ್ಯಾಂಟ್ರಿಯಲ್ಲಿ ಗಾಸಿಪ್ ಮಾಡದೆ ಇದ್ದರೂ MS Team ಎಂಬ ಅಪ್ಲಿಕೇಶನ್ ಉಪಯೋಗ ಮಾಡಿಕೊಂಡು ಹರಟೆ ಕಾರ್ಯಕ್ರಮ ನಡೆಯುತ್ತಿವೆ. ಹೀಗೆ ೨೦೧೯ರ ಮೊದಲು ಮತ್ತು ೨೦೧೯ರ ನಂತರ ಜೀವನ ಸಾಫ್ಟ್ವೇರ್ ಇಂಜಿನಿಯರ್ ಗಳ ದಿಕ್ಕನ್ನೇ ಬದಲಿಸಿದೆ ಎಂದರೆ ತಪ್ಪಾಗಲಾರದು.
ಕರೋನಕ್ಕಿಂತ ಮುಂಚೆ ಪ್ರತಿ ದಿವಸ ೧ಘಂಟೆಗೆ ಎಲ್ಲರ ಜೊತೆಗೂಡಿ ಊಟಕ್ಕೆ ಹೋಗಿ , ಅಲ್ಲಿ ವೆಜ್ ತಿಂದು ಅರ್ಧ ಘಂಟೆ ವಾಕ್ ಮಾಡುತ್ತಿದ್ದೆವು ಎಂಬ ನೆನಪು ಅತಿಯಾಗಿ ಕಾಡುತ್ತಿದೆ. ೨೦೧೬ರ ಕಂಪನಿ ವಾರ್ಷಿಕ ಔಟಿಂಗ್ ನೆನಪಿಸಿಕೊಂಡರೆ ಮಧ್ಯಪಾನಕ್ಕ್ಕೆ ತುಂಬಾ ಶಕ್ತಿ ಎಂದು ತಿಳಿದ ದಿವಸ. ಸಮಯ ಸರಿಯಾಗಿ ೭ ಘಂಟೆಗೆ ಆಲ್ಕೋಹಾಲ್ ಹಾಲ್ ತೆರದ ನಂತರ ನಾ ಮುಂದು ತಾ ಮುಂದು ಎಂದು ಗ್ಲಾಸ್ ಎತ್ತಿಕೊಂಡು ಬಿಯರ್, ವಿಸ್ಕಿ ಹೀಗೆ ಅನೇಕ ತರಹ ತರಹ ಪಾನೀಯಗಳನ್ನು ಕುಡಿದು, ಹಾಕಿದ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದು, ಸುರಪಾನ್ ಹೆಚ್ಚಾಗಿ ರೆಸ್ಟ್ ರೂಮಿಗೆ ತೆರಳಿ ವಾಂತಿ ಮಾಡಿದ್ದೂ ಕಹಿ ನೆನಪಾದರು ಘಟನೆ ಮಾತ್ರ ಸತ್ಯ! ಮದ್ಯಪಾನಕ್ಕೆ ಎಷ್ಟು ಶಕ್ತಿ ಎಂದರೆ ಡಿಜೆ ಕನ್ನಡ ಹಾಡು ಹಾಕಿಲ್ಲ ಎಂದು ಅವಾಜ್ ಹಾಕಿ ಕನ್ನಡದ ಹಾಡು ” ಹಾಡು ಸಂತೋಷಕ್ಕೆ” ಎಂಬ ಹಾಡನ್ನು ಹಾಕಿಸಿದ್ದು! ಇವೆಲ್ಲಯೂ ಸದ್ಯಕ್ಕೆ ನೆನಪು ಮಾತ್ರ .
ಎಷ್ಟೋ ಜನರು ಊರಿಗೆ ಹೋಗಿ ತಮ್ಮ ತಂದೆ ತಾಯಿಯ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ. ಟ್ರಾಫಿಕ್ ಸಮಸ್ಸ್ಯೆಯಿಂದ ತಪ್ಪಿಸಿಕೊಂಡಿದ್ದಾರೆ ಆದರೆ ಅದರ ಜೊತೆ ಸೋಶಿಯಲ್ ಲೈಫ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳುವ ಉದ್ಯೋಗಿಗಳಿಗೆ ಕಡಿಮೆಯಿಲ್ಲ. ವೈರಸ್ ದಾಳಿಯಿಂದ ಪ್ರಾರಂಭಗೊಂಡ ಸಂಪೂರ್ಣ ವರ್ಕ್ ಫ್ರಮ್ ಹೋಂ ಯೋಜನೆ ಚೆನ್ನಾಗಿ ಹೋಗುತ್ತಿದೆ. ವೈರಸ್ ತೀವ್ರತೆ ಕಡಿಮೆ ಆದ ಮೇಲೆ ಮತ್ತೆ ಎಂದಿನಂತೆ ಆಫೀಸಿಗೆ ಹೋಗಿ ಕೆಲಸ ಮಾಡುವುದರ ಜೊತೆ ಗಾಸಿಪ್ ಮಾಡಲು ತಯಾರಾಗಿದ್ದಾರೆ.
Categories: Articles
