ಕಾಂಗ್ರೇಸ್ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಹೇಳಿದ್ದು ನಮ್ಮ ರಾಜ್ಯ ಅಧ್ಯಕ್ಷರ ತಕ್ಕಡಿ ಮೇಲೆ ಬರುತ್ತಿಲ್ಲ ಎಂದು ಮಾಧ್ಯಮದವರ ಮುಂದೆ ಗುಸು ಗುಸು ಹೇಳಿ ಎರಡು ದಿವಸ ಸುದ್ದಿಯಾಗಿದ್ದರು. ಅದು ನಿಜ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಕಾರಣ ಡಿಕೆ ಶಿವಕುಮಾರ ಅವರು ಅಧ್ಯಕ್ಷರಾದ ನಂತರ ರಾಜ್ಯ ಬಿಜೆಪಿಗೆ ಮಣಿಸಲು ಯಾವದೇ ರೀತಿಯಿಂದ ಆಗಿರಲಿಲ್ಲ. ಯಡಿಯೂರಪ್ಪನವರ ಶಕ್ತಿ ಮುಂದೆ ಉಪಚುನಾವಣೆಗಳ ಸೋಲು. ಅಕ್ರಮ ಆಸ್ತಿ ಗಳಸಿ ಜೈಲಿಗೆ ಹೋಗಿದ್ದು ಒಂದು ಕಡೆ ಆದರೆ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಮತ್ತೆ ಯಾವಾಗ ಕರೆ ಬರುತ್ತೋ ಗೊತ್ತಿಲ್ಲ ಎನ್ನುವ ಭಯವು ಇರಬೇಕೇನು ಅಧ್ಯಕ್ಷರ ತಕ್ಕಡಿ ಮೇಲೆ ಎದ್ದಿರಲಿಲ್ಲ.
ಆದರೆ ಇತ್ತೀಚಿಕೆ ಎಂದರೆ ವಿಧಾನಪರಿಷತ್ ಚುನಾವಣೆ ಆದ ನಂತರ ಅಧ್ಯಕ್ಷರ ತಕ್ಕಡಿ ಅಲುಗಾಡಿದಂಗೆ ಆಯಿತು. ಒಂದಿಷ್ಟು ಉಸಿರಾಡುವುದಕ್ಕೆ ಜಾಗ ಸಿಕ್ಕಿದೆ ! ಇದೆ ಹೊತ್ತಲ್ಲಿ ಮೇಕೆದಾಟು ಪಾದಯಾತ್ರೆ ಬಗ್ಗೆ ಪ್ರಸ್ತಾಪಿಸಿ ಪ್ರಾರಂಭ ಮಾಡಿದ್ದಾರೆ. ಬಳ್ಳಾರಿ ಯಾತ್ರೆ ಮಾಡಿ ಸಿದ್ದು ಮುಖ್ಯಮಂತ್ರಿಯಾದರು ಅದಕ್ಕೆ ಮೇಕೆದಾಟು ಪಾದಯಾತ್ರೆ ಮಾಡಿ ಡಿಕೆ ಶಿವಕುಮಾರವರು ಮುಂದಿನ ಮುಖ್ಯಮಂತ್ರಿ ಖಂಡಿತ ಎಂದು ಕಾಂಗ್ರೇಸ್ ಕಾರ್ಯಕರ್ತರು ತುಂಬಾ ಖುಷಿಯಾಗಿದ್ದಾರೆ. ವಿನಯ ಗುರೂಜಿಯವರು ಭವಿಷ್ಯ ಬೇರೆ ನುಡಿದಿದ್ದಾರೆ. ನಿಮಗೆ ಗೊತ್ತಿರಲಿ ಶಿವಕುಮಾರವರು ಜೈಲಿಗೆ ಹೋಗುವಕ್ಕಿಂತ ಮುಂಚೆ ವಿನಯ ಗುರೂಜಿ ಹತ್ತಿರ ಹೋದಾಗ ಸದ್ಯದ ಪರಿಸ್ಥತಿಯನ್ನು ನೀವು ಅನುಭವಿಸಲೇಬೇಕು ಆದ್ರೆ ಮುಂದೆ ನಿಮಗೆ ಎರಡು ಹುದ್ದೆ ಖಂಡಿತ ಸಿಗುತ್ತೆ ಎಂದಿದ್ದರು. ಈಗಾಗಲೇ ಅಧ್ಯಕ್ಷ ಪಟ್ಟ ಸಿಕ್ಕಿದೆ ಇನ್ನೇನಿದ್ದರೂ ರಾಜ್ಯ ಸಿಂಹಾಸನ! ಕಾಕತಾಳೀಯನೋ ಅಥವಾ ಭವಿಷ್ಯ ನಿಜವಾಯಿತೋ .. ?
ಯಡಿಯೂರಪ್ಪನವರು ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಎಂದಿಗೂ ದ್ರೋಹ ಬಗೆದ ಉಧಾಹರಣೆ ಯಾವುದು ಇಲ್ಲ. ಆದರೆ ತಮ್ಮ ವಿರುದ್ಧ ಇದ್ದವರಿಗೆ ನೆಲಸಮ ಮಾಡದೆ ಇದ್ದ ಉಧಾಹರಣೆನು ಇಲ್ಲ. ಇದು ಚಾಣಕ್ಯನ ನೀತಿಯಲ್ಲಿ ಹೇಳಿದ ಕಟು ಸತ್ಯಗಳು, ಅವುಗಳನ್ನು ತಮ್ಮ ರಾಜಕೀಯ ಜೀವನದುದ್ದಕ್ಕೂ ಮೈಗೂಡಿಸಿಕೊಂಡು ನಾಲ್ಕು ಬಾರಿ ರಾಜ್ಯ ಸಿಂಹಾಸನ ಏರಿದವರು. ಮುಖ್ಯಮಂತ್ರಿಯಾಗುದಕ್ಕೆ ರಣನೀತಿ ಹೂಡಿ ಅನೇಕಬಾರಿ ಜಯಸಾಲಿಯಾಗಿದ್ದರೆ ಆದರೆ ಪದವಿ ಒಲಿದ ನಂತರ ಶಸ್ತಾಸ್ತ್ರಗಳನ್ನು ತ್ಯಜಿಸಿ ಪದವಿ ಮೂರುಬಾರಿ ಸಂಚಕಾರ ತಂದುಕೊಂಡಿದ್ದಾರೆ. ಇಲ್ಲಿ ಚಾಣಕ್ಯನ ನೀತಿ ಅನ್ವಯ ಮಾಡಿಕೊಂಡಿಲ್ಲ ಅನಿಸುತ್ತೆ! ಆದರೂ ಎಲ್ಲವನ್ನು ಗಣನೆಗೆ ತಗೆದುಕೊಂಡರೆ ೫ ವರ್ಷಗಳಿಕ್ಕಿಂತ ಹೆಚ್ಚು ಅಧಿಕಾರವನ್ನು ಮಾಡಿದ್ದಾರೆ. ಈ ಸಲ ಅಧಿಕಾರದಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ಒಂದು ಒಳ್ಳೆಯ ಆಯ್ಕೆಯನ್ನು ರಾಜ್ಯದ ಜನತೆಗೆ ಕೊಟ್ಟಿದ್ದಾರೆ ಎಂದು ಮೊದಮೊದಲು ಜನರಿಗೆ ಅನಿಸಿದ್ದು ಸುಳ್ಳಲ್ಲ. ಕಾರಣ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ ತಗೆದುಕೊಂಡ ಅನೇಕ ನಿರ್ಧಾರಗಳು ಜನರಿಗೆ ತುಂಬಾ ಇಷ್ಟವಾಗಿದ್ದವು. ಆದರೆ ಬರಬರುತ್ತ ಜನರಿಗೆ ಹೊಸದು ಕಾಣಸಿಗದೇ ಬಿಜೆಪಿ ಕಾರ್ಯಕರ್ತರು ಹವಾ ಇಲ್ಲದ ಟೈಯರ್ ತರಹ ಆಗಿದ್ದಾರೆ ! ಪಕ್ಷಕ್ಕಾಗಿ ಸ್ವಂತ ದುಡ್ಡು ಖರ್ಚು ಮಾಡಿ ದುಡಿದಿದ್ದಾರೆ. ಕಾರ್ಯಕರ್ತರು ಯಾವದೇ ಅಧಿಕಾರ ಅಪೇಕ್ಷ ಮಾಡುತ್ತಿಲ್ಲ. ಅವರಿಗೆ ಬೇಕಾಗಿದ್ದು ಅವರ ಬೆನ್ನಿಗೆ ನಿಲ್ಲುವುದು ಮತ್ತು ಪಕ್ಷವನ್ನು ಮತ್ತಷ್ಟು ಬಲಪಡಿಸುವುದು.
ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಅನೇಕ ಸಾಮಾನ್ಯ ಕಾರ್ಯಕರ್ತರ ಕೊಡುಗೆ ಇದೆ ಆದರೆ ಅಧಿಕಾರ ಬಂದ ನಂತರ ಕಾರ್ಯಕರ್ತರನ್ನು ಕೇಳುವ ನಾಯಕರಿಲ್ಲ. ಯಡಿಯೂರಪ್ಪ ಇದ್ದಾಗ ಒಂದಿಷ್ಟು ಕಾರ್ಯಕರ್ತರಿಗೆ ಸ್ಥಾನಮಾನ ಕೊಟ್ಟು ಹುರಿದುಂಬಿಸಿದ್ದರು. ಮತ್ತೆ ಕಾರ್ಯಕರ್ತರ ಕೆಲಸಗಳು ಆಗುತ್ತಿದ್ದವು. ಇಂದು ಸ್ವತಃ ಶಾಸಕರದೇ ಕೆಲಸಗಳು ಆಗುತ್ತಿಲ್ಲ ಎಂದು ದೂರಿದ ಉಧಾಹರಣೆ ನಮ್ಮ ಮುಂದಿದೆ. ಇಂದಿಗೂ ನೆನೆಗುದಿಗೆ ಬಿದ್ದಿರುವ ನಿಗಮ ಮಂಡಳಿ ಅಧ್ಯಕ ಸ್ಥಾನಗಳು, ನಿರ್ದೇಶಕ ಸ್ಥಾನಗಳು. ಅಶೋಕ ಮತ್ತು ಸವದಿಯವರ ಹೆಗಲಿಗೆ ಹೊಣೆ ಹೊರಿಸಿದ್ದಾರೆ ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಯಾರು ತಡೆಹಾಕಿದ್ದಾರೆ ಎನ್ನುವುದು ಗೊತ್ತಿಲ್ಲ? ಮತ್ತೊಂದು ಕಡೆ ಸೋಮಾರಿ ಮಂತ್ರಿಗಳು, ಶಾಸಕರೇ ಹೇಳಿದ ಹಾಗೆ ಮಂತ್ರಿಗಳು ಕೈಗೆ ಸಿಗುವದಿಲ್ಲ, ಕಚೇರಿಗೆ ಬರುವುದಿಲ್ಲ ಮತ್ತು ವೇಗವಾಗಿ ಕಡತಗಳನ್ನು ವಿಲೇವಾರಿ ಮಾಡಿದ ನಿದರ್ಶನಗಳೇ ಇಲ್ಲ. ಬಡವರ(ನಿಜವಾದ ) ರೇಷನ್ ಕಾರ್ಡಗಳು ರದ್ದಾಗಿವೆ, ವಯೋವೃದ್ಧರ ಪಿಂಚಿಣಿಯಿಂದ್ ಹೆಸರು ತಗೆದುಹಾಕಿದ್ದಾರೆ.(ಸ್ಥಳೀಯ ಸಮಸ್ಯೆ), ಕರೋನ ನೆಪಹೇಳಿ ಅನೇಕ ಅಭಿವೃದ್ಧಿ ಕೆಲ್ಸಗಳು ಹಳ್ಳಹಿಡಿದಿವೆ! ಇಂಥಹ ಮಂತ್ರಿಮಂಡಲದಿಂದ ಮತ್ತೆ ೨೦೨೩ಕ್ಕೆ ಚುನಾವಣೆ ಎದುರಿಸಿ ಗೆದ್ದು ಸರ್ಕಾರ ರಚಿಸುವುದು ಸಾಧ್ಯನಾ?
ರಾಜ್ಯದ ಮುಖ್ಯಮಂತ್ರಿ ತಮ್ಮದೇ ಕ್ಷೇತ್ರದಲ್ಲಿ ತಾವೇ ಮುಖ್ಯಮಂತ್ರಿ ಇದ್ದಾಗ ಪಕ್ಷ ಸೋಲುತ್ತೆ ಎಂದರೇ ಕಾರ್ಯಕರ್ತರ ಹುಮ್ಮಸ್ಸು ಬಾಡಿದೆ ಎಂದರ್ಥ! ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆಯೇ ? ಗೊತ್ತಿಲ್ಲ! ಮತ್ತೊಂದು ಕಡೆ ಸರ್ಕಾರ ರಚನೆ ಆದ ನಂತರ ಬಿಜೆಪಿಯಲ್ಲಿ ಸಾಮಾನ್ಯವಾದ ಮಾತೆಂದರೇ “ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ” . ಇದನ್ನು ಹೇಳುವವರಿಗೆ ಮತ್ತು ಅದಕ್ಕೆ ಪುಷ್ಟಿ ನೀಡುವವರಿಗೆ ಇಂದಿಗೂ ಯಾವದೇ ಶಿಕ್ಷೆ ಆಗಿಲ್ಲ. ಇದು ಹಿಂಗ್ಯಾಕೆ ? ಮುಖ್ಯಮಂತ್ರೀ ಬದಲಾವಣೆ ಎಂದು ಹೋಗೆ ಎಬ್ಬಿಸಿದರೆ ಯಾವ ಅಧಿಕಾರಿ ಕೆಲಸ ಮಾಡುತ್ತಾನೆ ಹೇಳಿ? ಇವೆಲ್ಲವೂ ಪಕ್ಷಕ್ಕೆ ಹಿನ್ನಡೆನೇ .. ಶಿಸ್ತಿನ ಪಕ್ಷ ಎಂದು ಹೇಳುವ ಇವರು ಪಕ್ಷದ ಬಗ್ಗೆ ಹಗುರವಾಗಿ ಬಾಯಿಗೆ ಬಂದಂತೆ ಮಾತನಾಡಿದವರನ್ನು ಮಂತ್ರಿ ಮಾಡಲು ಹೊರಟಿದ್ದಾರೆ. ಎಲ್ಲಿದೆ ಶಿಸ್ತು? ಮಂತ್ರಿ ಮಾಡದೇ ಇರಬಹುದು ಆದರೆ ಅವರ ಮೇಲೆ ಯಾವ ಸೆಕ್ಷನ್(ಹಾಹಾ) ಹಾಕಿದ್ದೀರಾ ಎಂದು ಜನರಿಗೆ ತಿಳಿಸಿ. ಕಾರಣ ಇಷ್ಟೇ ನೀವು ಹೇಳುತ್ತಿರುವ ಶಿಸ್ತು ಮಣ್ಣು ಪಾಲಾಗಿದ್ದಕ್ಕೆ ಪಕ್ಷಕ್ಕೆ ಇಂದಿನ ದಯನೀಯ ಸ್ಥಿತಿ. ಗೋಕಾಕನಲ್ಲಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುತ್ತಾರೆ ಆದರೂ ಯಾವದೇ ಶಿಕ್ಷೆ ಆಗುವುದಿಲ್ಲ. ವಿಜಯಪುರದ ಪಕ್ಷ ವಿರೋಧಿ ಮಾತುಗಳು ಸದ್ಯಕ್ಕೆ ಆಫ್ ಆಗಿದೆ ಕಾರಣ ಮುಂದಿನ ಬಾರಿ ಟಿಕೆಟ್ ತಪ್ಪುವ ಭಯ ಇರಬೇಕು. ಅನೇಕ ಕಡೆ ಪಕ್ಷದ ವಿರುದ್ಧ ಕೆಲಸವಾಗಿದೆ ಆದರೂ ಯಾವದೇ ಗಂಭೀರವಾದ ಚರ್ಚೆಗಳು ಆಗಿದ ನಿದರ್ಶನಗಳು ಇಲ್ಲವೇ ಇಲ್ಲ. ಇಷ್ಟೆಲ್ಲಾ ಆದರೂ ನಾವೇ ೨೦೨೩ಕ್ಕೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಜೋಕ್ ಮಾಡುತ್ತಿದ್ದಾರೆ ಎಂದು ಅನ್ಸಲ್ವೇ?

ಇದ್ದ ಆಸ್ತಿಯೆಲ್ಲ ಹೋದರು ಪರವಾಗಿಲ್ಲ ರಾಜ್ಯದ ಮುಖ್ಯಮಂತ್ರಿಯಾಗಲೇ ಬೇಕು ಎಂದು ಹಠತೊಟ್ಟು ಕೆಲಸ ಮಾಡುತ್ತಿರುವ ಡಿಕೆ ಶಿವಕುಮಾರವರ ತಕ್ಕಡಿ ಖಂಡಿತ ಮೇಲೆದ್ದಿದೆ. ೨೦೨೩ರ ಚುನಾವಣೆ ಗೆಲ್ಲುವಷ್ಟು ತಕ್ಕಡಿ ಮೇಲೆ ಎದ್ದಿದೆಯಾ ಎನ್ನವುದು ಯಕ್ಷ ಪ್ರಶ್ನೆ! ಆದರೆ ಮೇಕೆದಾಟು ಪಾದಯಾತ್ರೆ ,ಪಕ್ಷದ ಮೇಲಿನ ಹಿಡಿತ ಮತ್ತು ಎಲ್ಲ ನಾಯಕರ(ಹಿರಿಯ ಮತ್ತು ಕಿರಿಯ ) ಪ್ರೀತಿ ಸಂಪಾದಿಸಿದ್ದು ತಕ್ಕಡಿ ಅಲುಗಾಡಿ ಮೇಲಕ್ಕೆ ಏಳುತ್ತಿದೆ. ಅಧ್ಯಕ್ಷರು ಮೇಕೆದಾಟಬಹುದು ಆದರೆ ಟಗರು ದಾಟುವುದು ಕಷ್ಟಸಾಧ್ಯ! ಕುಡಿದ ಅಮಲಿನ ಅಧ್ಯಕ್ಷ ಎಂದು ಹೀಯಾಳಿಸುತ್ತ ಬಿಜೆಪಿ ಕಾಲ ಕಳೆದರೆ ೨೦೨೩ಕ್ಕೆ ಆಕ್ಸಿಜನ್ ಕೊರತೆ ಇನ್ನಷ್ಟು ಹೆಚ್ಚಾಗುತ್ತೆ.! ನಾನು ಹೇಳುತ್ತಿಲ್ಲ. ತಕ್ಕಡಿ ಹೇಳುತ್ತಿದೆ!

ಕಾಂಗ್ರೇಸ್ ತಕ್ಕಡಿಗೆ ಮೇಧಾವಿಗಳ ಉಪಸ್ಥಿತಿ ಇದೆ. ಅದಕ್ಕಾಗಿಯೇ ಕಾಂಗ್ರೇಸ್ನಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಆದ್ರೆ ಇತ್ತ ಬಿಜೆಪಿಯಲ್ಲಿ ನಾಯಕರು ನನಗೆ ಯಾವಾಗ ಮಂತ್ರಿ ಸಿಗುತ್ತೆ ಎನ್ನುವ ಮನಸ್ಥಿತಿಯಲ್ಲಿ ಇದ್ದಾರೆ. ಮುಂದೆ ಕಾಂಗ್ರೇಸ್ ಬರುತ್ತದೆ ಅದಕ್ಕೆ ಕಾಂಗ್ರೇಸ್ಗೆ ಹೋದರಾಯಿತು ಎಂದು ಅನೇಕರು ಟಿಕೆಟ್ ರಿಸರ್ವ್ ಮಾಡಿಕೊಳ್ಳುತ್ತಿದ್ದಾರೆ. ಇದು ಸತ್ಯನಾ?(ಗಾಳಿ ಸುದ್ದಿ!)
ರಾಜ್ಯ ಬಿಜೆಪಿಯ ಸದ್ಯದ ಸ್ಥಿತಿ ಸುಧಾರಣೆ ಆಗಬೇಕಾದರೇ ಆಕ್ಸಿಜನ್ ಅಗತ್ಯ! ಮಂತ್ರಿ ಮಂಡಲಕ್ಕೆ ಸರ್ಜರಿ ಮಾಡಿ , ಪಕ್ಷದ್ರೋಹಿಗಳನ್ನು ಬದಿಗೊತ್ತಿ, ಪಕ್ಷದ ಕಟ್ಟಾಳುಗಳಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕೊಟ್ಟು ಫ್ರೀಯಾಗಿ ಕೆಲಸ ಮಾಡಲು ಬಿಡಬೇಕು. ಯಡಿಯೂರಪ್ಪನವರ ಶಕ್ತಿ ಪಕ್ಷಕ್ಕೆ ಸಿಗಬೇಕು ಎಂದಾದರೆ ವಿಜಯೇಂದ್ರರನ್ನು ಪ್ರಮೋಟ್ ಮಾಡಿ. ಕುಟುಂಬ ರಾಜಕಾರಣ ಬೇಡ, ಹೌದು ಆದರೆ ಜನರ ನಾಯಕರನ್ನು ಕುಟುಂಬ ರಾಜಕಾರಣ ನೆಪದಲ್ಲಿ ಬಿಟ್ಟರೇ ಪಕ್ಷಕ್ಕೆ ಹಾನಿ. ಯುವಕರನ್ನು ಮಂತ್ರಿಮಾಡಿ , ಸಣ್ಣ ಸಣ್ಣ ಜಾತಿಯ ನಾಯಕರನ್ನು ಗಣನೆಗೆ ತಗೆದುಕೊಳ್ಳಿ ಎಂದು ಬಿಜೆಪಿಯ ಕಾರ್ಯಕರ್ತರ ಕೂಗು. ವಿಶೇಷವಾಗಿ ಅಡ್ಜಸ್ಟ್ಮೆಂಟ್ ನಾಯಕರನ್ನು ಮುಲಾಜಿಲ್ಲದೆ ಮೂಲೆಗೆ ತಳ್ಳಿ! ಇಂಥಹ ಆಕ್ಸಿಜನ್ ಕೊಡದೆ ಹೋದರೇ ತಕ್ಕಡಿ ಇನ್ನೂ ಮೇಲೆಕ್ಕೆ ಹೋಗುವದರಲ್ಲಿ ಸಂಶಯಬೇಡ!
Categories: Articles
