
ವಿಜಯಪುರದಲ್ಲಿ ಇಂಡಿ ತಾಲೂಕ ಅತ್ಯಂತ ಪ್ರಸಿದ್ದಿ ಪಡೆದ ತಾಲೂಕ! ಯಾವುದಕ್ಕೆ ಎಂದು ಕೇಳಿದರೇ ಎಲ್ಲರೂ ಹೇಳುವುದು “ಭೀಮಾತೀರದ ಹಂತಕರ ತಾಣ” ಮತ್ತು ಕುಟುಂಬದ ನಡುವೆ ಭಯಂಕರವಾದ ಕೊಲೆಗಳು. ಅದು ಬಿಟ್ಟರೇ ಅಕ್ರಮ ಮರಳುಗಾರಿಕೆ, ಇವೆಲ್ಲವೂ ಬಿಟ್ಟು ಇನ್ನೂ ಏನಾದರೂ ಇದೆಯಾ ಎಂದರೇ ಜಾತಿ ರಾಜಕೀಯ(ಚುನಾವಣೆಯಲ್ಲಿ ಮಾತ್ರ !). ಬೇರೆ ಸಮಯದಲ್ಲಿ ಎಲ್ಲರೂ ಕೂಡಿಕೊಂಡೆ ಹರಟೆ ಹೊಡೆಯುತ್ತಾರೆ ಆದರೆ ಚುನಾವಣೆ ಬಂದರೇ ಮುಗಿತು ಜಾತಿ ಮುನ್ನೆಲೆಗೆ ಬರುತ್ತೆ! ಅದು ಯಾರು ಮಾಡಿದ್ದು ಅದರಿಂದ ಜನರಿಗೆ ಆದ ಪ್ರಯೋಜನೆಗಳು ಏನು ಎಂದು ಕೇಳಿದರೇ ಯಾರು ಅದರ ಬಗ್ಗೆ ಚಕಾರವೆತ್ತುವದಿಲ್ಲ. ಆದರೆ ಜಾತಿ ಹೆಸರಿನಲ್ಲಿ ನಾಯಕರಾಗಿ ಹೊರಹಿಮ್ಮಿದ್ದಾರೆ ಎನ್ನವುದು ಎಲ್ಲರಿಗೂ ಗೊತ್ತು.
ಇಂಥಹ ಮಾತುಗಳು ಎಲ್ಲರೂ ಹೇಳುತ್ತಾರೆ ಆದರೆ ಇಂಡಿ ತಾಲೂಕ ನಿಂಬೆ ಬೆಳೆಯುದರಲ್ಲಿ ರಾಜ್ಯದಲ್ಲೇ ಪ್ರಥಮ ಮತ್ತು ವಿಶೇಷವಾದ ನಿಂಬೆ ಇಂಡಿಯಲ್ಲೇ ಬೆಳೆಯುವುದು ಅಂತ ಕೆಲವರಿಗೆ ಗೊತ್ತೇ ಇಲ್ಲ! ಅದು ಬಿಡಿ ದ್ರಾಕ್ಷಿಗೂ ಸಹಿತ ನಾವು ಅಂಕೆ ಸಂಖ್ಯೆಯಲ್ಲಿ ದ್ವಿತೀಯ ಸ್ಥಾನಕೆ ಬಂದು ನಿಂತಿದ್ದೇವೆ.(ವಿಜಯಪುರ ಜಿಲ್ಲೆಯಲ್ಲಿ). ಇದರ ಜೊತೆಗೆ ಸಾಹಿತ್ಯಗಳ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂಡಿ ಹೇಳಿಕೇಳಿ ಬರಗಾಲ ನಾಡು ಎಂದೇ ಖ್ಯಾತಿ ಪಡೆದ ವಿಜಯಪುರದ ಜಿಲ್ಲೆಯ ಒಂದು ತಾಲೂಕ. ಇತ್ತೀಚಿಕೆ ಅಲ್ಪ ಸ್ವಲ್ಪ ಇಂಡಿಯ ಊರುಗಳು ನೀರಾವರಿ ಕಂಡಿವೆ. ೫೦ ವರ್ಷಗಳ ನಂತರ ಆ ಸ್ವಲ್ಪ ಹಳ್ಳಿಗಾದರು ನೀರಾವರಿ ಭಾಗ್ಯ ಸಿಕ್ಕಿತಲ್ಲ ಅದಕ್ಕೆ ಎಲ್ಲ ಸರ್ಕಾರಗಳ ಕೊಡುಗೆ ಅನ್ನೋಣ! ಆಧುನಿಕ ಭಗೀರಥ ಎಂದೇ ಕರೆಯಿಸಿಕೊಂಡ ಪಾಟೀಲರಿಗೆ ವಿಜಯಪುರದ ಎಲ್ಲ ಕೆಲಸಗಳಿಗೆ ಶ್ರೇಯಸ್ಸು ಕೊಡುವುದು ಕಷ್ಟಸಾಧ್ಯ ಆದರೆ ಅವರ ಅಳಿಲ ಸೇವೆ ಇದ್ದೆ ಇರುತ್ತದೆ. ರೇವಣಸಿದ್ದೇಶ್ವರ ಏತ ನೀರಾವರಿ ಆದರೆ ಖಂಡಿತ ಇಂಡಿ ತಾಲುಕಿನ ಸುಮಾರು ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ನಾಯಕ ಹುಟ್ಟಬೇಕಲ್ಲ!
ಭೀಮಾತೀರ ಎಂದು ಕರೆಯಲು ಕಾರಣ! ಇಂಡಿ ತಾಲೂಕಿನಲ್ಲಿ ಹರಿಯುತ್ತಿರುವ ನದಿಯ ಹೆಸರು ಭೀಮಾ ನದಿ! ಅನೇಕ ಹಳ್ಳಿಗಳಿಗೆ ಜೀವಾಳು ಎಂದರೇ ತಪ್ಪಾಗಲಾರದು. ಕೃಷಿಗೆ ಅಷ್ಟೇ ಅಲ್ಲ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆಯನ್ನು ನಿವಾರಿಸಿದ ಜೀವಾಳು. ೧೯೮೦ರ ದಶಕದಲ್ಲಿ ಮಳೆಗಾಲ ಸ್ವಲ್ಪ ಹಚ್ಚಾಗಿದ್ದ ಕಾಲ ನಮ್ಮ ಭಾಗದ ರೈತರಿಗೆ ಎಂದರೆ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿ ಎಂದು ೧೯೮೩ರಲ್ಲಿ ಬಳ್ಳೊಳ್ಳಿಯ ಸುರೇಶ ನಾಕ್ರೆಯವರು ಭೀಮಾಶಂಕರ ಖಾರ್ಕಾನೆ ಪ್ರಾರಂಭಿಸಲು ನಿರ್ಧಾರ ಮಾಡಿ , ಖಾರ್ಕಾನೆ ಶುರು ಮಾಡಲು ಅಗತ್ಯ ಅನುಮತಿ ಪಡೆದು ಮರಗುರದಲ್ಲಿ ಖಾರ್ಕಾನೆಗೆ ಗುದ್ದಲಿ ಪೂಜೆ ಮಾಡಿಯಾದವರು. ಬಳ್ಳೊಳ್ಳಿಯ ಸುರೇಶ ನಾಕ್ರೆಯವರ ಮುಂದಾಲೋಚನೆಯಿಂದ ಪ್ರಾರಂಭವಾದ ಯೋಜನೆ ಕಾರ್ಯರೋಪಕ್ಕೆ ಬರಲು ಅನೇಕ ವರ್ಷಗಳೇ ಕಳೆದವು.
ಇದೊಂದು ಸಹಕಾರಿ ಸಂಘದ ಅಡಿಯಲ್ಲಿ ಬರುವ ಖಾರ್ಕಾನೆ. ಸುರೇಶ ನಾಕ್ರೆಯವರಿಂದ ಸ್ಥಳೀಯ ನಾಯಕ ಏನ್ ಎಸ್ ಖೇಡ್ ದಾವೆ ಮುಖಾಂತರ ಪಡೆದು ಖಾರ್ಕಾನೆ ಪ್ರಾರಂಭಿಸುತ್ತೇನೆ ಎಂದು ತೊಟ್ಟ ಪಣ ಹಾಗೆ ಉಳಿಯಿತು. ಮುಂದೆ ಮತ್ತೆ ಖಾರ್ಕಾನೆ ರಮೇಶ್ ಜಿಗಜಿಣಗಿ ಅವರ ನಾಯಕತ್ವದಲ್ಲಿ ಇತ್ತೇನು ನಿಜ ಆದರೆ ಮುಂದೆ ಇಂಡಿಯಿಂದ ಆಯ್ಕೆಯಾಗಿ ಬಂದ ಶಾಸಕ ನಾನು ಖಾರ್ಕಾನೆ ಪ್ರಾರಂಭ ಮಾಡುತ್ತೇನೆ ಎಂದು ಖಾರ್ಕಾನೆಗೆ ಚುನಾವಣೆ ಮಾಡಿ ಅಧ್ಯಕ್ಷರಾಗಿ ಆಯ್ಕೆಯಾಗಿ ಸಿಮೆಂಟ್ ಬ್ಲಾಕ್ ಮತ್ತು ಕಬ್ಬಿಣದ ಕಂಬ ನಿಲ್ಲಿಸಿದ್ದು ಬಿಟ್ಟರೆ ಮತ್ತೇನು ಆಗಲೇ ಇಲ್ಲ. ಈ ಸಮಯದಲ್ಲಿ ಅನೇಕ ರಾಜಕೀಯ ದ್ವೇಷ ಹುಟ್ಟಿಕೊಂಡಿದ್ದು ಮಾತ್ರ ಸತ್ಯ. ಖಾರ್ಕಾನೆ ಪ್ರಾರಂಭವಾಗಿ ರೈತರಿಗೆ ಅನುಕೂಲವಾಗುತ್ತೆ ಎಂದು ನಂಬಿದವರಿಗೆ ಜಾತಕ ಪಕ್ಷಿಯಂತೆ ಇರುವುದು ಬಿಟ್ಟು ಮತ್ತೇನು ಮಾಡಲು ಆಗಲಿಲ್ಲ. ಇದೊಂದು ರೈತರಿಂದ ಪ್ರಾಂಭವಾದ ಖಾರ್ಕಾನೆ. ರೈತರಿಂದ ಶೇರ್ ಪಡೆದು ಸಹಕಾರಿ ನಿಯಮ ಅಡಿಯಲ್ಲಿ ನೋಂದಾಯಿತವಾದ ಖಾರ್ಕಾನೆ ಖಾಸಗಿಯಾಗಿ ಮಾಡಿಕೊಂಡಿದ್ದ ಇಂಡಿ ಶಾಸಕರ ವಿರುದ್ದ ಹೈ ಕೋರ್ಟ್ನಲ್ಲಿ ಧಾವೆ ಹುಡಿ ಮತ್ತೆ ಸಹಕಾರಿಯಾಗಿ ಉಳಿಸಿಕೊಳ್ಳಲ್ಲು ಅನೇಕರ ಪರಿಶ್ರಮ ಇದೆ.
೧೯೯೦ರ ನಂತರ ಇಂಡಿಯಲ್ಲಿ ಮತ್ತು ಬಳ್ಳೊಳ್ಳಿ ಮತಕ್ಷೇತ್ರದಲ್ಲಿ ಚುನಾವಣೆ ನಡೆದರೇ ಎಲ್ಲ ಅಭ್ಯರ್ಥಿಗಳ ಭಾಷಣದಲ್ಲಿ ಹೇಳುವ ವಿಷಯ ಖಂಡಿತವಾಗಿ ನಾನು ಭೀಮಾಶಂಕರ ಸಕ್ಕರೆ ಖಾರ್ಕಾನೆ ಕಟ್ಟುತ್ತೇನೆ! ಅನೇಕರ ಭರವಸೆಗಳು ಹಾಗೆ ಉಳಿದವು. ೨೦೧೩ರಲ್ಲಿ ಭರ್ಜರಿ ಜಯಗಳಿಸಿ ಆಯ್ಕೆಯಾದ ಕಾಂಗ್ರೇಸ್ ಶಾಸಕ ಹೇಳಿದ ಮಾತಿನಂತೆ ಖಾರ್ಕಾನೆ ಪ್ರಾರಂಬಿಸಿಲು ಮಾಡಿದ ಯೋಜನೆಗಳಿಂದ ಇಂದು ಖಾರ್ಕಾನೆ ಆರಂಭಗೊಂಡಿದೆ. ಸ್ಥಳೀಯ ರೈತರಿಗೆ ಅನೂಕೂಲಗಳಾಗಿವೆ.ರೈತರಿಂದ ಪಡೆದ ಕಬ್ಬಿನ ಬಿಲ್ ಸರಿಯಾಗಿ ಪಾವತಿಯಾಗುತ್ತಿದೆ. ೨೦೨೦ರಲ್ಲಿ ಸ್ವಲ್ಪ ಹೆಚ್ಚಿಗೆ ದುಡ್ಡು ಕೊಟ್ಟಿದ್ದಾರೆ ಎಂದು ಅನೇಕ ರೈತರು ಹೇಳಿದ್ದಾರೆ. ಆದರೆ ಇತ್ತೀಚಿಕೆ ನಡೆದ ಷೇರುದಾರರ ಸಭೆಯಲ್ಲಿ ಒಬ್ಬ ಷೇರುದಾರರು ಮತ್ತು ಹಿಂದಿನ ಜಿಲ್ಲಾ ಪಂಚಾಯತ ಅಧ್ಯಕ್ಷ ಒಂದು ಕಾರ್ಯಕ್ರಮದಲ್ಲಿ ಭೀಮಾಶಂಕರ ಖಾರ್ಕಾನೆ ಪ್ರಾರಂಭಿಸಿದ್ದು ಎಷ್ಟು ನಿಜಯೋ ಅದರ ಮೇಲೆ ಸುಮಾರು ಎಂದರೆ ಅಂದಾಜು ೩೮೦-೪೦೦ ಕೋಟಿ ಸಾಲವಿರುವುದು ನಿಜ! ಹಾಗಾದರೆ ಪ್ರತಿವರ್ಷ ಕಬ್ಬು ನುರಿದು ಲಾಭ ಮಾಡುತಿಲ್ವಾ? ಲಾಭ ಮಾಡುತ್ತಿದ್ದರೇ ಸಾಲ ತೀರಿಸಿಲಿಕ್ಕೆ ಇನ್ನೂಎಷ್ಟು ಸಮಯ ಬೇಕು? ಹತ್ತು ಸಾವಿರ ಕೊಟ್ಟು ಷೇರು ತಗೆದುಕೊಂಡಿರುವ ರೈತರಿಗೆ ಲಾಭಮಾಡಿ ಲಾಭಕೋಡುವ ಕಾಲ ಬರುತ್ತಾ?

೨೦೧೩ರಲ್ಲಿ ಕಾಂಗ್ರೇಸ್ ಸರ್ಕಾರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಸರ್ಕಾರದಿಂದ ಮತ್ತು ಸಹಕಾರ ಬ್ಯಾಂಕಗಳಿಂದ ಸಾಲ ತಗೆದುಕೊಂಡು ಖಾರ್ಕಾನೆ ಪ್ರಾರಂಭ ಮಾಡಿದ್ದು ಒಂದು ಸಾಧನೆನೇ ! ಸುಮಾರು ೨೦೦ಕೋಟಿ(ಬಲ್ಲ ಮೂಲಗಳ ಪ್ರಕಾರ) ವೆಚ್ಚದಲ್ಲಿ ನಿರ್ಮಾಣವಾದ ಖಾರ್ಕಾನೆಗೆ ಅಂದಿನ ಸರ್ಕಾರ ೩೯ಕೋಟಿ ಅನುದಾನ ಕೊಟ್ಟಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ಇವರ ಸಾಧನಯಿಂದ ಸದ್ಯಕ್ಕೆ ರೈತರಿಗೆ ಅನುಕೂಲವಾಗಿದೆ ಆದರೆ ಈಗಿರುವ ಸಾಲ ತುಂಬಲಾಗದೆ ಮತ್ತೆ ಸಾಲಿನ ಮೇಲೆ ಸಾಲ ಮಾಡಿ ಮತ್ತೆ ಖಾರ್ಕಾನೆಯನ್ನು ಮುಚ್ಚುವ ಹಂತಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಷೇರುದಾರರ ಸಭೆಯಲ್ಲಿ ಒಬ್ಬ ರೈತ ನೇರವಾಗಿ ಸದುದ್ದೇಶದಿಂದ ಹೇಳಿದ್ದು ನ್ಯಾಯವಾದ ಮಾತು. ಖಾರ್ಕಾನೆ ಅಧ್ಯಕ್ಷರಾಗಿ ಅದರ ಪ್ರಯೋಜನೆಗಳು ಖಂಡಿತ ಶಾಸಕರು ಮತ್ತು ನಿರ್ದೇಶಕರು ಪಡೆದುಕೊಳ್ಳುತ್ತಿದ್ದಾರೆ ಮತ್ತು ಪಡೆದುಕೊಳ್ಳುತ್ತಾರೆ. ಕಂಪ್ಯೂಟರ್ ರಿಪೇರಿ ಎಂದು ೨೦ಲಕ್ಷ್ಯ ಖರ್ಚು ಆಗಿದೆ ಎಂದರೆ ಖಾರ್ಕಾನೆ ( ದುರು)ಉಪಯೋಗ ಇದೆ ಎಂದರ್ಥ! ಇದು ಅಧ್ಯಕ್ಷರ ಗಮನಕ್ಕೆ ಬಂದಿರಲಿಕ್ಕೆ ಬೇಕು ಇಂಥಹ ಸೋರಿಕೆ ತಡೆಗಟ್ಟುವುದು ಅತಿ ಮುಖ್ಯ! ಕರೋನ ಸಮಯದಲ್ಲಿ ಖಾರ್ಕಾನೆ ಸಾಲಿನ ಸುಳಿಯಲ್ಲಿ ಇದ್ದರೂ ಖಾರ್ಕಾನೆ ಹೆಸರಿನಲ್ಲಿ ಸಾಲ ಮಾಡಿ ೧೦ ಲಕ್ಷ್ಯ ಜಿಲ್ಲಾಧಿಕಾರಿಗಳಿಗೆ ಕೊಟ್ಟು ಫೋಟೋ ಪೋಸ್ ಕೊಡುವುದು ಬೇಕಿರಲಿಲ್ಲ ಅನಿಸುತ್ತೆ!
೧೯೮೩ರಲ್ಲಿ ಅನುಮತಿ ಪಡೆದುಕೊಂಡ ಒಂದು ಖಾರ್ಕಾನೆ ೨೦೧೩ರ ನಂತರ ದೂಳಿನಿಂದ ಎದ್ದು ಪ್ರಾರಂಭ ಹಂತಕ್ಕೆ ಬಂದು ನಿಲ್ಲುವಲ್ಲಿ ಇಂದಿನ ಅಧ್ಯಕ್ಷರ ಎಂದ್ರೆ ಇಂಡಿ ಶಾಸಕರಾದ ಯಶವಂತರಾಯ ಪಾಟೀಲರಿಗೆ ಸಲ್ಲುತ್ತೆ ಆದರೆ ಸಾಲ ಮಾಡಿ ಪ್ರಾರಂಭ ಮಾಡಿ ಅದನ್ನು ಬೇರೆ ಖಾರ್ಕಾನೆಗಳ ತರಹ ಲಾಭಮಾಡಿಸುವಲ್ಲಿ ಸಫಲವಾದರೆ ಈ ಭಾಗದ ರೈತರಿಗೆ ನಿಜವಾಗಿ ಅನುಕೂಲವಾಗುತ್ತೆ. ಸ್ಪಿರಿಟಿ ಉತ್ಪಾಧನೆ , ಇಥೆನಾಲ್ ತಯಾರಿಸಲು ಅನುಮತಿ ಪಡೆದುಕೊಂಡರೆ ಸಾಲವನ್ನು ತೀರಿಸುವ ಶಕ್ತಿ ಖಂಡಿತ ಬರುತ್ತೆ. ಇನ್ನಷ್ಟು ಕ್ರಿಯಾತ್ಮಕವಾಗಿ ಯೋಚನೆಮಾಡಿ ಲಾಭದತ್ತ ಕೊಂಡಯ್ದರೆ ಖಂಡಿತ ರಾಜಕೀಯವಾಗಿ ಲಾಭ ಆಗುವದಲ್ಲದೆ ಭೀಮಾತೀರದಲ್ಲಿ ಒಂದು ಒಳ್ಳೆಯ ಖಾರ್ಕಾನೆ ಕಟ್ಟಿದ ಶ್ರೇಯಸ್ಸು ಸಲ್ಲುತ್ತೆ!
Categories: Articles
