Articles

ಬೆಳಗಾವಿ ರಾಜಕೀಯ ಸಂಘರ್ಷ!

ಕಳೆದ ಬಾರಿ ಸುಮಾರು ೧೮೦೦ ಮತಗಳಿಂದ ಸೋತಿದ್ದ ಲಕ್ಷಣ ಸವದಿಯವರು ಸೋಲು ರಮೇಶ್ ಜಾರಕಿಹೊಳಿ ನನ್ನಿಂದಲೇ ಆದ ಸೋಲು ಎಂದು ಸಂಭ್ರಮ ಪಟ್ಟಿದ್ದು ಸುಳ್ಳಲ್ಲ. ನೈಜ ಚಿತ್ರಣ ಅಲ್ಲಿ ಲಕ್ಷಣ ಸವದಿಯವರ ಅತಿಯಾದ ಆತ್ಮವಿಶ್ವಾಸದಿಂದ ಆದ ಸೋಲು. ಅವರು ತಮ್ಮ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಲೇ ಇಲ್ಲ. ಕೇವಲ ಅವರ ಬೆಂಬಲಿಗರು ನಿಂತು ಚುನಾವಣೆ ಮಾಡಿದ್ದರು. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಸಣ್ಣ ಪ್ರಮಾಣದ ಮತಗಳಿಂದ ಸೋತರು. ಆದರೆ ಬದಲಾದ ಸನ್ನಿವೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ೪೦ ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು. ಲಕ್ಷಣ ಸವದಿಯವರಿಗೆ ಉಪಮುಖ್ಯಮಂತ್ರಿ ಪಟ್ಟ ಅದಕ್ಕೆ ಬಂದವರಿಗೆ ಟಿಕೆಟ್ ಕೊಡುವ ಭರವಸೆ ಕೊಟ್ಟಿದ್ದೇವೆ ಎಂದು ಅತಿ ಚಾಣಾಕ್ಷ ದಾಳ ಉರಿಳಿಸಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಪಕ್ಷದ ಆದೇಶದಕ್ಕೆ ಮನ್ನಣೆ ಕೊಟ್ಟು ಸವದಿಯವರು ಉಸ್ತುವಾರಿ ಹೊತ್ತು ಗೆಲುವು ತಂದುಕೊಟ್ಟಿದ್ದರು. ಸರ್ಕಾರ ರಚನೆ ಆದ ನಂತರ ಸವದಿಯವರು ಉಪಮುಖ್ಯಮಂತ್ರಿಯಾಗಿದ್ದು ರಮೇಶ್ ಜಾರಕಿಹೊಳಿ ಕಣ್ಣು ಕೆಂಪಾಗಿದ್ದು ಸುಳ್ಳಲ್ಲ. ಆದರೆ ವಿಧಿ ಇರಲಿಲ್ಲ.

ಇತ್ತ ಗೋಕಾಕದಲ್ಲಿ ಸ್ವತಃ ಯಡಿಯೂರಪ್ಪ ತಮ್ಮ ಸರ್ಕಾರ ಬರುವುದಕ್ಕೆ ಕಾರಣೀಭೂತರಾದ ರಮೇಶ್ ಜಾರಕಿಹೊಳಿಯನ್ನು ಗೆಲ್ಲಿಸಲೇಬೇಕು ಎಂದು ಚುನಾವಣೆ ನೀತಿ ಸಂಹಿತೆ ದಿಕ್ಕರಿಸಿ ಲಿಂಗಾಯತರು ಕೈಹಿಡಿಬೇಕು ಎಂದು ಅನುಕಂಪದ ಅಲೆಯನ್ನು ಎಬ್ಬಿಸಿದರು. ಇಲ್ಲಿಯವರೆಗೆ ಯಾವದೇ ಚುನಾವಣೆಗೆ ಪ್ರಚಾರಕ್ಕೂ ಹೋಗದ ರಮೇಶ್ ಉಪಚುನಾವಣೆಯಲ್ಲಿ ತಿರುಗಾಡಿ ಪ್ರಚಾರ ಮಾಡಿದ್ದು ಇದೆ. ಇದರ ಹಿಂದಿನ ಚುನಾವಣೆಯಲ್ಲಿ ಇವರ ಪ್ರಬಲ ವಿರೋಧಿ ಅಶೋಕ ಪೂಜಾರಿ ವಿರುದ್ಧ ೧೫ ಸಾವಿರ ಮತಗಳಿಂದ ಗೆದ್ದಿದ್ದರು. ಆದರೆ ಅಣ್ಣ ತಮ್ಮರ ರಾಜಕೀಯ ದಾಳಕ್ಕೆ ಈ ಬಾರಿ ಲಖನ್ ವಿರೋಧಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇದೆಲ್ಲವೂ ಮೊದಲೇ ಊಹಿಸಿದ್ದ ಕಿತ್ತೂರ್ ರಾಣಿ ಚೆನ್ನಮ್ಮ ಎಂದೇ ಕರೆಯಬೇಕು ಅವರಿಗೆ ಲಕ್ಮಿ ಹೆಬ್ಬಾಳ್ಕರ್ ಗೋಕಾಕ್ ಕಡೆಗೆ ತಲೇನೆ ಹಾಕಲಿಲ್ಲ. ಡಿಕೆಶಿ ಮತ್ತು ಸಿದ್ದು ಸುಮ್ಮನೆ ಬಂದು ಹೋದರು. ಇದರ ಫಲಿತಾಂಶ ೨೯ ಸಾವಿರ ಮತಗಳ ಅಂತರ ಗೆಲುವು. ಕಾಂಗ್ರೇಸ್ ಪಕ್ಷದಿಂದ ಅಶೋಕ್ ಪೂಜಾರಿಗೆ ಟಿಕೆಟ್ ಕೊಟ್ಟು ಹಾಲುಮತ, ಅಲ್ಪಸಂಖ್ಯಾತರ ಮತ್ತು ಬಸವಾದಿ ಶರಣರು ಕೈಹಿಡಿದಿದ್ದರೇ ರಮೇಶ್ ಅವರಿಗೆ ಗೆಲ್ಲುವುದೇ ಕಷ್ಟವಾಗುತ್ತಿತ್ತು. ಅದೇ ಉದ್ದೇಶದಿಂದ ೨೦೨೩ಕ್ಕೆ ಅನುಕೂಲವಾಗಲಿ ಎಂದು ಅಶೋಕ್ ಪೂಜಾರಿಯನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಕಾದು ನೋಡಬೇಕು ಮುಂದಿನ ರಣನೀತಿ! ಇದೆಲ್ಲವೂ ಬಿಟ್ಟು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ ಅವರೇ ಗೋಕಾಕ್ನಿಂದ ಸ್ಪರ್ಧೆ ಮಾಡಿದರೇ ಆಟ ಇನ್ನು ಕುತೂಹಲವಾಗುವದಂತು ಖಂಡಿತ. ಗ್ರಾಮೀಣ ಕ್ಷೇತ್ರಕ್ಕೆ ಹೋಗಿ ಕೋಟಿ ಕೋಟಿ ಕೊಡುತ್ತೇನೆ ಲಕ್ಷ್ಮಿ ಹೆಬ್ಬಾಳ್ಕರನ್ನು ಸೋಲಿಸಿ ಎಂದು ಹಿಂದೊಮ್ಮೆ ಕರೆಕೊಟ್ಟಿದ್ದರು. ವಿಧಾನ ಪರಿಷತ್ತು ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದಿದ್ದರು.

ಬೆಳಗಾವಿಯ ಲೋಕಸಭೆಯಲ್ಲಿ ಯಾವತ್ತೂ ಬಿಜೆಪಿಯ ಪಾರುಪತ್ಯ! ಅಂಥಹ ಚಾರ್ಮ್ ಇಟ್ಟುಕೊಂಡಿದ್ದ ಅಂಗಡಿ ನಿಧನದ ನಂತರ ಸತೀಶ್ ಜಾರಕಿಹೊಳಿ ಉಪಚುನಾವಣೆಗೆ ಸ್ಫರ್ಧೆಮಾಡಿದ್ದು ಗೆಲ್ಲುವ ಸಲುವಾಗಿ ಇರಲಿಲ್ಲ. ಕಾಂಗ್ರೇಸ್ ಪಕ್ಷ ಒಳ್ಳೆಯ ಸ್ಪರ್ಧೆ ಕೊಡಲಿ ಮತ್ತು ಮುಂದಿನ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ಫಿಕ್ಸ್ ಮಾಡುವ ಮುಂದಾಲೋಚನೆ. ಆದರೆ ಫಲಿತಾಂಶ ಬಂದಾಗ ಆಗಿದ್ದೆ ಬೇರೆ.. ಬಿಜೆಪಿಗೆ ಅಭಯ ಪಾಟೀಲ್ ಅವರ ಕ್ಷೇತ್ರ ಮತ್ತು ಗೋಕಾಕದಲ್ಲಿ ಮಾತ್ರ ಮುನ್ನಡೆ ಬಂದಿತ್ತು. ಬಿಜೆಪಿಯ ಭದ್ರಕೋಟೆ ಅರಭಾವಿಯಲ್ಲಿ ಸಹ ಕಾಂಗ್ರೇಸ್ ಮುನ್ನಡೆ ಪಡೆದಿತ್ತು. ಗೋಕಾಕ ಮಂಗಳಾ ಅಂಗಡಿಯವರ ತವರುಮನೆ ಮತ್ತು ರಮೇಶ್ ಅವರ ಬೆಂಬಲದಿಂದ ಬಿಜೆಪಿ ಮುನ್ನಡೆ ಪಡೆದಿತ್ತು. ಅದೇ ತಾನೇ ಸಿಡಿ ಕೇಸ್ನಿಂದ ಹೈರಾಣಾಗಿದ್ದ ರಮೇಶ್ ಜಾರಕಿಹೊಳಿಯವರಿಗೆ ಬೇರೆ ದಾರಿ ತೋಚದೆ ತಮ್ಮನ ವಿರುದ್ದ ತೊಡೆತಟ್ಟಿದ್ದು ಅವರ ಮೇಲಿನ ವಿಶ್ವಾಸ ಮತ್ತು ನಂಬಿಕೆ ಇಮ್ಮಡಿ ಮಾಡಿತ್ತು.

ಇದಕ್ಕೂ ಮೊದಲು ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಿರಿಯರ ಮಧ್ಯಸ್ಥಿಕೆಯಲ್ಲಿ ಸಂಘರ್ಷವನ್ನು ತಪ್ಪಿಸಿದ್ದು ಬಿಜೆಪಿಯ ದೊಡ್ಡ ಸಾಧನೆ. ಡಿಸಿಸಿ ಚುನಾವಣೆಗೆ ಬಂದರೇ ಮೊದಲಿಂದಲೂ ಇಲ್ಲಿ ಸವದಿ ಮತ್ತು ಕತ್ತಿ ಗುಂಪಿನ ನಡುವೆ ವೈಮನಸ್ಸು. ಇದು ದೊಡ್ಡ ಮಟ್ಟದಲ್ಲಿ ಬೆಳೆದರೆ ಪಕ್ಷಕ್ಕೆ ಹಾನಿ ಎಂದು ಹಿರಿಯರು ಇದಕ್ಕೆ ಸರಿಯಾದ ಮಲಾಮು ಹಚ್ಚಿದ್ದರು.

ಮತ್ತೊಂದು ಕಡೆ ಉಮೇಶ್ ಕತ್ತಿ ಹಿರಿಯ ರಾಜಕಾರಣಿ , ಹುಕ್ಕೇರಿಯಲ್ಲಿ ಯಾವತ್ತೂ ಸೋಲನ್ನೇ ಕಾಣದ ಸೋಲಿಲ್ಲದ ಸರದಾರ. ಜಿಲ್ಲೆಯ ಪ್ರಮುಖ ಮಂತ್ರಿ ಬೇರೆ ಹೆಚ್ಚು ಕಮ್ಮಿ ಅವರ ನೇತೃತ್ವದಲ್ಲೇ ನಡೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತರು. ರಾಷ್ಟ್ರೀಯ ಪಕ್ಷದ ಒಬ್ಬ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ ಜೊತೆ ಪೈಪೋಟಿ ಮಾಡದೆ ಸೋಲುವುದು ಬೆಳಗಾವಿ ನಾಯಕರಲ್ಲಿ ಇರಿಸು ಮುರಿಸು ತರಿಸಿದ್ದು ಸುಳ್ಳಲ್ಲ. ಹಾಗೆ ಪರಿಷತ್ತಿನ ಮತಗಳ ಲೆಕ್ಕ ಹಾಕಿದರೆ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಕ್ಷೇತ್ರದಲ್ಲಿ ಅಂದಾಜು ಒಟ್ಟು ೧೦೦ ಮತಗಳು ಬಿಜೆಪಿಗೆ ಬಂದಿವೆ. ಪಕ್ಷೇತರ ಅಭ್ಯರ್ಥಿಗೆ ಸುಮಾರು ೮೦೦ ಮತಗಳು ಬಂದಿವೆ. ಬೇರೆ ಬಿಜೆಪಿಯವರ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗೆ ಮತಗಳು ಬಂದಿವೆ. ಸಭೆ ಮಾಡಿದ ಶಾಸಕರ ವಾದ ನಾವು ಪಕ್ಷದ ಅಭ್ಯರ್ಥಿ ಜೊತೆ ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿ ಕಾಂಗ್ರೇಸ್ ಸೋಲಿಸುವ ಉದ್ದೇಶವಿತ್ತು. ಆದರೆ ನಿಮ್ಮ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತಗಳೇ ಬಂದಿಲ್ಲ ! ಇದು ಸಭೆ ಮಾಡಿದವರ ದೂರು. ಮತ್ತೊಂದು ಕಡೆ ಲಕ್ಷಣ ಸವದಿ ಯವರ ಕ್ಷೇತ್ರಲ್ಲೇ ರಾಜಕೀಯ ಮಾಡುತ್ತಿರುವುದು ಸವದಿಯವರ ದೂರು.

ಒಂದು ಕಡೆ ರಮೇಶ್ ಅಥಣಿಯಲ್ಲಿ ಸಂಘಟನೆ ಮಾಡುವುದು, ಪರಿಷತ್ತು ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮತ್ತು ಸರ್ಕಾರ ರಚನೆ ಮಾಡುವದಕ್ಕೆ ಸಹಾಯ ಮಾಡಿದ ಒಂದೇ ಕಾರಣಕ್ಕೆ ಬೇರೆ ಹಿರಿಯ ನಾಯಕರು ಹೇಳಿದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಇದಲ್ಲೆವು ಅಳೆದು ತೂಗಿ ಬೆಳಗಾವಿಯ ಹಿರಿಯ ನಾಯಕರು ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಸಭೆ ನಡೆಸಿ ಬೆಳಗಾವಿ ಸಂಘರ್ಷಕ್ಕೆ ಶಂಖ ಊದಿದ್ದಾರೆ. ಅದು ರಾಜ್ಯದ ಮುಖ್ಯಮಂತ್ರಿಯವರಿಗೂ ತಲುಪಿದೆ. ಲೋಕಸಭೆಯಲ್ಲೂ ಮತ್ತು ವಿಧಾನ ಪರಿಷತ್ತಿನಲ್ಲಿ ಅರಬಾವಿ ಕ್ಷೇತ್ರದಿಂದ ಬಿಜೆಪಿಗೆ ಹೊಡೆತ ಕೊಟ್ಟಿದ್ದರೂ ಎಲ್ಲರೂ ಒಂದಾಗಿ ಹೋಗೋಣ ಎಂದು ತೇಪೆ ಹಚ್ಚುವ ಕೆಲಸ ಅರಭಾವಿ ಶಾಸಕರಿಂದ ಆಗುತ್ತಿದೆ ಎಂದು ಜನರ ಭಾವನೆ.

ಬೆಳಗಾವಿ ಸಂಘರ್ಷ ಸದ್ಯಕ್ಕೆ ನಿಲ್ಲುವುದು ಕಷ್ಟಸಾಧ್ಯ ಕಾರಣ ಚುನಾವಣೆ ಕೇವಲ ೧ ವರ್ಷ ೩ ತಿಂಗಳು ಈ ಸಮಯದಲ್ಲೇ ಪಕ್ಷಾಂತರ ಆಗುವ ಕಾಲ! ವ್ಯಯಕ್ತಿಕ ದ್ವೇಷದಿಂದ ಬೇರೆ ಪಕ್ಷದ ಕದ ತಟ್ಟುವ ಕಾಲ ಮತ್ತು ಒಬ್ಬರ ಕಾಲು ಮತ್ತೊಬ್ಬರು ಎಳೆಯುವ ಬರದಲ್ಲಿ ಬೇರೆ ಪಕ್ಷದವರ ಸಹಾಯ ಪಡೆಯುವ ಕಾತುರ! ಯಡಿಯೂರಪ್ಪನವರ ಅನುಪಸ್ಥಿತಿಯಲ್ಲಿ ಬಿಜೆಪಿ ಮತ್ತೆ ೨೦೨೩ಕ್ಕೆ ಅಧಿಕಾರಕ್ಕೆ ಬರುತ್ತೆ ಎನ್ನವುದು ಸ್ವತಃ ಬಿಜೆಪಿ ಶಾಸಕರಿಗೆ ವಿಶ್ವಾಸವಿಲ್ಲ ಆದ್ದರಿಂದಲೇ ಕಾಂಗ್ರೆಸ್ನವರು ನಮ್ಮ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಕಾಂಗ್ರೆಸ್ನವರು ಅಷ್ಟೇ ಅಲ್ಲ ಬಿಜೆಪಿಯ ಶಾಸಕರೇ ಹೇಳಿದ ಮಾತಿಗೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ನಾನು ೨೦ ಶಾಸಕರು ಕರೆದುಕೊಂಡು ಬರುತ್ತೇನೆ , ನಾನೇನು ಕಡಿಮೆ ಎಂದು ನಾನು ೧೫ ಶಾಸಕರು ಕರೆದುಕೊಂಡು ಬರುತ್ತೇನೆ ಎಂದು ಹೇಳುವ ನಾಯಕರಿಗೆ ಗೊತ್ತಿರಲಿ(ಕಾಂಗ್ರೇಸ್ ಅಥವಾ ಬಿಜೆಪಿ ನಾಯಕರೇ ಇರಲಿ) ನಿಮ್ಮ ನಂಬಿ ಶಾಸಕರು ಬರುವದಿಲ್ಲ ನಿಮ್ಮ ಹಿಂದೆ ಇರುವ ರಾಜ್ಯ ಮಟ್ಟದ ನಾಯಕರನ್ನು ನೋಡಿ ಬರುತ್ತಾರೆ ಅದಕ್ಕೆ ನಿಮ್ಮ ಇತಿಮಿತಿಯಲ್ಲಿ ಮಾತನಾಡಿದರೆ ನಿಮ್ಮ ವ್ಯಕ್ತಿತ್ವಕ್ಕೂ ಒಳ್ಳೆಯದು. ಅಷ್ಟೊಂದು ಶಕ್ತಿ ನಿಮಗಿದ್ದರೇ ಒಂದು ಪಕ್ಷ ಕಟ್ಟಿ ಸರ್ಕಾರ ರಚನೆ ಮಾಡಬಹುದಲ್ವೆ?

ಮುಂಬರುವ ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಬೇಕಾದರೆ ಸದ್ಯ ನಡೆಯುತ್ತಿರುವ ಬೆಳಗಾವಿಯ ಸಂಘರ್ಷಕ್ಕೆ ಶಾಂತಿ ಮಂತ್ರ ಪಠಿಸುವದಲ್ಲದೆ ಪಕ್ಷ ವಿರೋಧಿಗಳಿಗೆ ತಕ್ಕ ಪಾಠ ಕಲಿಸದೇ ಇದ್ದರೇ ಖಂಡಿತ ಪಕ್ಷಕ್ಕೆ ಹಾನಿ ಎಂದು ಬೆಳಗಾವಿಯ ಕಾರ್ಯಕರ್ತರ ಅಳಲು.

Categories: Articles

Leave a Reply