
ಜಗಮೋಹನ್ ರೆಡ್ಡಿ ಕಾಂಗ್ರೇಸ್ನಿಂದ ದೂರವಾಗಿ ಸ್ವಂತ ಪಕ್ಷ ಕಟ್ಟಿ ಆಂಧ್ರದ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಮಹಾರಾಷ್ಟ್ರದ ಶರದ್ ಪವಾರ ಕಾಂಗ್ರೆಸ್ನಿಂದ ಹೊರಹೋಗಿ ರಾಷ್ಟೀಯ ಕಾಂಗ್ರೇಸ್ ಪಕ್ಷ ಸ್ಥಾಪನೆ ಮಾಡಿದ್ದು ಕಂಡಿದ್ದೇವೆ. ಮಧ್ಯಪ್ರೆದೇಶದಲ್ಲಿ ಸಿಂಧಿಯಾ,ಸಂಗ್ಮಾ, ಕೃಷ್ಣಾ ಕರ್ನಾಟಕದಲ್ಲಿ ಹೀಗೆ ಅನೇಕ ಬಲಾಢ್ಯ ನಾಯಕರು ಕಾಂಗ್ರೆಸ್ನಿಂದ ವಿಮುಖರಾಗಿದ್ದು ಕಾಂಗ್ರೇಸ್ ಹೈಕಮಾಂಡ್ ನಡವಳಿಕೆ. ೧೯೪೭ ಸ್ವತಂತ್ರ ಸಿಕ್ಕಿದ ಮೇಲೆ ಕಾಂಗ್ರೇಸ್ ರಾಜಕೀಯ ಪಕ್ಷವಾಗಿ ಉಪಯೋಗಮಾಡಬೇಡಿ ಎಂದು ಹೇಳಿದರೂ ಅದನ್ನೇ ರಾಜಕೀಯ ಪಕ್ಷವಾಗಿ ಮಾಡಿಕೊಂಡು ಭರ್ಜರಿ ಜಯಗಳಿಸಿ ದೇಶದ ಚುಕ್ಕಾಣಿ ಹಿಡಿದವರು ನೆಹರು ಮನೆತನದವರು. ಅಂದು ಕಾಂಗ್ರೇಸ್ ಎಂದರೆ ಪಕ್ಷಕ್ಕಿಂತ ದೇಶದ ಎಲ್ಲ ವರ್ಗದ ಜನರು ಭಾಗಿಯಾಗಿ ಸ್ವತಂತ್ರ ಸಲುವಾಗಿ ಹೋರಾಡಿದ್ದು ಕಾಂಗ್ರೇಸ್ ಮೂಲಕ. ಆದರೆ ಅದನ್ನೇ ಒಂದು ಪಕ್ಷವಾಗಿ ಪರಿವರ್ತಿಸಿದಾಗ ಅನಾಯಾಸವಾಗಿ ಗೆಲುವು ದಕ್ಕಿದ್ದು ನಿರೀಕ್ಷಿತ. ಬೇರು ಮಟ್ಟದಿಂದ ಪಕ್ಷವೇನು ಕಟ್ಟಲಿಲ್ಲ, ಕಾರ್ಯಕರ್ತರನ್ನು ಒಟ್ಟುಗೂಡಿಸಲಿಲ್ಲ. ಮೊದಲೇ ಸ್ವಯಂಪ್ರೇರಿತರಾಗಿ ಕಾಂಗ್ರೇಸ್ ಗೆ ಸ್ವಾತಂತ್ರ್ಯ ಸಲುವಾಗಿ ಸೇರಿದ ಜನರು ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಿದರು.
ಭರ್ಜರಿ ಜಯಗಳಿಸಿ ಖುರ್ಚಿಯಲ್ಲಿ ಕುಳಿತು ರಾಜ್ಯಭಾರ ಮಾಡಿದವರು ಯಾವತ್ತೂ ಕೆಳಗಿನ ನಾಯಕರಿಗೆ ಕರೆದು ಮಣೆ ಹಾಕಿದ ಉಧಾಹರಣೆ ಇಲ್ಲವೇ ಇಲ್ಲ. ಏನಿದ್ದರೂ ಅವರಿಗೆ ಬಕೆಟ್ ಹಿಡಿದವರಿಗೆ ಬೇಕಾದ ಅಧಿಕಾರವನ್ನು ಕೊಟ್ಟಿದ್ದರು. ಪಕ್ಷದಲ್ಲಿ ಪ್ರಜಾಪ್ರಭುತ್ವ ಮತ್ತು ಮೆರಿಟ್ ಮಾಯವಾಗಿತ್ತು. ಆದರೆ ದೇಶದ ಜನರಿಗೆ ನೆಹರು ಮನೆತನದ ಮೇಲೆ ಅಪಾರ ನಂಬಿಕೆ ಮತ್ತು ಕಾಂಗ್ರೇಸ್ ಪಕ್ಷಕ್ಕೆ ಪರ್ಯಾಯವಾದ ಯಾವದೇ ಪಕ್ಷಗಳು ಇರಲಿಲ್ಲ ಮತ್ತು ತಪ್ಪುಗಳು ಆಗುತ್ತಿದ್ದರೂ ಸುಮ್ಮನೆ ಕೂಡುವ ಕಾಲ! ಕಾರಣ ಅದೇ ತಾನೇ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿತ್ತು ಜಗಳಾಡಿದರೆ ವಿಶ್ವದ ಮುಂದೆ ಭಾರತೀಯರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದರೆ ಮರ್ಯಾದೆ ಹೋಗುತ್ತದೆ ಎಂದು ಕೆಲ ಕಾಲ ಸುಮ್ಮನೆ ಇದ್ದರು. ಇವರ ಏಕಚಕ್ರಾಧಿಪತ್ಯ ನೋಡಿ ನೋಡಿ ಬೇಸರವಾಗಿ ಅನೇಕರು ಕಾಂಗ್ರೇಸ್ನಿಂದ ಹೊರಗೆ ಬಂದು ಜನತಾ ಪಕ್ಷಕ್ಕೆ ಸಾತ್ ಕೊಟ್ಟಿದ್ದರು ಅದರ ಫಲವೇ ಕಾಂಗ್ರೇಸಿನ ಪ್ರಪಥಮ ಸೋಲಾಗಿತ್ತು. ಮುಂದೆ ಕಾಂಗ್ರೇಸ್ ಅಧಿಕಾರಕ್ಕೆ ಬಂದಿದ್ದು ಅದರ ಅಭಿವೃದ್ಧಿ ಕಾರ್ಯದಿಂದ ಅಲ್ಲವೇ ಅಲ್ಲ. ಬಂದಿದ್ದು ಪರ್ಯಾಯ ನಾಯಕರ ಒಳಜಗಳ! ಒಂದಿಷ್ಟು ಕೆಲಸಗಳ ಬಗ್ಗೆ ಪ್ರಸ್ತಾಪ ಮಾಡಲೇಬೇಕು ಅದುವೇ ಅಳುವವನೇ ಒಡೆಯ ಮತ್ತು ಗರಿಬೊ ಹಟಾವೋ. ತಕ್ಕ ಮಟ್ಟಿಗೆ ಬಡವರ ಪರವಾದ ಕೆಲಸಗಳು. ಇವುಗಳೇ ಒಂದು ಮಟ್ಟಿಗೆ ಕಾಂಗ್ರೇಸ್ ಕೈಹಿಡಿದ್ದವು. ಹಾಳೂರಲ್ಲಿ ಉಳಿದವನೇ ಗೌಡ ಎನ್ನುವ ಹಾಗೆ ಪರ್ಯಾಯ ನಾಯಕರ ಒಗ್ಗಟ್ಟಿನ ಪ್ರತಿಫಲ ಮತ್ತೆ ಕಾಂಗ್ರೇಸ್’ಅಧಿಕಾರಕ್ಕಾಗಿ ಬಂದಿತು.
೧೯೫೨ರಿಂದ ೧೯೭೧ರ ವರೆಗೆ ಕಾಂಗ್ರೇಸ್ ಪಕ್ಷ ಫುಲ್ ಮೆಜಾರಿಟಿ ಮೂಲಕ ಸರ್ಕಾರ ಮಾಡಿದ್ದು. ೧೯೭೭ರಲ್ಲಿ ಜನತಾ ಪಕ್ಷ ಪೂರ್ಣ ಬಹುಮತದೊಂದಿಗೆ ಸರ್ಕಾರ ಮಾಡಿತ್ತು. ೧೯೭೧ ರ ನಂತರ ೧೯೮೦ ಮತ್ತು ೧೯೮೪ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಪೂರ್ಣಬಹುತದೊಂದಿಗೆ ಸರ್ಕಾರ ಮಾಡಿತ್ತು. ಆದರೆ ೧೯೮೪ ರ ನಂತರ ಕಾಂಗ್ರೇಸ್ ನಾಲ್ಕು ಬಾರಿ ಸರ್ಕಾರ ರಚನೆ ಮಾಡಿದರೂ ಪೂರ್ಣಬಹುಮತ ಬಂದಿರಲಿಲ್ಲ. ೧೯೫೨ರಿಂದ ೨೦೧೪ರವರೆಗೆ ಕಾಂಗ್ರೇಸಿನ ನಾಯಕರು ಪಕ್ಷ ಬಿಟ್ಟರೂ ಯಾವತ್ತೂ ಹೈಕಮಾಂಡ್ ತನ್ನ ತಪ್ಪನ್ನೇ ತಿದ್ದಿಕೊಳ್ಳಲಿಲ್ಲ. ಯಾವತ್ತೂ ಹೈಕಮಾಂಡ್ ಪಕ್ಷದ ಸಂಘಟನೆಗೆ ಒತ್ತುಕೊಟ್ಟ ಉಧಾಹರಣೆ ಇಲ್ಲ. ಒಂದು ಸಮಸ್ಸೆಯನ್ನು ಜನರ ಮುಂದೆ ಇಟ್ಟು ಜನರ ಪ್ರೀತಿವಿಶ್ವಾಸ ಗಳಿಸಿದ್ದು ತೀರಾ ವಿರಳ , ಯಾವದು ಇಲ್ಲ ಎಂದರೇ ಒಳಿತು! ಪೂರ್ಣ ಬಹುಮತವಿದ್ದಾಗ ೧೦೦ಕ್ಕಿಂತ ಹೆಚ್ಚು ಬಾರಿಗೆ ರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದು ಜನರು ಮರೆತಿಲ್ಲ. ೧೯೭೭ರ ತುರ್ತು ಪರಿಸ್ಥಿತಿ ನೆನಪಾದರೆ ದೇಶದಲ್ಲಿ ಇದ್ದದ್ದು ಪ್ರಜಾಪ್ರಭುತ್ವ ಅಲ್ಲ ಕುಟುಂಬ ರಾಜಕಾರಣ. ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಯಾರೇ ಇದ್ದರೂ ಅದರ ಫುಲ್ ಕಂಟ್ರೋಲ್ ನೆಹರು ಮನೆತನದಲ್ಲೇ ಇತ್ತು. ಇಂದಿಗೂ ಅಲ್ಲೇ ಇದೆ.
೨೦೧೪ರ ನಂತರ ದೇಶದಲ್ಲಿ ಭರಪೂರ ಬದಲಾವಣೆ ಗಾಳಿ ಬಿಸಿತ್ತು. ಎಷ್ಟರ ಮಟ್ಟಿಗೆ ಬಿಸಿತ್ತು ಎಂದರೇ ರಾಜಕೀಯ ಪಂಡಿತ ನಮ್ಮ ಮಾಜಿ ಪ್ರಧಾನಿ ದೇವೇಗೌಡರು ಮೋದಿ ಪ್ರಧಾನಿಯಾದರೆ ನಾನು ದೇಶಬಿಟ್ಟು ಹೋಗುತ್ತೇನೆ. ಅವರು ಹೇಳುವದಕ್ಕೆ ಒಂದು ಕಾರಣವಿತ್ತು. ದೇಶದಲ್ಲಿ ಕಾಂಗ್ರೇಸಿನ ಬೇರು ಅತಿ ತಳಕ್ಕೆ ಹೋಗಿವೆ, ಎಷ್ಟೇ ಭ್ರಷ್ಟಾಚಾರ ಮಾಡಿದರೂ ಒಂದಿಷ್ಟು ಜನ ಖಂಡಿತ ಅವರಿಗೆ ಮತ ಹಾಕುತ್ತಾರೆ, ಬಿಜೆಪಿ ದೊಡ್ಡ ಪಕ್ಷವಾಗಿ ಬಂದರೂ ಮೋದಿಗೆ ಪ್ರಧಾನಿ ಹುದ್ದೆ ದೊರೆಯುದಿಲ್ಲ ಎಂದು ಹೇಳಿದ್ದು. ಆದರೆ ಜನ ಪೂರ್ಣ ಬದಲಾವಣೆ ಬಯಸಿದ್ದರು ಜಾತಿ ಮೀರಿ , ಭಾಷೆ ಮೀರಿ ಬಿಜೆಪಿಗೆ ಬಹುಮತ ಕೊಟ್ಟರು. ಭಾರತೀಯ ಇತಿಹಾಸದಲ್ಲಿ ಮೊಟ್ಟ ಮೊಟ್ಟ ಮೊದಲ ಬಾರಿಗೆ ಕಾಂಗ್ರೇಸ್ ಎರಡಂಕಿಗೆ ಹೋಗಿತ್ತು. ಆದರೂ ಪಕ್ಷ ತನ್ನ ತಪ್ಪನ್ನು ಹುಡುಕುವ ಗೋಜಿಗೆ ಹೋಗಲಿಲ್ಲ. ಅದಕ್ಕೆ ಸಂಘಟನೆ ಮಾಡಿದ ಅನುಭವವೇ ಇಲ್ಲ ಅಲ್ಲವೇ? ೨೦೧೪ರಲ್ಲಿ ಮೋದಿ ಹವಾದಲ್ಲಿ ಗೆದ್ದಿದ್ದಾರೆ ಮುಂದೆ ೨೦೧೯ರಲ್ಲಿ ಮತ್ತೆ ನಾವೇ ಎಂದು ಕುಳಿತರು ಅಷ್ಟೇ. ಅವರು ಮಾಡಿದ ಒಂದೇ ಒಂದು ಪ್ರತಿಭಟನೆ ರಫೇಲ್ ಹಗರಣ. ಕೆಲಸಕ್ಕೆ ಬಾರದ ಹಗರಣವನ್ನು ತಗೆದುಕೊಂಡು ಚುನಾವಣೆ ಗೆಲ್ಲುವುದಕ್ಕೆ ಹೋಗಿ ಕೋರ್ಟ್ನಿಂದ ಚೀಮಾರಿ ಹಾಕಿಕೊಂಡರು. ಇದೆ ಸಮಯದಲ್ಲಿ ಅನೇಕ ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡರೂ ಪಕ್ಷದ ನಾಯಕರನ್ನು ಸುಸ್ಥಿಯಲ್ಲಿ ಇಡಲು ಯಾವದೇ ಪ್ರಯತ್ನ ಮಾಡಲಿಲ್ಲ. ದೊಡ್ಡ ದೊಡ್ಡ ನಾಯಕರು ಭೇಟಿ ಮಾಡಲು ೨-೩ ದಿವಸ ಕಾಯಬೇಕಿತ್ತು. ಒಂದೊಂದು ಬಾರಿ ಬೇಟಿಯಾಗದೆ ಬಂದಿದ್ದು ಇದೆ. ಇದು ಸರ್ಕಾರ ಇಲ್ಲದಾಗ, ಸರ್ಕಾರ ಇದ್ದಾಗ ಇವರ ಭೇಟಿ ಸಾಧ್ಯವೇ?
ಕಾಂಗ್ರೇಸ್ ಮುಖ್ಯಮಂತ್ರಿ ಆಯ್ಕೆ, ಪದುಚ್ಯುತಿ ಹೇಗಿತ್ತು ಎಂದರೇ ಹೈಕಮಾಂಡ್ ಲಕೋಟೆ ಕಳಿಸುತಿತ್ತು ಲಕೋಟೆಯಲ್ಲಿ ಇದ್ದವರೇ ಮುಖ್ಯಮಂತ್ರಿ. ಆಯಾ ರಾಜ್ಯದ ಜನರ, ನಾಯಕರ ಅಭಿಪ್ರಾಯ ಪಡೆಯುವ ಗೋಜಿಗೆ ಹೋಗದೆ ತಮಗೆ ಬೇಕಾದವರು ಕಿವಿ ಊದಿದರೆ ಮುಗಿತು ಅದೇ ಫೈನಲ್! ಇದು ಪಕ್ಷವನ್ನು ವೀಕ್ ಮಾಡುತ್ತಾ ಹೋದರೂ ಅದನ್ನು ಕೆಲ ಪಕ್ಷದ ನಾಯಕರು ಗಮನಕ್ಕೆ ತಂದರೆ ಕೇಳುವ ಕಿವಿ ಇರಲಿಲ್ಲ. ಒಂದೊಂದು ಬಾರಿ ಅವರನ್ನೇ ಪಕ್ಷದಿಂದ ಉಚ್ಚಾಟನೆ ಬಹುಮಾನ!
೨೦೧೪ ಮತ್ತು ೨೦೧೯ರಲ್ಲಿ ಕಾಂಗ್ರೇಸ್ಸಿನಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ರಾಹುಲ್ ಆಯ್ಕೆಯಾಗಿದ್ದರು. ಅವರಿಗೆ ಯಾವದೇ ಅನುಭವ ಇರಲಿಲ್ಲ. ಆದರೆ ೧೨ ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಮೋದಿಯವರ ಅನುಭವ ಕೇಳಿದವರು. ೨೦೦೪ರಿಂದ ೨೦೧೪ರ ವರೆಗೆ ಕಾಂಗ್ರೇಸ್ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿ ಅನುಭವ ಪಡೆಯಲು ಅವಕಾಶವಿದ್ದರೂ ಮಂತ್ರಿ ಆಗದೆ ಪ್ರಧಾನ ಮಂತ್ರಿಗೆ ಹೀಗೆ ಮಾಡಬೇಕು ಎಂದು ಹಿಂದಿನಿಂದ ಅಧಿಕಾರ ಚಲಾಯಿಸಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದವರು ಇವರೇ. ಸ್ವತಃ ತಮ್ಮ ಪ್ರಧಾನಮಂತ್ರಿಗಳ ಆದೇಶದ ಪ್ರತಿಯನ್ನು ಹರಿದು ಹಾಕಿ ಅನನುಭವಿ ಎಂದು ಅವರೇ ನಿರೂಪಿಸಿದ್ದರು. ಇತ್ತೀಚಿಕೆ ಪ್ರಶಾಂತ್ ಕಿಶೋರ್ ಒಂದು ಮಾತು ಹೇಳಿದ್ದರು. ಕಾಂಗ್ರೇಸ್ ಪಕ್ಷ ಮೋದಿ ಹೋದ ನಂತರ ಬಿಜೆಪಿ ಬರುವದಿಲ್ಲ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಕುಳಿತಿದ್ದಾರೆ ಅದು ಸಾಧ್ಯವಾಗದ ಕೆಲಸ. ಮತ್ತೆ ಕಾಂಗ್ರೇಸ್ ಅಧಿಕಾರದ ಗದ್ದುಗೆ ಹಿಡಿಯಬೇಕಾಗದರೆ ಪಕ್ಷದ ಸಂಘಟನೆ ಮುಖ್ಯ! ನಾಯಕರನ್ನು ಗಣನೆಗೆ ತಗೆದುಕೊಂಡು ಹೋಗುವುದು ಅನಿವಾರ್ಯ! ಇಂಥಹ ಬೆಳವಣಿಗೆಗಳು ಕಾಂಗ್ರೇಸ್ ಪಕ್ಷದಲ್ಲಿ ನೋಡುವುದು ಕಷ್ಟ ಎಂದಿದ್ದರು.
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಪೂರಕ ವಾತಾವರಣ ಇದೆ ಅದಕ್ಕೆ ಕಾರಣ ಇಲ್ಲಿನ ಸ್ಥಳೀಯ ನಾಯಕರ ಜನಪ್ರಿಯತೆ ಮತ್ತು ಜಾತಿ ಬೆಂಬಲ! ಕೂಸು ಹುಟ್ಟುವಕ್ಕಿಂತ ಮುಂಚೆ ಕುಲಾಯಿ ಹೊಲೆಸಿದರು ಅಂದಂಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಜಗಳ ಪ್ರಾರಂಭವಾಗಿದೆ. ರಾಜ್ಯದಲ್ಲಿ ೨ ಡಝನ್ ನಾಯಕರು ಇದ್ದಾರೆ. ಇವರ ನಡುವೆ ಸಮನ್ವಯ ಕೊರೆತೆ ಇದೆ ಎಂದು ಪಕ್ಷಕ್ಕೆ ಗೊತ್ತಾಗಿದೆ. ಅದಕ್ಕೆ ಇದನ್ನು ಸರಿ ಮಾಡಲು ರಾಜ್ಯದ ಎಲ್ಲಾ ನಾಯಕರನ್ನು ದೆಹಲಿಗೆ ಕರೆಯಿಸಿಕೊಂಡು ಒಂದಿಷ್ಟು ರಣತಂತ್ರ ಹೇಳಿ ಕೊಟ್ಟಿದ್ದಾರೆ. ೧೯೫೨ರಿಂದ ಇಲ್ಲಿಯವರೆಗೆ ಇಂತಹ ಬೆಳವಣಿಗೆ ನಡೆದಿದ್ದು ಅತಿ ವಿರಳ. ಕೆಟ್ಟ ಮೇಲೆ ಬುದ್ದಿ ಬಂದಿದೆ ಎನ್ನುವ ಹಾಗೆ ಎಲ್ಲ ರಾಜ್ಯಗಳಲ್ಲಿ ಕಾಂಗ್ರೇಸ್ ನೆಲಕಚ್ಚಿದೆ ಮತ್ತು ರಾಷ್ಟ್ರದಲ್ಲಿ ಎರಡಂಕಿಗೆ ಸೀಮಿತವಾಗಿದೆ. ಅದಕ್ಕೆ ಮತ್ತೆ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಮೇಲೇಳಲು ಪಕ್ಷ ಸಂಘಟನೆ ಒತ್ತು ಕೊಡುತ್ತಿದೆ ಎಂದು ಅನಿಸಿತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾ ಜೋಡಿ ಇರುವವರಿಗೆ ಸಾಧ್ಯನಾ ಎಂಬುದು ಕಾದು ನೋಡಬೇಕು.
Categories: Articles
