Articles

ಯಾರೂ ನಿರೀಕ್ಷೆ ಮಾಡದ ಜವಾಬ್ದಾರಿ, ವರಿಷ್ಠರ ನಿರ್ಧಾರ ಯಡಿಯೂರಪ್ಪನವರಿಗೆ ಮತ್ತು ಕಾರ್ಯಕರ್ತರಿಗೆ ಭರಪೂರ ಹುಮ್ಮಸ್ಸು ತುಂಬಿದೆ!

ವಯಸ್ಸಿನ ಮಿತಿ ಬಿಎಸ್ವೈಗೆ ಇಲ್ಲ!

ಕೇಂದ್ರ ಸಂಸದೀಯ ಮಂಡಳಿ ಉನ್ನತ ಮಟ್ಟದ ಸಮಿತಿ. ಅದರಲ್ಲೂ ಆಳುವ ಪಕ್ಷದ ಸಂಸದೀಯ ಮಂಡಳಿಗೆ ಇನ್ನೂ ಮಹತ್ವ ಹೆಚ್ಚು! ಪಕ್ಷದ ಎಲ್ಲ ದೊಡ್ಡ ದೊಡ್ಡ ನಿರ್ಧಾರಗಳು ಇದೆ ಮಂಡಳಿ ನಿರ್ಧಾರ ಮಾಡುತ್ತೆ. ಅಂತಹ ಒಂದು ಮಂಡಳಿಯಲ್ಲಿ ಸ್ಥಾನ ಪಡೆಯೋದು ಎಲ್ಲರಿಗೂ ಅಸಾಧ್ಯ! ಇತಿಹಾಸ ತಿರುವಿ ಹಾಕಿ ನೋಡಿದರೆ ಪಕ್ಷದ ಕಟ್ಟಾಳು, ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನ ಸಿಕ್ಕಿದೆ. ಕರ್ನಾಟಕದ ಬಿಜೆಪಿ ಪಕ್ಷದಿಂದ ಅನಂತ ಕುಮಾರ ಬಿಟ್ಟರೆ ಯಡಿಯೂರಪ್ಪನವರೇ ಇಂತಹ ಒಂದು ಸ್ಥಾನ ಗಳಿಸಿದ್ದು(ಸಂಘದಿಂದ ಸಂತೋಷ್). ಬಿಜೆಪಿಯವರೇ ಹಾಕಿಕೊಂಡ ವಯಸ್ಸಿನ ಆಧಾರದಲ್ಲಿ ನೋಡಿದರೆ ೭೫ ವರ್ಷದ ಮೇಲ್ಪಟ್ಟಿನ ಕಾರ್ಯಕರ್ತರನ್ನು ಗಣನೆಗೆ ತಗೆದುಕೊಳುವದಿಲ್ಲ. ಆದರೆ ಯಡಿಯೂರಪ್ಪನವರಿಗೆ 79 ವಯಸ್ಸಾದರೂ ಹುದ್ದೆ ದಕ್ಕಿದೆ!

ಮುಖ್ಯಮಂತ್ರಿ ಬದಲಾವಣೆ, ಸಾಧಿಸಿದ್ದು ಕಡಿಮೆ!

ಹುಟ್ಟು ಹೋರಾಟಗಾರ, ರೈತ ನಾಯಕ ಹೀಗೆ ಅನೇಕರ ನಾಯಕರಾಗಿ ಹೊರಹೊಮ್ಮಿ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಸೇವೆಯನ್ನು ಮಾಡಿದ್ದಾರೆ. ವಯಸ್ಸಿನ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನದಿಂದ ಕೆಳೆಗೆ ಇಳಿದ ಮೇಲೆ ರಾಜ್ಯ ಬಿಜೆಪಿಯಲ್ಲಿ ತಳಮಳ ಶುರುವಾಗಿತ್ತು. ಎಲ್ಲಿ ಲಿಂಗಾಯತರು ಪಕ್ಷದ ವಿರುದ್ದ ಬೀಳುತ್ತಾರೆ ಎಂಬ ಭಯದಲ್ಲಿ ಸದ್ಯ ನಾವು ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡೋಣ ಎಂದು ಸಂಘದವರಲ್ಲದ ಬೊಮ್ಮಾಯಿ ಅವರಿಗೆ ವರಿಷ್ಠರು ಒಪ್ಪಿದರು. ಹಿಂದೊಮ್ಮೆ ಕಾಂಗ್ರೇಸ್ ಪಕ್ಷ ವೀರೇಂದ್ರ ಪಾಟೀಲ್ರನ್ನು ಪದಚ್ಯುತಿ ಮಾಡಿ ಕೈ ಸುಟ್ಟುಕೊಂಡಿತ್ತು. ಅದರ ಅರಿವು ಬಿಜೆಪಿ ಪಕ್ಷಕ್ಕೆ ಇತ್ತು!

ವಯಸ್ಸಾಗಿದೆ ಎಂದು ಮುಖ್ಯಮಂತ್ರಿ ಹುದ್ದೆಯಿಂದ ತಗೆದಿದ್ದು ಬಿಜೆಪಿ ಪಕ್ಷ ಯಡಿಯೂರಪ್ಪನವರನ್ನು ಹೊರಗಿಟ್ಟು ೨೦೨೩ರ ಚುನಾವಣೆ ಎದುರಿಸಲು! ಅವರನ್ನು ಬಿಟ್ಟು ಚುನಾವಣೆ ಎದುರಿಸಲು ಕೇಂದ್ರದ ವರಿಷ್ಠರು ಅನೇಕ ತಂತ್ರಗಳು ಹೆಣೆದು(ಮೂವರನ್ನು ಉಪಮುಖ್ಯಮಂತ್ರಿ ಮಾಡಿದ್ದು, ರಾಜ್ಯ ನಾಯಕನನ್ನು ಕೇಂದ್ರದಲ್ಲಿ ಉನ್ನತ ಹುದ್ದೆ ಕೊಡಿಸಿದ್ದು, ಸಂಘದ ನಾಯಕರನ್ನು ರಾಜ್ಯದಲ್ಲಿ ಕೈಯಾಡಿಸಲು ಬಿಟ್ಟಿದ್ದು!) ರಾಜ್ಯದಲ್ಲಿ ಬಿಜೆಪಿ ಮೇಲ್ತತಲೂ ಹರಸಾಹಸ ಪಟ್ಟರೂ ಅದು ಕಾರ್ಯಗತವಾಗಿಲ್ಲ ಎಂದು ಅವರಿಗೆ ತಿಳಿದಿರಬೇಕು! ಯಾವಾಗ ಯಡಿಯೂರಪ್ಪನವರು ಚುನಾವಣೆಯಲ್ಲಿ ಅಷ್ಟೇನೂ ಭಾಗವಹಿಸಲ್ಲ ಎಂದು ಗೊತ್ತಾದಾಗ ಕಾಂಗ್ರೇಸ್ ಹೆಚ್ಚಿಗೆ ಖುಷಿ ಪಟ್ಟಿದೆ ಮತ್ತು ಆಗಲೇ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಖುರ್ಚಿ ಸಲುವಾಗಿ ಜಗಳ ಆರಂಭವಾಗಿದೆ! ಇತ್ತ ಬಿಜೆಪಿ ಪಕ್ಷದಲ್ಲಿ ಅನೇಕ ಶಾಸಕರ ಮನಸ್ಸು ಮತ್ತು ಕನಸು ಭಾರವಾಗಿದೆ ಕಾರಣ ಯಡಿಯೂರಪ್ಪನವರ ಇಲ್ಲದ ಬಿಜೆಪಿ ಚುನಾವಣೆ ಹೇಗೆ ಎದುರಿಸುತ್ತೆ! ಸ್ವಂತ ಬಲವಿರುವ ಶಾಸಕರು ಒಂದಿಷ್ಟು ಸಮಾಧಾನ ಹೊಂದಿದ್ದರೂ ಅವರಿಗೂ ಒಳ ಚಿಂತೆ ಇಲ್ಲದಿಲ್ಲ! ಅವರೂ ಒಂದು ಕಾಲು ಹೊರಗೆ ಒಂದು ಒಳಗೆ ಎನ್ನುವ ಹಾಗೆ !

ಕರ್ನಾಟಕ ರಾಜ್ಯದ ಬಿಜೆಪಿ ಇತರ ರಾಜ್ಯಗಳಿಗಿಂತ ಭಿನ್ನ!

ಗುಜರಾತದಲ್ಲಿ, ಹರಿಯಾಣದಲ್ಲಿ, ಮಧ್ಯಪ್ರದೇಶದಲ್ಲಿ ಚುನಾವಣೆಗಿಂತ ಮುಂಚೆ ಮುಖ್ಯಮಂತ್ರಿಗಳನ್ನು ಕೇಂದ್ರದ ನಾಯಕರು ಬದಲಾವಣೆ ಮಾಡಿದ್ದಾರೆ ಮತ್ತು ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅದೇ ಪದ್ದತಿಯನ್ನು ನಮ್ಮ ರಾಜ್ಯದಲ್ಲಿ ಯಡಿಯೂರಪ್ಪನವರವನ್ನು ಬದಲಾವಣೆ ಮಾಡಿ ಅದೇ ಮೂಡನಲ್ಲಿ ಇದ್ದರು. ಸಮೀಕ್ಷೆ ಮಾಡಿ ರಾಜ್ಯದ ಜನರ ನಾಡಿಮಿಡಿತ ನೋಡಿದ ಮೇಲೆ ಅರಿವಿಗೆ ಬಂದಿದೆ ರಾಜ್ಯ ಬಿಜೆಪಿಯಲ್ಲಿ ಒಂದು ದೊಡ್ಡ ನಿರ್ವಾತ ಕಾಣಿಸಿದೆ! ಅದುವೇ ಜನನಾಯಕನ ನಿರ್ವಾತ !

ಹಿಂದಿ ಪ್ರಭಾವ ಇರುವ ರಾಜ್ಯಗಳಲ್ಲಿ ಬಿಜೆಪಿ ಮೊದನಿಂದಲೂ ಗಟ್ಟಿಯಾಗಿ ಇದೆ. ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕ ಬಿಟ್ಟರೇ ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಕರ್ನಾಟಕದಲ್ಲಿ ನಗರದ ಮತ್ತು ಮೇಲ್ವರ್ಗದ ಪಕ್ಷ ಎಂಬ ಹಣೆಪಟ್ಟಿಯನ್ನು ಕಿತ್ತುಹಾಕಿ ಬಡವರ ಮತ್ತು ರೈತರ ಪಕ್ಷವಾಗಿ ಮಾಡಿದ್ದು ಯಡಿಯೂರಪ್ಪ. ಇದೆಲ್ಲ ಒಂದೇ ದಿವಸದಲ್ಲಿ ಅನಾಯಾಸವಾಗಿ ಆಯ್ತಾ? ಇದಕ್ಕೆ ಅನೇಕ ವರ್ಷಗಳ ಯಡಿಯೂರಪ್ಪನವರ ಶ್ರಮ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಿ ಬೆಳಿಸಿದ ಫಲ! ಯಡಿಯೂರಪ್ಪ ಎಷ್ಟೇ ಎತ್ತರಕ್ಕೆ ಹೋದರೂ ಮನೆಗೆ ಬಂದ ಕಾರ್ಯಕರ್ತರನ್ನು ಸೌಜನ್ಯದಿಂದ ಕೆರೆದು ಕಿವಿಕೊಡುವ ತಾಳ್ಮೆ ಮತ್ತು ಕೃತಜ್ಞತೆ ಹೊಂದಿದ್ದರು. ಅಂತಹ ಒಂದು ಗುಣವೇ ಕಾರ್ಯಕರ್ತರಿಗೆ ನಮ್ಮ ಯಡಿಯೂರಪ್ಪ, ನಮ್ಮ ಯಡಿಯೂರಪ್ಪ ಎಂಬ ಭಾವನೆ. ರಾಜ್ಯದಲ್ಲಿ ಕೇವಲ ಕೇಂದ್ರ ನಾಯಕರು ಬಂದು ಚುನಾವಣೆ ಗೆಲ್ಲಿಸುವದಕ್ಕೆ ಆಗುವ ಮಾತಲ್ಲ. ಯಡಿಯೂರಪ್ಪ ಕೇವಲ ಲಿಂಗಾಯತರ ನಾಯನಲ್ಲ. ಸರ್ವ ಜನಾಂಗದ ನಾಯಕರು . ಅಂಥಹ ನಾಯಕನನ್ನು ಹೊರಗಿಟ್ಟು ಚುನಾವಣೆ ಮಾಡುವುದು ಬಿಜೆಪಿಗೆ ಸಾಧ್ಯವೇ ಇಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ ಪಕ್ಷ ೨೦೧೩ರಲ್ಲಿ ಓಡಿ ಓಡಿ ೪೦ಕ್ಕೆ ನಿಂತಿತು! ನಾನೇ ಮಾಹಾನಾಯಕರು ಎನ್ನುವ ನಾಯಕರು ಮೂರನೇ ಸ್ಥಾನಕ್ಕೆ ಹೋಗಿದ್ದರು. ಮತ್ತೆ ಅಂತಹ ಪರಿಸ್ಥಿತಿಯನ್ನು ಮತ್ತೊಮ್ಮೆ ನೋಡುವ ಇರಾದೆ ಕೇಂದ್ರ ನಾಯಕರಿಗಿಲ್ಲ.

ಕಾರ್ಯಕರ್ತರ ಉತ್ಸಾಹ ವೃದ್ಧಿಸಲು ಮತ್ತೆ ಯಡಿಯೂರಪ್ಪನವರಿಗೆ ಮಣೆ !

ಯಡಿಯೂರಪ್ಪ ಇಲ್ಲದ ಪಕ್ಷ ಇಂದು ಒಂದು ರೀತಿಯಲ್ಲಿ ಸೊರಗಿದೆ, ಕಾರ್ಯಕರ್ತರಲ್ಲಿ ಉತ್ಸಾಹವಿಲ್ಲ. ಇದ್ದ ನಾಯಕರನ್ನು ನಂಬಿ ಕೆಲಸ ಮಾಡುವ ಮನಸ್ಸು ಇಲ್ಲ. ಕಾರಣ ನಾನೇ ನಾಯಕ ಎಂದು ಹೇಳಿಕೊಳ್ಳುವವರು ಕಾರ್ಯಕರ್ತರ ನೋವಿನಲ್ಲಿ ಭಾಗಿಯಾಗಿದ್ದು ಅತಿ ವಿರಳ! ಬಿಜೆಪಿಯ ಶಾಸಕರಿಗೆ ಕೆಟ್ಟ ಚಾಳಿ ಇದೆ , ಸರ್ಕಾರ ಬರುವಕ್ಕಿಂತ ಮುಂಚೆ ನಮ್ಮ ನಾಯಕರು ಯಡಿಯೂರಪ್ಪ, ಯಾವಾಗ ಸರ್ಕಾರ ರಚನೆ ಮಾಡಿ ಮಂತ್ರಿಗಿರಿ ಸಿಗುವದಿಲ್ಲವೋ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ರೀತಿ ನಡೆದುಕೊಳ್ಳುವುದು ಮತ್ತು ಯಡಿಯೂರಪ್ಪನವರ ವಿರುದ್ಧವೇ ಕತ್ತಿ ಮಸೆಯುವುದು. ಇದು ನಾವೆಲ್ಲೇ ೨೦೦೮ರಲ್ಲಿ ಮತ್ತು ೨೦೧೯ರಲ್ಲಿ ಕಂಡಿದ್ದೇವೆ. ಇದೆಲ್ಲವೂ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ .

ಇದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು ನೀವೇ ಹೇಳಿ?ಇದೆಲ್ಲವೂ ಕಾರ್ಯಕರ್ತರಿಗೆ ಗೊತ್ತಿದೆ ಮತ್ತು ಅವರಿಗೆ ನೋವಿದೆ. ಯಡಿಯೂರಪ್ಪನವರು ಅತಿ ಕಷ್ಟಕಾಲದಲ್ಲಿ (ಕರೋನ, ಅತಿವೃಷ್ಠಿ) ರಾಜ್ಯವನ್ನು ನಿಭಾಯಿಸಿದ್ದರು. ವಯಸ್ಸಿನ ಆಧಾರದ ಮೇಲೆ ತಗೆದಾಗ ಕಾರ್ಯಕರ್ತರಿಗೆ ನೋವಾಗಿತ್ತು. ಸ್ವತಃ ಯಡಿಯೂರಪ್ಪ ಇದು ನನ್ನ ಸ್ವಂತ ನಿರ್ಧಾರ ಎಂದು ಹೇಳಿ ಎಲ್ಲರನ್ನು ಸಮಾಧಾನ ಪಡಿಸಿದ್ದರು. ಪಕ್ಷ ಗೆಲ್ಲಲು ಕಾರ್ಯಕರ್ತರು ಬೇಕು ಅಧಿಕಾರವಿದ್ದಾಗ ಅವರ ನೆನಪು ಮಾಡಿಕೊಳ್ಳದ ನಾಯಕರನ್ನು ಕಾರ್ಯಕರ್ತರು ಎಂದೂ ನೆನೆಯುದಿಲ್ಲ. ಅಂತಹ ವಾತಾವರಣ ಬಿಜೆಪಿಯಲ್ಲಿ ನೋಡಬಹುದಾಗಿದೆ. ಇದೆಲ್ಲವೂ ಕೇಂದ್ರ ವರಿಷ್ಠರು ಗಮನಿಸಿ ರಾಜಾಹುಲಿಯನ್ನು ಮತ್ತೆ ಉನ್ನತ ಹುದ್ದೆ ಕೊಟ್ಟು ಮತ್ತಷ್ಟು ಯಡಿಯೂರಪ್ಪನವರಿಗೆ ಹುರುಪು ತುಂಬಿಸಿದ್ದಾರೆ. ಯಾವದೇ ಸ್ಥಾನ ಮಾನ ಕೊಡದೆ ಇದ್ದರೂ ನಾನು ಪಕ್ಷಕ್ಕಾಗಿ ದುಡಿವೆ ಎಂದು ಹೇಳುತ್ತಿರುವಾಗ ಕೇಂದ್ರ ನಾಯಕರ ಅಚ್ಚರಿ ನಿರ್ಧಾರ ರಾಜ್ಯ ಬಿಜೆಪಿ ನಾಯಕರಿಗೆ ಅನಿರಿಕ್ಷಿತ!

ಸಿದ್ದು ಉತ್ಸವ, ಎಂಬಿ ಪಾಟೀಲರ ಲಿಂಗಾಯತ ಮತಗಳ ರಣಬೇಟೆ!

ಕಾಂಗ್ರೇಸ್ ಪಕ್ಷದ ಒಂದು ಗುಂಪು ತಮ್ಮ ನಾಯಕನ ಉತ್ಸವ ಭರ್ಜರಿಯಾಗಿ ಮಾಡಿಮುಗಿಸಿ ಗೆದ್ದಿದ್ದಾರೆ. ಅದರ ಒಳಹೊಡೆತ ಬಿಜೆಪಿಗಿಂತ ಕಾಂಗ್ರೇಸ್ ಪಕ್ಷದ ಇನ್ನೊಂದು ಗುಂಪಿಗೆ ಬಿದ್ದಿದೆ. ಅದರ ಜೊತೆಜೊತೆಗೆ ಉತ್ಸವಕ್ಕೆ ಹರಿದು ಬಂದ ಜನಸಾಗರ ನೋಡಿ ಬಿಜೆಪಿ ಪಕ್ಷದ ಯಡಿಯೂರಪ್ಪನವರ ವಿರೋಧಿಗಳು ಮತ್ತೆ ಯಡಿಯೂರಪ್ಪನವರ ಜಪ ಮಾಡಲಿಕ್ಕೆ ಶುರು ಮಾಡಿದ್ದಾರೆ. ಇಲ್ಲಿಯವರೆಗೆ ವಿಜಯೇಂದ್ರರನ್ನು ಹಿಂದೆ ತಳ್ಳುವ ಜನರೇ ಮತ್ತೆ ವಿಜಯಣ್ಣ ಎನ್ನುದಕ್ಕೆ ಪ್ರಾರಂಭಿಸಿದ್ದಾರೆ. ಕಾರಣ ಜಬರದಸ್ತಾಗಿದೆ! ಎಂಬಿ ಪಾಟೀಲರನ್ನು ಲಿಂಗಾಯತ ನಾಯಕರನ್ನಾಗಿ ಮಾಡಿ , ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಡಿ ಮತಗಳನ್ನು ಸೆಳೆಯುದಕ್ಕೆ ಮುಂದೆ ನಿಲ್ಲಿಸಿದ್ದಾರೆ.

ಪಾಟೀಲರು ಮಾತು ಮಾತಿಗೆ ಬಿಜೆಪಿ ಪಕ್ಷ ಯಡಿಯೂರಪ್ಪನವರನ್ನು ಬಳಿಸಿ ಬಿಸಾಕಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದೆಲ್ಲ ಯಡಿಯೂರಪ್ಪನವರ ಬೆಂಬಲಿಗರು ಹೇಗೆ ತಗೆದುಕೊಳ್ಳುತ್ತಾರೆ ನೋಡಬೇಕು. ಭರ್ಜರಿ ಉತ್ಸವ , ಪಾಟೀಲರ ಲಿಂಗಾಯತ ಮತ ಸೆಳೆಯುವ ತಂತ್ರಗಳಿಗೆ ಪ್ರತ್ಯುತ್ತರವಾಗಿ, ಬಿಜೆಪಿ ಪಕ್ಷ ಯಡಿಯೂರಪ್ಪನಗೆ ಉನ್ನತ ಸ್ಥಾನವನ್ನು ಕೊಟ್ಟು ಯಡಿಯೂರಪ್ಪನವರ ಜೊತೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದೆ. ಯಡಿಯೂರಪ್ಪನವರು ಹಿಡಿದ ಕೆಲಸ ಮತ್ತು ಕೊಟ್ಟ ಮಾತು ಎಂದು ತಪ್ಪಿದ ಉಧಾಹರಣೆ ಇಲ್ಲ. ಕೇಂದ್ರದ ನಿರ್ಧಾರದಿಂದ ಪಕ್ಷದ ಶಾಸಕರಿಗೆ ಧೈರ್ಯ ಬಂದಿದೆ. ಮತ್ತೆ ಚುನಾವಣೆ ಪ್ರಚಾರ ಕಣದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಕಾಣಬಹುದೆಂದು! ಇದಕ್ಕೆ ಪುಷ್ಟಿ ಕೊಡುವುದು, ಕಾವೇರಿಯಲ್ಲಿ ಮತ್ತೆ ಜನಜಂಗುಳಿ!

Categories: Articles

Tagged as: , ,

1 reply »

Leave a Reply