ಯುವಕರ ಉತ್ಸಾಹ:-

ಯಾವದೇ ಚುನಾವಣೆ ನಡೆದರೂ ಊರಿಗೆ ಹೋಗಿ ಮತ ಹಾಕುವ ನಾನು, ೨೦೧೪ರಲ್ಲಿ ಬೆಂಗಳೂರಿನಿಂದ ಇಂಡಿಯ ಸ್ಟೇಷನ್ ವರೆಗೆ ಹೋಗಿ , ಅಲ್ಲಿಂದ ಊರಿಗೆ ಹೋಗಿ ಮತ ಹಾಕುವದಕ್ಕಾಗಿ ಟ್ರೈನ್ ಟಿಕೆಟ್ ಬುಕ್ ಮಾಡಿದ್ದೆ. ಸ್ಟೇಷನ್ ಹತ್ತಿರ ಹೋಗಿ ನೋಡಿದರೆ ಯುವಕರ ದಂಡು! ಇಷ್ಟೊಂದು ಜನ ಯಾಕೆ ಎಂದು ಸಮೀಪ ಹೋಗಿ ನೋಡಿದರೆ, ಬೋಲೋ ಭಾರತ ಮಾತಾಕಿ ಜೈ! ಜೈ ನರೇಂದ್ರ ಮೋದಿಜಿ, ಜೈ ಯಡಿಯೂರಪ್ಪ ಎಂದು ಕೂಗುತ್ತಿರುವ ಯುವಕರನ್ನು ಕಂಡು ಗೊತ್ತಾಯಿತು ಇದು ಮೋದಿಗೆ ಮತ ಹಾಕುವದಕ್ಕಾಗಿ ಹೊರಟ ದೇಶಭಕ್ತರ(ಅವರೇ ಹೇಳಿದ್ದು) ದಂಡು! ಬೆಂಗಳೂರಿನಿಂದ ಹತ್ತಿ, ಮುಂದೆ ಪ್ರತಿ ಸ್ಟೇಷನ್ ನಲ್ಲಿ ನೋಡಿದರೆ , ಜಯಘೋಷಗಳು ಕೇಳುತ್ತಿದ್ದವು, ಮತ್ತು ಕೆಲ ಯುವಕರನ್ನು ಕೆಣಕಿ ಕೇಳಿದಾಗ ಪ್ರಥಮ ಬಾರಿಗೆ ನಾನು ಮತ ಹಾಕುತ್ತಿದ್ದೇನೆ ಅದು ಮೋದಿ ಸಲುವಾಗಿ ಮತ್ತು ದೇಶದ ಸಲುವಾಗಿ! ಸೂಕ್ಷ್ಮವಾಗಿ ಅವರ ಮನೆತನದ ಹೆಸರು ತಿಳಿದುಕೊಂಡು ಅವರ ಸಮುದಾಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೆ! ಈಗೆಲ್ಲ ಜಾತಿಯ ಮೇಲೆ ಚುನಾವಣೆ ನಡೆಯುತ್ತವೆ ಅದಕ್ಕೆ ನನ್ನದೊಂದು ಸಮೀಕ್ಷೆ ಇರಲಿ ಅಂತ ಮಾಡಿದ್ದೆ! ಅಲ್ಲಿ ಎಲ್ಲ ಸಮುದಾಯದ ಯುವಕರು ಇದ್ದರು. ಅಲ್ಲೇ ಗೊತ್ತಾಗಿತ್ತು ಮೋದಿ ಜಯ ಖಂಡಿತ ಮತ್ತು ಮುಂದೆ ಅವರೇ ನಮ್ಮ ಪ್ರಧಾನಮಂತ್ರಿ! ಅದು ನಿಜಾನೂ ಆಯಿತು ! ಇತಿಹಾಸದ ಪುಟದಲ್ಲಿ ಮೊಟ್ಟ ಮೊದಲ ಬಾರಿ ಪೂರ್ಣ ಬಲದ ಮೇಲೆ ಸರ್ಕಾರ ರಚನೆ ಮಾಡಿತ್ತು! ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಯುವಕರು ಎದ್ದಿದ್ದರು ಅದಕ್ಕೆ ಕಾರಣ ಕಾಂಗ್ರೇಸ್ ನೇತೃತ್ವದಲ್ಲಿ ಆಗಿದ್ದ ಹಗರಣಗಳ ಮತ್ತು ಅಭಿವೃದ್ಧಿ ಕುಂಠಿತ! ಹೊಸ ಭಾರತ ಕಟ್ಟಲು ಯುವಕರು ಸಿದ್ದರಾಗಿ ಮೊದಲ ಹೆಜ್ಜೆ ಇಟ್ಟಿದ್ದರು. ಗೆದ್ದ ನಂತರ ಮೋದಿ ಹೇಳಿದ್ದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಚುನಾವಣೆ ಮಾಡಿದ್ದಾರೆ ಅದಕ್ಕಾಗಿ ಇಂತಹ ಗೆಲುವು ಪಡೆದುಕೊಂಡಿದ್ದೇವೆ. ಹಾಗಾದರೆ ಬಿಜೆಪಿ ಕಾರ್ಯಕರ್ತರ ಕೆಲಸ ಹೇಗಿತ್ತು?
ಸೋಶಿಯಲ್ ಮೀಡಿಯಾದಲ್ಲಿ ಕಾರ್ಯಕರ್ತರ ಕಮಾಲ್:-
ದೇಶಕ್ಕೆ ಸ್ವತಂತ್ರ ಬಂದು ಸುಮಾರು ೭೦ ವರ್ಷವಾದರೂ ಅಭಿವೃದ್ಧಿ ತಕ್ಕ ಮಟ್ಟಿಗೆ ಆದರೂ ಯುವಕರಿಗೆ ಮುಂದೆ ಅಭಿವೃದ್ಧಿಯ ಆಶಾಭಾವನೆ ಕಾಣದೆ ಹೋರಾಟದ ಕಿಚ್ಚು ಹೆಚ್ಚಾಗಿತ್ತು.ಪ್ರಾಮಾಣಿಕರು ಸುಮ್ನೆ ಮೂಲೆಯಲ್ಲಿ ಕುಳಿತಿದ್ದರು. ಶತ್ರು ರಾಷ್ಟ್ರಗಳು ಭಾರತವನ್ನೇ ಹೆದರಿಸಿ ಕುಳ್ಳಿರಿಸಿದ್ದರು. ಇಂದಿರಾಜಿ ಆದ ನಂತರ ಬಂದ ಪ್ರಧಾನಮಂತ್ರಿಗಳು ರಿಮೋಟ್ ಆಗಿಯೇ ಕೆಲಸ ಮಾಡಿದ್ದರು, ಕೆಲವರು(ಪಿವಿ, ವಾಜಪೇಯಿ) ಹೊರೆತುಪಡಿಸಿ. ವಾಜಪೇಯಿ ಸರ್ಕಾರದಲ್ಲಿ ಕಾರ್ಗಿಲ್ ಗೆದ್ದು ಶತ್ರು ರಾಷ್ಟ್ರಕ್ಕೆ ಬಿಸಿ ಮುಟ್ಟಿಸುವದರ ಜೊತೆ ಪೋಕ್ರಾನ್ದಲ್ಲಿ ತಮ್ಮ ಕಮಾಲ್ ತೋರಿಸಿ ಅಮೆರಿಕವನ್ನೇ ಬೆಚ್ಚಿಬೀಳಿಸಿದ್ದರು. ೨೦೦೪ರಿಂದ ೨೦೧೪ರ ಸರ್ಕಾರದ ಆಡಳಿತ ದೇಶದ ಜನರಿಗೆ ಬಾರವಾಗಿತ್ತು, ಮತ್ತೊಂದು ಕಡೆ ದೇಶದಲ್ಲಿ ಅಂತರ್ಜಾಲ ಮುನ್ನೆಲೆಗೆ ಬರತೊಡಗಿತ್ತು, ದೇಶದ ಯುವಕರು ತಮ್ಮ ಸಿಟ್ಟನ್ನು ತೋರುವ ಸಮಯ ಬಂದಿತ್ತು. ಕಾಂಗ್ರೇಸ್ ನೆಲಕಚ್ಚುವ ಮುನ್ಸೂಚನೆ ಸಿಕ್ಕಿತ್ತು.ಇದನ್ನು ದಾಳವಾಗಿ ಉಪಯೋಗಿಸಿಕೊಂಡು ಬಿಜೆಪಿ ತನ್ನ ಬತ್ತಳಿಕೆಯ ಬ್ರಹ್ಮಾಸ್ತ್ರವನ್ನು ಬಿಟ್ಟರು, ಅದುವೇ ಪ್ರಾಮಾಣಿಕ ಮತ್ತು ಗುಜರಾತದಲ್ಲಿ ೧೨ ವರ್ಷ ಅಧಿಕಾರ ಮಾಡಿದ ನರೇಂದ್ರಭಾಯಿ ದಾಮೋದರದಾಸ ಮೋದಿ!
ಪ್ರತಿಯೊಬ್ಬ ಕಾರ್ಯಕರ್ತ ಬಿಜೆಪಿ ಮತ್ತು ಮೋದಿಯನ್ನು ರಾಷ್ಟ್ರದಲ್ಲಿ ಪ್ರೀತಿಸಿದರೆ, ರಾಜ್ಯದಲ್ಲಿ ರೈತ ನಾಯಕ ಯಡಿಯೂರಪ್ಪನವರನ್ನು ಬೆಂಬಲಿಸುವದಕ್ಕೆ ಪ್ರಾರಂಭಿಸಿದರು. ಫೇಸಬುಕ್ ಮೀಡಿಯಾದಲ್ಲಿ ಅಭೂತಪೂರ್ವ ಬೆಂಬಲ ೨೦೧೪ರಲ್ಲಿ ಬಿಜೆಪಿಗೆ ಸಿಗತೊಡಗಿತು. ಬಿಜೆಪಿ ಕಾರ್ಯಕರ್ತರು ಕಾಂಗ್ರೇಸ್ ಪಕ್ಷದ ಫೇಸ್ಬುಕ್ ಪುಟಗಳಿಗೆ ಹೋಗಿ ಕಾಂಗ್ರೇಸ್ ಪಕ್ಷದ ವಿಫಲತೆ ಮತ್ತು ದೇಶಭಕ್ತಿಯ ಪ್ರಶ್ನೆ ಎತ್ತಿದಾಗ, ಸಾವಕಾಶವಾಗಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸಹಿತ ಬಿಜೆಪಿ ಮತ್ತು ಮೋದಿ ಅಭಿಮಾನಿಗಳಾಗಿ ಪರಿವರ್ತನೆ ಆಗಿದ್ದರು. ಬಿಜೆಪಿ ಕಾರ್ಯಕರ್ತರು ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಭರಪೂರವಾಗಿ ಬಿಜೆಪಿ ಪಕ್ಷದ , ನಾಯಕನ ಬಗ್ಗೆ ಬೆಂಬಲಿಸುತ್ತಾ, ಬೇರೆ ಪಕ್ಷಗಳನ್ನು ಹೀನಾಯವಾಗಿ ಅವರ ದುರಾಡಳಿತವನ್ನು ಎತ್ತಿ ತೋರಿಸಿ ಹೀನಾಯವಾಗಿ ಸೋಲುವಂತೆ ಮಾಡಿದ್ದರು. “ಮೋದಿ ಮೋದಿ” ಎಂಬ ಬೆಂಕಿಯಂತಹ ಸ್ಲೋಗನ್ ಕೇಳಿ ಅನೇಕ ಪಕ್ಷಗಳ ನಾಯಕರು ಸುಸ್ತಾಗಿದ್ದರು. ಮುಂದೆ ಆಗಿದೆಲ್ಲ ಇತಿಹಾಸ! ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದ ಬಿಜೆಪಿ ಕಾರ್ಯಕರ್ತರ ಮನಸ್ಥಿತಿ ಇಂದು ಹೇಗಿದೆ?
ಜೋಡೋ ಪಾದಯಾತ್ರೆ:-

ಜೋಡೋ ಯಾತ್ರೆ, ರಥಯಾತ್ರೆ, ರೈತ ಯಾತ್ರೆ ಹೀಗೆ ದೇಶದಲ್ಲಿ ಅನೇಕ ಯಾತ್ರೆಗಳು ನಡೆದಿವೆ. ನೆರೆಯ ಆಂದ್ರಪ್ರದೇಶದ ಇಂದಿನ ಮುಖ್ಯಮಂತ್ರಿ ಜಗನ್, ಪ್ರಶಾಂತ ಕಿಶೋರ್ ನೀವು ಪಾದಯಾತ್ರೆ ಮಾಡಿ ಜನರ ಬಳಿ ಹೋಗಿ, ನಿಮಗೆ ಮುಂದಿನ ಚುನಾವಣೆಯಲ್ಲಿ ಅನುಕೊಲವಾಗುತ್ತೆ ಎಂದು ಹೇಳಿದ್ದರು. ಇದನ್ನು ಕೇಳಿ ತಡಮಾಡದೆ ಸುಮಾರು ೧೦ಸಾವಿರ ಕಿಲೋಮೀಟರು ಪಾದಯಾತ್ರೆ ಮಾಡಿ ಚುನಾವಣೆಯಲ್ಲಿ ಅದರ ಫಲವನ್ನು ಪಡೆದದ್ದು ನಮಗೆ ಗೊತ್ತಿದೆ. ಇಲ್ಲಿ ಕೇವಲ ಪಾದಯಾತ್ರೆ ಕೆಲಸ ಮಾಡಿತ್ತಾ? ಹೌದು ಎಂದು ೧೦೦%ಹೇಳುವುದು ಸ್ವಲ್ಪ ಕಷ್ಟ! ಕಾರಣ ಅಂದು ನಾಯ್ಡು ಸರ್ಕಾರ ಭೂಸ್ವಾಧೀನ ಕೆಲಸದಲ್ಲಿ ಅಲ್ಲಿನ ರೈತರನ್ನು ವಿರೋಧ ಮಾಡಿಕೊಂಡಿದ್ದರು ಮತ್ತು ಬಿಜೆಪಿ ಬಿಟ್ಟು ಹೊರಹೋಗಿದ್ದರು. ಇವೆಲ್ಲವೂ ನಾಯ್ಡು ಅವರಿಗೆ ಮುಳಾಗಿದ್ದವು!
ಸತತವಾಗಿ ೧೦ವರ್ಷ ಅಧಿಕಾರದಿಂದ ವಂಚತ ಕಾಂಗ್ರೇಸ್ ಪಕ್ಷ ಮತ್ತೊಮ್ಮೆ ದೇಶದಲ್ಲಿ ಗೆಲ್ಲುವದಕ್ಕಾಗಿ ಅನೇಕ ದಾಳಗಳನ್ನು ನಿರಂತರವಾಗಿ ಉರುಳಿಸುತ್ತಿದೆ,ಉಧಾಹರಣೆ: ೨೦೧೯ರಲ್ಲಿ ರೈಫಲ್ ಹಗರಣ ಸದ್ದು ಜೋರು ಮಾಡಿಸಿ ಜನರ ದಿಕ್ಕು ತಪ್ಪಿಸುವದಕ್ಕೆ ಪ್ರಯತ್ನ ಮಾಡಿತ್ತು! ಅದೇ ಚುನಾವಣೆಯಲ್ಲಿ ತಿಂಗಳಿಗೆ ೬೦೦೦ ಕೊಡುತ್ತೇವೆ ಎಂದು ಘೋಷಣೆ! ಆದರೂ ಜನ ನೇರವಾಗಿ ತಿರಸ್ಕರಿಸಿ ಬಿಟ್ಟಿದ್ದರು. ಮತ್ತೆ ೨೦೨೪ಕ್ಕೆ ನಾವು ಅಧಿಕಾರಕ್ಕೆ ಬರಲೇಬೇಕು ಎಂದು ಜೋಡೋ ಯಾತ್ರೆ ಪ್ರಾರಂಭವಾಗಿದೆ! ಜೋಡೋ ಯಾತ್ರೆಗೆ ಜನರ ಬೆಂಬಲ ಸಿಗುತ್ತಿದೆ, ಅದರಲ್ಲೂ ನಮ್ಮ ರಾಜ್ಯದಲ್ಲೂ ಸ್ವಲ್ಪ ಹೆಚ್ಚೇ ಬೆಂಬಲ ಸಿಗುತ್ತಿದೆ. ಇದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಕಾಂಗ್ರೇಸ್ ಗಟ್ಟಿಯಾಗಿ ನಿಂತಿದೆ.
ಜೋಡೋ ಯಾತ್ರೆ ಕೇಂದ್ರ ಸರ್ಕಾರದ ಮೇಲೆ ಎಷ್ಟು ಪರಿಣಾಮ ಮಾಡಬಲ್ಲದು ಎಂದು, ಇಂದು ಹೇಳುವುದು ಕಷ್ಟ! ಕಾರಣ ೨೦೧೪ರಲ್ಲಿ ಎದ್ದಿದ್ದ ಮೋದಿ ಸುನಾಮಿ ಇನ್ನೂ ರಾಷ್ಟ್ರದಲ್ಲಿ ಇದೆ ಎನ್ನುವದಕ್ಕೆ ಇತ್ತೀಚಿನ “ಯಾರು ನಿಮ್ಮ ಪ್ರಧಾನಮಂತ್ರಿ” ಸಮೀಕ್ಷೆಯಲ್ಲಿ ಮತ್ತೆ ೫೩% ಪ್ರತಿಶತ ಮೋದಿಯವರೇ!
ರಾಜ್ಯದಲ್ಲಿ ಸಂಕಲ್ಪ ಯಾತ್ರೆ :-
ಸಿದ್ರಾಮೋತ್ಸವ ಮತ್ತು ಜೋಡೋ ಯಾತ್ರೆಗೆ ಸಿಕ್ಕ ಯಶಸ್ವಿಗೆ ಕಾಂಗ್ರೇಸ್ ಒಳಒಳಗೆ ಖುಷಿ ಪಡುತ್ತಿದೆ. ತುತ್ತು ಕೈಯಲ್ಲಿ ಇದೆ ಎಂಬ ಭಾವನೆ ಕಾಂಗ್ರೇಸಿರಿಗೆ ಖಂಡಿತ ಇದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಾ ಎನ್ನವುದು ಸದ್ಯದ ಯಕ್ಷ ಪ್ರಶ್ನೆ! ಇದೆಲ್ಲವನ್ನು ಅಳೆದು ತೂಗಿ ನೋಡಿ, ಇತ್ತ ಕಡೆ ಬಿಜೆಪಿ ಸಂಕಲ್ಪ ಯಾತ್ರೆ ಮಾಡುತ್ತಿದೆ. ಮೊನ್ನೆ ನಡೆದ ಸಂಕಲ್ಪ ಯಾತ್ರೆಯಲ್ಲಿ ಯಡಿಯೂರಪ್ಪನವರು ರಾಹುಲ ಗಾಂಧಿಯವರನ್ನು ಬಚ್ಚಾ ಎಂದು ಕರೆದಿದ್ದರು. ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿಯವರು ತೊಡೆತಟ್ಟಿ ಕಾಂಗ್ರೇಸ್ ತಾಕತ್ ಪ್ರಶ್ನೆ ಮಾಡಿದರೂ ಅಷ್ಟೇನೂ ಪರಿಣಾಮ ಬೀರಿರಲಿಲ್ಲ , ಆದರೆ ಯಡಿಯೂರಪ್ಪನವರು ಮಾಡಿದ ಭಾಷಣೆಕ್ಕೆ ಕಾಂಗ್ರೇಸ್ ಪಕ್ಷದ ನಾಯಕರ ಚಿಂತನೆಗೆ ಕಾರಣವಾಗಿದೆ. ಕಾರಣ ಯಡಿಯೂರಪ್ಪನವರು ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಸಕೊಂಡರೇ ಕಾಂಗ್ರೇಸ್ ಪಕ್ಷ ಬಹುಮತ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಯಡಿಯೂರಪ್ಪ ಗಟ್ಟಿಯಾಗಿ ನಿಂತರೆ ಚುನಾವಣೆ ಲೆಕ್ಕ ಆ ಕಡೆ ಈ ಕಡೆ ಆಗುವ ಸಂಭವ ಜಾಸ್ತಿ! ಇದರ ಜೊತೆ ವಿಜಯೇಂದ್ರರವರ ಯುವ ಶಕ್ತಿ ಕೆಲಸ ಮಾಡಿದಲ್ಲಿ ಮತ್ತೆ ೫೦-೫೦ ಆಟಕ್ಕೆ ನಾಂದಿ!

ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಪೆನ್ ಝಳಪಿಸುತ್ತಿದೆ !
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ತುಂಬಾ ಉತ್ಸಾಹದಲ್ಲಿ ಮತ್ತು ಹುರುಪಿನಲಿ ಇದ್ದಾರೆ , ಹೇಗೆ ಗೊತ್ತಾ ? ಸೋಶಿಯಲ್ ಮೀಡಿಯಾದಲ್ಲಿ ನೀವು ಕಾಂಗ್ರೇಸ್ ಪಕ್ಷದ ಪುಟದಲ್ಲಿ ಹೋಗಿ ನೋಡಿದರೆ ಕಾಂಗ್ರೇಸ್ ಕಾರ್ಯಕರ್ತರು ಸಂಪೂರ್ಣವಾಗಿ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ ಮತ್ತು ಕಾಂಗ್ರೇಸ್ ಪಕ್ಷದ ಪುಟದಲ್ಲಿ ಬಿಜೆಪಿಯ ಕಾರ್ಯಕರ್ತರ ವಿರೋಧಿ ಕಾಂಮೆಂಟ್ಸ್ಗಳು ಕಾಣುವದೇ ಇಲ್ಲ. ಆದರೆ ಅದೇ ಬಿಜೆಪಿ ಪುಟದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಅಲ್ಲಿಯೂ ಬಂದು ತಿವಿಯುತ್ತಿದ್ದಾರೆ! ರಾಜ್ಯ ಕಾಂಗ್ರೆಸಿಗರ ತೀಕ್ಷ್ಣ ಪ್ರಶ್ನೆಗಳಿಗೆ ಬಿಜೆಪಿ ಕಾರ್ಯಕರ್ತರಿಂದ ಮೊದಲಿನ ತರಹ ಕೌಂಟರ್ ಕೊಡುತ್ತಿಲ್ಲ! ಹಾಗೆ ನೋಡಿದರೆ ಮೋದಿಯ ಮೇಲಿನ ಪ್ರೀತಿ ಕಡಿಮೆಯಾಗದಿದ್ದರೂ, ಕಾರ್ಯ ಚಟುವಟಿಕೆಯಿಂದ ದೂರವಾಗಿದ್ದಾರೆ ಎನ್ನುವ ಅಭಿಪ್ರಾಯ ಮಾತ್ರ ಇದೆ. ಅದರಲ್ಲೂ ರಾಜ್ಯ ಘಟಕಕ್ಕೆ ಬಂದರೇ ತೀರಾ ಸಪ್ಪೆಯಾಗಿ ಕಾಣಿಸುತ್ತಿದೆ. ಇಲ್ಲಿಗೆ ಒಂದಂತೂ ಖಾತ್ರಿ ಸದ್ಯದ ಪರಸ್ಥಿತಯಲ್ಲಿ ಬಿಜೆಪಿ ಕಾರ್ಯಕರ್ತರು ಮೊದಲಿನಷ್ಟು ಆಕ್ಟಿವ್ ಇಲ್ಲವೇ ಇಲ್ಲ! ಮೊದಲು ಮನೆಯ ಹೊರೆಗೆ ಹೋಗಿ ತಿವಿದು , ಮನೆಗೆ ಬಂದರೇ ತಿದ್ದಿ ಕಳುಹಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು , ಇಂದು ತಮ್ಮ ಮನೆಗೆ ಬಂದು ತಿವಿದರೂ ನೋಡೇ ಇಲ್ಲ ಎನ್ನುವ ರೀತಿ ವರ್ತನೆ ಕಾಣಿಸುತ್ತಿದೆ(ಜಾಸ್ತಿ ಪ್ರತಿಶತ).
ಕಾರ್ಯಕರ್ತ ಪಕ್ಷದ ಸಲುವಾಗಿ ಏನೆಲ್ಲ ತ್ಯಾಗಕ್ಕೂ ಸಿದ್ಧನಿದ್ದಾಗ, ಪಕ್ಷದ ನಾಯಕರು ವಿರೋಧ ಪಕ್ಷದ ಜೊತೆ ಒಳಒಪ್ಪಂದ ಮಾಡಿಕೊಂಡು ಖುರ್ಚಿನೇ ಮುಖ್ಯವೆಂದಾದರೆ ಕಾರ್ಯಕರ್ತ ಅಷ್ಟೊಂದು ಬಲಾಢ್ಯವಾಗಿ ನಿಲ್ಲುವದಕ್ಕೆ ಆಗುವದಿಲ್ಲ. ಅದಕ್ಕೆ ತಾಜಾ ಉಧಾಹರಣೆ ಹಿಂದೂ ಯುವಕನ ಕೊಲೆ ಆದಾಗ ರಾಜೀನಾಮೆ ಪರ್ವ! ಅದೇ ಮೋದಿ ನೇತೃತ್ವದಲ್ಲಿ ನೋಡಲು ಸಿಗುವದಿಲ್ಲ. ಕಾಂಗ್ರೇಸ್ ನಾಯಕರು ಮೋದಿಯನ್ನು ಮತ್ತು ಯಡಿಯೂರಪ್ಪನವರನ್ನು ನಿಂದಿಸುವಾಗ ಬೇರೆ ನಾಯಕರ ಬಾಯಿಗೆ ಬಿಗ ಹಾಕಿದನ್ನು ನೋಡಿ ಕಾರ್ಯಕರ್ತನ ಮನಸ್ಸು ಗಟ್ಟಿಗೊಳ್ಳುವದಿಲ್ಲ. ಇಂದು ಸೋಶಿಯಲ್ ಮೀಡಿಯಾ ವಿಷಯಗಳು, ಚರ್ಚೆಗಳು ಖಂಡಿತ ಮತಗಳಾಗಿ ಪರಿವರ್ತನೆ ಗೊಳ್ಳುತ್ತವೆ. ಅದಕ್ಕೆ ಅನೇಕ ಹಿಂದಿನ ಉಧಾಹರಣೆಗಳು ನಮ್ಮ ಮುಂದಿವೆ.
ಕ್ಲೀನ್ ಡೈರೆಕ್ಷನ್ & ಮೈಂಡ್ ಟಾನಿಕ್:-
ಇದೆಲ್ಲವೂ ಬಿಜೆಪಿ ಹೈಕಮಾಂಡ್ ಗಮನಿಸಿದೆ, ಆದರೆ ರಾಜ್ಯ ಹೈಕಮಾಂಡ್ ನಾಯಕರಿಗೆ ಇದು ತಿಳಿಯದ ವಿಷಯ ಬಿಡಿ! ತಮ್ಮದೇ ಮಾಸ್ ಲೀಡರ್ ಯಡ್ಡಿಯೂರಪ್ಪನವರನ್ನು ಮತ್ತು ವಿಜಯೇಂದ್ರರವರನ್ನು ಪಕ್ಷದ ಶಾಸಕ ನಿಂದಿಸುವಾಗ ಹಿಂದೆ ನಿಂತು ಬೆಂಬಲ ವ್ಯಕ್ತಪಡಿಸಿ ಪಕ್ಷಕ್ಕೆ ಡ್ಯಾಮೇಜ್ ಮಾಡಿಲ್ವೆ ? ೪೦% ಕಮಿಷನ್ ಆರೋಪ ಇದ್ದರೂ ಅದು ಸಾಬಿತವಾಗದ ಕಾರಣ ಅಷ್ಟೇನೂ ಪರಿಣಾಮ ಬಿರುವದಿಲ್ಲ, ಆದರೆ ಕಳೆಗುಂದಿದ ಕಾರ್ಯಕರ್ತರನ್ನು ಗಣನೆಗೆ ತಗೆದುಕೊಂಡು ಹುರುದುಂಬಿಸಬೇಕು, ಎಲ್ಲ ನಾಯಕರ ಒಗ್ಗಟ್ಟು ಬಹಳ ಪರಿಣಾಮ ಬೀರಬಲ್ಲದು. ಯುವಶಕ್ತಿ ವಿಜಯೇಂದ್ರ ಯುವಕರನ್ನು ಸೆಳೆಯುವ ನಾಯಕತ್ವ ಹೊಂದಿದ್ದಾರೆ. ಯಡಿಯೂರಪ್ಪನವರ ಕೇವಲ ಒಂದು ಅಗ್ರೆಸ್ಸಿವ್ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರ ಮತ್ತೆ ತಿರುಗಿ ನೋಡುವ ಹಾಗೆ ಮಾಡಿದೆ. ಇದರರ್ಥ ಬಿಜೆಪಿ ಕಾರ್ಯಕರ್ತರು ಇನ್ನೂ ಪಕ್ಷದ ಜೊತೇನೆ ಇದ್ದಾರೆ , ಆದರೆ ಅವರಿಗೆ ಮತ್ತೆ ಮೊದಲಿನ ಹಾಗೆ ಘರ್ಜಿಸಲು ಕ್ಲೀನ್ ಡೈರೆಕ್ಷನ್ ಅಂಡ್ ಸ್ವಚ್ಛ ಮನ್ಸಿಸ್ಸಿನ ನಾಲ್ಕು ಮಾತುಗಳು ಬೇಕಾಗಿವೆ. ಇಂತಹ ಎಲ್ಲ ಆಯಾಮಗಳನ್ನು ಪಕ್ಷ ಧನಾತ್ಮಕವಾಗಿ ಚಿಂತನೆ ಮಾಡದೆ ಹೋದರೇ ಮತ್ತೆ ೨೦೧೩ರ ಫಲಿತಾಂಶ ರಿಪೀಟಾದರೂ ಆಶ್ಚರ್ಯವಿಲ್ಲ !
೨೦೧೪ರಲ್ಲಿ ಇದ್ದ ಮೋದಿ ಸುನಾಮಿ, ರಾಷ್ಟ್ರದಲ್ಲಿ ಇನ್ನೂ ಇದೆ. ಆದರೆ ರಾಜ್ಯದ ಮಟ್ಟಿಗೆ ಸುನಾಮಿಯಾಗಿ (ಒಂದು ಹಂತಕ್ಕೆ ಕೆಲಸ ಮಾಡುತ್ತದೆ) ಕೆಲಸ ಮಾಡುವದಿಲ್ಲ ಎನ್ನುವುದು ೨೦೧೮ರಲ್ಲಿ ಗೊತ್ತಾಗಿದೆ. ಮೋದಿ ಜೊತೆ ಸ್ಥಳೀಯ ನಾಯಕತ್ವ ತುಂಬಾ ಮುಖ್ಯ! ಸ್ಥಳೀಯ ನಾಯಕರೇ ಕಾರ್ಯಕರ್ತನ್ನು ಸಜ್ಜುಗೊಳಿಸಬಲ್ಲರು!
Categories: Articles
