By Bhimashankar Teli
ಪ್ರಜಾಪ್ರಭುತ್ವ, ಸಂವಿಧಾನ, ಹೋರಾಟದ ಕಿಚ್ಚು ,ಭಾಷೆಯ ಹೇರಿಕೆ, ಪ್ರಾದೇಶಿಕ ಭಾಷೆಯ ಕಿಚ್ಚು , ಬಲ ಮತ್ತು ಎಡ ಪಂಥಿ, ಜಿಹಾದ್, ಹಿಂದುತ್ವ, ದೇಶಭಕ್ತಿ, ರಾಷ್ಟ್ರೀಯವಾದಿ, ಕರಿ, ಬಿಳಿ ಹೀಗೆ ಅನೇಕ ಹಲವಾರು ವಿಷಯಗಳು ಜಗತ್ತಿನಲ್ಲಿ ಚಾಲ್ತಿಯಲ್ಲಿವೆ.
ಯಾವದೇ ದೇಶದ ಸುಭದ್ರತೆ, ಶ್ರೀಮಂತಿಕೆ ಮತ್ತು ಜನರ ಜೀವನಮಟ್ಟ ಆಳುವ ನಾಯಕ ಮತ್ತು ಸರ್ಕಾರದ ಮೇಲೆ ಅವಲಂಬಿತವಾಗಿದೆ. ನಮಗೆ ಸ್ವಾತಂತ್ರ ಕೊಟ್ಟು ಹೋಗುವಕ್ಕಿಂತ ಮುಂಚೆ ಬ್ರಿಟಿಷರು ಭಾರತೀಯರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದರು. ಕೆಲವೇ ಕೆಲವು ವರ್ಷಗಳಲ್ಲಿ ಭಾರತ ಹರಿದು ಹಂಚಿ ಹೋಗುತ್ತದೆ ಮತ್ತು ಭಾರತೀಯರಿಗೆ ಆಳುವ ಶಕ್ತಿ ಮತ್ತು ಬುದ್ದಿ ಇಲ್ಲ, ಏನಿದ್ದಿರೂ ಬೇರೆಯವರ ಅಡಿಯಲ್ಲಿ ಜೀವನಮಾಡುವದು ಗೊತ್ತು!. ಆದರೆ ನಮ್ಮ ಪುಣ್ಯಕ್ಕೆ ಇನ್ನೂ ನಾವು ಒಗ್ಗಟ್ಟಾಗಿದ್ದೇವೆ ಮತ್ತು ಗಟ್ಟಿಯಾಗಿದ್ದೇವೆ. ಆಯ್ಕೆಯಾಗುವ ಸರ್ಕಾರದಿಂದ ನಮ್ಮ ದೇಶ ಮತ್ತು ನಾವೆಷ್ಟು ಸುಭದ್ರ ಎಂದು ಯೋಚಿಸಿಯೇ ನಮ್ಮ ಆಯ್ಕೆಯಾಗಿರಬೇಕು. ಇತ್ತೀಚಿನ ಉಧಾಹರಣೆ ನೋಡಿದರೆ ನಮಗೆ ಗೊತ್ತಾಗುತ್ತದೆ ಹೇಗೆ ನಾವು ನಮ್ಮ ದೇಶ ಗಟ್ಟಿಯಾಗಿಡಲು ಶ್ರಮ ಪಡಬೇಕು. ರಾತ್ರೋರಾತ್ರಿ ಅಫ್ಘಾನಿಸ್ತಾನದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ಆಗಿ ಜನರ ಪರಸ್ಥಿತಿ ಹದೆಗೆಟ್ಟಿತ್ತು. ಉಕ್ರೇನ್ ಎಂಬ ರಾಷ್ಟ್ರದ ಮೇಲೆ ರಷ್ಯಾ ದಾಳಿ ಮಾಡಿ ಜನರ ಒಂದೊತ್ತಿಗೆ ಊಟ ಸಿಗದ ಪರಸ್ಥಿತಿ! ಇವೆಲ್ಲವೂ ನೋಡಿದ ಮೇಲೆ ದೇಶದ ಸುಭದ್ರತೆ ಮತ್ತು ಆರ್ಥಿಕ ಸ್ಥಿತಿ ಎಷ್ಟು ಮುಖ್ಯ ಎನ್ನುವುದು!
ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳು ಆಗಿವೆ. ಭಾರತ ದೇಶವನ್ನು ಜಗತ್ತು ಗೌರವ ಕೊಡುತ್ತಿದೆ. ಇವತ್ತಿಗೆ ಸ್ವಲ್ಪ ಗೌರವ ಜಾಸ್ತಿ ಇದೆ ಎಂದರೂ , ಇಂದಿರಾಜಿ ಕಾಲದಲ್ಲೂ ದೇಶದ ಪ್ರಭುತ್ವದ ಬಗ್ಗೆ ಜಗತ್ತಿಗೆ ತೋರಿಸಿದ್ದಾರೆ. ಜಗತ್ತಿನ ಇತಿಹಾಸ ತಗೆದು ನೋಡಿದರೆ ನಮ್ಮ ದೇಶ ಯಾವತ್ತು ಜಗತ್ತಿಗೆ ಹಾನಿ ಮಾಡುವ ಕೆಲಸ ಮಾಡಿಲ್ಲ,ಏನಿದ್ದರೂ ಶಾಂತಿ ಸಂದೇಶ ರವಾನಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ನೊಂದವರ ಪರವಾಗಿ ನಿಂತ ದೇಶ! ಜಗತ್ತಿನ ಅನೇಕ ಧರ್ಮಗಳು ಕ್ಲಿಷ್ಟ ಮತ್ತು ಸಂದಿಗ್ದ ಪರಸ್ಥಿತಿ ಎದುರಿಸಿದಾಗ ಅವರಿಗೆ ಕಣ್ಣೊರಿಸಿ ದೇಶದಲ್ಲಿ ಆಶ್ರಯ ಮಾಡಿಕೊಟ್ಟಿದೆ. ಸ್ವಾಮಿ ವಿವೇಕಾನಂದರು ಇದರ ಪ್ರಸ್ತಾಪವನ್ನು ಅಮೆರಿಕಾದ ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿರೂಪವಾಗಿ ಇಂದಿಗೂ ಇಸ್ರೇಲಿನವರು ನಮಗೆ ಗೌರವ ಕೊಡುತ್ತಾರೆ. ಇಂತಹ ಅದ್ಭುತವಾದ ಇತಿಹಾಸ ಹೊಂದಿದ ಭಾರತ ದೇಶವನ್ನು ಇನ್ನೂ ಭಾರತೀಯರು ಸದೃಢವಾಗಿ ಕಟ್ಟಬೇಕಿದೆ.
ಪ್ರತಿ ದಿವಸ ನಾವೆಲ್ಲ ನೋಡುತ್ತೇವೆ, ಅನೇಕ ಖಾಸಗಿ ಸಂಸ್ಥೆಗಳು ಜಗತ್ತಿನ ವಿವಿಧ ದೇಶಗಳ ಬಡತನ, ಭ್ರಷ್ಟಾಚಾರ, ಸಂಶೋಧನೆ, ನಗರಗಳ ಮಾಲಿನ್ಯ, ಜನರ ಜೀವನಮಟ್ಟ , ಶಿಕ್ಷಣ, ರಸ್ತೆಗಳು ಮತ್ತು ಮೂಲಭೂತ ಸೌಲಭ್ಯಗಳಾದ ಸೂರು ಮತ್ತು ಶುದ್ದ ಕುಡಿಯುವ ನೀರು. ಅನೇಕ ಬಾರಿ ನಮ್ಮ ದೇಶದ ಶ್ರೇಣಿ ಕೆಳಗಿನಿಂದ ನೋಡಬೇಕಾಗುತ್ತದೆ. ಇದೆಲ್ಲ ನೋಡಿದಾಗ ನಮಗೆ ಯಾವದೇ ಆಶ್ಚರ್ಯವಾಗುದಿಲ್ಲ. ಕಾರಣ ನಾವೆಲ್ಲ ದಿನನಿತ್ಯ ನೋಡುತ್ತವೆ, ಹೇಗಿವೆ ನಮ್ಮ ರಸ್ತೆಗಳು, ಶಾಲೆಯ ಶುಲ್ಕ, ಲಂಚಾವತಾರ, ಜಾತಿಯ ವ್ಯವಸ್ಥೆ, ಧರ್ಮಗಳ ಸಂಘರ್ಷ , ಭಾಷೆಯ ಹೇರಿಕೆ ಇತ್ಯಾದಿ . ದೇಶದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಭ್ರಷ್ಟಾಚಾರದಿಂದ ಮುಕ್ತಿ ಮತ್ತು ದೇಶ/ರಾಜ್ಯ ಕಟ್ಟಲು ಜನರ ಜವಾಬ್ದಾರಿ!
ಇತ್ತೀಚಿಕೆ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ, ಭ್ರಷ್ಟರಿಗೆ ಶಿಕ್ಷೆ ಆಗುವ ಹಾಗೆ ಮಾಡಿ ಎಂದು ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದರು. ಅದು ಎಲ್ಲರಿಗೂ ಅನ್ವಯವಾಗುತ್ತದೆ. ಅಧಿಕಾರಿಗಳಿಗೂ ಮತ್ತು ರಾಜಕೀಯ ನಾಯಕರಿಗೆ.
ದೇಶದಲ್ಲಿ ಭ್ರಷ್ಟಾಚಾರ ತೊಲಗಿಸಲು, ಯುವಕರು ರಾಜಕೀಯದಲ್ಲಿ ಪ್ರಜಾಕೀಯ ತರಲು ಪ್ರಯತ್ನಮಾಡಬೇಕು. ಪಕ್ಷ ಯಾವದಾದರೇನು , ಪ್ರಾಮಾಣಿಕತನವನ್ನು ಮೈಗೂಡಿಸಿಕೊಂಡರೇ ಖಂಡಿತ ಈಗಿರುವ ನಮ್ಮ ಬಜೆಟ್ ಉಪಯೋಗಿಸಿಕೊಂಡು ಏನಲ್ಲ ಸಾಧನೆ ಮಾಡಬಹುದು. ಚುನಾವಣೆ ಬಂದಾಗ ಜಾತಿ, ಸ್ನೇಹ, ದುಡ್ಡು ಮತ್ತು ಹೆಂಡ ಇದರ ಜೊತೆ ಯಾವದೇ ಭಾವನಾತ್ಮಕ ವಿಷಯಗಳಿಗೆ ಕಿವಿಕೊಡದೆ , ತತ್ವ ಸಿದ್ದಾಂತ ಮತ್ತು ವಿಷಯಗಳ ಮೇಲೆ ಚಿಂತನೆ ಮಾಡಿ ನಮ್ಮ ಆಯ್ಕೆಯಾಗಿರಬೇಕು. ಪ್ರಜಾಕೀಯ ಎನ್ನವುದು ಹೊಸ ವಿಷಯವೇ ಅಲ್ಲ, ರಾಜಕೀಯದಲ್ಲಿ ಪ್ರಜಾಕೀಯ ಇರಬೇಕು ಎಂದು ಹೇಳಿದೆ ನಮ್ಮ ಸಂವಿಧಾನ. ಯಾವದೇ ಕೆಲಸ , ಯಾವದೇ ನಿರ್ಧಾರ ಪ್ರಜೆಗಳ ಮೂಲಕ ನಡೆಯಬೇಕು. ಪಾರದರ್ಶಕತೆಯಿಂದ್ ಕೂಡಿರಬೇಕು, ಸಾಮಾಜಿಕ ಕಾಳಜಿ ಹೊಂದಿರಬೇಕು ಮತ್ತು ಸಂವಿದಾನ ಬದ್ಧವಾಗಿರಬೇಕು! ಆಯ್ಕೆಯಾದ ಜನಪ್ರಧಿಗಳ ಕೆಲಸ ಕಾರ್ಯಗಳ ಮೂಲಕ ಅವರ ತುಲನೆಮಾಡಬೇಕು. ಯಾವದೇ ನಿರ್ಧಾರ ಸರಿಯಿಲ್ಲದಿದ್ದರೆ , ಅವರನ್ನು ತಗೆದು ಹಾಕುವ ನಿರ್ಧಾರಗಳು ಜನರ ಹತ್ತಿರ ಇರಬೇಕು.(ಸದ್ಯಕ್ಕೆ ಇದೊಂದು ಬಿಟ್ಟು ಎಲ್ಲವೂ ನಮ್ಮಲ್ಲಿ ಇವೆ. ಅವುಗಳಿಂದಲೇ ನಾವು ಸಾಧಿಸಬಹುದು!)
ಕುವೆಂಪು ಅವರು ಹೇಳಿದ ಹಾಗೆ ನಿರಂಕುಶವಾದಿಗಳಾಗಬೇಕು ! ಏನು ಹೀಗೇಂದ್ರೆ? ಯಾವದೇ ವಿಷಯಗಳು ಟ್ರೆಂಡ್, ಬೊಯ್ಕೋಟ್ ಮುನ್ನೆಲೆಗೆ ಬಂದಾಗ ಅದನ್ನು ವಿಮರ್ಶೆ ಮಾಡುವ ಬುದ್ದಿಯನ್ನು ಬೆಳೆಯಿಸಕೊಳ್ಳಬೇಕು. ಬೇರೆಯವರ ಕೈಯಲ್ಲಿ ನಮ್ಮ ಜುಟ್ಟು ಕೊಡಬಾರದು. ಅವರು ತಮಗೆ ಹೇಗೆ ಬೇಕು ಹಾಗೆ ಆಗುವ ದೂರಾಲೋಚನೆಯಿಂದ ವಿಷಯವನ್ನು ವಿಷಯಾಂತರಿಸಿ ನಮ್ಮ ಅಂಕುಶವನ್ನು ಅವರೇ ಹಿಡಿದಿಟ್ಟುಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಎಲ್ಲ ವಿಷಯಗಳನ್ನು ವಿಮರ್ಶೆ ಮಾಡುವ ಅನಿವಾರ್ಯತೆ ಇದೆ. ಚುನಾವಣೆಯಲ್ಲಿ ಇಂತಹ ವಿಷಯಗಳ ಆರ್ಭಟ ತುಂಬಾನೇ ಜಾಸ್ತಿ! ಭಾಷೆಯ ಅಭಿಮಾನ , ಜಾತಿಯ ಅಭಿಮಾನ ಖಂಡಿತ ಇರಬೇಕು, ಆದರೇ ಯಾವುದು ಸರಿ ಮತ್ತು ತಪ್ಪು ಎನ್ನುವ ನಿರ್ಣಯ ನಾವೇ ಮಾಡುವಷ್ಟು ವಿಮರ್ಶೆ ಮಾಡಬೇಕು. ಕೇವಲ ಮತಕ್ಕಾಗಿ ಮಾಡುವ ಗಿಮಿಕ್ ಇದ್ದರೇ ನೇರವಾಗಿ ತಿರಸ್ಕಾರ ಮಾಡುವ ಪ್ರವೃತ್ತಿ ಬೆಳಿಸಿಕೊಂಡರೇ ಮುಂದೆ ಆಯ್ಕೆಯಾಗುವ ಸರ್ಕಾರ ನಮ್ಮತನವನ್ನು ಕಾಪಾಡುವ ಅಪೇಕ್ಷೆ ಮಾಡಬಹುದು! ಇಲ್ಲವಾದರೇ ಶಾಸಕನಾಗುವ ಮುಂಚೆ ಸಾಲದಲ್ಲಿ ಇದ್ದೆ, ಇಂದು ಹತ್ತಾರು ಕಾರ್ ಒಡೆಯ , ನೂರಾರು ಕೋಟಿ ಆಸ್ತಿ! ಅಷ್ಟೆಲ್ಲ ದುಡ್ಡು ನಮ್ಮದೇ ಹೊಡೆದು ಮಾಡಿದ್ದು ಎನ್ನವುದು ವಿಶೇಷ! ಸದ್ಯಕ್ಕೆ ನಾನು ವಿಷಯವನ್ನು ಮುಗಿಸುವದಿಲ್ಲ.. ಇದರ ಬಗ್ಗೆ ನನ್ನ ಮನದಾಳದ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ… ನಿಮ್ಮ ಅಭಿಪ್ರಾಯಯಗಳು ಬರಲಿ… ಪ್ರಜಾಕೀಯ ಯಾರಿಗೂ ಸೇರಿದ್ದಲ್ಲ, ಅದರ ವಿಮರ್ಶೆ ಮತ್ತು ಚಿಂತನೆಗಳು ನಿರಂತರವಾಗಿರಬೇಕು…
Categories: Articles
