By Bhimashankar Teli
ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಎಲ್ಲ ಮಹನೀಯರು, ಸಂತರು ಮತ್ತು ಸಾಮಾನ್ಯರು ಭೇಟಿ ಕೊಟ್ಟು ಶ್ರೀಗಳ ಗುರುಗಳಾದ ಗುರುದೇವರಾದ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ಪೂಜೆ ಮಾಡಿ ನಮಸ್ಕರಿಸುತ್ತಾರೆ. ಶ್ರೀಗಳು ದೇಹದ ಆಶಯಗಳು ಬಗ್ಗೆ ತಮ್ಮದೇ ವಿಚಾರಗಳು ಹೇಳಿ, ತಮ್ಮನ್ನು ತಾವು ಮತ್ತೊಂದು ಗದ್ದುಗೆ ಆಗುವದಕ್ಕೆ ಆಸ್ಪದ ಕೊಡದೆ ಇರುವ ಕಾರಣ ನಮಗೆ ಇವತ್ತು ತಿಳಿಯುತ್ತಿದೆ. ತಮ್ಮನ್ನು ನೋಡಬೇಕಾದರೆ ನಮ್ಮ ಗುರುಗಳಾದ ಗುರುದೇವರಲ್ಲಿ ಕಾಣಿ! ಅದರ ಜೊತೆ ಅವರ ಹೇಳಿದ ಸುಂದರ ಬದುಕಿನ ಸಾರವನ್ನು ನಿತ್ಯ ಅನುಭವಿಸಿಬೇಕಾದರೆ ಶ್ರೀಗಳನ್ನು ಹೃದಯದಲ್ಲಿ ಅಲಂಕರಿಸಬೇಕು!
ಗವಿ ಸಿದ್ದೇಶ್ವರ ಗುರುಗಳ ಪ್ರಕಾರ, ಶ್ರೀಗಳು ಯಾವದೇ ಪಂಥಕ್ಕೆ ಅಂಟಿಕೊಳ್ಳಲಿಲ್ಲ, ಯಾವದೇ ಗ್ರಂಥಕ್ಕೆ ಅಂಟಿಕೊಳ್ಳಲಿಲ್ಲ. ಅವರಿಗೆ ಉಪನಿಷತ್ತು ಬೇಕು, ತತ್ವಜ್ಞಾನಿಗಳು ಬೇಕು ಮತ್ತು ವಚನ ಸಾಹಿತ್ಯವು ಬೇಕಿತ್ತು. ಇಂಥಹದೇ ಗ್ರಂಥಕ್ಕೆ ಮುದ್ರೆ ಹಾಕದೆ, ಮಹಾಮಾನತಾವಾದಿ ಶ್ರೇಷ್ಠ ಶತಮಾನದ ಸಂತ ಎನಿಸಿಕೊಂಡಿದ್ದರು. ತಮ್ಮ ೧೯ನೇ ವಯಸ್ಸಿನಲ್ಲಿ ತಮ್ಮ ಗುರುಗಳಾದ ಗುರುದೇವರು ತಮ್ಮ ಪ್ರವಚನದಲ್ಲಿ ಹೇಳಿದ “ಸಿದ್ದಾಂತ ಶಿಖಾಮಣಿ” ಪುಸ್ತಕ ಬರೆದಿದ್ದರು. ಅತ್ಯಂತ ಶ್ರೇಷ್ಠ ಶರಣ ಅಲ್ಲಮ ಪ್ರಭುದೇವರ ವಚನವನ್ನು ನಿರ್ವಚನ ಮಾಡಿದ್ದು ಮತ್ತೊಮ್ಮೆ ಶ್ರೀಗಳ ಮೂಲಕ ಅಲ್ಲಮ ಜನನವಾಗಿದ್ದಕ್ಕೆ ಇದೆಲ್ಲ ಸಾಧ್ಯವಾಗಿದ್ದು ಎಂದು ಹೇಳುವವರಿಗೆ ಕಡಿಮೆ ಏನಿಲ್ಲ.
ಮೈಸೂರಿನಲ್ಲಿ ಮೋದಿಯವರಿದ್ದ ವೇದಿಕೆಯಲ್ಲಿ ಮೋದಿಗೆ ಹೊಗಳಿದ್ದು ಎಷ್ಟೋ ಜನರಿಗೆ ಅರಗಿಸಿಕೊಳ್ಳಲ್ಲಿಕ್ಕೆ ಆಗಲಿಲ್ಲ, ಆದರೆ ಅವರಿಗೆ ಇನ್ನೊಂದು ವಿಷಯ ಗೊತ್ತೇ ಇರಲಿಲ್ಲ, ಶ್ರೀಗಳು ವಿಜಯಪುರದ ಕಾಂಗ್ರೆಸಿನ ಎಂ ಬಿ ಪಾಟೀಲರನ್ನು ಹೊಗಳಿದ್ದು. ಶ್ರೀಗಳಿಗೆ ವ್ಯಕ್ತಿಗಳು ಮುಖ್ಯವಾಗಿರಲಿಲ್ಲ, ಅವರಿಗೆ ವ್ಯಕ್ತಿಗಳು ಮಾಡಿದ್ದ ಕೆಲಸ ಮಾತ್ರ! ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಅನೇಕ ನೀರಾವರಿ ಕೆಲಸಗಳು ಅಚ್ಚುಕಟ್ಟಾಗಿ ಮಾಡಿದಕ್ಕೆ ಹೊಗಳಿದ್ದರು. ಸುಮಾರು ೨೦ ವರ್ಷಗಳ ಹಿಂದೆ ಬಹಿರಂಗ ವೇದಿಕೆಯಲ್ಲಿ ಪಾಟೀಲರಿಗೆ ವಿಜಯಪುರಕ್ಕೆ ನೀರು ಕೊಟ್ಟರೆ ಇದೊಂದು ಕ್ಯಾಲಿಫೋರ್ನಿಯಾ ಆಗುತ್ತದೆ ಎಂದು ಹೇಳಿದ್ದರು, ಅದನ್ನು ಕಾರ್ಯರೂಪಕ್ಕೆ ಪಾಟೀಲರು ತಂದಿದ್ದಕ್ಕೆ ಅವರನ್ನು ಹೊಗಳಿದ್ದರು. ಅವರಿಗೆ ರೈತರು ಮತ್ತು ಹಳ್ಳಿಗರ ಜೀವನ ಮಟ್ಟ ಸುಧಾರಿಸಬೇಕು ಎನ್ನುವ ಮಹದಾಶೆ! ರಾಜಕಾರಿಣಿಗಳು ಭೇಟಿ ಮಾಡಲಿಕ್ಕೆ ಬಂದರೇ , ಶ್ರೀಗಳೇ ಕೋಣೆಯಿಂದ ಹೊರಗೆ ಬಂದು ಭೇಟಿ ಮಾಡುತ್ತಿದ್ದರು. ಹಾಗೆಯೇ ಸಾಮಾನ್ಯರು ಬಂದರೆ ಅವರಿಗೂ ಇದೆ ರೀತಿ ತಾವೇ ಸ್ವತಃ ಹೊರೆಗೆ ಬಂದು ಭೇಟಿ ಮಾಡುತ್ತಿದ್ದರು. ಶ್ರೀಗಳ ಬಗ್ಗೆ ಗೊತ್ತಿರಿದೆ ಮಾತನಾಡಿದ ಹೃದಯಗಳು ಸಂತೋಷದಿಂದ ಇರಲಿ.
ವಿಜಯಪುರದ ಶಾಸಕರು ಯತ್ನಾಳ್ ಅವರು ದೊಡ್ಡ ಆಸ್ಪತ್ರೆ ನಿರ್ಮಿಸಿ, ಅದಕ್ಕೆ ಶ್ರೀಗಳ ಹೆಸರು ಇಡಲು ಅವರ ಅನುಮತಿ ಕೇಳಿದ್ದರು. ಇಲ್ಲಿಯವರೆಗೆ ಶ್ರೀಗಳು ಯಾರಿಗೂ ತಮ್ಮ ಹೆಸರು ಯಾವದೇ ಶಾಲೆ, ಕಾಲೇಜುಗಳಿಗೆ ಇಡಬೇಡಿ ಎಂದು ಹೇಳಿದ್ದರು ಅದಕ್ಕಾಗಿ ಯಾವದೇ ಸಂಸ್ಥೆಯವರು ಶ್ರೀಗಳ ಹೆಸರು ಇಟ್ಟಿರಲಿಲ್ಲ. ಆದರೆ ಈ ಬಾರಿ ಬಸವನಗೌಡರು ನಾನು ನಿಮ್ಮ ಹೆಸರನ್ನು ಯಾವದಕ್ಕೂ ದುರ್ಬಳಕೆ ಮಾಡುವದಿಲ್ಲ, ಬಡವರಿಗಾಗಿ ಆಸ್ಪತ್ರೆ ನಿರ್ಮಿಸಿದ್ದೇನೆ ಗುರುಗಳೇ ಅದಕ್ಕಾಗಿ ನಿಮ್ಮ ಹೆಸರು ಇಟ್ಟಿದ್ದೇನೆ, ಬೇಡ ಎಂದು ಹೇಳಬೇಡಿ ಎಂದಾಗ , ಶ್ರೀಗಳು ಹೇಳಿದ್ದು ಆಯಿತು ಬಿಡಿ ಅದು ನನ್ನ ಹೆಸರು ಅಲ್ಲ ಎಂದು ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದರಂತೆ!
ಚಿಂತಕ ಸೂಲಿಬೆಲೆ , ಶ್ರೀಗಳ ಜೊತೆ ಇದ್ದರೇ , ಅವರಿಂದ ಧನಾತ್ಮಕ ವಿಷಯಗಳು ಮಾತ್ರ ಚರ್ಚಗೆ ಬರುತ್ತಿದ್ದವು, ಯಾವತ್ತೂ ಯಾರ ಬಗ್ಗೆಯೂ ಹೀಯಾಳಿಸಿ ಮಾತನಾಡಿದ್ದು ನಾನು ಕಂಡೆ ಇಲ್ಲ. ಏನಿದ್ದರೂ ಪ್ರೀತಿಸುವ ಮಾತುಗಳು! ಹೊಗಳಿಕೆ ಇಂದ ಬಹೂ ದೂರ! ಅವರನ್ನು ಸಂಘಿಗಳು ಎಂದು ಕೆಲವರು ಹೇಳಿದ್ದು ನೋಡಿ ನನಗೆ ಗೊತ್ತಾಗಿದ್ದು, ಶ್ರೀಗಳ ಶಕ್ತಿ ಇವರಿಗೆ ತಿಳಿಯದೆ ಹೋಯಿತಲ್ಲ! ಅವರಿಂದಲೇ ನನಗೆ ಅನೇಕ ಶರಣರ ಬಗ್ಗೆ ಗೊತ್ತಾಗಿದ್ದು. ಅವರು ಯಾವದಕ್ಕೂ ಅಂಟಿಕೊಂಡವರಲ್ಲ. ಅವರಿಗೆ ಯಾವದೇ ಬಂಧನಗಳಿಂದ ಕಟ್ಟಿಹಾಕುವ ಸಾಮರ್ಥ್ಯ ಇರಲಿಲ್ಲ ಎಂಬುದು ನನ್ನ ಭಾವನೆ! ಅವರ ಅಂತಿಮ ಯಾತ್ರೆಗೆ ಬಂದ ಜನಗಳೇ ಸಾಕ್ಷಿ! ಶ್ರೀರಾಮನ ಜೊತೆ ಇದ್ದ ಕೆಲವೇ ಕೆಲವು ಜನರಿಗೆ ಗೊತ್ತಿತ್ತು ರಾಮ ದೇವರೆಂದು, ಕೃಷ್ಣನ ಜೊತೆ ಇದ್ದ ಕೆಲವೇ ಕೆಲವರಿಗೆ ಗೊತ್ತಿತ್ತು ಕೃಷ್ಣ ದೇವರೆಂದು, ಹಾಗೆಯೇ ಶ್ರೀಗಳ ಜೊತೆಗಿದ್ದವರ ಕೆಲವರಿಗೆ ಮಾತ್ರ ಗೊತ್ತು, ನಾವು ಇರುವುದು ದೇವರ ಜೊತೆ! ಇದು ಹೇಳಿದ್ದು ಶ್ರೀಗಳು ಇದ್ದ ಕಾಲದಲ್ಲಿ. ೫೦ ವರ್ಷದ ನಂತರ ನಾನೇನಾದರು ಶ್ರೀಗಳು ಮಹಾನ ತ್ಯಾಗಿಗಳು, ಜೇಬು ಇರಲಿಲ್ಲ, ದುಡ್ಡೇ ಮುಟ್ಟಲಿಲ್ಲ ಎಂದರೇ , ನನ್ನನ್ನು ಅವರ ಭಕ್ತ ಅದಕ್ಕೆ ಹೀಗೆಲ್ಲ ವರ್ಣನೆ ಮಾಡುತ್ತಿದ್ದಾನೆ ಎಂದು ಹೇಳಿದರು ಅಚ್ಚರಿಪಡಬೇಕಿಲ್ಲ!
ವೀರಶೈವ ಪರಂಪರೆ ಹೊಂದಿದ ಶಿವರಾತ್ರಿ ದೇಶೀ ಕೇಂದ್ರ ಸ್ವಾಮಿಗಳು, ದಾಸಬೋಧ ಸಂಪ್ರಾದಾಯದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸಾಮಿಗಳು, ಸ್ವಾಮಿ ವಿವೇಕಾನಂದ ಆಶ್ರಮ ಸ್ವಾಮಿಗಳು, ಅಪ್ಪಟ ಬಸವಣ್ಣನವರ ಅನುನಾಯಿ ನಿಜಗುಣಾನಂದ ಸ್ವಾಮಿಗಳು ಹೀಗೆ ಹಲವಾರು ಹತ್ತಾರು , ದ್ವೈತ, ಅದ್ವೈತ, ವಿಶಿಷ್ಟಾದ್ವೈತ , ವಚನ ಸಾಹಿತ್ಯ, ಬುದ್ಧ , ಮಾಹಾವೀರ, ಯೇಸು, ಮೊಹಮದ ಎಲ್ಲರ ಬಗ್ಗೆಯೂ ತಿಳಿದು ಬದುಕಿನ ಬಗ್ಗೆ ಬೋಧನೆ ಮಾಡಿದ ವಿಶಿಷ್ಟ ಸಂತ ನಮ್ಮ ಶ್ರೀಗಳು! ಅವರದು ಅನಂತ ಅಪರಿಮಿತ ಪಥವಾಗಿತ್ತು.
ಒಬ್ಬ ಮಾಧ್ಯಮದ ಮಿತ್ರ ಶ್ರೀಗಳ ಸಂದರ್ಶನ ಬೇಕು ಎಂದು ಹೋಗಿದ್ದರಂತೆ, ಶ್ರೀಗಳು ಅವರನ್ನು ಕರೆದು , ನಾನು ಇಲ್ಲಿ ೩೦ ದಿವಸಗಳ ಕಾಲ ಪ್ರವಚನ ಹೇಳುತ್ತೇನೆ. ೩೦ ದಿವಸಗಳು ನೀವು ಇಲ್ಲಿ ಬಂದು ಪ್ರವಚನ ಕೇಳಿ, ಕೇಳಿದ ಮೇಲೂ ಏನಾದರೂ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಸಂದರ್ಶನ ಮಾಡುವಿರಿ ಎಂದಿದ್ದರಂತೆ! ೩೦ ದಿವಸಗಳ ನಂತರ ಮಾಧ್ಯಮ ಮಿತ್ರರು ಅವರ ಭಕ್ತರಾಗಿ ಹೋಗಿದ್ದರು. ಕೊನೆಯವರೆಗೂ ಯಾರಿಗೂ ಸಂದರ್ಶನ ಕೊಡಲಿಲ್ಲ. ದೇವರಿಗೆ ಪ್ರಚಾರದ ಹಂಗೇಕೆ!
ಶ್ರೀಗಳು ವೈಕುಂಠ ಏಕಾದಶಿ ದಿನದಂದು ಇಹಲೋಕ ತ್ಯಜಿಸಿದಾಗ, “ನಿರ್ಮೋಹಿ ನಿರ್ಗಮನ ” , “ದೇವರು ನಡಿಗೆ ದೇವರ ಕಡೆಗೆ” “ಶತಮಾನದ ಸಂತ” ಹೀಗೆ ಅನೇಕ ಗೂಡಾರ್ಥದ ಶಬ್ದಗಳು ಪ್ರಯೋಗವಾಗಿದ್ದು ಇದೆ ಮೊದಲಿರಬೇಕು ! ಅವರ ಭಕ್ತ ಹೇಳಿದ್ದು ಒಂದೇ ಮಾತು “ಶ್ರೀಗಳು ಇನ್ನೊಮ್ಮೆ ಹುಟ್ಟಿ ಬರುವದಿಲ್ಲ” ಕಾರಣ ಅವರು ಯಾವ ಕಾರಣಕ್ಕೆ ಬಂದಿದ್ದರೊ ಅದನ್ನು ಸುಂದರವಾಗಿ ಸತತವಾಗಿ ೫೦ ವರ್ಷಗಳ ಮೂಲಕ ನಡೆ ಮತ್ತು ನುಡಿಗಳ ಮೂಲಕ ಹೇಳಿದ್ದಾರೆ. ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದಾರೋ ಆ ಕಾರ್ಯ ನಿಷ್ಠೆಯಿಂದ ಮಾಡಿ ದೇವಾರಾಗಿ ಹೋಗಿದ್ದಾರೆ. ಮತ್ಯಾಕೆ ಬರತಾರ ಎಂದು ಅವರಿಗೆ ಪ್ರಶ್ನೆ ಇಟ್ಟ !
ಶ್ರೀಗಳ ಕಠೋರ ತ್ಯಾಗದಿಂದ, ಅವರ ಜೀವನ ಸರಳ, ವಿಶಿಷ್ಟ, ನಿಸ್ಕಲ್ಮಷ ಮತ್ತು ಪರಮ ಪ್ರೇಮವಾಗಿತ್ತು. ಕೆ ಸಿ ಶಿವಪ್ಪನವರು ಬರೆದ “ಸಂತನೆಂದರೆ ಯಾರು” ಹಾಡನ್ನು ಶ್ರೀಗಳಿಗೆ ಬರೆದೆದ್ದು ನೋಡಿದರೆ,ಈ ಹಾಡಿನ ಸಾಲುಗಳು ಶ್ರೀಗಳನ್ನು ತುಂಬಾ ಚೆನ್ನಾಗಿ ಹೋಲಿಕೆಯಾಗುತ್ತವೆ.
Categories: Articles
