
ರಾಜಕೀಯದಲ್ಲಿ ನಾಯಕರೆನಿಸಿಕೊಂಡವರು ಒಂದು ಹೇಳಿಕೆ ಕೊಟ್ಟರೆ ಅದಕ್ಕೊಂದು ಘನತೆ ಮತ್ತು ಗೌರವ ಇರಬೇಕು. ಹೇಳಿಕೆ ಒರೆಗೆ ಹಚ್ಚಿ ನೋಡಿದಾಗ ಅದು ಸತ್ಯವೆನಿಸಬೇಕು. ರಾಜ್ಯದ ರಾಜಕಾರಣದಲ್ಲಿ ಸಿದ್ದಾಂತದ ರಾಜಕಾರಣ ಮಾಡಿದವರು ಅನೇಕರು. ಅದು ಎಡಪಂಥಿ ಇರಲಿ ಅಥವಾ ಬಲಪಂಥಿ ಇರಲಿ. ತಾವು ಅಂಟಿಕೊಂಡ ಪಥಕ್ಕೆ ಅಧಿಕಾರಕ್ಕಾಗಿ ತಮ್ಮ ಸಿದ್ದಾಂತ ಬದಲಿಸದೆ ರಾಜಕಾರಣದಲ್ಲಿ ಅನೇಕ ಹುದ್ದೆಯನ್ನು ಪಡೆದು ಸೇವೆ ಮಾಡಿದ್ದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಲೋಕಸಭೆಯಲ್ಲಿ ತಮ್ಮ ಪಕ್ಷಕ್ಕೆ ಜನರು ತಿರಸ್ಕಾರ ಮಾಡಿದಾಗ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಚುನಾವಣೆಗೆ ಹೋಗಿ , ಜನರಿಂದ ಮತ್ತೊಮ್ಮೆ ಗದ್ದುಗೆ ಪಡೆದದ್ದು ಹೆಗ್ಡೆಯವರ ಕೀರ್ತಿ! ಲೋಕಸಭೆಯಲ್ಲಿ ಬಹುಮತ ಸಾಭೀತು ಪಡಿಸಲು ಬೇಕಾಗಿದ್ದ ಒಂದು ಮತದಿಂದ ಪ್ರಧಾನಮಂತ್ರಿ ತಪ್ಪಿತು ಎನ್ನುವ ನೋವಿಗಿಂತ , ತಪ್ಪು ದಾರಿ ಹಿಡಿಯಲಿಲ್ಲ ಎನ್ನುವ ಸಂತೋಷ ಅಟಲ್ ಅವರಿಗೆ ಇತ್ತು.
ಮಾಜಿ ಮುಖ್ಯಮಂತ್ರಿ ದಿವಂಗತ ನಿಜಲಿಂಗಪ್ಪನವರ ಮನೆಯ ವಿದ್ಯುತ್ ಬಿಲ್ ಪಾವತಿ ಮಾಡದಿದ್ದಕ್ಕೆ ವಿದ್ಯುತ್ ನಿಲ್ಲಿಸಿದ್ದರು. ಅದನ್ನು ಒಬ್ಬ ಅಧಿಕಾರಿ ಪಾವತಿಸಿದ್ದು ನಿಜಲಿಂಗಪ್ಪನವರಿಗೆ ಗೊತ್ತಾಗಿ , ಅವರ ಮನೆಗೆ ಹೋಗಿ ದುಡ್ಡು ಕೊಟ್ಟು ಬಂದಿದ್ದು ತಿಳಿದರೆ ಅವರ ಸಿದ್ದಾಂತದ ಅರಿವು ನಮಗಾಗುತ್ತದೆ. ಇಲ್ಲಿ ನಾವು ಪಕ್ಷಾತೀತವಾಗಿ ನೋಡಿದರೆ ಎಲ್ಲ ಪಕ್ಷದಲ್ಲೂ ಸಿದ್ದಾಂತದ ಜೊತೆ ರಾಜಕೀಯ ಮಾಡಿದವರನ್ನು ನಾವು ಕಾಣುತ್ತವೆ. ಹಾಗೆ ಇಂದಿನ ನಮ್ಮ ಯಡಿಯೂರಪ್ಪನವರು ತಮ್ಮನ್ನು ವಿರೋಧಿಸುವ ಗುಂಪು ಬಿಜೆಪಿಯಲ್ಲಿ ಇದ್ದಾಗ , ಅದಕ್ಕೆ ತಿರುಗಿ ಬಿದ್ದು ಕೆಜಿಪಿ ಪಕ್ಷ ಸ್ಥಾಪನೆ ಮಾಡಿದರೇ ಹೊರೆತು ತಮ್ಮ ಸಿದ್ದಾಂತಕ್ಕೆ ಹೊಂದಿಕೊಳ್ಳದ ಪಕ್ಷಕ್ಕೆ ಸೇರಿಕೊಳ್ಳಲಿಲ್ಲ. ಹೊರೆಗೆ ಹೋದರೂ ತಮ್ಮ ಮಾತೃ ಪಕ್ಷದ ಬಗ್ಗೆ ಒಂದು ಸಣ್ಣ ಮಾತು ಆಡಲಿಲ್ಲ. ಬೇರೆಯವರು(ಅಂದಿನ ಕೆಜಿಪಿ ಪಕ್ಷದ ಧನಂಜಯವರು) ಅಡ್ವಾಣಿಯವರ ಬಗ್ಗೆ ಹಗುರವಾಗಿ ಮಾತನಾಡಿದಾಗ ಅದಕ್ಕೆ ಯಡಿಯೂರಪ್ಪನವರು ಕ್ಷಮೆ ಕೇಳಿದರು. ಸಂಘದ ಬಗ್ಗೆ ಒಂದು ಕೆಟ್ಟ ಶಬ್ದ ಆಡಲಿಲ್ಲ. ಕಾರಣ ಸಿದ್ದಾಂತದ ಅರಿವು ಅವರಿಗಿತ್ತು.
ಇಂದಿನ ರಾಜಕೀಯ ಬೆಳವಣಿಗೆಯನ್ನು ನೋಡಿದರೇ , ಅಧಿಕಾರಕ್ಕಾಗಿ ಯಾವದೇ ಸಿದ್ದಾಂತವನ್ನು ಒಪ್ಪಿಕೊಳ್ಳುವ ಕಾಲ! ಇದರ ಮಧ್ಯೆ ಸ್ವಾಭಿಮಾನಕ್ಕಾಗಿ ಹೋರಾಡುವ ರಾಜಕಾರಣಿಗಳು ಇಂದಿಗೂ ಇದ್ದಾರೆ ಎನ್ನವುದು ಸೋಜಿಗದ ಸಂಗತಿ!
ದಕ್ಷಿಣ ಭಾರತದ ನಮ್ಮ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿದಿದ್ದು ದೊಡ್ಡ ಸಾಧನೆ! ಅದಕ್ಕೆ ಮೂಲ ಕಾರಣ ಯಡಿಯೂರಪ್ಪನವರ ಶ್ರಮ. ಇವರ ಜೊತೆ ಅನಂತಕುಮಾರ, ಶಿವಪ್ಪ , ಇನ್ನು ಅನೇಕೆ ಅಗಲಿದ ಹಿರಿಯ ಜೀವಗಳು ಹೆಗಲು ಕೊಟ್ಟಿದ್ದರು. ಮೊಟ್ಟ ಮೊದಲ ಬಾರಿ ರಾಜ್ಯದಲ್ಲಿ ಎಂದರೆ ೨೦೦೮ರಲ್ಲಿ ಯಡಿಯೂರಪ್ಪನವರ ಕೈ ಬಲಪಡಿಸಲು ರಾಜ್ಯದ ಜನತೆ ಬಿಜೆಪಿಗೆ ಮತಹಾಕಿದ್ದರು. ಅಧಿಕಾರ ಹಿಡಿಯುವಕ್ಕಿಂತ ಮುಂಚೆ ನಮ್ಮ ನಾಯಕ ಯಡಿಯೂರಪ್ಪ ಎಂದು ಕರೆದ ಜನ ಅಧಿಕಾರ ಸಿಕ್ಕಿದ ಕ್ಷಣ ಅವರನ್ನೇ ಹಿಂದಿನಿಂದ ಚೂರಿ ಹಾಕಲು ಪ್ರಾರಂಭಿಸಿದರು. ಅದು ಎಲ್ಲಿಯವರೆಗೆ ಹೋಯಿತು ಎಂದರೆ ಅವರನ್ನೇ ಅಧಿಕಾರದಿಂದ ಕೆಳಗೆ ಇಳಿಸಿ ಪಕ್ಷದಿಂದ ಹೊರಹೋಗುವಂತೆ ಮಾಡಿದರು. ಅದರ ಪ್ರತಿಫಲ ೨೦೧೩ರಲ್ಲಿ ಬಿಜೆಪಿ ಗೆದ್ದಿದ್ದು ೪೦ ಸೀಟ್! ಅವರನ್ನು ಅತಿಯಾಗಿ ಚೂರಿಹಾಕಿದ್ದ ನಾಯಕ ಮೂರನೆಯ ಸ್ಥಾನಕ್ಕೆ ತೃಪ್ತಿ ಪಟ್ಟಕೊಳ್ಳಬೇಕಾಯಿತು. ಯಡಿಯೂರಪ್ಪ ಹೇಳಿದ್ದು ನಿಮ್ಮ ಸಾಮೂಹಿಕ ನಾಯಕತ್ವ ೫೦ ಸೀಟ್ ಗೆದ್ದರೆ ನಾನು ರಾಜಕೀಯದಿಂದ ದೂರವೇ ಉಳಿಯುತ್ತೇನೆ ಎಂದಿದ್ದರು. ಶಿವಮೊಗ್ಗದ ನಾಯಕನಿಗೆ ವಿಧಾನಸೌಧ ಟಿವಿಯಲ್ಲಿ ನೋಡುವ ಹಾಗೆ ಮಾಡುತ್ತೇನೆ ಎಂದಿದ್ದರು. ಅದಕ್ಕೆ ಎಲ್ಲರೂ ಕರೆಯುವುದು ಯಡಿಯೂರಪ್ಪನವನ್ನು ಮಾಸ್ ಲೀಡರ್! ಜನರ ನಾಡಿಮಿಡಿತ ಅರಿತಿದ್ದರೇ ಮಾತ್ರ ಹೀಗೆ ಹೇಳುವುದಕ್ಕೆ ಸಾಧ್ಯ!
೨೦೧೩ರ ಚುನಾವಣೆಯಲ್ಲಿ ತಮ್ಮ ಶಕ್ತಿ ನೋಡಿದ ಇದೆ ಬಿಜೆಪಿಯ ನಾಯಕರು ಯಡಿಯೂರಪ್ಪನವರು ಬಿಜೆಪಿಗೆ ಬರಲೇಬೇಕು ಎಂದು ಕರೆದುಕೊಂಡು ಬಂದರು! ಮುಂದೆ ೨೦೧೮ರ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಹೆಚ್ಚಿನ ಸೀಟ್ ಗೆದ್ದಿತು. ಸಮಿಶ್ರ ಸರ್ಕಾರ ರಚನೆ ಮಾಡಿ ವಿಫಲವಾದಾಗ ಮತ್ತೆ ಸರ್ಕಾರ ರಚನೆಮಾಡುವಾಗ ನಮ್ಮ ನಾಯಕ ಯಡಿಯೂರಪ್ಪ ಎಂದಿದ್ದ ಸ್ವಯಂ ಘೋಷಿತ ನಾಯಕರು ಅಧಿಕಾರ ಸಿಗುತ್ತಲೇ, ತಮಗೆ ಮಂತ್ರಿ ಸಿಗದೇ ಇದ್ದಾಗ ಮತ್ತದೇ ೨೦೦೮ರ ಹಳೆಯ ಕಥೆ! ಅನೇಕರಿಗೆ ಟಿಕೆಟ್ ಕೊಡಿಸಿ ಪ್ರಚಾರಕ್ಕೆ ಹೋಗಿ ಗೆಲ್ಲಿಸಿಕೊಂಡು ಬಂದಿದ್ದು ಯಡಿಯೂರಪ್ಪನವರು, ಆದರೂ ಮಂತ್ರಿ ಸ್ಥಾನ ಸಿಗದೇ ಇರುವದಕ್ಕೆ ಅವರನ್ನೇ ಟೀಕೆ ಮಾಡಲು ಶುರುವಿಟ್ಟು ಕೊಂಡರು. ಇದು ರಾಜ್ಯ ಬಿಜೆಪಿಯ ಇತಿಹಾಸ.
ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರರವರು ಇತ್ತೀಚಿನ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಯಾರಾದರೂ ಯಡಿಯೂರಪ್ಪನವರನ್ನು ಟೀಕೆ ಮಾಡಿದರೆ ಅದು ನೇರವಾಗಿ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ಫಲಿತಾಂಶ ಮುಂದೆ ಗೊತ್ತಾಗಲಿದೆ! (೨೦೧೩ರಲ್ಲಿ ಬಿಜೆಪಿಯ ಒಳಜಗಳದ ಫಲಿತಾಂಶ ನೋಡಿದ್ದೇವೆ.)ಇದು ಸತ್ಯವು ಹೌದು! ಇಂದಿಗೂ ಎಲ್ಲರನ್ನು ಪ್ರೀತಿಯಿಂದ ಕಾಣುವ ಯಡಿಯೂರಪ್ಪನವರು ಜನರಿಗೆ ಹತ್ತಿರವಾಗಿದ್ದಾರೆ. ಇಷ್ಟೆಲ್ಲಾ ಇದ್ದರೂ ಯಡಿಯೂರಪ್ಪನವರನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೇಕ ಒಳ್ಳೆಯ ಯೋಜನೆಗೆಳು ಕೊಟ್ಟಿದೆ. ಅತಿವೃಷ್ಟಿಯಲ್ಲಿ ಮತ್ತು ಕರೋನ ಸಮಯದಲ್ಲಿ ಪರಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದೆ. ಆದರೂ ಪಕ್ಷಕ್ಕೆ ಒಳ್ಳೆಯ ಹೆಸರು ಜನರ ಮಧ್ಯೆದಲ್ಲಿ ಅಷ್ಟೇನೂ ಉತ್ತಮ ರೀತಿಯಲ್ಲಿ ಇಲ್ಲ ಇದಕ್ಕೆ ಕಾರಣ ಪಕ್ಷದ ನಾಯಕರ ಹಗುರವಾದ ಮಾತುಗಳು. ಮಂತ್ರಿ ಸ್ಥಾನ ಸಿಗದೇ ಇರುವ ಸಿಟ್ಟು ಮತ್ತು ಯಡಿಯೂರಪ್ಪನವರ ವಿರೋಧಿಗಳ ಬಣ ಯಡಿಯೂರಪ್ಪನವರನ್ನು ಹೇಗಾದರೂ ಮಾಡಿ ಬದಿಗೆ ಸರಿಸಿ ಪಕ್ಷವನ್ನು ತಮ್ಮ ಹಿಡಿತಕ್ಕೆ ತಗೆದುಕೊಳ್ಳುವ ಹುನ್ನಾರ! ಪಕ್ಷದ ಹಿಡಿತ ತಗೆದುಕೊಳ್ಳಲಿ ಬೇಡ ಎನ್ನುವದಿಲ್ಲ ಆದರೆ ಅದು ಜನರ ಮನಸ್ಸು ಗೆದ್ದು ತಗೆದುಕೊಳ್ಳಬೇಕು. ಅದು ಬಿಟ್ಟು ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲು ಒಂದು ಸಮಾಜದ ಜನರ ಮಧ್ಯೆದಲ್ಲಿ ಸುಳ್ಳನ್ನು ನೂರು ಬಾರಿ ಹೇಳಿ ಹೇಳಿ ಸತ್ಯ ಮಾಡಲು ಹೊರಟರೆ ಅದರ ಹಾನಿ ಯಾರಿಗೆ ಎಂಬ ಅರಿವು ಇಲ್ಲದೆ ಹೋದರೇ ಅವರೆಂಥ ನಾಯಕ! ಇಂಥವರ ಆಟೋಪಗಳಿಗೆ ನೀರೆರೆದು ಸಾಕಿರುವ ದೆಹಲಿ ಮಟ್ಟದ ನಾಯಕರಿಗೆ ನಿಜ ಕಾರ್ಯಕರ್ತರ ಶಾಪ ತಟ್ಟದೇ ಬಿಡುವದಿಲ್ಲ. ಹಗುರವಾಗಿ ನಾಲಿಗೆ ಹರಿಬಿಡುವ ನಾಯಕರಿಗೆ ದೆಹಲಿ(ರಾಜ್ಯದಿಂದ ಹೋದವರು) ನಾಯಕರ ಜೊತೆ ಸ್ಥಳೀಯ ನಾಯಕರು ಅವರಿಗೆ ಹುರಿದುಂಬಿಸುತ್ತಾರೆ.
೨೦೧೮ರಲ್ಲಿ ಸುಮ್ಮನೆ ಮನೆಯಲ್ಲಿ ಇದ್ದ ವಿಜಯೇಂದ್ರರನ್ನು ವರುಣಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಿಸಿ ಎಂದು ಕಾರ್ಯಕರ್ತರು ಕೇಳಿಕೊಂಡಾಗ , ಬಿಜೆಪಿಯ ಹೈಕಮಾಂಡ್ ಒಪ್ಪಿಗೆ ಸೂಚಿಸಿ ಪ್ರಚಾರ ಮಾಡಿ ಎಂದಿದ್ದರು. ಸ್ವತಃ ಪಕ್ಷದ ಮುಖಂಡರೇ ಹೇಳಿದ ಮೇಲೆ ಕಣಕ್ಕೆ ಇಳಿದ ವಿಜಯೇಂದ್ರರನ್ನು ನಾಮಪತ್ರ ಸಲ್ಲಿಸುವ ದಿನ ನಾಮಪತ್ರ ಸಲ್ಲಿಸಬೇಡಿ ಎಂದಾಗ ಅಲ್ಲಿದ್ದ ವಿಜಯೇಂದ್ರರ ಅಭಿಮಾನಿಗಳ ಆಕ್ರೋಶ ನೋಡಲಾಗದೆ ಖುರ್ಚಿಗಳು ಪುಡಿಪುಡಿಯಾಗಿದ್ದವು. ಒಬ್ಬ ರಾಜ್ಯ ಬಿಜೆಪಿಯ ಅಧ್ಯಕ್ಷರ ಮಗನಿಗೆ ಟಿಕೆಟ್ ಕೊಡುವದಿಲ್ಲ ಎಂದು ಅಧ್ಯಕ್ಷರೇ(ಯಡಿಯೂರಪ್ಪನವರೇ ಅಧ್ಯಕ್ಷರಾಗಿದ್ದರು) ಘೋಷಿಸಿದ್ದರು. ಟಿಕೆಟ್ ನಿರಾಕರಣೆ ಮಾಡಿದ್ದು ಕುಟುಂಬ ರಾಜಕಾರಣ ಎಂದು! ಆದರೆ ಬಿಜೆಪಿಯಲ್ಲಿ ಬೇರೆ ಕಡೆ ತಂದೆ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದರು. ಇದೆಂಥಾ ಡಬಲ್ ಸ್ಟ್ಯಾಂಡರ್ಡ್! ಇದೆಲ್ಲ ಆಗಿದ್ದರೂ ಎರಡು ದಿವಸ ಯಾರಿಗೂ ಸಿಗದೇ ವಿಜಯೇಂದ್ರರವರು ತಮ್ಮ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು. ಎರಡು ದಿವಸದ ನಂತರ ಮಾಧ್ಯಮದರ ಮುಂದೆ ಬಂದು ಏನು ಆಗದ ರೀತಿಯಲ್ಲಿ ಹೇಳಿದ್ದು ಒಂದೇ ಮಾತು ” ಹೈಕಮಾಂಡ್ ನಿರ್ಧಾರ ಅಂತಿಮ”.
ವಿಜಯೇಂದ್ರರವರ ಜನಪ್ರಿಯತೆಯನ್ನು ನೋಡಿ ಅವರಿಗೆ ಬಿಜೆಪಿಯಲ್ಲಿ ಪದಾಧಿಕಾರಿಯಾಗಿ ನೇಮಕ ಮಾಡಿದರು. ಅಂದಿನಿಂದ ಇಲ್ಲಿಯವರೆಗೆ ಅವರ ಕಾರ್ಯ ಕ್ಷಮತೆ ಪಕ್ಷದ ಸಂಘಟನೆಗೆ ಒಳಿತಾಗಿದೆ. ಯಡಿಯೂರಪ್ಪನವರ ಮಗನಾಗಿ ಗುರುತಿಸಿಕೊಂಡು, ಇಂದು ಸ್ವಂತ ಶಕ್ತಿಯ ಮೇಲೆ ಹೆಮ್ಮರವಾಗಿ ಬೆಳೆಯುತ್ತಿದ್ದಾರೆ. ಮಂಡ್ಯದ ಪೇಟೆಯಲ್ಲಿ ಬಿಜೆಪಿಯ ಶಾಸಕರು ಆಯ್ಕೆಯಾದಾಗ ಮಾಜಿ ಪ್ರಧಾನಮಂತ್ರಿಗಳು ದೇವೇಗೌಡರು ವಿಜೇಯೇಂದ್ರ ಪಕ್ಷಕ್ಕಾಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಮತ್ತೆ ಶಿರಾದಲ್ಲಿ ಪೇಟೆಯ ತರಹ ಬಿಜೆಪಿ ಗೆಲ್ಲಬಾರದು ಎಂದು ವಿರೋಧಿಗಳು ಎಷ್ಟೇ ಪ್ರಯತ್ನ ಮಾಡಿದರೂ ಯಶಸ್ವಿಯಾಗಿ ದಡವನ್ನು ಸೇರಿದ್ದರು. ಮುಂದೆ ಮಸ್ಕಿಯಲ್ಲಿ ಸೋತಾಗ ಸೋಲಿನ ಹೊಣೆಯನ್ನು ತಾವೇ ಹೊತ್ತಿದ್ದರು. ಇದಲ್ಲವೇ ಒಬ್ಬ ದಕ್ಷ ಕಾರ್ಯಕರ್ತನಿಗೆ ಇರುವ ಶಿಸ್ತು! ಗೆದ್ದಾಗ ಅತಿಯಾಗಿ ಬೀಗದ ಮತ್ತು ಸೋತಾಗ ಕುಗ್ಗದೆ , ಅದನ್ನು ಸವಾಲಾಗಿ ಸ್ವೀಕರಿಸುವ ಗುಣ ಇರುವುದು ದಕ್ಷ ಕಾರ್ಯಕರ್ತನಿಗೆ ಮಾತ್ರ!
ಯಡಿಯೂರಪ್ಪನವರು ಮುಖ್ಯಮಂತ್ರಿ ಇರುವಾಗ ಸೂಪರ್ ಸಿಮ್ ಎಂದು ತೆಗಳಿದರು. ಎಲ್ಲ ನಕಾರಾತ್ಮಕ ಕೆಲಸಗಳಿಗೆ ವಿಜಯೇಂದ್ರರವರನ್ನೇ ಗುರಿಯಾಗಿಸಿದರು. ಇದನ್ನು ಅರಿತ ವಿಜಯೇಂದ್ರ ಬಿಜೆಪಿ ಸಚಿವರ ಸಹಾಯಕನ ಮೇಲೆ ಮೊಕದ್ದಮೆ ಹೂಡಿದರು. ವಿಜಯೇಂದ್ರರವರ ಹೆಸರು ದುರ್ಬಳಿಕೆ ಮಾಡಿಕೊಂಡಿದ್ದು ಸಾಭೀತಾಗಿತ್ತು. ಆದರೆ ಇದರ ಮಧ್ಯೆ ಅನೇಕ ನಿಷ್ಠಾವಂತ ಕಾರ್ಯಕರ್ತರಿಗೆ ಸಹಾಯವನ್ನು ಮಾಡಿದ್ದು ಯಾರು ಹೇಳಲೇ ಇಲ್ಲ! ಸಹಾಯ ಎನ್ನುವಕ್ಕಿಂತ ಅವರ ನೋವಿಗೆ ಕಿವಿಕೊಟ್ಟು ಸ್ಪಂದಿಸಿದ್ದರು. ಇಷ್ಟೆಲ್ಲ ಅವರಿಗೆ ನೇರವಾಗಿ ತೆಗಳಿದ್ದರೂ ಯಾವತ್ತೂ ಲೂಸ್ ಹೇಳಿಕೆ ಕೊಡಲಿಲ್ಲ, ಪಕ್ಷಕ್ಕೆ ಡ್ಯಾಮೇಜ್ ಮಾಡಲಿಲ್ಲ. ಮಾಡಿದ್ದು ಪಕ್ಷ ಸಂಘಟನೆ ಮಾತ್ರ! ರಾಜ್ಯದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಇರಲಿ, ವಿಧಾನ ಪರಿಷತ್ತಿನ ಚುನಾವಣೆ ಬರಲಿ ವಿಜಯೇಂದ್ರವರಿಗೆ ಮಂತ್ರಿ ಫಿಕ್ಸ್, ಎಂಎಲ್ಸಿ ಫಿಕ್ಸ್ ಎಂದು ಮಾಧ್ಯಮದಲ್ಲಿ ಬಂದಾಗ ಎಷ್ಟೋ ಬಾರಿ ನನಗಿಂತ ಹಿರಿಯರು ಇದ್ದಾರೆ ಅವರಿಗೆ ಕೊಡಿ, ನನಗೆ ಇನ್ನು ಸಮಯವಿದೆ ಎಂದು ಹೇಳಿದ್ದು ಇದೆ ವಿಜಯೇಂದ್ರ!
ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೂ ಅವರ ಮೇಲೆ ಮತ್ತು ವಿಜಯೇಂದ್ರರ ಮೇಲೆ ಆರೋಪಗಳಿಗೆ ಕೊರೆತೆ ಇರಲಿಲ್ಲ. ಮತ್ತೊಮ್ಮೆ ಮುಖ್ಯಮಂತ್ರಿ ಆಗಲ್ಲ ಎಂದು ಗೊತ್ತಿದ್ದರೂ ಅವರ ಮೇಲೆ ದಾಳಿ ನಿಲ್ಲಲಿಲ್ಲ. ಆದರೂ ಯಡಿಯೂರಪ್ಪನವರು ಯಾವದೇ ಪ್ರತಿಕ್ರಿಯೆ ಕೊಡಲಿಲ್ಲ. ಯಡಿಯೂರಪ್ಪನವರನ್ನು ಟಾರ್ಗೆಟ್ ಮಾಡಿದ್ದು ಅವರ ಶಕ್ತಿ ಕುಗ್ಗಿಸಲು! ಇಲ್ಲಿಯವರೆಗೆ ಕೇವಲ ಸ್ವಯಂ ಘೋಷಿತ ನಾಯಕರಿಗೆ ಯಡಿಯೂರಪ್ಪನವರು ಮಾತ್ರ ಟಾರ್ಗೆಟ್ ಆಗಿದ್ದರು. ಯಾವಾಗ ಜನರ ಹೃದಯದಲ್ಲಿ ಸ್ಥಾನ ಗಿಟ್ಟಿಸಲು ವಿಜಯೇಂದ್ರ ಪ್ರಾರಂಭಸಿದರು ಅವರನ್ನು ಬಿಡಲಿಲ್ಲ. ಇಂದಿಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮ ನಡೆದರೆ ಯಡಿಯೂರಪ್ಪನವರ ಹೆಸರು, ಮೋದಿ ಹೆಸರು ಮತ್ತು ವಿಜಯೇಂದ್ರ ಹೆಸರು ತಗೆದುಕೊಂಡರೆ ಹೊ ಹೊ ಎಂದು ಜನರ ಉದ್ಘಾರ ನಾವೆಲ್ಲ ಕಂಡಿದ್ದೇವೆ. ಇದೆಲ್ಲ ದುಡ್ಡು ಕೊಟ್ಟರೆ ಬರುವದಿಲ್ಲ. ಜನರ ಮಧ್ಯೆ ನಿಂತು ಕೊಳ್ಳಬೇಕಾದರೆ ಅವರ ಕಷ್ಟಕ್ಕೆ ಸ್ಪಂದನೆ ಮಾಡಬೇಕು! ಎಷ್ಟೇ ಹಗುರವಾಗಿ ಅವರ ಬಗ್ಗೆ ಹೇಳಿಕೆ ಕೊಟ್ಟರೂ ಎಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಯಾವ ಪ್ರತಿ ಹೇಳಿಕೆ ಕೊಡಲಿಲ್ಲ. ಒಂದು ವೇಳೆ ಪ್ರತಿ ಹೇಳಿಕೆ ಕೊಟ್ಟಿದ್ದರೇ ಬಿಜೆಪಿ ಪಕ್ಷಕ್ಕೆ ಹಾನಿ ಎಂದು ಎಲ್ಲವನ್ನು ಸಹಿಸಿಕೊಂಡರು.
ಹರಿಹರದಲ್ಲಿ ನಡೆದ ಹರಿಜಾತ್ರೆಯಲ್ಲಿ ನಡೆದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ನುಡಿನಮನ ಕಾರ್ಯಕ್ರಮದಲ್ಲಿ ವಿಜಯೇಂದ್ರರವರ ಆಡಿದ ಮಾತುಗಳು ಕೇಳಿದರೆ ಗೊತ್ತಾಗುತ್ತೆ, ಯಾವದೇ ಕಾರ್ಯಕ್ರಮಕ್ಕೂ ಹೋಗಬೇಕಾದರೆ ಅದರ ಬಗ್ಗೆ ತಿಳಿದುಕೊಂಡು ಹೋಗುತ್ತಾರೆ. ಯಾವದೇ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಮನೋಭಾವ ಹೊಂದಿದ್ದಾರೆ. ಮೂರುಕೋಟಿ ಲಿಂಗದ ಪ್ರತಿಷ್ಠಾಪನೆ ಹೊರ್ತಿ ಕಾರ್ಯಕ್ರದಲ್ಲಿ ವಿಮಾನ ವಿಳಂಬವಾಗಿದಕ್ಕೆ ತಡವಾಗಿ ಬಂದ ವಿಜಯೇಂದ್ರರವರು ಹೇಳಿದ್ದು ,”ನಮ್ಮ ತಂದೆಯವರು ನನಗೆ ಕಲಿಸಿದ್ದು ಯಾವದೇ ಕಾರ್ಯಕ್ರಮಕ್ಕೆ ೧೦ ನಿಮಿಷ ಬೇಗ ಹೋಗಬೇಕು” ಆದರೆ ಇಂದು ವಿಮಾನ ವಿಳಂಬವಾಗಿದಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳಿದ್ದು ಎಲ್ಲರಿಗೂ ಇವರ ಬದ್ಧತೆ ಬಗ್ಗೆ ಗೊತ್ತಾಗಿತ್ತು. ತಡವಾಗಿಯೂ ಸಹಿತ ಬೆಂಗಳೂರಿನಿಂದ ಇಂಡಿಯ ತಾಲೂಕಿನ ಹೊರ್ತಿ ಗ್ರಾಮಕ್ಕೆ ಬಂದಿದ್ದು ರೇವಣಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರ ಕಣ್ಣಲ್ಲಿ ಆನಂದ ಭಾಷ್ಪ ಬಂದಿದ್ದು ವಿಜಯೇಂದ್ರರ ಜನಪ್ರಿಯತೆಗೆ ಸಾಕ್ಷಿ.
ಒಂದು ಪಕ್ಷದ ಸಿದ್ದಾಂತ ಒಪ್ಪಿ ಬಂದಾಗ ಪಕ್ಷದ ಜೊತೆ ನಿಲ್ಲುವ ನಾಯಕನಾದರೆ ಮಾತ್ರ ಪಕ್ಷಕ್ಕೆ ಅನುಕೂಲ. ನಾನು ಪಕ್ಕಾ ಬಿಜೆಪಿಯವನು, ಪಕ್ಷ ನನ್ನ ಉಸಿರು ಎಂದು ಹೇಳುವ ಜನ , ಮಂತ್ರಿ ಸಿಗದಿದ್ದಾಗ ಅಥವಾ ಉನ್ನತ ಹುದ್ದೆ ಸಿಗದೇ ಇದ್ದಾಗ ಸ್ವಹಿತಾಶಕ್ತಿ ಹೆಚ್ಚಾದರೆ ಸಿದ್ದಾಂತಕ್ಕೆ ತಿಲಾಂಜಲಿ ಇಟ್ಟ ಹಾಗಲ್ವೆ? ಇಂತಹ ನಾಯಕರಿಂದ ಪಕ್ಷ ಬೆಳೆಯುದಿಲ್ಲ. ಕಷ್ಟಪಟ್ಟು ದುಡಿಯುತ್ತಿರುವ ಕಾರ್ಯಕರ್ತರಿಗೆ ಚೂರಿ ಹಾಕಿದ ಹಾಗೆ.
ಇದೆ ವರ್ಷ ಮೇ ತಿಂಗಳಲ್ಲಿ ರಾಜ್ಯದ ಚುನಾವಣೆ ನಡೆಯಲಿದೆ. ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಏರಬೇಕಾದರೆ ಹಗುರ ಮಾತುಗಳನ್ನು ನಿಲ್ಲಿಸಿ , ಪಕ್ಷಕ್ಕಾಗಿ ಪರಿಶ್ರಮ ಮುಖ್ಯ ಎಂದು ಹೇಳುವಾಗ, ವಿಜಯೇಂದ್ರ ಯಾರೇ ಯಡಿಯೂರಪ್ಪನವರಿಗೆ ತೆಗಳಿದರೆ ಅದು ಪಕ್ಷಕ್ಕೆ ತೆಗಳಿದ ಹಾಗೆ. ಹೆಮ್ಮರವಾಗಿ ಬೆಳೆದು ನಿಂತಿದ್ದರು ಇನ್ನೂ ನಾನು ಅಂಬೆಗಾಲ ಇಡುತ್ತಿರುವ ಯುವಕ ಎಂದು ಹೇಳಿದ್ದು ಅವರ ವಿನಮ್ರತೆ ತೋರಿಸುತ್ತದೆ. ಹೀಗೆ ಹತ್ತು ಹಲವಾರು ನಾಯಕರು ಸದ್ದಿಲ್ಲದೇ ಪಕ್ಷಕ್ಕೆ ದುಡಿಯುತ್ತಿದ್ದಾರೆ. ಇವರ ಜೊತೆ ಹಗಲು ರಾತ್ರಿ ದುಡಿಯುತ್ತಿರುವ ಸಾವಿರಾರು ಕಾರ್ಯಕರ್ತರ ಶ್ರಮದಿಂದ ಮಾತ್ರ ಪಕ್ಷ ಅಧಿಕಾರಕ್ಕೆ ಏರಲು ಸಾಧ್ಯ! ಸಿದ್ದಾಂತವಿಲ್ಲದ, ಹಗುರವಾದ ಹೇಳಿಕೆ ಕೊಡುವವರಿಂದಲ್ಲ.
Categories: news
