Articles

ಉಪಮುಖ್ಯಮಂತ್ರಿ ಪಟ್ಟ ಪುಕ್ಷಟ್ಟೆಯಾಗಿ ಕೊಟ್ಟಿದ್ದಾ? ? ಪಕ್ಷಾಂತರಿಗಳು ಸ್ವಾರ್ಥಕ್ಕಾಗಿ ಬಿಜೆಪಿಗೆ ಬಂದಿದ್ದಲ್ವಾ? ಬಿಜೆಪಿಗೆ ಬಂದ ಮೇಲೆ ಇವರಿಗೆ ಗೌರವ ಹೆಚ್ಚಾಯಿತಾ?

ಪಕ್ಷನಿಷ್ಠೆ ಮತ್ತು ಪರಿಶ್ರಮ :-

ಪಕ್ಷ ಯಾಕೆ ಸವದಿಯವರಿಗೆ ಉಪಮುಖ್ಯಮಂತ್ರಿ ಕೊಟ್ಟಿತು? ಯಾಕೆ ರೇಣುಕಾಚಾರ್ಯ, ನಿರಾಣಿ, ಬೊಮ್ಮಾಯಿ, ಅಶೋಕ್ ಅವರಿಗೆ ಕೊಡಬಹುದಿತ್ತಲ್ವಾ? ಈಗಿನ ಕಾಲದಲ್ಲಿ ಒಂದು ರೂಪಾಯಿನೂ ಯಾರು ಪುಕ್ಷಟ್ಟೆಯಾಗಿ ಕೊಡುವದಿಲ್ಲ. ಅಂಥದರಲ್ಲಿ ಘನ ಸರ್ಕಾರದ ಉಪ ಮುಖ್ಯಮಂತ್ರಿ ಹುದ್ದೆ ಬೇಕಾಬಿಟ್ಟಿಯಾಗಿ ಕೊಡುವದಕ್ಕೆ ಸಾಧ್ಯನಾ? ಇಂತಹ ಸಾಮಾನ್ಯ ಜ್ಞಾನವಿಲ್ಲದೆ ಸೋತವರಿಗೆ ಉಪಮುಖ್ಯಮಂತ್ರಿ ಕೊಟ್ಟಿದ್ದು ಎಂದು ಎಲ್ಲರೂ ಪುಂಗಿದ್ದೆ ಪುಂಗಿದ್ದು. ಸತತವಾಗಿ ಮೂರೂ ಬಾರಿ ೨೫ ಸಾವಿರ ಮತಗಳಿಂದ ಅಥಣಿಯಿಂದ ಆಯ್ಕೆಯಾಗಿದ್ದು ಒಂದು ಇತಿಹಾಸವೇ ಸರಿ. ಇಂದಿನ ಕಾಲದಲ್ಲಿ ಜಾತಿಯ ಮೇಲೆ ಚುನಾವಣೆಗಳು ನಡೆಯುತ್ತವೆ. ಸವದಿಯವರು ಆಯ್ಕೆಯಾಗಿದ್ದು ಸರ್ವರ(ಎಲ್ಲ ಸಮುದಾಯಕ್ಕೆ ಬೇಕಾದ ನಾಯಕ) ಸೇವಕನಾಗಿ ಎನ್ನುವುದು ಪಕ್ಷಕ್ಕೆ ಗೊತ್ತಿತ್ತು. ೨೦೧೩ರಲ್ಲಿ ಬಿಜೆಪಿ ಇಬ್ಬಾಗವಾದಾಗ ಕೆಜೆಪಿ ಪಕ್ಷ ಉದಯವಾಗಿತ್ತು.

ಪ್ರಬಲ ನಾಯಕ ಯಡಿಯೂರಪ್ಪ ಕೆಜೆಪಿ ಪಕ್ಷ ಸ್ಥಾಪನೆ ಮಾಡುವಾಗ, ಎಲ್ಲರ ಅಭಿಪ್ರಾಯ ಪಡೆದಾಗ, ಜನತಾ ಪರಿವಾರದಿಂದ ಬಂದು ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡಿದ್ದರೂ, ನಾನು ಬಿಜೆಪಿ ಜೊತೆ ಇರುತ್ತೇನೆ ಎಂದು ಹೇಳಿದ್ದರು. ಬೇರೆಯವರ ಹಾಗೆ ಕೊನೆಯ ಗಳಿಗೆಯಲ್ಲಿ ಕೈಕೊಟ್ಟಿಲ್ಲ. ಯಡಿಯೂರಪ್ಪನವರು ಬಿಜೆಪಿಯಲ್ಲಿ ಇಲ್ಲದೆ ಇದ್ದಾಗ ೨೫ ಸಾವಿರ ಮತಗಳಿಂದ ಗೆದ್ದಿದ್ದರು ಎನ್ನುವುದು ಮರೆಯಬಾರದು. ಹಿಂದೊಮ್ಮೆ ಯಡಿಯೂರಪ್ಪನವರು ಪಕ್ಷ ಬಿಟ್ಟು ಕೆಜೆಪಿ ಸ್ಥಾಪನೆ ಮಾಡಿದ್ದರು. ಅಂದು ನಾನು ಮಾಡಿದ್ದು ತಪ್ಪು ಎಂದು ಇತ್ತೀಚಿಕೆ ಹೇಳಿಕೆ ಕೊಟ್ಟಿದ್ದಾರೆ. ಪಕ್ಷದ ಬಗ್ಗೆ ದೊಡ್ಡ ನಾಯಕರು ಕೊಡುತ್ತಿರುವ ಗೌರವ. ಕಠಿಣ ಸಂದರ್ಭದಲ್ಲೂ ಸವದಿಯವರು ಪಕ್ಷ ಸೇರಿದ ನಂತರ ಇಲ್ಲಿಯವರೆಗೆ ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿದ ಉಧಾಹರಣೆ ಇಲ್ಲ. ಇಂದು ತಮ್ಮ ಕ್ಷೇತ್ರವನ್ನೇ ಉಳಿಸಿಕೊಳ್ಳುವುದು ಕಷ್ಟವೆನಿಸಿದಾಗ ಮತ್ತೆ ಹೋಗುತ್ತಿರುವುದು ತಮ್ಮನ್ನು ಮೇಲೆತ್ತಿದ ಜನರ ಬಳಿ. ಅಲ್ಲಲ್ಲ ಹೈಕಮಾಂಡ್ ಬಳಿ!

೨೦೧೮ರ ಚುನಾವಣೆಯಲ್ಲಿ ಸವದಿಯವರ ಪಕ್ಷನಿಷ್ಠೆ ಹೇಗಿತ್ತು ಎಂದರೇ , ಗೊತ್ತಿಲ್ಲದವರು ೨೦೧೮ರ ಪರಿವರ್ತನಾ ರ್ಯಾಲಿ ಬಗ್ಗೆ ತಿಳಿದುಕೊಳ್ಳಲೇಬೇಕು. ಅಂದು ಕೆಲವೇ ಕೆಲವು ಜನರು ಭಾಗಿಯಾಗಿದ್ದರು ಮತ್ತು ಅವರ ಭಾಷಣ ಕೇಳಲು ಮಾತ್ರ ಜನರು ಬರುತ್ತಿದ್ದರು. ಯಡಿಯೂರಪ್ಪ, ಶೋಭಾ ಮೇಡಂ, ಸವದಿ, ಶ್ರೀರಾಮುಲು, ಕೆಲಯೊಂದು ಸಭೆಗಳಿಗೆ ಅನಂತಕುಮಾರ ಹೆಗ್ಡೆ. ಉತ್ತರಕರ್ನಾಟಕದ ಎಲ್ಲಾ ಪರಿವರ್ತನಾ ಸಭೆಗಳಲ್ಲಿ ಸವದಿಯವರು ಭಾಗಿಯಾಗಿದ್ದರು. ತಮ್ಮ ಕ್ಷೇತ್ರಕ್ಕಿಂತ ಹೆಚ್ಚಿಗೆ ಬೇರೆಯವರ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿದ್ದರು. ರೇಣು, ವೇಣು, ಗೇಣು ಇವರ್ಯಾರು ಇಂಥಹ ಸಭೆಗಳಲ್ಲಿ ಭಾಗಿಯಾಗಿದ್ದು ನೋಡೇ ಇಲ್ಲ.ಇವರು ಸಭೆಗಳಲ್ಲಿ ಭಾಷಣ ಮಾಡುವಾಗ ಯುವಕರ ದಂಡು ಉತ್ತರಕರ್ನಾಟಕದ ಹುಲಿ ಎಂದು ಕರೆದಿದ್ದು ಇದೆ.

ಇದೆಲ್ಲ ಪಕ್ಷಕ್ಕೆ ಗೊತ್ತಾಗಿತ್ತು ಸವದಿಯವರಿಗೆ ಜನರನ್ನು ಸೆಳೆಯುವ ಕಲೆಯಿದೆ. ಆದರಿಂದಲೇ ಅವರನ್ನು ೨೦೧೮ರ ಚುನಾವಣೆಗೆ ಉಪಯೋಗಮಾಡಿಕೊಂಡಿತ್ತು. ಅಂದು ರಾಜ್ಯದಲ್ಲಿ ನಡೆದ ೨೦೧೮ರ ಚುನಾವಣೆಯಲ್ಲಿ ಕೇವಲ ಮೂರೇ ಮೂರೂ ಜನರು ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದರು. ಅವರೇ ಯಡಿಯೂರಪ್ಪ, ಶ್ರೀರಾಮುಲು ಮತ್ತು ಲಕ್ಷ್ಮಣ್ ಸವದಿ. ಉಪಮುಖ್ಯಮಂತ್ರಿಯಾದ ನಂತರ ಸೋತವನಿಗೆ ಯಾಕೆ ಕೊಟ್ಟಿರಿ ಎನ್ನುವ ರೇಣುಕಾಚಾರ್ಯರವರು ತನ್ನ ಮತಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗಿರಲಿಲ್ಲ. ಇವರು ಬಿಡಿ, ಜಗದೀಶ ಶೆಟ್ಟರ್ ಒಂದೆರಡು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೂ, ಈಶ್ವರೇಪ್ಪ ಶಿವಮೊಗ್ಗ ಬಿಟ್ಟು ಅಲುಗಾಡಲೇ ಇಲ್ಲ. ಪಕ್ಷ ನಿಷ್ಠೆ, ಜನರನ್ನು ಸೆಳೆಯುವ ನಾಯಕನ ಬೆವರು ಗುರುತಿಸಿ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿತ್ತು ಎನ್ನುವುದು ಎಷ್ಟೋ ಪುಂಗಿದಾಸರಿಗೆ ಗೊತ್ತಿಲ್ಲ! ಬಬಲೇಶ್ವರದಲ್ಲಿ ಎಂ ಬಿ ಪಾಟೀಲರಿಗೆ ಬೆವರು ಇಳಿಸಿದ್ದು ಇದೆ ಸವದಿ! ಎಂಬಿ ಪಾಟೀಲರು ಎಷ್ಟು ದುಡ್ಡು ಖರ್ಚು ಮಾಡಿದ್ದರು ಎನ್ನುವುದು ಅವರೇ ಹೇಳಬೇಕು. ಸಿಂದಗಿ ಮತ್ತು ಬಸವಕಲ್ಯಾಣದ ಉಪಚುನಾವಣೆಯಲ್ಲಿ ಇವರದೇ ಉಸ್ತುವಾರಿ ಇತ್ತಲ್ವೇ?

ಸೋತ ಕಾರಣ :-

೧೯೯೯ರ ಚುನಾವಣೆಯಲ್ಲಿ ಯಡಿಯೂರಪ್ಪನವರು ಸುಮಾರು ೮ ಸಾವಿರ ಮತಗಳಿಂದ ಕಾಂಗ್ರೇಸ್ ನ ಮಹಾಲಿಂಗಪ್ಪ ವಿರುದ್ಧ ಪರಾಭವಗೊಂಡಿದ್ದರು. ಮುಂದೆ ಅವರನ್ನು ವಿಧಾನ ಪರಿಷತ್ತು ಸದಸ್ಯ ಮಾಡಿತ್ತು. ಬಿಜೆಪಿಯನ್ನು ರಾಜ್ಯದಲ್ಲಿ ನೆಲೆ ನಿಲ್ಲುವಂತೆ ಮಾಡಿರುವ ಯಡಿಯೂರಪ್ಪನವರು ೧೯೯೯ರಲ್ಲಿ ಸೋತಿದ್ದರು. ಕಾರಣ? ತಮ್ಮ ಸಮಯವನ್ನು ಪಕ್ಷದ ಸಲುವಾಗಿ ಮೀಸಲಿಟ್ಟ ಕಾರಣಕ್ಕಾಗಿ, ರಾಜ್ಯದ ತುಂಬೆಲ್ಲ ಓಡಾಡುತ್ತ ಪ್ರಚಾರ ಮಾಡಬೇಕಾಗಿತ್ತು. ಬೇರೆಯವರನ್ನು ಗೆಲ್ಲಿಸಲು ಹೋದ ಇವರನ್ನು ಸ್ವಪಕ್ಷದವರೇ ಕುತಂತ್ರಮಾಡಿ ಇವರನ್ನು ಸೋಲಿಸಿದ್ದರು.

೨೦೧೮ರ ಚುನಾವಣೆಯಲ್ಲಿ ಅಥಣಿಯಲ್ಲಿ ನಡೆದಿದ್ದು ಇದೆ! ಸವದಿಯವರು ಕೇವಲ 2300 ಮತಗಳ ಅಂತರದಿಂದ ಸೋತರು ಕಾರಣ ಅವರು ಒಂದು ದಿನವೂ ತಮ್ಮ ಕ್ಷೇತ್ರವಾದ ಅಥಣಿಗೆ ಪ್ರಚಾರಕ್ಕೆ ಹೋಗಲಿಲ್ಲ, ಒಂದು ಸಮುದಾಯಕ್ಕೆ ನೋವು ಮಾಡಿದ್ದರು ಎಂದು ಸುಳ್ಳಿನ ಕಂತೆ ಹರಿಬಿಟ್ಟರು. ಇದರ ಜೊತೆ ಅಕ್ಕ ಪಕ್ಕದ ಕ್ಷೇತ್ರದ ಬಿಜೆಪಿಯ ಹುರಿಯಾಳುಗಳು ಮತ್ತು ಬಿಜೆಪಿ ಮುಖ್ಯಮಂತ್ರಿ ಆಗೇ ಬಿಟ್ಟೆ ಎನ್ನುವವರ ಕೈವಾಡವೂ ಇತ್ತು. ರಮೇಶ್ ಜಾರಕಿಹೊಳಿ ಅಲ್ಲೇ ಠಿಕಾಣಿ ಹೂಡಿದ್ದರು ಅದಕ್ಕೆ ಸೋತರು ಎಂದರೆ ಅದೊಂದು ಹಾಸ್ಯಾಸ್ಪದ ಆಗುತ್ತದೆ. ವಿರೋಧಿಗಳಿಂತ ಸ್ವಪಕ್ಷದವರ ಮತ್ತು ತಾವು ಪಕ್ಷಕ್ಕಾಗಿ ಬೇರೆ ಕಡೆ ಹೋದ ಪರಿಣಾಮ ಸೋತರು. ಇನ್ನೊಂದು ಸೇರಿಸಬಹುದು ಅತಿಯಾದ ಆತ್ಮವಿಶ್ವಾಸ! ಪುಂಗಿದಾಸರು ತಿಳಿಕೊಳ್ಳಬೇಕು ಯಾಕೆ ಸೋತವರಿಗೆ ಮಂತ್ರಿ ಸಿಕ್ಕಿತ್ತು! ದೊಡ್ಡ ದೊಡ್ಡ ಸ್ಥಾನಗಳು ಕೊಡಬೇಕಾದರೆ ಪಕ್ಷಕ್ಕಾಗಿ ದುಡಿದವರನ್ನು ಮಾತ್ರ ಪಕ್ಷ ಹುಡುಕುತ್ತದೆ.

೧೭ ಶಾಸಕರಿಗೆ ಬಿಜೆಪಿ ಅನಿವಾರ್ಯವಾಗಿತ್ತು !

೨೦೧೮ರ ಚುನಾವಣೆಯಾದಾಗ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಪಕ್ಷಾಂತರ ಮಾಡಿದ ತಂಡ ಬಿಜೆಪಿ ಮತ್ತು ಯಡಿಯೂರಪ್ಪನವರ ಮೇಲೆ ಪ್ರೀತಿ ಇದ್ದರೇ ಅವತ್ತೇ ಬರಬೇಕಿತ್ತು! ಆಪರೇಷನ್ ಕಮಲ್ ಮಾಡಿದ್ದು ಬಿಜೆಪಿ ಸರ್ಕಾರ ರಚನೆ ಮಾಡಲೇಬೇಕು ಎಂದು. ಬಾಂಬೆ ಬಾಯ್ಸ್ ಕಾಂಗ್ರೇಸ್ ಪಕ್ಷ ಬಿಟ್ಟಿದ್ದು ತಮಗೆ ಅಲ್ಲಿ ಅನ್ಯಾಯವಾಗಿದೆ ಅದಕ್ಕಾಗಿ ಮುಯ್ಯಿ ತೀರಿಸಿಕೊಳ್ಳಲು, ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಗೆ ಬಂದರೇ ವಿನಃ ಬೇರೆ ಯಾವ ಕಾರಣವೂ ಸಿಗುವದಿಲ್ಲ. ಯಡಿಯೂರಪ್ಪನವರು ಗಟ್ಟಿಯಾದ ನಾಯಕ ಅವರನ್ನೇ ನಂಬಿ ಬಂದು ಅವರಿಗೆ ಗುರ್ ಎಂದಿದ್ದು ನೆನಪಿಲ್ಲ ಎನಿಸುತ್ತೆ! ನಾವು ಬಂದಿವಿ, ಅದಕ್ಕೆ ಅವರು ಮುಖ್ಯಮಂತ್ರಿ ಆದರೂ, ಇವರು ಉಪಮುಖ್ಯಮಂತ್ರಿ ಆದರೂ ಎಂದರೆ ನಗೆಪಾಟಿಲಿಕೆ ಹೇಳಿಕೆ ಆಗುತ್ತದೆ. ನಿಮಗೆ ಕಾಂಗ್ರೇಸ್ ನಲ್ಲಿ ಕೇಳುವವರು ಮತ್ತು ನಿಮಗೆ ಗೌರವ ಇಲ್ಲ ಎಂದಾಗ ಬಿಟ್ಟು ಬಂದಿದ್ದು. ಬಿಜೆಪಿ ಶಾಸಕರಿಂದ ನಿಮಗೆ ಮರಳಿ ಗೌರವ ಸಿಕ್ಕಿದೆ. ಅದು ಯಾವತ್ತೂ ನೀವು ಮರೆಯಬಾರದು!

ನಿಮ್ಮಿಂದ ಅವರು ಉಪಮುಖ್ಯಮಂತ್ರಿ ಆಗಿದ್ದಕ್ಕೆ ಅವರ ಸಿಕ್ಕ ಬಳುವಳಿ ಸೋತವನು ಮಂತ್ರಿಯಾದ! ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿಗೆ ಕೊಠಡಿ ಕೊಡದೆ ಕಾಡಿಸಿದವರು ಯಾರು? ಅವರ ಇಲಾಖೆಯ ಕಡತಗಳು ಎಷ್ಟೋ ದಿನ ದೂಳ ತಿನ್ನುತ್ತೀದ್ದವು. ಅವರಿಗೆ ಬೇಕಂತಲೇ ಸಾರಿಗೆ ಮಂತ್ರಿ ಕೊಟ್ಟು ಅದರಲ್ಲಿ ಕೈಯಾಡಿಸಿದಿ ಅವರಿಗೆ ತೊಂದರೆ ಕೊಟ್ಟಿದ್ದು ಯಾರು? ಅಂದು ಪಕ್ಷಕ್ಕಾಗಿ ನೋಯಿಸಿದವರ ವಿರುದ್ದ ಬಾಯಿ ಬಿಡದೆ ಸುಮ್ಮನೆ ಕುಳಿತಿದ್ದು ಸವದಿಯವರು ಮಾಡಿದ ದೊಡ್ಡ ತಪ್ಪು. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಈಶ್ವರೇಪ್ಪನವರು ಸುದ್ದಿಘೋಷ್ಠಿ ಮಾಡಿ ಸರ್ಕಾರದ ವಿರುದ್ಧವೇ ಮಾತನಾಡಿದರು, ಸುದ್ದಿಗೋಷ್ಠಿ ಮಾಡಿದ್ದು ಯಾಕೆ? ಸುದ್ಧಿಘೋಷ್ಠಿ ಮಾಡದೆ ಹೋಗಿದ್ದರೇ ಅವರಿಗೆ ಇನ್ನೂ ಅನೇಕ ಕಷ್ಟಗಳು ಬರುತ್ತಿದ್ದವು. ಸವದಿಯವರು ಮಾಡಬೇಕಿತ್ತಲ್ವಾ? ಅಂದೇ ವಸ್ತಿಸ್ಥಿತಿಯನ್ನು ಜನರ ಮುಂದೆ ಇಡುವ ಪ್ರಯತ್ನಮಾಡಬೇಕಿತ್ತು! ರಾಜಕೀಯ ವಿಶ್ಲೇಷಕರ ಪ್ರಕಾರ ಸವದಿಯವರು ಸೋತು ಸುಮ್ಮನೆ ಇದ್ದರೂ ಅವರು ಇನ್ನು ಬಲಿಷ್ಠವಾಗುತ್ತಿದ್ದರು. ಅವರಿಗೆ ಉಪಮುಖ್ಯಮಂತ್ರಿ ಕೊಟ್ಟು ಮತ್ತೆ ತಗೆದು ಅವರನ್ನು ಕುಗ್ಗುವಂತೆ ಮಾಡಿದೆ ಎನ್ನುತ್ತಾರೆ.

ತಂತ್ರಗಾರಿಕೆ ಮುಖ್ಯ ಮತ್ತು ರಾಜ್ಯನಾಯಕರ ಗೇಮ್ ಪ್ಲಾನ್? :-

ಉಪಚುನಾವಣೆಯಲ್ಲಿ ನನಗೆ ಮಂತ್ರಿಬೇಡ , ನನಗೆ ಟಿಕೆಟ್ ಕೊಡಿ ಸಾಕು ಎಂದು ಸವದಿಯವರು ಕೇಳಿದ್ದರಂತೆ, ಇಲ್ಲ ೨೦೨೩ಕ್ಕೆ ಖಂಡಿತ ನಿನಗೆ ಕೊಡುತ್ತೇವೆ, ಎದೆಗುಂದಬೇಡ ಎಂದು ಇದೆ ರಾಜ್ಯ ಮಟ್ಟದ ನಾಯಕರು ಸವದಿಯವರಿಗೆ ಹೇಳಿದ್ದರಂತೆ. ಯಾವದೇ ಒಬ್ಬ ರಾಜಕೀಯ ಮುತ್ಸದ್ದಿಗೆ ಪದವಿ ಗಿಂತ ಸ್ವಂತ ಕ್ಷೇತ್ರ ಬಹಳ ಮುಖ್ಯ! ಅಂದು ಸವದಿ ಹೋದರೆ ಎಲ್ಲಿ ಪಕ್ಷಕ್ಕೆ ಹೊಡೆತ ಎಂದು ಸುಮ್ಮನಿರಿಸಿದರು. ಮುಂದೆ ಪರಿಷತ್ತಿನ ಸದಸ್ಯ ಸ್ಥಾನ ಕೊಟ್ಟಾಗಲೂ ಅಷ್ಟೇ. ನನಗೆ ಆಸಕ್ತಿ ಇಲ್ಲ ಎಂದು ನೇರವಾಗಿ ಹೇಳಿದರೆ ಮತ್ತೆ ಚಿಂತೆ ಬೇಡ ನಿನಗೆ ಟಿಕೆಟ್ ಎಂದು ಹೇಳಿದ ರಾಜ್ಯ ನಾಯಕರು ಇಂದು ನನಗೆ ಮೋಸ ಮಾಡಿದರು ಎನ್ನುತ್ತಾರೆ ಸವದಿಯವರು.

ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಮಾಡಿದ್ದರು. ಎಷ್ಟು ವೇಗವಾಗಿ ಮಾಡಿದ್ದರು ಅಷ್ಟೇ ವೇಗವಾಗಿ ಅದು ಅಲ್ಲಿಗೆ ನಿಂತಿತು! ಕಾರಣ ಅದೊಂದು ರಾಜಕೀಯ ತಂತ್ರಗಾರಿಕೆ. ೨೦೧೩ರಲ್ಲಿ ಬಿಜೆಪಿಯಿಂದ ಸೋತು ಮೂರನೆಯ ಸ್ಥಾನಕ್ಕೆ ಹೋಗಿದ್ದರು. ಕೆಜೆಪಿಯ ರುದ್ರಗೌಡರು ೨೫೦ಮತಗಳಿಂದ ಸೋತಿದ್ದರು. ಅವರಿಗೆ ೨೦೧೮ರ ಶಿವಮೊಗ್ಗದ ಟಿಕೆಟ್ ಎಂದು ಫಿಕ್ಸ್ ಆಗಿತ್ತು, ಈಶ್ವರಪ್ಪನವರು ವಿಧಾನ ಪರಿಷತ್ತು ಸದಸ್ಯರಿದ್ದರು. ವಿಧಾನ ಪರಿಷತ್ತಿನ ಸದಸ್ಯರಿಗೆ ಟಿಕೆಟ್ ಕೊಡುವದಿಲ್ಲ ಎಂದಿದ್ದರು. ಇದನ್ನು ಅರಿತ ಈಶ್ವರಪ್ಪನವರು ತಮ್ಮ ರಾಜಕೀಯ ದಾಳಗಳಿಂದ ಯಾರಿಗೆ ಕಟ್ಟಿಹಾಕಬೇಕು ಅವರನ್ನು ಕಟ್ಟಿಹಾಕಿದರು. ಯಶಸ್ವಿಯಾಗಿ ಟಿಕೆಟ್ ಪಡೆದುಕೊಂಡರು. ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ತಮ್ಮನನ್ನು ಪಕ್ಷೇತರಾಗಿ ನಿಲ್ಲಿಸಿ ಎರಡನೆಯ ಸ್ಥಾನದಿಂದ ಸ್ವಲ್ಪದರಲ್ಲೇ ಗೆದಿದ್ದು ಉಧಾಹರಣೆ ನಮ್ಮ ಮುಂದಿದೆ!ಬಚ್ಚೇಗೌಡ ಬಿಜೆಪಿಯ ಸಂಸದರಿದ್ದರೂ ತಮ್ಮ ಮಗನನ್ನು ಪಕ್ಷೇತ್ರವಾಗಿ ಹೊಸಕೋಟೆಯಲ್ಲಿ ನಿಲ್ಲಿಸಿ ಗೆಲ್ಲಿಸಲಿಲ್ಲವೇ. ಇವೆಲ್ಲ ರಾಜಕೀಯ ತಂತ್ರಗಳೇ.

ಗೆಲ್ಲುವ ಸವದಿಯವರಿಗೆ ಟಿಕೆಟ್ ತಪ್ಪಿಸಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಅನ್ಯಾಯ ಮಾಡಿದ್ದಾರೆ ಎನ್ನುತ್ತಾರೆ ಸವದಿಯವರ ಅಭಿಮಾನಿಗಳು. ಪಕ್ಷ ಅಧಿಕಾರ ಕೊಟ್ಟ ಮೇಲೆ ಮತ್ಯಾಕೆ ಮಂತ್ರಿ ಮಂಡಲದಿಂದ ಕೈಬಿಟ್ಟಿತು. ಅಧಿಕಾರ ಕೊಟ್ಟು ಬೇರೆಯವರು ಮೂಗು ತೂರಿಸಿದಾಗ ಪಕ್ಷಕ್ಕೆ ಮುಜುಗರ ಮಾಡಬಾರದೆಂದು ಸುಮ್ಮನೆ ಕುಳಿತಿದ್ದು ಅವರ ಪಕ್ಷ ನಿಷ್ಠೆ ತೋರಿಸುತ್ತದೆ. ಇದೆಲ್ಲ ಪಕ್ಷದ ನಾಯಕರಿಗೆ ಗೊತ್ತಿದ್ದರೂ ಸಹಾಯಕ್ಕೆ ಬರಲಿಲ್ಲ. ಇಂದು ನಮ್ಮ ಸಾಹುಕಾರವರಿಗೆ ಪಕ್ಷ ಕೈಬಿಟ್ಟಿದೆ. ಅದಕ್ಕಾಗಿ ಅವರು ಬೇರೆ ದಾರಿ ಹಿಡಯಬೇಕು ಎಂದು ಅಭಿಮಾನಿಗಳ ಆಶಯ! ಇಂದಿನ ರಾಜಕಾರಣದಲ್ಲಿ ತತ್ವ ಸಿದ್ದಾಂತಗಳಿಗಿಂತ ಪವರ್ ಪಾಲಿಟಿಕ್ಸ್ ಮುಖ್ಯ! ಯಾರೇ ಆಗಲಿ ನಿಮಗೆ ಜನ ಬೆಂಬಲವಿದ್ದರೇ ಸಾಭೀತು ಪಡಿಸಬೇಕು ಇಲ್ಲವಾದರೆ ರಾಜಕೀಯವಾಗಿ ಬೆಳೆಯುದಕ್ಕೆ ಅಸಾಧ್ಯ!.

ಸುಮಾರು ೨೦ ವರ್ಷಗಳ ಬಿಜೆಪಿ ಜೊತೆ ಇದ್ದ ನಿಷ್ಠೆ, ರಾಜಕೀಯ ಅಸ್ತಿತ್ವ ಮತ್ತು ಅವರ ಬೆಂಬಲಿಗರ ಅಸ್ತಿತ್ವಕ್ಕೆ ದಿಟ್ಟತನ ಪ್ರದರ್ಶನ ಮಾಡಲೇಬೇಕಾಗುತ್ತದೆ. ಕಾದು ನೋಡಬೇಕು ಮುಂದಿನ ಬೆಳವಣಿಗೆ.

Categories: Articles

Tagged as: ,