ಲಿಂಗಾಯತರು ಮತ್ತೊಮ್ಮೆ ಕಾಂಗ್ರೇಸ್ ಕಡೆಗೆ:-
ರಾಜ್ಯದಲ್ಲಿ ಜನಸಂಖ್ಯೆ ಆದರದ ಮೇಲೆ ಸ್ಥಾನಮಾನಗಳು ಸಿಗುವುದು ಸತ್ಯ! ಸದ್ಯಕ್ಕೆ ೩೦% ಲಿಂಗಾಯತ ಶಾಸಕರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ. ೨೦೨೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಜೊತೆ ನಿಂತಿದ್ದಾರೆ ಎನ್ನುವದಕ್ಕೆ ಇದೊಂದೇ ಸಾಕ್ಷಿ ಸಾಕು. ಅನೇಕ ದೊಡ್ಡ ಸಮುದಾಯಗಳು ಎರಡು ಪಕ್ಷದ ಜೊತೆ ಗುರಿತಿಸಿಕೊಂಡಿದ್ದಾರೆ ಮತ್ತು ರಾಜಕೀಯ, ಧರ್ಮ ಮತ್ತು ಜಾತಿ ಬಿಟ್ಟು ಇಲ್ಲವೇ ಇಲ್ಲ.
ಮೊನ್ನೆ ಡಿಕೆ ಶಿವಕುಮಾರ ವೀರೇಂದ್ರ ಪಾಟೀಲರಿಗೆ ಕಾಂಗ್ರೇಸ್ ಅನ್ಯಾಯ ಮಾಡಿಲ್ಲ, ಅವರಿಗೆ ಅನಾರೋಗ್ಯವಾಗಿತ್ತು ಅದಕ್ಕೆ ರಾಜೀವ ಗಾಂಧಿ ಮುಖ್ಯಮಂತ್ರಿ ಬದಲಾವಣೆ ಮಾಡಿದರು ಎಂದು ಹೇಳಿದರು. ನೇರವಾಗಿ ನಮ್ಮ ಪಕ್ಷ ಲಿಂಗಾಯತರಿಗೆ ಅನ್ಯಾಯ ಮಾಡಿಲ್ಲ ಎಂದು ಹೇಳಿದರು. ಅಂದು ಜನರಿಗೆ ವಾಸ್ತವಾಂಶ ಗೊತ್ತಾಗಿ ತಾವು ಏನು ಮಾಡಬೇಕು ಅದನ್ನೇ ಮಾಡಿ ತೋರಿಸಿದ್ದಾರೆ. ಇತಿಹಾಸದಲ್ಲಿ ಲಿಂಗಾಯತರಿಗೆ, ಅವರಿಗೆ ಸಿಗಬೇಕಾದ ಹಕ್ಕುಗಳು ಕಿತ್ತುಕೊಂಡಾಗ ಸರ್ಕಾರವೇ ಮತ್ತೆ ಮೇಲೇರಲು ಆಗದ ರೀತಿ ಲಿಂಗಾಯತರು ಮಾಡಿದ್ದಾರೆ, ಹಾಗೆಯೇ ಬೇರೆ ಬೇರೆ ಸಮುದಾಯಗಳು ತಮಗೆ ಅಧಿಕಾರ ಸಿಗದೇ ಇದ್ದಾಗ ಅವರೂ ಸಹಿತ ಪಕ್ಷಗಳ ಅಂತರ ಕಾಯ್ದುಕೊಂಡಿದ್ದಾರೆ. ಅದಕ್ಕೆ ಕೇವಲ ಲಿಂಗಾಯತರು ಮಾತ್ರ ಸಿಡಿದೇಳುತ್ತಾರೆ ಎನ್ನುವದಕ್ಕಿಂತ , ಅನ್ಯಾಯವಾದಾಗ ಸಮಯ ಬಂದಾಗ ಅನ್ಯಾಯಕ್ಕೊಳಗಾದವರು ಪಾಠ ಕಲಿಸುತ್ತಾರೆ ಎನ್ನವುದು ಸತ್ಯ!
ರಾಜಕೀಯ ದೃವೀಕರಣ:-
ಯಡಿಯೂರಪ್ಪ ಲಿಂಗಾಯತ ಸಮಾಜಕ್ಕೆ ಸೇರಿದವರಾದರೂ ಲಿಂಗಾಯತರು ೨೦೦೮ರಕ್ಕಿಂತ ಪೂರ್ವದಲ್ಲಿ ಯಡಿಯೂರಪ್ಪನವರ ಜೊತೆ ಸಂಪೂರ್ಣವಾಗಿ ಇರಲಿಲ್ಲ. ಇತಿಹಾಸ ಕೆದಕಿ ನೋಡಿದರೆ, ೧೯೮೯ರಲ್ಲಿ ವೀರೇಂದ್ರ ಪಾಟೀಲರ ಅಧ್ಯಕ್ಷಗಿರಿಯಲ್ಲಿ ಕಾಂಗ್ರೇಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ್ದು ಬರೋಬ್ಬರಿ ೧೭೮ ಸೀಟಗಳು. ಅಂದು ಬೇರೆ ಸಮುದಾಯದ ಜೊತೆ ಸಂಪೂರ್ಣವಾಗಿ ಲಿಂಗಾಯತ ಸಮಾಜ ಕಾಂಗ್ರೇಸ್ ಜೊತೆ ಗುರುತಿಸಿಕೊಂಡಿತ್ತು ಮತ್ತು ಬೆಂಬಲ ಕೊಟ್ಟಿದ್ದರು. ಅದರ ಪರಿಣಾಮವೇ ೧೭೮ ಎಂಎಲ್ಏಗಳು ಆಯ್ಕೆಯಾಗಿದ್ದರು. ಮುಂದೆ ಕಾಂಗ್ರೇಸ್ ಪಕ್ಷ ವೀರೇಂದ್ರ ಪಾಟೀಲರಿಗೆ ಪದಚ್ಯುತಿ ಮಾಡಿದಾಗ , ೧೯೯೪ರ ಚುನಾವಣೆಯಲ್ಲಿ ಕಾಂಗ್ರೇಸ್ ಗಳಿಸಿದ್ದು ಕೇವಲ ೩೪ ಸೀಟುಗಳು!
ವೀರೇಂದ್ರ ಪಾಟೀಲರಿಗೆ ನಡೆಯಿಸಿಕೊಂಡಿದ್ದ ರೀತಿಗೆ ಲಿಂಗಾಯತ ಸಮಾಜ ಕಾಂಗ್ರೇಸ್ ಪಕ್ಷ ಸಂಪೂರ್ಣವಾಗಿ ತೊರೆದು ರಾಮಕೃಷ್ಣ ಹೆಗ್ಡೆಯವರ ಬೆನ್ನಿಗೆ ನಿಂತು ಬಿಟ್ಟಿತು. ೧೯೯೯ರಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೂ ಲಿಂಗಾಯತರ ಬೆಂಬಲ ಅಷ್ಟಕ್ಕೇ ಅಷ್ಟೇ ಇತ್ತು. ಯಾವಾಗ ಹೆಗ್ಡೆಯವರು ರಾಜಕೀಯದಿಂದ ದೂರವಾದರು ಅಂದು ಎಲ್ಲಾ ಜನತಾ ಪಕ್ಷದ ಲಿಂಗಾಯತ ನಾಯಕರು ವಿಚಲಿತರಾಗಿ ತಮ್ಮ ತಮ್ಮ ದಾರಿ ಹಿಡಿದರು. ಬಿಜೆಪಿಯಲ್ಲಿ ಯಡಿಯೂರಪ್ಪನವರು ಇದ್ದ ಕಾರಣ, ಹೆಚ್ಚಿನ ಸಂಖ್ಯೆ ಲಿಂಗಾಯತ ನಾಯಕರು ಬಿಜೆಪಿಗೆ ಸೇರಿಕೊಂಡರು. ೨೦೦೮ರಲ್ಲಿ ಕುಮಾರಸ್ವಾಮಿ ಮಾಡಿದ ವಚನಭ್ರಷ್ಟತೆಯಿಂದ ರಾಜ್ಯದಲ್ಲಿ ಲಿಂಗಾಯತರು ಬಿಜೆಪಿಗೆ ಬೆಂಬಲ ಕೊಟ್ಟ ಪರಿಣಾಮ ೧೧೦ ಸೀಟುಗಳು ಬಿಜೆಪಿ ಪಾಲಾದವು. ಅಂದಿನಿಂದ ಇಲ್ಲಿಯವರೆಗೆ ಲಿಂಗಾಯತರು ಬಿಜೆಪಿ ಜೊತೆ ಇದ್ದಾರೆ. ಬದಲಾದ ಸನ್ನಿವೇಶದಲ್ಲಿ ಎಂದರೇ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಿತ್ತೂರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯತರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ. ಅದಕ್ಕೆ ಮುಖ್ಯ ಕಾರಣ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು, ಸವದಿ ಮತ್ತು ಶೆಟ್ಟರ್ ಪಕ್ಷ ಬಿಟ್ಟಿದ್ದು. ಇದರ ಜೊತೆ ಪಂಚಮಸಾಲಿ ಮೀಸಲಾತಿ ಹೋರಾಟ. ಕ್ಲಿಷ್ಟ ಸಂದರ್ಭದಲ್ಲಿ ಲಿಂಗಾಯತರು ಕಾಂಗ್ರೇಸ್ ಪಕ್ಷದ ಜೊತೆ ನಿಂತಿದ್ದಾರೆ. ಇದು ಕಾಂಗ್ರೇಸ್ ಪಕ್ಷಕ್ಕೆ ಗೊತ್ತಿದೆ. ಆದರೂ ಮೊನ್ನೆ ನಡೆದ ಮಂತ್ರಿ ಮಂಡಲದಲ್ಲಿ ಲಿಂಗಾಯತರಿಗೆ ಕಡೆಗಣನೆ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಅನೇಕ ಹಿರಿಯರಿಗೆ ಮನ್ನಣೆ ಕೊಟ್ಟಿದ್ದಾರೆ ಆದರೆ ಲಿಂಗಾಯತ ಸಮಾಜದ ಮುಖಂಡ ಪ್ರಕಾಶ ಹುಕ್ಕೇರಿ ಕತೆ ಏನು?
ಸವದಿ ಮತ್ತು ವಿನಯ ಕುಲಕರ್ಣಿಯವರಿಗೆ ಸಚಿವ ಸ್ಥಾನ:-
ಸವದಿಯವರು ಜನತಾ ಪರಿವಾರದಿಂದ ಬಿಜೆಪಿಗೆ ಬಂದು ತಮ್ಮದೇ ಆದ ಶಕ್ತಿಯಿಂದ ಪಕ್ಷ ಸಂಘಟನೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ೨೦೦೪ರ ನಂತರ ನಡೆದ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯಿಂದ ಶಿಕಾರಿಪುರ ಮತ್ತು ಅಥಣಿ ತಾಲೂಕ ಪಂಚಾಯತ ಬಿಜೆಪಿ ವಶವಾಗಿದ್ದವು. ಇದು ಸವದಿಯವರ ಪಕ್ಷ ಸಂಘಟನೆಯ ಶೈಲಿ! ೨೦ ವರ್ಷಗಳ ಕಾಲ ಬಿಜೆಪಿ ಜೊತೆ ಇದ್ದು, ಅನೇಕ ಕೆಲಸಗಳ ಜೊತೆ ಉಪಮುಖ್ಯಮಂತ್ರಿ ಪಟ್ಟ ಸಹಿತ ಅವರಿಗೆ ದೊರಕಿದ್ದು ಅವರ ಪರಿಶ್ರಮದಿಂದ! ಸವದಿಯವರು ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಸಂಘಟನಾ ಚತುರರು, ತಮ್ಮ ಪಕ್ಷನಿಷ್ಠೆ ಮತ್ತು ಕೆಲಸಗಳ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಉತ್ತಮ ಸಂಸದೀಯ ಪಟು. ನಾಳೆ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳಿಗೆ ಸಂಬಾಳಿಸುವ ಶಕ್ತಿ ಇರುವ ಹಿರಿಯ ರಾಜಕಾರಣಿ! ರಾಜಕೀಯ ಕಾರಣಾಂತಗಳಿಂದ ಅವರಿಗೆ ಅಥಣಿ ಟಿಕೆಟ್ ತಪ್ಪಿತು ಮತ್ತು ರಮೇಶ್ ಜಾರಕಿಹೊಳಿಯ ಅಸಹ್ಯ ಮಾತುಗಳಿಂದ ಬೇಸತ್ತು ಕಾಂಗ್ರೇಸ್ ಪಕ್ಷ ಸೇರಿ , ತಾವು ಗೆಲ್ಲುವುದು ಅಲ್ಲದೆ ಅನೇಕ ಕಡೆ ಪ್ರಚಾರ ಮಾಡಿ ಪಕ್ಷಕ್ಕೆ ಅನುಕೂಲ ಮಾಡಿದ್ದಾರೆ. ವಿಜಯಪುರ , ಬಾಗಲಕೋಟ, ಕೊಪ್ಪಳ , ಗದಗ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗುಲಬರ್ಗಾ ಕ್ಷೇತ್ರಗಳಲ್ಲಿ ಸವದಿಯವರ ಅಭಿಮಾನಿಗಳು ಕಾಂಗ್ರೇಸ್ ಪಕ್ಷಕ್ಕೆ ಜೈ ಅಂದಿದ್ದಾರೆ. ಇಂಥಹ ದೊಡ್ಡ ನಾಯಕನಿಗೆ ಮಂತ್ರಿ ತಪ್ಪಿಸಿದ್ದು ಯಾಕೆ ಎನ್ನುವುದು ಕಾಂಗ್ರೇಸ್ ಪಕ್ಷ ಹೇಳಬೇಕು.
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ನಾಯಕ ವಿನಯ ಕುಲಕರ್ಣಿಯವರು. ತಮ್ಮ ಕ್ಷೇತ್ರದ ಪ್ರಚಾರಕ್ಕೆ ಹೋಗದೆ ಗೆದ್ದಿದ್ದು ಅವರ ಜನಪ್ರಿಯತೆಗೆ ಸಾಕ್ಷಿ! ವಿನಯ ಕುಲಕರ್ಣಿಯವರು ರಾಜ್ಯದ ಯಾವದೇ ಮೂಲೆಯಲ್ಲಿ ಹೋದರು ಜನ ಗುರುತಿಸುತ್ತಾರೆ ಮತ್ತು ತಮ್ಮ ಪಕ್ಷಕ್ಕೆ ಮತಗಳಾಗಿ ಪರಿವರ್ತನೆ ಮಾಡುವ ಬಳಗ ವಿನಯ ಕುಲಕರ್ಣಿ ಹೊಂದಿದ್ದಾರೆ. ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿ ಅನುಭವ ಹೊಂದಿದ್ದರೂ ಅವರ ಕಡಗಣನೆ ಏನನ್ನು ಸೂಚಿಸುತ್ತದೆ? ಧಾರವಾಡ, ವಿಜಯಪುರ, ಬಾಗಲಕೋಟ, ಬೆಳಗಾವಿಯಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ವಿನಯ ಕುಲಕರ್ಣಿಯವರ ಅಭಿಮಾನಿಗಳು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಜನಪ್ರಿಯ ಲಿಂಗಾಯತ ನಾಯಕರಿಗೆ ಒಳ್ಳೆಯ ಹುದ್ದೆ ಕೊಟ್ಟರೆ ತುಂಬಾ ದೊಡ್ಡದಾಗಿ ಬೆಳೆಯುತ್ತಾರೆ ಎಂಬ ಹುನ್ನಾರನಾ ? ವಿನಯ ಕುಲಕರ್ಣಿಯವರನ್ನು ಪಕ್ಷ ಲಿಂಗಾಯತ ಮತಗಳ ಗಳಿಕೆಗಾಗಿ ಉಪಯೋಗಿಸಿಕೊಂಡಿದ್ದುಇದೆ. ಸವದಿ ಮತ್ತು ವಿನಯ ಕುಲಕರ್ಣಿಯವರು ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೇರವಾಗಿ ಕೊಟ್ಟರೂ ಮಂತ್ರಿ ಸ್ಥಾನ ತಪ್ಪಿಸಿದ್ದು ಅವರ ಅಭಿಮಾನಿಗಳಲ್ಲಿ ಅಸಮಾಧಾನ ಖಂಡಿತ ಇದೆ. ಬೊಮ್ಮಾಯಿಯವರ ವಿರುದ್ದ ಶಿಗ್ಗಾವದಲ್ಲಿ ವಿನಯ ಕುಲಕರ್ಣಿಯವರಿಗೆ ಟಿಕೆಟ್ ಕೊಟ್ಟಿದ್ದರೇ ವಿಜಯಪತಾಕೆ ಖಂಡಿತ ಹಾರುತ್ತಿತ್ತು. ಗೆದ್ದು ಎಲ್ಲಿ ರಾಜ್ಯ ನಾಯಕರಾಗಿ ಗುರುತಿಸಿಕೊಳ್ಳುತ್ತಾರೋ ಎನ್ನುವ ಭಯದಲ್ಲಿ ಟಿಕೆಟ್ ಕೊಡಲಿಲ್ಲ ಎನ್ನವುದು ಅವರ ಅಭಿಮಾನಿಗಳ ಮಾತು.
ಬೆಂಬಲ ಕೊಟ್ಟವರು ಇದನ್ನು ಸಹಿಸಿಕೊಳ್ಳುತ್ತಾರೆಯೇ?
ಸಚಿವ ಸಂಪುಟದಲ್ಲಿ ಎಂ ಬಿ ಪಾಟೀಲರ ಕೈಗಾರಿಕೆ ಇಲಾಖೆ ಬಿಟ್ಟರೇ ಲಿಂಗಾಯತರಿಗೆ ಪ್ರಭಲ ಖಾತೆ ಕೊಟ್ಟಿಲ್ಲ. ಶಕ್ತಿವಂತ ನಾಯಕರಿದ್ದರೂ ಅವರಿಗೆ ಸಣ್ಣ ಸಣ್ಣ ಖಾತೆ ಕೊಟ್ಟು ಅನ್ಯಾಯ ಮಾಡಿದ್ದು ಕಣ್ಣಿಗೆ ಕಾಣಿಸುತ್ತದೆ. ಒಂದು ಕಡೆ ಖಾತೆಯ ಕ್ಯಾತೆ! ಮತ್ತೊಂದು ಕಡೆ ಬಿಜೆಪಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸವದಿಯವರಿಗೆ ಮಂತ್ರಿ ಇಲ್ಲ. ಪಕ್ಷದ ಕಟ್ಟಾಳು ವಿನಯ ಕುಲಕರ್ಣಿಯವರು ಮಂತ್ರಿ ಇಲ್ಲ. ರಾಜಕೀಯ ಕಚ್ಚಾಟದಲ್ಲಿ ದೊಡ್ಡ ದೊಡ್ಡ ನಾಯಕರು ಬೇರೆ ಪಕ್ಷದಿಂದ, ಕಾಂಗ್ರೇಸ್ಗೆ ಬಂದು ಬೆಂಬಲ ಕೊಟ್ಟಿದ್ದಾರೆ. ಅದರ ಲಾಭ ಪಕ್ಷಕ್ಕೆ ಸಿಕ್ಕಿದೆ. ಇದನ್ನು ಉಳಿಕೊಂಡು ಹೋಗುವುದು ಪಕ್ಷದ ನಾಯಕರ ಕರ್ತವ್ಯ! ಸಂಪುಟದಲ್ಲಿ ೧೫ ಶಾಸಕರಿರುವ ಸಮುದಾಯಕ್ಕೆ ೫ ಮಂತ್ರಿ ಜೊತೆ ಪ್ರಬಲ ಖಾತೆಗಳು! ಅವರಿಗೂ ಕೊಡಲಿ ಅದರ ಜೊತೆ ೩೯ ಶಾಸಕರಿರುವ ಸಮುದಾಯಕ್ಕೂ ನ್ಯಾಯ ಕೊಡಬೇಕು ತಾನೇ?
ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಮ್ಮ ನಾಯಕರ ಮಾತು ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ . ಆದರೆ ಇಂದು ನಡೆಯುತ್ತಿರುವ ಬೆಳವಣಿಗೆಗೆ ಲಿಂಗಾಯತ ಸಮಾಜದ ಯುವಕರು ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಗೆ ಕೊಟ್ಟಿದ್ದಾರೆ. ಬೇರೆ ಸಮುದಾಯದ ನಾಯಕರ ಜೊತೆ ನಮ್ಮ ನಾಯಕರನ್ನು ಗೌರವದಿಂದ ಕಾಣಿ! ವೀರೇಂದ್ರ ಪಾಟೀಲರ ಎಪಿಸೋಡ್ ಮತ್ತು ಕುಮಾರಸ್ವಾಮಿ ವಚನಭ್ರಷ್ಟತೆ ಎಪಿಸೋಡ್ ಕಾಂಗ್ರೇಸ್ ನೆನಪಿಸಿಕೊಳ್ಳಬೇಕು. ಕಾಂಗ್ರೇಸ್ ಪಕ್ಷ ಇದನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಕಾದು ನೋಡಬೇಕು. ಒಂದೇ ವರ್ಷದಲ್ಲಿ ಲೋಕಸಭೆ ಚುನಾವಣೆ ಇದೆ, ಒಂದು ವೇಳೆ ಲಿಂಗಾಯತ ನಾಯಕರಿಗೆ ಅವರ ಹಕ್ಕಿನ ಅನುಸಾರ ಗೌರವ ಸಿಗದೇ ಹೋದರೇ ಖಂಡಿತ ಕಾಂಗ್ರೇಸ್ ಪಕ್ಷದ ಮೇಲೆ ಪರಿಣಾಮ ಬೀರುತ್ತೆ! ಕಾಂಗ್ರೇಸ್ ಕಡೆ ವಾಲಿದ ಅದೇ ಜನರು ಮತ್ತೆ ಬಿಜೆಪಿ ಜೊತೆ ನಿಂತರೆ ಆಶ್ಚರ್ಯ ಪಡಬೇಕಿಲ್ಲ.
Categories: Articles
