Articles

ಕೈಯಲ್ಲಿ ನಿಂಬೆಹಣ್ಣು , ಅಭಿಮಾನಿಗಳ ಎದೆಯ ಮೇಲೆ ಹಸ್ತ , ಹ್ಯಾಟ್ರಿಕ್ ಗೆಲುವಿನಲ್ಲಿ ಅಭಿವೃದ್ಧಿ ಕನಸು ಕಾಣುತ್ತಿರುವ ಇಂಡಿ ಜನತೆ!

ಇಂಡಿಯ ಶಾಸಕರು ಜೆಂಟಲ್ಮೆನ್ , ತುಂಬಾ ಬುದ್ದಿವಂತರು , ಅದಕ್ಕೆ ೨೦೨೩ರ ಚುನಾವಣೆಯಲ್ಲಿ ಏನೆ ಆದರೂ ಕೊನೆಗೆ ಗೆಲ್ಲವುದು ಯಶವಂತರಾಯಗೌಡ ಪಾಟೀಲರು ಎಂದು ಅನೇಕರು ಹೇಳುತ್ತಿದ್ದರು. ಇದಕ್ಕೆ ಕಾರಣ ದಶಕಗಳ ಕಾಲ ರಾಜಕೀಯ ಅನುಭವ. ಅನೇಕ ಚುನಾವಣೆ ಎದುರಿಸಿದ ಅನುಭವದಿಂದಲೇ ಸತತವಾಗಿ ಮೂರನೇ ಬಾರಿಗೆ ಗೆಲ್ಲುವದಕ್ಕೆ ಸಾಧ್ಯವಾಗಿದ್ದು. ಆದರೆ ನಿಜ ಹೇಳಬೇಕಂದರೆ ೨೦೨೩ರ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲುವದಕ್ಕೆ ಸಾಧ್ಯವೇ ಇರಲಿಲ್ಲ. ಜೆಡಿಎಸ್ ಕೊನೆಯ ಎರಡು ದಿನಗಳವರೆಗೆ ಬಿಡಿ ಪಾಟೀಲರೇ ಜಯಭೇರಿ ಬಾರಿಸುತ್ತಾರೆ ಎಂದು ಎಲ್ಲ ಗೌಪ್ಯ ಸಮೀಕ್ಷೆಗಳು ಹೇಳಿದ್ದವು ಮತ್ತು ಅದು ಸತ್ಯವು ಹೌದು! ಬಿಡಿ ಪಾಟೀಲರು ೨೦೧೮ರಲ್ಲಿ ೪೦ಸಾವಿರ ಮತಗಳನ್ನು ಪಡೆದು ಸೋತಿದ್ದರೂ ಜನರ ಪ್ರೀತಿಯನ್ನು ಗಳಿಸಿದ್ದರು. ೨೦೨೩ರಲ್ಲಿ ದಯಾಸಾಗರ ಪಾಟೀಲರಿಗೆ ಯಾವದೋ ಕಿತ್ತೊಹೋಗಿರುವ ಲಾಜಿಕ್ ಪ್ರಯೋಗ ಮಾಡಿ ಟಿಕೆಟ್ ತಪ್ಪಿದಾಗ ಬಿಜೆಪಿಗೆ ಮೂರನೇ ಸ್ಥಾನ ನಿಕ್ಕಿ ಆಗಿತ್ತು. ಉಳಿದಿದ್ದು ನೇರಾನೇರ ಪಾಟೀಲ್ ವೆರ್ಸಸ್ ಪಾಟೀಲ್ ಎಂದರೆ ಕಾಂಗ್ರೆಸ್ ವೆರ್ಸಸ್ ಜೆಡಿಎಸ್!

ಸೋತು ನಿರಂತರವಾಗಿ ಜನರ ಜೊತೆ ಇದ್ದ ಬಿಡಿ ಪಾಟೀಲರಿಗೆ ೨೦೨೩ರ ಚುನಾವಣೆ ಗೆಲ್ಲವುದು ಕಷ್ಟವಿರಲಿಲ್ಲ. ಅವರ ಹಿಂಬಾಲಕರು ಮಾಡಿದ ಸ್ವಯಂಕೃತ ತಪ್ಪುಗಳಿಂದ ಮತ್ತೆ ೫ ಸಾವಿರ ಮತಗಳಿಂದ(೧೦ ಸಾವಿರ ) ಸೊಲುಬೇಕಾಯಿತು! ಚುನಾವಣೆ ಇನ್ನೆರಡು ದಿನ ಇರುವದಕ್ಕಿಂತ ಮುಂಚೆ ಬಿಡಿಯವರು ಚೆನ್ನಾಗಿಯೇ ಜನರ ಮನ ಗೆದ್ದಿದ್ದರು. ಸಾಲೋಟಗಿ ಶಿವಯೋಗಪ್ಪನವರು ಜೆಡಿಎಸ್ ಸೇರಿದ ನಂತರ ಮತ್ತಿಷ್ಟು ಬಲ ಬಂದಿತ್ತು. ಮೊದಮೊದಲು ಶಿವಯೋಗಪ್ಪ ತೀಕ್ಷ್ಣವಾಗಿ ಆರೋಪ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿದ್ದರು ಅದು ಕ್ಷೇತ್ರದಲ್ಲಿ ಸಂಚಲನ ಮೂಡಿತ್ತು. ಇವರ ಆರೋಪಗಳು ಸತ್ಯಕ್ಕೆ ಹತ್ತಿರವಾಗಿದ್ದವು ಅದಕ್ಕೆ ಮತಗಳಾಗಿ ಪರಿವರ್ತನೆಗೊಳ್ಳುವತ್ತ ಸಾಗಿತ್ತು. ಆದರೆ ಇವರ ಜೊತೆ ಸ್ವಯಂ ಘೋಷಿತ ನಾಯಕರು ಜೆಡಿಎಸ್ ಸೇರಿ ಶಾಸಕರಿಗೆ ವ್ಯಯಕ್ತಿವಾಗಿ ನಿಂದನೆ ಮಾಡಿದಾಗ ಜನರು ಇದನ್ನು ಸಹಿಸಿಕೊಳ್ಳಲಿಲ್ಲ. ಇದು ಇವರು ಮಾಡಿದ ಮೊದಲೆನೆ ತಪ್ಪು.

ಬಿಡಿ ಪಾಟೀಲರು ಗೆದ್ದೇ ಬಿಟ್ಟರು ಎಂದು ಅವರ ಸಮುದಾಯದ ಕೆಲವರು ಕೂಸು ಹುಟ್ಟುವದಕ್ಕಿಂತ ಮುಂಚೆ ಕುಲಾಯಿ ಹೊಲಸಿದ ಹಾಗೆ, ಮನಸ್ಸಿಗೆ ಬಂದ ಹಾಗೆ ಮಾತನಾಡತೊಡಗಿದರು. ಅವರದೇ ಒಂದು ಗುಂಪು ಕಟ್ಟಿಕೊಂಡು ಚುನಾವಣೆ ಮಾಡತೊಡಗಿದರು, ಅದು ಬೇರೆ ಸಮುದಾಯಗಳ ಕಂಗೆಣ್ಣಿಗೆ ಗುರಿಯಾಗಬೇಕಾಯಿತು. ಕೆಲಯೊಂದು ಊರುಗಳಲ್ಲಿ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಚುನಾವಣೆ ಮಾಡಿ ಒಳ್ಳೆಯ ಮತಗಳನ್ನು ಪಡೆದ ಜೆಡಿಎಸ್ ಕೆಲಯೊಂದು ಊರುಗಳಲ್ಲಿ ಬೇರೆ ಸಮುದಾಯದ ಪ್ರೀತಿ ಗಳಿಸುವಲ್ಲಿ ವಿಫಲರಾದರು. ಒಂದು ನೆನೆಪಿರಲಿ , ಬಿಡಿ ಪಾಟೀಲರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು, ಆದರೆ ಇವರ ಹಿಂಬಾಲಕರು ಸರಿಯಾಗಿ ನಡೆದುಕೊಳ್ಳಲಿಲ್ಲ ! ಇದು ಮಾಡಿದ ಎರಡನೇ ತಪ್ಪು.

ತಪ್ಪುಗಳು ಜೊತೆ ದುಡ್ಡಿನ ಹೊಳೆ(ಕೇವಲ ದುಡ್ಡಿನಿಂದ ಚುನಾವಣೆ ಗೆಲ್ಲುವದಕ್ಕೆ ಸಾಧ್ಯವೇವಿಲ್ಲ ) ಮತ್ತು ಲಕ್ಷ್ಮಣ್ ಸವದಿಯವರ ಕಾಂಗ್ರೆಸ್ ಸೇರ್ಪಡೆ! ವಿಶೇಷವಾಗಿ ಬಿಜೆಪಿ ಅಭ್ಯರ್ಥಿಯ ಹೀನಾಯ ಪ್ರದರ್ಶನ! ಇದು ಬಿಟ್ಟು ಅವರಿಗೆ ಅಷ್ಟು ದುಡ್ಡು ಕೊಟ್ಟರು, ಇವರಿಗೆ ಇಷ್ಟು ದುಡ್ಡು ಕೊಟ್ಟರು. ಸೋಲಾಪುರದಲ್ಲಿ ಸೆಟ್ಲ್ ಆಯಿತು ಎನ್ನವುದು ಗಾಳಿ ಮಾತುಗಳೇ ವಿನಃ ಅದೆಲ್ಲ ಎಂದೂ ನಿಜವಾಗದು! ಬಿಡಿ ಪಾಟೀಲರು ಬಡವ, ಅದಕ್ಕೆ ಅವರಿಗೆ ಗೆಲ್ಲಿಸಬೇಕು ಎಂದು ಅನೇಕರು ಜಾತಿಬಿಟ್ಟು ಮತ ಹಾಕಿದಕ್ಕೆ ೬೦ ಸಾವಿರ ಮತಗಳು ಪಡೆದದ್ದು. ಇದರ ಜೊತೆ ಶಾಸಕರ ಮನೆಯ ಯಜಮಾನಿ ಹೊಳೆಯ ಉಸುಕು ಖಾಲಿ ಆಗುತ್ತೆ ಆದರೆ ನಮ್ಮ ಮನೆಯ ದುಡ್ಡು ಖಾಲಿ ಆಗುವದಿಲ್ಲ ಎಂದು ಹೇಳಿದ್ದಾರೆ ಎಂದು ತೇಲಿಬಿಟ್ಟಿದ್ದು ಸ್ವಲ್ಪ ಮತಗಳು ಜೆಡಿಎಸ್ ಹೋಗಿದ್ದು ಸುಳ್ಳಲ್ಲ. ಆದರೆ ಹಾಗೆ ಹೇಳಿದ್ದರು ಎನ್ನುವದಕ್ಕೆ ಯಾವದೇ ಪುರಾವೆಗಳು ಸಿಗಲಿಲ್ಲ!

ಶಾಸಕರು ಮಿತಭಾಷಿ ಮತ್ತು ಜನರಿಗೆ ಪ್ರೀತಿ ಪಾತ್ರವಾಗಿದ್ದಾರೆ ಎನ್ನವುದಕ್ಕೆ ಪುರಾವೆ ಬೇಕಾಗಿಲ್ಲ. ಕಳೆದ ಹತ್ತು ವರ್ಷದಲ್ಲಿ ಇಂಡಿಗೆ ಕುಡಿಯುವ ನೀರಿನ ಯೋಜನೆ, ನೀರಾವರಿ ಯೋಜೆನೆಗಳು, ಭೀಮಾಶಂಕರ ಖಾರ್ಕಾನೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಅಭಿವೃದ್ಧಿ ಮಾಡದಿದ್ದರೇ ಮೂರನೇ ಬಾರಿ ಗೆಲುವು ಸಾಧ್ಯವಾಗುತ್ತಿರಲಿಲ್ಲ ! ೨೦೦೮ರಲ್ಲಿ ೫೦೦+ ಮತಗಳಿಂದ ಸೋತು, ನನ್ನ ಸೋಲಿಗೆ ಇದೆ ಸಾಮಾಜ ಕಾರಣ ಎಂದಿದ್ದು ನಿಜ ,ಆದರೆ ಅದೇ ಸಮಾಜ ೨೦೨೩ರಲ್ಲಿ ಗೆಲ್ಲುವದಕ್ಕೆ ಕಾರಣ ಎನ್ನುವುದು ಸತ್ಯ! ಹಾಗಾಗಿ ರಾಜಕೀಯದಲ್ಲಿ ನಿಮ್ಮ ಸಮಾಜ ನನಗೆ ಮತ ಹಾಕಿಲ್ಲ ಎಂದು ಮನೆಗೆ ಬಂದವರಿಗೆ ಸಹಾಯ ಮಾಡದೆ ಇರುವುದು ಜನಪ್ರತಿನಿಧಿಗಳಿಗೆ ಶೋಭೆ ತರುವದಿಲ್ಲ. ಇಂತಹ ಅಧಿಕ ಪ್ರಸಂಗತನ ಮಾಡಿದರೆ ಮುಂದೆ ಯಾವತ್ತೂ ಅಂಥಹ ಸಮುದಾಯಗಳು ಅವರ ಬೆಂಬಲಕ್ಕೆ ಬರುವದಿಲ್ಲ. ಸ್ಥಳೀಯ ಶಾಸಕರು ಇಂಥಹ ತಪ್ಪುಗಳು ಮಾಡದೆ ಇರುವದಕ್ಕೆ ಅವರಿಗೆ ಎಲ್ಲ ಸಮಾಜದವರು ಬೆಂಬಲಿಸಿದರು.

ಕಲ್ಲೂರ್ , ರವಿ ಪಾಟೀಲ್ ಬಿಟ್ಟರೆ ಮೂರೂ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಯಶವಂತರಾಯಗೌಡ ಪಾಟೀಲರು. ಶಾಸಕರು ಯಾರಿಗೂ ಕೆಡಕು ಬಯಸಿದವರಲ್ಲ, ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎಂದು ಇಂಡಿಯ ಜನತೆ ನಂಬಿದ್ದಾರೆ, ಶಾಸಕರು ಸಹಿತ ನನ್ನದೇನಿದ್ದರೂ ಒಂದು ತಿಂಗಳ ಮಾತ್ರ ರಾಜಕೀಯ, ಉಳಿದೆಲ್ಲ ಸಮಯ ನನ್ನ ಶಕ್ತಿ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಎಂದು ಹೊರ್ತಿಯಲ್ಲಿ ಹೇಳಿದ್ದರು , ಇವತ್ತು ಅವರು ಹಾಗೆ ನಡೆದುಕೊಳ್ಳುತ್ತಾರೆ ಎಂದು ಜನರು ನಂಬಿದ್ದಾರೆ. ಕ್ಷೇತ್ರದ ಜನತೆಗೆ ಬೇಕಾಗಿರುವುದು ಉತ್ತಮ ರಸ್ತೆಗಳು, ನೀರಾವರಿ ಯೋಜೆನೆಗಳು, ಸ್ಥಳೀಯವಾಗಿ ಉದ್ಯೋಗಗಳು, ನಿಂಬೆ ಮತ್ತು ದ್ರಾಕ್ಷಿ ಬೆಳೆದ ರೈತರಿಗೆ ಯೋಗ್ಯ ಬೆಲೆ ಸಿಗುವ ಹಾಗೆ ಯೋಜನಗೆಗಳನ್ನು ಜಾರಿಗೆ ತರುವುದು.

ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರೆತೆ ಇದೆ, ನೊಂದಣಿ ಕಚೇರಿಗಳಲ್ಲಿ ದಲ್ಲಾಳಿಗಳ ಅಬ್ಬರ. ಇಂತಹ ಸಮಸ್ಯೆಗಳಿಗೆ ಶಾಸಕರು ತಮ್ಮದೇ ರೀತಿಯಲ್ಲಿ ಕೆಲಸ ಮಾಡಿದರೇ ಖಂಡಿತ ಇತಿಹಾಸ ಬರೆಯುತ್ತಾರೆ. ರೇವಣಸಿದ್ದೇಶ್ವರ ಮೂರೂ ಹಂತದ ಯೋಜೆನೆಯನ್ನು ಅತ್ಯಂತ ವೇಗವಾಗಿ ಮಾಡಿಸುವ ಮನಸ್ಸು ಮಾಡಬೇಕು. ದಕ್ಷಿಣ ಕರ್ನಾಟಕದ ಪ್ರದೇಶದಲ್ಲಿ ರಸ್ತೆಗಳು ಅಭಿವೃದ್ದಿಯಾಗಿವೆ , ನಮ್ಮಲ್ಲಿ ಅನೇಕ ಒಳ ರಸ್ತೆಗಳು ಅಭಿವೃದ್ಧಿ ಹೊಂದಿಲ್ಲ, ಜಿಪಿಎಸ್ ಓಡಿಸಿ ದುಡ್ಡು ಮಾಡುವುದು ಆಗಬಾರದು. ಒಳಚರಂಡಿ ವ್ಯವಸ್ಥೆ ಆಗಬೇಕು. ತಾಲೂಕಗಳಲ್ಲಿ ಪಾರ್ಕ್ ಆಗಲಿ. ಮೂರನೇ ಬಾರಿ ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ, ಅದಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಿ ಇಂಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿದರೆ ಜನ ಯಾವತ್ತು ಮರೆಯುವದಿಲ್ಲ. ಕೈಯಲ್ಲಿ ನಿಂಬೆ ಹಣ್ಣು, ಅಭಿಮಾನಿಗಳ ಎದೆಯ ಮೇಲೆ ಕೈ , ಇವು ನಿಮ್ಮ ಟ್ರೇಡ್ ಮಾರ್ಕ್ 🙂 ಕೈಯಲ್ಲಿ ನಿಂಬೆ ಹಣ್ಣು ಮತ್ತು ಬೆಂಬಲಿಗರ ಎದೆಯ ಮೇಲೆ ಹಸ್ತದ ರಹಸ್ಯ ನಮಗೆ ಬೇಕಿಲ್ಲ. ಆದರೆ ಎದೆಯ ಮೇಲಿನ ಕೈ ಅಚ್ಚೆಗಳು ಹೃದಯದಲ್ಲಿ ಮೂಡಬೇಕಾದರೆ ಅಭಿವೃದ್ಧಿ ಒಂದೇ ಮಂತ್ರ !

Categories: Articles

Tagged as:

Leave a Reply