By Bhimashankar Teli
ನಿರ್ಮೋಹಿ , ಮಹಾನ ಸಂತ , ತಮ್ಮ ಜೀವಿತಾವಧಿಯಲ್ಲಿ ತಮ್ಮ ಅಂಗಿಗೆ ಜೇಬಿಲ್ಲದೆ ಅಧ್ಯಾತ್ಮ ಚಿಂತಕರಾಗಿ ವೈರಾಗ್ಯ ಜೀವನವನ್ನು ಸಾಗಿಸಿ ಲಕ್ಷಾಂತರ ಭಕ್ತರನ್ನು ಹೊಂದಿದರೂ , ಶ್ರೀಮಂತ , ಬಡವ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಕಂಡಿದ್ದ ಸಿದ್ದೇಶ್ವರ ಮಾಹಾ ಸ್ವಾಮಿಗಳ ಗುರುಗಳು ಮಹಾನ್ ಸಂತ ಮಲ್ಲಿಕಾರ್ಜುನ ಸ್ವಾಮಿಗಳು.
ವಿಜಯಪುರದ ಜ್ಞಾನ ಯೋಗಾಶ್ರಮದ ಗುರುಗಳಾದ ಮಲ್ಲಿಕಾರ್ಜುನ ಮಾಹಾಸ್ವಾಮಿಗಳ ಶಿಷ್ಯರಾದ ಸಿದ್ದೇಶ್ವರ ಸ್ವಾಮಿಗಳು, ಗುರುಗಳ ನಡೆ ಮತ್ತು ನುಡಿಯಿಂದ ಪ್ರಭಾವಿತರಾಗಿ ಅವರ ಶಿಷ್ಯರಾಗಿದ್ದು ಜಗತ್ತಿಗೆ ತಿಳಿದ ವಿಷಯ. ಇಂದಿಗೂ ನೀವು ವಿಜಯಪುರಕ್ಕೆ ಹೋದರೆ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆ ನೋಡಲು ಸಿಗುತ್ತದೆ. ಅದೊಂದು ಅಧ್ಯಾತ್ಮ ತಾಣ! ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಲ್ಲಮರ ಬಗ್ಗೆ ಹೇಳುವಾಗ, ಅಲ್ಲಮ ಪ್ರಭುಗಳ ಶ್ರೇಷ್ಟತೆ ಬಗ್ಗೆ ಅನೇಕ ಬಾರಿ ಅವರ ಪ್ರವಚನದಲ್ಲಿ ಹೇಳಿದ್ದಾರೆ. ಅಲ್ಲಮರ ಬರೆದ ವಚನಗಳು ಬಿಡಿಸುವದು ಕಷ್ಟಸಾಧ್ಯವಾಗಿತ್ತು, ಏಕೆಂದರೆ ಅವರ ವಚನಗಳಿಗೆ ಬಹಳ ಅಂತರಾಳದ ಅರ್ಥವುಂಟು. ಅದಕ್ಕಾಗಿ ಯಾರು ಅದನ್ನು ಬಿಡಿಸುವ ಪ್ರಯತ್ನಮಾಡಿರಲಿಲ್ಲ.


ಆದರೆ ಸುತ್ತೂರ ಶ್ರೀಕ್ಷೇತ್ರದಲ್ಲಿ ನಡೆದ ಅಲ್ಲಮಪ್ರಭುದೇವರ ವಚನ-ನಿರ್ವಿಚನ ಚಿಂತನಗೋಷ್ಠಿಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಜೊತೆ , ವಿದ್ವಾನ್ ಡಾಕ್ಟರ್ ಶ್ರೀ ಇಮ್ಮಡಿ ಶಿವಬಸವಸ್ವಾಮಿಗಳು, ಕುಂದೂರ ಮಠ ಮೈಸೂರ್, ಡಾಕ್ಟರ್ ಏ . ಎಲ್. ಶಿವರುದ್ರಪ್ಪ , ನಿವೃತ್ ತತ್ವಶಾಸ್ತ್ರ ಪ್ರಾಧ್ಯಾಪಕರು,ಬೆಂಗಳೂರು, ಡಾಕ್ಟರ್ ಸಂಗಮೇಶ್ ಬಿರಾದಾರ್, ನಿವೃತ್ ಕನ್ನಡ ಪ್ರಾಧ್ಯಾಪಕರು, ಪ್ರೊ ಕೆ ಬಿ ಪ್ರಭುಪ್ರಸಾದ್ , ನಿವೃತ್, ಇಂಗ್ಲಿಷ್ , ಪ್ರಾಧ್ಯಾಪಕರು, ಮೈಸೂರ್ ಮತ್ತು ಶ್ರೀ ಎಸ್ . ನಂಜುಂಡಯ್ಯ ,ನಿವೃತ್ ಕನ್ನಡ ಪ್ರಾಧ್ಯಾಪಕರು, ಮೈಸೂರ್ ಅಲ್ಲಮರ ವಚನವನ್ನು ನಿರ್ವಿಚನ ಮಾಡಿ ಅದಕ್ಕೆ “ಅಲ್ಲಮ ಪ್ರಭುದೇವರ ವಚನ ನಿರ್ವಿಚನ” ಎಂಬ ಪುಸ್ತಕವನ್ನು ಬರೆದರು. ಅನೇಕ ಆಧ್ಯಾತ್ಮಿಕ ಜೀವಿಗಳು ಪುಸ್ತಕ ಓದಿದ ಮೇಲೆ ಹೇಳಿದ್ದು ಒಂದೇ “ಅಲ್ಲಮರ ವಚನಗಳನ್ನು ನಿರ್ವಚನ ಮಾಡಲು ಸಾಧ್ಯವಾಗಿದ್ದು , ಮತ್ತೊಮ್ಮೆ ಅಲ್ಲಮರಾಗಿ ಹುಟ್ಟಿಬಂದ ಸಿದ್ದೇಶ್ವರ ಮಹಾಸ್ವಾಮಿಗಳಿಂದ “
ಇಂಥಹ ಯಾವದೇ ಹೊಗಳಿಕೆಗೆಯನ್ನು ಯಾವಾಗಲೂ ದೂರರಿಂದ ನೋಡಿ,ದೂರದಿಂದಲೇ ಪ್ರೀತಿಸಿ, ಪ್ರೀತಿಯಿಂದ ದೂರಸರಿಸಿದ ಶ್ರೀಗಳು ಜಗತ್ತಿಗೆ ಮಾದರಿ. ಅಲ್ಲಮ ಇಡೀ ಜಗತ್ತು ತಿರುಗಾಡಿದ ಹೇಗೆ ಹೋದ ಹೇಗೆ ಬಂದ ಎನ್ನವುದು ಅನೇಕರಿಗೆ ಗೊತ್ತೆಯಾಗಲಿಲ್ಲ ಎಂದು ಶ್ರೀಗಳು ತಮ್ಮ ಪ್ರವಚನದಲ್ಲಿ ಹೇಳಿದ್ದಾರೆ. ಅಣ್ಣ ಬಸವಣ್ಣವರ ಅನುಭವ ಮಂಟಪದ ಶೂನ್ಯ ಪೀಠದ ಅಧ್ಯಕ್ಷರಾದ ಅಲ್ಲಮರು , ಕಲ್ಯಾಣದಲ್ಲಿ ಕ್ರಾಂತಿಯಾದ ಮೇಲೆ ಶ್ರೀಶೈಲ್ ಕಡೆ ಹೋದರು ಎಂಬದು ಇತಿಹಾಸ ಹೇಳುತ್ತದೆ. ಇಂದಿಗೂ ಅವರ ಪೂಜ್ಯ ಗದ್ದುಗೆ ನಿಜವಾಗಿ ಎಲ್ಲಿ ಇದೆ ಎಂದು ಗೊತ್ತಿದೆಯಾ?
ಅಲ್ಲಮರು ಸಹಿತ ಮಹಾನ ದೊಡ್ಡ ಶರಣ, ಯಾವ ಕೆಲಸಕ್ಕಾಗಿ ಬಂದನೋ , ಅದನ್ನು ಮಾಡಿ , ಯಾವದೇ ಕುರುಹು ಕೂಡ ಇಲ್ಲದೆ ಮತ್ತೆ ದೇವರಲ್ಲಿ ಲೀನವಾದದ್ದು! ಇಂತಹ ನಿರ್ಮೊವಿಯ ಬಗ್ಗೆ ನಮ್ಮ ಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಪ್ರವಚನದಲ್ಲಿ ಮಾಯೆಯನ್ನೇ ಗೆದ್ದ ಅಲ್ಲಮರ ಬಗ್ಗೆ ಹೇಳಿ , ತಾವು ಸಹಿತ ಇಹಲೋಕ ತ್ಯಜಿಸುವಾಗ , ಮಡಿದ ದೇಹಕ್ಕೆ ವಿಧಿವಿಧಾನ ಅನಗತ್ಯ , ಅದನ್ನು ದಹಿಸಿ, ನದಿ ಅಥವಾ ಸಮುದ್ರಕ್ಕೆ ಕೂಡಿಸಿ , ಯಾವದೇ ಗದ್ದುಗೆ, ಗುಡಿ ಗುಂಡಾರದ ಅವಶ್ಯಕತೆ ಇಲ್ಲ ಎಂದು ಹೇಳಿದ್ದು , ತಮ್ಮ ಜೀವನದಲ್ಲಿ ಏನು ಹೇಳಿದ್ದಾರೋ ಅದನ್ನೇ ಮಾಡಿಕೊಂಡು ಬಂದು, ಕೊನೆಗೆ ಹೋಗುವಾದ ಸಹಿತ ಮತ್ತೊಂದು ಸಂದೇಶ(ಶೂನ್ಯ ಸಿಂಹಾಸನ) ಕೊಟ್ಟು ಹೋದರು.
ಇಂದು ಗುರುಪೂರ್ಣಿಮೆ , ತಮ್ಮ ಗುರುಗಳಿಗೆ ಗುರುನಮನ ಸಲ್ಲಿಸುವ ದಿನ, ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಮಹಸ್ವಾಮಿಗಳು ಇದ್ದಾಗ ಜ್ಞಾನಯೋಗಾಶ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಗುರುಗಳಿಂದಲೇ ನಾನು ಎಂಬ ಭಾವ ಶ್ರೀಗಳಲ್ಲಿ ಇತ್ತು ! ಅದಕ್ಕಾಗಿಯೇ ಇನ್ನೊಂದು ಗದ್ದುಗೆ ಬೇಡ ಎಂಬ ಭಾವನೆಯಿಂದ ತಮ್ಮ ಗದ್ದುಗೆ ಆಶ್ರಮದಲ್ಲಿ ಸ್ಥಾಪಿಸುವ ಅವಕಾಶವನ್ನು ಕೊಡಲಿಲ್ಲ. ಒಬ್ಬ ಶ್ರೇಷ್ಠ ಗುರು, ಎಂಥಹ ಶ್ರೇಷ್ಟ ಶಿಷ್ಯರನ್ನು ಕೊಡಬೆಲ್ಲ ಎಂಬುದಕ್ಕೆ ಉಧಾಹರಣೆ ನಮ್ಮ ಜ್ಞಾನಯೋಗಾಶ್ರಮದ ಮಾಹಾನ್ ಚೇತನಗಳಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಗಳು. ಇಬ್ಬರು ನಿರ್ಮೊವಿಗಳೇ!. ಅಲ್ಲಮರ ಒಂದು ವಚನ!
ಅಗ್ನಿಸ್ಟಂಬದ(ಸ್ತ) ರಕ್ಷೆಯಿದ್ದು ಮನೆ ಬೆಂದಿತ್ತಯ್ಯಾ .
ಬಲಮುರಿಯ ಶಂಖವಿದ್ದು ಪದ ಹೋಯಿತಯ್ಯ .
ಏಕಮುಖದ ರುದ್ರಾಕ್ಷಿಯಿದ್ದು ವಿಘ್ನವಾಯಿತಯ್ಯ .
ಇವಲ್ಲೆವ ಸಾಧಿಸಿದಡೆ,
ಏನೂ ಇಲ್ಲದಂತಾಯಿತ್ತು ಗುಹೇಶ್ವರಾ.
ಅಗ್ನಿಸ್ತಂಬಕ್ಕೆ ರಕ್ಷೆ ಇದ್ದರೂ ಕೂಡ ಮನೆಗಳು ಬೆಂದುಹೋಗಿವೆ, ಬಲಮುರಿ ಶಂಖವು ಇದ್ದರೂ ಫಲ ಪದವಿಗಳು ಕೈಬಿಟ್ಟಿವೆ, ಏಕಮುಖದ ರುದ್ರಾಕ್ಷಿಯನ್ನು ಧರಿಸಿದ್ದರೂ ವಿಘ್ನಗಲುಂಟಾಗಿವೆ – ಎಂದ ಬಳಿಕ ಇವಲ್ಲೆವೂ ಸಂಪಾದಿಸಿ ಮಾಡುವದಾದರೇನು?
ನಿಷ್ಠೆಯಿರಲಿ ದೇವನಲ್ಲಿ , ಅದು ಏನೆಲ್ಲ ಕರುಣಿಸಬಲ್ಲದು, ವಿಮುಕ್ತಿಯತ್ತ ನಮ್ಮನ್ನು ನಡೆಯಿಸಬಲ್ಲದು. ನಿಷ್ಠೆ ಅಚಲವಾಗಿರಬೇಕು. ವಿವಿಧ ವಸ್ತುಗಳಲ್ಲಿ ಚೆಲ್ಲಾಡಬಾರದು. ಇದು ಭಕ್ತರಿಗೆ ಅಲ್ಲಮರ ಆದೇಶ.
ಇಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ಮಲ್ಲಿಕಾರ್ಜನ ಗುರುಗಳ ಗದ್ದುಗೆ ಪೂಜೆ ನಡೆಯುತ್ತಿದೆ. ಅಪಾರ ಭಕ್ತ ಸಮೂಹ ಪಾಲ್ಗೊಂಡಿದೆ. ಒಂದು ಕಡೆ ಗುರುವಿನ ಗದ್ದುಗೆ , ಇನ್ನೊಂದು ಕಡೆ ಶಿಷ್ಯನ ಭಾವಚಿತ್ರ(ಸಿದ್ದೇಶ್ವರ ಸ್ವಾಮಿಗಳು) , ಎಲ್ಲ ಶಿಷ್ಯರು ಗುರುಗಳಿಗೆ ಗುರುನಮನ ಸಲ್ಲಿಸುವ ಕ್ಷಣ ನೋಡುವುದು ಪುಣ್ಯವಂತರ ಭಾಗ್ಯ!
Categories: Articles
