ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ ರಾಜ್ಯದ ಅಭಿವೃದ್ಧಿ. ಜನರು ಬಯಸಿದಂತೆ ಭಾರತೀಯ ಜನತಾ ಪಕ್ಷ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದಾಗ ರಾಷ್ಟ್ರೀಯವಾದಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲಾ. ಅಂದುಕೊಂಡಂತೆ ಮೋದಿಯವರ ದಿಗ್ವಿಜಯ ವಿರೋಧಿಗಳಿಗೆ ನುಂಗಲಾರದು ತುತ್ತಾಗಿತ್ತು. ನೋಡ ನೋಡುತ್ತಲೇ ಕೆಲವೇ ಕೆಲವು ವರ್ಷಗಳಲ್ಲಿ ದೇಶವನ್ನು ಕೇಸರಿಮಯವಾಗಿತ್ತು. ಹಿಂತಹ ಮೋದಿ ಅಲೆಯ ನಡುವೆ ಪಂಜಾಬದಲ್ಲಿ ಕ್ಯಾಪ್ಟನ್ ಅಮಿರಿಂದರ್ ಸಿಂಗ್ ಕಾಂಗ್ರೆಸ್ಸನ್ನು ಅಧಿಕಾರದ ಗದ್ದುಗೆ ಏರಿಸಿದರು. ಇಂದಿಗೂ ಎಂದಿಗೂ ಕ್ಯಾಪ್ಟನ್ ಅಮಿರಿಂದರ್ ಸಿಂಗ್ ನಮ್ಮ ಸೈನ್ಯದ ವಿರುದ್ಧ ಮಾತನಾಡಿದ ಉಧಾರಣೆ ಸಿಗುವದಿಲ್ಲಾ. ಜನರು ಪ್ರಾಮಾಣಿಕತೆಗೆ ಮತ್ತು ವ್ಯಕ್ತಿತ್ವಕ್ಕೆ ಜೈ ಅಂದಿದ್ದರು. ರಾಜ್ಯದಲ್ಲಿ ಕಾಂಗ್ರೆಸನ್ನು ವಿಜೃಂಬಿಸುವಂತೆ ಮಾಡಿದ ಮಹನೀಯರು ಎಂದರೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಕೃಷ್ಣ ಮತ್ತು ಒಂದು ಮಟ್ಟಿಗೆ ಸಿದ್ದರಾಮಯ್ಯ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ ಸ್ಥಿತಿ ಅಷ್ಟೇನೂ ಕೆಟ್ಟದಾಗಿಲ್ಲಾ. ಆದುದರಿಂದಲೇ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಲು ಪೈಪೋಟಿ ಇತ್ತು. ಈ ಪೈಪೋಟಿಯಲ್ಲಿ ಶಿವಕುಮಾರಗೆ ಪಟ್ಟ ಕಟ್ಟಿದ ಕಾಂಗ್ರೆಸ್ಸ ಇನ್ನೊಬ್ಬ ಆಕಾಂಕ್ಷಿ ವಿಜಯಪುರದ ಮಲ್ಲನಗೌಡ ಬಸವನಗೌಡ ಪಾಟೀಲ್ ಉರ್ಫ್ ಎಂ ಬಿ ಪಾಟೀಲ್ ಅವರನ್ನು ಕಡೆಗಣಿಸಿತಾ? ಎಲ್ಲ ಪಕ್ಷಗಳಂತೆ ಇಲ್ಲಿಯೂ ಬಣದ ರಾಜಕೀಯ ಜೋರಾಗಿತ್ತು. ಆದರೆ ಸಿದ್ದರಾಮಯ್ಯರವರ ಬೆಂಬಲಿಗನಿಗೆ ಅಧ್ಯಕ್ಷ ಪಟ್ಟ ಸಿಗದೇ ಹೋಯಿತು ಹಾಗೆ ನೋಡಿದರೆ ಇಬ್ಬರೂ ಘಟಾನುಘಟಿ ನಾಯಕರೇ ಇದರಲ್ಲಿ ಯಾವದೇ ಸಂಶಯ ಇಲ್ಲಾ. ಒಬ್ಬರು ೧೯೬೨ ರಲ್ಲಿ ಹುಟ್ಟಿ ೧೯೮೯ರಲ್ಲಿ ವಿಧಾನಸಭೆ ಪ್ರವೇಶ ಮಾಡಿದರೆ ಇನೊಬ್ಬರು ೧೯೬೪ರಲ್ಲಿ ಹುಟ್ಟಿ ೧೯೯೧ ರಲ್ಲಿ ವಿಧಾನಸಭೆ ಪ್ರವೇಶ ಮಾಡಿದವರು. ಇಬ್ಬರಿಗೂ ಎರಡು ವರ್ಷದ ಅಂತರ!
ಶಿವಕುಮಾರ ಯಾರ ಶ್ರೀರಕ್ಷೆ ಇಲ್ಲದೆ ಸ್ವಂತ ಹೋರಾಟದಿಂದ ಗೆಲುವು ಸೋಲುಗಳ ಮಧ್ಯೆ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದವರು. ಶಿವಕುಮಾರ ರವರು ಬಂದೀಖಾನೆ ಸಚಿವ, ನಗರಾಭಿವೃದ್ಧಿ ,ಇಂಧನ ಮತ್ತು ಜಲಸಂಪನ್ಮೂಲ ಸಚಿವರಾಗಿ ಅನುಭವ ಹೊಂದಿದವರು. ಇವರು ಅಗ್ಗ್ರೆಸ್ಸಿವ್ ಸ್ವಭಾವ ಅವರನ್ನು ರಾಜಕೀಯದಲ್ಲೇ ಮಿಂಚುವಂತೆ ಮಾಡಿದ್ದು. ಮಾಜಿ ಪ್ರಧಾನಿ ಕುಟುಂಬದ ಜೊತೆ ಸೆಣಸಾಡಿ ಕನಕಪುರ ಕೋಟೆಯನ್ನು ಭದ್ರಪಡಿಸಿಕೊಂಡವರು. ಎಷ್ಟು ಅಗ್ರೆಸ್ಸಿವ್ ಸ್ವಭಾವ ಇತ್ತು ಎಂದರೆ ಹಿಂದೊಮ್ಮೆ ಕೃಷ್ಣ ಅವರು ಮುಖ್ಯಮಂತ್ರಿ ಇದ್ದಾಗ ಹುನಗುಂದ ಶಾಸಕರು ಮಂತ್ರಿ ಪದವಿ ಹೋಯಿತು ಎಂದು ಅವರ ಬೆಂಬಲಿಗರು ಹೋರಾಟಕ್ಕೆ ಇಳಿದಾಗ ಕಾಶೆಪ್ಪನವರಿಗೆ ವಿಧಾನಸಭೆ ಮೊಗಸಾಲೆಯಲ್ಲಿ ಧಮಕಿ ಹಾಕಿದ ಪ್ರಸಂಗ ಜರುಗಿತ್ತು. ನಗರಾಭಿವೃದ್ಧಿ ಸಚಿವರಾದಾಗ ಮಿಂಚಿನಂತೆ ರಾಜ್ಯವ್ಯಾಪಿ ಸಂಚಾರ ಮಾಡಿ ರಾಜ್ಯದ ನಾಯಕರಾಗಿ ಬಿಟ್ಟಿದ್ದರು. ಅವರು ಎಷ್ಟು ಬಲಾಢ್ಯರಾಗಿದ್ದರು ಎಂದರೆ ೨೦೦೪ ರಲ್ಲಿ ಮಾಜಿ ಪ್ರಧಾನಿ ವಿರುದ್ದ ಕನಕಪುರ ಲೋಕಸಭೆಯಲ್ಲಿ ತೇಜೇಶ್ವಿನಿ ಅವರಿಗೆ ಗೆಲುವು ದಕ್ಕಿಸಿಕೊಟ್ಟಿದ್ದರು.
ಎಂ ಬಿ ಪಾಟೀಲರು ತಂದೆಯ ರಾಜಕೀಯ ಹಾದಿಯನ್ನೇ ತುಳಿದರು. ನೇರವಾಗಿ ರಾಜಕೀಯ ಪ್ರವೇಶ ಮಾಡಿದವರು ಎಂಬಿ ಪಾಟೀಲರು. ಮೊದಲ ಬಾರಿ ಚುನಾವಣೆಯಲ್ಲಿ ಸಲೀಸಾಗಿ ಗೆದ್ದಿದ್ದ ಪಾಟೀಲರು ಮುಂದೆ ಸತತವಾಗಿ ಎರಡು ಬಾರಿ ಸೊತ್ತಿದ್ದರು. ಸತತ ಸೋಲಿನಿಂದ ಕಂಗೆಟ್ಟ ಎಂ ಬಿ ಅವರಿಗೆ ಜನರು ಹೇಳಿದ್ದು ಪಾಟೀಲರ ರಾಜಕೀಯ ಮುಗಿತು. ಇಂತಹ ಕಠಿಣ ಸಂದರ್ಭದಲ್ಲಿ ಸ್ವತಃ ಪತ್ರಿಕಾಗೋಷ್ಠಿ ಕರೆದು ಹಿಂತಹ ಹತ್ತು ಚುನಾವಣೆ ಎದುರಿಸುವ ತಾಕತ್ತು ಎಂ ಬಿ ಪಾಟೀಲ್ ಗೆ ಇದೆ ಎಂದಿದ್ದರು. ಹೇಳಿದ ಹಾಗೆ ಮುಂದಿನ ಚುನಾವಣೆಯಲ್ಲಿ ಬಲಾಢ್ಯ ಸಹಕಾರ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಶಿವಾನಂದ ಪಾಟೀಲರು ಬಾಗೇವಾಡಿಗೆ ಸ್ಥಳಾಂತರ ಆಯಿತು. ಮುಂದೆ ಭರ್ಜಿರಿಯಾಗಿ ಗೆಲುವಿನ ನಗೆ ಬೀರಿದ್ದರು. ಸ್ಥಳಾಂತರ ಆಗಿದ್ದು ಅಡ್ಜಸ್ಟ್ಮೆಂಟ್ ರಾಜಕೀಯನಾ ಅಥವಾ ಸೋಲಿನ ಭಯಾನ ಯಾರಿಗೆ ಗೊತ್ತು? ಈ ಗೆಲುವಿನೊಂದಿಗೆ ಪಾಟೀಲರು ಹಿಂದೆ ತಿರುಗಿ ನೋಡದೆ ,ಕ್ರಮೇಣ ವಿಜಯಪುರದ ನಾಯಕರಾಗಿ ಹೊರಹೊಮ್ಮಿದರು. ಸತತವಾಗಿ ಗೆಲುವಿನಿಂದ ದಡ ಸೇರಿದ್ದರು .ವಿಜಯ ಪಾಟೀಲರಿಗೆ ವಿಜಯ ದಕ್ಕಿಸಿಕೊಳ್ಳಲು ಆಗಲೇ ಇಲ್ಲಾ ಅಷ್ಟೊಂದು ಗಟ್ಟಿಯಾಗಿ ಪಾಟೀಲರು ನೆಲೆಯೂರಿದ್ದಾರೆ. ೨೦೧೩ರ ಚುನಾವಣೆಯಲ್ಲಿ ಸಿದ್ದರಾಮಯ್ಯವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಒಲಿದಿದ್ದು ಜಲಸಂಪನ್ಮೂಲ ಖಾತೆ. ಇದು ಪೂರ್ವತಯಾರಿ ಮಾಡಿಕೊಂಡು ಕೇಳಿ ಪಡೆದ ಖಾತೆ. ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಿಮ್ಮ ತಂದೆ ಶಿಕ್ಷಣ ಕ್ರಾಂತಿ ಮಾಡಿದ್ದಾರೆ ನೀವು ರಾಜ್ಯದ ಜನತೆಗೆ ನೀರಿನ ಕ್ರಾಂತಿ ಮಾಡಬೇಕು ಎಂದಾಗ ವಿನಮ್ರವಾಗಿ ವಿನಂತಿಯನ್ನು ಸ್ವೀಕರಿಸಿ ಅವರ ಅಧಿಕಾರ ಅವಧಿಯಲ್ಲಿ ರಾಜ್ಯದ ೧೩೦೦ ಕರೆಗಳನ್ನು ತುಂಬಿಸಿದ್ದರು. ನೆನಗುದಿಗೆ ಬಿದ್ದಿದ್ದ ತುಂಗಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದರು. ಮುಂದೆ ಸಮಿಶ್ರ ಸರ್ಕಾರದಲ್ಲಿ ನಾನು ಸೆಕೆಂಡ್ ಸಿಟಿಜೆನ್ ಅಲ್ಲಾ ಎಂದು ಸವಾಲ್ ಹಾಕಿ ರಾಜ್ಯದ ಗೃಹ ಮಂತ್ರಿ ಆಗಿದ್ದರು. ಗೃಹ ಮಂತ್ರಿಯಾಗಿ ೨೫% ಮಹಿಳೆಯರಿಗೆ ಕೆಲಸದಲ್ಲಿ ಮೀಸಲಾಯಿತಿ ಕೊಡಿಸಿದ್ದರು ಅದು ಅಲ್ಲದೆ ಔರದ್ಕರ ಸಮೀತಿ ಮಾಡಿ ಪೊಲೀಸರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಸಮಿಶ್ರ ಸರ್ಕಾರ ಬರುವಲ್ಲಿ ಶಿವಕುಮಾರ ಶಾಸಕರನ್ನು ಒಟ್ಟಾಗಿಸಿದರೆ ಪಾಟೀಲರು ಸುಪ್ರೀಂ ಕೋರ್ಟಲ್ಲಿ ನಡೆದ ಧಾವೆಗೆ ಸಂಪನ್ಮೂಲ ಒದಗಿಸಿದ್ದರು. (ಖ್ಯಾತ ವಕೀಲರು ಹೇಳಿದ್ದರು). ವಿಶೇಷವಾಗಿ ಅವರು ವಿಜಯಪುರದ ಬರ ಜಿಲ್ಲೆಯಲ್ಲಿ ೧ ಕೋಟಿ ಸಸಿ ನಡೆಯುವ ಕಾರ್ಯಕ್ರಮ ಮಾಡಿಕೊಂಡು ಹೋಗುತ್ತಿರುವುದು ಮತ್ತೊಂದು ಮೈಲಿಗಲ್ಲು.
ಇಬ್ಬರಿಗೂ ದೊಡ್ಡ ದೊಡ್ಡ ಸಮುದಾಯದ ಬೆಂಬಲ ಇದೆ. ಶಿವಕುಮಾರ ಏಕ ಮಾತ್ರ ಒಕ್ಕಲಿಗ ಲೀಡರ್ ಆಗಿ ಹೊರಹೊಮ್ಮಿಲ್ಲ ಆದರೆ ಪಾಟೀಲರು ತಕ್ಕ ಮಟ್ಟಿಗೆ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆರ್ ಆರ್ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಅಶೋಕ ಹೇಳಿದ್ದು ನಾನು ಒಕ್ಕಲಿಗ ನಾಯಕ. ಇಬ್ಬರಿಗೂ ದೊಡ್ಡ ಮಟ್ಟದ ಹೆಸರಿದೆ. ವಿಶೇಷವಾಗಿ ಪಾಟೀಲರಿಗೆ ಕಳೆದ ಸರ್ಕಾರದಲ್ಲಿ ಮಾಡಿದ ಕೆಲಸಗಳು ಕಣ್ಣು ಕುಕ್ಕಿಸುತ್ತಿವೆ. ಶಿವಕುಮಾರರವರ ಪಕ್ಷ ಸಂಘಟನೆ ಮತ್ತು ಅಪಾರ ಜನ ಬೆಂಬಲ ಬೆನ್ನಿಗಿದೆ. ಶಿವಕುಮಾರವರು ಪಕ್ಷಕ್ಕಾಗಿ ಬಲಾಢ್ಯರನ್ನು ಎದುರಿಸಿದ್ದಾರೆ. ಪಕ್ಷಕ್ಕಾಗಿ ಯಾವಾಗಲು ದುಡಿಯುವ ಕೈ ಮೇಲಾಗಿ ಶಿವಕುಮಾರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಶಿವಕುಮಾರ ಅವರ ಮೇಲೆ ತೆರಿಗೆ ಇಲಾಖೆ, ಇಡಿ ಕೇಸ್ ಮೇಲೆ ಕೇಸ್ ಜಡಿದಿದ್ದಾರೆ. ಭ್ರಷ್ಠಾಚಾರ ಅವರನ್ನು ಬಾಧಿಸುತ್ತಿದೆ. ಅದನ್ನು ನಾವು ದಿನ ನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಬಹದು. ಪಾಟೀಲರು ಕ್ಲೀನ್ ಇಮೇಜ್ ಹೊಂದಿದ್ದಾರೆ ಆದರೂ ಅವರ ಧರ್ಮದ ಒಡಕಿನ ರೂವಾರಿ ಎಂದು ಸ್ವಲ್ಪ ಜನ ವಿರೋಧ ಮಾಡಿದರು ಅದರಿಂದ ಪಕ್ಷಕ್ಕೆ ನಷ್ಟ ವಾಗಿಲ್ಲ ಎಂದು ಸಾಕ್ಷಿ ಸಮೇತ ೨೦೦೮ರ ಮತ್ತು ೨೦೧೩ರ ಮುಂಬೈ ಕರ್ನಾಟಕದಲ್ಲಿ ಗೆದ್ದ ಕ್ಷೇತ್ರಗಳು ಹೆಚ್ಚಿವೆ ಎಂದು ಮಂಡನೆ ಮಾಡಿಯೇ ಗೃಹ ಖಾತೆ ಪಡೆದಿದ್ದರು. ಇಂದಿನ ಮೋದಿ ಯುಗದಲ್ಲಿ ಕೀರ್ತಿ ಪತಾಕೆ ಹಾರಿಸಬೇಕಾದರೆ ಪ್ರಾಮಾಣಿಕ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಮಾಡುವ ನಾಯಕ ಬೇಕು. ಹಿಂತಹ ನಾಯಕತ್ವ ಇದ್ದುದರಿಂದಲೇ ಕ್ಯಾಪ್ಟನ್ ಅಮಿರಿಂದರ ಸಿಂಗ ಗೆದ್ದಿದ್ದು. ಶಿವಕುಮಾರ ಅವರು ಗದ್ದುಗೆ ಹಿಡಿಯ ಬೇಕಾದರೆ ಕ್ವೀನಾಗಿ ಹೊರಗೆ ಬರಬೇಕು ಅಥವಾ ಸರ್ಕಾರದ ವಿಫಲತೆಗಳ ಮೆಟ್ಟಿಲಗಳನ್ನು ಉಪಯೋಗಿಸಿಕೊಳ್ಳಬೇಕು. ಕ್ಲೀನ್ ಆಗಿ ಹೊರಗೆ ಬರಬೇಕಾದರೆ ತುಂಬಾ ಸಮಯ ಹಿಡಿಯುತ್ತೆ. ಇದು ಎಂಬಿ ಪಾಟೀಲರಿಗೆ ವರದಾನವಾಗಲಿದೆಯಾ?. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇದ್ದಾಗ ಡಿಕೆ ಗೆದ್ದಾಗಿದೆ . ಸಿದ್ದು ಶಿಷ್ಯ ಎಂದೇ ಗುರುತಿಸಿಕೊಂಡಿರುವ ಎಂಬಿ ಅವರಿಗೆ ಅಧ್ಯಕ್ಷ ಸ್ಥಾನ ಸಿಗಲಿಲ್ಲ. ಆದರೆ ಎಲ್ಲಿಯೂ ಅದರ ಕಿಂಚಿತ್ತೂ ಅಸಮಾಧಾನವನ್ನು ತೋರ್ಪಡೆಗೊಳಿಸಲಿಲ್ಲ. ಪಕ್ಷ ನಿಷ್ಠೆಗೆ ಎತ್ತಿದ ಕೈ. ಬೆಳಗಾವಿ ಉಪಚುನಾವಣೆಯಲ್ಲಿ ಸದ್ದಿಲ್ಲದೇ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅದು ಸತೀಶ್ ಮತ್ತು ಕಾಂಗ್ರೇಸ್ ಪಕ್ಷದ ಶಾಸಕರಿಗೆ ಗೊತ್ತಿದೆ! ಇನ್ನೊಂದು ಗಮನಿಸಿರಬಹುದು ಯಾರೇ ಉಸ್ತುವಾರಿಯಾಗಲಿ, ನೆರೆಯ ಕಾಂಗ್ರೇಸ್ ನಾಯಕರು ಬಂದಾಗ ಅಧ್ಯಕ್ಷರಿಗೆ, ಶಾಸಕಾಂಗ ಪಕ್ಷದ ನಾಯಕರ ಜೊತೆಗೆ ಎಂಬಿಪಿ ಅವರಿಗೂ ಭೇಟಿ ಮಾಡುವ ರೂಢಿಯಾಗಿದೆ. ಕಾರಣ ಪಕ್ಷಕ್ಕೆ ದೊಡ್ಡ ಮಟ್ಟದ ಕೊಡುಗೆ ಇರಲೇಬೇಕು ಅಲ್ವಾ? ಮುಖ್ಯಮಂತ್ರಿಯ ಖುರ್ಚಿಯ ಜಗಳಕ್ಕೆ ರಾಜ್ಯ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಕಾಂಗ್ರೇಸ್ ಗೆದ್ದರೇ ಮುಖ್ಯಮಂತ್ರಿಗೆ ಪೈಪೋಟಿ ಕೊಡುವ ಇಬ್ಬರೇ ನಾಯಕರು ಒಬ್ಬರು ಡಿಕೆ ಇನ್ನೊಬ್ಬರು ಎಂಬಿಪಿ.
Categories: Articles
