By Bhimashankar Teli
ಇತಿಹಾಸವನ್ನು ಗಮನಿಸಿದರೆ, ಜಗತ್ತಿನ ಯಾವ ದೊಡ್ಡ ಬದಲಾವಣೆಯೂ ಸುಮ್ಮನೆ ನಡೆದಿಲ್ಲ. ಪ್ರತಿಯೊಂದು ಸ್ವಾತಂತ್ರ್ಯ, ಪ್ರತಿಯೊಂದು ಹಕ್ಕು, ಪ್ರತಿಯೊಂದು ಸಾಮಾಜಿಕ ಸುಧಾರಣೆ — ಎಲ್ಲವೂ ಜನರ ಹೋರಾಟ ಮತ್ತು ಚಳುವಳಿಗಳ ಫಲವಾಗಿದೆ. ಜನರು ಪ್ರಶ್ನೆ ಕೇಳಿದಾಗಲೇ ಸಮಾಜ ಬದಲಾಗಿದೆ. ಯುವಕರು ಎದ್ದಾಗಲೇ ದೇಶ ಎದ್ದಿದೆ.
ಭಾರತಕ್ಕೂ ಸ್ವಾತಂತ್ರ್ಯ ಸಿಕ್ಕದ್ದು ಒಂದು ದಿನದಲ್ಲಿ ಅಲ್ಲ. ಸಾವಿರಾರು ಜನರ ತ್ಯಾಗ, ಹೋರಾಟ ಮತ್ತು ಚಳುವಳಿಗಳ ಫಲವಾಗಿ ನಾವು ಇಂದು ಸ್ವತಂತ್ರರಾಗಿದ್ದೇವೆ. ಮಹಾತ್ಮಾ ಗಾಂಧೀಜಿ ನೇತೃತ್ವದ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಡೋ ಚಳುವಳಿ — ಇವು ಕೇವಲ ರಾಜಕೀಯ ಹೋರಾಟಗಳಲ್ಲ; ಜನರ ಆತ್ಮಗೌರವದ ಯುದ್ಧವಾಗಿತ್ತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಗಾಗಿ ನಡೆಸಿದ ಹೋರಾಟ ಇಂದು ಕೋಟ್ಯಾಂತರ ಜನರಿಗೆ ಹಕ್ಕುಗಳನ್ನು ನೀಡಿದೆ. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಸಾವಿತ್ರಿಬಾಯಿ ಫುಲೆ — ಇವರೆಲ್ಲರೂ ಸಮಾಜವನ್ನು ಬದಲಿಸಲು ಚಳುವಳಿಯನ್ನೇ ಆಯುಧವನ್ನಾಗಿಸಿಕೊಂಡರು.
ಭಾರತ ಮಾತ್ರವಲ್ಲ, ಜಗತ್ತಿನ ಇತಿಹಾಸವೂ ಇದೇ ಮಾತು ಹೇಳುತ್ತದೆ.
ಅಮೇರಿಕಾದಲ್ಲಿ Martin Luther King Jr. ಅವರು ನಡೆಸಿದ Civil Rights Movement ಇಲ್ಲದಿದ್ದರೆ, ಕಪ್ಪು ಜನರ ಹಕ್ಕುಗಳಿಗೆ ಇಂದು ಇಷ್ಟು ಮಾನ್ಯತೆ ಸಿಕ್ಕಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ Nelson Mandela ಅವರ ಹೋರಾಟ ಇಲ್ಲದಿದ್ದರೆ, ವರ್ಣಭೇದ ನೀತಿ ಇನ್ನೂ ಮುಂದುವರಿದಿರುತ್ತಿತ್ತು. ಮಹಿಳೆಯರಿಗೆ ಮತದಾನದ ಹಕ್ಕು ಕೂಡ ಸುಮ್ಮನೆ ಸಿಕ್ಕಿಲ್ಲ; ಮಹಿಳಾ ಚಳುವಳಿಗಳ ಫಲವಾಗಿ ಅದು ಸಾಧ್ಯವಾಯಿತು.
ಅಂದರೆ, ಸಮಾಜದಲ್ಲಿ ಅನ್ಯಾಯ ಹೆಚ್ಚಾದಾಗ, ಜನರು ಎದ್ದು ನಿಲ್ಲಬೇಕು. ಪ್ರಶ್ನೆ ಕೇಳಬೇಕು. ವ್ಯವಸ್ಥೆಯನ್ನು ಸರಿಪಡಿಸಲು ಒತ್ತಾಯಿಸಬೇಕು.
ಆದರೆ ಇಂದಿನ ಯುವಜನತೆಯಲ್ಲಿ ಒಂದು ಅಪಾಯಕಾರಿ ನಿರ್ಲಕ್ಷ್ಯ ಬೆಳೆಯುತ್ತಿದೆ.
“ನನಗೆ ಕೆಲಸ ಇದ್ದರೆ ಸಾಕು”, “ನನ್ನ ಜೀವನ ಚೆನ್ನಾಗಿದ್ದರೆ ಸಾಕು” ಎಂಬ ಮನೋಭಾವ ಹೆಚ್ಚುತ್ತಿದೆ. ಇದೇ ಸಮಾಜವನ್ನು ದುರ್ಬಲಗೊಳಿಸುತ್ತದೆ.
ಇಂದು ನಾವು ನೋಡುತ್ತಿರುವ ಸಮಸ್ಯೆಗಳು ಸಣ್ಣವುಗಳಲ್ಲ.
- ಗುಂಡಿಗಳ ರಸ್ತೆಗಳು
- ಮಾಲಿನ್ಯಗೊಂಡ ಗಾಳಿ
- ಕಣ್ಮರೆಯಾಗುತ್ತಿರುವ ಹಸಿರು ಪರಿಸರ
- ದುರ್ಬಲ ಸರ್ಕಾರಿ ಶಾಲೆಗಳು
- ಪ್ರಶ್ನೆ ಪತ್ರಿಕೆ ಸೋರಿಕೆ
- ಹಣ ಕೊಟ್ಟವರಿಗೆ ಅವಕಾಶ, ಪ್ರತಿಭೆಗೆ ಅನ್ಯಾಯ
- ಶಿಕ್ಷಣದ ಮೇಲೆಯೇ GST
- ಒಂದು ಸರ್ಕಾರಿ ಪ್ರಮಾಣಪತ್ರಕ್ಕೆ ವಾರಗಳ ಓಡಾಟ
ಇವೆಲ್ಲವೂ ಒಂದು ದೊಡ್ಡ ವ್ಯವಸ್ಥಾತ್ಮಕ ವೈಫಲ್ಯದ ಲಕ್ಷಣಗಳು.
ಪ್ರಜಾಪ್ರಭುತ್ವದಲ್ಲಿ “Election” ಅಂದರೆ ಜನರ ಆಯ್ಕೆ. ಆದರೆ ಈಗ “Selection” ಹೆಚ್ಚಾಗಿದೆ. ಜನರಿಂದ ಆಯ್ಕೆಯಾದ ಕೆಲವರು ಮತ್ತೆ ತಮ್ಮವರನ್ನೇ ಆಯ್ಕೆ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಜನಸೇವೆಯಿಗಿಂತ ಅಧಿಕಾರ ಉಳಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ ತೋರುತ್ತಿವೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಮತ್ತೊಂದು ಅಪಾಯಕಾರಿ ಪ್ರವೃತ್ತಿ ಕಾಣಿಸುತ್ತಿದೆ.ಗೆದ್ದಾಗ ಚುನಾವಣಾ ವ್ಯವಸ್ಥೆಯನ್ನು ಹೊಗಳುವವರು, ಸೋತಾಗ ಅದೇ ವ್ಯವಸ್ಥೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ವಿಶೇಷವಾಗಿ EVM ಬಗ್ಗೆ ಪ್ರಶ್ನೆಗಳು ಬಹುಪಾಲು ಸಮಯದಲ್ಲಿ ತತ್ವದ ಆಧಾರದ ಮೇಲೆ ಅಲ್ಲ, ರಾಜಕೀಯ ಲಾಭದ ದೃಷ್ಟಿಯಿಂದ ಬರುತ್ತಿರುವಂತೆ ಕಾಣುತ್ತದೆ.
ಜನತಂತ್ರದಲ್ಲಿ ಪ್ರಶ್ನೆ ಕೇಳುವುದು ತಪ್ಪಲ್ಲ. ಆದರೆ ಪ್ರಶ್ನೆ ಕೇಳುವಲ್ಲಿ ಕೂಡ ಪ್ರಾಮಾಣಿಕತೆ ಇರಬೇಕು. ಗೆದ್ದಾಗ “ಜನರ ತೀರ್ಪು” ಎಂದು ಹೇಳಿ, ಸೋತಾಗ “ವ್ಯವಸ್ಥೆ ತಪ್ಪಾಗಿದೆ” ಎಂದು ಹೇಳುವುದು ಜನರಲ್ಲಿ ಗೊಂದಲ ಮತ್ತು ಅವಿಶ್ವಾಸವನ್ನು ಹೆಚ್ಚಿಸುತ್ತದೆ.
ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ವಿಚಿತ್ರ ರಾಜಕೀಯ ಸಂಸ್ಕೃತಿ ಬೆಳೆಯುತ್ತಿದೆ. ಕೆಲವರು “Cockroach Janata Party” ಎಂಬ ರೀತಿಯ ಖಾತೆಗಳನ್ನು ತೆರೆಯುತ್ತಾರೆ. ಆದರೆ ಅವರ ಉದ್ದೇಶ ಏನು ಎಂಬುದು ಸ್ಪಷ್ಟವಾಗುವುದಿಲ್ಲ. ಅವರು ನಿಜವಾಗಿಯೂ ಸಮಾಜದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರಾ? ಅಥವಾ ಕೇವಲ ಟ್ರೋಲ್, ದ್ವೇಷ ಮತ್ತು ರಾಜಕೀಯ ಪ್ರತೀಕಾರದ ವಾತಾವರಣ ನಿರ್ಮಿಸುತ್ತಿದ್ದಾರಾ?
ವಿಮರ್ಶೆ ಪ್ರಜಾಪ್ರಭುತ್ವದ ಭಾಗ. ಆದರೆ ನಿರಂತರ ವ್ಯಂಗ್ಯ, ದ್ವೇಷ ಮತ್ತು ಗೊಂದಲ ಸೃಷ್ಟಿಸುವುದು ಸಮಾಜವನ್ನು ಬಲಪಡಿಸುವುದಿಲ್ಲ. ಸಾಮಾಜಿಕ ಜಾಲತಾಣಗಳು ಜ್ಞಾನ ಮತ್ತು ಜಾಗೃತಿಗೆ ಬಳಸಬೇಕಾದ ವೇದಿಕೆಗಳು; ಅಸಹನೆ ಮತ್ತು ಅವಹೇಳನಕ್ಕೆ ಅಲ್ಲ.
ಇಂದು ಅನೇಕರು ತತ್ವಕ್ಕಿಂತ ಟ್ರೆಂಡ್ಗಾಗಿ ಮಾತನಾಡುತ್ತಿದ್ದಾರೆ. ನೀತಿಗಿಂತ ವೈರಲ್ ಪೋಸ್ಟ್ಗಳಿಗೆ ಹೆಚ್ಚು ಮಹತ್ವ ಸಿಕ್ಕಿದೆ.
ಇದು ಯುವಜನತೆಯನ್ನು ಗಂಭೀರ ಚಿಂತನೆಯಿಂದ ದೂರ ಮಾಡುತ್ತಿದೆ.
ರಾಜಕೀಯ ಎಂದರೆ ಪ್ರತೀಕಾರದ ಆಟವಾಗಬಾರದು. ಅದು ತತ್ವ, ಜವಾಬ್ದಾರಿ ಮತ್ತು ಜನಸೇವೆಯ ವೇದಿಕೆಯಾಗಬೇಕು.
ರಾಜಕಾರಣಿಗಳು ಜನರ ಸೇವಕರಾಗಬೇಕು. ಆದರೆ ಇಂದು ಅನೇಕರು ತಮ್ಮನ್ನು “ಮೇಲಿನವರು” ಎಂದು ತೋರಿಸಿಕೊಳ್ಳುತ್ತಾರೆ. ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದು, ನಂತರ ಅದೇ ಜನರನ್ನು ಅಲಕ್ಷ್ಯ ಮಾಡುವುದು ಪ್ರಜಾಪ್ರಭುತ್ವಕ್ಕೆ ಅವಮಾನ.
ಜನರು ಒಬ್ಬ ರಾಜಕಾರಣಿಯನ್ನು ದೇವರಂತೆ ಪೂಜಿಸುವುದನ್ನು ನಿಲ್ಲಿಸಬೇಕು. ಐದು ವರ್ಷಗಳಲ್ಲಿ ಕೆಲಸ ಮಾಡದಿದ್ದರೆ, ಅವರನ್ನು ಬದಲಾಯಿಸುವ ಧೈರ್ಯ ಇರಬೇಕು. ವ್ಯವಸ್ಥೆ ವ್ಯಕ್ತಿಗಿಂತ ದೊಡ್ಡದು ಎಂಬ ಅರಿವು ಬರಬೇಕು.
ನಾವು ಜಾತಿ, ಧರ್ಮ, ಹಣ ಮತ್ತು ಪ್ರಭಾವದ ಆಧಾರದ ಮೇಲೆ ನಾಯಕರನ್ನು ಆಯ್ಕೆ ಮಾಡುವುದನ್ನು ನಿಲ್ಲಿಸಬೇಕು. ಪ್ರತಿಭೆ, ಪ್ರಾಮಾಣಿಕತೆ, ದೂರದೃಷ್ಟಿ ಮತ್ತು ಜನಸೇವೆ ಮಾಡುವ ಮನಸ್ಸು ಇರುವವರನ್ನು ಆಯ್ಕೆ ಮಾಡಬೇಕು.
ಇತಿಹಾಸ ನಮಗೆ ಒಂದು ದೊಡ್ಡ ಪಾಠ ಹೇಳುತ್ತದೆ:
“ಯುವಕರು ಮೌನವಾಗಿದ್ದರೆ, ಭವಿಷ್ಯವನ್ನು ದುರ್ಬಲ ನಾಯಕರು ಬರೆಯುತ್ತಾರೆ.”
ಇಂದು ಮತ್ತೆ ಒಂದು ಜಾಗೃತಿಯ ಅಗತ್ಯವಿದೆ.
ಕಲ್ಲು ಹಿಡಿದ ಹೋರಾಟವಲ್ಲ,
ಪ್ರಶ್ನೆ ಕೇಳುವ ಹೋರಾಟ.
ಜಾತಿ ಆಧಾರಿತ ರಾಜಕೀಯವಲ್ಲ,
ಅಭಿವೃದ್ಧಿ ಆಧಾರಿತ ರಾಜಕೀಯ.
ಅಂಧಭಕ್ತಿಯಲ್ಲ,
ಜವಾಬ್ದಾರಿಯುತ ನಾಗರಿಕತೆ.
ಯುವಜನತೆ ಎದ್ದರೆ ದೇಶ ಬದಲಾಗುತ್ತದೆ. ಯುವಜನತೆ ಮೌನವಾಗಿದ್ದರೆ ಸಮಸ್ಯೆಗಳು ಆಡಳಿತ ನಡೆಸುತ್ತವೆ.
ಹೋರಾಟವೇ ಇತಿಹಾಸ ಬರೆದಿದೆ. ಈಗ ಭವಿಷ್ಯ ಬರೆಯುವ ಹೊಣೆ ಯುವಜನತೆಯದು.
Categories: news

1 reply »